ಕಥೆ – ವಾಸಂತಿ ಶೇಖರ್‌ 

`ಬೆಸ್ಟ್ ಕಪಲ್’ ಎಂಬ ಘೋಷಣೆ ಕೇಳಿಸುತ್ತಲೇ ಅಜಯ್‌ ಉಷಾಳನ್ನು ತನ್ನ ತೋಳುಗಳಲ್ಲಿ ಮೇಲೆತ್ತಿ ಗಿರಗಿರ ತಿರುಗಿಸಿ ಕೆಳಗಿಳಿಸಿದ. ಹರ್ಷಾತಿರೇಕದಿಂದ ಮೂಕಳಾದ ಉಷಾ ಅವನ ಬಾಹುಗಳಲ್ಲಿ ಕರಗಿಹೋದಳು. ಕೈಕೈ ಹಿಡಿದು ಅವರು ವೇದಿಕೆ ಪೂರ್ತಿ ವೃತ್ತಾಕಾರವಾಗಿ ಕುಳಿತಿದ್ದ ಪ್ರೇಕ್ಷಕರತ್ತ ಕೈ ಬೀಸಿದರು. ನಂತರ ಉಷಾ ಎಲ್ಲರಿಗೂ ವಂದನೆ ಸಲ್ಲಿಸಿದಳು. ಕಳೆದ ವರ್ಷದ ತರಹವೇ ಈ ಸಲ ಮೈಸೂರಿನ ಲಯನ್ಸ್ ಕ್ಲಬ್‌ನಲ್ಲಿ ಏರ್ಪಡಿಸಲಾಗಿದ್ದ ಥೀಮ್ ಪಾರ್ಟಿ `ಮೇಡ್‌ ಫಾರ್‌ ಈಚ್‌ ಅದರ್‌’ನಲ್ಲಿ ಇಬ್ಬರೂ ಬೆಸ್ಟ್ ಕಪಲ್ ಆಗಿ ಆರಿಸಲ್ಪಟ್ಟಿದ್ದರು. ಪ್ರೇಕ್ಷಕರ ಮೆಚ್ಚುಗೆಯ ನೋಟ ಇಬ್ಬರನ್ನೂ ಬಹಳ ಹೊತ್ತು ಹಿಂಬಾಲಿಸುತ್ತಿತ್ತು.

ಕ್ಲಬ್‌ನಿಂದ ಹೊರಬಂದ ಮೇಲೆ ಅಜಯ್‌ ಗಾಡಿ ತೆಗೆಯಲು ಪಾರ್ಕಿಂಗ್‌ ಸ್ಲಾಟ್‌ನತ್ತ ನಡೆದ. ಹೊರಗೆ ನಿಂತಿದ್ದ ಉಷಾ ಅವನಿಗಾಗಿ ಕಾಯತೊಡಗಿದಳು. ಆಗ ಇದ್ದಕ್ಕಿದ್ದಂತೆ ಯಾರೋ ಅವಳನ್ನು ಕೂಗಿದಂತಾಯಿತು. ತಿರುಗಿ ನೋಡಿದ ಅವಳಿಗೆ ಆ ವ್ಯಕ್ತಿ ಪರಿಚಿತನಾದರೂ ತಕ್ಷಣ ಗುರುತು ಸಿಗಲಿಲ್ಲ. ಆದರೆ ಸ್ವಲ್ಪ ಹೊತ್ತಿನಲ್ಲೇ ಗುರುತಿಸಿ ಹೌಹಾರಿದಳು, “ರೋಹಿತ್‌…..! ನೀನು ಇಲ್ಲಿ ಹೇಗೆ…. ಇದೇಕೆ ನೀನು ಹೀಗಾಗಿದ್ದಿ?”

“ನೀನೂ ಬಹಳ ಬದಲಾಗಿದ್ದೀಯಾ ಉಷಾ….. ನನಗೆ ಮೊದಲು ಗುರುತೇ ಸಿಗಲಿಲ್ಲ ಗೊತ್ತಾ,” ರೋಹಿತ್‌ ನಕ್ಕನಾದರೂ  ಆ ನಗು ಬಹಳ ಪೇಲವವಾಗಿತ್ತು. “ಇವಳು ನನ್ನ ವೈಫ್‌ ಪ್ರೀತಿ,” ಏಕೋ ಸಂಕೋಚಿಸುತ್ತಾ, ಹಿಂಜರಿಯುತ್ತಾ ಹಿಂದೆ ನಿಂತಿದ್ದ ಪತ್ನಿಯನ್ನು ಪರಿಚ ಯಿಸಿದ ರೋಹಿತ್‌.

ಎದುರಿಗೆ ನಿಂತಿದ್ದ ದಪ್ಪಗಿದ್ದ ಹೆಣ್ಣನ್ನು ಗಮನಿಸಿ, ನಾನೂ ಹೀಗೇ ಇದ್ದೆ ಅಲ್ಲವೇ ಎಂದುಕೊಳ್ಳುತ್ತಾ, ಮುಂದೆ ಬಂದು ಹಾರ್ದಿಕವಾಗಿ ಪ್ರೀತಿಯನ್ನು ಆಲಂಗಿಸಿಕೊಳ್ಳುತ್ತಾ, “ನೈಸ್‌ ಟು ಮೀಟ್‌ ಯೂ ಡಿಯರ್‌!” ಎಂದಳು.

ಅಷ್ಟು ಹೊತ್ತಿಗೆ ಅಜಯ್‌ ಗಾಡಿ ಸ್ಟಾರ್ಟ್‌ ಮಾಡುತ್ತಾ ಬಂದು ನಿಂತಿದ್ದ. ಆಗ ಉಷಾ ಮುಂದೆ ಬಂದು ಗಂಡ ಅಜಯ್‌ನನ್ನು  ರೋಹಿತ್‌ ದಂಪತಿಗೆ ಪರಿಚಯಿಸಿದಳು. ಸ್ವಲ್ಪ ಹೊತ್ತಿನ ಔಪಚಾರಿಕ ಮಾತುಕಥೆ ನಡೆಯಿತು. ಮಾರನೇ ಸಂಜೆ ಅವರು ಅಗತ್ಯವಾಗಿ ತಮ್ಮ ಮನೆಗೆ ಡಿನ್ನರ್‌ಗೆ ಬರಬೇಕೆಂದು ಹಾರ್ದಿಕವಾಗಿ ಸ್ವಾಗತಿಸಿದ. ಅಜಯ್‌, ಉಷಾ ಮನೆಗೆ ಬರುತ್ತಿದ್ದಂತೆಯೇ 2 ವರ್ಷದ ಪುಟ್ಟ ಮಗು ಆದಿತ್ಯ ಓಡಿಬಂದು ಅಮ್ಮನ ಕಾಲು ಕಟ್ಟಿಕೊಂಡ. ಉಷಾ ಅವನನ್ನು ಪ್ರೀತಿಯಿಂದ ಸಮಾಧಾನ ಪಡಿಸಿದಳು. 3 ಗಂಟೆಗಳ ಕಾಲ ಅವನು ಅಜ್ಜಿಯ ಬಳಿಯೇ ಇದ್ದ. ಉಷಾ ಗಂಡನ ಜೊತೆ ಕ್ಲಬ್ಬಿಗೆ ಹೋಗಿದ್ದಳು.

