‌ಕಥೆ – ಜಿ. ಮಧುಮಿತಾ 

ಮಹೇಶನ ಇತ್ತೀಚಿನ ವರ್ತನೆ ಕಂಡು ತನುಜಾ ದಂಗಾಗಿದ್ದಳು. ಯಾವಾಗ ನೋಡಿದರೂ ಒಂದೇ ಮಾತು. `ತನು, ನನಗೆ ವಿಚ್ಛೇದನ ಬೇಕು, ಪರಸ್ಪರ ಒಪ್ಪಿಗೆಯಿಂದ ತೆಗೆದುಕೊಳ್ಳೋಣ,’ ವಿಚ್ಛೇದನಕ್ಕಾಗಿ ಒತ್ತಾಯ ಮಾಡಲು ಏನು ಕಾರಣ ಎನ್ನುವುದೇ ತನುಜಾಳಿಗೆ ತಿಳಿಯಲಿಲ್ಲ. ಆ ಬಗ್ಗೆ ಕೇಳಲು ಅವಳಿಂದಾಗಲಿಲ್ಲ. ಅವರು ತಾವಾಗಿಯೇ ಹೇಳಲಿ ಎಂದುಕೊಂಡು ಕೆಲಸದಲ್ಲಿ ತೊಡಗಿದಳು.

“ಮಹೇಶ್‌, ತಿಂಡಿ ರೆಡಿಯಾಗಿದೆ ಬನ್ನಿ,” ಎನ್ನುತ್ತಾ ತನುಜಾ ಡೈನಿಂಗ್‌ ಟೇಬಲ್ ಮೇಲೆ ತಿಂಡಿಯ ಪಾತ್ರೆಯನ್ನು ತಂದಿಟ್ಟಳು. ಆಫೀಸ್‌ಗೆ ಸಿದ್ಧವಾಗುತ್ತಿದ್ದ ಮಹೇಶ್‌ ಪತ್ನಿಯ ಕರೆ ಕೇಳಿದ ಕೂಡಲೇ ಬಂದು ಕುಳಿತ. ತನುಜಾ ಅವನ ತಟ್ಟೆಗೆ ತಿಂಡಿ ಬಡಿಸಿ ಅವನತ್ತ ನೋಡಿದಳು. ಬಹಳ ಆಸಕ್ತಿಯಿಂದ ಪತಿಯ ನೆಚ್ಚಿನ ಪೂರಿ ಪಲ್ಯ ಮಾಡಿದ್ದಳು. ಮಹೇಶ್‌ ಏನೂ ಮಾತನಾಡದೆ ಯಾಂತ್ರಿಕವಾಗಿ ತಿಂಡಿ ತಿಂದು ಮುಗಿಸಿದ. ಅವನ ಮುಖದಲ್ಲಿ ಏನೋ ಒಂದು ಬಗೆಯ ಕಳವಳ ಕಾಣುತ್ತಿತ್ತು.

“ನಾನು ಹೇಳಿದ ವಿಷಯದ ಬಗ್ಗೆ ಯೋಚನೆ ಮಾಡು…. ಮತ್ತೆ ಈ ದಿನ ನವೀನ್‌ನ ಸ್ಕೂಲ್‌ ವ್ಯಾನ್‌ ಬರುವುದಿಲ್ಲ. ನಾನು ಕಾರ್‌ ಕಳುಹಿಸಿಕೊಡುತ್ತೇನೆ. ನೀನು ಸ್ಕೂಲ್‌ಗೆ ಹೋಗಿ ಅವನನ್ನು ಕರೆದುಕೊಂಡು ಬಾ,” ಎಂದು ಹೇಳಿ ಮಹೇಶ್‌ ಹೊರನಡೆದ.

`ಇವರಿಗೇನಾಗಿದೆ….. ಒಂದು ಕಡೆ ವಿಚ್ಛೇದನದ ಮಾತನಾಡುತ್ತಾರೆ. ಇನ್ನೊಂದು ಕಡೆ ಮನೆ ಸಂಸಾರದ ಬಗ್ಗೆಯೂ ಯೋಚಿಸುತ್ತಾರೆ,’ ಎಂದು ಯೋಚಿಸುತ್ತಾ ತನುಜಾ ಉಳಿದ ಕೆಲಸ ಮುಗಿಸಲು ಒಳಗೆ ಹೋದಳು.  ಆದರೆ ಅವಳಿಗೆ ಮಾಡುತ್ತಿದ್ದ ಕೆಲಸದ ಕಡೆ ಗಮನವಿರಲಿಲ್ಲ.

`ವಿಚ್ಛೇದನಕ್ಕಾಗಿ ಇಷ್ಟೊಂದು ಕಾತುರರಾಗಿದ್ದಾರಲ್ಲ. ಈಗ ಅವರಿಗೆ ನನ್ನ ಮೇಲೆ ಪ್ರೀತಿಯೇ ಇಲ್ಲವೇ? ಕಳೆದ 12 ವರ್ಷಗಳಿಂದ ನಾವು ಎಷ್ಟು ಸಂತೋಷವಾಗಿ ಬಾಳಿದೆವು. ಅವರಿಗೆ ಎಂದೂ ನನ್ನ ಬಗ್ಗೆ ಬೇಸರ ಅಥವಾ ದೂರು ಇರಲಿಲ್ಲ. ನನ್ನ ಆರೋಗ್ಯದ ಬಗ್ಗೆ ಅದೆಷ್ಟು ಕಾಳಜಿ ವಹಿಸುತ್ತಿದ್ದರು….’

ವಿವಾಹವಾದ 3 ವರ್ಷಕ್ಕೆ ತನ್ನ ಗರ್ಭದಲ್ಲಿ ಮತ್ತೊಂದು ಜೀವ ಮಿಸುಕುವ ಅನುಭವವಾದಾಗ ತನುಜಾ ನಾಚುತ್ತಾ ಪತಿಗೆ ಸಿಹಿ ಸುದ್ದಿಯನ್ನು ತಿಳಿಸಿದಳು. ಅದನ್ನು ಕೇಳಿದ ಕೂಡಲೇ ಮಹೇಶ್‌ ಅವಳನ್ನೆತ್ತಿ ಎರಡು ಸುತ್ತು ತಿರುಗಿಸಿ ಮೆಲ್ಲಗೆ ಸೋಫಾದಲ್ಲಿ ಕುಳ್ಳಿರಿಸಿದ.

ಮಗು ಹುಟ್ಟಿದಾಗ ಮಹೇಶನ ಸಂತೋಷಕ್ಕೆ ಪಾರವೇ ಇರಲಿಲ್ಲ. ಪುಟ್ಟ ಮಗುವನ್ನು ಮಾತನಾಡಿಸಿ ಅದು ನಕ್ಕಾಗ ಆನಂದಿಸುತ್ತಿದ್ದರು, “ತನು, ನನ್ನ ಮಗು ಅಳದಂತೆ ನೀನು ನೋಡಿಕೊಳ್ಳಬೇಕು. ಅದು ಅತ್ತರೆ ನಾನು ಸಹಿಸಲಾರೆ,” ಎಂದು ಅವರು ಹೇಳಿದಾಗ ತನುಜಾ ನಕ್ಕಳು, `ಮಗು  ಅಳದೆ ಇರಲು ಸಾಧ್ಯವೇ? ಇದೆಂತಹ ಮೋಹ,’ ಎಂದುಕೊಂಡಳು. ಆದರೂ ಮಗುವಿನ ಕಡೆಗೆ ಅವರ ಕಾಳಜಿ ಕಂಡು ಅವಳಿಗೆ ಸಂತೋಷ ಆಯಿತು.

