ನೀಳ್ಗಥೆ – ಪದ್ಮಾ ಮೂರ್ತಿ
“ಅಮ್ಮಾ…. ಹ್ಯಾಪಿ ಮದರ್ಸ್ ಡೇ!”
“ಥ್ಯಾಂಕ್ಸ್ ಕಣಮ್ಮ.”
“ಯಾರದು ರಾಧಾ, ಫೋನ್ ಮಾಡಿದ್ದು….?” ರಾಯರು ಪೇಪರ್ ಮೇಲೆ ಕಣ್ಣಾಡಿಸುತ್ತಾ ಮಡದಿಯನ್ನು ಕೇಳಿದರು.
“ದೊಡ್ಡವಳು ಶಾಲಿನಿ ಮಾಡಿದ್ಲು.”
“ನಿನ್ನ ಮಕ್ಕಳೂ ಸರೇ ಸರೆ…. ಬೆಳಗಾಗುತ್ಲೇ ಫೋನ್ ಕೈಗೆತ್ತಿಕೊಳ್ತಾರೆ ನೋಡು…..”
“ನಿಮ್ಮ ಜೊತೆಗೂ ಬೇಕಾದಷ್ಟು ಮಾತಾಡ್ತಾರಲ್ಲ?”
“ನನಗೆ ಅಷ್ಟೊಂದು ಮಾತಾದ್ರೂ ಎಲ್ಲಿಂದ ಬರಬೇಕು?” ರಾಯರ ಪಠಣ ಮುಂದುವರಿದಿತ್ತು.
ಅಷ್ಟರಲ್ಲಿ ಫೋನ್ ಮತ್ತೆ ರಿಂಗಾಯ್ತು. ಈ ಸಲ ಮಾಡಿದ್ದವಳು ಎರಡನೇ ಮಗಳು ಮಾಧವಿ. ಅವಳು ಪ್ರತಿದಿನ ಇದೇ ಹೊತ್ತಿಗೆ ಕರೆ ಮಾಡುತ್ತಿದ್ದಳು.
ಬೆಳಗ್ಗೆ ಆಫೀಸಿಗೆ ಹೊರಡುವ ಮುಂಚೆ ಮರೆಯದೆ ಮಾಡುತ್ತಿದ್ದಳು.
“ಅಮ್ಮಾ…. ಹ್ಯಾಪಿ ಮದರ್ಸ್ ಡೇ!”
“ಥ್ಯಾಂಕ್ಸ್ ಕಣಮ್ಮ……”
ಮಾಧವಿ ನಸುನಗುತ್ತಾ ಕೇಳಿದಳು, “ಅಮ್ಮಾ, ಈ ಸಲ ಎಂಥ ಗಿಫ್ಟ್ ಬೇಕು?”
“ಅದೆಲ್ಲ ಏನೂ ಬೇಡಮ್ಮ…. ಈಗಾಗಲೇ ಸಾಕಷ್ಟು ಕೊಡಿಸಿದ್ದೀರಿ. ನೀವು ಮೂವರೂ ಒಟ್ಟಿಗೆ ಬಂದು 2-3 ದಿನಗಳ ಮಟ್ಟಿಗಾದರೂ ನಮ್ಮ ಜೊತೆ ಇದ್ದರೆ, ಮನೆ ಕಳೆಗಟ್ಟುತ್ತದೆ.”
“ಅಯ್ಯೋ ಹೋಗಮ್ಮ…. ಹೋದ ವರ್ಷ ತಾನೇ ಬಂದಿದ್ನಲ್ಲ ನಾನು…..”
“ಹೋಗೇ, ಮಹಾ ಬಂದುಬಿಟ್ಟೆ. ಹಿಂದಿನ ದಿನ ಬಂದವಳು ಮಾರನೇ ಬೆಳಗ್ಗೆ ಹೊರಟೇಬಿಟ್ಟೆ.”
“ಸರಿ ಕಣಮ್ಮ….. ನಾವೆಲ್ಲ ಒಟ್ಟಿಗೆ ಬರೋ ತರಹ ಪ್ಲಾನ್ ಮಾಡಿ ಬರ್ತೀವಿ.”
ಮಾರನೇ ದಿನ ಸಂಜೆ 7 ಗಂಟೆ ಆಗಿತ್ತು. ರಾಧಮ್ಮ ಪತಿ ಕೃಷ್ಣರಾವ್ ಜೊತೆ ಕುಳಿತು ಟೀ ಕುಡಿಯುತ್ತಾ ಟಿವಿ ಧಾರಾವಾಹಿ ನೋಡುತ್ತಿದ್ದರು. ಅಷ್ಟರಲ್ಲಿ ಬೆಲ್ ಆಯ್ತು. ರಾಧಮ್ಮ ಪತಿಗೆ ಹೇಳಿದರು, “ಬಹುಶಃ ಹಾಲಿನವನು 9 ಗಂಟೆ ಬದಲು ಇವತ್ತು ಬೇಗ ಬಂದಿರಬೇಕು.”
“ಮಾರಾಯ್ತಿ….. ಹೋಗಿ ಬಾಗಿಲು ತೆಗೀತಿಯೋ, ಹೀಗೆ ಮಾನಾಡುತ್ತಾ ಕೂತಿರ್ತಿಯೋ….”
“ಅದೇನು… ಬಾಗಿಲು ತೆಗೆಯೋ ಕಾಂಟ್ರಾಕ್ಟ್ ನನಗೊಬ್ಬಳಿಗೆ ಅಲಾಟ್ ಆಗಿದೆಯೋ… ಪೇಪರ್, ಟಿವಿ ಮಾತ್ರ ನಿಮ್ಮದೋ…”
ಮಾತನಾಡುತ್ತಲೇ ಆಕೆ ಹೋಗಿ ಬಾಗಿಲು ತೆರೆದರೇ ಅವಾಕ್ಕಾದರು…. ಎದುರಿಗೆ ಕಿರಿ ಮಗಳು ದಿವ್ಯಾ ಲಗೇಜ್ ಸಮೇತ ನಿಂತಿದ್ದಳು. ಅಮ್ಮನನ್ನು ಬಾಗಿಲಲ್ಲೇ ಅಪ್ಪಿಕೊಳ್ಳುತ್ತಾ ದಿವ್ಯಾ ಮುದ್ದಾಗಿ ಉಲಿದಳು, “ಹ್ಯಾಪಿ ಮದರ್ಸ್ ಡೇ ಮಾಮ್!”
“ಇದೇನೇ ನೀನು…. ಮೊದಲೇ ಹೇಳಿದ್ರೆ ಅಪ್ಪಾಜಿನಾ ರೈಲ್ವೆ ಸ್ವೇಷನ್‌ಗೆ ಕಳುಹಿಸುತ್ತಿದ್ದೆ…..”
“ಏನೂ ತೊಂದರೆ ಇಲ್ಲ ಬಿಡಮ್ಮ…. ನಾನು ಕ್ಯಾಬ್ ಮಾಡಿಕೊಂಡೇ ಬಂದಿದ್ದೀನಿ.”
“ಅದು ಸರಿ, ಎಲ್ಲೇ ಅಳಿಯಂದ್ರು ಆನಂದ್…. ಮತ್ತೆ ನಿನ್ನ ಮಗ ಗೋಪೀನೂ ಇಲ್ಲ…..”
“ಅಮ್ಮಾ…. ನಾನು ಈ ಸಲ ಒಬ್ಬಳೇ ಬಂದಿದ್ದೀನಿ. ಗೋಪಿ ಸಮ್ಮರ್ ಕ್ಯಾಂಪ್ ಸೇರಿದ್ದಾನೆ. ಆನಂದ್ ದೆಹಲಿ ಕಡೆ ಆಫೀಸ್ ಟೂರ್.”
ಕಿರಿ ಮಗಳ ದನಿ ಕಿವಿಗೆ ಬೀಳುತ್ತಿದ್ದಂತೆ….. ರಾಯರು ಎದ್ದು ಮುಂಬಾಗಿಲಿಗೆ ಬಂದರು. ಮಗಳನ್ನು ಎದೆಗೆ ಆನಿಸಿಕೊಳ್ಳುತ್ತಾ, “ಒಳಗಡೆ ಕೂತು ಮಾತನಾಡೋಣ ನಡೆಯಮ್ಮ….. ನಿಮ್ಮಮ್ಮನಿಗಂತೂ ಬಾಗಿಲಲ್ಲೇ ಮಾತು ಮುಗಿಯಲ್ಲ.”
ಅವರು ಒಳಗೆ ಹೆಜ್ಜೆ ಇಟ್ಟು 1 ನಿಮಿಷ ಆಗುಷ್ಟರಲ್ಲೇ, “ಅಪ್ಪಾಜಿ….. ನಾವೂ ಬಂದಿದ್ದೇವೆ!” ಎಂಬ ದನಿ ಕೇಳಿಸಿತು. ರಾಯರು ಮತ್ತೆ ಹೊರಗೋಡಿ ಬಂದು ನೋಡಿದಾಗ ಹಿರಿಯ ಮಕ್ಕಳಾದ ಶಾಲಿನಿ, ಮಾಧವಿ ಸಹ ಲಗೇಜ್ ಹಿಡಿದು ಬರುತ್ತಿರುವುದು ಕಾಣಿಸಿತು. ಒಟ್ಟೊಟ್ಟಿಗೆ ಮೂವರು ವಿವಾಹಿತ ಹೆಣ್ಣುಮಕ್ಕಳೂ ಬಿಡುವಾಗಿ ತವರಿಗೆ ಬಂದಿದ್ದು ಹೆತ್ತವರಿಗೆ ಅಪಾರ ಸಂತಸ ನೀಡಿತ್ತು. ಮನೆಯಲ್ಲಿ ಎಲ್ಲೆಲ್ಲೂ ನಗು ಹರಡಿತು. ರಾತ್ರಿಗೆ ಅಡುಗೆ ಸಾಕಾಗುತ್ತದೋ… ಬೇರೇನಾದರೂ ಮಾಡಬೇಕೋ ಎಂದು ರಾಧಮ್ಮ ಅಡುಗೆಮನೆ ಕಡೆ ಓಡಿದರು. ಖುಷಿಯಿಂದ ಅವರ ಕಣ್ಣು ಮಂಜಾಗಿತ್ತು. ಆಗ ಮಾಧವಿ ಹೇಳಿದಳು, “ಅಮ್ಮಾ, ಏನೂ ಯೋಚನೆ ಮಾಡಬೇಡ….. ಮೂವರೂ ಒಟ್ಟಿಗೆ ಬನ್ನಿ ಅಂತ ನೀನು ಹೇಳ್ತಿದ್ದೆಯಲ್ಲ…. ನಿನ್ನೆ ಸಂಜೆ ಮಾತನಾಡಿಕೊಂಡು ಮೂವರೂ ಹೀಗೆ ದಿಢೀರ್ ಅಂತ ಬಂದೇಬಿಟ್ಟೆವು…..”
“ಸರಿ, ಬೇಗ ಕಾಲು ತೊಳೆದುಕೊಳ್ಳಿ. ಒಂದಿಷ್ಟು ದಿಢೀರ್ ದೋಸೆ ಹಿಟ್ಟು ಕಲಸಿ, ಎಲ್ಲರಿಗೂ 2-2 ದೋಸೆ ಹಾಕಿಕೊಡ್ತೀನಿ. ಆಮೇಲೆ ನಿಧಾನವಾಗಿ 10 ಗಂಟೆ ಮೇಲೆ ಊಟ ಮಾಡಿದರಾಯಿತು. ಮಧ್ಯಾಹ್ನ ಯಾವಾಗ ತಿಂದಿದ್ದಿರೋ ಏನೋ…..” ತಾಯಿ ಹೃದಯಕ್ಕೆ ಮಕ್ಕಳ್ಳದ್ದೇ ಚಿಂತೆ.