ಇವರಿಬ್ಬರ ಮದುವೆ 4 ವರ್ಷಗಳ ಹಿಂದೆ ನಡೆದಿತ್ತು. ಸುಂದರ ರೂಪ ಮಾತ್ರವಲ್ಲದೆ, ಸುಗುಣೆಯಾದ ಉಷಾ ಗಂಡನ ಅಚ್ಚುಮೆಚ್ಚಿನ ಮಡದಿ, ಅತ್ತೆಯ ಪ್ರೀತಿಯ ಸೊಸೆ ಎನಿಸಿದ್ದಳು. ಮಗು ಆದಿತ್ಯ ಹುಟ್ಟಿದ ಮೇಲೆ ಅವಳ ಸಂಸಾರ ಪರಿಪೂರ್ಣತೆ ಪಡೆದಿತ್ತು, ನೆಮ್ಮದಿಯಾಗಿ ಅವರ ಜೀವನ ನಡೆಯುತ್ತಿತ್ತು. 8 ವರ್ಷಗಳ ಹಿಂದೆ ಉಷಾ ಈ ರೀತಿ ನೆಮ್ಮದಿಯಾಗಿರಲಿಲ್ಲ. ಆದರೆ ಆಗಲೂ ಅವಳು ಉತ್ಸಾಹದ ಚಿಲುಮೆಯೇ ಆಗಿದ್ದಳು. 90 ಕಿಲೋ ತೂಕದ ಉಷಾ ಒಂದಿಲ್ಲ ಒಂದು ಕಾರಣಕ್ಕೆ ಜನರ ವ್ಯಂಗ್ಯ ನೋಟ, ಮಾತುಗಳಿಗೆ ತುತ್ತಾಗುತ್ತಿದ್ದಳು. ಆದರೆ ತನ್ನ ಪರಿಚಿತರಿಗೆ ಅವಳು ಒಬ್ಬ ಯಶಸ್ವೀ ಪಾತ್ರವಾಗಿದ್ದಳು. ಅವಳು ತನ್ನ ನಂಬಿಕೆ, ಶ್ರದ್ಧೆ, ಪರಿಶ್ರಮದಿಂದ ಎಂಥ ಕಠಿಣ ಸವಾಲುಗಳನ್ನಾದರೂ ಎದುರಿಸಬಲ್ಲವಳಾಗಿದ್ದಳು. ಅವಳು ತನ್ನ ಕಾಲೇಜಿನ ಎಲ್ಲಾ ಸಾಂಸ್ಕೃತಿಕ ಸಮಾರಂಭಗಳ ಜೀವಕಳೆಯಾಗಿದ್ದಳು. ಅವಳಿಲ್ಲದೆ, ಅವಳ ಹಾಡುಗಾರಿಕೆ ಇಲ್ಲದೆ ಆ ಕಾರ್ಯಕ್ರಮ ಕಳೆಗಟ್ಟುತ್ತಿರಲಿಲ್ಲ.

ಉಷಾ ನೋಡಲು ಡುಮ್ಮಿ ನಿಜ, ಆದರೆ ಇದರಿಂದ ಅವಳ ಸ್ಛೂರ್ತಿ, ಆತ್ಮವಿಶ್ವಾಸಕ್ಕೆ ಯಾವ ಧಕ್ಕೆಯೂ ಆಗಿರಲಿಲ್ಲ. ದಪ್ಪಗಿದ್ದರೂ ಆಕರ್ಷಕವಾಗಿದ್ದ ಉಷಾಳಿಗೂ ಒಬ್ಬ ಬಾಯ್‌ಫ್ರೆಂಡ್‌ ಇದ್ದ. ಅವನೇ ರೋಹಿತ್‌, ಅದೇ ಕಾಲೇಜಿನಲ್ಲಿ ಅವಳ ಸೀನಿಯರ್‌. ಅವರಿಬ್ಬರೂ ಪರಸ್ಪರರ ಕಂಪನಿ ಬಹಳ ಇಷ್ಟಪಡುತ್ತಿದ್ದರು. ಉಷಾಳ ತಂದೆ ರೇಷ್ಮೆ ಸೀರೆಗಳ ದೊಡ್ಡ ಶೋರೂಮ್ ಹೊಂದಿದ್ದ ಶ್ರೀಮಂತ ವ್ಯಾಪಾರಿ, ಬಲು ಮುದ್ದಿನಿಂದ ಮಗಳನ್ನು ಬೆಳೆಸಿದ್ದರು.

ಅಂದು ಬೇಗ ಮಲಗಿದರೂ ಉಷಾಳಿಗೆ ನಿದ್ದೆ ಬರಲಿಲ್ಲ. ರೋಹಿತ್‌ನನ್ನು ಅಂದು ಆಕಸ್ಮಿಕವಾಗಿ ಭೇಟಿಯಾದ ಬಗ್ಗೆಯೇ ಯೋಚಿಸುತ್ತಿದ್ದಳು. ಸುಸ್ತಾಗಿದ್ದ ಅಜಯ್‌ ಮಲಗಿದ ತಕ್ಷಣ ನಿದ್ದೆಗೆ ಜಾರಿದ್ದ. ಉಷಾ ಹಳೆಯ ಸಂಗತಿಗಳನ್ನೆಲ್ಲ ನೆನಪಿಸಿಕೊಂಡು ನಿಟ್ಟುಸಿರಿಟ್ಟಳು. ನಿದ್ದೆ ದೂರ ಹಾರಿತ್ತು.

“ಅಂದ್ರೆ ರೋಹಿತ್‌….. ಇದು ನಿನ್ನ ಕೊನೆ ತೀರ್ಮಾನವೇ? ನಮ್ಮಿಬ್ಬರ ಮದುವೆ ಸಾಧ್ಯವಿಲ್ಲ ಅಂತೀಯಾ?” ಓಡುತ್ತಾ ಬಂದಿದ್ದರಿಂದ ಏದುಸಿರಿನ ದನಿಯಲ್ಲಿ ಕೇಳಿದಳು ಉಷಾ. ಫೈನಲ್ ಇಯರ್‌ನ ವ್ಯಾಲೆಂಟೈನ್‌ ಡೇ ಕಾಲೇಜ್‌ ಪಾರ್ಟಿಯಲ್ಲಿ ಅವಳು ರೋಹಿತ್‌ನ ಬಳಿ ನಿಂತು ಕೇಳಿದ್ದಳು. ಆ ದಿನ ಬೆಳಗ್ಗೆ ಕಾಲೇಜಿಗೆ ಬಂದ ತಕ್ಷಣ ರೋಹಿತ್‌ ಕೈಗೆ ಕೆಂಗುಲಾಬಿ ಕೊಟ್ಟು ತನ್ನ ಪ್ರೇಮದ ಬಗ್ಗೆ ತಿಳಿಸಿದ್ದಳು. ಮದುವೆ ವಿಷಯ ಸಂಜೆ ಖಚಿತಪಡಿಸಬೇಕೆಂದು ಹೇಳಿದಳು. ಆದರೆ ರೋಹಿತ್‌ ಯಾವುದಕ್ಕೂ ಉತ್ಸಾಹದಿಂದ ಸ್ಪಂದಿಸಿರಲಿಲ್ಲ.

