ಕಥೆ – ಸುನಂದಾ ಕುಲಕರ್ಣಿ 

ವಿಭಾ ಕಿಟಕಿಯಿಂದ ಹೊರಗೆ ನೋಡುತ್ತಾ ನಿಂತಿದ್ದಳು. ಅವಳ ದೃಷ್ಟಿ ಶೂನ್ಯದಲ್ಲಿ ನೆಟ್ಟಿತ್ತು. ಮುಖದಲ್ಲಿ ಗೆಲುವಿನ ಛಾಯೆ ಇರಲಿಲ್ಲ. ಅದನ್ನು ಕಂಡು ಅವಳ ತಾಯಿಗೆ ಆತಂಕವಾಯಿತು.

ಇಂದಿರಾ ಮಗಳನ್ನು ಕೇಳಿದರು, “ಏಕೆ ವಿಭಾ, ನೀನು ಟ್ರಿಪ್‌ ಮುಗಿಸಿಕೊಂಡು ಬಂದಂದಿನಿಂದ ಸಪ್ಪಗಿದ್ದೀಯಾ? ಮುರಳಿ ಜೊತೆ ಜಗಳ ಆಡಿಲ್ಲ ತಾನೇ?”

“ಇಲ್ಲಮ್ಮ…. ಹಾಗೇನಿಲ್ಲ…..” ಎಂದು ವಿಭಾ ಅಲ್ಲಿಂದ ಸರಿದು ಹೋದಳು.

“ಅಲ್ಲ…. ನೀನು ಬಂದು 7 ದಿನ ಆಯಿತು. ಗಂಡನ ಮನೆಗೆ ಹೋಗುವುದಿಲ್ಲವೇ? ನಿಮ್ಮ ಅತ್ತೆ ಫೋನ್‌ ಮಾಡುತ್ತಲೇ ಇದ್ದಾರೆ…. ಅವರಿಗೆ ಏನು ಉತ್ತರ ಕೊಡಲಿ?”

“ಏನಮ್ಮಾ, ಸ್ವಲ್ಪ ದಿನ ನೆಮ್ಮದಿಯಾಗಿ ಇರುವ ಹಾಗೆ ಇಲ್ಲವೇ? ನಿಮಗೆ ಕಷ್ಟವಾದರೆ ಹೇಳಿಬಿಡಿ. ಇಲ್ಲಿಂದ ಹೊರಟುಹೋಗುತ್ತೇನೆ,” ಎಂದು ವಿಭಾ ದಢಾರನೆ ರೂಮಿನ ಬಾಗಿಲು ಮುಚ್ಚಿಕೊಂಡಳು.

ಇಂದಿರಾ ಕಣ್ಣುಗಳಲ್ಲಿ ನೀರು ತುಂಬಿಕೊಂಡು ಬಾಗಿಲ ಬಳಿ ನಿಂತರು. ಒಂದು ತಿಂಗಳ ಹಿಂದೆಯಷ್ಟೇ ತಮ್ಮ ಏಕಮಾತ್ರ ಪುತ್ರಿಯ ವಿವಾಹವನ್ನು ಸಡಗರದಿಂದ ನೆರವೇರಿಸಿದ್ದರು.

ಸಾಫ್ಟ್ ವೇರ್‌ ಎಂಜಿನಿಯರ್‌ ಆಗಿದ್ದ ಮುರಳಿಯ ಸೌಜನ್ಯಪೂರ್ಣ ನಡವಳಿಕೆ ಮೆಚ್ಚುಗೆಯಾಗಿತ್ತು. ಒಂದೇ ಊರಾದುದರಿಂದ ಬೇಕೆಂದಾಗ ಮಗಳನ್ನು ನೋಡುವ ಅವಕಾಶ. ಹೀಗಾಗಿ ಸಂತೋಷದಿಂದ ಸಂಬಂಧ ಬೆಳೆಸಿದ್ದರು. ಆದರೆ ಹನಿಮೂನ್‌ಗೆ ಹೋಗಿ ಬಂದ ಮಗಳ ಉದಾಸೀನ ವ್ಯವಹಾರ ತಾಯಿಯನ್ನು ಚಿಂತೆಗೀಡು ಮಾಡಿತು.

ದಿಕ್ಕು ತೋಚದಂತೆ ನಿಂತಿದ್ದ ಇಂದಿರಾ ಬಾಗಿಲು ತಟ್ಟಿದ ಶಬ್ದದಿಂದ ವಾಸ್ತವಕ್ಕೆ ಬಂದರು. ವಿಭಾಳ ಆಪ್ತ ಗೆಳತಿ ದಿವ್ಯಾ ಬಂದಿದ್ದಳು.

“ಯಾವಾಗ ಬಂದೆ ದಿವ್ಯಾ? ನಿನ್ನ ಕೆಲಸ ಹೇಗಿದೆ?”

“ನಿನ್ನೆ ರಾತ್ರಿ 8 ಗಂಟೆಗೆ ಬಂದೆ. ಕೆಲಸ ಚೆನ್ನಾಗಿದೆ. 4 ದಿನಗಳ ರಜೆ ಸಿಕ್ಕಿತು. ವಿಭಾ ಬಂದಿದ್ದಾಳೆ ಅಂತ ಅಮ್ಮ ಹೇಳಿದರು. ಅದಕ್ಕೇ ಬೆಳಗ್ಗೇನೇ ಓಡಿ ಬಂದೆ. ನೀವು ಹೇಗಿದ್ದೀರಿ ಆಂಟಿ?”

“ನಾನು ಚೆನ್ನಾಗಿದ್ದೇನಮ್ಮ. ಆದರೆ…..” ಎಂದು ಅತ್ತಿತ್ತ ನೋಡಿ ಮೆಲ್ಲನೆ ಮಗಳ ಬಗೆಗಿನ ತಮ್ಮ ಆತಂಕವನ್ನು ವಿವರಿಸಿದರು.

“ನೀವು ಯೋಚಿಸಬೇಡಿ. ಆಂಟಿ. ಅದೇನೆಂದು ನಾನು ವಿಚಾರಿಸುತ್ತೇನೆ,” ಎಂದು ದಿವ್ಯಾ ಆಶ್ವಾಸನೆ ಇತ್ತಳು.

ಅನಿರೀಕ್ಷಿತವಾಗಿ ಗೆಳತಿಯನ್ನು ಕಂಡು ವಿಭಾ ಓಡಿ ಬಂದು ಬಿಗಿದಪ್ಪಿದಳು. ಹೊಸದಾಗಿ ಬೇರೆ ಊರಿನಲ್ಲಿ ಕೆಲಸಕ್ಕೆ ಸೇರಿದ್ದ ದಿವ್ಯಾಳಿಗೆ ಗೆಳತಿಯ ಮದುವೆಗೆ ಬರಲು ಸಾಧ್ಯವಾಗಿರಲಿಲ್ಲ. 4 ತಿಂಗಳ ನಂತರ ಇಬ್ಬರೂ ಭೇಟಿಯಾಗಿದ್ದರು.

“ಹೇಗಿತ್ತು ನಿಮ್ಮ ಹನಿಮೂನ್‌ ಟ್ರಿಪ್‌? ಚೆನ್ನಾಗಿ ಎಂಜಾಯ್‌ ಮಾಡಿದಿರಾ?”

“ಚೆನ್ನಾಗಿತ್ತು. ನೀನು ಯಾವಾಗ ಬಂದೆ?” ಸೊರಗಿದ ದನಿಯಲ್ಲಿ ವಿಭಾ ಹೇಳಿದಳು.