“ಅಮ್ಮ, ಅದೆಲ್ಲ ಏನೂ ಬೇಡ. ಬೇಗ ನಿನ್ನ ಕೈಯಾರೆ ಸ್ಟ್ರಾಂಗ್ ಪರ್ಕ್ಯುಲೇಟರ್ ಕಾಫಿ ಮಾಡಿಬಿಡು ಸಾಕು. ನಾವು ಬರುವಾಗ ಸ್ಟೇಷನ್ ಹತ್ತಿರದ ಬೇಕರಿಯಿಂದ ದಂರೋಟು, ಪಫ್ ಅಂತ ಪ್ಯಾಕ್ ಮಾಡಿಸಿಕೊಂಡೇ ಬಂದಿದ್ದೀವಿ….” ಹಿರೀ ಮಗಳು ಶಾಲಿನಿ ಅಮ್ಮನನ್ನು ಹಿಂದಿನಿಂದ ತಬ್ಬುತ್ತಾ ಹೇಳಿದಳು.
“ಸರಿ, ನಡೀರೇ…. ಅಪ್ಪಾಜಿ ಜೊತೆ ಮಾತನಾಡ್ತಾ ಇರಿ. ಇದೋ 5 ನಿಮಿಷದಲ್ಲಿ ಎಲ್ಲರಿಗೂ ಬಿಸಿ ಬಸಿ ಕಾಫಿ ತರ್ತೀನಿ.”
“ರಾಧಾ…. ಯಾರೋ ಬಂದ ಹಾಗಿದೆಯಲ್ಲಾ? ಯಾರೇ ಅದೂ?” ಒಳಗಿನಿಂದ ತುಸು ಕ್ಷೀಣದನಿ ಕೇಳಿಸಿತು.
ದಿವ್ಯಾ ಕೇಳಿದಳು, “ಓ ದೊಡ್ಡಮ್ಮ ಬಂದಿದ್ದಾರಾ?”
“ನೀನು ಹೇಳಲೇ ಇಲ್ಲವಲ್ಲಮ್ಮ….” ಮಾಧವಿ ಕೇಳಿದಳು.
“ಏನು ಮಾಡಲಿ…. ನಿಮಗೆಲ್ಲ ಹೇಳಿದರೆ ಸುಮ್ಮಸುಮ್ಮನೇ ಕೋಪ ಮಾಡಿಕೊಳ್ತೀರಿ. ಅದಕ್ಕೆ ಯಾರಿಗೂ ಹೇಳಲಿಲ್ಲ…..
“ನಿಮಗೆ ಗೊತ್ತಿರುವಂತೆ ಇಲ್ಲಿ ದೊಡ್ಡಪ್ಪ ಹೋದ ಮೇಲೆ ಗಂಡು ಮಕ್ಕಳಿಬ್ಬರೂ ತುದಿಗಾಲಲ್ಲಿ ನಿಂತು ಮನೆ ಮಾರಿಸಿದರು. ಹಿರಿ ಮಗ ಭರತ್ ಮದ್ರಾಸ್‌ನಲ್ಲಿ, ಕಿರಿ ಮಗ ಲಕ್ಷ್ಮಣ್ ಹೈದರಾಬಾದ್‌ನಲ್ಲಿ ತಮ್ಮದೇ ಸ್ವಂತ ಮನೆ ಹೊಂದಿದ್ದಾರೆ. ಅಮ್ಮನ್ನ ಹಿರಿಯನ ಮನೇಲಿ 2 ತಿಂಗಳು, ಕಿರಿಯನ ಮನೇಲಿ 2 ತಿಂಗಳು ಇರಿಸಿಕೊಳ್ಳೋದು ಅಂತ ಲೆಕ್ಕ ಹಾಕಿ ಇಲ್ಲಿಂದ ಕರೆದುಕೊಂಡು ಹೋದರು.
“ಭರತ್ ಹಾಗೂ ಹಿರಿ ಸೊಸೆ ಭವಾನಿ ಇಬ್ಬರೂ ದೊಡ್ಡ ಕೆಲಸದಲ್ಲಿದ್ದಾರೆ. ಬೆಳಗ್ಗೆ 8 ಗಂಟೆಗೆ ಮನೆ ಬಿಟ್ಟರೆ ರಾತ್ರಿ 9 ಗಂಟೆಗೆ ಬರ್ತಾರೆ. ಇಡೀ ದಿನ ಪಾಪ, ಗಿರಿಜಕ್ಕಾ ಒಬ್ಬರೇ ಮನೆಯಲ್ಲಿರಬೇಕು. ಭಾಷೆ ಅರಿಯದ ಊರು, ಅಪಾರ್ಟ್‌ಮೆಂಟ್‌ನಲ್ಲಿ ಎಲ್ಲರ ಫ್ಲಾಟ್‌ಗಳೂ ಸದಾ ಬಡಿದಿರುತ್ತವೆ. ಯಾರದೂ ಮಾತಿಲ್ಲ, ಕಥೆಯಿಲ್ಲ.
“ಬೆಳಗ್ಗೆ ಅಡುಗೆಯವನು ಬಂದು 3 ಹೊತ್ತಿಗೂ ಆಗುವಂತೆ ತಿಂಡಿ-ಊಟ ರೆಡಿ ಮಾಡಿ ಹೋಗಿಬಿಡ್ತಾನೆ ನಂತರ ನಿಧಾನವಾಗಿ 10 ಗಂಟೆಗೆ ತಿಂಡಿ ತಿಂದು ಮಧ್ಯಾಹ್ನ 3 ಗಂಟೆಗೆ ಊಟ, ರಾತ್ರಿ ಮಗ ಸೊಸೆ ಬರೋದೇ 9 ಗಂಟೆಗೆ. ಅವರು ಟೀ ಕುಡಿದು ಸುಧಾರಿಸಿಕೊಳ್ಳುವಷ್ಟರಲ್ಲಿ 10 ಗಂಟೆ. ಊಟ ಮುಗಿಸುವಷ್ಟರಲ್ಲಿ 11 ಗಂಟೆ. ಮಾರನೇ ದಿನ ಯಥಾಪ್ರಕಾರ……
“ಒಂಟಿಯಾಗಿ ಇದ್ದೂ ಇದ್ದೂ ಅಕ್ಕಂಗೇ ಸಾಕಾಗಿದೆ. ಶನಿವಾರ, ಭಾನುವಾರ ಮಗ-ಸೊಸೆ ಔಟಿಂಗ್, ಪಾರ್ಟಿ ಅಂತ ಹೊರಟರೆ ಅಕ್ಕಾ ಅವರ ಸಮಕ್ಕೆ ಆ ಭಾಷೆ ಗೊತ್ತಿಲ್ಲದ ಹೊರಗಿನವರ ಜೊತೆ ಹೇಗೆ ಏಗೋದು?
“ಅಲ್ಲಿಂದ ಕಿರಿಯ ಮಗ ಲಕ್ಷ್ಮಣನ ಮನೆಗೆ ಬಂದರೆ ಅವನ ಹೆಂಡತಿ ಗಾಯತ್ರಿ ಮಹಾ ಗಯ್ಯಾಳಿ. ಅಕ್ಕಾ ಬಂದ ತಕ್ಷಣ ಕೆಲಸದವಳನ್ನು ಓಡಿಸಿದಳು. ಬೆಳಗಾಗಿ ಎದ್ದು ಕಾಫಿ ಡಿಕಾಕ್ಷನ್ ಹಾಕುವುದರಿಂದ ರಾತ್ರಿ ಹಾಲು ಹೆಪ್ಪು ಹಾಕೋವರೆಗೂ ಅಕ್ಕಂದೇ ಕೆಲಸ… ಟಿವಿ ನೋಡುತ್ತಾ ಹಾಲಲ್ಲಿ ಕುಳಿತು ಇದು ಮಾಡಿ, ಅದು ಮಾಡಿ ಅಂತ ಆರ್ಡರ್ ಮಾಡೋದೇ ಅವಳ ಕೆಲಸ. ಮಕ್ಕಳನ್ನು ಶಾಲೆಗೆ ಬಿಡುವುದು, ಕರೆ ತರುವುದು, ಹೋಂವರ್ಕ್ ಮಾಡಿಸೋದೇ ಅವಳ ಕೆಲಸ.
“ಲಕ್ಷ್ಮಣ್ ಅಂತೂ ಎಂದೂ ಹೆಂಡತಿ ಮುಂದೆ ಬಾಯಿ ಬಿಡಲಾರ. ಅವನಿಗಿಂತ ಹೆಚ್ಚು ಓದಿದ್ದಾಳೆ, ಅಪ್ಪನ ಕಡೆಯಿಂದ ಭಾರಿ ಸಪೋರ್ಟು. ಹೀಗಾಗಿ ಬಹಳ ಜೋರುಬಾಯಿ. ಲಕ್ಷ್ಮಣ ಅವಳ ಮುಂದೆ ಮೂಕ ಬಸವನಾಗಿ ಇದ್ದುಬಿಡ್ತಾನೆ. ಅಕ್ಕಾ, ಪಾಪ ಒಂದೇ ಸಮ ದುಡಿದೂ ದುಡಿದೂ ಹೈರಾಣಾಗಿ, ಬಚ್ಚಲಲ್ಲಿ ಜಾರಿ ಬಿದ್ದು ಕಾಲಿನ ಮೂಳೆ ಮುರಿದುಕೊಂಡರು.
“ಇನ್ನು ಅವರ ಆರೈಕೆ ಮಾಡುವವರಾರು? ಮಗರಾಯ ಫ್ರಾಕ್ಚರ್ ಹಾಕಿಸಿಕೊಂಡು ಬಂದಿದ್ದೇ ಹೆಚ್ಚು. ಕೊನೆಗೆ ಅಕ್ಕಾ ಇಲ್ಲಿಗೆ ಫೋನ್ ಮಾಡಿ, `ಕೃಷ್ಣ…. ಬೇಗ ಬಂದು ಬಿಡಪ್ಪ. ನಾನಿಲ್ಲಿ ಬಾಳಲಾರೆ, ಸಾಯಲಿಕ್ಕೂ ಮನಸ್ಸಿಲ್ಲ. ನಮ್ಮತ್ತೆ ಬಾಳಿ ಬದುಕಿದ ಮನೆಯಲ್ಲೇ ನಿಮ್ಮೆಲ್ಲರ ಜೊತೆ ಇದ್ದುಬಿಡುತ್ತೇನೆ,’ ಎಂದು ಬಹಳ ಅತ್ತುಬಿಟ್ಟರು. ಇವರು ತಕ್ಷಣ ಮೈಸೂರಿನಿಂದ ಹೈದರಾಬಾದಿಗೆ ಹೊರಟು, ಟ್ಯಾಕ್ಸಿಯಲ್ಲಿ ಅವರನ್ನು ಕರೆತಂದರು. ಕಳೆದ 2 ತಿಂಗಳಿನಿಂದ ಇಲ್ಲೇ ಇದ್ದಾರೆ…..” ಎಂದು ಸುದೀರ್ಘವಾಗಿ ವಿವರಿಸಿದರು ರಾಧಮ್ಮ.
ದೊಡ್ಡಮ್ಮನ ವಿಷಯ ಕೇಳಿ ಭಾವುಕಳಾದ ಹಿರಿ ಮಗಳು ಶಾಲಿನಿ ಅವರಿದ್ದಲ್ಲಿಗೆ ಹೋಗಿ, ಅವರ ಕೈ ಹಿಡಿದುಕೊಂಡು ಬೆನ್ನು ಸವರುತ್ತಾ ಭಾವಪರವಶಳಾದಳು. ಮಾಧವಿ ಹೇಳತೊಡಗಿದಳು, “ಭರತ್ ಹಿಂದೆ ಹೀಗಿರಲಿಲ್ಲವಲ್ಲ… ಲಕ್ಷ್ಮಣನಿಗಿಂತ ಅಮ್ಮನೆಂದರೆ ಬಹಳ ಒದ್ದುಕೊಳ್ಳುತ್ತಿದ್ದ. ಲಕ್ಷ್ಮಣ ಬಿಡು, ಮೊದಲಿನಿಂದಲೂ ಅವನು ಹೀಗೇನೇ….”