“ನೋಡು ಉಷಾ, ಫ್ರೆಂಡ್‌ಶಿಪ್‌, ಡೇಟಿಂಗ್‌ ಇದೆಲ್ಲ ಬೇರೆ…. ಮದುವೆ ಅನ್ನೋದೇ ಬೇರೆ…. ದೋಸ್ತಿ ಯಾರ ಜೊತೆಗಾದರೂ ನಡೆಸಬಹುದಲ್ಲವೇ? ಆದರೆ ಮದುವೆ ಜೀವನದಲ್ಲಿ ಒಂದೇ ಸಲ ಆಗುವ ಒಬ್ಬ ವ್ಯಕ್ತಿಯೊಂದಿಗಿನ ಶಾಶ್ವತ ಸಂಬಂಧ. ನನ್ನ ಮದುವೆ ಒಬ್ಬ ಸುಂದರ ವಧು ಜೊತೆ ರೊಮ್ಯಾಂಟಿಕ್‌ ಆಗಿ ನಡೆಯಬೇಕು, ನಿನ್ನೊಂದಿಗಾದರೆ ಜನ ನನ್ನನ್ನು ಮಾವುತ ಅಂದುಕೊಂಡಾರು….. ಮುಂದಿನ 6 ತಿಂಗಳು ಟೈಂ ಕೊಡ್ತೀನಿ, ನಿನ್ನ ಈಗಿನ ಈ ಆನೆ ತೂಕದಲ್ಲಿ ಅರ್ಧದಷ್ಟು ಕರಗಿದ್ದರೆ ಮಾತ್ರ ನಾನು ಮದುವೆ ಬಗ್ಗೆ ಯೋಚಿಸಬಲ್ಲೆ.

”ರೋಹಿತ್‌ ಇಷ್ಟು ಕೆಟ್ಟದಾಗಿ ಉತ್ತರಿಸಬಲ್ಲ ಎಂದು ಉಷಾ ಕನಸು ಮನಸಿನಲ್ಲೂ ನೆನೆಸಿರಲಿಲ್ಲ. “ಸರಿ ಬಿಡು ರೋಹಿತ್‌. ನಾನು ನನ್ನ ತೂಕ ಕಡಿಮೆ ಮಾಡಿಕೊಳ್ಳಲು ರೆಡಿ ಇಲ್ಲ….. ಅದೂ ನಿನ್ನಿಂದ ಪಾಠ ಹೇಳಿಸಿಕೊಂಡು! ಹೋಗಿ ಹೋಗಿ ಅದೂ ನಿನ್ನ ಈ ಷರತ್ತಿನ ಕಾರಣಕ್ಕೆ ಅಲ್ಲವೇ ಅಲ್ಲ…. ನನಗೆ ನಿನ್ನ ದಯಾಭಿಕ್ಷೆ ಬೇಕಾಗಿಲ್ಲ, ಕರುಣೆ ಅಲ್ಲ, ಪ್ರೇಮ ಬೇಕಿರುವುದು. ನನಗೂ ಒಂದು ಮನಸ್ಸಿದೆ, ವ್ಯಕ್ತಿತ್ವವಿದೆ ಅನ್ನುವುದನ್ನು ಮರೆತಿದ್ದೀಯಾ…. ಬಿಡು, ನೀನು ಯಾರಾದರೂ ಸ್ಲಿಮ್ ಟ್ರಿಮ್ ಹುಡುಗಿಯನ್ನು ಮದುವೆಯಾಗಿ ಸುಖವಾಗಿರು,” ಎಂದು ಬಲು ಸಹಜವಾಗಿ ಆ ಮಾತನ್ನು ಅಲ್ಲೇ ಮುಗಿಸಿ ಕೈ ತೊಳೆದುಕೊಂಡವಳೇ ಸ್ಕೂಟಿಯನ್ನು ತನ್ನ ಮನೆ ಕಡೆ ತಿರುಗಿಸಿದಳು.

ಆದರೆ ರೋಹಿತ್‌ನನ್ನು ಮರೆಯುವುದು ಉಷಾಳಿಗೆ ಸುಲಭ ಸಾಧ್ಯ ಆಗಿರಲಿಲ್ಲ. ಆಕರ್ಷಕ ಮೈಕಟ್ಟಿನ, ಸದಾ ಸ್ಪೋರ್ಸ್ಟ್ನಲ್ಲಿ ಮುಂದಾದ, ಪಠ್ಯೇತರ ಚಟುವಟಿಕೆಗಳಲ್ಲಿ ಕಾಲೇಜಿಗೇ ಹೀರೋ ಎನಿಸಿದ್ದ ರೋಹಿತ್‌ ಇವಳ ಪ್ರೇಮ ಸ್ವೀಕರಿಸಿದ್ದನೆ ಹೊರತು ಮದುವೆ ಆಗಲು ಮುಂದಾಗಿರಲಿಲ್ಲ. ಅವನೊಂದಿಗೆ ನಿಕಟ ಪ್ರೇಮ ಹೊಂದಿದ್ದ ಉಷಾ ಬಹಳ ಚಡಪಡಿಸಿಬಿಟ್ಟಳು. ಕಾಲೇಜಿನ ಸಹಪಾಠಿಗಳ ನಡುವೆ ಅವರಿಬ್ಬರದು ಆದರ್ಶ ಜೋಡಿ ಆಗಿರಲಿಲ್ಲ. ಅವರು ಒಟ್ಟೊಟ್ಟಿಗೆ ಎಲ್ಲಾ ಕಡೆ ಕಾಣಿಸಿದಾಗ, ಉಷಾಳ ದಢೂತಿ ವ್ಯಕ್ತಿತ್ವವನ್ನು ಗೇಲಿ ಮಾಡುತ್ತಾ ಹ್ಯಾಂಡ್‌ಸಮ್ ಹೀರೋ ರೋಹಿತ್‌ಗೆ ಎಲ್ಲರೂ ಮರುಕ ತೋರುವವರೇ… ಇದು ಅವಳ ಒಂದು ಕೈನ ಚಪ್ಪಾಳೆ ಆಗಿರಲಿಲ್ಲ. ರೋಹಿತ್‌ ಸಹ ಇಷ್ಟಪಟ್ಟೇ ಅವಳೊಂದಿಗೆ ಮುಂದುವರಿಯುತ್ತಿದ್ದ. ರೋಹಿತ್‌ಗೆ ಏನೇ ಒಂದು ಕಷ್ಟ ಎದುರಾದರೂ ಉಷಾ ಅವನ ಪರವಾಗಿ ನಿಂತು ಸಹಕರಿಸುತ್ತಿದ್ದಳು. ಎಷ್ಟೋ ಸಲ ರೋಹಿತ್‌ಗೆ ಹಣದ ಮುಗ್ಗಟ್ಟು ಎದುರಾದಾಗೆಲ್ಲ, ಇವಳು ಧಾರಾಳ ಹಣ ಖರ್ಚು ಮಾಡಿ ಅವನಿಗೆ ಸಹಾಯ ಮಾಡಿದ್ದಳು. ರೋಹಿತ್‌ಗೆ ಬೇಕಾದಾಗೆಲ್ಲ ತಂದೆಯ ವರ್ಚಸ್ಸು ಉಪಯೋಗಿಸಿ ಅವಳು ಎಲ್ಲಾ ತರಹದ ನೆರವು ನೀಡಿದ್ದಳು. ಅಂದರೆ…. ರೋಹಿತ್‌ನ ಪ್ರೇಮ ಅಷ್ಟು ಸ್ವಾರ್ಥಪೂರ್ಣವೇ! ಉಷಾ ಬಹಳ ಬೇಸರಗೊಂಡಿದ್ದಳು, ಆದರೆ ಮನಸ್ಸು ಮುರಿದುಹೋಗಲು ಬಿಡದೆ ತನ್ನನ್ನು ತಾನು ಸಂಭಾಳಿಸಿಕೊಂಡಳು.

