ರಾಜೇಶ್ ಕಾಲೇಜಿನಲ್ಲಿ ಬಹಳ ದಿನಗಳಿಂದ ಶೃತಿಯನ್ನು ಕಂಡಿದ್ದ. ಆದರೆ ಇವರಿಬ್ಬರ ನಡುವೆ ಯಾವ ರೀತಿಯಲ್ಲಿಯೂ ಪರಿಚಯವಿರಲಿಲ್ಲ. ಆದರೆ ಕಾಲೇಜ್ ಡೇ ಕಾರ್ಯಕ್ರಮಕ್ಕೆ ನಾಟಕ ತಯಾರಿ ನಡೆಯುತ್ತಿತ್ತು. ಆಗ ಇಬ್ಬರೂ ಭೇಟಿಯಾಗುತ್ತಿದ್ಜರು. ಈ ಭೇಟಿ ಇಬ್ಬರಲ್ಲೂ ಒಂದು ರೀತಿಯ ಸ್ನೇಹವನ್ನು ಬೆಸೆಯಿತು. ದಿನಗಳು ಉರುಳಿದಂತೆ ಅವರ ನಡುವಿನ ಸ್ನೇಹ, ಪ್ರೀತಿಯಾಗಿ ಮಾರ್ಪಟ್ಟಿತು.
ದಿನಗಳು ಸರಿದವು, ರಾಜೇಶ್ ತನ್ನ ಎಂಬಿಎ ವ್ಯಾಸಂಗ ಪೂರೈಸಿದ. ಶೃತಿ ತನ್ನ ಪದವಿ ವ್ಯಾಸಂಗ ಮುಗಿಸಿದಳು. ಅದೊಂದು ದಿನ ಕಾಲೇಜಿನ ಹತ್ತಿರವಿದ್ದ ಕಾಫಿ ಶಾಪ್‌ನಲ್ಲಿ ಇಬ್ಬರೂ ಸಂಧಿಸಿದರು.
``ಏನಾದರೂ ಗುಡ್ ನ್ಯೂಸ್ ಇದೆಯಾ? ನಿನ್ನ ಮುಖದಲ್ಲಿ ಏನೋ ವಿಶೇಷ ಕಾಣಿಸುತ್ತಿದೆ,'' ರಾಜೇಶನ ಮುಖದಲ್ಲಿನ ಸಂತೋಷವನ್ನು ಗುರುತಿಸುತ್ತಾ ಕೇಳಿದಳು ಶೃತಿ.
``ನನಗೆ ಕೆಲಸ ಸಿಕ್ಕಿದೆ,'' ರಾಜೇಶ್ ಉಲ್ಲಾಸದಿಂದ ಉತ್ತರವಿತ್ತ.
``ಕೆಲಸ! ಎಲ್ಲಿ?''
``ಮುಂಬೈನ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ. ಇನ್ನು ಹತ್ತು ದಿನಗಳಲ್ಲಿ ಕೆಲಸಕ್ಕೆ ಹಾಜರಾಗುವಂತೆ ಕರೆದಿದ್ದಾರೆ.''
ಶೃತಿಯ ಮುಖ ನಿರಾಶೆಯಿಂದ ಕಪ್ಪಿಟ್ಟಿತು.
``ಕಂಗ್ರಾಟ್ಸ್ ರಾಜೇಶ್...'' ಯಾಂತ್ರಿಕವಾಗಿ ಪ್ರತಿಕ್ರಿಯಿಸಿದಳು. ಅವಳ ಮುಖದಲ್ಲಿನ ಬೇಸರವನ್ನು ಗುರುತಿಸಿದ ರಾಜೇಶ್, ``ಏನಾಯ್ತು? ಈ ಸುದ್ದಿ ಕೇಳಿ ನಿನಗೆ ಖುಷಿ ಆಗಿಲ್ಲವೇ?'' ಕೇಳಿದ.
ಶೃತಿ ಮೌನವಾಗಿಯೇ ಇದ್ದಳು. ರಾಜೇಶ್ ಪುನಃ ಅದೇ ಪ್ರಶ್ನೆಯನ್ನು ಕೇಳಿದಾಗ, ``ಇಲ್ಲೇ ಆಗಿದ್ದರೆ ನಾವು ಆಗಾಗ ಭೇಟಿಯಾಗುತ್ತಿದ್ದೆ. ನೀನು ಮುಂಬೈ ಸೇರಿದರೆ....'' ವಿಷಾದದಿಂದ ನುಡಿದ ಶೃತಿ ರಾಜೇಶನತ್ತ ನಿರಾಸೆಯ ನೋಟ ಬೀರಿದಳು.