“ಏನಾಯಿತು ವಿಭಾ? ಅಲ್ಲೇನಾದರೂ ತೊಂದರೆ ಆಯಿತಾ? ನೋಡು, ನನ್ನಿಂದ ನೀನು ಮುಚ್ಚಿಡಬೇಡ. ನಿನ್ನ ನಗುವಿನ ಹಿಂದೆ ಅವ್ಯಕ್ತ ನೋವು ಇರುವುದು ನನಗೆ ಕಾಣಿಸುತ್ತಾ ಇದೆ. ಹೇಳು ಏನು ಅಂತ….” ದಿವ್ಯಾ ಗೆಳತಿಯ ಭುಜವನ್ನು ಬಳಸಿ ಹಿಡಿದು ಕೇಳಿದಳು.

ದಿವ್ಯಾಳ ತೋಳಿಗೆ ತಲೆಯೊರಗಿಸಿ ವಿಭಾ ಬಿಕ್ಕಿದಳು. ಅವಳು ಹೇಳಿದ ವಿಷಯ ಯೋಚಿಸುವಂತಿತ್ತು.

ವಿಭಾ ಹೇಳಿದ ಪ್ರಕಾರ, ಮುರಳಿ ಮದುವೆಯಾದಾಗಿನಿಂದಲೂ ಫಿಸಿಕಲ್ ರಿಲೇಶನ್‌ನ ಸಂದರ್ಭದಲ್ಲಿ ಏಕೋ ಹಿಂಜರಿಯುತ್ತಾನೆ. ಅದು ಅಸ್ವಾಭಾವಿಕವಾಗಿ ತೋರುತ್ತದೆ. ಎಷ್ಟೇ ಪ್ರಯತ್ನಪಟ್ಟರೂ ಅವರು ಸಂಭೋಗದ ಚರಮೋತ್ಕರ್ಷ ಆನಂದವನ್ನು ಪಡೆಯಲಾಗುತ್ತಿಲ್ಲ. ಹೀಗಾಗಿ ಅವರಿಬ್ಬರ ಸಂಬಂಧದಲ್ಲಿ ಅಸಹನೆ, ಕಸಿವಿಸಿ ತಲೆಯೆತ್ತಿದೆ.

ಹಾಗೆ ನೋಡಿದರೆ ಮುರಳಿ ಪತ್ನಿಯನ್ನು ಬಹಳ ಪ್ರೀತಿಸುತ್ತಾನೆ. ಅವಳ ಅಗತ್ಯಗಳನ್ನು ಮುತುರ್ಜಿಯಿಂದ ಪೂರೈಸುತ್ತಾನೆ. ಸಮಸ್ಯೆ ಏನು ಅನ್ನುವುದೇ ಅರ್ಥವಾಗುತ್ತಿಲ್ಲ. ತಂದೆ ತಾಯಿಯೊಂದಿಗೆ ಇಂತಹ ವಿಷಯ ಮಾತನಾಡಲು ನಾಚಿಕೆಯಾಗುತ್ತದೆ. ಅಲ್ಲದೆ, ಅವರಿಗೆ ತಿಳಿದರೆ ಚಿಂತಿಸತೊಡಗುತ್ತಾರೆ.

ವಿಭಾ ಹೇಳಿದುದನ್ನೆಲ್ಲ ದಿವ್ಯಾ ಮನಸ್ಸಿಟ್ಟು ಕೇಳಿದಳು. ಅವಳು ಮನಶ್ಶಾಸ್ತ್ರದ ಡಿಗ್ರಿ ಪಡೆದವಳು. ಗೆಳತಿಗೆ ಏನು ಮಾಡಬೇಕೆಂದು ಸಲಹೆ ನೀಡಿದಳು.

ಅದರಂತೆ ವಿಭಾ ತನ್ನ ಉದಾಸೀನ ವರ್ತನೆಯನ್ನು ಬಿಟ್ಟು ಸಹಜವಾಗಿ ನಡೆದುಕೊಂಡಳು. ಅದರಿಂದ ಅವಳ ತಂದೆತಾಯಿಗೆ ಮನಸ್ಸು ನಿರಾಳವಾಯಿತು. ಮರುದಿನವೇ ಅತ್ತೆಯ ಮನೆಗೆ ಹೊರಟಳು.

ವಿಭಾ ತನ್ನ ಬೇಸರವನ್ನು ಬದಿಗಿಟ್ಟು ಪತಿಯೊಡನೆ ಸ್ವಾಭಾವಿಕವಾಗಿ ಮತ್ತು ಪ್ರೀತಿಯಿಂದ ವರ್ತಿಸಿದಳು. ಅಲ್ಲದೆ ಏನೇ ತೊಂದರೆ ಬಂದರೂ ಜೊತೆಯಾಗಿ ನಿಲ್ಲುವೆನೆಂದು ಭರವಸೆ ಇತ್ತಳು. ಅವಳ ಈ ಸಕಾರಾತ್ಮಕ ವರ್ತನೆಯಿಂದ ಮುರಳಿಯ ಹಿಂಜರಿಕೆ ಕ್ರಮೇಣ ಕಡಿಮೆಯಾಗುತ್ತಾ ಬಂದಿತು. ಆದರೆ ಫಿಸಿಕಲ್ ರಿಲೇಶನ್‌ಶಿಪ್‌ನ ಸಮಸ್ಯೆಯು ಹಿಂದಿನಂತೆಯೇ ಇತ್ತು.

ಕೆಲವು ದಿನಗಳ ಬಳಿಕ, ಪತಿಗೆ ಒಂದಷ್ಟು ತಿಳಿಹೇಳಿ, ಅವನನ್ನು ಕೌನ್ಸೆಲರ್‌ ಬಳಿಗೆ ಹೋಗಲು ಒಪ್ಪಿಸಿದಳು. ದಿವ್ಯಾ ಹೇಳಿದ್ದ ಡಾಕ್ಟರ್‌ ಕ್ಲಿನಿಕ್‌ಗೆ ಅವರು ತಲುಪಿದರು. ಕ್ಲಿನಿಕ್‌ನ ಹೊರಗೆ ಡಾ. ನಾರಾಯಣ್‌, ಲೈಂಗಿಕ ರೋಗ ತಜ್ಞರು ಎಂಬ ಬೋರ್ಡ್‌ ತೂಗುತ್ತಿತ್ತು. ಡಾಕ್ಟರ್‌ ಇಬ್ಬರ ಪರಿಚಯ ಮಾಡಿಕೊಂಡು, ಅವರ ಕುಟುಂಬ, ಉದ್ಯೋಗಗಳ ಬಗ್ಗೆ ಕೆಲವು ಪ್ರಶ್ನೆಗಳನ್ನು ಕೇಳಿದರು. ತನ್ನ ಸಮಸ್ಯೆಯ ಬಗ್ಗೆ ಹೇಳಲು ಮುರಳಿ ಸಂಕೋಚ ಪಡುತ್ತಿರುವುದನ್ನು ಗುರುತಿಸಿದ ಡಾಕ್ಟರ್‌, ವಿಭಾಳನ್ನು ಹೊರಗೆ ಕುಳಿತಿರಲು ಸೂಚಿಸಿದರು. ಮುರಳಿಯೊಡನೆ ಪ್ರತ್ಯೇಕವಾಗಿ ಮಾತನಾಡಿ ಕೆಲವು ಔಷಧಿಗಳನ್ನು ಬರೆದುಕೊಟ್ಟರು ಮತ್ತು 3 ಸಿಟಿಂಗ್‌ಗೆ ಬರಲು ಹೇಳಿದರು.