ರೋಹಿತ್‌ಗೆ ಇವಳ ಪ್ರೇಮದ ಕುರಿತಾಗಿ ಕಿಂಚಿತ್ತೂ ಕಾಳಜಿ ಇಲ್ಲದಿದ್ದರೆ ಇವಳೇಕೆ ಅವನಿಗಾಗಿ ಒದ್ದುಕೊಳ್ಳಬೇಕು? ದಪ್ಪಗಿದ್ದ ಮಾತ್ರಕ್ಕೆ ಅದು ದೊಡ್ಡ ಅಪರಾಧವೇ…? ಡುಮ್ಮಿ ಆದ ಮಾತ್ರಕ್ಕೆ ಅವಳು ಮನುಷ್ಯಳಲ್ಲವೇ? ಗಾತ್ರ ಒಂದು ಬಿಟ್ಟರೆ ಬುದ್ಧಿ, ವಿವೇಕ, ವಿದ್ಯೆ, ಪ್ರತಿಷ್ಠೆ, ಸಿರಿವಂತಿಕೆ ಎಲ್ಲದರಲ್ಲೂ ಅವನಿಗಿಂತಲೂ ಅವಳು ಒಂದು ಕೈ ಜಾಸ್ತಿ. ಹೀಗಾಗಿ ಬಿ.ಎ. ಮುಗಿಸಿದ ತಕ್ಷಣ, ಎಂ.ಎ ವ್ಯಾಸಂಗಕ್ಕಾಗಿ ಅಪ್ಪಾಜಿಯನ್ನು ಒಪ್ಪಿಸಿ ಅವಳು ಮೈಸೂರಿನಲ್ಲೇ ಓದು ಮುಂದುವರಿಸಿದಳು. ಅವಳಿಗೆ ಬೆಂಗಳೂರಿನ ವಾತಾವರಣ ಮರೆಯುವ ಅನಿವಾರ್ಯತೆ ಇತ್ತು. ಓದು ಮುಗಿಸಿ, ಅಪ್ಪಾಜಿಯ ಆಯ್ಕೆಯಂತೆ ಮೈಸೂರಿನ ಶ್ರೀಮಂತ ಮನೆತನದ ಏಕೈಕ ವಾರಸುದಾರ ಅಜಯ್‌ನ ಕೈಹಿಡಿದಳು. ಅವನೂ ಇವಳಂತೆಯೇ ದಪ್ಪಗಿದ್ದ. ಆರತಕ್ಷತೆಗೆ ಕುಳಿತಿದ್ದ ಈ ಜೋಡಿಯನ್ನು ಕಂಡು ಎದುರಿಗೆ ಹಾರ್ದಿಕವಾಗಿ ಕೈ ಕುಲುಕಿ ಹಿಂದಿನಿಂದ ಎಲ್ಲರೂ ಕಿಸಕ್ಕನೇ ನಗುವವರೇ! ಅವರಿಗಿದು ಗೊತ್ತಾದರೂ ಅದಕ್ಕೆ ಏನೂ ಮಹತ್ವ ಕೊಡದೇ ತಮ್ಮ ಹೊಸ ಬಾಳಿನ ಸಂತಸದಲ್ಲಿ ತೇಲಿಹೋದರು.

ಮದುವೆ ನಂತರ ಅಜಯ್‌ ಜೊತೆ ಉಷಾ ಪರಮಸುಖಿ ಎನಿಸಿದಳು. ಅಜಯ್‌ ಅವಳನ್ನು ಬಹುವಾಗಿ ಪ್ರೀತಿಸುತ್ತಿದ್ದ, ಆದರಿಸುತ್ತಿದ್ದ. ಮದುವೆ ನಂತರ ಮೈಸೂರಿನಲ್ಲೇ ಸೆಟಲ್ ಆದ ಉಷಾ, ಮನೆ ಮಾತ್ರವಲ್ಲದೆ, ಅಜಯ್‌ನ ಬಿಸ್‌ನೆಸ್‌ನಲ್ಲೂ ಪಾರ್ಟನರ್‌ ಆಗಿ ಅವನ ವ್ಯವಹಾರಗಳಿಗೆ ಬಲಗೈ ಆಗಿ ನಿಂತಳು. ಹೀಗೆ 2 ವರ್ಷ ಬೇಗ ಉರುಳಿ ಹೋಯಿತು.

ಒಂದು ದಿನ ಉಷಾ ಗಂಡನಿಗೆ ಗುಡ್‌ ನ್ಯೂಸ್‌ ಹೇಳಿದಾಗ ಅಜಯ್‌ನ ಸಂತೋಷಕ್ಕೆ ಪಾರವೇ ಇರಲಿಲ್ಲ. ಇದೀಗ ಅವನ ದೃಷ್ಟಿಯಲ್ಲಿ ಉಷಾ ಇನ್ನಷ್ಟು ಮೇಲೇರಿದ್ದಳು. ತಮ್ಮ ವಂಶಕ್ಕೆ ಬೆಳಕು ನೀಡುವವಳು ಎಂದು ಅತ್ತೆ ಸೊಸೆಯನ್ನು ಹೆಚ್ಚು ಉಪಚರಿಸುತ್ತಿದ್ದರು.

ಆದರೆ ದುರಾದೃಷ್ಟ, ಸುಖ ಎಂಬುದು ಶಾಶ್ವತ ಆಗಿರುವುದಿಲ್ಲ. ಅಜಯ್‌ ಆಫೀಸಿಗೆ ಹೋಗಿದ್ದಾಗ ಅವಳು ಮೆಟ್ಟಿಲಿನಿಂದ ಜಾರಿದ್ದೇ ನೆಪವಾಗಿ, ಗರ್ಭಪಾತವಾಯಿತು. ಅಜಯ್‌ ಆಸ್ಪತ್ರೆ ತಲುಪುವಷ್ಟರಲ್ಲಿ ಉಷಾ ತಮ್ಮಿಬ್ಬರ ಪ್ರೇಮದ ಕುಡಿಯನ್ನು ಕಳೆದುಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದಳು. ಅಜಯ್‌ ಅವಳನ್ನು ಎದೆಗಾನಿಸಿಕೊಂಡು ಸಮಾಧಾನ ಹೇಳುವಷ್ಟರಲ್ಲಿ ತಾನೇ ಅತ್ತುಬಿಟ್ಟಿದ್ದ.