`ಮಹೇಶ್‌ಗೆ ಈಗ ನನ್ನ ಸಹವಾಸ ಬೇಕಾಗಿಲ್ಲವೇ? ಅದಕ್ಕಾಗಿ ದೂರವಾಗಲು ಬಯಸುತ್ತಿರುವರೇ? ನಮ್ಮ ವಿವಾಹವಾಗಿ 12 ವರ್ಷಗಳು ಮಾತ್ರ ಕಳೆದಿವೆ. ಇನ್ನೂ ಬಹುಕಾಲ ನಾವು ಜೊತೆ ಜೊತೆಯಾಗಿ ಜೀವನ ಸಾಗಿಸಬೇಕಾಗಿದೆ. ಮತ್ತೆ ಅವರೇಕೆ ಮ್ಯೂಚುವಲ್ ಡೈವೋರ್ಸ್‌ ಬಯಸುತ್ತಿದ್ದಾರೆ? ನನ್ನ ಪ್ರೀತಿಯಲ್ಲಿ ಕೊರತೆ ಇದೆಯೇ…..? ನಾನಂತೂ ಹಿಂದಿನಂತೆಯೇ ಅವರನ್ನು ಪ್ರೀತಿಸುತ್ತೇನೆ. ನನ್ನ ಒಂದೊಂದು ಮಾತಿಗೆ, ಮುಗುಳ್ನಗೆಗೆ ಸೋಲುತ್ತಿದ್ದರು. ನನ್ನ ದಟ್ಟವಾದ ಗುಂಗುರು ಕೂದಲು, ಕಾಡಿಗೆಯ ಕಣ್ಣುಗಳು, ಬಳುಕುವ ಶರೀರ, ಮಾದಕ ಪರಿಮಳ…. ಎಲ್ಲವನ್ನೂ ಅವರು ಮನಸಾರೆ ಮೆಚ್ಚಿದ್ದರು….

`ನನಗಾಗಿ ಇಷ್ಟೊಂದು ಮರುಳಾಗಿದ್ದ, ಮೋಹಗೊಂಡಿದ್ದ ಪತಿ ಈಗ ನನ್ನಿಂದ ದೂರವಾಗಲು ಬಯಸುತ್ತಿದ್ದಾರೆ. ಇಲ್ಲ, ನಾನು ವಿಚ್ಛೇದನ್ಕೆ ಖಂಡಿತ ಒಪ್ಪುವುದಿಲ್ಲ. ಮನೆಯವರ ವಿರೋಧ, ಜಾತಿ ಕಟ್ಟಳೆಯ ತೊಡಕುಗಳನ್ನು ಪ್ರೀತಿಗಾಗಿ ಎದುರಿಸಿ ನಾವು ಒಂದಾಗಿದ್ದೆವು….’

ಹಿಂದೆ ನಡೆದ ಘಟನೆಗಳೆಲ್ಲ ತನುಜಾಳ ಕಣ್ಮುಂದೆ ಚಲನಚಿತ್ರದ ರೀತಿಯಲ್ಲಿ ಸಾಗತೊಡಗಿದವು…..

“ಅಪ್ಪಾ, ನಾನು ಮಹೇಶ್‌ರನ್ನು ಮದುವೆಯಾಗುತ್ತೇನೆ.”

“ಯಾವ ಮಹೇಶ್‌?” ಮಗಳ ಧೈರ್ಯಕ್ಕೆ ತಂದೆ ಬೆಚ್ಚಿದರು.

“ನಮ್ಮ ಮಹೇಶ್‌. ಸಣ್ಣವನಿಂದ ಅಣ್ಣನ ಜೊತೆ ಆಟ ಆಡುವಾಡುತ್ತಿದ್ದರು, ಈಗ ಎಂಜಿನಿಯರ್‌ ಆಗಿದ್ದಾರೆ….. ನಾವಿಬ್ಬರೂ ಪ್ರೀತಿಸುತ್ತಿದ್ದೇವೆ ಮತ್ತು ಜೊತೆಯಾಗಿ ಜೀವನ ನಡೆಸಲು ಇಷ್ಟಪಟ್ಟಿದ್ದೇವೆ.”

ತಂದೆ ಕೋಪದಿಂದ ಕೂಗಾಡಿದರು, “ಇಷ್ಟು ದೊಡ್ಡ ವಿಷಯ ಮಾತನಾಡುವ ಧೈರ್ಯ ಹೇಗೆ ಬಂತು ನಿನಗೆ…..? ನಮ್ಮ ಅಂತಸ್ತಿಗೆ ಸರಿದೂಗುವ ಯೋಗ್ಯತೆ ಇದೆಯೇನು ಅವನಿಗೆ? ನಾವು ಉಚ್ಚ ಕುಲದ ಬ್ರಾಹ್ಮಣರು. ನಮ್ಮ ಸಂಬಂಧ ಕೇಳೋದಕ್ಕೆ ಮೊದಲು ಅವನ ಜಾತಿ ಬಗ್ಗೆ ಯೋಚಿಸಲಿ. ಮಗಳನ್ನು ಯಾವಾಗಲೂ ಉತ್ತಮ ಕುಲದವನಿಗೆ ಮದುವೆ ಮಾಡಿಕೊಡಬೇಕು, ಕೆಳವರ್ಗದವರಿಗಲ್ಲ.”

ತನಜಾ ಸಹ ತಂದೆಯಂತೆಯೇ ಹಠವಾದಿ. ತಂದೆಯ ಮುದ್ದಿನಿಂದ ಅವಳಿಗೆ ಯಾರನ್ನಾದರೂ ಎದುರಿಸುವ ಧೈರ್ಯವಿತ್ತು. ಅವಳು ಕೂಡಲೇ ಹೇಳಿದಳು, “ಅಪ್ಪಾ, ನಾನು ಜಾತಿ ನೋಡಿ ಪ್ರೀತಿ ಮಾಡಲಿಲ್ಲ, ಮನುಷ್ಯನನ್ನು ನೋಡಿ ಮಾಡಿದ್ದೇನೆ. ಮಹೇಶ್‌ ಯಾವ ಜಾತಿಯವರಿಗೂ ಕಡಿಮೆ ಇಲ್ಲ. ಅವರೊಬ್ಬ ಒಳ್ಳೆಯ ಮನುಷ್ಯ. ಅವರನ್ನು ಪ್ರೀತಿಸಿ ನಾನು ಯಾವ ತಪ್ಪನ್ನೂ ಮಾಡಿಲ್ಲ.”

