ಕಥೆ - ನೀರಜಾ ಪ್ರಭು
``ರತ್ನಾ, ಒಂದು ನಾಲ್ಕು ದಿನ ಜಯಮ್ಮನ ಮನೇಲಿ ಕೆಲಸ ಮಾಡ್ತೀಯ?'' ರಸ್ತೆಯಲ್ಲಿ ಸಿಕ್ಕಿದ ಪಾರ್ವತಿ ನನ್ನನ್ನು ಕೇಳಿದಳು. ``ಅವರ ಮನೆ ಜನ ಹೇಗಮ್ಮ?'' ನಾನು ಪ್ರಶ್ನಿಸಿದೆ.
``ಒಳ್ಳೆ ಜನ ... ಇಬ್ಬರೇ ಇರೋದು. ಕೆಲಸ ಕಡಿಮೆ. ಆದರೆ ಎಲ್ಲವೂ ಟೈಮಿಗೆ ಸರಿಯಾಗಿ ಆಗಬೇಕು.'' ಅವಳೆಂದಳು.
``ಮತ್ತೆ ನೀನು ಯಾಕೆ ಬಿಡ್ತಿದೀಯ?'' ನಾನು ಕೇಳಿದೆ.
``ನಾನೆಲ್ಲಿ ಬಿಡ್ತಿದೀನಿ, ನಾನು ಹಳ್ಳಿಗೆ ಹೋಗ್ತಿದೀನಿ,'' ಪಾರ್ವತಿ ನುಡಿದಳು.
``ಹಳ್ಳಿಯಿಂದ ಬೇಗ ವಾಪಸ್ ಬರ್ತೀಯೇನು?''
``ನೋಡು, ನಿನಗೆ ಅಗತ್ಯ ಇದ್ದರೆ ಅವರ ಮನೆಗೆ ಹೋಗಿ ಮಾತಾಡು,'' ಇಷ್ಟು ಹೇಳಿ ಪಾರು ಹೊರಟುಹೋದಳು.
ಮರುದಿನ ನಾನು ಜಯಮ್ಮನವರ ಮನೆಗೆ ಹೋಗಿ ಬಾಗಿಲು ತಟ್ಟಿದೆ.
ಸುಮಾರು 50 ವರ್ಷದ ವ್ಯಕ್ತಿ ಬಾಗಿಲು ತೆರೆದು, ``ಏನು ಬೇಕು?'' ಎಂದರು.
ನಾನು ವಿಷಯ ತಿಳಿಸಿದೆ. ``2 ನಿಮಿಷ ಇರು,'' ಎಂದು ಹೇಳಿ ಬಾಗಿಲು ಮುಚ್ಚಿದರು. ಆಮೇಲೆ ಒಬ್ಬ ಹೆಂಗಸು ಆಚೆ ಬಂದರು.
``ಪಾರ್ವತಿ ಕಳಿಸಿದಳಾ? ಬಾ, ಒಳಗೆ ಬಾ,'' ಎಂದರು.
ಒಳಹೋದೆ. ಕೆಲಸ ಶುರು ಮಾಡಿದ ಮೇಲೆ ಈ ಮನೆ ಬೇರೆ ಮನೆಗಳಿಗಿಂತ ಭಿನ್ನ ಎಂದು ಗೊತ್ತಾಯಿತು. ಮನೆಯ ವ್ಯವಸ್ಥೆ ಚೆನ್ನಾಗಿತ್ತು. ಪ್ರತಿಯೊಂದು ವಸ್ತು ತನ್ನ ಜಾಗದಲ್ಲಿ ಅಚ್ಚುಕಟ್ಟಾಗಿ ಕುಳಿತಿತ್ತು. ಮನೆ ಯಜಮಾನ ಪೇಪರ್ ಓದುತ್ತಾ ತೂಕಡಿಸುತ್ತಿದ್ದರೆ, ಯಜಮಾನಿ ಶೂನ್ಯವನ್ನು ನೋಡುತ್ತಾ ಇರುತ್ತಿದ್ದರು. ನಾನು ಅವರಿಬ್ಬರಿಗೆ ಎರಡು ಹೊತ್ತಿನ ಅಡುಗೆ ಮಾಡುತ್ತಿದ್ದೆ. ನನ್ನೆದುರು ಅವರು ಪರಸ್ಪರ ಮಾತನಾಡಿದ್ದೇ ಇಲ್ಲ. ಅವರಿಬ್ಬರ ನಡುವೆ ಪಾರದರ್ಶಕ ಗೋಡೆ ನಿಂತಿರುವ ಹಾಗೆ ಅನಿಸುತ್ತಿತ್ತು. ತಿಂಗಳ ಕೊನೆಯಲ್ಲಿ ನನ್ನ ಕೈಯಲ್ಲಿ ಸಂಬಳದ ಹಣ ಇಟ್ಟರು. ಪಾರ್ವತಿ ಇನ್ನೂ ಬಂದಿಲ್ಲವಾದ್ದರಿಂದ ಇನ್ನೂ ಸ್ವಲ್ಪ ದಿನ ಕೆಲಸ ಮಾಡು ಎಂದರು. ಒಳ್ಳೆ ಸಂಬಳ ಕೊಡುತ್ತಿದ್ದರಿಂದ ನಾನೂ ಕೆಲಸ ಮುಂದುವರಿಸಲು ಒಪ್ಪಿದೆ.