ರಾಧಮ್ಮ ಬಿಸಿ ಬಿಸಿ ಕಾಫಿ ಸಿದ್ಧಪಡಿಸಿ, ತಟ್ಟೆಯಲ್ಲಿ ಜೋಡಿಸಿಕೊಂಡು ಅಕ್ಕಾ ಮಲಗಿದ್ದ ಕೋಣೆಗೆ ಬಂದರು. ಅಷ್ಟರಲ್ಲಿ ಮಾಧವಿ ಎಲ್ಲರಿಗೂ ದಂರೋಟು, ಪಫ್ ಹಂಚಿದಳು. ಗಿರಿಜಮ್ಮ ಬಿಕ್ಕಿ ಬಿಕ್ಕಿ ಅಳುತ್ತಾ ಮಕ್ಕಳನ್ನು ಅಕ್ಕರೆಯಿಂದ ವಿಚಾರಿಸಿಕೊಂಡರು, “ಹೆಣ್ಣುಮಕ್ಕಳ ಕರುಳು ದೊಡ್ಡದು ಅಂತ ಇದಕ್ಕೆ ಹೇಳೋದು ಕಣಮ್ಮ…. ಅಮ್ಮ ಅಪ್ಪನ ಕುರಿತು ಎಷ್ಟು ಕಾಳಜಿ ಕಳಕಳಿ… ನನಗೂ ಇವೆ ಎರಡು ಕೊಂಟೆ ಕೋಣಗಳು!
“ನಿಮ್ಮಮ್ಮ ಈ ಮನೆಗೆ ಸೊಸೆಯಾಗಿ ಬಂದಾಗಿನಿಂದ ಅತ್ತೆಗೆ ಚಾಡಿಹೇಳುತ್ತಾ ಅವಳನ್ನು ಹುರಿದ್ದು ಮುಕ್ಕಿದ್ದೇ ಬಂತು. ಈಗ ಮಹಾತಾಯಿ, ಅವಳ ಆಶ್ರಯ ಕೋರಿ ಬಂದಿದ್ದೇನೆ, ಹೆತ್ತಮ್ಮನಂತೆ ನನ್ನನ್ನು ಸಲಹುತ್ತಿದ್ದಾಳಮ್ಮ. ಅವಳ ಪುಣ್ಯ ಮುಂದೆ ಮಕ್ಕಳನ್ನು ಕಾಯುತ್ತದೆ…..” ಎಂದು ಕಣ್ಣಿಗೆ ಸೆರಗು ಒತ್ತಿದರು.
“ಅಕ್ಕಾ…. ಈಗ ಹಳೆಯದೆಲ್ಲ ಬೇಡ. ನೋಡಿ, ಮಕ್ಕಳೆಲ್ಲ ನಿಮ್ಮನ್ನು ವಿಚಾರಿಸಲೆಂದು ಬಂದಿದ್ದಾರೆ. ಇನ್ನು ಖುಷಿಯಾಗಿ ನಗುತ್ತಾ ಇರೋಣ….”
“ಏನ್ರಮ್ಮ….. ರಾತ್ರಿ ಏನಡುಗೆ ಮಾಡಲಿ?” ಎಂದು ಬೇಕೆಂದೇ ವಿಷಯ ಬದಲಾಯಿಸಿದರು.
“ಸಿಂಪಲ್ಲಾಗಿ ಅನ್ನ, ತಿಳಿ ಸಾರು ಮಾಡಮ್ಮ…. ರಾತ್ರಿ ಹೆವಿ ಏನೂ ಬೇಡ,” ಮಾಧವಿ ಹೇಳಿದಳು.
“ರಾಧಾ, ಬೆಳಗ್ಗೆ ತಗೊಂಡ ಆ ಅರಿವೆ ಸೊಪ್ಪು ಈ ಕಡೆ ಕೊಡು, ಬೇಗ ಬಿಡಿಸಿಕೊಡ್ತೀನಿ. ಪಲ್ಯ ಮಾಡುವೆಯಂತೆ. ಅಷ್ಟರಲ್ಲಿ ಕುಕ್ಕರ್ ಜೋಡಿಸಿಡು…..” ಎಂದು ಗಿರಿಜಮ್ಮ ಹೇಳಿದಾಗ, ರಾಧಮ್ಮ ಒಳಗಿನಿಂದ ಸೊಪ್ಪು ತಂದು ಅವರ ಮುಂದೆ ಟೀಪಾಯಿ ಮೇಲಿಟ್ಟರು.
“ದೊಡ್ಡಮ್ಮ, ನಾನು ಮಾಡ್ತೀನಿ. ನೀವು ಮಲಗಿ,” ಎಂದು ಶಾಲಿನಿ ತಡೆದಳು.
“ಬಿಡೆ ತಾಯಿ…. ಮಲಗಿ ಮಲಗಿ ಈ ಜೀವ ಜಡ್ಡು ಹಿಡಿದಿದೆ. ಒಂದಿಷ್ಟು ಕೈಕಾಲಾಡಿಸಿದರೆ ಸಮಾಧಾನ. ನಿಮ್ಮಮ್ಮ ಮಾಡಿದ ಸೇವೆಗೆ ಈಗ ವಾಕರ್ ಹಿಡಿದು ಮನೆಯೆಲ್ಲ ಓಡಾಡುವಂತೆ ಆಗಿದ್ದೇನೆ,” ಎಂದು ಹೆಮ್ಮೆಯಿಂದ ರಾಧಮ್ಮನನ್ನು ಕೊಂಡಾಡಿದರು.
ಮಾಧವಿ ಅಪ್ಪಾಜಿ ಜೊತೆ ರಾಜಕೀಯ ಹರಟುತ್ತಿದ್ದಳು. ತಂದೆ-ಮಗಳಿಗೆ ಆ ವಿಷಯ ಅಚ್ಚುಮೆಚ್ಚು. ತಂದೆ ಜೊತೆ ಚದುರಂಗ ಆಡುತ್ತಿದ್ದವಳೆಂದರೆ ಅವಳೊಬ್ಬಳೆ.
ರಾಧಮ್ಮ ಕುಕ್ಕರ್ ಜೋಡಿಸುತ್ತಿದ್ದರು. ಕಿರಿ ಮಗಳು ದಿವ್ಯಾ ಅಕ್ಕ ಶಾಲಿನಿಯನ್ನು ದೊಡ್ಡಮ್ಮನ ಬಳಿ ಬಿಟ್ಟು ತಾನು ಅಮ್ಮನ ಬಳಿ ಬಂದಳು. ಚಿಕ್ಕಂದಿನಿಂದಲೂ ಅವಳು ಮಹಾ ಕೋಪಿಷ್ಟೆ, ಖಂಡಿತವಾದಿ. ಅವಳಿಗೆ ದೊಡ್ಡಮ್ಮನ ಆಗಮನ ಖಂಡಿತಾ ಇಷ್ಟವಿರಲಿಲ್ಲ.
“ಈ ದೊಡ್ಡಮ್ಮನಿಗೆ ಹೀಗೆ ಆಗಬೇಕಾದ್ದೇ ಬಿಡು. ಅರಮನೆಗೆ ಹತ್ತಿರ ಇವರ ಮನೆ ಏರಿಯಾ ಅಂತ ಮೈಸೂರಿಗೆ ಮಹಾರಾಣಿ ತರಹ ಆಡ್ತಿದ್ದರು. ನಮ್ಮ ಈ ಬೋಗಾದಿ ಮನೆಗೆ ಬಂದರೆ ಹಳೆ ಕಾಲದ ಮನೆ ಅಂತ ಏನೋ ನಿರ್ಲಕ್ಷ್ಯ. ಮಾತು ಮಾತಿಗೂ ತನ್ನ ದೊಡ್ಡಸ್ತಿಕೆ ತೋರಿಸಿಕೊಳ್ಳುವುದೇ ಆಗಿತ್ತು. ಒಂದು ಕಾಲಕ್ಕೂ ಅಜ್ಜಿ, ತಾತನ್ನ ತನ್ನ ಮನೆಯಲ್ಲಿ ಇಟ್ಟುಕೊಳ್ಳಲಿಲ್ಲ.
“ಸದಾ ಹೆಣ್ಣು ಹೆತ್ತವಳು ಅಂತ ನಿನ್ನನ್ನು ಹಂಗಿಸುತ್ತಿದ್ದುದಲ್ಲದೆ, ನಮ್ಮ ಮೂವರನ್ನು ಕಾಲ ಕಸದಂತೆ ಧಿಕ್ಕರಿಸುತ್ತಿದ್ದಳು. ಶಾಲಿನಿ ಓದಿನಲ್ಲಿ ಮಂದ, ಮಾಧವಿ ಮಹಾ ಕಪ್ಪು, ನಾನು ಸದಾ ಮಾಡಲ್ ಅಂತ ಬಾಯಿ ತುಂಬಾ ಅಂದು ಆಡಿದ್ದೇ ಹೆಚ್ಚು….. ಲೋಕಕ್ಕಿಲ್ಲದ ಗಂಡು ಮಕ್ಕಳನ್ನು ಹೆತ್ತಿದ್ದೇನೆ ಅಂತ ಮಹಾ ಗರ್ವ. ಅಪ್ಪಿತಪ್ಪಿ ಅವರು ನಮ್ಮೊಂದಿಗೆ ಆಟ ಆಡಿದರೆ, ಸಹಜವಾಗಿ ಸಂತೋಷವಾಗಿದ್ದರೆ ಏನೋ ಸಿಡುಕುತನ ತೋರಿಸಿ, ಅವರನ್ನು ಅಲ್ಲಿಂದ ಬೇರೆ ಕಡೆ ಹೊರಡಿಸುತ್ತಿದ್ದಳು.“
“ಹೋಗಲಿ ಬಿಡೆ, ಹಳೆಯದಲ್ಲ ಈಗ ಯಾಕೆ? ಈಗ ಅವರ ಕೈಲಿ ಏನೂ ಆಗೋಲ್ಲ… ನಾವು ಯಾಕೆ ಸೇಡಿನ ಮಾತನಾಡಬೇಕು?” ರಾಧಮ್ಮ ಸಮಾಧಾನವಾಗಿ ಹೇಳುತ್ತಾ ಅಡುಗೆ ಮುಂದುವರಿಸಿದರು.
ಅಮ್ಮನ ಸಹನೆ ಸಹಿಸದೆ ಅವಳು ಅಪ್ಪನ ಬಳಿ ಬಂದಳು, “ಅಪ್ಪಾಜಿ, ನಿಮ್ಮದೂ ಅತಿ ಆಯ್ತು. ದೊಡ್ಡಮ್ಮನ್ನ ಇಲ್ಲಿಗೇ ಕರೆತರುವ ಅಗತ್ಯ ಏನಿತ್ತು? ನೀವಿಬ್ಬರು ಮಾತ್ರ ವಯಸ್ಸಾದವರಲ್ಲವೇ? ಅಮ್ಮನಿಗೆ ಈ ಕಾಲಕ್ಕೆ ಮತ್ತೊಂದು ಕಷ್ಟ ತಂದಿಟ್ಟಿರಿ….”
ಒಳಗಿನಿಂದ ಓಡಿ ಬಂದ ರಾಧಮ್ಮ ಮಗಳ ಬಾಯಿಗೆ ಕೈ ಹಿಡಿಯುತ್ತಾ, “ಸುಮ್ನಿರೆ ಮಹಾತಾಯಿ…. ಮೆಲ್ಲಗೆ ಮಾತನಾಡು. ಒಳಗೆ ಅಕ್ಕಾ ಕೇಳಿಸಿಕೊಂಡರೆ ಎಷ್ಟು ಬೇಜಾರು ಮಾಡಿಕೊಳ್ತಾರೋ ಏನೋ…..”
