ಮಿನಿ ಕಥೆ  –  ವೀಣಾ ಭಟ್‌

ಬಾಗಿಲ ಬಳಿ ಕರೆಗಂಟೆಯ ಸದ್ದಾದಾಗ ಇಷ್ಟು ಹೊತ್ತಲ್ಲಿ ಯಾರಿರಬಹುದು ಎಂದು ಬೃಂದಾ ಕಸಿವಿಸಿಗೊಂಡಳು. ಗಡಿಯಾರ  ಆಗಲೇ ರಾತ್ರಿ 9 ಗಂಟೆ ಎಂದು ತೋರಿಸುತ್ತಿತ್ತು. ಒಳಗೇನೋ ಕೆಲಸ ಮಾಡುತ್ತಿದ್ದವಳು ಕಾಲೆಳೆಯುತ್ತಾ ಬಂದು, ತುಸು ಮಾತ್ರ ಬಾಗಿಲು ತೆರೆದು ನೋಡಿದಳು. “ಯಾರದು….?” ಅವಳು ಸರಿಯಾಗಿ ಗಮನಿಸಿದಾಗ ಬಂದಿರುವವನು ಮಾಧವ ಎಂದು ಗೊತ್ತಾಯಿತು.

“ಓ….. ನೀವಾ?” ಎಂದು ದಾರಿ ಬಿಡುತ್ತಾ ಹಿಂದೆ ಸರಿದಳು. ಮಾಧವ ನಿಧಾನವಾಗಿ ಒಳಗೆ ಬಂದ. ಇನ್ನೊಂದು ಕ್ಷಣದಲ್ಲಿ ಇಡೀ ಕೋಣೆಯಲ್ಲಿ ಮಸಣ ಮೌನ ವ್ಯಾಪಿಸಿತು. ಕೋಣೆಯ ಮೂಲೆಯಲ್ಲಿದ್ದ ಹೂಜಿಯಿಂದ ಲೋಟಕ್ಕೆ ನೀರು ಬಗ್ಗಿಸಿ ಅವನ ಮುಂದಿಟ್ಟಳು, “ಏನು ಇಷ್ಟು ದೂರ ಬಂದದ್ದು?” ಅವನು ಗಟಗಟ ನೀರು ಕುಡಿದ. ತುಸು ಸುಧಾರಿಸಿಕೊಂಡು ಹೇಳಿದ, “ಅದು…. ಬಂದು…. ಸಂಜೆ ಅಮ್ಮ ತೀರಿಕೊಂಡರು. ಬಹುಶಃ ನೀನು ಈಗ ಅಲ್ಲಿಗೆ ಬಂದಿರಲು ಒಪ್ಪಬಹುದು ಅಂತ ಭಾವಿಸಿ ವಿಷಯ ತಿಳಿಸಲು ಬಂದೆ…..”

ಬೃಂದಾ ಏನೂ ಹೇಳಲು ತೋಚದೆ, “ಓಹ್‌, ಐ ಆ್ಯಮ್ ಸಾರಿ….” ಎನ್ನುತ್ತಾ ದೃಷ್ಟಿ ನೆಲದ ಮೇಲೆ ನೆಟ್ಟಳು. ಆಕಸ್ಮಿಕವಾಗಿ ಅವಳ ಕಂಗಳು ತುಂಬಿ ಬಂದವು. ಮತ್ತೆ ಅದೇ ಮೌನ 2 ನಿಮಿಷ ಮುಂದುವರಿಯಿತು.

“ಹಾಗಿದ್ದರೆ…. ನಾಳೆ ನೀನು ಮನೆಗೆ ಬರ್ತೀಯಾ ಅಲ್ವಾ? ನಾನು….. ನಾನು ಕಾಯ್ತಾ ಇರ್ತೀನಿ,” ಎನ್ನುತ್ತಾ ಮಾಧವ ಹೊರಡಲು ಎದ್ದ. ಅವನು ಬಾಗಿಲವರೆಗೂ ಹೋಗಿ, ಅದರಾಚೆ ಅಡಿಯಿಟ್ಟು ಮತ್ತೆ ಹೇಳಿದ, “ಐ ವಿಲ್‌ ವೆಯ್ಟ್ ಫಾರ್‌ ಯೂ….”