``ನಾನೂ ಬೆಂಗಳೂರಿನಲ್ಲಿ ಕೆಲಸಕ್ಕಾಗಿ ಬಹಳ ಪ್ರಯತ್ನಿಸಿದೆ. ಆದರೆ ಎಲ್ಲೂ ನನಗೆ ಉತ್ತಮ ಪ್ರತಿಕ್ರಿಯೆ ದೊರೆಯಲಿಲ್ಲ. ಇದು ನನಗೆ ಸಿಕ್ಕಿರೋ ಮೊದಲ ಕೆಲಸ. ನಾನಿದನ್ನು ಕಳೆದುಕೊಳ್ಳಲಾರೆ. ಕೆಲವು ದಿನಗಳ ಕಾಲ ಕೆಲಸ ಮಾಡಿ, ಅನುಭವ ಗಳಿಸಿಕೊಂಡಲ್ಲಿ ಮುಂದೆ ಬೆಂಗಳೂರಿನಲ್ಲಿ ಉದ್ಯೋಗ ಹಿಡಿಯೋಕೆ ನನಗೂ ಅನುಕೂಲವಾಗುತ್ತದೆ,'' ಅವನು ಅವಳ ಕೈಗಳನ್ನು ತನ್ನ ಕೈಯಲ್ಲಿ ಹಿಡಿದು, ``ನಾನು ಬೆಂಗಳೂರಿನಲ್ಲಿರಲಿ, ಮುಂಬೈನಲ್ಲಿರಲಿ ನನ್ನ ಮನಸ್ಸು ಪೂರ್ತಿಯಾಗಿ ನಿನ್ನ ಬಳಿಯೇ ಇರುತ್ತದೆ,'' ಎಂದು ಭರವಸೆ ಇತ್ತ.
``ನನ್ನದೂ ಸಹ,'' ಎಂದಳು ಶೃತಿ.
ರಾಜೇಶ್ ಮುಂಬೈಗೆ ತೆರಳಿದ ನಂತರ ಶೃತಿ ಏಕಾಂಗಿತನವನ್ನು ಅನುಭವಿಸುತ್ತಿದ್ದಳು. ರಾಜೇಶನಿಂದ ಫೋನ್ ಬಂದಾಗ ಮಾತ್ರವೇ ಅವಳ ಮುಖದಲ್ಲಿ ಕಾಂತಿ ಉಕ್ಕುತ್ತಿತ್ತು. ದಿನಗಳು ಉರುಳಿದವು. ಏನೂ ಕೆಲಸವಿಲ್ಲದೆ ಮನೆಯಲ್ಲಿಯೇ ಕುಳಿತು ಶೃತಿಗೂ ಬೇಸರವಾಗತೊಡಗಿತು. ಅವಳು ಮುಂದೆ ಎಂ.ಸಿ.ಎ. ವ್ಯಾಸಂಗವನ್ನು ಮುಂದುವರಿಸಲು ನಿರ್ಧರಿಸಿದಳು.
ಮೂರು ವರ್ಷಗಳು ಕಳೆದವು. ಅದೊಂದು ದಿನ ರಾಜೇಶ್ ಬೆಳಗಿನ ಉಪಾಹಾರವನ್ನು ಮಾಡುತ್ತಿದ್ದಾಗ ಅವನ ಫೋನ್ ರಿಂಗಾಯಿತು. ಫೋನ್ ಎತ್ತಿಕೊಂಡೊಡನೆ ಅತ್ತ ಕಡೆಯಿಂದ ಅವನ ತಾಯಿ ಉದ್ವೇಗ ತುಂಬಿದ ದನಿಯಿಂದ ``ಹಲೋ... ನಿನ್ನ ಅಪ್ಪಾಜಿ ಆಸ್ಪತ್ರೆಯಲ್ಲಿದ್ದಾರೆ... ಅವರು ನಿನ್ನನ್ನು ನೋಡಬೇಕೆಂದಿದ್ದಾರೆ. ಬೇಗನೆ ಹೊರಟು ಬಾ...'' ಎಂದಷ್ಟೇ ಹೇಳಿ ರಿಸೀವರ್‌ಕೆಳಗಿಳಿಸಿದರು.
`ಕಳೆದ ವಾರವಷ್ಟೇ ನಾನು ಮಾತನಾಡಿದಾಗ ಅಪ್ಪಾಜಿ ಆರೋಗ್ಯದಿಂದ ಗಟ್ಟಿಮುಟ್ಟಾಗಿದ್ದರಲ್ಲ....?' ಎಂದುಕೊಳ್ಳುತ್ತಾ ರಾಜೇಶ್‌ಸನಿಹದಲ್ಲಿದ್ದ ಕುರ್ಚಿಯಲ್ಲಿ ಕುಸಿದು ಕುಳಿತ. ಮರುದಿನ ರಾಜೇಶ್ ಬೆಂಗಳೂರು ತಲುಪಿದ.