ಅಂದು 10 ವರ್ಷದ ನಂತರ ಸೀಮಾ ಮತ್ತೆ ಅದೇ ಗಲ್ಲಿಯಲ್ಲಿ ಬಂದು ನಿಂತಿದ್ದಳು. ಇದೇ ಇಕ್ಕಟ್ಟಾದ ಓಣಿ ನಡುವೆ ಮುಂದೆ ಹೋದರೆ ಸಿಗುತ್ತಿತ್ತು ಅವಳು ವಾಸವಿದ್ದ ದೊಡ್ಡ ಬಂಗಲೆ. ಅಲ್ಲಿಯೇ ಅವಳ ಬಾಲ್ಯ ಕಳೆದದ್ದು, ಅವಳ ಕಿಶೋರಾಸ್ಥೆಯ ಮೊದಲ ಪ್ರೇಮ ಚಿಗುರಿ ಹೆಮ್ಮರವಾದದ್ದೂ.... ಅದು ಅವಳ ಮನಸ್ಸಿನಲ್ಲಿ ಆಳವಾಗಿ ಕೊರೆಯುತ್ತಿತ್ತು. ಅವಳ ಮನದಲ್ಲಿ ತೆರೆತೆರೆಯಾಗಿ ಅಂದಿನ ಘಟನೆಗಳು ಹಾದುಹೋದವು.
ಆ ನೆನಪುಗಳಿಂದ ಅವಳು ಬಂಧಿಯಾಗಿದ್ದಳು. ಅಲ್ಲಿಂದ ಹಾದು ಹೋಗುವಾಗ ಅವಳಿಗೆ ಮತ್ತೆ ಅದೇ ಹಳೆಯ ಪಾರ್ಕ್ ಕಾಣಿಸಿತು. ಸಣ್ಣ ಮಕ್ಕಳ ನಗು, ಕೇಕೆಯಿಂದ, ಅವರ ಆಟೋಟಗಳಿಂದ ಆ ಪಾರ್ಕು ಇಂದು ಶೋಭಾಯಮಾನವಾಗಿತ್ತು. ಪಾರ್ಕ್ ಹೊರಗೆ ಹಲವು ಫುಡ್ ಸ್ಟಾಲ್ ಇತ್ತು. ಹಿರಿಯರು ಮಕ್ಕಳಿಗೆ ಕೇಳಿದ್ದನ್ನು ಕೊಡಿಸುತ್ತಾ, ತಾವು ಸವಿಯುತ್ತಾ ಆನಂದವಾಗಿ ಹರಟುತ್ತಿದ್ದರು. ಇಂದಿನ ಹೆಂಗಸರು ಇಷ್ಟು ಸ್ವತಂತ್ರರಾಗಿ, ಹಾಯಾಗಿ ತಮಗೆ ಬೇಕಾದಂತೆ ಆರಾಮವಾಗಿ ಓಡಾಡಿಕೊಂಡಿದ್ದಾರೆ.
ಆದರೆ ತಾನು.... ಸದಾ ಅಮ್ಮ, ಅಜ್ಜಿ, ಅತ್ತೆ, ಚಿಕ್ಕಮಂದಿರ ಲಕ್ಷ್ಮಣರೇಖೆಯ ಸಂಪ್ರದಾಯಗಳನ್ನು ದಾಟಲಾರದೆ ಅಷ್ಟೇ ಚೌಕಟ್ಟಿನಲ್ಲಿ ತನ್ನ ಬದುಕನ್ನು ಕಂಡುಕೊಂಡಿದ್ದೆ ಎಂದು ಮಮ್ಮಲ ಮರುಗಿದಳು ಸೀಮಾ. ಸದಾ ಅಡುಗೆಮನೆಯ ಬಿಡುವಿಲ್ಲದ ಕೆಲಸಗಳು, ಪಾತ್ರೆ, ಬಟ್ಟೆ.... ಇಷ್ಟರ ಮಧ್ಯೆ ಅಲ್ಪಸ್ವಲ್ಪ ಬಿಡುವಾದರೆ ತಕ್ಷಣ ಅಜ್ಜಿ ಹಪ್ಪಳ, ಸಂಡಿಗೆ ಕೆಲಸ ಅಂಟಿಸುತ್ತಿದ್ದರು.