ಸರಿ ಎಂಬಂತೆ ಬೃಂದಾ ತಲೆ ಆಡಿಸುತ್ತಾ ಮತ್ತೆ ನೆಲ ನೋಡತೊಡಗಿದಳು. ಮಾಧವ ನಿಧಾನವಾಗಿ ಮೆಟ್ಟಿಲು ಇಳಿಯುತ್ತಾ  ಹೊರಟ ಸದ್ದು ಕ್ರಮೇಣ ಕೇಳಿಸದಾಯಿತು. ಬೃಂದಾ ಎದ್ದು ಬಂದು ಬಾಗಿಲು ಹಾಕಿ, ಒಳಗಿನಿಂದ ಡೋರ್‌ ಲಾಕ್‌ ಮಾಡಿಕೊಂಡು ಅಲ್ಲೇ ಇದ್ದ ಚಾಪೆ ಮೇಲೆ ಒರಗಿದಳು. ಅವಳಿಗರಿವಿಲ್ಲದೆ ಮತ್ತೆ ಮತ್ತೆ ಕಂಬನಿ ಮಿಡಿದಳು. ಮದುವೆಯಾಗಿ 10 ವರ್ಷಗಳು ಎಷ್ಟು ಬೇಗ ಕಳೆದುಹೋದವು….

ಬೃಂದಾ ನಿಡಿದಾದ  ಉಸಿರು ಬಿಟ್ಟು ಹಳೆಯದನ್ನು ನೆನಪಿಸಿಕೊಂಡಳು. 10 ಗಂಟೆ ದಾಟಿತು. ಊಟದ ಹೊತ್ತು ಮೀರುತ್ತಿದೆ ಎನಿಸಿದರೂ ಹಸಿವೇ ಇರಲಿಲ್ಲ. ಅಪಾರ್ಟ್‌ಮೆಂಟ್‌ನ ಒಂದೊಂದೇ ಫ್ಲಾಟ್‌ನ ದೀಪಗಳು ನಂದತೊಡಗಿದವು. ಬಾಲ್ಕನಿ ಬಳಿ ಇದ್ದ ಬೆಳಕಿನಲ್ಲಿ  ಬಂದು ನಿಂತು ಹೊರಗಿನ ಆಕಾಶದ ನಕ್ಷತ್ರಗಳನ್ನು ಎಣಿಸತೊಡಗಿದಳು. ವೇಗವಾಗಿ ಆ ರಸ್ತೆ ಬದಿ ಹಾದು ಹೋಗುತ್ತಿದ್ದ ಗಾಡಿಗಳು ಪರಸ್ಪರ ಅಟ್ಟಿಸಿಕೊಂಡು ಹೋಗುತ್ತಿವೆಯೇನೋ ಎನಿಸಿತು. ಎಲ್ಲಿ ಹೋದರೂ ಏನೇ ಮಾಡಿದರೂ ನೆನಪುಗಳು ಹಿಂದಕ್ಕೇ ಓಡುತ್ತಿತ್ತು.

ಬೃಂದಾಗೆ ಮನಸ್ಸು ಬಹಳ ಭಾರ ಅನಿಸಿತು. ಉಟ್ಟಿದ್ದ ಸೀರೆ ಬದಲಿಸಿ, ನೈಟಿ ಧರಿಸಿ ಹಾಗೇ ಮಲಗಿಬಿಟ್ಟಳು. 2 ಲೋಟ ನೀರು ಕುಡಿದಿದ್ದೇ ಬಂತು. ಕಣ್ಣು ಮುಚ್ಚಿದಾಗ ಅದೇ ಹಳೆಯ ಮಾತುಗಳು ಕೇಳಿ ಬರತೊಡಗಿದವು.

“ಬೃಂದಾ…. ಅಮ್ಮನಿಗೆ ಊಟ ಕೊಟ್ಟೆಯಾ?”

“ಆಯ್ತು….. ಈಗ ಬಡಿಸಿ ತರ್ತೀನಿ…..”

ಅವಳು ಬಡಿಸಿಕೊಟ್ಟ ಊಟದ ತಟ್ಟೆ ತೆಗೆದುಕೊಂಡು ಮಾಧವ ಅಮ್ಮನಿದ್ದ ಕೋಣೆಗೆ ಹೋದ.

“ಇರಲಿ ಬಿಡಿ, ನೀವು ಊಟ ಮಾಡಿ. ನಾನು ಅವರಿಗೆ ತೆಗೆದುಕೊಂಡು ಹೋಗಿ ಕೊಡ್ತೀನಿ.”

“ಪರವಾಗಿಲ್ಲ, ಮನೆಯಲ್ಲಿ ನಾನಿರುವಾಗ ನಾನೇ  ಕೊಡ್ತೀನಿ,” ಎಂದು ಹೊರಟುಹೋದ.