ಮುರಳಿಯೊಡನೆ 3 ಸಿಟಿಂಗ್‌ ಮಾಡಿದ ನಂತರ ವಿಭಾಳಿಗೆ ಫೋನ್‌ ಮಾಡಿದ ಡಾ. ನಾರಾಯಣ್‌ ಕ್ಲಿನಿಕ್‌ಗೆ ಬರುವಂತೆ ಹೇಳಿದರು. ಮುರಳಿಯ ಸಮಸ್ಯೆಯ ಬಗ್ಗೆ ಅವರು ವಿವರಿಸಿದುದನ್ನು ಕೇಳುತ್ತಾ, ಪತಿಯ ಪರಿಸ್ಥಿತಿಯನ್ನು ತಿಳಿದು ಅವಳು ಸ್ತಬ್ಧಳಾದಳು, “ನಿಮ್ಮ ಪತಿ ಶಾರೀರಿಕವಾಗಿ ಚೆನ್ನಾಗಿ ಫಿಟ್‌ ಆಗಿದ್ದಾರೆ. ಒಂದು ಮಾನಸಿಕ ಒತ್ತಡ ಅಥವಾ ದೌರ್ಬಲ್ಯದಿಂದಾಗಿ ಸಂಭೋಗ ಪ್ರಕ್ರಿಯೆಯಲ್ಲಿ ಸಮಸ್ಯೆಗೆ ಗುರಿಯಾಗಿದ್ದಾರೆ.

“ಈ ಸಮಯದಲ್ಲಿ ಅವರಿಗೆ ನಿಮ್ಮ ಬೆಂಬಲ ಅತ್ಯಗತ್ಯವಾಗಿದೆ. ನೀವು ಮನಸ್ಸನ್ನು ಗಟ್ಟಿ ಮಾಡಿಕೊಂಡು ನಾನು ಹೇಳುವುದನ್ನು ಕೇಳಬೇಕು. ಕಿಶೋರ ವಯಸ್ಸಿನಲ್ಲಿ ನಿಮ್ಮ ಪತಿ ಲೈಂಗಿಕ ಶೋಷಣೆಗೆ ಬಲಿಯಾಗಿದ್ದಾರೆ. ಅದರಿಂದ ಶಾರೀರಿಕ ಮತ್ತು ಮಾನಸಿಕ ಪೀಡನೆಗೆ ತುತ್ತಾಗಿದ್ದಾರೆ, ಅಪರಾಧಿ ಪ್ರಜ್ಞೆ ಅವರನ್ನು ಕಾಡುತ್ತಿದೆ. ಇದರಿಂದಾಗಿ ನಿಮ್ಮೊಂದಿಗೆ ಫಿಸಿಕಲ್ ರಿಲೇಶನ್‌ ಸಾಧ್ಯವಾಗುತ್ತಿಲ್ಲ ಮತ್ತು ನೀವಿಬ್ಬರೂ ಲೈಂಗಿಕ ಸುಖದಿಂದ ವಂಚಿತರಾಗಿರುವಿರಿ. ನೀವು ಬಹಳ ಜಾಗರೂಕರಾಗಿ ಅವರನ್ನು ಪ್ರೀತಿಯಿಂದ ನೋಡಿಕೊಳ್ಳಬೇಕಾಗಿದೆ.”

ಹೀಗೂ ಆಗುವುದುಂಟೆ? ಗಟ್ಟಿಮುಟ್ಟಾಗಿರುವ ಯುವಕನೊಬ್ಬನ ಹಿಂದೆ ಲೈಂಗಿಕ ಶೋಷಣೆಗೆ ತುತ್ತಾಗಿರುವ ಸಾಧ್ಯತೆ ಇರುವುದೆಂಬ ವಿಷಯ ವಿಭಾಳ ಮನಸ್ಸಿಗೆ ನಿಲುಕಲಾರದ ವಿಚಾರವಾಗಿತ್ತು. ಅದು ಹೇಗೆ ನಡೆದಿರಬಹುದೆಂದು ಅವಳು ಊಹಿಸಲು ಅಸಾಧ್ಯವಾಯಿತು.

ಹಗಲೆಲ್ಲ ನಗುನಗುತ್ತಾ ತಮಾಷೆಯ ಮೂಡ್‌ನಲ್ಲಿರುತ್ತಿದ್ದ ಮುರಳಿ ರಾತ್ರಿ ಪಕ್ಕಕ್ಕೆ ಬಂದಾಗ ಅಸಹಜವಾಗಿರುವುದು, ಪ್ರೀತಿ ವ್ಯಕ್ತಪಡಿಸುವಲ್ಲಿ ಪತಿಯೇ ಮುಂದುವರಿಯುವನೆಂದು ವಿಭಾ ಸ್ತ್ರೀ ಸಹಜ ಲಜ್ಜೆಯಿಂದ ನಿರೀಕ್ಷಿಸುವುದು, ಅದು ಆಗದಿದ್ದಾಗ ತಾನೇ ಪ್ರೀತಿಯಿಂದ ಅವನನ್ನು ಬಳಸುವುದು. ಆದರೂ ಮುರಳಿ ಉತ್ತೇಜಿತನಾಗದೆ, ಪ್ರತಿಕ್ರಿಯಿಸದೆ ಇರುವುದು, ಇವೆಲ್ಲ ವಿಭಾಳನ್ನು ಆಶ್ಚರ್ಯಗೊಳಿಸಿ ಚಿಂತಿತಳನ್ನಾಗಿಸಿದ್ದವು. ಈಗ ಡಾಕ್ಟರ್‌ ಆ ಸಮಸ್ಯೆಯ ಕಾರಣವನ್ನು ಸೂಕ್ಷ್ಮವಾಗಿ ತಿಳಿಸಿದ ನಂತರ, ಪತಿಯನ್ನು ಅದರಿಂದ ಮುಕ್ತಗೊಳಿಸುವ ಪಣತೊಟ್ಟಳು.

ಅಂದು ರಾತ್ರಿ ವಿಭಾ ಊಟ ಮುಗಿಸಿ ಹಾಸಿಗೆಗೆ ಹೋಗುತ್ತಿದ್ದಂತೆ ತಮಾಷೆಯ ಧ್ವನಿಯಲ್ಲಿ ಪತಿಯನ್ನು ಪ್ರಶ್ನಿಸಿದಳು, “ನಿಮಗೆ ನನ್ನ ಮೇಲೆ ಕೊಂಚವೂ ವಿಶ್ವಾಸವಿಲ್ಲವೇ?”

“ಛೇ! ಹಾಗೇಕೆ ಹೇಳುತ್ತೀ? ಈಗ ನೀನೇ ನನ್ನ ಜೀವ. ನೀನಿಲ್ಲದೆ ನಾನು ಬದುಕುವ ಕಲ್ಪನೆಯನ್ನೂ ಮಾಡಲಾರೆ,” ಮುರಳಿ ಮನನೊಂದು ನುಡಿದ.

“ಹಾಗಿದ್ದರೆ ನೀವು ನಿಮ್ಮ ಜೀವನದ ಮುಖ್ಯವಾದ ಒಂದು ವಿಷಯವನ್ನು ನನ್ನಿಂದ ಏಕೆ ಮುಚ್ಚಿಟ್ಟಿರಿ?” ವಿಭಾ ಪ್ರೀತಿಯಿಂದ ಅವನ ಕೈ ಅದುಮಿ ಕೇಳಿದಳು.

