ಕಥೆ - ಶಮೀಮ್ ಖಾನ್
ಅಪ್ಪಾಜಿಗೆ ಖಾಸಗಿ ನೌಕರಿ ಇತ್ತು. ಹೀಗಾಗಿ ರೇಶ್ಮಾಳ ಅಣ್ಣ ಮತ್ತು ಅಕ್ಕಂದಿರಿಬ್ಬರೂ ಪ್ರೈಮರಿ ಶಾಲೆಯವರೆಗೆ ಮಾತ್ರ ಕಲಿತು ಬಿಟ್ಟುಬಿಟ್ಟರು. ಆದರೆ ಮೊದಲಿನಿಂದಲೂ ರೇಶ್ಮಾ ಉನ್ನತ ಶಿಕ್ಷಣ ಕಲಿಯಲೇಬೇಕು ಎಂದು ಹಠ ಹೂಡಿದ್ದಳು. ಇದು ಅವಳ ಬಾಲ್ಯದ ಹೊಂಗನಸಾಗಿತ್ತು.
ಅವಳು ಹೈಸ್ಕೂಲು ಸೇರಬೇಕಾದ ಸಂದರ್ಭದಲ್ಲಿ ಅಪ್ಪಾಜಿ ಮಗಳಿಗೆ ಹೇಳಿದ್ದರು, ``ಮಗು ರೇಶ್ಮಾ, ನೀನು ಶಾಲೆ ಕಲಿತಿದ್ದು ಸಾಕು. ನಮ್ಮ ಜನರಲ್ಲಿ ನಿನಗಿಂತ ಹೆಚ್ಚಿಗೆ ಕಲಿತ ಗಂಡು ಹುಡುಗನ್ನ ನಾನು ಎಲ್ಲಿಂದ ಹುಡುಕಿ ತರಲಿ? ಅದರ ಬದಲು ಕಸೂತಿ, ಹೊಲಿಗೆ ಅಂತ ನಿನಗೆ ಯಾವುದು ಇಷ್ಟವೋ ಅದನ್ನೇ ಕಲಿ.''
``ಇಲ್ಲ ಅಪ್ಪಾಜಿ.... ನಿಮಗೆ ಶ್ರಮ ಆಗದಂತೆ ನನ್ನ ಫೀಸ್, ಬುಕ್ಸ್ ಇತ್ಯಾದಿ ನಾನೇ ವ್ಯವಸ್ಥೆ ಮಾಡಿಕೊಳ್ತೀನಿ. ಸಣ್ಣ ಮಕ್ಕಳಿಗೆ ಪಾಠ ಹೇಳಿ ಕೊಡ್ತೀನಿ. ನೀವೇನೂ ಯೋಚನೆ ಮಾಡಬೇಡಿ,'' ಎಂದು ಅವಳು ನಾನಾ ಮಾತುಗಳಲ್ಲಿ ತಂದೆಯನ್ನು ಒಪ್ಪಿಸಿದಳು.
ಒಲ್ಲದ ಮನದಿಂದಲೇ ಅವಳ ತಾಯಿ ಸಹ ರೇಶ್ಮಾಳ ಮಾತಿಗೆ ಹ್ಞೂಂ ಎಂದರು.
ಹೀಗೇ ರೇಶ್ಮಾ ತಾನೇ ಸಣ್ಣದಾಗಿ ಸಂಪಾದಿಸುತ್ತಾ ತನ್ನ ಹೆಚ್ಚಿನ ಓದಿಗೆ ಬೇಕಾದ ಆದಾಯ ಗಳಿಸತೊಡಗಿದಳು. ಇವಳಿಂದ ಪ್ರೇರಿತಳಾಗಿ ತಂಗಿ ಮುಮ್ತಾಜ್ ಸಹ ತಾನೂ ಹೆಚ್ಚಿಗೆ ಓದುತ್ತೇನೆ ಎಂದು ಅಕ್ಕನ ಎಲ್ಲಾ ಕೆಲಸಗಳಿಗೂ ಬಲಗೈ ಆಗಿ ನಿಂತಳು. ಈ ರೀತಿ ಅಕ್ಕಾತಂಗಿ ತಮಗೆ ಬಂದ ಟ್ಯೂಷನ್ ಫೀಸ್ ಹಣದಿಂದಲೇ ತಮ್ಮ ವಿದ್ಯಾಭ್ಯಾಸದ ಸಮಸ್ತ ಖರ್ಚು ನಿಭಾಯಿಸಿಕೊಂಡರು.
