ಕಥೆ  –  ಎಸ್‌. ನೀರಜಾ 

“ತನು, ಏನು ಕಾಲೇಜ್‌ ಬಿಟ್ಟು ಕಾಫಿ ಕುಡಿಯುತ್ತಾ ಕುಳಿತಿದ್ದೀಯಾ? ಈವತ್ತು ಮತ್ತೆ ಕ್ಲಾಸ್‌ ಬಂಕ್‌ ಮಾಡಿದೆಯಾ? ಇಟ್‌ ಈಸ್‌ ನಾಟ್‌ ಫೇರ್‌ ಬೇಬಿ,” ಮಾಲಿನ ರೆಸ್ಟೋರೆಂಟ್‌ನಲ್ಲಿ  ತನ್ನ ಗೆಳತಿಯರ ಜೊತೆ ಕಾಫಿ ಹೀರುತ್ತಿದ್ದ ಮಗಳನ್ನು ನೋಡಿ ಶಶಿ ಉದ್ಗರಿಸಿದಳು. ಅದಕ್ಕೆ ತನುಜಾ ಏನೂ ಉತ್ತರಿಸದಿದ್ದಾಗ ಶಶಿ ಕೊಂಚ ಸಿಟ್ಟಿನಿಂದ ಅವಳ ಗೆಳತಿಯರತ್ತ ನೋಡಿದಳು.

ಆಧುನಿಕ ಕೇಶಾಲಂಕಾರ, ಹೈ ಹೀಲ್ಡ್ ಚಪ್ಪಲಿ, ಲೇಟೆಸ್ಟ್ ಡ್ರೆಸ್‌ನಲ್ಲಿ ಅಲಂಕೃತಳಾಗಿದ್ದ ಶಶಿಯನ್ನು ತನುಜಾಳ ಗೆಳತಿಯರು ರೆಪ್ಪೆ ಮಿಟುಕಿಸದೆ ನೋಡಿದರು.

“ಬಿಡು, ಬಂದಿದ್ದೇ ಆಗಿದೆ. ಎಂಜಾಯ್‌ ಮಾಡು,” ಎನ್ನುತ್ತಾ ಶಶಿ ಮಗಳ ಪರ್ಸ್‌ನಲ್ಲಿ ಕೆಲವು ನೋಟುಗಳನ್ನು ತುರುಕಿ ಎಲ್ಲರಿಗೂ ಬಾಯ್‌ ಹೇಳುತ್ತಾ ಹೊರಗೆ ಹೋದಳು.

ಶಶಿ ಅತ್ತ ಹೋಗುತ್ತಲೇ ತನುಜಾಳ ಗೆಳತಿಯರು, “ಏ ತನು, ನಿನ್ನ ಮಮ್ಮಿ ಎಷ್ಟು ಹಾಟ್‌ ಅಂಡ್‌ ಸ್ವೀಟ್‌ ಆಗಿದ್ದಾರೆ. ಅವರ ಮುಂದೆ ನೀನು ಏನೂ ಇಲ್ಲ ಬಿಡು,” ಎಂದು ಟೀಕೆ ಮಾಡಿದರು. ಅದನ್ನು ಕೇಳಿ ಅವಳ ಮುಖ ಬಿರುಸಾಯಿತು.

ಶಶಿ ನಿಜಕ್ಕೂ ಅತ್ಯಂತ ಸುಂದರಿಯಾಗಿದ್ದಳು. ಅವಳ ರೂಪ, ಮೈಮಾಟವನ್ನು ಕಂಡ ಯಾರಿಗೇ ಆದರೂ ಮತ್ತೊಮ್ಮೆ ಅವಳನ್ನು ಹಿಂದಿರುಗಿ ನೋಡದೇ ಇರಲಾಗುತ್ತಿರಲಿಲ್ಲ. 16 ವರ್ಷ ವಯಸ್ಸಿನ ತನುಜಾ ತಾಯಿಯೊಡನೆ ಹೋಗುತ್ತಿದ್ದರೆ, ಅವರು ತಾಯಿ ಮಗಳಂತಲ್ಲ, ಅಕ್ಕ ತಂಗಿಯರಂತೆ ತೋರುತ್ತಿದ್ದರು.

ಶಶಿಯ ಅನುಪಮ ಸೌಂದರ್ಯಕ್ಕೆ ಜನರ ದೃಷ್ಟಿ ತಾಕಿತೇನೋ ಎಂಬಂತೆ, 5 ವರ್ಷಗಳ ಹಿಂದೆ ಅವಳ ಪತಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದರು. ಆ ಸಮಯದಲ್ಲಿ  ರೂಪವೇ ಅವಳ ಪಾಲಿಗೆ ಮುಳ್ಳಾದಂತೆ ಭಾಸವಾಯಿತು. ಕಾಮುಕರ ಕ್ರೂರ ದೃಷಿಯನ್ನು ಎದುರಿಸಲಾರದೆ ಅವಳು ಮನೆಯೊಳಗೇ ಅವಿತು ಕುಳಿತುಕೊಳ್ಳುವಂತಾಯಿತು.