“ನಿನಗೆ ಹೇಳಬೇಕು ಅಂತ ಎಷ್ಟೋ ಸಲ ಅಂದುಕೊಂಡೆ. ಆದರೆ ನೀನೆಲ್ಲಿ ತಪ್ಪು ತಿಳಿಯುವಿಯೋ ಅಂತ ಅಳುಕಿದೆ. ನಾನು ನಿನ್ನನ್ನು ಬಹಳ ಪ್ರೀತಿಸುತ್ತೇನೆ ವಿಭಾ. ಏನೇ ಆದರೂ ನಿನ್ನನ್ನು ಕಳೆದುಕೊಳ್ಳಲು ಇಷ್ಟವಿಲ್ಲ. ಆದ್ದರಿಂದ……” ಎನ್ನುತ್ತಾ ಮುರುಳಿ ಮಾತು ನಿಲ್ಲಿಸಿದ.ಕೊಂಚ ಹೊತ್ತಿನ ಬಳಿಕ ಮೌನ ಮುರಿದು ತನ್ನ ಜೀವನದ ಕಹಿ ವೃತ್ತಾಂತವನ್ನು ವಿವರಿಸತೊಡಗಿದ.

“ನಾನು ಟೆಂತ್‌ ಕ್ಲಾಸ್‌ನಲ್ಲಿ ಓದುತ್ತಿದ್ದೆ. ನನಗೆ ಆಗ 15 ವರ್ಷ ವಯಸ್ಸು. ಒಮ್ಮೆ ಸ್ನೇಹಿತರ ಜೊತೆ ಕ್ರಿಕೆಟ್‌ ಆಡುತ್ತಿದ್ದೆ. ನಾನು ಹೊಡೆದ ಬಾಲ್‌ ಹೋಗಿ ಅಲ್ಲೇ ಪಕ್ಕದ ಪಾರ್ಕ್‌ನಲ್ಲಿ ಕುಳಿತಿದ್ದ ಕಾಮಿನಿ ಆಂಟಿಗೆ ತಗುಲಿತು. ನಾನು ಓಡಿ ಹೋಗಿ ಅವರ ಕ್ಷಮೆ ಕೇಳಿದೆ. ಅವರು `ಇಟ್‌ ಈಸ್‌ ಓ.ಕೆ.’ ಎನ್ನುತ್ತಾ, ಬಾಲನ್ನು ಕೊಟ್ಟರು. ಅದೇ ಮೊದಲು ನಾನು ಅವರನ್ನು ಭೇಟಿ ಮಾಡಿದ್ದು.

“ಅವರು ಸುಮಾರು 30-35 ವಯಸ್ಸಿನ ಸುಂದರ ಮತ್ತು ವಿದ್ಯಾವಂತ ತರುಣಿ. ನಮ್ಮ ಮನೆಯ ಹತ್ತಿರವೇ ಇದ್ದಾರೆಂದು ತಿಳಿಯಿತು. ನಾನು ಫೈನಲ್ ಪರೀಕ್ಷೆ ತೆಗೆದುಕೊಳ್ಳುವೆನೆಂದು ತಿಳಿದು ನನಗೆ ಪಾಠ ಹೇಳಿಕೊಡುವೆ ಎಂದು ಹೇಳಿದರು. ಅವರ ಮನೆಗೆ ಹೋಗಿ ಪಾಠ ಹೇಳಿಸಿಕೊಳ್ಳಲು ನನ್ನ ಅಪ್ಪ ಅಮ್ಮ ಕೂಡ ಒಪ್ಪಿದರು.

“ನನಗೆ ಅರ್ಥವಾಗದ ಕೆಲವು ಚಾಪ್ಟರ್‌ಗಳನ್ನು ಕಾಮಿನಿ ಆಂಟಿ ಬಹಳ ಚೆನ್ನಾಗಿ ವಿವರಿಸಿದರು. ಅವರ ಮನೆ ಶಾಂತವಾಗಿರುತ್ತಿತ್ತು. ಅಂಕಲ್ ಹೆಚ್ಚಾಗಿ ಟೂರ್‌ಗೆ ಹೋಗಿರುತ್ತಿದ್ದರು. ಮನೆಯಲ್ಲಿ ಮಕ್ಕಳಿರಲಿಲ್ಲ. ಅಷ್ಟು ದೊಡ್ಡ ಮನೆಯಲ್ಲಿ ಒಬ್ಬರೇ ಇರುತ್ತಿದ್ದರು.

“ಪಾಠವೇನೋ ಚೆನ್ನಾಗಿ ನಡೆಯುತ್ತಿತ್ತು. ಆದರೆ ಅವರ ಕೆಲವು ವರ್ತನೆಗಳು ನನಗೆ ಕೆಟ್ಟದೆನಿಸುತ್ತಿದ್ದವು. ಪಾಠ ಹೇಳುವಾಗ ನನ್ನ ಭುಜವನ್ನು ನಿಧಾನವಾಗಿ ಸವರುವುದು, ನನ್ನ ತೊಡೆಯ ಮೇಲೆ ಕೈಯಾಡಿಸುವುದು, ಹೀಗೆ ಮಾಡುವಾಗ ವಿಚಿತ್ರವಾಗಿ ನನ್ನನ್ನು ದಿಟ್ಟಿಸುವುದು ಮಾಡುತ್ತಿದ್ದರು. ಇದರಿಂದ ನನಗೆ ಮುಜುಗರವಾಗುತ್ತಿತ್ತು. ಆದರೆ ನಾನಾಗ ಚಿಕ್ಕ ವಯಸ್ಸಿನವನಾದ್ದರಿಂದ ಅರ್ಥವಾಗುತ್ತಿರಲಿಲ್ಲ.

“ನನ್ನ ಪರೀಕ್ಷೆ ಮುಗಿಯುವ ಹಂತದಲ್ಲಿತ್ತು. ಮರುದಿನ ಕಡೆಯ ಪೇಪರ್‌ ಇತ್ತು. ಪಾಠ ಮುಗಿದ ಮೇಲೆ ಆಂಟಿ ನನಗೆ ಜ್ಯೂಸ್‌ ಕೊಟ್ಟರು. ಅದನ್ನು ಕುಡಿದಾಗ ನನಗೆ ತಲೆ ಸುತ್ತಿದಂತಾಯಿತು. ಮೇಲೇಳಲು ಹೋದಾಗ ತೂರಾಡಿದೆ. ಅವರು ಬಂದು ನಾನು ಬೀಳದಂತೆ ಹಿಡಿದುಕೊಂಡರು. ಆಮೇಲೆ ಏನಾಯಿತೆಂದು ನನಗೆ ತಿಳಿಯಲಿಲ್ಲ. 2-3 ಗಂಟೆಯ ನಂತರ ನಾನು ಕಣ್ಣು ತೆರೆದಾಗ ತಲೆ ಭಾರವಾಗಿತ್ತು. ನನ್ನ ಬಟ್ಟೆ ಅಸ್ತ್ಯಸ್ತವಾಗಿತ್ತು. ನನಗೆ ಹೆದರಿಕೆಯಾಯಿತು. ಏನೋ ತಪ್ಪಾಗಿದೆಯೆನಿಸಿತು. ಕಾಮಿನಿ ಆಂಟಿ ಮುಗುಳ್ನಗುತ್ತಿದ್ದ ರೀತಿ ನನಗೆ ಅನುಮಾನ ಹುಟ್ಟಿಸಿತು.

“ಪರೀಕ್ಷೆ ಮುಗಿಯಿತು. ಆದ್ದರಿಂದ ಅವರ ಮನೆಗೆ ಹೋಗಬೇಕಾದ ಪ್ರಮೇಯವಿರಲಿಲ್ಲ. ಆದರೆ 2-3 ದಿನಗಳ ನಂತರ ಅವರಿಂದ ಫೋನ್‌ ಬಂದಿತು. ಕಡೆಯ ದಿನದ ಅಸ್ಪಷ್ಟವಾದ ವಿಚಿತ್ರ ಘಟನೆಯಿಂದಾಗಿ ನನಗೆ ಅಲ್ಲಿಗೆ ಹೋಗುವ ಮನಸ್ಸಿರಲಿಲ್ಲ. ಆದರೆ ಅಮ್ಮನ ಒತ್ತಾಯದಿಂದಾಗಿ ಹೋಗಬೇಕಾಯಿತು.

