ಮಿನಿ ಕಥೆ  –  ಮೂಲೆಮನೆ ರತ್ನಾಕರ ಭಿಡೆ 

ಪತ್ರಿಕೆಯೊಂದರ ಅಂಕಣಕ್ಕಾಗಿ ವಿಶ್ವ ತಾನು ಎದುರಿಸಿದ ಅಪಘಾತದ ಪ್ರಸಂಗವನ್ನು ಸ್ವಾರಸ್ಯಕರವಾಗಿ ವರ್ಣಿಸಿ ಅದನ್ನು ಪ್ರಕಟಣೆಗೆ ಕಳುಹಿಸಿದ

ಅಂದು ಪತ್ರಿಕೆಯಲ್ಲಿ ಜಾಹೀರಾತು ಬಂದಿತ್ತು. ಮಾರ್ಚ್‌ 4 ರಾಷ್ಟ್ರೀಯ ಸುರಕ್ಷಾ ದಿನಾಚರಣೆ. ಓದುಗರಿಂದ ಲೇಖನಗಳನ್ನು ಆಹ್ವಾನಿಸಲಾಗಿದೆ. ಸುರಕ್ಷಾ ಸಪ್ತಾಹದಲ್ಲಿ ನಿಮ್ಮ ಕೊಡುಗೆ ಏನು? ನೀವೇನಾದರೂ ಅಪಘಾತ ಯಾ ಪ್ರಾಣಾಪಾಯದಲ್ಲಿದ್ದ ವ್ಯಕ್ತಿಯನ್ನು ರಕ್ಷಿಸಿದ್ದೀರಾ? ಬರೆಯಿರಿ. ಲೇಖನ ಸ್ವಾರಸ್ಯವಾಗಿರಲಿ. ಆಯ್ಕೆಯಾದ ಲೇಖನಕ್ಕೆ ಸೂಕ್ತ ಬಹುಮಾನ ಕೊಡಲಾಗುವುದು. ಸಂಪಾದಕ ವಿಶ್ವನಿಗೆ ಥಟ್ಟನೆ ಉಪಾಯ ಹೊಳೆಯಿತು. ನಾನು ಮಾಡಿದ ಸಾಧನೆಯನ್ನು ಅವರಿವರಲ್ಲಿ ಕೊಚ್ಚಿಕೊಂಡರೆ ಆತ್ಮಸ್ತುತಿ ಆಗುತ್ತದೆ. ಅದರ ಬದಲು ಪತ್ರಿಕೆಗೆ ಬರೆದರೆ ನಾನು ಮಾಡಿದ ಸೇವೆ ನೂರಾರು ಜನಕ್ಕೆ ತಿಳಿಸಿದಂತಾಗುತ್ತದೆ. ಅಲ್ಲದೇ, ಒಂದು ವೇಳೆ ಪ್ರಕಟಗೊಂಡರೆ ಸಂಭಾವನೆ ಸಿಗಲೂಬಹುದು. ತಕ್ಷಣ ಲೇಖನವನ್ನು ಗೀಚಿ ಪತ್ರಿಕೆಗೆ ರವಾನಿಸಿಯೇಬಿಟ್ಟ.

ಇದು ಸುಮಾರು ಹದಿನೈದು ವರ್ಷಗಳ ಹಿಂದಿನ ಮಾತು. ನಾನಾಗ ಬಹುರಾಷ್ಟ್ರಿಯ ಕಂಪನಿಯಲ್ಲಿದ್ದೆ. ಬನಶಂಕರಿ ಮೂರನೇ ಹಂತದ ಮನೆಯಿಂದ ಎರಡನೇ ಪಾಳಿ ಡ್ಯೂಟಿಗೆ ಹೊರಟ ನಾನು, ಹೀರೋಹೋಂಡಾ ಮೋಟಾರ್‌ಬೈಕ್‌ನಲ್ಲಿ ನೆಟ್ಟಕಲ್ಲಪ್ಪ ಸರ್ಕಲ್ ತಲುಪುತ್ತಿದ್ದಂತೆ ನನ್ನ ಮುಂದುಗಡೆ ವೇಗವಾಗಿ ಚಲಿಸುತ್ತಿದ್ದ ಸ್ಕೂಟರ್‌ ರಸ್ತೆ ದಾಟುತ್ತಿದ್ದ ಹದಿನೆಂಟರ ಯುವತಿಗೆ ಡಿಕ್ಕಿ ಹೊಡೆಯಿತು. ಹೊಡೆದ ರಭಸಕ್ಕೆ ಯುವತಿ ಸುಮಾರು ನಾಲ್ಕೈದು ಅಡಿ ದೂರಕ್ಕೆ ಎಸೆಯಲ್ಪಟ್ಟಳು.

