ಕಥೆ - ವನಿತಾ ವಿಶ್ವನಾಥ್
ಸಾಯಂಕಾಲ ವಾಕಿಂಗ್ ಮಾಡಿ ಮನೆಗೆ ಬಂದೆ. ಬೆವರಿನಿಂದ ಮೈಯೆಲ್ಲ ಒದ್ದೆಯಾಗಿಬಿಟ್ಟಿತ್ತು. ಟವೆಲ್‌ನಿಂದ ಮುಖ ಮೈಯನ್ನು ಒರೆಸಿಕೊಳ್ಳುತ್ತಾ ನಿಂತಿರುವಾಗ ವಿವೇಕ್ ಆಫೀಸ್‌ನಿಂದ ಬಂದರು.
ನನ್ನನ್ನು ನೋಡಿ, ``ರಶ್ಮಿ ಏನಾಯಿತು?'' ಎಂದರು.
``ಏನಿಲ್ಲ.... ಈಗಷ್ಟೇ ವಾಕಿಂಗ್ ಮುಗಿಸಿ ಬಂದೆ.''
ನಾನು 10 ನಿಮಿಷ ಫ್ಯಾನ್ ಕೆಳಗೆ ನಿಂತಿದ್ದೆ. ನಂತರ ವಿವೇಕ್ ಫ್ರೆಶ್ ಆಗಿ ಬರುವಷ್ಟರಲ್ಲಿ ಕಾಫಿ ಮಾಡಿದೆ. ಅವರಿಗೆ ಕಾಫಿ ಕೊಟ್ಟು ನಾನು ಹಾಗೇ ದಿವಾನ್ ಮೇಲೆ ಉರುಳಿಕೊಂಡೆ.
``ಯಾಕೆ, ಏನಾಯಿತು?'' ವಿವೇಕ್ ಮತ್ತೊಮ್ಮೆ ಕೇಳಿದರು.
``ಅಬ್ಬಾ! ಎಷ್ಟು ಸೆಕೆ, ಬಹಳ ಆಯಾಸ ಆಗುತ್ತಿದೆ.''
ಎಂದಿನಂತೆ ನನ್ನನ್ನು ರೇಗಿಸಲು ಮುಂದಾದರು, ``ಹೌದು, ವಯಸ್ಸಾಗುತ್ತಾ ಇದೆಯಲ್ಲ. ಮತ್ತೇನು?'' ಎಂದು ಹಾಸ್ಯ ಮಾಡಿದರು.
ಸೆಕೆ, ಆಯಾಸದ ಜೊತೆಗೆ ಅವರ ಹಾಸ್ಯ ನನಗೆ ಕೋಪ ತರಿಸಿತು. ನಾನು ಸಿಟ್ಟಿನಿಂದ ಹೇಳಿದೆ, ``ಎಷ್ಟು ವಯಸ್ಸು ಆಗಿಬಿಟ್ಟಿದೆ? ಇನ್ನೂ 50 ವರ್ಷ ಕೂಡ ಆಗಿಲ್ಲ. ಯಾವಾಗ ನೋಡಿದರೂ ವಯಸ್ಸಿನ ರಾಗ ಹಾಡುತ್ತಾ ಇರುತ್ತೀರಿ.''
ವಿವೇಕ್ ಮತ್ತಷ್ಟು ರೇಗಿಸಿದರು, ``ಸತ್ಯ ಯಾವಾಗಲೂ ಕಹಿಯಾಗಿರುತ್ತದೆ ರಶ್ಮಿ.''
ನಾನು ಛಟ್ಟನೆ ಅಲ್ಲಿಂದ ಎದ್ದು ಹೋದೆ. ರೂಮಿಗೆ ಹೋಗಿ ಕನ್ನಡಿಯಲ್ಲಿ ನನ್ನನ್ನು ನೋಡಿಕೊಂಡೆ, `ಹ್ಞೂಂ... ನಿನಗೆ ವಯಸ್ಸಾಯಿತು ಅಂತ ಹೇಳುತ್ತಿರುತ್ತಾರೆ... ನಾನೆಷ್ಟು ಫಿಟ್ ಆಗಿದ್ದೇನೆ... ಎಲ್ಲರೂ ಕಾಂಪ್ಲಿಮೆಂಟ್ಸ್ ಕೊಡುತ್ತಾರೆ... ಇವರು ಮಾತ್ರ ವಯಸ್ಸಿನ ವಿಷಯವನ್ನೇ ಮಾತನಾಡುತ್ತಾರೆ. ನಾನು ಯಂಗ್ ಅಂಡ್ ಫಿಟ್ ಆಗಿದ್ದೇನೆ ಅಂತ ನನಗೇ ಅನ್ನಿಸುತ್ತದೆ. ಹಾಗಿರುವಾಗ ಏನೋ ಸ್ವಲ್ಪ ಹೆಚ್ಚು ಕಡಿಮೆ ಆದರೆ ಅದಕ್ಕೆಲ್ಲ ವಯಸ್ಸು ಕಾರಣವಾಗುತ್ತದೇನು? ಸುಮ್ಮನೆ ಹೇಳುತ್ತಿರುತ್ತಾರೆ. ಅವರ ಮಾತಿಗೆ ಏಕೆ ಗಮನ ಕೊಡಬೇಕು... ಕೋಪದಿಂದ ಆರೋಗ್ಯ ಹಾಳಾಗುತ್ತದೆ... ಅವರು ಏನು ಬೇಕಾದರೂ ಹೇಳಿಕೊಳ್ಳಲಿ ನನಗೇನಂತೆ...'