“ಅವರ ಮನೆ ತಲುಪಿದಾಗ ಬಾಗಿಲು ಅರ್ಧ ತೆರೆದಿತ್ತು.  ಹಾಲ್‌ನಲ್ಲಿ ಮಂದವಾದ ಬೆಳಕಿತ್ತು. ಕಾಮಿನಿ ಆಂಟಿ ಸೋಫಾದಲ್ಲಿ ಒರಗಿದ್ದರು. ಮದ್ಯದ ವಾಸನೆ ಹರಿಡಿತ್ತು.

“ನನಗೆ ಮುಂದೆ ಹೋಗಲು ಇಷ್ಟವಾಗದೆ ನಿಂತಿರಲು, ಅವರು ನನ್ನ ಕೈ ಹಿಡಿದು ಎಳೆದುಕೊಂಡು ಒಂದೇ ಸಮನೆ ಚುಂಬಿಸತೊಡಗಿದರು. ಇದೇನು ಮಾಡುತ್ತಿದ್ದೀರಿ, ಬಿಡಿ ನನ್ನನ್ನು ಎನ್ನುತ್ತಾ ನಾನು ಅವರ ಹಿಡಿತದಿಂದ ಬಿಡಿಸಿಕೊಂಡು ಬಾಗಿಲಿನತ್ತ  ಹೋದೆ. `ನಿಲ್ಲು, ನಿನಗೇನೋ ತೋರಿಸಬೇಕಾಗಿದೆ!’ ಎನ್ನುತ್ತಾ ಜೋರಾಗಿ ಕಿರಿಚಿದರು. ಅವರು ಮೊಬೈಲ್‌ನಲ್ಲಿ ತೋರಿಸಿದ್ದನ್ನು ನೋಡಿ ನನಗೆ ಮೂರ್ಛೆ ಹೋದಂತಾಯಿತು. ಅದೊಂದು ವೀಡಿಯೋ ಶೂಟ್‌. ಅದರಲ್ಲಿ ನಾನು ಅವರ ಮೇಲೆ ಏರಿರುವಂತೆ ಮತ್ತು ಅವರು ಪ್ರತಿಭಟಿಸುತ್ತಿರುವಂತೆ ಚಿತ್ರಿತವಾಗಿತ್ತು.

“ಅವರು ಹೇಳಿದಂತೆ ನಾನು ಕೇಳದಿದ್ದರೆ, ಈ ವೀಡಿಯೋ ಆಧಾರದ  ಮೇಲೆ ನನ್ನ ವಿರುದ್ಧ ರೇಪ್‌ ಕೇಸ್‌ ಮಾಡುವರೆಂದೂ, ನಾವೆಲ್ಲ ಬೀದಿಯಲ್ಲಿ ತಲೆಯೆತ್ತಿ ತಿರುಗದಂತೆ ಮಾಡುವರೆಂದೂ ಚೆನ್ನಾಗಿ ಬೆದರಿಕೆ ಹಾಕಿದರು. ನನಗೆ ಭಯವಾಗುತ್ತಿದ್ದರೂ ನಾನು ಅಂಥ ಕೆಲಸ ಮಾಡಲೇ ಇಲ್ಲ ಎಂದು ಮೊಂಡು ಧೈರ್ಯದಿಂದ ಪ್ರತಿಭಟಿಸಿದೆ.

“ಅದಕ್ಕೆ ಅವರು ನಕ್ಕು, `ನಿನ್ನ ಮಾತನ್ನು ಯಾರು ಕೇಳುತ್ತಾರೆ? ನೀನು ಹೇಗೆ ನನ್ನ ಮೇಲೆ ಎರಗಿದ್ದೀಯಾ? ನಾನು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿದ್ದೇನೆ ಎನ್ನುವುದು ವೀಡಿಯೋದಲ್ಲಿ ಸ್ಪಷ್ಟವಾಗಿ ಕಾಣಿಸುತ್ತಾ ಇದೆಯಲ್ಲ,’ ಎಂದರು. ನಾನು ಕತ್ತು ಬಗ್ಗಿಸಿ ನಿಂತೆ. ಅವರು ಆಡಿಸಿದಂತೆ ಆಡಿದೆ.

“ಹೊರಡುವಾಗ ನನಗೆ ಎಚ್ಚರಿಕೆ ನೀಡಿದರು. `ನಾನು ಕರೆದಾಗಲೆಲ್ಲ ಬರುತ್ತಿರಬೇಕು, ಸಬೂಬು ಹೇಳುವಂತಿಲ್ಲ. ಮರೆತೂ ಸಹ ಈ ವಿಷಯನ್ನೂ ಯಾರಿಗೂ ಹೇಳಬಾರದು. ಇಲ್ಲವಾದರೆ ನಿನ್ನ ಜೀವನವನ್ನೇ ಮುಗಿಸಿಬಿಡುತ್ತೇನೆ.` ನಾನು ಅವರ ಕೈಗೊಂಬೆಯಾದೆ. ಅವರು ಪ್ರತಿ ಬಾರಿ ಕರೆದಾಗಲೂ ನಾನು ಹೋಗಬೇಕಾಗಿತ್ತು. ಈ ವಿಷಯವನ್ನು ಯಾರೊಡನೆ ಹೇಳಲೂ ನನಗೆ ಧೈರ್ಯವಿರಲಿಲ್ಲ. ಮೊದಲನೆಯದಾಗಿ ನನ್ನ ಮೇಲೆ ನನಗೆ ನಾಚಿಕೆ. ಎರಡನೆಯದಾಗಿ ತಂದೆ ತಾಯಿಯರ ಮರ್ಯಾದೆಯ ಪ್ರಶ್ನೆ. ಹೀಗಾಗಿ ನಾನು ಮಾನಸಿಕವಾಗಿ ಬಳಲಿದೆ. ನನ್ನ ವಿದ್ಯಾಭ್ಯಾಸ ಹಾಳಾಯಿತು.

“ಸುಮಾರು ಒಂದು ವರ್ಷ ಕಾಲ ಹೀಗೇ ನಡೆಯಿತು. ಒಂದು ದಿನ ಕಾಮಿನಿ ಆಂಟಿ, ಇಂದು ಕಡೆಯ ದಿನ ನನ್ನನ್ನು  ಸಂತೋಷಪಡಿಸು, ಆಮೇಲೆ ನಿನಗೆ ಬಿಡುಗಡೆ ಎಂದರು. ಅಂಕಲ್‌ಗೆ ಬೇರೆ ಊರಿಗೆ ವರ್ಗವಾಗಿದೆಯೆಂದು ನಂತರ ತಿಳಿಯಿತು.