ಅವನಿನ್ನೂ ಯುವಕ. ಲೈಸೆನ್ಸ್ ಪಡೆಯಲು ಅರ್ಹನೋ ಇಲ್ಲವೋ ಗೊತ್ತಿಲ್ಲ. ಅವನೂ ಬಿದ್ದರೂ ತಕ್ಷಣ ಎದ್ದವನೇ ಗಾಡಿ ಸ್ಟಾರ್ಟ್‌ ಮಾಡಿ ಓಟಕಿತ್ತ. ಹಿಂದಿನಿಂದ ಬಂದ ನಾನು ಬೈಕ್‌ನ್ನು ಅಲ್ಲೇ ನಿಲ್ಲಿಸಿ ಅವಳ ಸಹಾಯಕ್ಕೆ ನಿಂತೆ. ಸ್ವಲ್ಪ ಹೊತ್ತಲ್ಲಿ ಇನ್ನಷ್ಟು ಜನ ಸೇರಿ ಯುವತಿಯನ್ನು ಎತ್ತಿಕೊಂಡು ಫುಟ್‌ಪಾತ್‌ನಲ್ಲಿ ಕುಳ್ಳಿರಿಸಿ ನೀರು ಕೊಟ್ಟು ಉಪಚರಿಸಿದೆವು. ಗಾಯಗಳಿಂದ ರಕ್ತ ಸೋರಲಾರಂಭಿಸಿತು. ಅದನ್ನು ನೋಡುತ್ತಿದ್ದಂತೆ ಚೀರಾಡುತ್ತಾ ಯುವತಿ ಮೂರ್ಛೆ ಹೋದಳು. ಎಲ್ಲರೂ ನನ್ನನ್ನು ದುರುಗುಟ್ಟಿ ನೋಡುವವರೇ. “ಏನಪ್ಪಾ ಬೈಕ್‌ನ್ನು ನಿಧಾನಕ್ಕೆ ಓಡಿಸಬಾರದಾಗಿತ್ತಾ. ಒಂದು ವೇಳೆ ಅವಳ ಪ್ರಾಣಕ್ಕೇನಾದರೂ ಅಪಾಯವಾಗಿದ್ದರೆ….?” ಆಳಿಗೊಬ್ಬರ ಮಾತು. ನಿಜ ವಿಚಾರ ಹೇಳ ಹೊರಟರೂ ಅದನ್ನು ಕೇಳುವ ವ್ಯವಧಾನ ಅವರಿಗಿಲ್ಲ.