ಮಾರನೇ ದಿನ ಅವನು ಆಫೀಸಿನಿಂದ ಬರುತ್ತಿದ್ದಂತೆ, “ಬೃಂದಾ…. ಅಮ್ಮ ಯಾಕೋ ಕೆಮ್ಮುತ್ತಿದ್ದಾರೆ. ಏನೂಂತ ನೋಡಬಾರದೇ?”

“ಏನಿಲ್ಲ…. ಏನೋ ನೆನಪಾಗಿ ನೆತ್ತಿ ಹತ್ತಿರಬೇಕು. ಅಲ್ಲೇ ನೀರಿದೆ ಬಿಡಿ.”

ಮಾಧವ ಕೈಕಾಲೂ ತೊಳೆಯದೆ ಶೆಲ್ಪಿನಲ್ಲಿದ್ದ ಕಾಫ್‌ ಸಿರಪ್‌ ಹಿಡಿದು ಅಮ್ಮನ ಕೋಣೆಗೆ ಓಡಿದ. ಹೀಗೆ ದಿನಗಳು ನೀರಸವಾಗಿ ಕಳೆಯುತ್ತಿದ್ದವು.

ಬೃಂದಾ ಸೋಮವಾರದ ಬೆಳಗ್ಗೆ  ಬೇಗ ಬೇಗ ಮನೆಯ ಕೆಲಸ ಮುಗಿಸುತ್ತಿದ್ದಳು. ಗಂಡನ ಟಿಫನ್‌ ಬಾಕ್ಸ್ ರೆಡಿ ಮಾಡುವುದಿತ್ತು. ಈಗಾಗಲೇ ಅವನಿಗೆ ಆಫೀಸ್‌ಗೆ  ತಡವಾಗಿತ್ತು. “ಬೃಂದಾ… ತಿಂಡಿ ರೆಡಿ ಆಯ್ತಾ? ಈ ಕೆಲಸಗಳನ್ನು ನೀನು ಆಮೇಲೆ ಕೂಡ ಮಾಡಿಕೊಳ್ಳಬಹುದು. ಸರಿ ಬಿಡು, ನಾನು ಹೊರಟೆ,” ಮುಖ ಸೊಟ್ಟಗೆ ಮಾಡಿಕೊಳ್ಳುತ್ತಾ ಹೇಳಿದ.

“ಆಯ್ತು ಆಯ್ತು….. ತಗೊಳ್ಳಿ,” ಎಂದು ಅವನ ಕೈಗೆ ಟಿಫನ್‌ ಬಾಕ್ಸ್ ಕೊಟ್ಟು, ದೋಸೆ ಹಾಕಿದ್ದ ತಟ್ಟೆ ನೀಡಿದಳು. ಒಳಗೋಡಿ ಕಾಫಿ ತಂದಳು. ಅದರ ರುಚಿಪಚಿ ನೋಡದೆ ಒಂದೇ ಸಲ ಗಬಗಬ ಮುಗಿಸಿ ಮಾಧವ ಹೊರಟೇಬಿಟ್ಟ.

ನಂತರ ಅಮ್ಮನಿಗೆ ಸ್ನಾನ, ಅವರಿಗೆ ಬೇರೆ ಬಟ್ಟೆ, ಇಸ್ತ್ರೀ ಮಾಡು, ತಿಂಡಿ ಕೊಡು, ಹಣ್ಣು ಕತ್ತರಿಸು, ಜೂಸ್‌ ಮಾಡು…. ಹೀಗೆ ಸಣ್ಣಪುಟ್ಟ ಕೆಲಸಗಳ ಮಧ್ಯೆ ತನ್ನದೂ ಸ್ನಾನ, ತಿಂಡಿ, ಊಟ ಆಯ್ತು ಎನಿಸುವಳು.

ಸಂಜೆ ಮನೆಗೆ ಬಂದ ಮಾಧವ ಕಾಫಿ ಹೀರಿದವನೇ ಅಮ್ಮನ ಕೋಣೆ ಸೇರಿದ. ಅಲ್ಲೇನು ಕಂಡನೋ….? ಥಟ್ಟನೆ ಚೀರಿದ, “ಬೃಂದಾ, ನೀನು ಅಮ್ಮನ್ನ ಸರಿಯಾಗಿ ಗಮನಿಸ್ತಿಲ್ಲ….. ಮುದುಕಿ ಆಗಿದ್ದಾಳೆ, ನೀನು ತಾನೇ ನೋಡಬೇಕು….. ಎಲ್ಲವನ್ನೂ ಕೆಲಸದ ನಿಂಗಿಗೆ ಬಿಟ್ಟು ಬಿಡಬೇಡ!”