“ವರ್ಷದಿಂದ ಅಸಹಾಯಕನಾಗಿ ತಪ್ಪು ದಾರಿಯಲ್ಲಿ ನಡೆದು ಕುಸಿದಿದ್ದೆ. ದೇವರ ದಯೆಯಿಂದ ಅಪ್ಪ ನನ್ನನ್ನು ರೆಸಿಡೆನ್ಶಿಯಲ್ ಕಾಲೇಜಿಗೆ ಸೇರಿಸಿದರು. ಪರಿಸರ ಬದಲಾವಣೆಯಿಂದ ಚೇತರಿಕೆ ಪಡೆದು ನಾನು ಮನಸ್ಸಿಟ್ಟು ಓದಿ ಮುಂದೆ ಬಂದೆ. ಆದರೆ ಭೂತಕಾಲದ ನೆರಳು ಮದುವೆಯ ನಂತರ ನನ್ನ ಬೆನ್ನು ಬಿಡಲಿಲ್ಲ. ಹೀಗಾಗಿ ನಾನು ನಿನ್ನೊಂದಿಗೆ ಸರಿಯಾಗಿ ನಡೆದುಕೊಳ್ಳಲಾಗುತ್ತಿಲ್ಲ. ನನಗೆ ಬಹಳ ನಾಚಿಕೆಯಾಗುತ್ತಿದೆ. ವಿಭಾ, ದಯವಿಟ್ಟು ನನ್ನನ್ನು ಕ್ಷಮಿಸು,”

ಮುರಳಿಯ ಮುಖ ನೋವಿನಿಂದ ನಲುಗಿತ್ತು, ಕಣ್ಣುಗಳಲ್ಲಿ ನೀರು ತುಂಬಿತ್ತು.

“ನೀವು ಏಕೆ ಕ್ಷಮೆ ಕೇಳುತ್ತೀರಿ? ತಪ್ಪು ಮಾಡಿದಳಲ್ಲ, ಆ ಹೆಂಗಸು ಕ್ಷಮೆ  ಕೇಳಬೇಕು ನಾನು ಸುಮ್ಮನೆ ಇರುವುದಿಲ್ಲ. ಅವಳಿಗೆ ಶಿಕ್ಷೆ ಮತ್ತು ನಿಮಗೆ ನ್ಯಾಯ ಕೊಡಿಸುತ್ತೇನೆ,” ವಿಭಾ ಪತಿಯ ಕಣ್ಣೀರು ಒರೆಸಿದಳು.

“ಬೇಡ ವಿಭಾ, ಆ ಹೆಂಗಸು ಬಹಳ ಕ್ರೂರಿ. ಅವಳನ್ನು ಕಂಡರೆ ನನಗೆ ಭಯವಾಗುತ್ತದೆ.”

“ನಿಮ್ಮ ಈ ಭಯವನ್ನು ಹೋಗಲಾಡಿಸಬೇಕಾಗಿದೆ,” ಎಂದ ವಿಭಾ ಮನಸ್ಸಿನಲ್ಲಿ ಒಂದು ತೀರ್ಮಾನಕ್ಕೆ ಬಂದಳು. ಮರುದಿನದಿಂದಲೇ ಕಾಮಿನಿಯ ಬಗ್ಗೆ ವಿಷಯ ಸಂಗ್ರಹಿಸಲು ತೊಡಗಿದಳು. ಆಕೆ ವಾಸಿಸುತ್ತಿದ್ದ ಮನೆಯ ಸುತ್ತಮುತ್ತಲ ಜನರಿಂದ, ಆಕೆಯ ಪತಿಗೆ ಚೆನ್ನೈಗೆ ವರ್ಗವಾಗಿತ್ತೆಂಬ ವಿಷಯ ಮಾತ್ರ ತಿಳಿಯಿತು.

ಮುರಳಿಯ ಜೀವನದಲ್ಲಿ ಹಿಂದೆ ಘಟಸಿದ್ದ ಆಘಾತಕರ ವಿಷಯವನ್ನು ವಿಭಾ ಅತ್ತೆ ಮಾವಂದಿರಿಗೆ ತಿಳಿಸಿದಳು. ಅದನ್ನು ಕೇಳಿ ಅವರು ಬೆಪ್ಪಾದರು. ಆ ಶೋಷಣೆಯ ವಿರುದ್ಧ ಕಾರ್ಯಪ್ರವೃತ್ತರಾಗಲು ಅವರೂ ಸನ್ನದ್ಧರಾದರು.

ಇದೇ ವಿಷಯದ ಗುಂಗಿನಲ್ಲಿದ್ದ ವಿಭಾಳಿಗೆ ಒಂದು ದಾರಿ ಹೊಳೆಯಿತು. ಅವಳು ಫೇಸ್‌ಬುಕ್‌ನಲ್ಲಿ ಕಾಮಿನಿ ಎಂಬ ಹೆಸರನ್ನು ಸರ್ಚ್‌ ಮಾಡಿದಳು. ಅಲ್ಲಿ ದೊರಕಿದ ನೂರಾರು ಕಾಮಿನಿಯರಲ್ಲಿ ತನಗೆ ಬೇಕಾದ ಕಾಮಿನಿಯನ್ನು ಹುಡುಕುವುದು ಸುಲಭದ ಮಾತಾಗಿರಲಿಲ್ಲ. ಆದರೆ ಅದು ಅಸಾಧ್ಯವಾದದ್ದೇನಲ್ಲ. ಪತಿಗೆ ನ್ಯಾಯ ದೊರಕಿಸಿಕೊಡಲು ವಿಭಾ ಏನು ಮಾಡಲೂ ಸಿದ್ಧಳಿದ್ದಳು.

ಕಡೆಗೆ ಅತ್ತೆ ಗುರುತಿಸಿದ ಕಾಮಿನಿಯ ಫೋಟೋವನ್ನು ದಿಟ್ಟಿಸುತ್ತಾ ವಿಭಾ ಕುಳಿತಳು. ಒಳ್ಳೆಯ ಮೈಬಣ್ಣ, ಆಕರ್ಷಕ ವ್ಯಕ್ತಿತ್ವದ ಕಾಮಿನಿ 10 ವರ್ಷದ ನಂತರವೂ ಸುಂದರ ತರುಣಿಯಂತೆ ತೋರುತ್ತಿದ್ದಳು. ಆ ಅಮಾಯಕ ಚಹರೆಯ ಹಿಂದೆ ಒಂದು ಕ್ರೂರ ಕಾಮುಕ ಮನಸ್ಸಿದೆ ಎಂದು ತಿಳಿಯುವಂತಿರಲಿಲ್ಲ.

ತಡ ಮಾಡದೆ ವಿಭಾ ಅವಳಿಗೆ ಒಂದು ಫ್ರೆಂಡ್‌ ರಿಕ್ವೆಸ್ಟ್ ಕಳುಹಿಸಿದಳು. 2-3 ದಿನಗಳ ನಂತರ ಕಾಮಿನಿ ಅದನ್ನು ಸ್ವೀಕರಿಸಿದಳು. ಕ್ರಮೇಣ ಸಂಪರ್ಕ ಹೆಚ್ಚಿಸಿಕೊಳ್ಳುತ್ತಾ ವಿಭಾ ಅವಳ ಫೋನ್‌ ನಂಬರ್‌ ಪಡೆದುಕೊಂಡಳು.

ಮುಂದಿನ ಕೆಲಸವೆಂದರೆ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡುವುದು. ಆದರೆ ದಶಕದ ಹಿಂದೆ ನಡೆದ ಅಪರಾಧಕ್ಕೆ ಯಾವುದೇ ಸಾಕ್ಷಿ ಇರಲಿಲ್ಲ. ಸಾಕ್ಷ್ಯಾಧಾರವಿಲ್ಲದೆ ಕಾನೂನಿನ ಕ್ರಮ ತೆಗೆದುಕೊಳ್ಳುವಂತಿಲ್ಲ.

ಸಾಕ್ಷಿ ಬೇಕೆಂದರೆ ಕಾಮಿನಿಯ ಬಳಿಗೆ ಹೋಗಬೇಕಾಗುವುದೆಂದು ವಿಭಾ ಯೋಚಿಸಿದಳು. ಮುರಳಿಗೆ ತಿಳಿಹೇಳಿ, ಧೈರ್ಯ ತುಂಬಿ ಅವನು ಒಮ್ಮೆ ಕಾಮಿನಿ ಆಂಟಿಯ ಬಳಿಗೆ ಹೋಗಲು ಒಪ್ಪಿಸಿದಳು.