ತಂದೆ ರಾಮಸ್ವಾಮಿಗೆ ಮಗಳು ತಮ್ಮನ್ನು ಹೀಗೆ ಎದುರಿಸಿ ನಿಲ್ಲಬಹುದೆಂಬ ಎಣಿಕೆಯೇ ಇರಲಿಲ್ಲ. ಅವರಿಗೆ ತಮ್ಮ ಬ್ರಾಹ್ಮಣ ಕುಲದ ಬಗ್ಗೆ ಗರ್ವವಿತ್ತು. ಜೊತೆಗೆ ಅವರು ನಗರದ ಹೆಸರಾಂತ ವಕೀಲರಾಗಿದ್ದರು. ಲಕ್ಷಿ ಅವರ ಮನೆಯಲ್ಲಿ ತಾಂಡವವಾಡುತ್ತಿದ್ದಳು.

ರಾಮಸ್ವಾಮಿಯವರ ಮಗ ತೇಜಸ್‌ ಐಎಎಸ್‌ ಪರೀಕ್ಷೆಯಲ್ಲಿ ಆಯ್ಕೆಯಾಗಿ ಆಂಧ್ರಪ್ರದೇಶ ರಾಜ್ಯ ಸರ್ಕಾರದ ಸೇವೆಗೆ ನಿಯೋಜಿತನಾಗಿದ್ದ. ಅವನಿಗೆ ತಂಗಿಯ ಮೇಲೆ ಅಮಿತ ಪ್ರೀತಿ.

ತನುಜಾಳ ಆಯ್ಕೆ ರಾಮಸ್ವಾಮಿಗೆ ನುಂಗಲಾರದ ತುತ್ತಾಗಿತ್ತು. ಜಾತಿ, ಹಣ ಮತ್ತು ಅಧಿಕಾರದ ಗರ್ವದಿಂದ ಅವರು ಯಾರನ್ನೂ ಲೆಕ್ಕಿಸುತ್ತಿರಲಿಲ್ಲ. ಆದರೆ ಮಗಳು ತಮ್ಮ ವಿರೋಧಕ್ಕೆ ಬಗ್ಗುವವಳಲ್ಲವೆಂದು ಅವರಿಗೆ ಗೊತ್ತಿತ್ತು. ಮಹೇಶನ ತಂದೆ ಆನಂದ್‌ ಕೃಷಿ ಇಲಾಖೆಯಲ್ಲಿ ಮಧ್ಯಮ ವರ್ಗದ ನೌಕರಿಯಲ್ಲಿದ್ದರು. ಸುಸಂಸ್ಕೃತ ಕುಟುಂಬದವರು. ಎರಡೂ ಕುಟುಂಬಗಳ ಮಕ್ಕಳು ಜೊತೆ ಜೊತೆಯಾಗಿ ಶಾಲೆಗೆ ಹೋಗಿ ಆಟವಾಡಿ ಬೆಳೆದವರು. ಆದರೆ ಹಿರಿಯರ ನಡುವೆ ಜಾತಿಯೆಂಬುದು ಗೋಡೆಯಂತೆ ನಿಂತಿತ್ತು. ಮಾತಿನ ಮಧ್ಯೆ ರಾಮಸ್ವಾಮಿ ತಮ್ಮ ಜಾತಿಯ ಹಿರಿಮೆಯನ್ನು ಹೊಗಳಿಕೊಳ್ಳುತ್ತಿದ್ದರು. ಆನಂದ್‌ ತಮ್ಮ ಮನಸ್ಸಿಗೆ ನೋವಾದರೂ ಮರ್ಯಾದೆಗಾಗಿ ಮಾತನಾಡುತ್ತಿದ್ದರು.

ಮಗಳ ಹಠಕ್ಕೆ ಮಣಿದು ರಾಮಸ್ವಾಮಿ ಮದುವೆ ಮಾಡಲು ಒಪ್ಪಿದರು. ಕೆಲವೇ ನೆಂಟರಿಷ್ಟರನ್ನು ಆಹ್ವಾನಿಸಿ ಸರಳವಾಗಿ ವಿವಾಹ ಕಾರ್ಯವನ್ನು ಮುಗಿಸಿದರು. “ಇಂದಿಗೆ ನನ್ನ ನಿನ್ನ ಸಂಬಂಧ ಮುಗಿದು ಹೋಯಿತು,” ಎಂದು ಹೇಳಿ ಹೊರಟುಹೋದರು.

ಮಗಳು ಮತ್ತು ಅಳಿಯನ ಪಾಲಿಗೆ ರಾಮಸ್ವಾಮಿಯರ ಮನೆ ಬಾಗಿಲು ಶಾಶ್ವತವಾಗಿ ಮುಚ್ಚಿಹೋಯಿತು. ಇದಕ್ಕೆ ವಿರುದ್ಧವಾಗಿ ಮಹೇಶನ ಕುಟುಂಬದವರು ಮದುಮಕ್ಕಳನ್ನು ಹೃತ್ಪೂರ್ಕವಾಗಿ ಸ್ವಾಗತಿಸಿದರು. ಕಳೆದ 12 ವರ್ಷಗಳಿಂದ ತನುಜಾ ತಂದೆಯ ಮನೆಯ ಹೊಸ್ತಿಲು ತುಳಿದಿಲ್ಲ. ಪ್ರತಿವರ್ಷ ಗೌರಿಹಬ್ಬದಲ್ಲಿಯೂ ಅವಳಿಗೆ ತವರುಮನೆಯ ನೆನಪು ಬರುತ್ತಿತ್ತು. ಈ ಸಲ ಹಬ್ಬಕ್ಕೆ ಕರೆಯಬಹುದೆಂಬ ಆಸೆಯಿಂದ ಕಾಯುತ್ತಿದ್ದಳು.

ಹೀಗೆ 12 ವರ್ಷಗಳು ಕಳೆದು ಹೋದವು. ಆದರೆ ತವರಿನಿಂದ ಕರೆ ಮಾತ್ರ ಬರಲೇ ಇಲ್ಲ. ತನುಜಾ ಈಗ ಬೇರೆ ಜಾತಿಗೆ ಸೇರಿದವಳಾದ್ದರಿಂದ ಅವಳನ್ನು ಮಗಳು ಎಂದು ಒಪ್ಪಿಕೊಳ್ಳಲು ರಾಮಸ್ವಾಮಿ ಸಿದ್ಧರಿರಲಿಲ್ಲ,

ಮಗ ನವೀನ್‌ ಈಗ 9 ವರ್ಷದವನಾಗಿದ್ದ. ಅವನು ಒಮ್ಮೊಮ್ಮೆ ಕೇಳುತ್ತಿದ್ದುದು ಉಂಟು, “ಮಮ್ಮಿ, ನನ್ನ ಸ್ನೇಹಿತರಿಗೆಲ್ಲ ಅಜ್ಜಿ, ತಾತಾ, ಮಾಮ ಎಲ್ಲ ಇದ್ದಾರೆ. ರಜಾದಲ್ಲಿ ಅವರೆಲ್ಲ ಅಜ್ಜಿ ಮನೆಗೆ ಹೋಗುತ್ತಾರೆ. ಮತ್ತೆ ನನಗೆ ಯಾಕೆ ಅಜ್ಜಿ, ತಾತಾ ಇಲ್ಲ? ನಾನು ಅವರ ಮನೆಗೆ ಹೋಗುವ ಹಾಗಿಲ್ಲಾ…..?”