ಪತಿಯ ಆಫೀಸಿನಲ್ಲಿ ಅನುಕಂಪದ ಆಧಾರದ ಮೇಲೆ ಶಶಿಗೆ ಒಂದು ಉದ್ಯೋಗ ದೊರಕಿದಾಗ ಅವಳು ಅನಿವಾರ್ಯವಾಗಿ ಹೊರಗೆ ಬರಬೇಕಾಯಿತು. ಅಂತಹ ಪರಿಸ್ಥಿತಿಯಲ್ಲಿ ಅವಳಿಗೆ  ಧೈರ್ಯ ತುಂಬಿ ಆಸರೆಯಾಗಿ ನಿಂತವರು ಚಂದ್ರಕಾಂತ್‌!

ಚಂದ್ರಕಾಂತ್‌ ಅದೇ ಆಫೀಸ್‌ನಲ್ಲಿ ಶಶಿಯ ಪತಿಯೊಡನೆ ಕೆಲಸ ಮಾಡುತ್ತಿದ್ದರು. ಅವರಿನ್ನೂ ಅವಿವಾಹಿತರಾಗಿಯೇ ಇದ್ದರು, ಅದೇಕೆಂದು ಇತರರಿಗೆ ತಿಳಿದಿರಲಿಲ್ಲವಾದರೂ ಮುಂದೊಮ್ಮೆ ಅವರೇ ಶಶಿಯೊಡನೆ ಅದರ ಕಾರಣವನ್ನು ವಿವರಿಸಿದ್ದರು. ತಂದೆಯನ್ನು ಕಾಲೇಜು ವಿದ್ಯಾಭ್ಯಾಸದ ದಿನಗಳಲ್ಲೇ ಕಳೆದುಕೊಂಡ ಚಂದ್ರಕಾಂತ್‌ ಮನೆಯ ಹಿರಿಯ ಮಗನಾಗಿದ್ದರಿಂದ ತಮ್ಮ ತಂಗಿಯರ ಜವಾಬ್ದಾರಿ ನಿಭಾಯಿಸುತ್ತಲೇ ಯೌವನಾವಸ್ಥೆ ಕಳೆದುಹೋಯಿತು.

ತಮ್ಮ ಮದುವೆಯ ವಯಸ್ಸು ಕಳೆದುಹೋದುದು ಅವರ ಅರಿವಿಗೆ ಬರಲಿಲ್ಲ. ಅಲ್ಲದೆ, ಶಶಿಯನ್ನು ಕಂಡಾಗ ಅವರ ಹೃದಯ ತಾಳ ತಪ್ಪಿದಂತೆ ಹಿಂದೆಂದೂ ಅಂತಹ ಅನುಭವವಾಗಿರಲಿಲ್ಲ.

ಚಂದ್ರಕಾಂತ್‌ ತಮ್ಮ ಮನದಿಂಗಿತವನ್ನು ಶಶಿಯ ಮುಂದಿಟ್ಟಾಗ ಅವಳಿಗೆ ಕಕ್ಕಾಬಿಕ್ಕಿಯಾಯಿತು. ತನಗೆ ಎರಡನೆಯ ಮದುವೆಯೇ ಎಂದು ಗಾಬರಿಯಾದಳು. ನಂತರ, ತನ್ನ ಬಾಳನೌಕೆಯ ಹುಟ್ಟನ್ನು ವಿಶ್ವಾಸಪಾತ್ರರೊಬ್ಬರ ಕೈಲಿರಿಸಿ ತಾನು ನಿಶ್ಚಿಂತೆಯಿಂದ ಪಯಣಿಸಬಹುದಲ್ಲವೇ ಎನಿಸಿತು.

ಆದರೆ ಯಾವುದನ್ನು ತೀರ್ಮಾನಿಸುವ ಮೊದಲು ಮಗಳ ಅಭಿಪ್ರಾಯನ್ನು ತಿಳಿಯುವುದು ಅಗತ್ಯವಾಗಿತ್ತು. ತನುಜಾ ಇನ್ನೂ ತನ್ನ ತಂದೆಯ ಅಕಾಲಿಕ ಮರಣದ ಹೊಡೆತದಿಂದ ಚೇತರಿಸಿಕೊಂಡಿರಲಿಲ್ಲ. ಶಶಿಯಾದರೂ ಅದನ್ನು ಹೇಗೆ ಮರೆಯಲು ಸಾಧ್ಯ? ಆದರೆ ಕಾಲ ಮತ್ತು ಪರಿಸ್ಥಿತಿಗಳು ಹಳೆಯ ಘಟನೆಗಳನ್ನು ಮಸುಕುಗೊಳಿಸುತ್ತಾ ಸಾಗುತ್ತವೆ. ತನುಜಾ ಸಹ ಇದನ್ನು ಅರ್ಥ ಮಾಡಿಕೊಂಡರೆ ಒಳ್ಳೆಯದು.