ಮುಂದಿನ ಯೋಜನೆ ತಯಾರಿಸಿದ ವಿಭಾ, ಕಾಮಿನಿಗೆ ಫೋನ್‌ ಮಾಡಿದಳು. ಅದೂ, ಇದೂ ಎಂದು ಮಾತನಾಡುತ್ತಾ ತಾನು ಗೆಳತಿಯ ವಿವಾಹಕ್ಕಾಗಿ ಚೆನ್ನೈಗೆ ಬರಲಿರುವೆನೆಂದು ಹೇಳಿದಳು. ಕಾಮಿನಿ ಅವಳಿಗೆ ಮನೆಗೆ ಬರಲು ಆಹ್ವಾನವಿತ್ತಳು. ನಿಗದಿತ ದಿನದಂದು ವಿಭಾ ಮತ್ತು ಮುರಳಿ ಚೆನ್ನೈ ತಲುಪಿದರು. ವಿಭಾ ತಾನೊಬ್ಬಳೇ ಮುಂದಾಗಿ ಹೋಗಿ ಕಾಮಿನಿಯ ಮನೆಯ ಬೆಲ್ ಒತ್ತಿದಳು. ಬಾಗಿಲು ತೆರೆದ ಕಾಮಿನಿ ಸಹಜವಾಗಿ ಅವಳನ್ನು ಸ್ವಾಗತಿಸಿದಳು. ಕಾಮಿನಿಯನ್ನು ಮುಖತಃ ನೋಡಿದ ವಿಭಾ ಕೊಂಚ ಕಸಿವಿಸಿಗೊಂಡಳು. ಆದರೂ ಅದನ್ನು ತೋರಗೊಡದೆ ಮುಗುಳ್ನಗುತ್ತಾ ಒಳಗೆ ಪ್ರವೇಶಿಸಿದಳು. ಇಬ್ಬರೂ ಕೊಂಚ ಹೊತ್ತು ಔಪಚಾರಿಕವಾಗಿ ಮಾತನಾಡುತ್ತಾ ಕುಳಿತರು.

ಕಾಫಿ ಕುಡಿಯುತ್ತಾ ಕುಳಿತಿರುವಾಗ ಕರೆಗಂಟೆ ಸದ್ದಾಯಿತು. ಬಾಗಿಲಲ್ಲಿ ನಿಂತಿದ್ದ ಆಕರ್ಷಕ ಯುವಕನನ್ನು  ಕಂಡು ಕಾಮಿನಿ ಚಕಿತಳಾಗಿ ಯಾರೆಂದು ವಿಚಾರಿಸಿದಳು. ಅವನು ತನ್ನ ಪರಿಚಯ ತಿಳಿಸುವಷ್ಟರಲ್ಲಿ ಕಾಮಿನಿ ಅವನನ್ನು ಗುರುತಿಸಿ, “ನೀನಾ….?” ಎಂದು ಕೇಳಿದಳು.

ಅಷ್ಟು ವರ್ಷಗಳ ನಂತರ ತನ್ನನ್ನು ಗುರುತಿಸಿದ ಕಾಮಿನಿ ಆಂಟಿಯನ್ನು ವ್ಯಂಗ್ಯವಾಗಿ ಅಭಿನಂದಿಸುತ್ತಾ ಮುರಳಿ, “ನಿಮ್ಮಷ್ಟೇ ನಿಮ್ಮ ಕಣ್ಣೂ ಚುರುಕಾಗಿದೆ. ಎಷ್ಟು ಬೇಗನೆ ನನ್ನ ಗುರುತು ಹಿಡಿದಿರಿ,” ಎಂದ.

ಕಾಮಿನಿ ಏನಾದರೂ ಹೇಳುವ ಮೊದಲೇ ವಿಭಾ ವಿದಾಯ ಹೇಳಿ ಹೊರಟಳು. ವಿಭಾ ಅತ್ತ ಹೋಗುತ್ತಿದ್ದಂತೆ ಕಾಮಿನಿ ಗದರಿದಳು, “ಇಲ್ಲಿಗೇಕೆ ಬಂದಿದ್ದೀಯಾ? ಏನಾಗಬೇಕಾಗಿತ್ತು?”

“ಏನು… ವರಸೆ ಬದಲಾಗಿದೆಯಲ್ಲ. ಹಿಂದೆಲ್ಲ ನೀವೇ ಫೋನ್‌ ಮಾಡಿ ಮಾಡಿ ನನ್ನನ್ನು ಕರೆಸಿಕೊಳ್ಳುತ್ತಿದ್ದಿರಿ. ಈಗ ಪರಕೀಯನ ಹಾಗೆ ನೋಡುತ್ತಿದ್ದೀರಿ….?” ಮುರಳಿ ಜೋರಾಗಿ ಕೇಳಿದ.

“ಓಹೋ! ನನ್ನನ್ನು ಹೆದರಿಸುತ್ತಾ ಇದೀಯಾ? ಹಿಂದೆ ನಿನ್ನನ್ನು ಯಾವ ರೀತಿ ಇಟ್ಟಿದ್ದೆ ಅನ್ನುವುದು ಮರೆತುಹೋಯಿತೇನು?” ಕಾಮಿನಿ ನಿಜ ಸ್ವರೂಪ ಹೊರಬರತೊಡಗಿತು.

“ಚೆನ್ನಾಗಿ ನೆನಪಿದೆ. ಆದ್ದರಿಂದಲೇ ನಿಮ್ಮ ನೀಚತನಕ್ಕೆ ಶಿಕ್ಷೆ ಕೊಡಿಸಲು ಬಂದಿದ್ದೇನೆ,” ಮುರಳಿ ನಗುತ್ತಾ ಹೇಳಿದ.

“ನಾನು ನಿನ್ನ ಜೊತೆ ತಪ್ಪಾಗಿ ನಡೆದುಕೊಂಡಿದ್ದೇನೆ ಅನ್ನುವುದಕ್ಕೆ ನಿನ್ನ ಹತ್ತಿರ ಏನು ಸಾಕ್ಷಿ ಇದೆ? ನಾನು ಯಾರು ಅಂತ ನಿನಗೆ ಗೊತ್ತಿಲ್ಲ. ಅದಕ್ಕೇ ಇಲ್ಲಿಗೆ ಬರುವ ತಪ್ಪು ಮಾಡಿದ್ದೀಯ. ನಾನು ನಿನ್ನಂತಹ ಅದೆಷ್ಟು ಮುರಳಿಗಳನ್ನು ನನ್ನ ಬಲೆಗೆ ಬೀಳಿಸಿಕೊಂಡು ಅವರ ಕಥೆಗಳನ್ನು ಮುಗಿಸಿದ್ದೇನೋ!” ಕಾಮಿನಿ ಆವೇಶದಿಂದ ಬಡಬಡಿಸತೊಡಗಿದಳು.

“ನೀನು ಈಗಲೂ ಕೂಡ ನನಗೇನೂ ಮಾಡಲಾರೆ. ನಿನ್ನನ್ನು ಸಿಕ್ಕಿಸುವುದಕ್ಕೆ ವೀಡಿಯೊ ಮಾಡಿದ್ದೇನಲ್ಲ, ಅದು ಈಗಲೂ ನನ್ನ ಹತ್ತಿರ ಇದೆ. ನೀನು ಆಗಲೂ ನನ್ನನ್ನು ತೃಪ್ತಿಪಡಿಸುವ ಕೈಗೊಂಬೆಯಾಗಿದ್ದೆ. ಈಗಲೂ ಅದೇ ಆಗಿದ್ದಿ. ನಿನ್ನ ಬದುಕು ಚೆನ್ನಾಗಿರಬೇಕು ಅಂತಿದ್ದರೆ, ಹೊರಡು ಇಲ್ಲಿಂದ,” ಕಾಮಿನಿ ಕಿರಿಚಿದಳು.

