ಕಥೆ- ವೀಣಾ ವರುಣ್
ಮೆಲ್ಲನೆ ಪ್ರಾರಂಭವಾದ ತುಂತುರು ಮಳೆಯಿಂದ ವಾತಾವರಣ ಪ್ರಫುಲ್ಲಿತವಾಯಿತು. ಮಾನಸ ಒಮ್ಮೆ ಕಿಟಕಿಯಿಂದ ಹೊರಗೆ ನೋಡಿದಳು. ಗಿಡಮರಗಳ ಮೇಲೆ ಪಟಪಟನೆ ಬೀಳುತ್ತಿದ್ದ ಮಳೆ ನೀರಿನಿಂದ ಅವುಗಳ ಧೂಳು ತೊಳೆದು ಹೋಗಿ ಅವು ಶುಭ್ರವಾಗಿ, ಹೊಸದಾಗಿ ಗೋಚರಿಸುತ್ತಿದ್ದವು. ಮೊದಲ ಮಳೆಯಿಂದ ಹೊರಬಿದ್ದ ಮಣ್ಣಿನ ವಾಸನೆಯು ಮನವನ್ನು ಮುದಗೊಳಿಸಿತು.
ಮಾನಸಿಗೆ ಮಳೆ ನೀರಿನಲ್ಲಿ ನೆನೆದು ಆಡುವ ಮನಸ್ಸಾಯಿತು. ಆದರೆ ಅಡುಗೆಮನೆಯಲ್ಲಿ ಪೂರ್ತಿ ಮುಗಿಸದ ಕೆಲಸ ಅವಳನ್ನು ಕೈಬೀಸಿ ಕರೆಯಿತು.
ಬೆಳಗ್ಗೆ, ಸಂಜೆ ಅದೇ ಕೆಲಸ, ಅದೇ ಬಂಧನ, ಕೆಲವೊಮ್ಮೆ ತನುವಿಗೆ, ಮತ್ತೊಮ್ಮೆ ಮನಸ್ಸಿಗೆ ಓಹ್! ಇವುಗಳು ಬೇಸರ ಹುಟ್ಟಿಸಿಬಿಟ್ಟಿವೆ. ಸದ್ಯಕ್ಕೆ ಅದನ್ನು ಬದಿಗಿಡುತ್ತೇನೆ ಎಂದುಕೊಳ್ಳುತ್ತಾ ಮಾನಸಿ ಮಳೆನೀರಿನಲ್ಲಿ ನೆನೆಯುವ ನಿಶ್ಚಯ ಮಾಡಿದಳು.
ಕೌಶಿಕ್ ಆಫೀಸ್‌ಗೆ ಹೋಗಿದ್ದ, ಮಾನಸಿ ಮನೆಯಲ್ಲಿ ಒಬ್ಬಳೇ ಇದ್ದಳು. ಕೌಶಿಕ್ ಮನೆಯಲ್ಲಿರುವವರೆಗೂ ಮಾತು, ಹರಟೆ, ತಮಾಷೆ ಇರುತ್ತಿತ್ತು. ಮಾನಸಿಯೂ ಅದರಲ್ಲಿ ಭಾಗಿಯಾಗುತ್ತಿದ್ದಳು. ಆದರೆ ಅವನು ಆಫೀಸ್‌ಗೆ ಹೋದ ನಂತರ ಮಾನಸಿಗೆ ಬಂಧನಮುಕ್ತಳಾದ ಅನುಭವವಾಗುತ್ತಿತ್ತು. ಇಷ್ಟಬಂದಂತೆ ಮಾಡಲು ಮನಸ್ಸು ತವಕಿಸುತ್ತಿತ್ತು.
ಈಗ ಅವಳು ಸ್ವಚ್ಛಂದ ಪಕ್ಷಿಯಂತೆ ಹಾರಲು ಉತ್ಸುಕಳಾದಳು. ಕೂದಲನ್ನು ಬಿಗಿದಿದ್ದ ಕ್ಲಿಪ್‌ನ್ನು ಕಳಚಿ ಕೂದಲು ಹಾರಾಡಲು ಬಿಟ್ಟಳು. ಈ ರೀತಿ ಕೂದಲು ಹರಡುವುದನ್ನು ಕೌಶಿಕ್ ಕೊಂಚವೂ ಇಷ್ಟಪಡುತ್ತಿರಲಿಲ್ಲ. ತನ್ನ ಮೊಬೈಲ್‌ನ್ನು ಸ್ಪೀಕರ್‌ಗೆ ಅಟ್ಯಾಚ್ ಮಾಡಿ ಮೆಚ್ಚಿನ ಚಿತ್ರಗೀತೆಯನ್ನು ಹಾಕಿದಳು. ಕೌಶಿಕ್‌ನ ದೃಷ್ಟಿಯಲ್ಲಿ ಇದು ನಿಷ್ಪ್ರಯೋಜಕ ಮತ್ತು ಅನಾಗರಿಕ ವರ್ತನೆಯಾಗಿತ್ತು. ಅವನು ಮನೆಯಲ್ಲಿರುವಾಗ ಹೀಗೆಲ್ಲ ಮಾಡಲು ಸಾಧ್ಯವಿರಲಿಲ್ಲ. ಆದ್ದರಿಂದ ಈಗ ಮಾನಸಿ ತನ್ನ ಸ್ವಾತಂತ್ರವನ್ನು ಸಂಪೂರ್ಣವಾಗಿ ಅನುಭವಿಸಲು ಸಿದ್ಧಳಾದಳು.