ಚಂದ್ರಕಾಂತರ ಸೌಮ್ಯ ಮತ್ತು ಸ್ನೇಹಪೂರ್ಣ ನಡವಳಿಕೆ, ಅಜ್ಜಿಯಿಂದ ಹಿತೋಪದೇಶ, ಸಾಮಾಜಿಕ ರಕ್ಷಣೆಯ ಅವಶ್ಯಕತೆ, ಇವುಗಳ ಬಗ್ಗೆ ತನ್ನ ವಯಸ್ಸಿಗೆ ತಕ್ಕಂತೆ ಒಂದಿಷ್ಟು ಅರ್ಥ ಮಾಡಿಕೊಂಡ ತನುಜಾ, ಅರ್ಧ ಮನಸ್ಸಿನಿಂದಲೇ ತನ್ನ ತಾಯಿ ಮತ್ತು ಚಂದ್ರಕಾಂತರ ಸಂಬಂಧಕ್ಕೆ ಒಪ್ಪಿಗೆ ನೀಡಿದಳು.

ಚಂದ್ರಕಾಂತರೊಡನೆ ವಾಸಿಸಲು ತೊಡಗಿ ಒಂದು ವರ್ಷವಾಗುತ್ತಾ ಬಂದಿದ್ದರೂ ಅವರಿಗೆ ತಂದೆಯ ಸ್ಥಾನವನ್ನು ಕೊಡಲು ತನುಜಾಳಿಗೆ ಸಾಧ್ಯವಾಗಲಿಲ್ಲ. ತನ್ನ ತಾಯಿಯ ಪತಿಯ ರೂಪದಲ್ಲಿ ಕಾಣುತ್ತಿದ್ದಳೇ ಹೊರತು ಅವರನ್ನು ಒಮ್ಮೆಯೂ `ಪಪ್ಪಾ’ ಎಂದು ಕರೆಯಲಿಲ್ಲ.

ತಂದೆಯ ಹಠಾತ್‌ ಸಾವು ಮತ್ತು ಹೊಸ ಪುರುಷನೊಡನೆ ತಾಯಿಯ ಒಡನಾಟ, ಇವು ತನುಜಾಳನ್ನು ಭಾವನಾತ್ಮಕವಾಗಿ ಕಂಗೆಡಿಸುತ್ತಿದ್ದವು. ಮಾತುಮಾತಿಗೂ ಕಿರಿಚಾಡುವುದು, ಹಟ ಮಾಡುವುದು, ಸದಾ ಮೊಬೈಲ್ ಹಿಡಿದಿರುವುದು, ಚಂದ್ರಕಾಂತ್‌ ಆಫೀಸ್‌ನಿಂದ ಮನೆಗೆ ಬರುತ್ತಿದ್ದಂತೆ ತನ್ನ ಕೋಣೆಗೆ ಸೇರಿಕೊಳ್ಳುವುದು. ಹೀಗೆ ತನುಜಾ ವಿಮುಖಳಾಗತೊಡಗಿದಳು. ಮಗಳ ಮನಃಸ್ಥಿತಿಯನ್ನು ಕಂಡು ಶಶಿ ತಾನು ತಪ್ಪು ಹೆಜ್ಜೆ ಇಟ್ಟೆನೇನೋ ಎಂದು ಚಿಂತಿಸಿದಳು. ಆದರೆ ತನುಜಾಳದು ಕಿಶೋರ ಮನಸ್ಸಿನ ಮಕ್ಕಳ ಅಪಕ್ವ ನಡವಳಿಕೆಯ ಸಾಮಾನ್ಯ ಲಕ್ಷಣ ಎಂದು ಚಂದ್ರಕಾಂತ್‌ ಪತ್ನಿಗೆ ಸಮಾಧಾನಪಡಿಸಿ ಅವಳ ಗಿಲ್ಟ್ ಫೀಲಿಂಗ್‌ನ್ನು ಹೋಗಲಾಡಿಸಿದರು.

ಚಂದ್ರಕಾಂತರ ಸಂತೋಷಮಯ ಸಂಗದಿಂದ ಶಶಿಯ ಸೊರಗಿದ್ದ ಸೌಂದರ್ಯ ಮತ್ತೆ ನಳನಳಿಸತೊಡಗಿತು. ಚಂದ್ರಕಾಂತ್‌ಗೂ ಪತ್ನಿ ಸದಾ ಅಲಂಕೃತಳಾಗಿ ಇರಬೇಕೆಂಬ ಬಯಕೆ. ಅದಕ್ಕಾಗಿ ಅವಳ ಉಡುಗೆ ತೊಡುಗೆ ಮತ್ತು ಇತರೆ ಆ್ಯಕ್ಸೆಸರೀಸ್‌ಗಾಗಿ ಮನಃಪೂರ್ತಿಯಾಗಿ ಖರ್ಚು ಮಾಡುತ್ತಿದ್ದರು. ಬಹುಶಃ ತಡವಾದ ವಿವಾಹದಿಂದಾಗಿ ಪತ್ನಿಯ ಮೂಲಕ ತಮ್ಮಲ್ಲಿ ಹುದುಗಿದ್ದ ಇಚ್ಛೆಗಳನ್ನೆಲ್ಲ ಪೂರೈಸಿಕೊಳ್ಳಲು ಆಶಿಸಿದ್ದರು. ಆದರೆ ಇದಕ್ಕೆ ವಿರುದ್ಧವಾಗಿ ತನುಜಾ ಒಂಟಿತನ ಮತ್ತು ಅಸುರಕ್ಷಿತ ಭಾವವನ್ನು ಅನುಭವಿಸುತ್ತಿದ್ದಳು. ಅವಳಿಗೆ ಎಲ್ಲ ವಿಷಯಗಳಲ್ಲಿಯೂ ನಿರಾಸಕ್ತಿ ಹುಟ್ಟಿತು.