“ಖಂಡಿತ ಹೋಗುತ್ತೇವೆ ಕಾಮಿನಿ ಆಂಟಿ. ಅದಕ್ಕೆ ಮೊದಲು ನಿಮ್ಮನ್ನು ಜೈಲು ಕಂಬಿ ಹಿಂದೆ ಕಳಿಸುತ್ತೇವೆ,” ಎನ್ನುತ್ತಾ ಒಳಗೆ ಬಂದ ವಿಭಾ, ಮುರಳಿಯ ಪಕ್ಕದಲ್ಲಿ ಅವನ ಕೈ ಹಿಡಿದು ನಿಂತಳು. ಅವಳ ಹಿಂದೆ ಮಹಿಳಾ ಪೊಲೀಸರೂ ಇದ್ದರು.

ನಾಟಕದ ರೀತಿಯಲ್ಲಿ ಇದ್ದಕ್ಕಿದ್ದಂತೆ ಜರುಗಿದ ಘಟನೆಗಳನ್ನು ಕಂಡು ಕಾಮಿನಿ ಬೆರಗಾದಳು, “ಏನಿದೆಲ್ಲ… ಯಾರು ನೀವು? ನನಗೆ ಇವರೆಲ್ಲಾ ಯಾರೂ ಗೊತ್ತಿಲ್ಲ….. ಎಲ್ಲರೂ ಹೊರಡಿ ಇಲ್ಲಿಂದ….”

“ಇಷ್ಟು ಸುಲಭವಾಗಿ ನಿಮ್ಮನ್ನು ಬಿಡುವುದಕ್ಕೆ ಸಾಧ್ಯವಿಲ್ಲ. ನಾನು ಮುರಳಿಯ ಪತ್ನಿ ವಿಭಾ. ನಿಮ್ಮ ನೀಚಕೃತ್ಯದಿಂದ ಮುಗ್ಧ ಬಾಲಕನ ಜೀವನವನ್ನು ಹಾಳು ಮಾಡಿದಿರಿ. ಈಗ ನಿಮ್ಮ ಸರದಿ. ಇನ್‌ಸ್ಪೆಕ್ಟರ್‌, ನನ್ನ ಪತಿಗೆ ಲೈಂಗಿಕ ಶೋಷಣೆ ಮಾಡಿದ ಕಾಮಿನಿ ಇವಳೇ. ಇದಕ್ಕೆ ಸಾಕ್ಷಿ ಈ ಕ್ಯಾಮೆರಾದಲ್ಲಿದೆ,” ಎನ್ನುತ್ತಾ ವಿಭಾ ಟೇಬಲ್ ಮೇಲಿದ್ದ ಹೂದಾನಿಯಿಂದ ಹಿಡೆನ್‌ ಕ್ಯಾಮೆರಾವನ್ನು ಹೊರತೆಗೆದು ಪೊಲೀಸರಿಗೆ ಒಪ್ಪಿಸಿದಳು. ಕಾಮಿನಿ ಕಾಫಿ ತರಲು ಒಳಗೆ ಹೋಗಿದ್ದಾಗ ವಿಭಾ ಕ್ಯಾಮೆರಾವನ್ನು ಅಲ್ಲಿ ಅಡಗಿಸಿಟ್ಟಿದ್ದಳು.

ತನ್ನ ನೀಚ ಕೃತ್ಯ ಬಯಲಾಗುತ್ತಿದೆಯೆಂದು ಅರ್ಥ ಮಾಡಿಕೊಂಡ ಕಾಮಿನಿ ಒಮ್ಮೆಲೇ ತನ್ನ ಶೈಲಿ ಬದಲಾಯಿಸಿ ಮುರಳಿಯ ಮುಂದೆ ನಿಂತು ಅಂಗಲಾಚಿದಳು, “ಐ ಆ್ಯಮ್ ವೆರಿ ಸಾರಿ. ನನ್ನನ್ನು ಕ್ಷಮಿಸು. ಇನ್ನು ಮುಂದೆ ಎಂದೂ ಇಂತಹ ಕೆಲಸ ಮಾಡುವುದಿಲ್ಲ. ನಿನಗೆ ಕೈ ಮುಗಿದು ಕೇಳುತ್ತೇನೆ,”

“ಹಿಂದೆ ನಾನೂ ಕೂಡ ಇದೇ ಪದಗಳಿಂದ ನಿಮ್ಮನ್ನು ಬೇಡಿಕೊಂಡಿದ್ದೆ, ಕೈ ಮುಗಿದು ಅಂಗಲಾಚಿದ್ದೆ. ಆದರೆ ನೀವು ನನ್ನ ಮೇಲೆ ದಯೆ ತೋರಿಸಲಿಲ್ಲವಲ್ಲ,” ಮುರಳಿ ತಿರಸ್ಕಾರದಿಂದ ಹೇಳುತ್ತಾ ಮುಖ ತಿರುಗಿಸಿದ.

ಪೊಲೀಸರ ವಿಚಾರಣೆಯಿಂದ ತಿಳಿದ ವಿಚಾರವೇನೆಂದರೆ, ಕಾಮಿನಿ ಆಂಟಿಯ ಪತಿಗೆ ಶಾರೀರಿಕ ಸುಖ ನೀಡುವ ಸಾಮರ್ಥ್ಯವಿರಲಿಲ್ಲ. ದೈಹಿಕ ಸುಖವನ್ನು ಪಡೆಯುವ ಚಪಲದಿಂದ ಕಾಮಿನಿ ಆಂಟಿ ಅತ್ಯಂತ ನೀಚ ಮಾರ್ಗವನ್ನು ಆರಿಸಿಕೊಂಡಿದ್ದಳು.

ಮುರಳಿಯ ಮನಸ್ಸಿನಲ್ಲಿ ಕವಿದಿದ್ದ ತಪ್ಪಿತಸ್ಥ ಭಾವನೆ ಕರಗಿತು. “ಥ್ಯಾಂಕ್ಯೂ ವೆರಿಮಚ್‌ ವಿಭಾ. ನನ್ನ ಶಾಪಗ್ರಸ್ತ ಬಾಳಿಗೆ ನೀನು ಮುಕ್ತಿ ದೊರಕಿಸಿಕೊಟ್ಟು ನನ್ನ ಆತ್ಮವಿಶ್ವಾಸವನ್ನು ಮರಳಿ ಪಡೆಯುವಂತೆ ಮಾಡಿದ್ದೀಯ,” ಎಂದು ಹೇಳುತ್ತಾ ಮುರಳಿಯ ಧ್ವನಿ ಗದ್ಗದವಾಯಿತು.

“ಇದಕ್ಕೆ ನನಗೇನು ಕೊಡುತ್ತೀರಿ?” ವಿಭಾ ತುಂಟತನದಿಂದ ಕೇಳಿದಳು.

“ಸರಿ, ಈ ದಿನ ರಾತ್ರಿ ನಿನ್ನ ಗಿಫ್ಟ್ ಪಡೆಯೋದಕ್ಕೆ ಸಿದ್ಧವಾಗಿರು.”

ಮೊದಲ ಬಾರಿಗೆ ಪತಿಯ ಮುಖದ ಮೇಲೆ ಸಹಜ ಸಂತೋಷದ ಛಾಯೆಯನ್ನು ಗುರುತಿಸಿ ವಿಭಾ ಸಂತಸದಿಂದ ಅವನ ತೋಳಲ್ಲಿ ಹುದುಗಿದಳು.

Tags:
COMMENT