ಮಳೆಯ ಸುಖವನ್ನು ಸವಿಯಲು ಅಂಗಳಕ್ಕೆ ಹೋಗಬೇಕೆನ್ನುವಷ್ಟರಲ್ಲಿ ಕರೆಗಂಟೆಯ ಸದ್ದಾಯಿತು. ಮಳೆಯಲ್ಲಿ ಯಾರು ಬಂದಿರಬಹುದು? ಪೋಸ್ಟ್ ಮನ್ ಬರಲು ಇನ್ನೂ ಸಮಯವಿದೆ. ಹಾಲಿನವನು ಬಂದಾಯಿತು. ಧೋಬಿಯೂ ಅಲ್ಲ, ಮತ್ತಾರು ಎಂದು ಯೋಚಿಸುತ್ತಾ ಮಾನಸಿ ಬಾಗಿಲು ತೆರೆದಳು.
ಮುಂದಿನ ಬೀದಿಯಲ್ಲಿ ವಾಸವಾಗಿದ್ದ ಆಕಾಶ್‌ನನ್ನು ಅನಿರೀಕ್ಷಿತವಾಗಿ ಬಾಗಿಲಲ್ಲಿ ಕಂಡು ಅವಳು ಕಕ್ಕಾಬಿಕ್ಕಿಯಾದಳು. ಸಂಕೋಚದಿಂದ, ``ಬನ್ನಿ,'' ಎಂದು ಹೇಳಿ ಅವನು ಒಳಗೆ ಬರುತ್ತಿರುವಾಗ, ``ಇವರು ಆಫೀಸಿಗೆ ಹೋಗಿದ್ದಾರೆ,'' ಎಂದಳು.
``ಗೊತ್ತು. ಅವರು ಕಾರ್ ತಿರುಗಿಸಿಕೊಂಡು ಹೋಗಿದ್ದನ್ನು ನೋಡಿದೆ,'' ಆಕಾಶ್ ಸೋಫಾದಲ್ಲಿ ಕುಳಿತುಕೊಳ್ಳುತ್ತಾ ಹೇಳಿದ. ತಾನು ಮಳೆಯಲ್ಲಿ ನೆನೆದು ಆಡುವ ಕಾರ್ಯಕ್ರಮ ಹಾಕಿದ್ದಾಗ ಇದ್ದಕ್ಕಿದ್ದಂತೆ ಆಕಾಶ್ ಬಂದದ್ದು ಅವಳಿಗೆ ಇರುಸು ಮುರುಸಾಗಿತ್ತು. ಈಗ ಕೌಶಿಕ್ ಹೋದದ್ದನ್ನು ನೋಡಿಯೂ ಏಕೆ ಬಂದನೋ ಎಂದು ಕೊಂಚ ಬೇಸರವಾಯಿತು. ಶಿಷ್ಟಾಚಾರಕ್ಕಾಗಿ ಮಾನಸಿ ಮಾತು ಪ್ರಾರಂಭಿಸಿದಳು, ``ಹೇಗಿದ್ದೀರಿ? ಬಹಳ ದಿನಗಳಿಂದ ಕಾಣಿಸಲೇ ಇಲ್ಲ.....''
``ನೀವೇ ನೋಡುತ್ತಿದ್ದೀರಲ್ಲ..... ಚೆನ್ನಾಗಿದ್ದೇನೆ. ನಾನು ಕೆಲಸಕ್ಕೆ ಹೋಗುವುದಕ್ಕೆ ಹೊರಟಿದ್ದೆ. ಅಷ್ಟರಲ್ಲಿ ಮಳೆ ಬಂತು. ಅದಕ್ಕೇ ಇಲ್ಲೇ ಸ್ವಲ್ಪ ಹೊತ್ತು ನಿಂತು ಹೋಗೋಣ. ನಿಮ್ಮ ಭೇಟಿಯೂ ಆಗುತ್ತದೆ ಎಂದುಕೊಂಡೆ.''
``ಒಳ್ಳೆಯದಾಯಿತು. ಏನು ತೆಗೆದುಕೊಳ್ಳುತ್ತೀರಿ. ಕಾಫಿ, ಟೀ.....?''
``ಯಾವುದಾದರೂ ಆಯಿತು. ನಿಮ್ಮ ಕೈಯಿಂದ ಏನು ಕೊಟ್ಟರೂ ಚೆನ್ನ,'' ಆಕಾಶ್ ಮುಗುಳ್ನಗುತ್ತಾ ಹೇಳಿದಾಗ ಮಾನಸಿಯ ಕೆಟ್ಟಿದ್ದ ಮೂಡ್ ಕೊಂಚ ತಹಬದಿಗೆ ಬಂದಿತು. ಏಕೆಂದರೆ ಅವನ ಮುಗುಳ್ನಗೆ ಸ್ನೇಹಪೂರ್ಣವಾಗಿತ್ತು.