ಅದನ್ನು ಕೇಳಿಸಿಕೊಂಡು ಬೃಂದಾ ಅವಾಕ್ಕಾದಳು. ಅವಳಿಗೆ ತುಂಬಾ ಕೋಪ ಬಂದಿತ್ತು. ಮಾಧವ ಮತ್ತು ಅವಳ ನಡುವೆ ಇದ್ದ ಪ್ರೇಮ ಎಂದೋ ಸತ್ತುಹೋಗಿತ್ತು. ಅವಳೀಗ ಆ ಮನೆಗೆ ಕೇವಲ ದುಡಿಯುವ ಒಂದು ಯಂತ್ರ. ಮದುವೆಯಾದ ಹೊಸತರಲ್ಲಿ ತಾನು ಸ್ವಲ್ಪ ಮುಖಭಾವ ಬದಲಿಸಿದರೂ ಹಿಂದೆ ಹಿಂದೆಯೇ ಬಂದು ನೂರು ಸಲ ಓಲೈಸುತ್ತಿದ್ದ.

ಅವಳ ಒಂದೊಂದು ಸಣ್ಣಪುಟ್ಟ ಅಗತ್ಯಗಳನ್ನೂ ಅತಿ ಜಾಗರೂಕತೆಯಿಂದ ಗಮನಿಸಿಕೊಳ್ಳುತ್ತಿದ್ದ. ಆದರೆ ಮದುವೆ ಹಳತಾಗ ತೊಡಗಿದಂತೆ ಅವನಿಗೆ ಅಮ್ಮ ಒಬ್ಬಳೇ ಪ್ರಪಂಚ ಆಗಿಹೋಗಿತ್ತು. ಈಗ ಅವನಿಗೆ ಬೇರೇನೂ ಕಾಣಿಸುತ್ತಲೇ ಇರಲಿಲ್ಲ.

ಒಮ್ಮೊಮ್ಮೆ ಅವಳಿಗೆ ಅತ್ತೆ ಮೇಲೂ ಕೋಪ ಬರುತ್ತಿತ್ತು. ಎಲ್ಲವನ್ನೂ ಕಾಲಕಾಲಕ್ಕೆ ಒದಗಿಸಿ, ದೂರು ಹೇಳಲು ಅವಕಾಶವಿಲ್ಲದಂತೆ ಇಷ್ಟೆಲ್ಲ ಮಾಡಿದರೂ, ಯಾವತ್ತೂ ಒಂದು ಪ್ರೀತಿಯ, ಆದರದ ಮಾತುಗಳಿಲ್ಲ. ಮಾಡುತ್ತಿದ್ದಾಳೆ, ಮಾಡಲಿ ಬಿಡು ಎಂಬ ಧೋರಣೆ.

ಹಾಗೆಂದು ಒಮ್ಮೆಲೇ ಗಂಡನನ್ನು ನೋಯಿಸುವ ಕಟು ಮನದವಳಲ್ಲ ಅವಳು. ಅವನ ಮೇಲಿದ್ದ ಪ್ರೀತಿ ಕಡಿಮೆ ಆಗಿರಲಿಲ್ಲ. ಅವಳ ಪ್ರೀತಿ, ಪ್ರೇಮ ಈಗ ಮೋಹವಾಗಿ ಬದಲಾಗಿತ್ತು. ಎಂದಿದ್ದರೂ ಬತ್ತದ ಮೋಹ. ಅವಳಿಗೆ ತನ್ನ ಮೇಲೆಯೇ ಅಧಿಕ ಕೋಪ ಬರುತ್ತಿತ್ತು. ಅವಳು ಬಯಸಿದರೂ ಸಹ ಮಾಧವನಿಗೆ, ತಾನು ಅತ್ತೆ ಪರವಾಗಿ ಎಷ್ಟು ಕಾಳಜಿ ವಹಿಸುತ್ತೇನೆ, ಅಕ್ಕರೆಯಿಂದ ನೋಡಿಕೊಳ್ಳುತ್ತೇನೆ ಎಂದು ಹೇಳಲು ಆಗುತ್ತಿರಲಿಲ್ಲ. ಇದೇಕೋ ಒಂದು ತರಹ ಚಕ್ರದ ಹಾಗೇ, ಸಮಸ್ಯೆ ಸುತ್ತಿ ಸುತ್ತಿ ಅಲ್ಲಿಗೇ ಬಂದು ನಿಂತುಕೊಳ್ಳುತ್ತಿತ್ತು.