ರೇಶ್ಮಾಳ ಅಕ್ಕಂದಿರು ಈ ತಂಟೆಗೆ ಬರದ ಕಾರಣ ಅಲ್ಪ ಆದಾಯ ಇರುವ ಗಂಡುಗಳನ್ನು ಹುಡುಕಿ ಅವರ ಮದುವೆ ಮಾಡಿ ಕಳುಹಿಸಿದರು. ಅಣ್ಣನೂ ಸಹ ದೊಡ್ಡ ಗ್ಯಾರೇಜ್ ಒಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸಕ್ಕೆ ಸೇರಿದ. ನೋಡ ನೋಡುತ್ತಿದ್ದಂತೆ ರೇಶ್ಮಾ ಬಿ.ಎ. ನಂತರ ಎಂ.ಎ ಮುಗಿಸಿ, ಖಾಸಗಿ ಪ್ರೌಢ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿದಳು. ಅದೇ ತರಹ ಅವಳ ತಂಗಿ ಮುಮ್ತಾಜ್ ಕೂಡ ಬಿ.ಕಾಂ. ಪದವೀಧರೆಯಾಗಿ ಖಾಸಗಿ ಬ್ಯಾಂಕ್ ಒಂದರಲ್ಲಿ ಕ್ಯಾಶಿಯರ್ ಆದಳು.
ಅದಾದ ಮೇಲೆ ದಾಣಗೆರೆಯಲ್ಲಿದ್ದ ರೇಶ್ಮಾ ಕಾಲೇಜ್ ಲೆಕ್ಚರರ್ ಆಗಿ ಬೆಂಗಳೂರಿಗೆ ಬಂದು ಕೆಲಸಕ್ಕೆ ಸೇರಿದಳು. ಮನೆಯಿಂದ ದೂರ ಹೋಗಿ ಕೆಲಸ ಮಾಡಬೇಕು ಎಂದಾಗ, ಮನೆ ಮಂದಿ ವಿರೋಧಿಸಿದರು. ಆದರೂ ಅವಳು ಪಟ್ಟು ಬಿಡದೆ ಕೆಲಸಕ್ಕೆ ಸೇರಿದಳು. ಹೀಗಾಗಿ ರಂಜಾನ್, ಬಕ್ರೀದ್ ಹಬ್ಬಗಳಿಗೆ ಅವಳು ಊರಿಗೆ ಹೋಗಿಬರತೊಡಗಿದಳು. ಉಳಿದಂತೆ ತನಗೆ ಬೇಕಾದ ಅಗತ್ಯ ವಸ್ತುಗಳನ್ನು ಬೆಂಗಳೂರಿನಲ್ಲೇ ಕೊಳ್ಳುತ್ತಿದ್ದಳು, ಹೀಗಾಗಿ ಊರಿನ ಸಂಪರ್ಕ ಕಡಿಮೆ ಆಯ್ತು. ಊರಿಗೆ ಹೋದಾಗೆಲ್ಲ ಅಮ್ಮ ಅಪ್ಪಾಜಿಯರದು ಒಂದೇ ವರಾತ.
``ಇಷ್ಟೆಲ್ಲ ಡಿಗ್ರಿ ಓದಿ, ಬೆಂಗಳೂರಿನಂಥ ದೊಡ್ಡ ಊರಲ್ಲಿ ಕೆಲಸಕ್ಕೆ ಸೇರಿದ್ದಿ. ನಿನಗೆಲ್ಲಿಂದ ವರನನ್ನು ಹುಡುಕುವುದು? ನಿನ್ನ ಮದುವೆ ಯಾವಾಗ ನೋಡುವುದು.....?''
``ಅಪ್ಪಾಜಿ, ಈಗ ನಮ್ಮ ಜನರಿಗೆ ವಿದ್ಯಾಭ್ಯಾಸದ ಮಹತ್ವ ತಿಳಿಯುತ್ತಿದೆ. ನೋಡ್ತಾ ಇರಿ, ನಮ್ಮಿಬ್ಬರಿಗೂ ಸಂಬಂಧಗಳು ತಾನಾಗಿ ಹುಡುಕಿಕೊಂಡು ನಿಮ್ಮ ಬಳಿ ಬರುತ್ತದೆ. ಆಗ ನಿಮಗೆ ಈ ಕಲಿತ ಹೆಣ್ಣುಮಕ್ಕಳ ಬಗ್ಗೆ ಎಷ್ಟು ಹೆಮ್ಮೆ ಎನಿಸುತ್ತದೆ ನೋಡಿ,'' ಎಂದಳು.