ಯಾರೋ ಸುದ್ದಿ ಮುಟ್ಟಿಸಿದಾಗ ಅವರ ಪೋಷಕರು ಹಾಜರ್‌. ಮಗಳ ಪರಿಸ್ಥಿತಿಯನ್ನು ನೋಡಿ ಆಕೆಯ ಅಮ್ಮ ಗೊಳೋ ಅಂತ ಅಳುತ್ತಿದ್ದರೆ, ಯುವತಿಯ ಅಪ್ಪ ನನ್ನ ಕಾಲರ್‌ ಪಟ್ಟಿಯನ್ನು ಹಿಡಿದೇಬಿಟ್ಟ. ಹಿಂದಿನಿಂದ ಒಂದು ಗೂಸಾನೂ ಬಿತ್ತು. ಅವರೆಲ್ಲರ ದೃಷ್ಟಿಯಲ್ಲಿ ನಾನು ತಪ್ಪಿತಸ್ಥನಾಗಿದ್ದೆ. ನನ್ನದು ಅರಣ್ಯ ರೋದನವಾಗಿತ್ತು. ಸ್ವಲ್ಪ ಹೊತ್ತಿನಲ್ಲಿ ಪೊಲೀಸ್‌ ಪೇದೆಯೊಬ್ಬ ಬಂದು ನನ್ನ ಹೇಳಿಕೆ ಪಡೆದುಕೊಡು ಸಹಿ ಮಾಡಿಸಿಕೊಂಡು ಹೊರಟೇಬಿಟ್ಟ. ಹುಡುಗಿಯ ಪೋಷಕರೊಡನೆ ನಾನೂ ಸೇರಿ ಯುವತಿಯನ್ನು ಆಟೋದಲ್ಲಿ ಕುಳ್ಳಿರಿಸಿ ಆಸ್ಪತ್ರೆಗೆ ಸಾಗಿಸಿದೆ. ತಕ್ಷಣ ತಪಾಸಣೆಯೆಲ್ಲಾ ಮುಗಿಸಿ ಎಕ್ಸ್-ರೇಯನ್ನು ಪರೀಕ್ಷಿಸುತ್ತಾ ವೈದ್ಯರು, “ಹೆಚ್ಚಿನ ಅಪಾಯವೇನೂ ಇಲ್ಲ. ಎಡಗಾಲಿನ ಮೀನಖಂಡದ ಹತ್ತಿರ ಮೂಳೆ ಮುರಿದಿದೆ. ತಕ್ಷಣ ಆಪರೇಷನ್‌ ಮಾಡಬೇಕಾಗಿದೆ. ಈಗಲೇ ಇಪ್ಪತ್ತು ಸಾವಿರ ಕಟ್ಟಿ….”

ಆ ಸಂಚಕಾರ ನನಗೇ ಬಂದಿತ್ತು. ಬ್ಯಾಂಕಿನಿಂದ ಹಣ ತರಬೇಕಾಗಿತ್ತು. ನನ್ನ ಬೆಂಗಾವಲಾಗಿ ಇನ್ನೊಬ್ಬ ಬಂದ. ಎಲ್ಲಿ ಓಡಿಹೋಗುತ್ತಾನೋ ಅಂತ ಭಯವಿರಬೇಕು. ತಕ್ಷಣ ಆಪರೇಷನ್‌ ಮಾಡಿ ಮೂಳೆ ಜೋಡಿಸಿದ್ದಾಯ್ತು. ಜನರಲ್ ವಾರ್ಡ್‌ಗೆ ಹಾಕಿದ ಬಳಿಕ ಸ್ವಲ್ಪ ಹೊತ್ತಿಗೆ ಯುವತಿ ಸಾಮಾನ್ಯ ಸ್ಥಿತಿಗೆ ಮರಳಿದಳು. ಮಾತನಾಡಿಸಲೆಂದು ಒಳನಡೆದೆ, ಅವರಪ್ಪ ನನ್ನನ್ನು ಪರಿಚಯಿಸುತ್ತಾ, “ಇವರೇ ಕಣಮ್ಮಾ ಬೈಕಲ್ಲಿ ನಿನಗೆ ಆ್ಯಕ್ಸಿಡೆಂಟ್‌ ಮಾಡಿದ್ದು….” ಎಂದರು.

ನನ್ನನ್ನು ನೋಡುತ್ತಲೇ ತಬ್ಬಿಬ್ಬಾದ ಯುವತಿ, “ಅಪ್ಪಾ, ಆ್ಯಕ್ಸಿಡೆಂಟ್‌ ಮಾಡಿದ್ದು ಇವರಲ್ಲ. ಚಿಕ್ಕ ಹುಡುಗನೊಬ್ಬ ಸ್ಕೂಟರ್‌ನಲ್ಲಿ ಬಂದು ನನ್ನನ್ನು ಬೀಳಿಸಿದ,” ಎಂದಳು. ನಾನು ಹೌದೆಂದು ತಲೆಯಾಡಿಸಿ ನಿಟ್ಟುಸಿರುಬಿಟ್ಟೆ.