“ನೀನು ಬಿಡಮ್ಮ, ಸದಾ ನಮ್ಮ ಬಾಯಿ ಬಡಿಯೋದೆ ಆಯ್ತು. ಅಂದು, ಆಡಿಕೊಂಡವರನ್ನೇ ಈಗ ಆದರಿಸೋ ಕರ್ಮ ನಮಗೆ…..”
ಅಷ್ಟರಲ್ಲಿ ಶಾಲಿನಿ ಹಾಲ್‌ಗೆ ಬಂದಿದ್ದಳು. “ಅಪ್ಪನ ಕೈ ಹಿಡಿದು ದೊಡ್ಡಮ್ಮ ಅಳುತ್ತಿದ್ದರೆ ಅವರನ್ನು ನಿರ್ದಯವಾಗಿ ಅಲ್ಲೇ ಬಿಟ್ಟು ಬರಲಿಕ್ಕಾಗುತ್ತೇನೇ? ಇದರಲ್ಲಿ ಅಪ್ಪಾಜಿ ತಪ್ಪೇನೂ ಇಲ್ಲ.”
“ಬಿಡ್ರಮ್ಮ……. ನೀವೆಲ್ಲ ಮಹಾ ಸಹನಾಮೂರ್ತಿಗಳು ಎಲ್ಲವನ್ನೂ ಮರೆತುಬಿಟ್ಟಿದ್ದೀರಿ. ಈ ದೊಡ್ಡಮ್ಮನ ಒಂದೊಂದು ಕಟು ಮಾತೂ ನನಗಿನ್ನೂ ನೆನಪಿದೆ. ಒಮ್ಮೆ ನಿನ್ನ ಪ್ರಾಜೆಕ್ಟ್ ಪೇಪರ್ಸ್ ಪೂರ್ತಿ ಭರತ್ ನೀರಿಗೆ ಬೀಳಿಸಿದ್ದ…. ನೀನು ಅರ್ಧ ಗಂಟೆ ಬಿಕ್ಕಳಿಸಿ ಅಳುತ್ತಿದ್ದೆ. ಮಗನಿಗೆ ಏನೂ ಹೇಳದ ಈ ದೊಡ್ಡಮ್ಮ, `ಏನೋ ಕೈತಪ್ಪಿ ಬಿದ್ದು ಬಿಡ್ತಪ್ಪ, ಏನು ಮಾಡ್ಲಿಕ್ಕಾಗುತ್ತೆ? ನಾಳೆ ಪೂರ್ತಿ ಭಾನುವಾರ. ಇನ್ನೊಂದು ಸಲ ನೀನು ಬರೆದರೆ ಆಯ್ತು. ಅದಕ್ಯಾಕೆ ಸೂತಕದ ಮನೆ ತರಹ ಆಗಿನಿಂದ ಅಳ್ತಾ ಇದ್ದೀಯಾ…..’ ಅಂತ ನಿನ್ನನ್ನೇ ಬೈದಿರಲಿಲ್ಲವೇ?”
“ಆಗಿದ್ದಾಯ್ತು ಬಿಡೆ. ಅವರು ನಮ್ಮನ್ನು ಆಡಿಕೊಂಡಷ್ಟೂ ನಾವು ಓದಿನಲ್ಲಿ ಚುರುಕಾಗಿ ಒಳ್ಳೆ ಕಡೆ ಕೆಲಸಕ್ಕೆ ಸೇರಿ ಸೆಟಲ್ ಆದೆವು. ಹಳೆಯದನ್ನು ಕೆದಕಿ ಏನು ಲಾಭ?” ಎಂದಳು ಶಾಲಿನಿ.
ಮಾತು ಬದಾಯಿಸಲು ಮಾಧವಿ ಮಧ್ಯೆ ನುಡಿದಳು, “ಅಮ್ಮ, ಏನಡುಗೆ? ನಾನೇನಾದ್ರೂ ಹೆಚ್ಚಿಕೊಡ್ಲಾ?”
“ಬೇಡ ಬಿಡೆ….. ಯಾವತ್ತೋ ಬಂದಿದ್ದೀರಿ. ಎಲ್ಲರೂ ಹಾಯಾಗಿ ಅಪ್ಪಾಜಿ ಜೊತೆ ಮಾತಾಡ್ತಾ ಟಿವಿ ನೋಡ್ತಿರಿ. ತಿಳಿ ಸಾರು ಕುದೀತಿದೆ. ದೊಡ್ಡಮ್ಮ ಸೊಪ್ಪು ಬಿಡಿಸಿದ್ದಾರೆ. ಒಂದಿಷ್ಟು ಕಾಯಿ ತುರಿದುಕೊಡು, ಪಲ್ಯಕ್ಕೆ ಒಗ್ಗರಣೆ ಹಾಕ್ತೀನಿ,” ಎಂದರು.
“ಅಮ್ಮ, ಹಾಗೇ ಒಂದಿಷ್ಟು ಸಂಡಿಗೆ ಮಾಡಮ್ಮ,” ದಿವ್ಯಾ ಥಟ್ಟನೆ ಹೇಳಿದಳು.
“ಆಯ್ತಮ್ಮ. ಪಲ್ಯ ಕೆಳಗಿಳಿಸಿ, ಸಂಡಿಗೆಗೆ ಬಾಣಲೆ ಇಟ್ಟರಾಯಿತು,” ಎಂದು ರಾಧಮ್ಮ ಒಳನಡೆದರು. ಮಾಧವಿ ಕಾಯಿ ತಂದು ಹಾಲ್‌ನಲ್ಲೇ ತುರಿಯ ತೊಡಗಿದಳು. ಎಲ್ಲರೂ ಟಿವಿಯ ಸಿನಿಮಾ ನೋಡುತ್ತಾ ಹಳೆ ದಿನಗಳನ್ನು ನೆನಪಿಸಿಕೊಂಡರು. ಅಷ್ಟರಲ್ಲಿ ಅಡುಗೆ ಆಗಿತ್ತು. ಮೊದಲು ಗಿರಿಜಮ್ಮನಿಗೆ ಬಡಿಸಿ, ರಾಯರಿಗೂ ತಟ್ಟೆಯಲ್ಲಿ ಹಾಕಿಕೊಟ್ಟರು. ಅವರಿಬ್ಬರ ಊಟ ಮುಗಿಯುವಷ್ಟರಲ್ಲಿ ಅಕ್ಕತಂಗಿಯರು ಇಡೀ ಮನೆ ಕಾಂಪೌಂಡು, ಮಹಡಿಯೆಲ್ಲ 1 ಸುತ್ತು ಸುತ್ತಾಡಿ ಹಳೆಯ ದಿನಗಳನ್ನು ಸ್ಮರಿಸಿದರು. ಮದುವೆ ನಂತರ ಶಾಲಿನಿ ತುಮಕೂರು ಸೇರಿದ್ದರೆ, ಮಾಧವಿ, ದಿವ್ಯಾ ಬೆಂಗಳೂರು ಸೇರಿದ್ದರು. ಒಟ್ಟಿಗೆ ಭೇಟಿ ಆಗುವುದು ಅಪರೂಪವೇ ಆಗಿತ್ತು.
“ಅಮ್ಮ… ಅಡುಗೆ ಆಯ್ತೇನು?” 10 ಗಂಟೆ ಹೊತ್ತಿಗೆ ಮಕ್ಕಳು ಬಂದು ಕೇಳಿದರು.
“ಓ… ಆಗ್ಲೇ ಆಯ್ತಮ್ಮ. ಅಪ್ಪಾಜಿ, ದೊಡ್ಡಮ್ಮ ಇಬ್ಬರ ಊಟವೂ ಆಯ್ತು. ನಿಮ್ಮನ್ನು ಆಗಲೇ ಕರೆಯೋಣ ಅಂತ ನೋಡಿದೆ. ಅಪರೂಪಕ್ಕೆ ಮಹಡಿಯಲ್ಲಿ ಮೂವರೂ ಏನೋ ಹರಟುತ್ತಿದ್ದಿರಿ. ನಾನು ಅಡುಗೆಮನೆಯ ಉಳಿದ ಸಣ್ಣಪುಟ್ಟ ಕೆಲಸ ಪೂರ್ತಿ ಮಾಡಿದೆ,” ಎಂದರು.
“ಹಿಂದಿನ ತರಹ ಅಡುಗೆಮನೆಯಿಂದಲೇ ನಮ್ಮನ್ನು ಗದರಿ ಕರೆದಿದ್ದರೆ ಚೆನ್ನಾಗಿತ್ತು,” ಶಾಲಿನಿ ಅಮ್ಮನ ಹೆಗಲು ಹಿಡಿದುಕೊಳ್ಳುತ್ತಾ ಹೇಳಿದಳು.
“ಓ… ಅದೆಲ್ಲ ಆಗಿನ ಕಾಲ ಕಣಮ್ಮ. ಈಗ ನೀವೆಲ್ಲ ಬೆಳೆದ ಮಕ್ಕಳ ತಾಯಂದಿರು. ಬೇರೆ ಮನೆಗೆ ಸೊಸೆಯರನ್ನಾಗಿ ನಿಮ್ಮನ್ನು ಕಳಿಸಿದ್ದಾಯ್ತು. ಹಿಂದಿನಂತೆ ನಾನು ಜೋರು ಮಾಡೋಕ್ಕಾಗುತ್ತಾ?” ನಗುತ್ತಾ ರಾಧಮ್ಮ ಹೇಳಿದರು.
“ಅಮ್ಮ, ಹಿಂದಿನಂತೆ ಎಲ್ಲರೂ ಒಟ್ಟಾಗಿ ಕೆಳಗೆ ಕೂರೋಣ. ನೀನೂ ಕೂರಮ್ಮ. ಎಲ್ಲಾ ಇಟ್ಕೊಂಡು ಬಡಿಸಿಕೊಂಡರೆ ಆಯ್ತು,” ಮಾಧವಿ ಉತ್ಸಾಹದಿಂದ ಹೇಳುತ್ತಿದ್ದಳು.
“ನೀವೆಲ್ಲ ಕುಳಿತುಕೊಳ್ಳಿ… ಚಿಕ್ಕವಳು, ನಾನೇ ಎಲ್ಲರಿಗೂ ಬಡಿಸುತ್ತೀನಿ,” ಎಂದಳು ದಿವ್ಯಾ
.“ಓಹೋ… ತಾಯಿ ಮಕ್ಕಳು ಇನ್ನೂ ಊಟಕ್ಕೆ ಕೂರಲಿಲ್ಲವೇ?” ರಾಯರು ಕೇಳಿದರು.
“ಓ…. ಅಪ್ಪಾಜಿ ಇನ್ನೂ ಮಲಗಿಲ್ವಾ” ಶಾಲಿನಿ ಕೇಳಿದಳು.
“ನೀವೆಲ್ಲ ಬಂದಿರುವಾಗ ಇವತ್ತು ಅವರಿಗೆ ಇಷ್ಟು ಬೇಗ ನಿದ್ದೆ ಬರುತ್ತದೆಯೇ?” ರಾಧಮ್ಮ ಎಲ್ಲರಿಗೂ ತಟ್ಟೆ ಇಟ್ಟು, ಪಾತ್ರೆ ತಂದಿಟ್ಟುಕೊಂಡು ತಾವೂ ಕುಳಿತರು. ಎಲ್ಲರೂ ನಗುನಗುತ್ತಾ ಊಟ ಮುಗಿಸಿದರು.