ಕ್ರಮೇಣ ತನುಜಾಳ ಕೋಮಲ ಮನಸ್ಸಿನಲ್ಲಿ ತಾಯಿಯ ಸೌಂದರ್ಯವೇ ತನ್ನ ಜೀವನದ ದೊಡ್ಡ ಅಭಿಶಾಪ ಎಂಬ ಭಾವನೆ ಮನೆ ಮಾಡತೊಡಗಿತು. ಯಾರಾದರೂ ತಾಯಿಯೊಡನೆ ತನ್ನನ್ನು ಹೋಲಿಸಿದರೆ ಮೈಮೇಲೆ ಹಾವು ಹರಿದಾಡಿದಂತೆ ಭಾಸವಾಗುತ್ತಿತ್ತು. ಅವಳಿಗೆ ತನ್ನ ತಾಯಿಯ ಮೇಲೆ ಅಸಹ್ಯ ಉಂಟಾಗತೊಡಗಿತು.

ತನುಜಾ ತಾಯಿಯೊಡನೆ ಹೊರಗೆ ಹೋಗುವುದನ್ನೇ ನಿಲ್ಲಿಸಿದಳು. ತಾಯಿ ಅಷ್ಟು ರೂಪವತಿಯಾಗಿಲ್ಲದಿದ್ದರೆ ಚಂದ್ರಕಾಂತರ ಮನಸ್ಸು ಅವರ ಮೇಲೆ ಹರಿಯುತ್ತಿರಲಿಲ್ಲ. ಆಗ ಅವಳು ಕೇವಲ ತನ್ನ ತಾಯಿಯಾಗಿರುತ್ತಿದ್ದಳು. ಚಂದ್ರಕಾಂತ್‌ ಅಥವಾ ಬೇರೆ ಯಾರ ಪತ್ನಿಯೂ ಆಗಿರುತ್ತಿರಲಿಲ್ಲ ಎಂದು ತನುಜಾಳ ಮನಸ್ಸು ಆಲೋಚಿಸುತ್ತಿತ್ತು.

`ಅಬ್ಬಾ! ಮಮ್ಮಿಗೆ ಈಗ ಎಷ್ಟು ಜಂಭ ಬಂದಿದೆ….. ಕಾಲು ನೆಲದ ಮೇಲೆ ನಿಲ್ಲುವುದೇ ಇಲ್ಲ…. ಸದಾಕಾಲ ಚಂದ್ರಕಾಂತ್‌ ಹಿಂದೆ ಮುಂದೆ ಸುತ್ತುತ್ತಾರೆ. ಇದೇನು ಚಂದ್ರಕಾಂತ್‌ ಪ್ರೀತಿಯಿಂದ ಹೀಗಾಗಿದೆಯೇ? ಚಂದ್ರಕಾಂತ್‌ ಇವರನ್ನು ಪ್ರೀತಿಸುವುದನ್ನು ನಿಲ್ಲಿಸಿದರೆ…..? ಆಗ ಮಮ್ಮಿ ಏನು ಮಾಡುತ್ತಾರೆ? ಆಗ ನೆಲದ ಮೇಲೆ ಇಳಿಯುತ್ತಾರೆ….’ ಇಂತಹ ಕಲ್ಪನೆಯಿಂದಲೇ ತನುಜಾ ಉತ್ಸಾಹಿತಳಾದಳು.

ತನುಜಾಳ ಮನಸ್ಸಿನಲ್ಲಿ ಈರ್ಷ್ಯೆಯ ಹಾವು ಹೆಡೆಯೆತ್ತಿತು. ತಾನೇನು ಮಾಡಬಹುದೆಂದು ಅವಳು ಯೋಚಿಸತೊಡಗಿದಳು. ಬಗೆಬಗೆಯ  ಯೋಜನೆಗಳು ಹಾದುಹೋದವು. ಕಡೆಗೆ ಅವಳಿಗೊಂದು ದಾರಿ ಹೊಳೆಯಿತು. ಅವಳ ತುಟಿಯ ಮೇಲೆ ಕ್ರೂರ ನಗೆ ಮೂಡಿತು.