ಆತನ ಮುಖ ಕಪ್ಪಿಟ್ಟಿತು, “ಸಾರಿ ಸರ್‌…. ಅವರಿವರ ಮಾತು ಕೇಳಿ ನಿಮ್ಮ ಮೇಲೆ ಕೈ ಮಾಡಿದೆ…..” ಕೈ ಕೊಸರಿಕೊಳ್ಳುತ್ತಾ, “ಇನ್ಶುರೆನ್ಸ್ ಹಣ ಬಂದ ತಕ್ಷಣ ನಿಮ್ಮ ಹಣ ಹಿಂದಿರುಗಿಸುತ್ತೇನೆ,” ಎಂದರು.

ನಾನಿದ್ದವನು, “ಆಗಲಿ…. ಮಗಳ ಆರೋಗ್ಯ ನೋಡ್ಕೊಳ್ಳಿ,” ಅಂದವನೇ ಹುಡುಗಿಗೆ ಸಾಂತ್ವನ ಹೇಳಿ ನನ್ನ ವಿಳಾಸ ಫೋನ್‌ ನಂಬರ್‌ ಕೊಟ್ಟು ಹೊರಟೆ, ಹುಡುಗಿ ಕೈ ಮುಗಿದು ಆನಂದಬಾಷ್ಪ ಸುರಿಸಿ ಬೀಳ್ಕೊಟ್ಟಳು.

ಇದಾಗಿ ಆರು ತಿಂಗಳಾದರೂ ಹಣ ಪತ್ತೆಯಿಲ್ಲ! ಕಾದು ಕಾದು ಸುಸ್ತಾಗಿ ಒಂದು ದಿನ ಪಾಪ. … ನಾನು ಕೊಟ್ಟ ವಿಳಾಸ, ನಂಬರ್‌ ಕಳಕೊಂಡಿರಬಹುದು ಅಂದುಕೊಂಡವನೇ ನೇರವಾಗಿ ಆಸ್ಪತ್ರೆಗೆ ಹೋಗಿ ಅವರ ವಿಳಾಸ ಪಡೆದು ಮನೆ ಹುಡುಕುತ್ತಾ ಹೋದೆ. `ಅವರಾಗಲೇ ಮನೆ ಖಾಲಿ ಮಾಡಿ ಸುಮಾರು ಮೂರು ತಿಂಗಳಾಗಿದೆ. ಎಲ್ಲಿಗೆ ಹೋಗಿದ್ದಾರೋ ಗೊತ್ತಿಲ್ಲ,’ ಎಂದು ಕೈಚೆಲ್ಲಿದ. ಅವರು ಕೊಟ್ಟ ಫೋನ್‌ ನಂಬರ್‌ ಚಾಲನೆಯಲ್ಲಿರಲಿಲ್ಲ. ಹಣ ಹೋದರೆ ಹೋಗಲಿ ಒಬ್ಬ ಯುವತಿಯ ಜೀವ ಉಳಿಸಿದೆನಲ್ಲ ಅನ್ನೋ ಸಾರ್ಥಕತೆ ನನ್ನನ್ನು ಸದಾ ಹಸಿರಾಗಿರುವಂತೆ ಮಾಡಿತ್ತು. ಪೋಸ್ಟ್ ಮಾಡಿದ್ದಾಯ್ತು. ಕೆಲವೇ ದಿನಗಳಲ್ಲಿ ಸಂಪಾದಕರಿಂದ ಪತ್ರ ಬಂದಿತ್ತು. ವಿಶ್ವನಾಥ್‌… ನಿಮ್ಮ ಈ ಲೇಖನ ನಿಮಗಾದ ಅನುಭವವೋ ಇಲ್ಲಾ ಕಾಲ್ಪನಿಕವೋ ಗೊತ್ತಿಲ್ಲ. ಅದು ಚೆನ್ನಾಗಿದ್ದರೂ ಕ್ಲೈಮ್ಯಾಕ್ಸ್ ಇಲ್ಲವಲ್ಲ. ಅದು ಇನ್ನೂ ತೀವ್ರ‌ ಆಗಿದ್ದರೆ ಓದುಗರಿಗೆ ಖುಷಿಯಾಗುತ್ತೆ. ಲೇಖನವನ್ನು ಮರಳಿಸಿದ್ದೇವೆ. ಇನ್ನಷ್ಟು ರಸವತ್ತಾಗಿರುವಂತೆ ಬರೆದು ಕಳುಹಿಸಿ. ಸಂ.