“ದಿವ್ಯಾ ತಾನೇ ಊಟ ಬಡಿಸುತ್ತೇನೆ ಅಂತಾಳೆ ಅಂದ್ರೆ ಅವಳೆಷ್ಟು ಜವಾಬ್ದಾರಿ ಕಲಿತಿದ್ದಾಳೆ ಅಂತ ಗೊತ್ತಾಗ್ತಾ ಇದೆ…. ಬಹುಶಃ ತನ್ನ ಅತ್ತೇನಾ ಹೀಗೆ ಕೂರಿಸಿ ಬಡಿಸಿ, ಸೇವೆ ಮಾಡ್ತಾಳೆ ಅಂತ ಕಾಣ್ಸುತ್ತೆ,” ರಾಧಮ್ಮ ಮಕ್ಕಳಿಗೆ ಹೇಳಿದರು. ತನ್ನತ್ತೆ ರತ್ನಮ್ಮನ ಪ್ರಸ್ತಾಪ ಬಂದಾಗ ಅದೇಕೋ ದಿವ್ಯಾಳ ಮುಖ ಕಳೆಗುಂದಿತು.
ಟಿವಿ ಆರಿಸಿ ಎಲ್ಲರೂ ಮಲಗಲು ಹೊರಟರು. ಇನ್ನೊಂದು ಕೋಣೆಯಲ್ಲಿ ಮಂಚ ಇರಲಿಲ್ಲ. ಅಲ್ಲೇ ಎಲ್ಲರ ಹಾಸಿಗೆ ಹಾಸಲಾಯಿತು.
ಮಕ್ಕಳಿಗಾಗಿ 2 ಬಾಟಲ್‌ನಲ್ಲಿ ನೀರು, ಒಂದಷ್ಟು ದ್ರಾಕ್ಷಿ ಹಾಕಿಕೊಂಡು ಬಂದರು ರಾಧಮ್ಮ.
“ಎಲ್ಲಾ ಸರಿಹೋಯ್ತು ತಾನೇ? ಬೆಡ್‌ಶೀಟ್, ದಿಂಬು ಬೇರೇನಾದರೂ ಬೇಕಾ?” ರಾಧಮ್ಮ ಕೇಳಿದರು.
“ಅದೆಲ್ಲ ಸರಿ ಇದೆ. ಇವತ್ತು ನೀನೂ ನಮ್ಮ ಜೊತೆ ಇಲ್ಲೇ ಮಲಗಲು ಬಾರಮ್ಮ,” ಮಾಧವಿ ಪ್ರೀತಿಯಿಂದ ಅಮ್ಮನನ್ನು ಕರೆದಳು.
“ಬಂದೆ, ನಿಮ್ಮ ತಂದೆಗೆ ನೀರಿನ ಬಾಟಲ್ ಕೊಟ್ಟು ಬರ್ತೀನಿ. ದೊಡ್ಡಮ್ಮ ಕೂಡ ಮಲಗಿ ಆಯ್ತು,” ಎಂದು ಹೊರಟರು ರಾಧಮ್ಮ.
“ಅಮ್ಮ ಯಾಕೋ ಬಡವಾಗಿದ್ದಾರೆ ಅನ್ಸುತ್ತೆ,” ಶಾಲಿನಿ ಪೇಚಾಡುತ್ತಾ ಹೇಳಿದಳು.
“ಹಾಗೇನಿಲ್ಲ…. ವಯಸ್ಸಾಯ್ತಲ್ಲ. ಇದೆಲ್ಲ ಮಾಮೂಲು,” ಎಂದು ತಾಯಿ ಮಕ್ಕಳ ಮಧ್ಯೆ ಮಲಗಿದರು.
“ಆದರೂ ಮುಖದಲ್ಲಿ ಏನೋ ಚಿಂತೆ ಇದೆ. ಏನಾದರೂ ತೊಂದರೆ ಆಗಿದ್ರೆ ಹೇಳಮ್ಮ. ನಾವು ಮೂವರು ಇದ್ದೀವಿ, ಖಂಡಿತಾ ನಮ್ಮ ಕೈಲಾದದ್ದು ಮಾಡೋಣ,” ಶಾಲಿನಿ ಹೇಳಿದಳು.
“ಅಂಥ ತೊಂದರೆ ಏನಿಲ್ಲಮ್ಮ, ಮಹರಾಯರು ನನ್ನ ಬಗ್ಗೆ ಬಹಳ ಕಾಳಜಿ ವಹಿಸುತ್ತಾರೆ. ನಾವಿಬ್ಬರೂ ಪರಸ್ಪರ ಆಸರೆಯಾಗಿದ್ದೇವೆ, ಹೇಗೋ ನಡೆದುಕೊಂಡು ಹೋಗುತ್ತಿದೆ. ನಾಳೆ ಯಾರಾದರೂ ಒಬ್ಬರು ಹೋಗಿಬಿಟ್ಟರೆ ಉಳಿದವರಿಗೆ ಕಷ್ಟ ಆಗುತ್ತಲ್ಲ ಅಂತ…..”
ಮೂವರೂ ಎದ್ದು ಅಮ್ಮನನ್ನು ತಬ್ಬಿ ಹೇಳಿದರು, “ನಾವಿರುವಾಗ ನಿನಗೇಕಮ್ಮ ಆ ಚಿಂತೆ? ನೀವಿಬ್ಬರೂ ಒಂಟಿ ಆಗ್ಬಿಟ್ರಿ ಅಂತ ಯಾಕೆ ಅಂದುಕೊಂಡ್ರಿ? ನಾವು ಪ್ರತಿದಿನ 2-3 ಸಲ ದೂರದಿಂದ ಫೋನ್ ಮಾಡುತ್ತಲೇ ಇರ್ತೀವಿ….. ಮತ್ತೇಕೆ ಚಿಂತೆಪಡಬೇಕು?”
“ಇರಲಿ, ಈಗ ಮಲಗಿರಮ್ಮ…. ಗಂಟೆ ಆಗಲೇ 11.30 ಆಯ್ತು. ಪ್ರಯಾಣದ ಆಯಾಸ ಬೇರೆ. ಮತ್ತೆ ನಾಳೆ ಬೆಳಗ್ಗೆ 8ಕ್ಕೆ ಮುಂಚೆ ಯಾರೂ ಏಳಬೇಡಿ. ನಿಮ್ಮ ಮನೆಗಳಲ್ಲಿ ದಿನಾ ಗಡಿಬಿಡಿ ಇದ್ದದ್ದೇ…”
ಅಮ್ಮ ಅಷ್ಟು ಹೇಳಿದರೂ ಅಕ್ಕತಂಗಿಯರು ಗುಸುಗುಸು ಎನ್ನುತ್ತಾ ಮಾತು ಮುಂದುವರಿಸಿದರು. ಆಗ ಇದ್ದಕ್ಕಿದ್ದಂತೆ ಕರೆಂಟ್ ಹೋಗಿ ಬಹಳ ಸೆಖೆ ಹೆಚ್ಚಿತು. ಅರ್ಧ ಗಂಟೆ ಕಳೆದರೂ ಕರೆಂಟ್ ಬರುವ ಸೂಚನೆ ಇರಲಿಲ್ಲ.
“ಸರಿ…. ನಡೀರೆ. ಮಹಡಿ ಮೇಲೆ ಹೋಗಿ ಮಲಗೋಣ,” ಎನ್ನುತ್ತಾ ಮಾಧವಿ ಚಾಪೆ, ದಿಂಬು ಸರಿಪಡಿಸಿದಳು. ಮೂವರೂ ಮಹಡಿಗೆ ಬಂದು ಚಾಪೆ ಹಾಸಿ ಮಲಗಿದರು. ತಂಪಾದ ಗಾಳಿ, ಮೇಲೆ ವಿಶಾಲ ಆಕಾಶ…. ಚಂದ್ರ, ನಕ್ಷತ್ರ ನೋಡುತ್ತಾ ಮತ್ತೆ ಬಾಲ್ಯಕ್ಕೆ ಜಾರಿದರು.
“ನಾವು ಪ್ರವಾಸ ಅಂತ ಯಾವುದೋ ಊರಿನ ಹೋಟೆಲ್‌ಗೆ ಹೋಗಿ ಎಸಿ ರೂಮಿನಲ್ಲಿ ತಂಗಿದರೂ ನಮ್ಮೂರಿನ ನಮ್ಮ ಮನೆಯಲ್ಲಿ ಮಹಡಿ ಮೇಲೆ ಮಲಗಿದ ಈ ಸುಖ ಸಿಗಲ್ಲ,” ಎಂದು ಶಾಲಿನಿ ಹೇಳಿದಾಗ, ಉಳಿದವರೂ ಹೌದು ಎಂದು ಜೊತೆಗೂಡಿದರು.
“ಬೇಸಿಗೆಯಲ್ಲಿ ಅಪರೂಪಕ್ಕೆ ಮಳೆ ಬಂದರೆ ಆ ಮಣ್ಣಿನ ವಾಸನೆ ಎಷ್ಟು ಘಮ್ಮೆನ್ನುತ್ತದೆ…” ಮಾಧವಿಯ ಮಾತಿಗೆ ದಿವ್ಯಾ, “ದೊಡ್ಡಮ್ಮ ಮಕ್ಕಳನ್ನು ಕರೆದುಕೊಂಡು ತಿಥಿ ಸಮಯದಲ್ಲಿ ಇಲ್ಲಿಗೆ ಬರ್ತಿದ್ರಲ್ಲಾ…. ಭರತ್ ಲಕ್ಷ್ಣಣರೂ ನಮ್ಮ ಜೊತೆ ಮಹಡಿಯಲ್ಲಿ ಮಲಗಲು ಬರ್ತಿದ್ದರು. ಸ್ವಲ್ಪ ಹೊತ್ತಿಗೆ ವಿಷಯ ಗೊತ್ತಾಗಿ ದೊಡ್ಡಮ್ಮ ಜೋರಾಗಿ ಗದ್ದಲ ಎಬ್ಬಿಸಿ ಕೆಳಗೆ ಕರೆಸಿಕೊಳ್ಳುತ್ತಿದ್ದಳು. ಪಾಪ, ಅವರಿಬ್ಬರೂ ಬೇಜಾರು ಮಾಡಿಕೊಳ್ತಿದ್ದರು….”
ಇವರ ಮಾತು ಮುಂದುವರಿಯುತ್ತಿದ್ದಂತೆ ರಾಧಮ್ಮ ನಿಧಾನವಾಗಿ ತಾವೂ ಮೆಟ್ಟಿಲು ಹತ್ತಿ ಬಂದರು. “ಈ ಹಾಳು ಮಂಡಿನೋವು ಬಂದಾಗಿನಿಂದ ನಾನು ಮಹಡಿ ಕಡೆ ಬರುವುದನ್ನೇ ಬಿಟ್ಟೆ ಕಣ್ರೆ….. ನಮ್ಮ ಕೆಲಸದ ನಿಂಗಿಯೇ ಇಲ್ಲಿ ಬಂದು ಬಟ್ಟೆ ಒಣಗಿಸೋದು, ಕ್ಲೀನ್ ಮಾಡೋದು ಮಾಡ್ತಿರ್ತಾಳೆ. ಇವತ್ತು ನೀವಿಲ್ಲಿದ್ದೀರಲ್ಲ ಅಂತ ನಾನೂ ಬಂದ್ಬಿಟ್ಟೆ….”
ಅಮ್ಮನನ್ನು ಸಂಭ್ರಮದಿಂದ ತಮ್ಮ ನಡುವೆ ಮಲಗಿಸಿಕೊಂಡ ಮಕ್ಕಳು ಮತ್ತೆ ಹರಟತೊಡಗಿದರು.
“ಅಮ್ಮ ….. ಮತ್ತೆ ನಮ್ಮ ಮೀರತ್ತೆ ಹೇಗಿದ್ದಾರೆ?”