ಆಗೆಲ್ಲ ತನುಜಾಳ ಕಣ್ಣುಗಳಲ್ಲಿ ನೀರು ತುಂಬಿ ಬರುತ್ತಿತ್ತು. ತಂದೆ ಎಳೆದಿದ್ದ ಲಕ್ಷ್ಮಣರೇಖೆಯನ್ನು ಅವಳು ದಾಟಿ ಹೋಗಲು ಸಾಧ್ಯವಿರಲಿಲ್ಲ. ಮಗನಿಗೂ ಆ ಬಗ್ಗೆ ಹೇಳುವಂತಿರಲಿಲ್ಲ.

ಸಾಯಂಕಾಲ ಮಹೇಶ್‌ ಆಫೀಸ್‌ನಿಂದ ಬಂದು ತಿಂಡಿ ಕಾಫಿ ತೆಗೆದುಕೊಂಡ ನಂತರ ರೂಮಿನಲ್ಲಿ ಯಾವುದೋ ಪೇಪರ್‌ ಹುಡುಕುತ್ತಿದ್ದ. ತನುಜಾ ಒಳಗೆ ಬಂದುದನ್ನು ಕಂಡು ಅವನ ಮುಖದಲ್ಲಿ ಚಡಪಡಿಕೆ ಕಾಣಿಸಿತು. ತನ್ನ ಕೈಲಿದ್ದ ಪೇಪರ್‌ನ್ನು ಮರೆ ಮಾಡಿಕೊಳ್ಳುತ್ತಾ ಅವನು ಹೊರಗೆ ಸರಿದ.

“ಮಹೇಶ್‌ ಯಾಕೆ ಇಷ್ಟು ಅಪ್‌ಸೆಟ್‌ ಆಗಿದ್ದೀರಿ? ಅದು ಯಾವ ಪೇಪರ್ಸ್…..?”

“ಏನೂ ಇಲ್ಲ ತನು. ಕೆಲವು ಅರ್ಜೆಂಟ್‌ ಪೇಪರ್ಸ್ ಅಷ್ಟೇ,” ಎನ್ನುತ್ತಾ ಮಹೇಶ್‌ ಗಾಡಿ ಸ್ಮಾರ್ಟ್‌ ಮಾಡಿ ಹೊರಟುಹೋದ.

ಅದೇನಾದರೂ ಡೈವೋರ್ಸ್‌ ಪೇಪರ್ಸ್ ಇರಬಹುದೇ ಎಂದು ತನುಜಾಳ ಮನಸ್ಸಿನಲ್ಲಿ ಸಂಶಯ ಮೂಡಿತು.

ಮಹೇಶ್‌ ಇಷ್ಟು ಉದ್ವಿಗ್ನನಾಗಿರುವುದನ್ನು ಕಳೆದ 12 ವರ್ಷಗಳಲ್ಲಿ ತುನುಜಾ ಕಂಡಿರಲೇ ಇಲ್ಲ, `ಮಹೇಶ್‌ಗೆ ಈಗ ನನ್ನ ಮೇಲೆ ಪ್ರೀತಿ ಇಲ್ಲವೇ? ಬೇರೆ ಯಾರಿಗಾದರೂ ಮನಸ್ಸು ಕೊಟ್ಟಿದ್ದಾರೆಯೇ? ನನ್ನ ಪ್ರೀತಿಯಲ್ಲಿ ಏನು ಕಡಿಮೆಯಾಯಿತು? ನಾನೀಗ ಬೇಡವಾದೆನೇ?’ ಬಗೆ ಬಗೆಯ ಪ್ರಶ್ನೆಗಳು ಅವಳ ಮನಸ್ಸನ್ನು ಚುಚ್ಚತೊಡಗಿದವು.

ತನುಜಾ ಮದುವೆಯಾದಂದಿನಿಂದ ಮಹೇಶನ ಪ್ರೀತಿ, ಧ್ಯಾನಗಳಲ್ಲಿ ಮುಳುಗಿಹೋಗಿದ್ದಳು. ಅವಳಿಗೆ ಇತರೆ ಯಾವ ವಿಷಯದಲ್ಲಿಯೂ ಆಸಕ್ತಿ ಇರಲಿಲ್ಲ. ಆ ಪ್ರೀತಿ ಅವಳ ತವರಿನ ನೆನಪುಗಳಿಗೂ ಮುಸುಕು ಹಾಕಿಬಿಟ್ಟಿತ್ತು.

`ಹೌದು…. ಮಹೇಶ್‌ ಏಕೆ ಡೈವೋರ್ಸ್‌ ಕೇಳುತ್ತಿದ್ದಾರೆಂದು ನಾನಿಂದು ತಿಳಿಯಲೇಬೇಕು,’ ತನುಜಾ ಯೋಚಿಸತೊಡಗಿದಳು. `ಅದಾವ ಕಾಣದ ಕೈ ನಮ್ಮಿಬ್ಬರ ಮಧ್ಯೆ ಅಡ್ಡ ನಿಂತಿದೆ ಎಂದು ಅವರನ್ನು ಕೇಳುತ್ತೇನೆ. ಅವರು ಬೇರೆ ಯಾರನ್ನಾದರೂ ಇಷ್ಟಪಟ್ಟಿದ್ದರೆ ಸ್ಪಷ್ಟವಾಗಿ ಹೇಳಲಿ. ಅವರ ಇಚ್ಛೆಯನ್ನು ಪೂರೈಸುವುದಕ್ಕೆ ಬೇಕಾದುದನ್ನು ಮಾಡೋಣ…..’

ಸಾಯಂಕಾಲ 5 ಗಂಟೆಯಾಯಿತು. ಅವಳು ನವೀನನನ್ನೂ ಎಬ್ಬಿಸಿ ಕುಡಿಯಲು ಹಾಲು ಕೊಟ್ಟಳು. ಪಕ್ಕದ ಮನೆಯ ಹುಡುಗ ಬಂದಾಗ ಅವರಿಬ್ಬರೂ ಆಟವಾಡತೊಡಗಿದರು. ತನುಜಾ ತಿಂಡಿ ಮಾಡಲು ಅಡುಗೆಮನೆಗೆ ಹೋದಳು. ಮಹೇಶ್‌ ಆಫೀಸಿನಿಂದ ಹಸಿದು ಬರುತ್ತಾರೆ, ಅವರಿಗೆ ಬಿಸಿ ತಿಂಡಿ ಕೊಡಬೇಕು ಎಂದು ಅವಳ ಯೋಚನೆ, ಇದು ಅವಳ ದಿನಚರಿಯಾಗಿತ್ತು.