ಹೀಗೆ ಅವಳಿಗೆ ತಲೆ ಕೆಟ್ಟಾಗ ಬೃಂದಾ ಕೋಪದಲ್ಲಿ ಗಂಡನಿಗೆ ಏನೋ ಬೈದು ಬಿಡುತ್ತಿದ್ದಳು. ನಂತರ ಅವಳಿಗೆ ತಾನು ಹಾಗೆ ಹೇಳಬಾರದಿತ್ತೇನೋ ಎಂದೆನಿಸುತ್ತಿತ್ತು. ಆದರೆ ಅದನ್ನು ಕೋಪದ ಮಾತುಗಳು ಎಂದು ಭಾವಿಸದ ಮಾಧವ, ಅದನ್ನೇ ಬಹಳ ಸೀರಿಯಸ್‌ ಆಗಿ ತೆಗೆದುಕೊಳ್ಳುತ್ತಾ, ಅಮ್ಮನಿಗಾಗಿ ಮತ್ತಷ್ಟು ಚಿಂತಿತನಾಗುತ್ತಿದ್ದ.

ಮಾಧವ ತನ್ನನ್ನು ನಡು ನೀರಿನಲ್ಲಿ ಬಿಟ್ಟು ಎತ್ತಲೋ ಹೋಗಿಬಿಟ್ಟಿದ್ದಾನೆ ಎಂದೇ ಅವಳಿಗೆ ಅನಿಸುತ್ತಿತ್ತು. ತನಗೀಗ ಅವನು ಅಪರಿಚಿತನಂತೆ ಆಗಿದ್ದಾನೆ ಎನಿಸಿತು. ಈ ಯೋಚನೆಗಳಿಂದ ತಲೆಕೆಟ್ಟ ಬೃಂದಾ ಎದ್ದು ಕುಳಿತೇಬಿಟ್ಟಳು. ಫ್ಯಾನ್‌ ಓಡುತ್ತಿದ್ದರೂ ಮೈಯೆಲ್ಲ ನೆಂದು ಬೆವರಾಗಿತ್ತು. ಮತ್ತೆ 2 ಲೋಟ ನೀರು ಕುಡಿದು ಮಲಗಿದಳು.

ಹೀಗೆ ದಿನೇ ದಿನೇ ಅವರಿಬ್ಬರ ನಡುವೆ ಜಗಳ ಹೆಚ್ಚತೊಡಗಿತು. ತಾನು ಆ ಮನೆಯಲ್ಲಿ ಬಹಳ ಪರಕೀಯಳು, ಅಸುರಕ್ಷಿತಳು ಎನಿಸತೊಡಗಿತು. ಹೀಗಾಗಿ ಮೆಲ್ಲಗೆ ಡಿಪ್ರೆಶನ್‌ಗೆ ಜಾರಿದಳು. ಮಾಧವ ಇದಾವುದನ್ನೂ ಗಮನಿಸದೆ ತನ್ನದೇ ಲೋಕದಲ್ಲಿ ಇರುತ್ತಿದ್ದ. ಅತ್ತೆ ಸಹ ಮೂಕಪ್ರೇಕ್ಷಕಿಯಾಗಿ ಸುಮ್ಮನಿದ್ದುಬಿಟ್ಟರು. ಮನೆಯಲ್ಲಿ ದಿನನಿತ್ಯ ಟೆನ್ಶನ್‌ ಹೆಚ್ಚತೊಡಗಿತು.

ಒಂದು ದಿನ ಅತ್ತೆ ಮಾಧವನ ಬಳಿ ತನ್ನ ಬಗ್ಗೆ ಏನೋ ದೂರುತ್ತಿದ್ದುದನ್ನು ಬೃಂದಾ ಕೇಳಿಸಿಕೊಂಡಳು.

ತಕ್ಷಣ ಬೃಂದಾ ಅವರ ನಡುವೆ ಹೋಗಿ ನಿಂತಳು, “ಅತ್ತೆ…. ಇಷ್ಟೆಲ್ಲ ಮಾಡಿದರೂ ನನ್ನ ಬಗ್ಗೆ ದೂರು ಹೇಳುತ್ತಿದ್ದೀರಲ್ಲ ನೀವು?”