“ಹ್ಞೂಂ ಇದ್ದಾರಮ್ಮ…. ವಯಸ್ಸಾದವರ ಕಥೆ ಎಲ್ಲಾ ಒಂದೇ. ಅವರ ಯಜಮಾನ್ರು ತೀರಿಕೊಂಡ ನಂತರ ಸುಧಾರಿಸಿಕೊಳ್ಳಲು ಅವರಿಗೆ ಬಹಳ ಸಮಯ ಬೇಕಾಯ್ತು. ಆದರೆ ಸೋಲು ಒಪ್ಪಲಿಲ್ಲ. ಹೇಗೋ ಏನೋ ಮಾಡಿ ಒಂದು ಖಾಸಗಿ ನೌಕರಿ ಹಿಡಿದು, ಮಕ್ಕಳಿಬ್ಬರನ್ನೂ ಓದಿಸಿ ಒಂದು ದಡ ಸೇರಿಸಿದರು. ಮಗಳು ಮದುವೆ ಆಗಿ ಇಲ್ಲೇ ಮಂಡ್ಯದಲ್ಲಿದ್ದಾಳೆ. ಮಗ ರಂಜಿತ್ ಬೆಂಗಳೂರಿನಲ್ಲಿ ಭಾರಿ ಐಟಿ ಎಂಜಿನಿಯರ್ ಆಗಿದ್ದಾನೆ.”
“ಅವನ ಹೆಂಡತಿ ಮೀರತ್ತೆಗೆ ಬಹಳ ಅಂಟಿಕೊಂಡಿರಬೇಕಲ್ಲವೇ? ನಮ್ಮನ್ನೆಲ್ಲ ಎಷ್ಟು ಪ್ರೀತಿಯಿಂದ ನೋಡಿಕೊಳ್ಳೋರು, ಇನ್ನು ಸ್ವಂತ ಸೊಸೇನಾ ಬಿಟ್ಟುಕೊಡ್ತಾರಾ?” ಮಾಧವಿ ಕೇಳಿದಳು.
“3-4 ವರ್ಷ ಹೇಗೋ ಮಗನ ಮನೇಲಿ ಇದ್ದುಕೊಂಡು ಇಬ್ಬರಿಗೂ ಬೇಕಾದ್ದು ಮಾಡಿಹಾಕ್ತಿದ್ದರು. ಆ ಸೊಸೆಯ ಸಿಡುಕಾಟ ತಡೆಯಲಾರದೆ, ಮೈಸೂರಲ್ಲಿದ್ದ ತಮ್ಮ ಹಳೆ ಚಿಕ್ಕ ಹೆಂಚಿನ ಮನೆಗೇ ವಾಪಸ್ ಆಗಿದ್ದಾರೆ. ಇಲ್ಲಿ ಬಾಡಿಗೆಗೆ ಕೊಟ್ಟಿದ್ದರು, ಒಂದಿಷ್ಟು ಪುಡಿಗಾಸು ಆಸರೆ ಆಗಿತ್ತು. ಈಗ ಮಗಳು ಕಳಿಸೋ ದುಡ್ನಲ್ಲೇ ಹೇಗೋ ಜೀವನ ಸಾಗ್ತಿದೆ….”
“ಹಿಂದೆಲ್ಲ ಮೀರತ್ತೆ ನಮ್ಮಲ್ಲಿ 2-3 ದಿನ ಉಳಿಯುತ್ತಾರೆ ಅಂದ್ರೆ ನಮಗೆ ಖುಷಿಯೋ ಖುಷಿ….. ಒಂದು ಸಲ ಅರಮನೆ, ಮತ್ತೊಮ್ಮೆ ಕೆಆರ್‌ಎಸ್, ಇನ್ನೊಮ್ಮೆ ಶ್ರೀರಂಗಪಟ್ಟಣ….. ಅಂತ ನಮ್ಮ ಜೂನಿಯರ್ ಗ್ಯಾಂಗ್‌ನ ಹೊರಡಿಸುತ್ತಿದ್ದರು. ಭರತ್, ಲಕ್ಷ್ಮಣ್ ಅಮ್ಮನ ಕಣ್ಣುತಪ್ಪಿಸಿ ಹೇಗೋ ನಮ್ಮ ಜೊತೆ ಬಂದು ನಂತರ ಬೈಸಿಕೊಳ್ಳೋರು…. ಅತ್ತೆ ಇದ್ದಷ್ಟೂ ಮಜಾ ಅನಿಸ್ತಿತ್ತು,” ಶಾಲಿನಿ ಹೇಳಿದಳು.
“ದಿವ್ಯಾ….. ಏನೇ ಮೌನವಾಗಿಬಿಟ್ಟೆ? ಆಗ್ಲೆ ನಿದ್ದೆ ಬಂತಾ?”
“ಇಲ್ಲಮ್ಮ….. ನೀವೆಲ್ಲ ಮಾತಾಡ್ತಿದ್ರಿ…. ಹಾಗೇ ಕೇಳಿಸಿಕೊಳ್ತಿದ್ದೆ.”
ಮಾಧವಿ ಹೇಳಿದಳು, “ಶಾಲಿನಿ, ಇವತ್ತು ನೀನು ದೊಡ್ಡಮ್ಮನ ಸ್ಥಿತಿ ನೋಡಿ ಕಣ್ಣಲ್ಲಿ ನೀರು ಹಾಕಿದೆ. ನೀನು ಬಿ.ಇ ಸೇರಬೇಕಾದಾಗ ಇದೇ ದೊಡ್ಡಮ್ಮ ಎಷ್ಟೆಲ್ಲ ರಾದ್ಧಾಂತ ಮಾಡಿದ್ರು…. ನೆನಪಿದೆ ಅಲ್ವಾ? `ಅಯ್ಯೋ…… 3 ಹೆಣ್ಣುಮಕ್ಕಳ ತಂದೆ ನಮ್ಮ ಕೃಷ್ಣ. ಒಬ್ಬೊಬ್ಬರನ್ನೂ ಮದುವೆ ಮಾಡಿಸಿ ದಾಟಿಸೋದ್ರಲ್ಲೇ ಸಾಕಾಗುತ್ತೆ. ಅಂಥದ್ರಲ್ಲಿ ಈ ಮಹರಾಯ್ತಿಗೆ 2-3 ಲಕ್ಷ ಸುರಿದು ಬಿ.ಇ ಸೀಟು ಕೊಡಿಸಬೇಕೇ? ಆಮೇಲೆ ಮದುವೆಗೆ ಅಂತ ಮತ್ತೆ 2-3 ಲಕ್ಷ ಬೇಕು. ಇವಳಿಗೇ ಎಲ್ಲಾ ಸುರಿದರೆ ಬೇರೆಯವರಿಗೆ ಏನು ಕೊಡೋದು ಅಂತ? ಬಿ.ಇ ಬೇಡ, ಸುಮ್ನೆ ಬಿ.ಎ ಮಾಡಿ, ಮದುವೆ ಅಂತ ಮುಗಿಸಲಿ,’ ಎಂದು ಬಾಯಿಗೆ ಬಂದಂತೆ ಮಾತಾಡಿದ್ರು.
“ಆಗ ಮೀರತ್ತೇನೇ ದಬಾಯಿಸಿ, `ಸುಮ್ಮನಿರಿ ಅತ್ತಿಗೆ…. ನೀವೇಕೆ ಗಂಟಲು ಹರಕೋತೀರಿ? ನಮ್ಮ ಶಾಲಿನಿ ಮೆರಿಟ್‌ನಲ್ಲಿ ಒಳ್ಳೆ ಅಂಕ ಪಡೆದಿದ್ದಾಳೆ. ಸಿಇಟಿ ಪರೀಕ್ಷೇಲೂ ಉತ್ತಮ ಅಂಕ ಬಂದಿದೆ. ಮೈಸೂರಲ್ಲದಿದ್ದರೆ ದಾವಣಗೆರೆಯಲ್ಲಿ ಮೆರಿಟ್ ಸೀಟ್ ಸಿಕ್ಕೇ ಸಿಗುತ್ತೆ. ಹಾಸ್ಟೆಲ್ ಖರ್ಚು ನೋಡಿಕೊಂಡರಾಯಿತು. ಅದಕ್ಕೇಂತ ಓದೋ ಹುಡುಗಿನಾ ಓದಿಸದಿದ್ರೆ ಆಯ್ತೆ?’ ಎಂದಿದ್ದರು.
“ಆಗ ದೊಡ್ಡಮ್ಮ ಎಲ್ಲಿ ತಮಗೂ ಖರ್ಚು ಗಂಟುಹಾಕುತ್ತಾರೋ ಅಂತ, `ಹಾಗಲ್ಲ ಮೀರಾ…. ಕೃಷ್ಣಂಗೆ ಮುಂದೆ ಕಷ್ಟ ಆಗ್ಬಾರ್ದೂ ಅಂತ ನನ್ನ ಕಾಳಜಿ ಅಷ್ಟೆ. ಕನ್ಯಾಪಿತೃವಿಗೆ ಕನ್ಯಾದಾನ ತಾನೇ ಕಣಮ್ಮ ಮುಖ್ಯ…..’ ಎಂದು ಹೇಳ್ತಾನೇ ಇದ್ದರು. ಮೀರಾ ಅತ್ತೆ ಸಪೋರ್ಟ್ ಇಲ್ದಿದ್ರೆ ಶಾಲಿನಿ ಇವತ್ತು ಈ ಸ್ಟೇಜ್‌ಗೆ ಬರುತ್ತಿರಲಿಲ್ಲ.”
“ಹೋಗ್ಲಿ ಬಿಡ್ರಮ್ಮ….. ನಿಮ್ಮ ದೊಡ್ಡಮ್ಮ ಆ ಕಾಲಕ್ಕೆ ತಕ್ಕಂತೆ ಮಾತಾಡಿದ್ದಾರೆ. ಆದರೆ ಮೀರತ್ತೆ ಪರವಾಗಿ ನಾನೂ ಗಟ್ಟಿಯಾಗಿ ನಿಂತಿದ್ದರಿಂದ ನೀವುಗಳು ಒಳ್ಳೆಯ ನೆಲೆ ಕಾಣುಂತಾಯ್ತು.
“ಆಗೆಲ್ಲ ಕಷ್ಟದ ದಿನಗಳು. ಶಾಲಿನಿ ಇನ್ನೂ ಚಿಕ್ಕವಳು. ಅವಳನ್ನ ಕಾನ್ವೆಂಟ್‌ಗೆ ಸೇರಿಸಬೇಕು ಅಂತ ನಾನು. `ಬೇಡ… ಭರತ್, ಲಕ್ಷ್ಣಣ್ ಓದುತ್ತಿರುವ ಶಾಲೆಯೇ ಸಾಕು. ದುಬಾರಿ ಖರ್ಚು, ಮುಂದೆ ಮದುವೆಗೆ ಹಣ ಬೇಕು,’ ಅಂತ ನಿಮ್ಮ ದೊಡ್ಡಪ್ಪ ದೊಡ್ಡಮ್ಮ ಗಲಾಟೆ ಮಾಡಿದರು. ನಾನೂ ಹಠಬಿಡದೆ ಒಬ್ಬೊಬ್ಬರನ್ನಾಗಿ ನಿಮ್ಮೆಲ್ಲರನ್ನೂ ಅದೇ ಕಾನ್ವೆಂಟ್‌ಗೆ ಸೇರಿಸಿದೆ, ನಮ್ಮ ಮನೆಗೂ ಹತ್ತಿರವಿತ್ತು. ನಾನೇ ಕರೆದುಕೊಂಡು ಬಂದು ಬಿಡ್ತಿದ್ನಲ್ಲಾ….?