ಬ್ಯಾಸ್ಕೆಟ್ ಬಾಲ್ ಆಡಲು ಹೋಗಿದ್ದ ಶರತ್ ಮನೆಗೆ ಬಂದ. ಆ ನಂತರ ಕೋಚಿಂಗ್ ಕ್ಲಾಸ್ ಮುಗಿಸಿಕೊಂಡು ಶ್ರಾವ್ಯಾ ಸಹ ಬಂದಳು. ರಾತ್ರಿ ಎಲ್ಲರೂ ಊಟ ಮಾಡುತ್ತಾ ಕುಳಿತಿದ್ದಾಗ, ಇದ್ದಕ್ಕಿದ್ದಂತೆ ನನಗೆ ಏನೋ ಜ್ಞಾಪಕ ಬಂದಿತು.
``ಅಯ್ಯೋ, ಬಹಳ ಸೆಕೆ ಆಗುತ್ತಿತ್ತು ಅಂತ ವಾಕಿಂಗ್‌ನಿಂದ ನೇರವಾಗಿ ಮನೆಗೆ ಬಂದುಬಿಟ್ಟೆ. ನಾಳೆಗೆ ತರಕಾರಿ ತರುವುದನ್ನೇ ಮರೆತುಬಿಟ್ಟೆ,'' ಎಂದೆ.
ವಿವೇಕ್ ಸಿಕ್ಕ ಅವಕಾಶವನ್ನು ಬಳಸಿಕೊಂಡು ತಮ್ಮ ಬಾಣಬಿಟ್ಟರು. ``ಆಗುತ್ತೆ, ವಯಸ್ಸಾಗುತ್ತಿದ್ದಂತೆ ನೆನಪಿನ ಶಕ್ತಿ ಕಡಿಮೆಯಾಗುತ್ತದೆ.''
ಬೆಳಗ್ಗೆ ತಿಂಡಿಗೆ ಏನು ಮಾಡುವುದು ಅನ್ನುವ ಟೆನ್ಶನ್‌ನಲ್ಲಿ ನಾನಿದ್ದರೆ ಇವರದೊಂದು ವ್ಯಂಗ್ಯ ಬಾಣ. ನನಗೆ ನಿಜವಾಗಲೂ ಕೋಪ ಬಂದಿತು. ನಾನೇನೂ ಮಾತನಾಡಲಿಲ್ಲ. ಆದರೆ ಅವರತ್ತ ಉರಿಗಣ್ಣು ಬೀರಿದೆ. ನನಗೆ ಕೋಪ ಬಂದಿದೆಯೆಂದು ಮಕ್ಕಳಿಗೆ ಅರ್ಥವಾಯಿತು. ಆದರೇನು, ರೇಗಿಸುವ ಸಮಯದಲ್ಲಿ ಅವರು ತಮ್ಮ ಡ್ಯಾಡಿಯ ಜೊತೆಯಾಗುತ್ತಾರೆ.
``ಮಮ್ಮಿ, ಸತ್ಯವನ್ನು ಒಪ್ಪಿಕೊಳ್ಳುವುದಕ್ಕೆ ನಿಮಗೆ ಏಕೆ ಆಗುತ್ತಿಲ್ಲ? ಕೆಲವು ಸಲ ನಿಮ್ಮ ಬ್ಯಾಕ್ ಪೇನ್ ಹೆಚ್ಚಾಗುತ್ತದೆ. ಮತ್ತೆ ಕೆಲವು ಸಲ ಮರೆವು ಉಂಟಾಗುತ್ತದೆ. ವಯಸ್ಸಾಗುತ್ತಿದೆ ಅಂತ ಒಪ್ಪಿಕೊಳ್ಳಿ ಮಮ್ಮಿ,'' ಎಂದು ಶರತ್ ಹೇಳಿದ.