ವಿಶ್ವನಾಥ ಯೋಚಿಸಿದ ಸಂಪಾದಕರು ಹೇಳಿದ್ದು ಅಕ್ಷರಶಃ ಸತ್ಯ. ಅಪೂರ್ಣಗೊಂಡ ಕಥೆಯನ್ನು ಪೂರ್ಣಗೊಳಿಸಲೇಬೇಕು. ಸಂಸಾರದ ಗುಟ್ಟು ರಟ್ಟಾದರೂ ಪರವಾಗಿಲ್ಲ ಅಂದುಕೊಂಡವನೇ ಲೇಖನಿಯನ್ನು ಹಿಡಿದು ಗೀಚಿದ.

ಅದೊಂದು ದಿನ ಕಾಲಿಂಗ್‌ ಬೆಲ್ ಶಬ್ದಕ್ಕೆ ಬಾಗಿಲು ತೆಗೆದೆ. ದಂಪತಿಗಳು ಬಾಗಿಲಲ್ಲಿ ನಿಂತಿದ್ದಾರೆ. ಜೊತೆಯಲ್ಲೊಬ್ಬ ತರುಣಿ ಯಾರೋ ಅಪರಿಚಿತರು. ತಬ್ಬಿಬ್ಬಾದೆ. ಬಂದವರು ತಮ್ಮನ್ನು ಪರಿಚಯಿಸಿಕೊಳ್ಳುತ್ತಾ, `ನೆಟ್ಟಕಲ್ಲಪ್ಪ ಸರ್ಕಲ್ ಆ್ಯಕ್ಸಿಡೆಂಟ್‌….’`

`ಓಹೋ ಕ್ಷಮಿಸಿ…. ತುಂಬಾ ದಿನವಾಯ್ತಲ್ಲ. ಬನ್ನಿ ಒಳಗೆ….” ಆಸೀನರಾಗುತ್ತಿದ್ದಂತೆ ಒಳಗಿದ್ದ ಅಮ್ಮನನ್ನು ಕೂಗಿ ಕರೆದು, “ಅವತ್ತು ಆ್ಯಕ್ಸಿಡೆಂಟ್‌ ಬಗ್ಗೆ ಹೇಳಿದ್ದೆನಲ್ಲ….” ಪರಿಚಯಿಸುತ್ತಿದ್ದಂತೆ ಆಕೆನೇ ಮಾತು ಮುಂದುವರಿಸಿ, “ಇವಳೇ ಆ್ಯಕ್ಸಿಡೆಂಟ್‌ ಆದ ಹುಡುಗಿ. ಆ ದಿನ ನಿಮ್ಮ ಮಗ ಇಲ್ಲದಿದ್ದರೆ…. ಊಹಿಸುವುದು ಕೂಡಾ ಅಸಾಧ್ಯ,” ಕಂಬನಿ ಒರೆಸಿಕೊಳ್ಳುತ್ತಾ ಹೇಳಿದರು.

ಆತ ಹಣ ನೀಡುತ್ತಾ, “ಸಾರಿ ವಿಶ್ವನಾಥ್‌ ಜ್ಯೋತಿಷಿಯ ಸಲಹೆಯಂತೆ ತಕ್ಷಣ ಮನೆ ಬದಲಾಯಿಸಬೇಕಾಯ್ತು. ಹಣದ ಮುಗ್ಗಟ್ಟು ಎದುರಾಗಿದ್ದರಿಂದ ಸ್ವಲ್ಪ ತಡವಾಯ್ತು,” ಎಂದರು.