ಮಾಧವ ತಕ್ಷಣ ಸಿಡಿದು ಉತ್ತರಿಸಿದ, “ಏ ಬೃಂದಾ, ಅವರು ನನ್ನ ತಾಯಿ. ಸ್ವಲ್ಪ ಸರಿಯಾಗಿ ಮಾತನಾಡುವುದನ್ನು ಕಲಿತುಕೋ! ವಯಸ್ಸಾಗಿದೆ ಅವರಿಗೆ ಅಂತ ನಿನಗೆ ಗೊತ್ತಾಗೋದಿಲ್ಲವೇ?”

ಅಮ್ಮನಿಗೆ ವಯಸ್ಸಾಗಿದೆ, ಮುದುಕಿ ಆಗಿದ್ದಾಳೆ, ಅವಳನ್ನು ಸರಿಯಾಗಿ ಗಮನಿಸಿಕೋ….. ಇತ್ಯಾದಿ ಅದೇ ಅದೇ ಮಾತನ್ನು ಕೇಳಿ ಅವಳು ರೋಸಿಹೋಗಿದ್ದಳು. ಅವಳೂ ಕಡಿಮೆ ಇಲ್ಲದಂತೆ ಕಿರುಚಿದಳು, “ಗೊತ್ತಿದೆ ನನಗೆ…. ಎಷ್ಟೂಂತ ಒಬ್ಬಳೇ ಮಾಡಿ ಸಾಯಲಿ? ನಾನೇ ಅವರ ಪಾಲಿಗೆ ದೊಡ್ಡ ಸಮಸ್ಯೆ ಎನ್ನುವುದಾದರೆ…. ಇಂದೇ ನಾನು ಈ ಮನೆ ಬಿಟ್ಟು ಹೋಗುತ್ತೇನೆ!”

“ಹಾಗಾದರೆ….. ತಕ್ಷಣ ಮನೆ ಬಿಟ್ಟು ಹೋಗು!” ಮಾಧವ ಕಿರುಚಿದ ಎಂದೇ ಹೇಳಬೇಕು.

ಬೃಂದಾ ಮರು ಮಾತನಾಡದೆ ತನ್ನ ಬಟ್ಟೆಬರೆ, ತನ್ನದೇ ಕೆಲವು ಸಾಮಗ್ರಿಗಳನ್ನು ಜೋಡಿಸಿಕೊಂಡು ಮನೆಯಿಂದ ಹೊರಗೆ ಹೊರಟೇಬಿಟ್ಟಳು. ಮಾಧವ ಅವಳು ಎಲ್ಲಿದ್ದಾಳೆ, ಮುಂದೆ ಏನು ಮಾಡುತ್ತಾಳೆ ಎಂಬುದರ ಗೊಡವೆಗೆ ಹೋಗದೆ ತನ್ನ ಪಾಡಿಗೆ ತಾನಿದ್ದುಬಿಟ್ಟ. ಬೃಂದಾ ತವರಿನ ಆಸರೆ ಪಡೆಯಲಿಲ್ಲ. ಗೆಳತಿಯ ಹಾಸ್ಟೆಲ್‌ನಲ್ಲಿದ್ದುಕೊಂಡೇ ತನ್ನ ಪದವಿ ವಿದ್ಯಾಭ್ಯಾಸಕ್ಕೆ ತಕ್ಕ ಕೆಲಸ ಹುಡುಕಿಕೊಂಡಳು. ಬಲು ಕಷ್ಟಪಟ್ಟು ಅಪಾರ್ಟ್‌ಮೆಂಟ್‌ ಒಂದರಲ್ಲಿ ಸಣ್ಣ ಮನೆ ಮಾಡಿಕೊಂಡಳು. ಇದೆಲ್ಲ ಆಗುವಷ್ಟರಲ್ಲಿ 6 ತಿಂಗಳು ಕಳೆದುಹೋಗಿತ್ತು. ಅವಳೆಂದೂ ಮಾಧವನನ್ನು ಮತ್ತೆ ಭೇಟಿಯಾಗಲು ಪ್ರಯತ್ನಿಸಲೇ ಇಲ್ಲ.