ಹೀಗೇ 2 ತಿಂಗಳು ಕಳೆಯಿತು. ಮಳೆಗಾಲ ಬಂತು. ಒಂದು ದಿನ ಕೆಲಸಕ್ಕೆ ಹೋಗುವಾಗ ನನ್ನ ಹಿಂದೆ ಒಂದು ನಾಯಿಮರಿ ಬರತೊಡಗಿತು. ಅದನ್ನು ನಾನು ಎತ್ತಿಕೊಂಡೆ. ಮನೆ ಯಜಮಾನಿ ಬಾಗಿಲು ತೆರೆದ ಕೂಡಲೆ ನಾಯಿಮರಿ ಸೀದಾ ಮನೆಯೊಳಗೆ ಹೋಯಿತು. ಯಜಮಾನಿ ಜೋರಾಗಿ ಕೂಗಿದರು.
``ಇದನ್ನೇಕೆ ಕರಕೊಂಡು ಬಂದಿದೀಯ?''
``ನಾಯಿಮರಿ ಅಮ್ಮಾ, ಹೋಗುವಾಗ ಕರಕೊಂಡು ಹೋಗ್ತೀನಿ,'' ಎಂದು ಹೇಳಿದೆ.
``ಈ ತರಹ ಏನೇನೋ ನಮ್ಮ ಮನೆಗೆ ತರಬೇಡ. ಯಜಮಾನರು ಬೈತಾರೆ,'' ಅವರು ಕೂಗಿದರು.
ನಾನು ನಾಯಿಮರಿಗೆ ಬೈದು ಬೆದರಿಸಿ ಒಂದು ಮೂಲೆಯಲ್ಲಿ ಕುಳಿತುಕೊಳ್ಳುವಂತೆ ಮಾಡಿದೆ. ನಿಧಾನವಾಗಿ ನಾಯಿಮರಿ ಮನೆಯಲ್ಲಿ ಎಲ್ಲರ ಪ್ರೀತಿ ಗಳಿಸಿತು.
`` ಏನು ಹೆಸರು ಇಟ್ಟಿದ್ದೀಯ ಇದಕ್ಕೆ?'' ಯಜಮಾನಿ ಒಂದುದಿನ ಕೇಳಿದರು.
``ಇನ್ನು ಯಾವ ಹೆಸರೂ ಇಟ್ಟಿಲ್ಲ.'' ಎಂದೆ.
``ಇದಕ್ಕೆ ಸೋನಿ ಅಂತ ಹೆಸರಿಡು,'' ಯಜಮಾನಿ ಹೇಳಿದರು.
ಸ್ವಲ್ಪ ದಿನಗಳಲ್ಲೇ ಸೋನಿ ಆ ಮನೆಯ ಮೇಲೆ ತನ್ನ ಏಕಾಧಿಕಾರ ಸ್ಥಾಪಿಸಿತು.
ಒಂದು ದಿನ ಯಜಮಾನಿ ಸೋನಿಯನ್ನು ಹೊರಗೆ ಕರೆದುಕೊಂಡು ಹೋದರು. ಸ್ವಲ್ಪ ಹೊತ್ತಿಗೆ ವಾಚ್‌ಮನ್ ಬಂದು ಯಜಮಾನರನ್ನು ಕರೆದು, ``ಅಮ್ಮಾ ಕರೀತಿದಾರೆ ಸಾರ್,'' ಎಂದ. ಯಜಮಾನರು ನನ್ನನ್ನು ಕೆಳಗೆ ಹೋಗಲು ಹೇಳಿದರು. ಗೇಟಿನಿಂದ ಹೊರಗೆ ರಸ್ತೆಯ ಆ ಪಕ್ಕದಲ್ಲಿ ಫುಟ್‌ಪಾತ್ ಮೇಲೆ ಕುಳಿತು ಯಜಮಾನಿ ಅಳುತ್ತಿದ್ದರು.