ಆದರೆ ಕೆಲವು ದಿನಗಳಿಂದ ಮಹೇಶ್‌ ಊಟ ತಿಂಡಿಯನ್ನು ಸರಿಯಾಗಿ ಮಾಡುತ್ತಿರಲಿಲ್ಲ. ಕೊಟ್ಟದ್ದನ್ನು ಯಾವುದೇ ಪ್ರತಿಕ್ರಿಯೆಯಿಲ್ಲದೆ ಮೌನವಾಗಿ ತಿಂದು ಹೋಗುತ್ತಿದ್ದ. ಯಾವುದೋ ಗಂಭೀರ ಸಮಸ್ಯೆಯಲ್ಲಿ ಸಿಲುಕಿಕೊಂಡಿರುವಂತೆ, ಯಾವುದೋ ವಿಷಯ ಅವನನ್ನು ಒಳಗೇ ತಿನ್ನುತ್ತಿರುವಂತೆ ತೋರುತ್ತಿತ್ತು.

ತಿಂಡಿ ತಿನ್ನುತ್ತಾ ಮಹೇಶ್‌ ಮತ್ತದೇ ಪ್ರಶ್ನೆ ಎತ್ತಿದ, “ಏನು ಯೋಚನೆ  ಮಾಡಿದೆ?”

“ಯಾವ ವಿಷಯ ಕೇಳುತ್ತಿದ್ದೀರಿ?” ತನುಜಾ ಗೊತ್ತಿಲ್ಲದವಳಂತೆ ಅವನನ್ನೇ ಪ್ರಶ್ನಿಸಿದಳು.

“ಡೈವೋರ್ಸ್‌ ವಿಷಯ, ಮತ್ತೇನು?” ಮಹೇಶನ ಸ್ವರ ಗಂಭೀರವಾಗಿತ್ತು.

“ಇದೇನಿದು ಬೆಳಗ್ಗೆ, ರಾತ್ರಿ ಡೈವೋರ್ಸ್‌ ಡೈವೋರ್ಸ್‌ ಅಂತ ಜಪ ಮಾಡುತ್ತೀರಿ. ಏನು ವಿಷಯ ಅನ್ನೋದನ್ನು ಬಾಯಿಬಿಟ್ಟು ಹೇಳಿ…. ನನ್ನ ಮೇಲೆ ಬೇಜಾರು ಆಗಿಬಿಟ್ಟಿದೆಯಾ? ನಮ್ಮ ಪ್ರೀತಿ ಎಲ್ಲ ಮುಗಿದುಹೋಯಿತಾ ಅಥವಾ ನಿಮಗೆ ಬೇರೆ ಯಾರಾದರೂ ಸಿಕ್ಕಿದರಾ?”

“ಇಲ್ಲ ತನು, ಅಂಥದ್ದೇನಿಲ್ಲ. ನನ್ನನ್ನು ಮದುವೆಯಾಗಿ ನಿನ್ನ ತವರುಮನೆಯವರನ್ನೆಲ್ಲ ನೀನು ದೂರ ಮಾಡಿಕೊಳ್ಳಬೇಕಾಯಿತಲ್ಲ ಅನ್ನುವ ಅಪರಾಧಿ ಪ್ರಜ್ಞೆ ನನ್ನನ್ನು ಕಾಡುತ್ತಿದೆ ಅಷ್ಟೇ. ನನ್ನ ಕುಟುಂಬದವರೆಲ್ಲ ನನ್ನ ಜೊತೆಗಿದ್ದಾರೆ. ಆದರೆ ನೀನು ಮಾತ್ರ ನಿನ್ನವರಿಂದ ದೂರ ಉಳಿಯಬೇಕಾಗಿದೆ. ನವೀನ್‌ಗೆ ಸಹ ಅಜ್ಜಿ ಮನೆ ಆಗಲಿ, ಆ ಸಂಬಂಧದ ಬಗ್ಗೆ ಆಗಲಿ ಏನೂ ಗೊತ್ತಿಲ್ಲ. ನಿನ್ನನ್ನು ನಿನ್ನವರಿಂದ ದೂರ ಮಾಡುವುದಕ್ಕೆ ನನಗೇನು ಅಧಿಕಾರವಿದೆ?”

“ಓಹೋ….! 12 ವರ್ಷಗಳಾದ ಮೇಲೆ ನಿಮಗೆ ಈ ವಿಷಯ ಹೇಗೆ ನೆನಪಾಯಿತು? ನನಗೂ ಅವರೆಲ್ಲರ ಸಂಬಂಧವನ್ನು ಕಳೆದುಕೊಂಡಿರುವ ನೋವಿದೆ. ಆದರೆ ನಿಮ್ಮ ಪ್ರೀತಿ ಆ ನೋವನ್ನು ಮರೆಸಿದೆ….. ಜೀವನದಲ್ಲಿ ತಂದೆ ತಾಯಿಯರ ಸ್ಥಾನ ಅತಿ ಮುಖ್ಯ ಅನ್ನುವುದು ನಿಜ. ಆದರೆ ಅವರು ಜಾತಿಯ ಕಾರಣಕ್ಕಾಗಿ ಮಗಳ ಸಂಬಂಧ ತೊರೆದಿರುವಾಗ ಅವರ ಮರ್ಯಾದೆ ಕಾಪಾಡುವುದಕ್ಕಾಗಿ ಮಗಳೂ ಸಹ ಹಾಗೇ ನಡೆದುಕೊಳ್ಳಬೇಕಾಗುತ್ತದೆ. ನೋಡಿ, ನಾವಿಬ್ಬರೂ ಪ್ರೀತಿಸುತ್ತಿದ್ದೇವೆ. ಪ್ರೀತಿ ಇರುವಾಗ ತಪ್ಪು ಎಲ್ಲಿಂದ ಬರುತ್ತದೆ? ನಮ್ಮ ಪ್ರೀತಿಗಾಗಿ ನಾನು ಏನನ್ನು ಬೇಕಾದರೂ ತ್ಯಾಗ ಮಾಡಬಲ್ಲೆ,” ಪತ್ನಿಯ ತರ್ಕಬದ್ಧ ಮಾತಿಗೆ ಮಹೇಶ್‌ ನಿರುತ್ತರನಾದನು.

ರಾತ್ರಿ ಊಟವಾದ ನಂತರ ಮಹೇಶ್‌ ಮಲಗಲು ಬೆಡ್‌ರೂಮಿಗೆ ಹೋದ. ಮಗನನ್ನು ಮಲಗಿಸಿ ತನುಜಾ ಸಹ ರೂಮಿಗೆ ಬಂದು ಅವನ ಪಕ್ಕ ಮಲಗಿದಳು ಮತ್ತು ಪ್ರೇಮಭರಿತ ದೃಷ್ಟಿಯಿಂದ ಪತಿಯನ್ನು ನೋಡತೊಡಗಿದಳು. ಮಹೇಶ್‌ ಅವಳನ್ನು ತೋಳಿನಲ್ಲಿ ಬಳಸಿ ಮೃದುವಾಗಿ ಅದುಮುತ್ತಾ ಹಣೆ, ಕೆನ್ನೆಯ ಮೇಲೆ ಮುತ್ತಿನ ಮಳೆಗರೆದ. ತನುಜಾ ಸಹ ಅವನೆದೆಯಲ್ಲಿ ಮುಖ ಹುದುಗಿಸಿ ಅವನಂತೆಯೇ ಪ್ರತಿಕ್ರಿಯಿಸಿದಳು.