ಬೃಂದಾ ಗೆಳತಿಯನ್ನು ಬಿಟ್ಟು ಬೇರೆ ಮನೆ ಮಾಡಿದ್ದಾಳೆ ಎಂಬುದು ಮಾಧವನಿಗೆ ಗೆಳೆಯರ ಮೂಲಕ ಹೇಗೋ ಗೊತ್ತಾಯಿತು. ಬೃಂದಾ ಆ ಮನೆಗೆ ಬಂದು ಒಂದು ವರ್ಷ ಕಳೆಯುತ್ತಾ ಬಂತು, ಇದುವರೆಗೂ ಇಬ್ಬರೂ ಭೇಟಿ ಆಗುವ ಪ್ರಸಂಗವೇ ಬರಲಿಲ್ಲ. ಆಕಸ್ಮಿಕವಾಗಿ ಅಮ್ಮ ತೀರಿಕೊಂಡದ್ದರಿಂದ, ಈ ಸುದ್ದಿಯನ್ನು ತಿಳಿಸಲು ಅವಳ ಆಫೀಸಿನಿಂದ ಅವಳ ಮನೆ ವಿಳಾಸ ಪಡೆದು ಅವನು ಹೇಗೋ ಬೃಂದಾಳನ್ನು ಹುಡುಕಿಕೊಂಡು ಬಂದೇಬಿಟ್ಟ.

ಮಾರನೇ ದಿನ ಮಾಧವನ ಮನೆಯಲ್ಲಿ ಅಮ್ಮನ ಅಂತಿಮ ಯಾತ್ರೆಯ ತಯಾರಿ ನಡೆಯಿತು. ಎಲ್ಲರಂತೆ ಬಂದು ಅವರ ಅಂತಿಮ ದರ್ಶನ ಪಡೆದು, ತನ್ನಿಂದಾದ ಕೆಲಸ ಮಾಡಿಕೊಟ್ಟು ಅವಳು ಹೊರಟುಹೋದಳು. ಅದಾಗಿ 15 ದಿನ ಕಳೆದವು. ತಾಯಿಯ ಕರ್ಮಾಂತರಗಳನ್ನೆಲ್ಲ ಮುಗಿಸಿಕೊಂಡು ಬಂದ ಮಾಧವ ಮತ್ತೊಮ್ಮೆ ಬೃಂದಾಳ ಮನೆ ಬಾಗಿಲು ತಟ್ಟಿದ. “ಬೃಂದಾ…. ಮನೆಗೆ ಬಾ…. ಈಗಂತೂ ಅಲ್ಲಿ ಅಮ್ಮ ಇಲ್ಲ ಅಂತ ನಿನಗೇ ಗೊತ್ತು….”

ಬೃಂದಾ ಮಾಧವನ ಕಡೆ ತಿರುಗಿ ಹೇಳಿದಳು, “ಮಾಧವ, ಇವತ್ತಿನರೆಗೂ ನೀವು ನನ್ನ ಅರ್ಥ ಮಾಡಿಕೊಳ್ಳಲೇ ಇಲ್ಲ. ನಮ್ಮ ಬದುಕಿನಲ್ಲಿ ನಿಮ್ಮ ತಾಯಿ ದೊಡ್ಡ ಸಮಸ್ಯೆ ಆಗಿರಲಿಲ್ಲ….. ನನ್ನ ಮನಸ್ಸಿನ ಭಾವನೆಗಳನ್ನು ಒಂದಲ್ಲ ಒಂದು ದಿನ ನೀವು ಅರ್ಥ ಮಾಡಿಕೊಳ್ಳುತ್ತೀರಿ ಎಂದು ಕಾದಿದ್ದೆ. ನಾನು ನನ್ನ ಮನೆಯವರನ್ನೆಲ್ಲ ತೊರೆದು ನಿಮ್ಮನ್ನೇ ನಂಬಿ ಬಂದಿದ್ದೆ, ಆದರೆ ನಾನೊಬ್ಬ ಮನುಷ್ಯಳು, ನನಗೂ ಹೃದಯವಿದೆ ಎಂದೂ ಯೋಚಿಸದೆ ಕ್ಷಣ ಮಾತ್ರದಲ್ಲಿ ನನ್ನನ್ನು ನಿಂತ ನಿಲುವಿನಲ್ಲಿ ಮನೆ ಬಿಟ್ಟು ಹೋಗುವಂತೆ ಹೇಳಿದಿರಿ. ನನ್ನ ಜೀವನದಿಂದ ನಿಮ್ಮನ್ನು ಕಳೆದುಕೊಳ್ಳಲು ನಾನು ಎಂದೂ ಬಯಸಲಿಲ್ಲ, ನಿಮ್ಮನ್ನು ಬಿಟ್ಟು ಹೋಗಲು ಮನಸ್ಸೂ ಇರಲಿಲ್ಲ. ಒಂದಲ್ಲ ಒಂದು ದಿನ ನೀವು ನನ್ನ ಪ್ರೀತಿ ಅರ್ಥ ಮಾಡಿಕೊಳ್ಳುತ್ತೀರಿ, ನಿಮ್ಮ ಪ್ರೀತಿ ಪ್ರೇಮ ನನಗೇ ಮೀಸಲು ಎಂದು ಕಾದಿದ್ದೆ.

