ಅದನ್ನೇನು `ಲವ್ ಅಟ್ ಫಸ್ಟ್ ಸೈಟ್' ಎನ್ನುವುದಕ್ಕೂ ಆಗುವುದಿಲ್ಲ. ಅನಿತಾ, ಆಕಾಶನನ್ನು ಇಷ್ಟಪಡುತ್ತಿದ್ದುದಕ್ಕೆ ಕಾರಣ ಅವನು ಇತರರಿಗಿಂತ ವಿಭಿನ್ನ, ಮಾತನಾಡುವವನಾದರೂ ಅಷ್ಟೇನೂ ಗಟ್ಟಿಯಾಗಿರುತ್ತಿರಲಿಲ್ಲ. ಅಲ್ಲದೆ, ಎದುರಿಗಿರುವ ವ್ಯಕ್ತಿ ಏನು ಹೇಳುತ್ತಿದ್ದಾರೆ ಎನ್ನುವುದನ್ನು ಕೇಳಿಸಿಕೊಳ್ಳುವ ತಾಳ್ಮೆ ಅವನಲ್ಲಿತ್ತು.
ಅನಿತಾಳ ಗೆಳತಿ ವಿಮಲಾ ತನ್ನ ಪ್ರಮೋಷನ್ ಸಲುವಾಗಿ ಅನಿತಾ ಹಾಗೂ ಆಕಾಶ್ ಸೇರಿದಂತೆ ಕೆಲವೇ ಮಂದಿಗೆ ಔತಣ ಕೂಟ ಏರ್ಪಡಿಸಿದ್ದಳು. ಅನಿತಾ ಮತ್ತು ವಿಮಲಾ ಅಕ್ಕಪಕ್ಕದ ಮನೆಯವರಾಗಿದ್ದು, ಶಾಲಾ ದಿನಗಳಿಂದಲೂ ಒಳ್ಳೆಯ ಸ್ನೇಹಿತರಾಗಿದ್ದರು. ನಂತರದಲ್ಲಿ ವಿಮಲಾ ಸಾಫ್ಟ್ ವೇರ್ ಎಂಜಿನಿಯರಿಂಗ್ ಸೇರಿದರೆ, ಅನಿತಾ ಫೈನಾನ್ಸ್ ನಲ್ಲಿ ಪದವಿ ಪಡೆದಳು. ಅದೇ ರೀತಿ ಆಕಾಶ್ ಮತ್ತು ಮೋಹನ್ ಚಿಕ್ಕ ವಯಸ್ಸಿನಿಂದಲೂ ಗೆಳಯರಾಗಿದ್ದು, ಒಂದೇ ವಿಷಯ ಓದಿದ್ದರು. ಅದೃಷ್ಟಕ್ಕೆ ಒಂದೇ ಸಂಸ್ಥೆಯಲ್ಲಿ ಇಬ್ಬರಿಗೂ ಕೆಲಸ ಸಿಕ್ಕಿತು. ಆಕಾಶ್ ಔತಣ ಮುಗಿಸಿ ಹೊರಡುವ ಮುನ್ನ ಅನಿತಾಗೆ `ಬೈ' ಹೇಳಲು ತಿರುಗಿದಾಗ ಇಬ್ಬರಿಗೂ ಅಚ್ಚರಿಯಾಗಿತ್ತು. ಇದಾದ ಹದಿನೈದು ದಿನಗಳ ಬಳಿಕ ಇಬ್ಬರೂ ಊಟದ ಸಮಯದಲ್ಲಿ ಭೇಟಿಯಾದರು.
``ನಿನ್ನ ಊಟ ಆಯಿತಾ?'' ಆಕಾಶ್ ಅನಿತಾಳನ್ನು ಕೇಳಿದ.
``ಇನ್ನೂ ಇಲ್ಲ.''
``ಸರಿ ನಾವಿಬ್ಬರೂ ಒಟ್ಟಿಗೇ ಊಟಕ್ಕೆ ಹೋಗಿ,, ಅಲ್ಲೇ ಮಾತನಾಡೋಣ.....''
``ಎಲ್ಲಿಯೋ ಹೊರಗೆ ಹೋಗುವುದಕ್ಕಿಂತ ಇಲ್ಲಿಯೇ ಮಾಡೋಣ. ನಾನು ಕ್ಯಾಂಟೀನ್‌ನಿಂದ ಊಟ ತರಿಸುತ್ತೇನೆ. ನಾವಿಬ್ಬರೂ ಟೆರೇಸ್ ಮೇಲೆ ಹೋಗೋಣ,'' ಎಂದಳು ಅನಿತಾ.
``ನಿನ್ನ ಕ್ಯಾಬಿನ್‌ನಲ್ಲಿಯೇ ಸುರಕ್ಷತೆ ಇಲ್ಲ ಎಂದ ಮೇಲೆ ಟೆರೇಸ್‌ಗೆ ಹೋಗಿ ಮಾತನಾಡುವುದು ಅದೆಷ್ಟರ ಮಟ್ಟಿಗೆ ಸುರಕ್ಷಿತ?''