ಚಿಕ್ಕಮ್ಮಂದಿರು ಸದಾ ಅಮ್ಮನ ಹಿಂದೆ ಮುಂದೆ ಓಡಾಡಿಕೊಂಡಿರುತ್ತಿದ್ದರು. ಬಂದು ಹೋಗುವ ಸೋದರತ್ತೆಯರು ಏನಾದರೊಂದು ಡಿಮ್ಯಾಂಡ್ ಇಲ್ಲದೆ ಬರುತ್ತಿರಲಿಲ್ಲ. ತಮಗೂ ಈ ದುಡಿತದ ಮಧ್ಯೆ ಸ್ವಲ್ಪ ಬಿಡುವು ಬೇಕು ಎಂದು ಕೇಳುವ ಧೈರ್ಯ ಯಾರಿಗೂ ಇರಲಿಲ್ಲ. ಅಜ್ಜಿಯ ಸರ್ವಾಧಿಕಾರಿ ಧೋರಣೆ ಎದುರು ಯಾವುದೂ ನಡೆಯುತ್ತಿರಲಿಲ್ಲ. ಅಜ್ಜಿಯ ಆರೋಪಗಳಿಗೆ ಸದಾ ಸೀಮಾ, ಅವಳ ತಾಯಿ ರತ್ನಮ್ಮ ಈಡಾಗುತ್ತಿದ್ದರು.
ನೆಂಟರಿಷ್ಟರು, ಎಲ್ಲರ ಮಧ್ಯೆ ಸೀಮಾಳ ಸೌಂದರ್ಯ ಹೊಗಳಿಕೆಗೆ ಪಾತ್ರವಾಗಿದ್ದರೆ ಅಜ್ಜಿಯ ದೃಷ್ಟಿಯಲ್ಲಿ ಮಾತ್ರ ಸದಾ ಹಿಡಿಶಾಪಕ್ಕೆ ಗುರಿಯಾಗುತ್ತಿದ್ದಳು. ಸೀಮಾ ಹೈಸ್ಕೂಲು ದಾಟುವವರೆಗೂ ಅವಳಣ್ಣ ಶಾಲೆಗೆ ನೆರಳಾಗಿ ಹಿಂಬಾಲಿಸಿಕೊಂಡು ಕರೆದುಕೊಂಡು ಹೋಗಿ ಬರುತ್ತಿದ್ದ. ಅವಳು ಲೇಡೀಸ್ ಕಾಲೇಜು ಸೇರಿದ ಮೇಲೆಯೇ ತುಸು ಬಿಡುಗಡೆ ಕಂಡದ್ದು.
ಆ ಮನೆಯ 7 ಜನ ಮೊಮ್ಮಕ್ಕಳಲ್ಲಿ ಇವಳೊಬ್ಬಳೇ ಹೆಣ್ಣು ಕೂಸು. ಎಲ್ಲರೂ ಇವಳನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಆದರೆ ಅಷ್ಟೇ ಕಟ್ಟುನಿಟ್ಟಾದ ನಿಯಮಗಳು. ಇವಳ ತಂದೆಯೇ ಆ ಮನೆಗೆ ಹಿರಿಯಣ್ಣ. ಮೂವರು ತಮ್ಮಂದಿರೊಡನೆ ಕುಟುಂಬದ ಬಟ್ಟೆ ವ್ಯಾಪಾರದ ಗಡಿಬಿಡಿ ಸುಧಾರಿಸುವುದರಲ್ಲಿ ಹೈರಾಣಾಗುತ್ತಿದ್ದರು. ಅಷ್ಟು ಮಂದಿ ಅಣ್ಣಂದಿರಲ್ಲಿ ಯಾರೋ ಒಬ್ಬರು ಇವಳಿಗೆ ಸದಾ ಬೆಂಗಾವಲಾಗಿ ಹಿಂದೆ ಬಂದು ಶಾಲಾ ಕಾಲೇಜು ಬಾಗಿಲು ಮುಟ್ಟಿಸುವರು.
ಪರೀಕ್ಷೆ ಮುಗಿದ ನಂತರ ಬೇಸಿಗೆಯ ರಜಾ ದಿನಗಳ ಬಿಡುವು ಸಿಕ್ಕಾಗ ಅವಳಿಗೆ ನೆಮ್ಮದಿ ಎನಿಸುತ್ತಿತ್ತು. ಆಗ ಅಮ್ಮ ತವರಿಗೆ ಹೊರಡುತ್ತಿದ್ದಳು. ಅಲ್ಲಿ ಸೀಮಾ, ಅವಳಣ್ಣ ಶೇಖರ್ ಹೆಚ್ಚಿನ ಕಟ್ಟುಪಾಡುಗಳಿಲ್ಲದೆ, ಸ್ವತಂತ್ರ ಹಕ್ಕಿಗಳಾಗಿ ಆಡಿ ನಲಿಯುತ್ತಿದ್ದರು.