ನಾನಿದ್ದವನು, “ಆಗಲಿ ಪರವಾಗಿಲ್ಲ…. ಬೇಕಿದ್ದರೆ ಇನ್ನೂ ಸ್ವಲ್ಪ ದಿನದ ಮೇಲೆ ಕೊಟ್ಟಿದ್ದರೂ…”  ಅಂದೆ ಹುಸಿನಗೆ ಸೂಸುತ್ತಾ. ಬಾಯ್ತಪ್ಪಿ ಮನೆ ಹುಡುಕಿಕೊಂಡು ಹೋದ ವಿಚಾರ ಹೇಳುವ ಗೋಜಿಗೇ ಹೋಗಲಿಲ್ಲ. ನಮ್ಮಮ್ಮ ಯುವತಿಯ ತಲೆ ಸವರುತ್ತಾ, “ಹೇಗಿದ್ದೀಯಮ್ಮ…. ಈಗ ಹೇಗಿದೆ ಕಾಲು ನೋವು? ಮುದ್ದಾಗಿದ್ದೀಯಾ… ಏನು ನಿನ್ನ ಹೆಸರು….?“

‘’ವಿಶಾಲಾಕ್ಷಿ ಆಂಟಿ….” ಎಂದಳು ನಾಚಿ ತಲೆ ತಗ್ಗಿಸುತ್ತಾ.

ಅವರಮ್ಮ, “ಗಾಯ ವಾಸಿಯಾದರೂ ಕುಂಟುತ್ತಲೇ ಇದ್ದಾಳೆ. ಕಳೆದ ಸಲ ಎಕ್ಸ್-ರೇ ಪರೀಕ್ಷಿಸಿ ವೈದ್ಯರು ಇದನ್ನು ವಾಸಿ ಮಾಡೋದು ಕಷ್ಟ ಅಂತ ಕೈ ಚೆಲ್ಲಿದ್ದಾರೆ….” ಮಾತು ಮುಂದುವರಿಸಿ, “ಈ ವರ್ಷ ಮದುವೆ ಮಾಡಬೇಕೆಂದುಕೊಂಡಿದ್ವಿ. ಆದರೆ ಅವಳಿರುವ ಈ ಸ್ಥಿತಿಯಲ್ಲಿ….. ಹಾಳಾದವನಿಗೆ ಆ್ಯಕ್ಸಿಡೆಂಟ್‌ ಮಾಡಲು ನನ್ನ ಮಗಳೇ ಬೇಕಾಗಿತ್ತೆ….?” ಎಂದರು ಸೆರಗಲ್ಲಿ ಕಣ್ಣು ಒರೆಸಿಕೊಳ್ಳುತ್ತಾ.

“ಅದಕ್ಯಾಕೆ ಚಿಂತಿಸುತ್ತೀರಿ…. ಮಹಾಲಕ್ಷ್ಮಿ ಹಾಗೆ ಇದ್ದಾಳೆ… ಯಾರಾದರೂ ಕಣ್ಣಿಗೊತ್ತಿಕೊಂಡು ಮದುವೆ ಮಾಡ್ಕೊಳ್ತಾರೆ ಬಿಡಿ….” ಎಂದರು ನಮ್ಮಮ್ಮ ಸಮಾಧಾನಪಡಿಸುತ್ತ.

ಅದೇನಾಯಿತೋ ಏನೋ…. ಅಂದಿನಿಂದ ನನ್ನ ಮನಸ್ಸಿನಲ್ಲಿ ಆ ಹುಡುಗೀನೇ ಬೇರೂರಿಬಿಟ್ಟಳು. ಒಂದು ದಿನ, “ಅಮ್ಮಾ, ನಾನು ಒಕ್ಕಣ್ಣ. ಅವಳು ಕುಂಟಿ. ಹೇಗಿರುತ್ತೆ ನಮ್ಮ ಜೋಡಿ…” ಎಂದೆ ನಗುತ್ತಾ.

ಅಮ್ಮನ ಮನಸ್ಸಿನಲ್ಲಿ ಅದೇ ಇತ್ತೇನೋ…… ವಾಲಗ ಊದಿಸಿಯೇ ಬಿಟ್ಟರು. ಮೂರೇ ವಾರಕ್ಕೆ ಲೇಖನ ಅಚ್ಚಾಗಿತ್ತು ಅನ್ನಿ.

Tags:
COMMENT