ಅವಳನ್ನು ಮನೆಗೆ ಕಳುಹಿಸುವಾಗ ಡಾ. ಸಂಧ್ಯಾ ಇಬ್ಬರನ್ನೂ ಉದ್ದೇಶಿಸಿ ಗಂಭೀರವಾಗಿ ಎಚ್ಚರಿಸಿದರು, “ಅಜಯ್‌ ಉಷಾ, ನಿಮ್ಮಿಬ್ಬರ ಮೊದಲ ಮಗುವಿಗೆ ಹೀಗಾದುದು ನಿಜಕ್ಕೂ ಅತಿ ದುಃಖಕರ, ಇದಕ್ಕಾಗಿ ವಿಷಾದಿಸುತ್ತೇನೆ. ಅಸಲಿಗೆ, ಈ ಗಂಭೀರ ಪರಿಸ್ಥಿತಿಯಲ್ಲಿ ನೀವಿಬ್ಬರೂ ಒಂದು ಪಣ ತೊಡಲೇ ಬೇಕು. ಅದು ನಿಮ್ಮ ತೂಕ ಕಡಿಮೆ ಮಾಡುವ ಬಗ್ಗೆ…. ಈ ಚಿಕ್ಕ ವಯಸ್ಸಿನಲ್ಲೇನೋ ಈ ಅಧಿಕ ತೂಕ ಓ.ಕೆ. ಆದರೆ 50+ ಆದಮೇಲೆ ನೀವಿಬ್ಬರೂ ಬಹಳ ಸಮಸ್ಯೆ ಎದುರಿಸಬೇಕಾಗುತ್ತದೆ. ಉಷಾಳ ಮುಂದಿನ ಹೆರಿಗೆಗೆ ಮುನ್ನ ಅವಳು ತೂಕ ಇಳಿಸಲೇಬೇಕು. ಜೊತೆಯಾಗಿ ನೀವು ಸಹಕರಿಸಬೇಕು. ಮುಂದಿನ ವರ್ಷ ಇದೇ ಹೊತ್ತಿಗೆ ನಮ್ಮ ಮೆಟರ್ನಿಟಿ ಹೋಂನಲ್ಲೇ ನಿಮ್ಮ ಕಂದ ನಗುವಂತಾಗಲಿ,” ಎಂದು ಡಾ. ಸಂಧ್ಯಾ ಇವರಿಗೆ ಮೈಸೂರಿನ ಖ್ಯಾತ ಫಿಟ್‌ನೆಸ್‌ ಟ್ರೇನರ್‌ ಕಾರ್ಡ್‌ ನೀಡಿ, ತಾವು ಇವರ ಕೇಸ್‌ ಬಗ್ಗೆ ಆಕೆ ಬಳಿ ಮಾತನಾಡುವುದಾಗಿ ಹೇಳಿದರು.

ಸುಶಿಕ್ಷಿತರಾದ ಈ ದಂಪತಿಗಳು ಆಕೆಯ ಮಾತು ಚಾಚೂ ತಪ್ಪದೆ ಪಾಲಿಸಿದರು. ಆರಂಭದಲ್ಲಿ ಉಷಾಳಿಗೆ ಅಷ್ಟೂ ವ್ಯಾಯಾಮ, ಬ್ರಿಸ್ಕ್ ವಾಕ್‌, ಪಥ್ಯದ ಊಟ ಕಷ್ಟ ಎನಿಸಿತು. ಅದರಲ್ಲೂ ತನ್ನ ಅಚ್ಚುಮೆಚ್ಚಿನ ಐಸ್‌ಕ್ರೀಂ, ಕರಿದ ತಿನಿಸು ಬಿಟ್ಟಿರುವುದು ಕಷ್ಟವೇ ಆಯ್ತು. ಆದರೆ ಅಜಯ್‌ ಸಹ ಜೊತೆ ಜೊತೆಯಲ್ಲೇ ಎಲ್ಲವನ್ನೂ ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದುದರಿಂದ, ಉಷಾ ಒಂದೇ ಮನಸ್ಸಿನಿಂದ ಕಷ್ಟಪಟ್ಟು ಡಯೆಟಿಂಗ್‌ ನಡೆಸಿದಳು. 6 ತಿಂಗಳಲ್ಲಿ ಇದರ ಉತ್ತಮ ಪರಿಣಾಮ ಕಾಣಿಸಿತು. ದಂಪತಿಗಳ ಮೈಕಟ್ಟಲ್ಲಿ ಎದ್ದು ತೋರುವ ಬದಲಾವಣೆ ಕಾಣಿಸಿತು.

ಅಜಯ್‌ 75 ಕೆ.ಜಿ.ಗೆ ಇಳಿದಿದ್ದರೆ, ಉಷಾ 60ಕ್ಕೆ ಇಳಿದಿದ್ದಳು! ಅದಾಗಿ 1 ವರ್ಷದಲ್ಲಿ ಉಷಾ ಮತ್ತೆ ಬಸುರಾಗಿದ್ದಳು. ಮೊದಲಿನಿಂದಲೂ ಸುಂದರವಾಗಿದ್ದಳು, ಈಗ ದೇಹ ತೆಳುವಾಗಿ ಸಂತಸ ಮೈಗೂಡಿ ಮತ್ತಷ್ಟು ಕಳೆಕಳೆಯಾದಳು. ತನ್ನ ಡ್ರೆಸ್ಸಿಂಗ್‌ ಸೆನ್ಸ್, ಹೇರ್‌ಸ್ಟೈಲ್‌ ಸಹ ಬದಲಿಸಿಕೊಂಡಳು. ಡಾ. ಸಂಧ್ಯಾರ ಮಾರ್ಗದರ್ಶನದಲ್ಲಿ ಕಟ್ಟುನಿಟ್ಟಾದ ಡಯೆಟ್‌, ಚೆಕ್‌ಅಪ್‌, ಔಷಧ ಪಥ್ಯ ನಡೆಸಿದ್ದರಿಂದ ಈ ಸಲ ಸುಸೂತ್ರವಾಗಿ ಅವಳಿಗೆ ಹೆರಿಗೆ ಆಯಿತು. ಆದಿತ್ಯ ಬಂದ ಮೇಲೆ ಅವರ ಕುಟುಂಬ ಪರಿಪೂರ್ಣವೆನಿಸಿತು. ಅದಾದ ಮೇಲೆ ಇಬ್ಬರೂ ತಮ್ಮ ಬಿಸ್‌ನೆಸ್‌ ಮತ್ತು ಆರೋಗ್ಯದ ಕುರಿತಾಗಿ ಹೆಚ್ಚು ಕಾಳಜಿ ವಹಿಸಿದರು. ಹೀಗಾಗಿ ಇವರು ಕಲ್ಚರ್‌ ಕ್ಲಬ್‌ನಲ್ಲಿ ಸತತ 2 ವರ್ಷ `ಪರ್ಫೆಕ್ಟ್ ಕಪಲ್’ ಅವಾರ್ಡ್‌ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದರು.

ಇದನ್ನೆಲ್ಲ ಯೋಚಿಸಿದ ಉಷಾಳಿಗೆ ರೋಹಿತ್‌ ಕಥೆ ಯಾಕೆ ಹೀಗಾಯಿತೆಂದು ಗೊತ್ತಾಗಲಿಲ್ಲ. ಅವನ ಹೆಂಡತಿ ಪ್ರೀತಿ, ಸ್ಥೂಲತೆ ದ್ವೇಷಿಸುವ ಗಂಡನೆದುರು ಅದು ಹೇಗೆ ಅಷ್ಟು ದಪ್ಪವಾದಳೋ ಎಂದು ಆಶ್ಚರ್ಯಪಟ್ಟಳು.

ಅಂತೂ ಅವಳು ಕಣ್ಣು ಬಿಟ್ಟು ಎದ್ದಾಗ ಮರುದಿನ 8 ಗಂಟೆ ಆಗಿಹೋಗಿತ್ತು. ಅಯ್ಯೋ….. ಇಷ್ಟು ತಡವಾಯಿತಲ್ಲ ಎಂದು ದಡಬಡಿಸಿ ಎದ್ದಳು. ಅಷ್ಟರಲ್ಲಿ ಅಜಯ್‌ ಕಾಫಿ ಕಪ್‌ ಸಮೇತ ಟ್ರೇ ಹಿಡಿದು ಹೆಂಡತಿಯನ್ನು ಎಬ್ಬಿಸಲು ಬಂದ. “ಗುಡ್‌ ಮಾರ್ನಿಂಗ್‌ ಮೇಡಂ….. ಎದ್ದಿದ್ದೀರೋ?” ಎಂದು ನಸುನಗುತ್ತಾ ಅವಳನ್ನು ಆಲಂಗಿಸಿದ.

