ಕಳೆದ ರಾತ್ರಿ ಪತಿ ನವೀನ್ ನಡೆದುಕೊಂಡ ರೀತಿಯಿಂದ ಆಶಾ ಬಹಳ ಕೋಪಗೊಂಡಿದ್ದಳು. ಅವಳು ಮುಖ್ಯಮಂತ್ರಿಗಳ ಪ್ರಮುಖ ಪಿ.ಎ ಆಗಿದ್ದಳು. ಅವರ ಪ್ರೆಸ್ ಕಾನ್‌ಫರೆನ್ಸ್ ಇರುವಾಗ, ಜನ ಸಂಪರ್ಕ ಅಧಿಕಾರಿಯಾಗಿ ಪಬ್ಲಿಕ್‌ಗೆ ಜವಾಬು ನೀಡಲಾಗದೆ, ಗಂಡ ಫೋನ್ ಮಾಡಿ ಕರೆದನೆಂದು ತಕ್ಷಣ ಮನೆಗೆ ಓಡಿಬರಲಾಗುವುದೇ?
ಆದರೆ ನವೀನನಿಗೆ ಇಂಥದ್ದನ್ನೆಲ್ಲ ಕೇಳಿಸಿಕೊಳ್ಳಲು ಸ್ವಲ್ಪ ಸಹನೆ ಇರಲಿಲ್ಲ. ಅಂತೂ ಅವಳು ಕೆಲಸ ಮುಗಿಸಿ ಮನೆಗೆ ಬಂದು ಇಳಿಯುವಷ್ಟರಲ್ಲಿ 11 ಗಂಟೆ ದಾಟಿತ್ತು. ಅವಳು ಏನು ತಾನೇ ಮಾಡಿಯಾಳು? ಮುಖ್ಯಮಂತ್ರಿಗಳಿಗೆ ವಿದಾಯ ಕೋರಿ ಹೊರಡುವಷ್ಟರಲ್ಲಿ 10 ದಾಟಿತ್ತು. ಬೆಂಗಳೂರಿನ ಈ ಹಾಳು ಟ್ರಾಫಿಕ್ ಮಧ್ಯೆ ಸಿಕ್ಕಿಕೊಂಡು ಕಾರಿನಲ್ಲಿ ಮನೆಗೆ ಬಂದು ಸೇರಲು 1 ಗಂಟೆ ಕಾಲ ಬೇಡವೇ?
ನವೀನ್ ನಡುನಡುವೆ ಕೋಪಗೊಂಡು ಸಿಡುಕುತ್ತಾ ಫೋನ್ ಮಾಡುತ್ತಿದ್ದ. ಪ್ರೆಸ್ ಮೀಟ್ ಮುಗಿದು ಊಟ ಇದ್ದರೂ, ಅವಳಿಗೆ ಒಂದು ತುತ್ತೂ ಗಂಟಲಲ್ಲಿ ಇಳಿಯದೆ ಬೇಗ ಎದ್ದು ಹೊರಟಿದ್ದಳು. ದಿನವಿಡೀ ದುಡಿದು ಸಾಕಾಗಿ, ಹಸಿದ ಹೊಟ್ಟೆಯಲ್ಲಿ ಅವಳು ನಡುರಾತ್ರಿ ಮನೆ ಸೇರಿದರೆ ಅವನ ಸಿಡುಕಾಟಕ್ಕೆ ಉತ್ತರಿಸಬೇಕಿತ್ತು.
ಇದೇ ಮದುವೆಗೆ ಮೊದಲಾಗಿದ್ದಿದ್ದರೆ ಅಷ್ಟು ತಡವಾಗಿ ಮನೆಗೆ ಬಂದ ಮಗಳನ್ನು ತವರಿನಲ್ಲಿ ಅಮ್ಮ ಎಷ್ಟು ಪರಿಯಲ್ಲಿ ಸಂತೈಸುತ್ತಿದ್ದರು..... ಅಪ್ಪಾಜಿ ಎಷ್ಟೋ ಸಲ ಹೊರಗಿನ ಮೀಟಿಂಗ್ ಸ್ಪಾಟ್‌ಗೆ ಬಂದು, ಕಾದು ಅವಳನ್ನು ಮನೆಗೆ ಕರೆತರುತ್ತಿದ್ದರು. ಹಸಿವಿಲ್ಲ ಬೇಡ ಎಂದರೂ ಕೇಳದೆ, ತಾಯಿ ಮೊಸರನ್ನ ಕಲಸಿ ಕೈಗೆ ತುತ್ತು ಹಾಕುತ್ತಿದ್ದರು. ಆದರೆ ಇಲ್ಲಿ.....?
ಬಾಗಿಲು ತೆರೆದವನೇ ಪತಿ ಸಿಡುಕಿದ್ದ, ``ಇದಾ ಮನೆಗೆ ಬರುವ ಹೊತ್ತು? ರಾತ್ರಿ 12 ಗಂಟೆ ಆಗಿದೆ ಎಂಬ ಅರಿವಿದೆಯೇ?''