`ಹೌದು….. ಚಂದ್ರಕಾಂತರನ್ನು ನಾನು ನನ್ನ ವಶ ಮಾಡಿಕೊಳ್ಳುತ್ತೇನೆ….. ಅವರನ್ನು ಮಮ್ಮಿಯಿಂದ ದೂರ ಮಾಡಿ ಮಮ್ಮಿಯ ಅಹಂಕಾರ ಅಡಗಿಸುತ್ತೇನೆ….. ಇದೇ ಸರಿಯಾದ ದಾರಿ…’ ಆದರೆ ಅದು ಅಷ್ಟು ಸುಲಭವಾಗಿರಲಿಲ್ಲ. ಅದು ಅವಳಿಗೂ ಗೊತ್ತಿತ್ತು. ಅದುವರೆಗೂ ಚಂದ್ರಕಾಂತರತ್ತ ತಿರುಗಿ ನೋಡದಿದ್ದ ತನುಜಾ ಅವರನ್ನು ಗಮನಿಸತೊಡಗಿದಳು. ಅವರಿಗೆ ಯಾವುದು ಇಷ್ಟ ಎಂದು ತಿಳಿಯಲು ಪ್ರಯತ್ನಿಸಿದಳು. ಅವರು ಆಫೀಸ್‌ನಿಂದ ಬಂದಾಗ ಅವರಿಗಾಗಿ ನೀರು, ಕಾಫಿಯನ್ನು ತಂದುಕೊಡುತ್ತಿದ್ದಳು.

ಶಶಿ ತರಕಾರಿ ತರಲು ಅಂಗಡಿಗೆ ಹೋಗಿದ್ದುದನ್ನು ನೋಡಿ ತನುಜಾ ತನ್ನ ಯೋಜನೆಯನ್ನು ರೂಪುಗೊಳಿಸಲು ಸಿದ್ಧಳಾದಳು.

“ಮಮ್ಮಿ, ತಲೆ ತುಂಬಾ ನೋಯುತ್ತಿದೆ…. ಸ್ವಲ್ಪ ಬಾಮ್ ಹಚ್ಚಿಕೊಡಿ…..” ತನುಜಾ ಜೋರಾಗಿ ಕೂಗಿದಳು.

ಅದನ್ನು ಕೇಳಿ ಚಂದ್ರಕಾಂತ್‌ ರೂಮಿನೊಳಗೆ ಬಂದರು. ತನುಜಾ ತಲೆಯ ಮೇಲೆ ಕೈಯಿರಿಸಿ ಕಣ್ಣು ಮುಚ್ಚಿ ಮಲಗಿದ್ದಳು. ಹೊದಿಕೆ ಮಂಡಿಯಿಂದ ಕೆಳಗೆ ಇತ್ತು. ಶಾರ್ಟ್ಸ್ ಧರಿಸಿದ್ದ ಅವಳ ತೆರೆದ ತೊಡೆಗಳು ಇಂದು ಚಂದ್ರಕಾಂತರ ಗಮನವನ್ನು ಸೆಳೆದವು.

ಸಂಕೋಚಗೊಂಡ ಚಂದ್ರಕಾಂತ್‌  ಹೊದಿಕೆಯನ್ನು ಸರಿಪಡಿಸಿ ಅವಳ ಹಣೆ ಮುಟ್ಟಿ ನೋಡಿದರು. ಜ್ವರವೇನೂ ಇರಲಿಲ್ಲ. ಅವಳ ಪಕ್ಕ ಕುಳಿತು ಹಣೆಯನ್ನು ಮೃದುವಾಗಿ ಸವರತೊಡಗಿದರು. ತನುಜಾ ಜಾರಿಕೊಂಡು ಅವರ ತೊಡೆಯ ಮೇಲೆ ತಲೆಯಿರಿಸಿದಳು. ತಮ್ಮ  ಸಂಬಂಧದಲ್ಲಿದ್ದ ಮಂಜುಗಡ್ಡೆ ಇನ್ನು ಕರಗುವುದೆಂಬ ವಿಶ್ವಾಸದಿಂದ ಚಂದ್ರಕಾಂತ್‌ ಪ್ರಸನ್ನರಾದರು.

ದಿನ ಕಳೆದಂತೆ ತನುಜಾ ಚಂದ್ರಕಾಂತರಿಗೆ ಹತ್ತಿರವಾಗುತ್ತಾ ಹೋದಳು. ತಾಯಿ ಮನೆಯಲ್ಲಿಲ್ಲದಿದ್ದಾಗ ಚಂದ್ರಕಾಂತರನ್ನು ಒತ್ತಾಯಿಸಿ ಅವರೊಡನೆ ಹೊರಗೆ ಹೋಗತೊಡಗಿದಳು. ನಡೆಯುತ್ತಾ ಅವರ ಕೈ ಹಿಡಿಯುತ್ತಿದ್ದಳು, ಅವರು ಡ್ರೈವ್ ಮಾಡುತ್ತಿದ್ದರೆ ಅವರ ಭುಜಕ್ಕೆ ತಲೆಯೊರಗಿಸಿ ಕೂರುತ್ತಿದ್ದಳು. ಚಂದ್ರಕಾಂತರೂ ಅವಳನ್ನು ಸಂತೋಷವಾಗಿರಿಸಲು ಆದಷ್ಟೂ ಪ್ರಯತ್ನಿಸುತ್ತಿದ್ದರು.