“ಮೊದಮೊದಲು ಅಪ್ಪಾಜಿ ಕೂಡ ಅವರ ಮಾತಿಗೆ ತಾಳ ಹಾಕುತ್ತಿದ್ದರು. ಮೀರಾ ಹೇಳಿದ ಮೇಲೆ ಅವರೂ ನಮ್ಮ ಕಡೆ ಮನಸ್ಸು ಬದಲಾಯಿಸಿದರು. ಈ ರೀತಿ ನೀವು ಚೆನ್ನಾಗಿ ಓದಿ ಸೆಟ್ಲ್ ಆಗುವ ಹಾಗಾಯ್ತು. ಮುಂದೆ ಉತ್ತಮ ಕೆಲಸ, ಸಲೀಸಾಗಿ ಮದುವೆ ಎಲ್ಲಾ ನಡೆದದ್ದು ದೊಡ್ಡಮ್ಮನಿಗೆ ನುಂಗಲಾರದ ತುತ್ತಾಯ್ತು. ಈಗ ನಿಮ್ಮೆಲ್ಲರ ಚಂದದ ಸಂಸಾರ, ನಮ್ಮೊಂದಿಗೆ ಉಳಿಸಿಕೊಂಡಿರುವ ನಂಟು, ತಮ್ಮ ಗಂಡುಮಕ್ಕಳು ತಿರುಗಿಬಿದ್ದದ್ದು ಅವರಿಗೆ ವಾಸ್ತವದ ಪರಿಚಯ ಮಾಡಿಸಿದೆ. ಈಗವರ ಮನದಲ್ಲಿ ಹಿಂದಿನ ಯಾವ ತರಹದ ಅತೃಪ್ತಿಯೂ ಇಲ್ಲ.”
ಮಾಧವಿ ಕೇಳಿದಳು, “ಈ ದೊಡ್ಡಮ್ಮ ಮೊದಲಿನಿಂದಲೂ ಜೋರೇ ಬಿಡು. ನೀನ್ಯಾಕಮ್ಮ ಎಲ್ಲವನ್ನೂ ಸಹಿಸಿಕೊಂಡು ಸುಮ್ಮನೇ ಇರ್ತಿದ್ದೆ?”
“ತಮಗೆ ಇಬ್ಬರೂ ಗಂಡು ಮಕ್ಕಳೇ ಹುಟ್ಟಿದ್ದಾರೆ, ವಂಶೋದ್ಧಾರಕರು ಅಂತ ಅವರಿಗೆ 2 ಕೋಡು ಬಂದಿತ್ತು. ಅದಕ್ಕೆ ತಕ್ಕಂತೆ ನನಗೆ ಮೂವರೂ ಹೆಣ್ಣುಮಕ್ಕಳೇ ಆಗಿದ್ದರಿಂದ ನಮ್ಮತ್ತೆ ಮಾವನ ಮುಂದೆ ತಮ್ಮ ಮಾತೇ ನಡೆಯಬೇಕೆಂದು ಹಠಹಿಡಿಯುತ್ತಿದ್ದರು. ಆದರೆ ಒಂದಂತೂ ನಿಜ. ಅಪ್ಪಾಜಿಗೆ ಬೇಗ ಕೆಲಸ ಸಿಕ್ಕಿರಲಿಲ್ಲ. ಆಗಿನಿಂದ ದೊಡ್ಡಪ್ಪ ಒಬ್ಬರೇ ಇಡೀ ಕುಟುಂಬ ತೂಗಿಸುತ್ತಿದ್ದರು. ಅವರೇ ನಿಮ್ಮ ತಂದೆ ಡಿಗ್ರಿ ಕಲಿತು, ಖಾಸಗಿ ನೌಕರಿ ಸೇರುವಂತೆ ಮಾಡಿದ್ದು. ತಾತನ ಪೆನ್ಷನ್ ಹಣ ಅವರಿಬ್ಬರ ಔಷಧಿ ಖರ್ಚಿಗೇ ಆಗ್ತಿತ್ತು.
“ಹೀಗಾಗಿ ಮೊದಲಿನಿಂದಲೂ ದೊಡ್ಡಮ್ಮ ಹಿರಿ ಸೊಸೆ ಅಂತ ಜೋರು ಮಾಡ್ತಿದ್ದರು. ನಮ್ಮ ಮದುವೆ ಆಗಿ ಶಾಲಿನಿ ಹುಟ್ಟಿದ ಮೇಲೆಯೇ ನಿಮ್ಮ ತಂದೆಗೆ ಒಳ್ಳೆ ಕಡೆ ಪರ್ಮನೆಂಟ್ ಕೆಲಸ ಆಯ್ತು. ಹೀಗಾಗಿ ಮೊದಲಿನಿಂದಲೂ ನಾನು ಎಲ್ಲವನ್ನೂ ತೂಗಿಸಿ ಕೊಂಡೇ ಹೋದೆ. ಇವರಿಗೆ ಕೆಲಸ ಸುಧಾರಿಸಿದ ಮೇಲೆ ದೊಡ್ಡಮ್ಮ ಬೇರೆ ಮನೆ ಮಾಡಿ, ಅರಮನೆ ಪ್ರದೇಶಕ್ಕೆ ಹತ್ತಿರ ಇರುವಂತೆ ಭಾರಿ ಮನೆ ಲೀಸ್‌ಗೆ ಹಾಕಿಸಿಕೊಂಡು ಹೊರಟುಹೋದರು. ಅಂದಿನಿಂದ ಅವರು ಒಂದು ಕೈ ಮೇಲೆಯೇ…… ಹೀಗೆ ನಡೆದುಕೊಂಡು ಹೋಗ್ತಿತ್ತು.
“ದೊಡ್ಡಪ್ಪ ಖ್ಯಾತ ಎಂಜಿನಿಯರ್. ಅವರು ಕಾಂಟ್ರಾಕ್ಟ್ ಗಿರಿಯಲ್ಲಿ ಒಳ್ಳೆ ಹೆಸರು ಮಾಡಿದ್ದರು. ಸಂಬಳ, ಗಿಂಬಳ ಜೋರಾಗಿ ಓಡಾಡ್ತಿತ್ತು. ಜೊತೆಗೆ ಆಗಾಗ ವರ್ಗಾವಣೆ ಕೂಡ ಆಗೋದು. ಮಕ್ಕಳ ಓದಿಗಾಗಿ ಅಕ್ಕಾ ಮೈಸೂರಲ್ಲೇ ಉಳಿದು ಬಿಡೋರು. ಮನೆಯಲ್ಲಿ ಆಳುಕಾಳು ಇದ್ದರು, ದರ್ಪಕ್ಕೇನೂ ಕಡಿಮೆ ಇರಲಿಲ್ಲ. ಹೀಗಾಗಿ ನಮ್ಮ ಮೇಲೆ ಜೋರು ತೋರಿಸಿ ತೃಪ್ತಿ ಪಡೋರು.
“ಅವರ ಮಾತು ಒಮ್ಮೊಮ್ಮೆ ಇರಿದಂತೆ ಆಗುತ್ತಿತ್ತು. ಅಪ್ಪಾಜಿ ವರಮಾನ ಓಹೋ ಅಂತ ಏನೂ ಇರಲಿಲ್ಲ. ತಾತಾ ಮೊದಲೇ ಈ ಮನೆ ಕಟ್ಟಿಸಿದ್ದರಿಂದ ಬಾಡಿಗೆ ಕಾಟವಿಲ್ಲದೆ ನೆಮ್ಮದಿಯಾಗಿದ್ದೆವು. ಈ ದೊಡ್ಡಮ್ಮ ಫಂಕ್ಷನ್‌ಗಳಲ್ಲಿ ನೆಂಟರ ಮುಂದೆ ಆಡಿಕೊಳ್ಳೋರು, `3 ಹೆಣ್ಣುಮಕ್ಕಳು ಕೃಷ್ಣಂಗೆ…. ಪಾಪ, ಮುಂದೆ ಹೇಗೋ ಏನೋ! ಕುಂಟೋ, ಕುರುಡೋ ಯಾವುದೋ ಗಂಡು ಗೊತ್ತು ಮಾಡಿ ದಾಟಿಸ್ತಾರೆ ಬಿಡಿ. ಇರೋ ಪ್ರೈವೇಟ್ ಕೆಲಸಕ್ಕೆ ಇಷ್ಟೆಲ್ಲ ಬೇಕಿತ್ತೇನು? ಮುಂದೆ ಮದುವೆ ಮಾಡೋ ಕಾಲಕ್ಕೆ ನಮ್ಮ ಮನೆ ಬಾಗಿಲಿಗೆ ಬರಲಿ. ಆಗ ಮಾಡ್ತೀನಿ ಸರಿಯಾಗಿ! ನಮ್ಮ ಗಂಡು ಮಕ್ಕಳಿಗೆ ಇಲ್ಲದೆ ಇವರ ಮದುವೆಗೆ ಕೊಟ್ಟುಬಿಡ್ತೀನಾ? ನನ್ನ ಮನೆಗೆ ಅನ್ನಕ್ಕೆ ಬಂದು ಬೀಳ್ತಾರೆ…. ನೋಡ್ತಾ ಇರಿ,’ ಅಂದಾಗ ನನಗೆ ಮನಸ್ಸು ಒಡೆದುಹೋಗೋದು!
“ನಮ್ಮ ರೂಮಿಗೆ ಬಂದು ಎಷ್ಟು ಸಲ ಅತ್ತಿದ್ದೀನೋ…. ಇವರ ಮುಖ ನೋಡಿಕೊಂಡು ಎಲ್ಲವನ್ನೂ ಸಹಿಸಿಕೊಳ್ತಿದ್ದೆ. ಎಂದೂ ಇವರಿಗೆ ಅಣ್ಣನ ಮುಂದೆ ಕೈ ಚಾಚೋ ಪರಿಸ್ಥಿತಿ ಬರಬಾರದು ಅಂತ ದೇವರಲ್ಲಿ ಬೇಡಿಕೊಳ್ತಿದ್ದೆ. ವಯಸ್ಸಾದ ಅತ್ತೆ ಮಾವ ಇರುವಾಗ, 3 ಮಕ್ಕಳನ್ನು ಇಟ್ಟುಕೊಂಡು ನಾನಾದರೂ ಯಾವ ಕೆಲಸಕ್ಕೆ ಹೋಗಲಿ? ಮುಂದೆ ಕ್ರಮೇಣ ಇವರಿಗೆ ಪ್ರಮೋಶನ್ ಆಗಿ, ಆರ್ಥಿಕವಾಗಿ ನಾವು ಚೇತರಿಸಿಕೊಳ್ಳುವ ಹಾಗಾಯಿತು.
“ಮುಂದೆ ನೀವು ಚೆನ್ನಾಗಿ ಓದಿ ಸಲೀಸಾಗಿ ಕಾಲೇಜಿನಲ್ಲಿ ಸೀಟು ಸಿಕ್ಕಿ ಸೆಟಲ್ ಆದಾಗ ಪರಿಸ್ಥಿತಿ ಸರಿಹೋಗಿತ್ತು. ಭರತ್, ಲಕ್ಷ್ಮಣ್ ಬಿ.ಇ, ಎಂ.ಇ ಅಂತ ಮೊದಲೇ ಬೆಂಗಳೂರು ಸೇರಿದ್ದರು. ಅದಾದ ಮೇಲೆ ಕ್ರಮೇಣ ಅವರುಗಳು ಇಲ್ಲಿಗೆ ಬಂದು ಹೋಗುವುದು ಕಡಿಮೆ ಆಯ್ತು. ಅಂತೂ ನಿಮ್ಮಗಳ ಮದುವೆ ಸರಳವಾಗಿ, ಯಾರ ನೆರವಿಲ್ಲದೆ ನಡೆದದ್ದು ಅವರ ಬಾಯಿ ಮುಚ್ಚಿಸಿ ಬಿಟ್ಟಿತು. ಅಂದಿನಿಂದ ಅವರು ಬಾಯಿ ಮಾಡೋದನ್ನೇ ಬಿಟ್ಟರು.”