ಕೆಲವು ಕ್ಷಣಗಳ ಮಾತುಕತೆಯ ನಂತರ ಅನಿತಾ, ಆಕಾಶ್‌ನನ್ನು ಟೆರೇಸ್‌ಗೆ ಕರೆದೊಯ್ದಳು. ``ನೀನೂ, ವಿಮಲಾ ಒಳ್ಳೆಯ ಗೆಳೆತಿಯರಲ್ಲವೇ? ವಿಮಲಾ ನಿಜವಾಗಿಯೂ ಮೋಹನನನ್ನು ಇಷ್ಟಪಡುತ್ತಿದ್ದಾಳೆಯೇ?'' ಎಂದ ಆಕಾಶ್.
ಅನಿತಾಗೆ ಒಮ್ಮೆಲೇ ಅಚ್ಚರಿಯಾಯಿತು. ವಿಮಲಾ ಇದುವರೆಗೂ ಯಾರಿಗೂ, ತನಗೂ ತಿಳಿಸದ ವಿಚಾರ ಆಕಾಶ್‌ಗೆ ತಿಳಿದಿದ್ದಾದರೂ ಹೇಗೆ? ವಿಮಲಾಳ ವರ್ತನೆಯಿಂದ ಅವಳು ಮೋಹನ್‌ನನ್ನು ಪ್ರೀತಿಸುತ್ತಿರುವಳೆಂದು ಊಹಿಸಿದ್ದಳು. ಆ ಕ್ಷಣ ಅವಳು ಅಪ್ರಯತ್ನವಾಗಿ ಆಕಾಶ್‌ನತ್ತ ನೋಡಿದಳು.
``ಇರಬಹುದು. ನನಗೆ ಅದರ ಕುರಿತು ಏನೂ ಗೊತ್ತಿಲ್ಲ,'' ಎಂದಳು.
``ಮೋಹನ್ ಕೂಡಾ ನನಗೆ ಏನೂ ಹೇಳಲಿಲ್ಲ. ಆದರೆ ಅವನು ವಿಮಲಾಳನ್ನು ಪ್ರೀತಿಸುತ್ತಿದ್ದಾನೆ. ಇಬ್ಬರೂ ಒಟ್ಟಿಗಿರುವುದನ್ನು ನಾನೇ ನೋಡಿದ್ದೇನೆ. ಮೋಹನ್ ಅವರ ಮನೆಯಲ್ಲಿ ಯಾವ ಸಮಸ್ಯೆಗಳಿಲ್ಲ. ಅವನು ವಿಮಲಾಳನ್ನು ಮದುವೆಯಾಗಲು ಯಾವ ಆತಂಕ ಇಲ್ಲ. ಆದರೆ ವಿಮಲಾ ಬಗ್ಗೆ ಹೇಗೆ.....?''
``ಅವಳ ಮನೆಯಲ್ಲಿಯೂ ಯಾವ ಸಮಸ್ಯೆ ಇಲ್ಲ. ಅವಳ ಅಮ್ಮ ಅಪ್ಪ ಉದವಾರ ಮನಸ್ಸಿನವರು. ಮೋಹನ್‌ನಂತಹ ಒಳ್ಳೆಯ ಹುಡುಗನನ್ನು ಮದುವೆಯಾಗಲು ಅವರು ಬೇಡವೆನ್ನಲಾರರು.''
``ಹೌದಾ? ಹಾಗಾದರೆ ನಾವು ಅವರಿಗೆ ನೆರವಾಗಬೇಕು. ಆಫೀಸಿನ ಹೊರಗೆ ಅವರ ಭೇಟಿಗೆ ಅವಕಾಶ ನೀಡಬೇಕು.''
``ಹೇಗೆ? ನಾವೇನು ಪ್ರತೀ ವಾರಾಂತ್ಯದಲ್ಲಿ ವಿಹಾರ ಹೋಗುವುದಿಲ್ಲವಲ್ಲ....''
``ಅದೂ ಸರಿ. ನೀನು ವಿಮಲಾ ಸಾಮಾನ್ಯವಾಗಿ ವಾರಾಂತ್ಯದಲ್ಲಿ ಏನು ಮಾಡುತ್ತೀರಿ?''
``ಶಾಪಿಂಗ್, ಸಿನಿಮಾ ಹೀಗೆ ಎಲ್ಲಾದರೂ ಹೋಗುತ್ತೇವೆ.''
``ಹಾಗಾದರೆ ನಾವೆಲ್ಲಾ ಸಿನಿಮಾಗೆ ಹೋದರೆ ಹೇಗೆ? ನಾನು ಮೋಹನನನ್ನೂ ಕರೆತರುತ್ತೇನೆ.''