ಅವರು ತನುಜಾಳ ಬಾಳಿನಲ್ಲಿ ತಂದೆಯಿಲ್ಲದ ಕೊರತೆಯನ್ನು ಪೂರೈಸಲು ಬಯಸುತ್ತಿದ್ದರು. ಆದರೆ ಅವಳು  ಒಮ್ಮೆಯೂ ಅವರನ್ನು `ಪಪ್ಪಾ’ ಎಂದು ಕರೆಯದಿದ್ದಾಗ, ಅವಳ ಮನಸ್ಸಿನಲ್ಲಿ ಏನಿರಬಹುದು ಎಂದು ಯೋಚಿಸುತ್ತಿದ್ದರು. ಚಂದ್ರಕಾಂತರೊಡನೆ ಹೊರಗೆ ಹೋಗುವಾಗ ತನುಜಾ ಅವರ ಮೆಚ್ಚಿನ ಬಣ್ಣದ ಉಡುಪನ್ನೇ ಧರಿಸುತ್ತಿದ್ದಳು. ಒಂದು ದಿನ ಪಾರ್ಕ್‌ನಲ್ಲಿ ಅವರಿಗೆ ಅಂಟಿಕೊಂಡಂತೆ ಕುಳಿತಿದ್ದ ತನುಜಾ ಇದ್ದಕಿದ್ದಂತೆ ಪ್ರಶ್ನಿಸಿದಳು, “ನನ್ನ ಬಗ್ಗೆ  ನಿಮಗೆ ಏನನ್ನಿಸುತ್ತದೆ?”

“ಒಬ್ಬ ತಂದೆಗೆ ಮಗಳ ಬಗ್ಗೆ ಏನನ್ನಿಸುತ್ತದೋ ಅದೇ ತರಹ… ನೀನು ಮುದ್ದಿನ ಗೊಂಬೆಯ ಹಾಗೆ…..” ಚಂದ್ರಕಾಂತ್‌ ಸಹಜವಾಗಿ ಉತ್ತರಿಸಿದರು.

ಅದನ್ನು ಕೇಳಿ ತನುಜಾಳಿಗೆ ಪಿಚ್ಚೆನಿಸಿತು. ಅವಳು ಮನಸ್ಸಿನಲ್ಲೇ ಗೇಲಿ ಮಾಡಿದಳು. `ಇವರೊಬ್ಬ ಜೇಡಿಮಣ್ಣಿನಿಂದ ತಯಾರಾದ ಆಸಾಮಿ…. ನಾನು ಇವರನ್ನು ನನ್ನ ಮೋಹಜಾಲದಲ್ಲಿ ಸಿಕ್ಕಿಸುವುದಕ್ಕೆ ನೋಡಿದರೆ, ಇವರು ನನ್ನಲ್ಲಿ ಮಗಳ ರೂಪವನ್ನು ಕಾಣುತ್ತಿದ್ದಾರೆ…. ಇವರು ಸರಳರೋ ಅಥವಾ ಅತಿ ಕಿಲಾಡಿಯೋ….?  ನಾನೇ ಮುಂದುವರಿಯಲಿ ಅಂತ ನಿರೀಕ್ಷೆ ಮಾಡುತ್ತಿದ್ದಾರಾ….? ನಾನೀಗ ನನ್ನ ಮಾಸ್ಟರ್‌ ಸ್ಟ್ರೋಕ್‌ ಆಡಬೇಕು ಅಂತ ಕಾಣಿಸುತ್ತದೆ….’

ಶಶಿಯ ತಾಯಿಯ ಆರೋಗ್ಯ ಕೆಟ್ಟಿದೆಯೆಂಬ ಸುದ್ದಿ ಬಂದಿತು. “ನಾನು ಊರಿಗೆ ಹೋಗಿ 2-3 ದಿನ ಇದ್ದು ಬರುತ್ತೇನೆ. ನೀವು ತನೂಳನ್ನು ನೋಡಿಕೊಳ್ಳುತ್ತೀರಾ?” ಎಂದು ಶಶಿ ಪತಿಯನ್ನು ಕೇಳುತ್ತಿದ್ದರೆ, ತನುಜಾಳಿಗೆ ಬಯಸುತ್ತಿದ್ದ ಅವಕಾಶ ತಾನಾಗಿ ಒದಗಿ ಬಂದಂತಾಯಿತು.

ಶಶಿ ಬೇಗ ಬೇಗನೆ ಬಟ್ಟೆಗಳನ್ನು ಪ್ಯಾಕ್‌ ಮಾಡಿಕೊಂಡಳು. ಹೊರಡುವಾಗ ಮಗಳನ್ನು ಮುದ್ದಿಸಿ ಜೋಪಾನವಾಗಿರಲು ಹೇಳಿದಳು.

ರಾತ್ರಿ ಊಟವಾದ ಮೇಲೆ ಚಂದ್ರಕಾಂತರು ಕೊಂಚ ಹೊತ್ತು ಟಿ.ವಿ ನೋಡುತ್ತಾ ಕುಳಿತರು. ನಂತರ ಮಲಗಲೆಂದು ಬೆಡ್‌ರೂಮಿಗೆ ಬಂದರೆ  ಅಲ್ಲಿ ತನುಜಾ ತಮ್ಮ ಬೆಡ್‌ ಮೇಲೆ ಮಲಗಿರುವುದನ್ನು ಕಂಡು ಬೆಚ್ಚಿದರು.