``ಇವತ್ತು ಸಿ.ಎಂ ಅವರ ಪ್ರೆಸ್ ಕಾನ್‌ಫರೆನ್ಸ್ ಇತ್ತು ಅನ್ನೋದು ನಿಮಗೆ ಚೆನ್ನಾಗೇ ಗೊತ್ತಿದೆಯಲ್ಲವೇ? ನಿಮ್ಮ ಕೋಪಕ್ಕೆ ಹೆದರಿ ನಾನು ಅಲ್ಲಿ ಊಟ ಸಹ ಮಾಡದೆ ಹಾಗೇ ಓಡಿ ಬಂದೆ ಗೊತ್ತಾ? ಇಲ್ಲಿ ನೀವು ನೋಡಿದರೆ...... ಒಳ್ಳೆ.....'' ಆಶಾಳಿಗೆ ಅಳು ಬಂದುಬಿಟ್ಟಿತ್ತು.
``ಬಿಡು ಬಿಡು..... ನಿನಗೆಲ್ಲಿಯ ಹಸಿವು..... ಅಲ್ಲಿ ನಿನ್ನನ್ನು ಕಂಡು ಅಭಿಮಾನಿಸುವವರ ಸಂಖ್ಯೆ ಅಪಾರವಾಗಿರುವಾಗ ಹೊಟ್ಟೆಯ ಹಸಿವಿಗೆ ಅಕಾಶವೆಲ್ಲಿ? ನಾನೂ ಬೇಕಾದಷ್ಟು ಪ್ರೆಸ್ ಕಾನ್‌ಫರೆನ್ಸ್ ಅಟೆಂಡ್ ಮಾಡಿದ್ದೀನಿ ಬಿಡು, ಹೆಂಗಸರನ್ನು ಅದರಲ್ಲಿ ಯಾಕೆ ಸೇರಿಸಿಕೊಳ್ಳುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಷಯ...... ಆ ಸಭೆಯ ಶೋಪೀಸ್ ಆಗಿದ್ದೆ ಅನ್ನು......''
``ಥೂ..... ಇಂಥ ನೀಚ ಮಾತುಗಳನ್ನು ಆಡುವುದಕ್ಕೆ ನಿಮಗೆ ಹೇಗಾದರೂ ಮನಸ್ಸು ಬರುತ್ತದೆ? ಕಟ್ಟಿಕೊಂಡ ಹೆಂಡತಿ ಅನ್ನುವ ಅಭಿಮಾನವಿಲ್ಲದೆ ಬಾಯಿಗೆ ಬಂದಂತೆ ಮಾತನಾಡಬೇಡಿ..... ಕೆಲಸಕ್ಕೆ ಅಂತ ಹೊರಗೆ ಹೋದ ಮೇಲೆ ಸಮಯದ ಕಂಟ್ರೋಲ್ ನಮ್ಮ ಕೈಯಲ್ಲಿರುತ್ತೇನು.....?'' ಒಲ್ಲದ ಗಂಡ ಸದಾ ಮೊಸರಿನಲ್ಲಿ ಕಲ್ಲು ಹುಡುಕುವವನೆಂದು ವಾದ ಬೆಳೆಸದೆ ಒಳಗೆ ಹೋದಳು.
ಇಂಥ ವ್ಯಂಗ್ಯದ ಮಾತುಗಳಿಂದಾಗಿ ಅವಳ ಹಸಿವು ಅಲ್ಲೇ ಸತ್ತುಹೋಯಿತು. ಸಿಡಿಯುತ್ತಿದ್ದ ತಲೆ ಒತ್ತಿಕೊಳ್ಳುತ್ತಾ ಒಂದಿಷ್ಟು ಬಿಸಿ ಬಿಸಿ ಕಾಫಿ ಮಾಡಿ, ಕೈಯಲ್ಲಿ ಕಪ್ ಹಿಡಿದು ಮಕ್ಕಳ ಕೋಣೆಗೆ ಹೋದಳು. ಇಬ್ಬರು ಮಕ್ಕಳೂ ಗಾಢ ನಿದ್ದೆಯಲ್ಲಿ ಮುಳುಗಿದ್ದರು. ಆಗ ಆಶಾಳಿಗೆ ಉಸಿರು ಬಂತು. ನವೀನನ ಕೋಪ, ಸಿಟ್ಟು ದಿನೇದಿನೇ ಮಿತಿಮೀರುತ್ತಿತ್ತು. ಯಾವುದೇ ಅಫಿಶಿಯಲ್ ಕಾಲ್ ಇರಲಿ, ಅಕಸ್ಮಾತ್ ಅವನು ಮನೆಯಲ್ಲಿದ್ದರೆ, ಇವಳ ಮೊಬೈಲ್‌ನ್ನು ತಾನೇ ತೆಗೆದುಕೊಂಡು ಕಾಲ್ ಮಾಡಿದವರ ಜಾತಕ ಜಾಲಾಡಿಬಿಡುತ್ತಿದ್ದ. ಯಾರು? ಎಲ್ಲಿಂದ? ಯಾವಾಗ? ಎನ್ನುತ್ತಿದ್ದ. ಫೋನ್ ಮಾಡಿದವರು ಯಾಕಾಗಿ ಮಾಡಿದೆವೋ ಎಂದು ಮತ್ತೊಮ್ಮೆ ಮಾಡುತ್ತಲೇ ಇರಲಿಲ್ಲ.