ಮರುಗಳಿಗೆ ಮಹೇಶ್‌ ಅವಳಿಂದ ದೂರ ಸರಿದು, “ಮಲಗಿಕೋ ತನು, ಬಹಳ ತಡವಾಗಿದೆ,” ಎನ್ನುತ್ತಾ ಮಗ್ಗಲು ಬದಲಿಸಿದ.

ತನುಜಾ ಆಶ್ಚರ್ಯದಿಂದ ಅವನನ್ನೇ ದಿಟ್ಟಿಸಿದಳು, `ಇವರೇಕೆ ನನ್ನನ್ನು ದೂರ ಮಾಡುತ್ತಿದ್ದಾರೆ? ಖಂಡಿತ ಇವರ ಜೀವನದಲ್ಲಿ ಬೇರೆ ಯಾರೋ ಬಂದಿದ್ದಾರೆ. ಆದ್ದರಿಂದಲೇ ನನ್ನ ಮೇಲೆ ಆಸಕ್ತಿ ಹೋಗಿದೆ,’ ಅವಳು ಮನದಲ್ಲೇ ಬಹುವಾಗಿ ನೊಂದುಕೊಂಡಳು. ಬೆಳಗಿನ ದಿನಚರಿ ಆರಂಭವಾಯಿತು. ಕಾಫಿ ಬೆರೆಸಿ ಪತಿಗೆ ಕೊಟ್ಟು ತಾನೂ ಕುಡಿದಳು. ಮಗನನ್ನು ಸಿದ್ಧಪಡಿಸಿ ಶಾಲೆಗೆ ಕಳುಹಿಸಿದಳು. ಮಹೇಶನಿಗಾಗಿ ತಿಂಡಿ ತಯಾರಿಸತೊಡಗಿದಳು. ರಾತ್ರಿಯ ವಿಷಯದ ಬಗ್ಗೆ ಅವಳೂ ಕೇಳಲಿಲ್ಲ. ಮಹೇಶನೂ ಏನೂ ಹೇಳಲಿಲ್ಲ. ಅವನ ಮುಖದಲ್ಲಿ ಗೊಂದಲ ಗೋಚರಿಸುತ್ತಿತ್ತು. ಏನೋ ಹೇಳಲು ಬಯಸಿದಂತೆ, ಆದರೆ ಹೇಳಲಾಗದ ಚಡಪಡಿಕೆ.

ಮಹೇಶ್‌ ಮತ್ತೆ ಮತ್ತೆ ಡೈವೋರ್ಸ್‌ ಬಗ್ಗೆ ಏಕೆ ಮಾತನಾಡುತ್ತಾರೆ ತಿಳಿಯಲೇಬೇಕು ಎಂದು ತನುಜಾ ಅಶಾಂತಿಯಿಂದ ತೊಳಲಾಡಿದಳು. ಮಹೇಶ್‌ ಆಫೀಸ್‌ಗೆ ಹೋದ ನಂತರ ಅವನ ಸಾಮಾನುಗಳನ್ನು ಚೆಕ್‌ ಮಾಡತೊಡಗಿದಳು. ಅವನ ಅಲ್ಮೇರಾದಲ್ಲಿ ಡೈರಿ ಸಿಕ್ಕಿತು. ಉಳಿದ ಸಾಮಾನುಗಳನ್ನು ಹಾಗೇ ಬಿಟ್ಟು ಡೈರಿ ತೆರೆದಳು. ಅದರ ಪ್ರತಿಯೊಂದು ಪುಟದಲ್ಲಿಯೂ ತನುಜಾಳ ಹೆಸರೇ ಇತ್ತು, `ನಾನು ತನುಜಾಳಿಂದ ದೂರ ಇರಲಾರೆ. ಅವಳೇ ನನ್ನ ಜೀವನ, ಅವಳೇ ನನ್ನ ಪ್ರಾಣ. ಆದರೆ ಏನು ಮಾಡಲಿ….? ಅವಳಿಂದ ದೂರವಾಗಬೇಕಾಗಿದೆ. ಅವಳಿಂದ ಇನ್ನೂ ಹೆಚ್ಚು ಮುಚ್ಚುಮರೆ ಮಾಡಲಾರೆ.’

ಈ ಸಾಲುಗಳನ್ನು ಓದಿದ ತನುಜಾಳಿಗೆ ಪತಿಯ ಬಾಳಿನಲ್ಲಿ ಬೇರೆ ಯಾರೂ ಸೇರಿಲ್ಲ ಎಂಬುದು ಖಾತ್ರಿಯಾಯಿತು. ಆದರೆ ಯಾವ ಅಸಹಾಯಕತೆ ಅವರನ್ನು ಹಿಮ್ಮೆಟ್ಟಿಸುತ್ತಿದೆ, ಡೈವೋರ್ಸ್‌ ವಿಷಯ ಮುಂದೆ ಬರುತ್ತಿದೆ ಎಂಬುದು ಮಾತ್ರ ಅವಳಿಗೆ ಅರ್ಥವಾಗಲಿಲ್ಲ. ಅವಳ ಮನಸ್ಸು ಈ ತೊಳಲಾಟದಲ್ಲಿಯೇ ತೊಡಗಿರುವಾಗ ಅವಳ ಕಣ್ಣಿಗೆ ಮಹೇಶನ ಮೊಬೈಲ್‌ ಫೋನ್‌ ಕಾಣಿಸಿತು, `ಅಯ್ಯೋ, ಇವರು ಮೊಬೈಲ್‌ ಮರೆತು ಹೋಗಿದ್ದಾರಲ್ಲ. ಇರಲಿ, ಇದನ್ನೇ ಚೆಕ್‌ ಮಾಡುತ್ತೇನೆ. ಏನಾದರೂ ಸುಳಿವು ಸಿಗಬಹುದು,’ ಎಂದುಕೊಂಡು ಕಾಲ್‌ ರೆಕಾರ್ಡ್‌ನ್ನು ಪರಿಶೀಲಿಸತೊಡಗಿದಳು. ಅಲ್ಲಿ ಕಳೆದ 1 ವಾರದಿಂದ ಡಾ. ಜನಾರ್ದನ್‌ ಅವರೊಡನೆ ಪದೇ ಪದೇ ಮಾತನಾಡಿರುವುದು ಕಂಡು ಬೆಚ್ಚಿದಳು. ಡಾಕ್ಟರ್‌ ಜೊತೆ ಮಹೇಶ್‌ಗೆ ಏನು ಕೆಲಸ? ಎಂದು ಯೋಚಿಸಿ, ಕಾಲ್ ಮಾಡಿದರೆ ಏನಾದರೂ ತಿಳಿಯಬಹುದು ಎಂದುಕೊಂಡು ಕಾಲ್ ಬಟನ್‌ ಅದುಮಿದಳು.