ಬೆಡ್‌ಲೈಟ್‌ನ ಮಂದ ಪ್ರಕಾಶದಲ್ಲಿ ತನುಜಾ ತೊಟ್ಟಿದ್ದ ಪಾರದರ್ಶಕ ನೈಟಿಯಿಂದ ಅವಳ ಹದಿಹರೆಯದ ತುಂಬು ಅಂಗಾಂಗಗಳು ಇಣುಕಿ ನೋಡುತ್ತಿದ್ದವು. ಅವಳು ಉಸಿರು ಬಿಗಿಹಿಡಿದು ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದಳು. ಆದರೆ ಚಂದ್ರಕಾಂತ್‌ ಒಂದೆರಡು ನಿಮಿಷ ಅಲ್ಲಿ ನಿಂತಿದ್ದು, ಆಮೇಲೆ ಹೊದಿಕೆ ಹೊದಿಸಿ ಬಾಗಿಲು ಮುಂದು ಮಾಡಿ ಲಿವಿಂಗ್‌ ರೂಮಿಗೆ ಹೋದರು. ಅಲ್ಲೇ ಸೋಫಾದ ಮೇಲೆ ಮಲಗಿ ನಿದ್ರೆ ಮಾಡಿದರು.

ತನುಜಾ ಹತಾಶಳಾದಳು. 2 ದಿನಗಳಿಂದ ಅವಳು ಯೋಜಿಸಿದ ಉಪಾಯಗಳೆಲ್ಲವು ವಿಫಲವಾದವು. ತಾಯಿ ಹಿಂದಿರುಗಿ ಬಂದ ಮೇಲೆ ಇಂತಹ ಅವಕಾಶ ಸಿಗುವುದು ಕಷ್ಟ. ಆದ್ದರಿಂದ ಈಗಲೇ ಏನಾದರೂ ಮಾಡಬೇಕು ಎಂದು ಮರುದಿನ ಮತ್ತೊಂದು ಯೋಜನೆ ರೂಪಿಸಿದಳು.

ಅರ್ಧ ರಾತ್ರಿ ಕಳೆದಿತ್ತು. ಚಂದ್ರಕಾಂತ್‌ ಗಾಢನಿದ್ರೆಯಲ್ಲಿದ್ದರು. ಆಗ ಏನೋ ಸ್ಪರ್ಶವಾದಂತೆ ಭಾಸವಾಗಿ ಕಣ್ಣು ತೆರೆದರು. ಪಕ್ಕದಲ್ಲಿ ತನುಜಾ ಅವರನ್ನು ಬಳಸಿ ಹಿಡಿದು ಮಲಗಿದ್ದಳು. ಚಂದ್ರಕಾಂತ್‌ ಸ್ವಲ್ಪ ಹೊತ್ತು ಹಾಗೇ ಮಲಗಿದ್ದರು. ನಂತರ ಅವಳ ಕೈಯನ್ನು ಪಕ್ಕಕ್ಕಿರಿಸಿ ಅವಳ ಮುಖದತ್ತ  ಬಾಗಿದರು. ತನುಜಾ ತನ್ನ ಉಪಾಯ ಫಲಿಸಿತೆಂದು ಖುಷಿಯಾದಳು. ಚಂದ್ರಕಾಂತ್‌ ಬಾಗಿ ಅವಳ ಹಣೆಯ ಮೇಲೊಂದು ಹೂಮುತ್ತನ್ನಿತ್ತು ಹೊರ ಬಂದರು. ಅಂದಿನಂತೆಯೇ ಲಿವಿಂಗ್‌ ರೂಮಿನ ಸೋಫಾದ ಮೇಲೆ ಮಲಗಿದರು.

ಮರುದಿನ ಶಶಿ ಹಿಂದಿರುಗಿದಳು. ಪತಿಗೆ ಕಾಫಿ ಕೊಟ್ಟು ತಾಯಿಯ ಆರೋಗ್ಯದ ಬಗ್ಗೆ ವಿವರಿಸಿದಳು.

ತನುಜಾ ಮರೆಯಲ್ಲಿ ನಿಂತು ಅವರಿಬ್ಬರ ಮಾತುಗಳನ್ನು ಕೇಳಿಸಿಕೊಳ್ಳತೊಡಗಿದಳು. ತಾಯಿ ಊರಿಗೆ ಹೋಗಿದ್ದಾಗ ತಾನು ವರ್ತಿಸಿದ ಬಗೆಯನ್ನು ಚಂದ್ರಕಾಂತ್‌ ದೂರಿದರೆ, ಎಂಬ ಭಯ ಅವಳನ್ನು ಕಾಡುತ್ತಿತ್ತು.