“ಏನಿದು ಅಜಯ್‌, ಇಷ್ಟು ತಡವಾಗಿದೆ….. ಆಗಲೇ ನನ್ನನ್ನು ಎಬ್ಬಿಸಬಾರದಿತ್ತೇ? ಆಫೀಸಿಗೆ ರೆಡಿ ಆದಿರಾ? ಮತ್ತೆ ನಿಮ್ಮ ಬ್ರೇಕ್‌ಫಾಸ್ಟ್….? ಕ್ಯಾರಿಯರ್‌ ರೆಡಿ ಆಗಬೇಕು.”

“ಹೋಲ್ಡ್ ಆನ್‌…. ಏನೂ ಯೋಚಿಸಬೇಡ. ನಾನು ಆಗಲೇ ಎದ್ದು ಜಾಗಿಂಗ್‌ ಮುಗಿಸಿ ಬಂದೆ. ಅಮ್ಮನ ಜೊತೆ ಕಾಫಿ ಆಯ್ತು. ಅಮ್ಮ ತಿಂಡಿ ಸಹ ರೆಡಿ ಮಾಡಿದ್ದಾರೆ. ಮಧ್ಯಾಹ್ನ ಕ್ಲೈಂಟ್‌ ಮೀಟಿಂಗ್‌ ಇದೆ, ಹೀಗಾಗಿ ಊಟ ಹೊರಗಡೆಯೇ ಆಗುತ್ತೆ. ಆದಿತ್ಯ ಅಮ್ಮನ ಜೊತೆ ಲಾನ್‌ನಲ್ಲಿ ಖುಷಿಯಾಗಿ ಆಡ್ತಿದ್ದಾನೆ. ನೀನು ರಾತ್ರಿ ತಡವಾಗಿ ನಿದ್ದೆ ಮಾಡಿದೆ ಅನ್ನಿಸ್ತು, ಅದಕ್ಕೆ ಎಬ್ಬಿಸಲಿಲ್ಲ.”

ಇಬ್ಬರೂ ನೆಮ್ಮದಿಯಾಗಿ ಕಾಫಿ ಕುಡಿದರು. ಅತ್ತೆಯ ಬಗ್ಗೆ ಅವಳಿಗೆ ಬಹಳ ಹೆಮ್ಮೆ ಎನಿಸಿತು. ಅವಳು ಆಫೀಸ್‌ಗೆ ಸೇರಿದಾಗಿನಿಂದ, ಆದಿತ್ಯನ ಸಂಪೂರ್ಣ ಜವಾಬ್ದಾರಿ ಅವರದೇ ಆಗಿತ್ತು. ಮನೆಗೆ ಕೆಲಸದವಳು ಬರುತ್ತಿದ್ದಳು. ಹೀಗಾಗಿ ಮೊಮ್ಮಗನ ಜೊತೆ ಸಮಯ ಕಳೆಯುವುದೇ ಅವರಿಗೆ ದೊಡ್ಡ ಖುಷಿ!

“ಸಂಜೆ ರೋಹಿತ್‌ ಪ್ರೀತಿ ಬರ್ತಿದ್ದಾರೆ, ನೆನಪಿದೆ ಅಲ್ವಾ ಅಜಯ್‌…. ಬೇಗ ಬಂದುಬಿಡಿ,” ಎಂದಳು.

“ಆಯ್ತು, ಮೀಟಿಂಗ್‌ ಮುಗಿಸಿ ಆದಷ್ಟು ಬೇಗ ಬರ್ತೀನಿ,” ಎಂದು ಅವಳಿಂದ ಬೀಳ್ಕೊಂಡು ಆಫೀಸಿಗೆ ಹೊರಟ ಅಜಯ್‌. ಸಂಜೆಯ ಆತಿಥ್ಯಕ್ಕೆ ಏನೆಲ್ಲ ತಯಾರಿ ಮಾಡಿಕೊಳ್ಳಲಿ ಎಂದು ಲೆಕ್ಕ ಹಾಕುತ್ತಲೇ ಅವಳು ಬೆಳಗಿನ ಅರ್ಜೆಂಟ್‌ ಕೆಲಸ ಮುಗಿಸಿದಳು.

ಇಂದು ತಾನು ಆಫೀಸಿಗೆ ಬರಲಾಗದು ಎಂದು ಸಹಾಯಕಿ ವಾಣಿಗೆ ಪೋನ್‌ ಮಾಡಿ ತಿಳಿಸಿದಳು. ಸರಳವಾಗಿ ಮಧ್ಯಾಹ್ನದ ಅಡುಗೆ ಮುಗಿಸಿ, ಮಗುವಿನ ಸ್ನಾನ, ಊಟ ಪೂರೈಸಿ ಮಲಗಿಸಿದಳು. ಅತ್ತೆ ಜೊತೆ ಕುಳಿತು ರಾತ್ರಿಗೆ ಏನಡುಗೆ ಎಂದು ಚರ್ಚಿಸಿದಳು. ಕೆಲಸದವಳ ನೆರವಿನೊಂದಿಗೆ ಮನೆಯ ಕರ್ಟನ್‌, ಹಾಲ್‌ನ ಪರದೆ ಎಲ್ಲಾ ಬದಲಾಯಿಸಿದಳು. ಸೋಫಾ ಕವರ್‌, ಕಾರ್ಪೆಟ್‌ ಎಲ್ಲಾ ಹೊಸದು ಬಂತು. ಸಂಜೆ ಹೊತ್ತಿಗೆ ಅಂಗಳದ ಹೂಗಳನ್ನು ತಂದು ಹೂದಾನಿಗೆ ಫ್ರೆಶ್‌ ಆಗಿ ಜೋಡಿಸಿಟ್ಟಳು. ಜಾಮೂನು ರೆಡಿ ಮಾಡಿದ್ದಾಗಿತ್ತು. ಬಿಸಿಬೇಳೆ ಭಾತ್‌, ಮಸಾಲೆ ವಡೆ ಎಲ್ಲಾ ಸಿದ್ಧವಾಯಿತು.

ಮಗುವನ್ನು ಸಿದ್ಧಪಡಿಸಿ, ಅತ್ತೆ ಬಳಿ ಜಡೆ ಹೆಣೆಸಿಕೊಂಡು ಮಲ್ಲಿಗೆ ಮುಡಿದಳು. ಅತ್ತೆ ಸಹ ಸೀರೆ ಬದಲಾಯಿಸಿ ರೆಡಿ ಆದರು. ಅಜಯ್‌ ಬರುವಷ್ಟರಲ್ಲಿ 7 ಗಂಟೆ ಆಗಿತ್ತು. ಇವರು ಅತಿಥಿಗಳಿಗಾಗಿ ಕಾದಿದ್ದರು.