“ಹಲೋ ಮಿ. ಮಹೇಶ್‌,  ನೀವು ತುಂಬಾ ಎಚ್ಚರಿಕೆಯಿಂದ ಇರಬೇಕು. ನೀವು ಎಚ್‌.ಐ.ವಿ. ಪಾಸಿಟಿವ್‌ ಅಂತ ಗೊತ್ತಲ್ಲ. ಚಿಕಿತ್ಸೆ ಸಾಧ್ಯವಿದೆ. ಆದರೆ ತುಂಬಾ ಖರ್ಚು ಬೀಳುತ್ತದೆ. ಎಷ್ಟು ದಿವಸ ಆಗುತ್ತದೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ಆದರೆ ನೀವೇನು ಯೋಚನೆ ಮಾಡಬೇಡಿ. ದೇವರು ಕಣ್ಣು ಬಿಟ್ಟರೆ ಎಲ್ಲ ಚೆನ್ನಾಗಿ ಆಗುತ್ತದೆ.” ಮಹೇಶನ ಕಾಲ್ ಅಂತ ಭಾವಿಸಿ ಡಾ. ಜನಾರ್ಧನ್ ಎಲ್ಲವನ್ನೂ ಹೇಳಿದರು.

ತನುಜಾಳಿಗೆ ಈಗ ತನ್ನ ಪ್ರಶ್ನೆಗೆ ಉತ್ತರ ಸಿಕ್ಕಿತು. ಮಹೇಶ್‌ ಈ ವಿಷಯವನ್ನು ನನ್ನಿಂದ ಮುಚ್ಚಿಡುತ್ತಿದ್ದಾರೆ ಅನ್ನುವುದು ಗೊತ್ತಾಯಿತು. ಆದರೆ ಈ ಸೋಂಕು ತಗುಲಿದ್ದಾದರೂ ಹೇಗೆ? ಅವರು ಯಾವಾಗಲೂ ನನ್ನ ಜೊತೆಯೇ ಇರುತ್ತಾರಲ್ಲ. ಮತ್ತೆ….. ಇದು ಹೇಗೆ ಅಂಟಿತು? ಮಹೇಶ್‌ ಬೇರೆ ಯಾರ ಜೊತೆಯಾದರೂ ಸಂಬಂಧ ಬೆಳೆಸಿದ್ದಾರಾ? ಇಂದು ಎಲ್ಲ ವಿಷಯವನ್ನೂ ಸ್ಪಷ್ಟವಾಗಿ ಮಾತನಾಡಿ ತಿಳಿದುಕೊಳ್ಳಬೇಕು ಎಂದು ಮನಸ್ಸಿನಲ್ಲಿಯೇ ನಿಶ್ಚಯಿಸಿಕೊಂಡಳು.

ಸಾಯಂಕಾಲ ಮಹೇಶ್‌ ಆಫೀಸ್‌ನಿಂದ ಮನೆಗೆ ಬಂದಾಗ ಎಂದಿನಂತೆ ನಗುಮುಖದಿಂದ ಸ್ವಾಗತಿಸಿದಳು. ಅವನಿಗೆ ತಿಂಡಿ ಕಾಫಿ ಕೊಟ್ಟು ಸ್ವಲ್ಪ ರಿಲ್ಯಾಕ್ಸ್ ಆದ ನಂತರ ನಿಧಾನವಾಗಿ ಮಾತು ಪ್ರಾರಂಭಿಸಿ, “ಮಹೇಶ್‌, ನೀವು ಡಾ. ಜನಾರ್ಧನ್‌ ಹತ್ತಿರ ಏಕೆ ಹೋಗಿದ್ದೀರಿ…. ಏನು ತೊಂದರೆ ನಿಮಗೆ?” ಕೇಳಿದಳು.

ಇದನ್ನು ಕೇಳಿ ಮಹೇಶ್‌ ಬೆಚ್ಚಿಬಿದ್ದ, “ಯಾರು ಡಾ. ಜನಾರ್ಧನ್‌…… ನನಗೆ ಗೊತ್ತಿಲ್ಲವಲ್ಲ. ನೀನು ಇಲ್ಲದ್ದೆಲ್ಲ ಪ್ರಶ್ನೆ ಮಾಡುತ್ತಿದ್ದೀಯಾ?”

“ಇರೋ ವಿಷಯನ್ನೇ ನಾನು ಕೇಳುತ್ತಿದ್ದೇನೆ. ನನ್ನಿಂದ ನೀವು ಮುಚ್ಚಿಡಬೇಡಿ. ನನಗೆಲ್ಲ ಗೊತ್ತಾಗಿದೆ. ನೀವು ನಿಮ್ಮ ಫೋನ್‌ ಮರೆತು ಹೋಗಿದ್ದಿರಿ. ಅದರಲ್ಲಿ ಡಾ. ಜನಾರ್ಧನ್‌ರವರ ಕಾಲ್ಸ್ ತುಂಬ ಇದ್ದದ್ದು ನೋಡಿ ನನಗೆ ಅನುಮಾನವಾಗಿ ಅವರಿಗೆ ಫೋನ್‌ ಮಾಡಿದೆ. ನೀವು ಕಾಲ್‌ ಮಾಡಿದ್ದೀರಿ ಅಂದುಕೊಂಡು ಅವರು ಇರುವ ವಿಷಯವನ್ನೆಲ್ಲ ಹೇಳಿದರು. ಜೊತೆಗೆ ಅದಕ್ಕೆ ಚಿಕಿತ್ಸೆ ಸಾಧ್ಯವಿದೆ. ಎಷ್ಟು ಸಮಯ ಬೇಕಾಗುತ್ತದೆ ಎಂದು ಹೇಳುವುದಕ್ಕೆ ಆಗುವುದಿಲ್ಲ ಎಂದೂ ಹೇಳಿದರು. ನೀವು ಇದಕ್ಕಾಗಿ ಡೈವೋರ್ಸ್‌ ಅಂತ ಒತ್ತಾಯ ಮಾಡುತ್ತಿದ್ದೀರಿ ತಾನೇ….? ಇದನ್ನು ಮುಚ್ಚಿಡದೆ ಮೊದಲೇ ಹೇಳಬಹುದಿತ್ತಲ್ವಾ…..”

ತನುಜಾಳಿಗೆ ವಿಷಯವೆಲ್ಲ ಗೊತ್ತಾಗಿದೆ ಎಂದಾಗ ಮಹೇಶ್‌ ಪೆಚ್ಚಾದ. ಅವಳನ್ನು ತೋಳುಗಳಿಂದ ಬಳಸಿ ನಿಧಾನವಾಗಿ ಹೇಳತೊಡಗಿದ, “ನಾನು ಕಳೆದ ತಿಂಗಳು ಆಫೀಸ್‌ನಿಂದ ಸೆಮಿನಾರ್‌ಗಾಗಿ ಸಿಂಗಾಪುರಕ್ಕೆ ಹೋಗಿದ್ದೆನಲ್ಲವೇ. ನಾವು 2-3 ಸಹೋದ್ಯೋಗಿಗಳಿಗೆ ಒಂದು ದೊಡ್ಡ ಹೋಟೆಲ್‌ನಲ್ಲಿ ರೂಮ್ ಮಾಡಿಕೊಟ್ಟಿದ್ದರು. ಹಗಲೆಲ್ಲ ಸೆಮಿನಾರ್‌ನಲ್ಲಿ ಕಾಲ ಕಳೆದುಹೋಗುತ್ತಿತ್ತು. ಆದರೆ ರಾತ್ರಿ ನಿನ್ನ ನೆನಪೇ ಬರುತ್ತಿತ್ತು. ನಿದ್ರೆಯೂ ಬರುತ್ತಿರಲಿಲ್ಲ.