ಶಶಿ ಮಾತು ನಿಲ್ಲಿಸಿ ನಂತರ ಕೊಂಚ ಲಜ್ಜೆಯಿಂದ ಉಸುರಿದಳು, “ನಮ್ಮಿಬ್ಬರದು ಒಂದು ಮಗುವಾಗಲಿ ಎಂದು ಅಮ್ಮನಿಗೆ ಆಸೆ.”

ಇದನ್ನು ಕೇಳಿ ತನುಜಾ, `ಬೆಳೆದ ಮಗಳನ್ನು ಮುಂದಿಟ್ಟುಕೊಂಡು ಮಮ್ಮಿಗೆ ಈ ವಯಸ್ಸಿನಲ್ಲಿ ತಾಯಿಯಾಗುವ ಆಸೆ,’ ಮುಖ ಕಿವುಚಿದಳು.

“ಶಶಿ, ನಾವು ತನೂಗೆ ತೋರುವ ಪ್ರೀತಿಯಲ್ಲಿ ಬೇರೆ  ಯಾರೂ ಭಾಗಿಯಾಗುವುದು ನನಗೆ ಇಷ್ಟವಿಲ್ಲ.” ಇದನ್ನು ಕೇಳಿ ಶಶಿಗೆ ಖುಷಿಯಾಯಿತು. ಆದರೆ ತನುಜಾ ಪೆಚ್ಚಾದಳು.

ಚಂದ್ರಕಾಂತ್‌ ತಮ್ಮ ಮಾತು ಮುಂದುರಿಸಿದರು, “ನಾವು ತನೂಳನ್ನು ವಿಶೇಷವಾಗಿ ನೋಡಿಕೊಳ್ಳಬೇಕು. ಅವಳು 16 ವರ್ಷದವಳಾದರೂ 6 ವರ್ಷದ ಹುಡುಗಿಯಷ್ಟು ಮುಗ್ಧೆ…. ಅವಳಲ್ಲಿ  ಒಂಟಿತನದ ಭಾವನೆ ಇದೆ…. ಹೊರಗಿನ ಯಾವುದಾದರೂ ವ್ಯಕ್ತಿ ಅವಳ ಮುಗ್ಧತೆಯನ್ನು  ದುರುಪಯೋಗಪಡಿಸಿಕೊಳ್ಳಬಹುದು. ತಂದೆಯಿಲ್ಲದ ಈ ಮಗು ಬಹಳ ಹೆದರಿದೆ. ಕಳೆದ 3 ದಿನಗಳಲ್ಲಿ ಇದು ನನಗೆ ಅರಿವಾಗಿದೆ. ಅವಳು ರಾತ್ರಿ ಹೊತ್ತು ಎಷ್ಟು ಹೆದರುತ್ತಾಳೆ ಎಂದು ನಿನಗೆ ಗೊತ್ತೆ? ಹೆದರಿದಾಗ ಮಗುವಿನಂತೆ  ಬಂದು ನನ್ನ ಪಕ್ಕ ಮಲಗುತ್ತಾಳೆ…. ಇಲ್ಲ ಶಶಿ, ಅವಳ ಪ್ರೀತಿಯನ್ನು ನಾನು ಇನ್ನಾರೊಂದಿಗೂ ಹಂಚುವುದಿಲ್ಲ…… ದೇವರು ನನಗೆ ಇಂತಹ ಪ್ರೀತಿಯ ಮಗಳನ್ನು ಕೊಟ್ಟಿರುವುದು ನನ್ನ ಅದೃಷ್ಟ.”

ಈ ಮಾತಿನಿಂದ ತನುಜಾ ನಾಚಿ ನೀರಾದಳು. ಭೂಮಿ ಬಾಯಿಬಿಟ್ಟು ತನ್ನನ್ನು ನುಂಗಬಾರದೇ ಎನಿಸಿತು. ಲಜ್ಜೆ, ದುಃಖಗಳು ಮುತ್ತಿಕ್ಕಿ ಬಿಕ್ಕಿ ಬಿಕ್ಕಿ ಅತ್ತಳು. ಕಣ್ಣೀರಿನೊಂದಿಗೆ ಅವಳ ಮನಸ್ಸಿನ ಕಲ್ಮಶವೆಲ್ಲ ತೊಳೆದುಹೋಯಿತು. ಶಶಿ ಮತ್ತು ಚಂದ್ರಕಾಂತ್‌ ಇಬ್ಬರೂ ಬಂದು ಅವಳನ್ನು ಆಲಂಗಿಸಿದರು.

ಚಂದ್ರಕಾಂತರು ಅವಳ ಕೆನ್ನೆಯನ್ನು ತಟ್ಟಿ ಹೇಳಿದರು, “ಈಗ ನಮ್ಮದು ನಿಜವಾದ ಸ್ವೀಟ್‌ ಹೋಮ್ ಆಯಿತು.

”ತನುಜಾ ಕಣ್ಣೊರೆಸಿಕೊಂಡು ನಸುನಗುತ್ತಾ, “ಲವ್ ಯೂ ಪಪ್ಪಾ,” ಎಂದು ಹೇಳಿ ಅವರನ್ನು ತಬ್ಬಿದಳು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