ರಾಧಮ್ಮನ ಕಷ್ಟದ ದಿನಗಳ ಬದುಕಿನ ಬಗ್ಗೆ ಕೇಳಿ ಕಿರಿಯಳು ದಿವ್ಯಾಗೆ ಮಾತೇ ಹೊರಡದಾಯಿತು. ದೊಡ್ಡಮ್ಮ ಎಷ್ಟೇ ಅಂದೂ ಆಡಿ ಮಾಡಿರಲಿ, ನಿಷ್ಕಲ್ಮಶ ಮನಸ್ಸಿನಿಂದ ಅಮ್ಮ ಅದನ್ನೆಲ್ಲ ಮರೆತು ದೊಡ್ಡಮ್ಮನ ಸೇವೆ ಮಾಡಬೇಕೆಂದರೆ ಆಕೆಯದು ಅದೆಷ್ಟು ವಿಶಾಲ ಹೃದಯ ಇರಬೇಕು….ಅದೇ ತಾನಾದರೋ ಮದುವೆಯಾಗಿ 5 ವರ್ಷ ಕಳೆದಿದ್ದರೂ ಇಂದಿಗೂ ಅತ್ತೆಗೆ ಅನುರೂಪ ಸೊಸೆಯಾಗಿ ನಡೆದುಕೊಂಡಿಲ್ಲ. ತನಗೂ ಭರತ್, ಲಕ್ಷ್ಮಣರ ಹೆಂಡತಿಯರಿಗೂ ವ್ಯತ್ಯಾಸವಾದರೂ ಏನು? ಅವರುಗಳು ದೊಡ್ಡಮ್ಮನನ್ನು ಗೋಳುಹೊಯ್ದುಕೊಂಡಂತೆಯೇ ತಾನೂ ತನ್ನತ್ತೆಯನ್ನು ಹೀನಾಮಾನಾ ನೋಯಿಸಿದ್ದೇನೆ…. ಬಾಯಿ ತುಂಬಾ ಹಂಗಿಸಿ ಈ ಮಗನ ಮನೆಯಲ್ಲೇ ಯಾಕಿರಬೇಕು? ಮಗಳ ಮನೆಗೆ ಹೋಗಬಾರದೇಕೆ ಅಂತೆಲ್ಲ ದಬಾಯಿಸಿದ್ದೇನೆ. ಅಷ್ಟು ಸಾಲದೆಂಬಂತೆ ಊರಲ್ಲಿರುವ ವೃದ್ಧಾಶ್ರಮಗಳನ್ನೆಲ್ಲ ವಿಚಾರಿಸಿ ಯಾವುದು ಅಗ್ಗವೋ ಅಲ್ಲಿಗೆ ಸಾಗಹಾಕಲು ಯತ್ನಿಸಿರಲಿಲ್ಲವೇ…..?
ಈಗ ಒಂದೊಂದೇ ನೆನಪಾದಂತೆ ಯಾಕೋ ಪಶ್ಚಾತ್ತಾಪದಿಂದ ಕಣ್ಣೀರು ಉಕ್ಕಿ ಬಂತು. ಈ ಸಲವಂತೂ ಗಂಡ ಆನಂದನೊಂದಿಗೆ ಬಾಯಿಗೆ ಬಂದಂತೆ ಜಗಳವಾಡಿ ಒಂದು, ಅತ್ತೆ ಇರಬೇಕು ಅಥವಾ ತಾನು ಆ ಮನೆಯಲ್ಲಿರಬೇಕು ಎಂದು ಹೇಳಿಯೇ ಮೈಸೂರಿಗೆ ಹೊರಟು ಬಂದಿದ್ದಳು. ಛೇ…. ಛೇ…. ತಾನು ಮಾಡಿದ್ದು ಯಾವುದೂ ಸರಿಯಲ್ಲ ಎಂದು ಅಮ್ಮನ ಮಾತುಗಳಿಂದ ಎಲ್ಲ ಅರ್ಥವಾಯಿತು. ಅತ್ತೆಯನ್ನು ಮನೆಯ ಕೆಲಸದವರಂತೆಯೇ ನಡೆಸಿಕೊಂಡಿದ್ದಳು. ಇಡೀ ಮನೆಯ ಎಲ್ಲಾ ಕೆಲಸ ಮಾಡಿಸಿ, ಎಲ್ಲರಿಗೂ ಬಡಿಸಿದ ನಂತರ ಕೊನೆಯಲ್ಲಿ ರಾತ್ರಿ ಊಟ ಮಾಡಬೇಕೆಂದು ಶಾಸನ ಹೊರಡಿಸಿದ್ದಳು. ಮೊಮ್ಮಗು ಹುಟ್ಟಿದಾಗಿನಿಂದ ಅವರಿಗೆ ಏನೋ ಸಂತೋಷ. ಮಗುವಿನ ಎಲ್ಲಾ ಕೆಲಸ ಮಾಡುತ್ತಾ, ತಾನು ಆಫೀಸಿಗೆ ಹೋಗಿ ಬರುವುದಷ್ಟೇ ಸರಿ ಎಂಬಂತೆ ನೋಡಿಕೊಳ್ಳುತ್ತಿದ್ದರು. ಒಂದು ದಿನವಾದರೂ ಮಗು ಹುಷಾರು ತಪ್ಪಿದಾಗ ತಾನು ನಿದ್ದೆಗೆಟ್ಟವಳಲ್ಲ. ಅವನು ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದಾಗಲೂ ರಜೆ ಹಾಕಿ ಅಲೆದಾಡಲಿಲ್ಲ. ಎಲ್ಲವನ್ನೂ ಅವರೇ ನಿರ್ವಹಿಸಿದ್ದರು. ಮಗು ಸಹ ಸದಾ ಅಜ್ಜಿಯ ಸೆರಗು ಹಿಡಿದೇ ಓಡಾಡುತ್ತಿದ್ದ. ಅಜ್ಜಿ ಬಿಟ್ಟಿರಲಾಗದ ಮಗುವನ್ನು ಕೋಪದಲ್ಲಿ ತಾನು ಎಷ್ಟು ಸಲ ಬಾರಿಸಿದ್ದೇನೋ… ಅಕ್ಕಂದಿರು ತವರಿಗೆ ಬರ್ತೀಯಾ ಅಂದಾಗ ಇದನ್ನೆಲ್ಲ ಮನಸ್ಸಿನಲ್ಲಿಟ್ಟುಕೊಂಡೇ ಯೋಚನೆ ಮಾಡದೆ ಆಫೀಸಿಗೆ 3 ದಿನ ರಜೆ ಗೀಚಿ ಬಂದಿದ್ದಳು. ಈಗಲೂ ಅತ್ತೆ ಮೊಮ್ಮಗನನ್ನು ಶಾಲೆಗೆ ಕಳುಹಿಸಿ, ಅವರೇ ಊಟ ತೆಗೆದುಕೊಂಡು ಹೋಗಿದ್ದರು.
ತನಗೆ ಅಮ್ಮನ ಸುಖ ಮುಖ್ಯ. ದೊಡ್ಡಮ್ಮ ಅವರನ್ನು ಕಾಡಿದರೆಂದು ಮನೆಗೆ ಕರೆತರಬೇಡಿ ಅಂದೆ. ಅದೇ ತರಹ ಗಂಡ ಆನಂದ್‌ಗೂ ತನ್ನ ತಾಯಿ ಮುಖ್ಯ ಅಲ್ಲವೇ? ಮಗಳು ಒಬ್ಬಳನ್ನು ಬಿಟ್ಟರೆ ಆ ತಾಯಿಗೆ ತಾನೇ ಬೇರಾರು ಇದ್ದಾರೆ? ತನಗೆ ಮಾತ್ರ ಅಮ್ಮ ಕಷ್ಟಪಡಬಾರದು, ಆದರೆ ಅತ್ತೆ ಕಷ್ಟಪಡಬಹುದೇ….? ಮುಂದೆ ತನಗೂ ದೊಡ್ಡಮ್ಮನ ಗತಿಯೇ ಬಂದರೆ? ಆಗ ತಾನು ಮುದಿತನದಲ್ಲಿ ಹಿರಿ, ಕಿರಿ ಅಕ್ಕಂದಿರ ಮನೆಗೆ ಎಡತಾಕಲೇ? ಇದೆಲ್ಲ ನೆನಪಾಗಿ ಅವಳ ಮನಸ್ಸು ಪಶ್ಚಾತ್ತಾಪದಿಂದ ನೊಂದುಹೋಯ್ತು.
ಮಾರನೇ ದಿನ ಎಲ್ಲರೂ ಎದ್ದು, ನಿಧಾನವಾಗಿ ತಿಂಡಿ ಮುಗಿಸಿದಾಗ 10 ಗಂಟೆ ದಾಟಿತ್ತು. ತಕ್ಷಣ ದಿವ್ಯಾ ತನ್ನ ಸೂಟ್‌ಕೇಸ್ ಸರಿಪಡಿಸಿಕೊಂಡು ಬೆಂಗಳೂರಿಗೆ ಹೊರಡುತ್ತೀನಿ ಅಂದಳು.
“ಏನಾಯ್ತೇ ದಿವ್ಯಾ….? ಏನಾದ್ರೂ ಫೋನ್ ಬಂತೇನು ಮನೆಯಿಂದ? ನಿನ್ನ ಯಜಮಾನ್ರು, ಅತ್ತೆ ಹುಷಾರಾಗಿದ್ದಾರೆ ತಾನೇ?” ಎಲ್ಲರನ್ನೂ ಸಮಾನವಾಗಿ ಪ್ರೀತಿಸುವ ಆ ತಾಯಿಯ ಮಗಳೇನಾ ತಾನು ಎಂದು ಅವಳಿಗೆ ಭೂಮಿಗಿಳಿದು ಹೋದಷ್ಟು ದುಃಖವಾಯಿತು.
“ಇಲ್ಲಮ್ಮ…. ಇದುವರೆಗೂ ಯಾವುದೂ ಸರಿ ಇರಲಿಲ್ಲ. ಎಲ್ಲರ ಜೊತೆ ನಿನ್ನೆ ಇಲ್ಲಿಗೆ ಬಂದು ನಾನು ದೊಡ್ಡ ಅನುಭವದ ಪಾಠ ಕಲಿತಿದ್ದೇನೆ. ದೊಡ್ಡಮ್ಮ ನಿನ್ನನ್ನು ಗೋಳಾಡಿಸಿದಂತೆ ನಮ್ಮತ್ತೆಯನ್ನು ನಾನೂ ಹುರಿದು ಮುಕ್ಕಿದ್ದೇನೆ…. ಇನ್ನು ಮುಂದೆ ಆ ತಪ್ಪು ಮಾಡಲ್ಲ. ಮದರ್ಸ್ ಡೇ ಅಂದ್ರೆ ಹೆತ್ತಮ್ಮ ಮಾತ್ರ ಸುಖವಾಗಿರಬೇಕು ಅಂತಲ್ಲ, ಮಗಳಂತೆಯೇ ಪ್ರೀತಿಸುವ, ಆದರಿಸುವ ಅತ್ತೆಯೂ ಅಮ್ಮನೇ ಅಲ್ಲವೇ? ಆ ಅಮ್ಮನ ಜೊತೆ ಇನ್ನು ಮುಂದೆ ಸರಿಯಾಗಿ ನಡೆದುಕೊಂಡು ಪ್ರತಿದಿನ ಅವರಿಗೆ ಮದರ್ಸ್ ಡೇ ತರಹದ ನೆಮ್ಮದಿ ಕೊಡಬೇಕೂಂತ ಇದ್ದೇನೆ. ಬರ್ತೀನಮ್ಮ…..” ಎಂದಾಗ ಎಲ್ಲರಿಗೂ ಪರಿಸ್ಥಿತಿಯ ಅರಿವಾಗಿತ್ತು. ಶಾಲಿನಿ, ಮಾಧವಿ ಅವಳ ಕೈ ಹಿಡಿದು ಸಮಾಧಾನಪಡಿಸಿದರು. ರಾಧಮ್ಮ ಅವಳನ್ನು ಉಳಿಯುವಂತೆ ತಡೆಯದೆ ಕುಂಕಮ ಕೊಟ್ಟು ಕಳುಹಿಸಿದರು. ದಿವ್ಯಾಳ ಪಶ್ಚಾತ್ತಾಪ ಕಣ್ಣೀರಾಗಿ ಹರಿದಿತ್ತು.