“ಆದರೆ ಅತ್ತೆಯನ್ನೇ ನೆಪವಾಗಿಟ್ಟುಕೊಂಡು ನಾನೇನು ಅಲ್ಲ ಆ ಮನೆಗೆ, ಬರಿ ಕೆಲಸದವಳು ಎಂಬಂತೆ ನಡೆಸಿಕೊಂಡಿರಿ. ನನ್ನನ್ನು ಕರೆಯಲು ಬಂದೇ ಬರುತ್ತೀರಿ ಎಂದು ಇಷ್ಟು ದಿನ ನಾನು ಕಾದಿದ್ದೇ ಬಂತು. ನಿಮ್ಮ ಮನಸ್ಸಿಗೆ ನಾನು ಬೇಕಿರಲೇ ಇಲ್ಲ!

“ನಾನು ಮೋಹಜಾಲಕ್ಕೆ ಸಿಲುಕಿ ಮೈಮರೆತಿದ್ದೆ…. ನಿಮ್ಮ ಮೋಹ ನನ್ನನ್ನು ಎಲ್ಲದರಿಂದ ದೂರ ಇರಿಸಿತ್ತು. ನನಗೆ ನೀರು, ನೆರಳಿಲ್ಲದಂತೆ ಮನೆಯಿಂದ ಆಚೆಗಟ್ಟಿ ಒಳ್ಳೆಯದನ್ನೇ ಮಾಡಿದಿರಿ. ಅದರಿಂದ ಬೀದಿಗೆ ಬಿದ್ದ ನಾನು ನನ್ನ ಕಾಲ ಮೇಲೆ ನಿಂತು ಆತ್ಮವಿಶ್ವಾಸದಿಂದ ನನ್ನ ಬದುಕನ್ನು ರೂಪಿಸಿಕೊಳ್ಳಲು ಕಲಿತೆ. ಈ ಸಮಾಜದಲ್ಲಿ ಯಾರನ್ನೂ ಆಶ್ರಯಿಸಿ ಬದುಕಬಾರದು ಎಂಬ ದೊಡ್ಡ ಪಾಠವನ್ನು ಕಲಿತಿರುವೆ.

“ಈಗ ನಾನು ಧೈರ್ಯವಾಗಿ ಈ ಕಷ್ಟದ ಜೀವನ ಎದುರಿಸುವುದನ್ನು ಕಲಿತಿರುವೆ. ಈ ನನ್ನ ಆತ್ಮವಿಶ್ವಾಸವನ್ನು ನಾನು ಮತ್ತೆ ಕಳೆದುಕೊಳ್ಳಲು ಬಯಸುವುದಿಲ್ಲ. ಹೀಗಾಗಿ ಮತ್ತೆ ನಾವು ಕೂಡಿ ಬಾಳುವುದು ಅನ್ನುವುದು ಹಗಲುಗನಸು. ಮುಂದೆ ಎಂದೂ ನನ್ನನ್ನು ನೋಡಲು ಬರಲೇ ಬೇಡಿ.”

ಮಾಧವ ಇದಕ್ಕೆ ಏನು ತಾನೇ ಉತ್ತರ ಕೊಡಬಲ್ಲ? ಅವನು ನಿಧಾನವಾಗಿ ಕಾಲೆಳೆಯುತ್ತಾ ಅಲ್ಲಿಂದ ಕೆಳಗಿಳಿದು ಹೊರಟ. ಬೃಂದಾ ಬಾಗಿಲು ಹಾಕಿ ಬಂದು ಮತ್ತೆ ತನ್ನ ಜಾಗದಲ್ಲಿ ಮಲಗಿದಳು. ಅವಳನ್ನು ಅರಸಿ ಬಂದಿದ್ದ ಕಾಲಿನ ಸಪ್ಪಳ ಕೇಳಿಸದಾಯಿತು. ಅವಳನ್ನು ಕಟ್ಟಿಹಾಕಿದ್ದ ಮೋಹಜಾಲ ಅಂದಿಗೆ ಸಂಪೂರ್ಣ ಕೊಂಡಿ ಕಳಚಿಕೊಂಡಿತು. ತನ್ನ ದಿಟ್ಟ ನಿಲುವನ್ನು ಬದಲಿಸಲು ಬಯಸದೆ ಬೃಂದಾ ಮುಂದಿನ ಬದುಕು ಎದುರಿಸಲು ಸಿದ್ಧಳಾದಳು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