ಅವರು ಬರುಷ್ಟರಲ್ಲಿ 7.30 ದಾಟಿತು. ಉಷಾ ಅಜಯ್‌ ಅವರನ್ನು ಬಹು ಆತ್ಮೀಯತೆಯಿಂದ ಸ್ವಾಗತಿಸಿದರು. ಅವರು ಅಜ್ಜಿ, ಮೊಮ್ಮಗುವನ್ನು ಭೇಟಿಯಾಗಿ ಸಂಭ್ರಮಿಸಿದರು. ಮಗುವಿಗಾಗಿ ತಂದಿದ್ದ ವಿಶೇಷ ಡ್ರೆಸ್‌, ಆಟಿಕೆ, ಎಲ್ಲರಿಗೂ ಸ್ವೀಟ್ಸ್ ನೀಡಿ ಪ್ರೀತಿ ಸಂಭ್ರಮಿಸಿದಳು. ಕಾಫಿ ಮುಗಿಸಿ ಎಲ್ಲರೂ ಹರಟತೊಡಗಿದರು. ಪ್ರೀತಿಗಂತೂ ಆದಿಯನ್ನು ಕೆಳಗಿಳಿಸಲು ಮನಸ್ಸು ಬರುತ್ತಿರಲಿಲ್ಲ. ಮಗು ಸಹ ಅವಳೊಂದಿಗೆ ಹೊಸಮುಖ ಎನ್ನದೆ ಹೊಂದಿಕೊಂಡಿತ್ತು.

ಉಷಾ ಅವರಿಗೆ ಮನೆಯೆಲ್ಲ ತೋರಿಸಿದಳು. ಪ್ರೀತಿಗಂತೂ ಇವರ ಅಚ್ಚುಕಟ್ಟಾದ ಮನೆ, ಸಂಸಾರ ಕಂಡು ಹೃದಯ ತುಂಬಿ ಬಂದಿತ್ತು. ಮನಃಪೂರ್ಕವಾಗಿ ಅವಳು ಉಷಾಳ ಜಾಣ್ಮೆ, ಕೈಚಳಕ ಹೊಗಳಿದಳು. ಅದರ ಕ್ರೆಡಿಟ್‌ ಪೂರ್ತಿ ತನ್ನ ಪತಿ ಮತ್ತು ಅತ್ತೆಗೆ ಸಲ್ಲಬೇಕೆಂದು ಉಷಾ ಸಂಭ್ರಮಿಸಿದಳು.

ಊಟ ಮುಗಿಸಿ ಎಲ್ಲರೂ ಅಂಗಳದ ಬೆಂಚಿನಲ್ಲಿ ಕುಳಿತು ಆಹ್ಲಾದಕರ ತಂಗಾಳಿ ಬೀಸುತ್ತಿರಲು, ಹಿತವಾಗಿ ಹರಟಿದರು. ಆದರೂ ರೋಹಿತ್‌ ತನಗೇನೋ ಹೇಳಲು ಪ್ರಯತ್ನಿಸುತ್ತಿದ್ದಾನೆ ಎಂದು ಸೂಕ್ಷ್ಮಮತಿ ಉಷಾ ಗ್ರಹಿಸಿದಳು.

10 ಗಂಟೆ ಆಗಲು ಅತ್ತೆ ಮಾತ್ರೆ ತೆಗೆದು ಕೊಂಡು ಮಲಗುತ್ತೇನೆ ಎಂದು ಇವರಿಗೆ ವಿದಾಯ ಕೋರಿ ಹೊರಟರು. ಆಟವಾಡಿ ಸುಸ್ತಾಗಿದ್ದ ಆದಿತ್ಯ ಪ್ರೀತಿಯ ಮಡಿಲಲ್ಲೇ ನಿದ್ರಿಸಿಬಿಟ್ಟಿದ್ದ.

“ಇವನನ್ನು ನಿಮ್ಮ ರೂಮಿನಲ್ಲಿ ಮಲಗಿಸಲೇ?” ಆದಿತ್ಯನ್ನು ಎತ್ತಿಕೊಂಡು ಪ್ರೀತಿ ಒಳಗೆ ಹೋದಳು. ಅಜಯ್‌ಗೆ ಏನೋ ಕಾಲ್‌ ಬಂದಿದ್ದರಿಂದ ಅವನು ಹೊರಗೆ ಹೋದ. ಇವರಿಬ್ಬರೇ ಉಳಿದಾಗ ರೋಹಿತ್‌ ಹೇಳಿದ, “ಉಷಾ, ನಾನು ನಿನ್ನನ್ನು ವಂಚಿಸಿದ ಅಪರಾಧಿ. ನಿನ್ನ ಬಗ್ಗೆ ಉಡಾಫೆ ಮಾಡಿ ತಪ್ಪು ಮಾಡಿದೆ. ನಿನ್ನನ್ನು ಅಂದು ಆಡಿಕೊಂಡು ಮದುವೆ ಆಗಲ್ಲ ಅಂದಿದ್ದೆ….. ಅದಕ್ಕೆ ನೋಡು, ನಮಗೆ ಈಗ ಶಿಕ್ಷೆ ಆಗಿದೆ. ಸ್ಪೋರ್ಟ್ಸ್ ಪೂರ್ತಿ ತೊರೆದು ಬಿಸ್‌ನೆಸ್‌ನಲ್ಲಿ ಮುಳುಗಿಹೋದೆ. ಪಾರ್ಟಿ ಅಂತ ಆರಂಭವಾದ ಬೀರ್‌ ಅಭ್ಯಾಸ ನನ್ನನ್ನು ಮುಳುಗಿಸಿತು. ಕುಡಿದೂ ಕುಡಿದೂ ದಪ್ಪಗಾಗಿ ಹೋದೆ. ಪ್ರೀತಿಗೆ 2 ಸಲ ಅಬಾರ್ಷನ್‌ ಆಯ್ತು. ಅದಾದ ಮೇಲೆ ಅವಳು ಎಲ್ಲದರಲ್ಲೂ ಆಸಕ್ತಿ ಕಳೆದುಕೊಂಡಳು. ಮೊದಲು ತೆಳ್ಳಗೆ ಬೆಳ್ಳಗಿದ್ದ ಪ್ರೀತಿ, ಥೈರಾಯ್ಡ್ ಸಮಸ್ಯೆಯೂ ಸೇರಿಕೊಂಡು ಹೀಗೆ ಊದಿಹೋಗಿದ್ದಾಳೆ…..

“ನಾವಂತೂ ಎಲ್ಲೂ ಪಾರ್ಟಿ, ಫ್ರೆಂಡ್ಸ್ ಅಂತ ಹೋಗೋದೇ ಬಿಟ್ಟುಬಿಟ್ಟಿದ್ದೇವೆ. ಯಾವುದರಲ್ಲೂ ಆಸಕ್ತಿಯೇ ಇಲ್ಲ. ಇವಳ ಚಿಕ್ಕಪ್ಪನ ಮಗಳ ಮದುವೆ ಅಂತ ಮೈಸೂರಿಗೆ ಬಂದೆವು. ನೀನು ಇಲ್ಲಿ ಸಿಗಬಹುದು ಅನ್ನೋ ಕಲ್ಪನೆ ಕೂಡ ಇರಲಿಲ್ಲ.