“ಒಂದು ದಿನ ಬಹಳ ಮಳೆ ಬರುತ್ತಿತ್ತು. ನನ್ನ ಜೊತೆಯವರು ಡ್ರಿಂಕ್ಸ್ ತೆಗೆದುಕೊಳ್ಳುತ್ತಾ ಕುಳಿತ್ತಿದ್ದರು. ಆ ಹೋಟೆಲ್‌ನಲ್ಲಿ ಮಜಾ ಮಾಡಲು ಎಲ್ಲ ಬಗೆಯ ಅವಕಾಶಗಳೂ ಇದ್ದವು. ರಾತ್ರಿ ಜೊತೆಯಾಗಿ ಕಾಲ ಕಳೆಯಲು ಹುಡುಗಿಯರನ್ನು ಸಪ್ಲೈ ಮಾಡುತ್ತಿದ್ದರು. ಅದಕ್ಕಾಗಿ ಪ್ರತ್ಯೇಕ ರೂಮಿನ ವ್ಯವಸ್ಥೆ ಮಾಡಿರುತ್ತಿದ್ದರು. ಆ ದಿವಸ ನನಗೆ ನಿನ್ನ ಅಗಲಿಕೆಯನ್ನು ಸಹಿಸಲಾಗಲಿಲ್ಲ. ನಾನು ಒಂದು ರೂಮನ್ನು ಬುಕ್‌ ಮಾಡಿ ನನ್ನ ಪತನಕ್ಕೆ ನಾಂದಿ ಹಾಡಿದೆ.

“ಅದೊಂದು ದಿನ ಮನಸ್ಸು ಹತೋಟಿ ತಪ್ಪಿದ್ದರಿಂದ ಆ ಸೋಂಕು ತಗುಲಿತು. ಆಮೇಲೆ ನಾನೆಂತಹ ಕೆಲಸ ಮಾಡಿದೆ ಎಂದು ಪಶ್ಚಾತ್ತಾಪವಾಯಿತು. ಮತ್ತೆ ನಾನು ಅಂತಹ ಸಂಪರ್ಕ ಮಾಡಲಿಲ್ಲ. ನನ್ನ ಸ್ನೇಹಿತರು, `ಹೆಂಡತಿ ಮನೆಗೆ, ಇಲ್ಲಿ ಮಾಡುವುದು ಮಜಾಕ್ಕೆ’ ಎಂದು ನನ್ನನ್ನು ತಮಾಷೆ ಮಾಡಿದರು. ಆದರೆ ನಾನು ಆ ತಪ್ಪನ್ನು ಪುನಃ ಮಾಡಲಿಲ್ಲ.

“ಒಂದು ದಿನ ನಾನು ಆಫೀಸ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದೆ. ನನ್ನನ್ನು ಡಾ. ಜನಾರ್ಧನ್‌ ಹತ್ತಿರ ಕರೆದುಕೊಂಡು ಹೋದರು. ಅವರು ಬ್ಲಡ್‌ ಟೆಸ್ಟ್ ಮಾಡಿ ಈ ಕಾಯಿಲೆಯನ್ನು ಪತ್ತೆ ಹಚ್ಚಿದರು. ನನಗೆ ಅಪರಾಧೀ ಪ್ರಜ್ಞೆ ಕಾಡತೊಡಗಿತು. ನಿನ್ನ ಜೀವನದಿಂದ ದೂರ ಆಗಬೇಕು ಅಂತ ಅನ್ನಿಸಲು ಪ್ರಾರಂಭವಾಯಿತು. ಅದಕ್ಕೇ ಡೈವೋರ್ಸ್‌ ಆಗೋಣ ಅಂತ ಹೇಳುತ್ತಿದ್ದೆ. ಆದರೆ ನಮ್ಮ ಪ್ರೀತಿ ಎಷ್ಟು ಗಾಢವಾಗಿದ್ದು ಅಂತ ನಿನಗೆ ಗೊತ್ತು,” ಎಂದು ಹೇಳುತ್ತಾ ಮಹೇಶ್‌ ಅತ್ತುಬಿಟ್ಟ.

ತನುಜಾ ದಿಗ್ಭ್ರಾಂತಳಾದಳು. ಓಹ್‌! ಎಂತಹ ಮೋಸ? ನನ್ನ ಜಾಗದಲ್ಲಿ ಬೇರೊಬ್ಬಳು…. ಅವಳ ಬಾಹುಬಂಧನದಲ್ಲಿ ಮಹೇಶ್‌…. ಏನು ಮಾಡಲಿ? ಮರುಕ್ಷಣದಲ್ಲಿ ಒಂದು ನಿರ್ಧಾರಕ್ಕೆ ಬಂದಳು, ಇಲ್ಲ ಮಹೇಶನ ಕೈ ಬಿಡುವುದಿಲ್ಲ. ಅವರನ್ನು ಕುಸಿಯುವಂತೆ ಮಾಡುವುದಿಲ್ಲ. ಪತಿಪತ್ನಿಯರ ಸಂಬಂಧವೆಂದರೆ, ಒಂದು ಚಿಕ್ಕ ಹೊಡೆತದಿಂದ ಮುರಿದುಬೀಳುವಷ್ಟು ಸಡಿಲವಾದುದಲ್ಲ. ತಾನು ಮಹೇಶನನ್ನು ಅದೆಷ್ಟು ಗಾಢವಾಗಿ ಪ್ರೀತಿಸಿದ್ದಾಳೆ. ಆ ಪ್ರೀತಿಯು ಕಳೆದುಹೋಗಲು ಬಿಡುವುದಿಲ್ಲ. ಮನುಷ್ಯ ತಪ್ಪು ಮಾಡುತ್ತಾನೆ. ಆದರೆ ಅದಕ್ಕಾಗಿ ಅವನು ಜೀವನವಿಡೀ ಶಿಕ್ಷೆ ಅನುಭವಿಸಬೇಕೇ….. ಖಂಡಿತ ಇಲ್ಲ. ತಾನು ಮಹೇಶನ ಎಚ್‌.ಐ.ವಿ ಪಾಸಿಟಿವ್‌ನ್ನು ನೆಗೆಟಿವ್‌ ಆಗುವಂತೆ ಮಾಡುತ್ತೇನೆ. ಈ ಕಾಯಿಲೆಯ ಚಿಕಿತ್ಸೆಗೆ ಖರ್ಚು ಬಹಳವಾಗಬಹುದು….. ಅದಕ್ಕಾಗಿ ತನ್ನ ಪ್ರೀತಿಯನ್ನು ಬಲಿಕೊಡುವುದಿಲ್ಲ.

ಅವಳು ಮಹೇಶನ ತಲೆಯನ್ನು ಎದೆಗಾನಿಸಿಕೊಂಡಳು. ಅವನ ಕಣ್ಣೀರಿನಿಂದ ಅವಳ ಬ್ಲೌಸ್‌ ತೊಯ್ದುಹೋಯಿತು.

Tags:
COMMENT