“ಬಹಳ ಬೋರಿಂಗ್‌ ಅಂತ ಕ್ಲಬ್‌ ಕಡೆ ಬಂದೆ. ಆಕಸ್ಮಿಕವಾಗಿ ಅಲ್ಲಿ ನಿನ್ನನ್ನು ನೋಡಿದೆ… ನಂಬಲಿಕ್ಕೇ ಆಗ್ತಿಲ್ಲ… ನೀನಾ ಆ ಉಷಾ? ಇಷ್ಟು ಸುಂದರ ಹೇಗಾದಿ ಅಂತ ಯೋಚಿಸುವಷ್ಟರಲ್ಲಿ ನಿನ್ನ ಹ್ಯಾಂಡ್‌ಸಮ್ ಪಾರ್ಟ್‌ನರ್‌ ಬಂದು ನಿನ್ನ ಎತ್ತಿ ಗಿರಗಿರ ತಿರುಗಿಸಿ ಇಳಿಸಿದಾಗ, ನಿನ್ನ ಪತಿ ಇರಬೇಕೆನಿಸಿತು. ನೀವೇ ಬೆಸ್ಟ್ ಕಪಲ್ ಅಂತ ಗೊತ್ತಾದಾಗ ನಂಬಲಿಕ್ಕೇ ಆಗಲಿಲ್ಲ….. ನನ್ನ ವರ್ತನೆಗೆ ಕ್ಷಮೆ ಇರಲಿ…. ವೆರಿ ಸಾರಿ….”

ಉಷಾಳಿಗೀಗ ಅವನ ಕಣ್ಣಲ್ಲಿ ಪಶ್ಚಾತ್ತಾಪ ಗೊತ್ತಾಯಿತು ಹಿಂದಿನದೆಲ್ಲ ಮರೆತು ಅವನನ್ನು ಕ್ಷಮಿಸಿದ್ದಳು. ಪ್ರೀತಿಯನ್ನು ನೋಡಿದಾಗ, ಅವಳ ತಾಯ್ತನದ ತುಡಿತ, ಆದಿ ಕಡೆ ಇದ್ದ ಪ್ರೀತಿ ಎಲ್ಲಾ ಅರ್ಥವಾಯಿತು.

“ನೀನು ನನ್ನ  ಬಿಟ್ಟ ಮೇಲೆ ಬಹಳ ಬೇಸರವಾಯ್ತು. ಹೀಗಾಗಿ ಎಂ.ಎ ಕಲಿಯಲು ನಾನೇ ಮೈಸೂರಿಗೆ ಬಂದು ಸೇರಿದೆ. ಇಲ್ಲಿ ಅಪ್ಪಾಜಿ ನನಗಾಗಿ ಒಳ್ಳೆಯ ಶ್ರೀಮಂತ ವರ ಅಜಯ್‌ರನ್ನು ಆರಿಸಿದರು. ಹೀಗಾಗಿ ಮದವೆ ಆಗಿ ಇಲ್ಲೇ ಸೆಟಲ್ ಆದೆ. ಅಜಯ್‌ಗೆ ನಾನೆಂದರೆ ತುಂಬಾ ಪ್ರೀತಿ… ನಮಗೂ ಒಂದು ಮಗು ಹೋಯ್ತು. ನಂತರ ಡಾ. ಸಂಧ್ಯಾರ ಸಲಹೆಯಂತೆ ನಾವು ತೂಕ ಕರಗಿಸಿ, ಚಿಕಿತ್ಸೆ ಪಡೆದೆವು. ನಂತರ ಈ ಮಗು ಹುಟ್ಟಿದ. ಟಚ್‌ ವುಡ್‌, ಈಗ ಎಲ್ಲಾ ಸರಿಯಾಗಿದೆ. ಆಯ್ತು ಬಿಡು, ಈಗ ಯಾರ ಮೇಲೂ ಕೋಪವಿಲ್ಲ…..”

“ಯಾರ ಮೇಲಪ್ಪ ನಿಂಗೆ ಕೋಪ ಇಲ್ಲ?” ಎಂದು ನಗುತ್ತಾ ಅಜಯ್‌ ಪ್ರವೇಶಿಸಿದ. ಆಗ ಪ್ರೀತಿಯೂ ಮಗು ಮಲಗಿಸಿ ಅಲ್ಲಿಗೆ ಬಂದಿದ್ದಳು.

“ಅದೇನಿಲ್ಲ….. ರೋಹಿತ್‌ ಪ್ರೀತಿ ಬಗ್ಗೆ ಹೇಳುತ್ತಿದ್ದ. ಅವರಿಗೂ ಈಗ ಮಗು ಆಗಬೇಕಿದೆ.”

“ಹಾಗಿದ್ದರೆ ಡಾ. ಸಂಧ್ಯಾರ ಬಳಿ ಕರೆದುಕೊಂಡು ಹೋಗು. ಅವರಿಗಿಂತ ಉತ್ತಮ ಸಲಹೆ ಯಾರು ಕೊಡ್ತಾರೆ?”

ಪ್ರೀತಿ ಕುತೂಹಲದಿಂದ ಎಲ್ಲಾ ಕೇಳಿ ತಿಳಿದುಕೊಂಡಳು. ಮಾರನೇ ದಿನ ಮದುವೆ ಮುಗಿಸಿಕೊಂಡು, ಮರುದಿನ ಡಾಕ್ಟರ್‌ ಬಳಿ ಹೋಗೋಣ ಎಂದು ಉತ್ಸಾಹದಿಂದ ನುಡಿದಳು.

ಪ್ರೀತಿಯ ಮಾತಿಗೆ ರೋಹಿತ್‌ ಒಪ್ಪಿದ. ಅವರು ಸಂತಸದಿಂದ ಇವರಿಂದ ಬೀಳ್ಕೊಂಡು ಹೊರಟರು. ಇದೀಗ ಉಷಾಳ ಮನದಲ್ಲಿ ಯಾವ ಕಹಿಯೂ ಇರಲಿಲ್ಲ. ಕಾಲ ಎಲ್ಲವನ್ನೂ ಬದಲಾಯಿಸಿತ್ತು. ತನ್ನಂತೆಯೇ ಕಷ್ಟಪಡುತ್ತಿರುವ ಪ್ರೀತಿ ಬಗ್ಗೆ ಅವಳಿಗೆ ಚೆನ್ನಾಗಿ ಅರ್ಥವಾಗಿತ್ತು. ರೋಹಿತ್‌ ಹಾಗೂ ಪ್ರೀತಿ ಮನಸ್ಸಿಟ್ಟು ತಮ್ಮಂತೆಯೇ ತೂಕ ಕರಗಿಸಿ, ಚಿಕಿತ್ಸೆ, ಪಥ್ಯ ನಡೆಸಿದರೆ ಎಲ್ಲ ಸರಿಹೋಗುತ್ತದೆ ಎಂಬ ವಿಶ್ವಾಸ ಅವಳಿಗೆ ಮೂಡಿತು. ಅಜಯ್‌ ಬಾಗಿಲು ಹಾಕಿ ಬಂದು ಮಡದಿಯ ಜೊತೆ ಕೋಣೆ ಸೇರಿದ. ಮಗುವಿನ ಆ ಕಡೆ ಈ ಕಡೆ ಮಲಗಿದ ಆ ದಂಪತಿಗಳ ಮುಖದಲ್ಲಿ ಸಂತೃಪ್ತಿಯ ಕಳೆ ಇತ್ತು. ತನ್ನಂತೆಯೇ ಪ್ರೀತಿಗೂ ಮಗುವಾಗಲಿ ಎಂದು ಉಷಾ ತುಂಬು ಮನದಿಂದ ಹಾರೈಸಿದಳು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