ನೀಳ್ಗಥೆ – ವಿಶಾಲಾಕ್ಷಿ ಮೂರ್ತಿ 

ಕೋಮಲ ಭಾವನೆಗಳನ್ನು ಹೊಂದಿದ್ದ ಅತಿ ಮೃದು ಸ್ವಭಾವದ ಮರಿಯಾ, ತನ್ನ ಇಂದು ಹಾಗೂ ನಾಳೆ ಖುಷಿಯಿಂದ ತುಂಬಿರಲಿ ಎನ್ನುವ ಪ್ರಯತ್ನದಲ್ಲಿ ತಲ್ಲೀನಳಾಗಿದ್ದಳು. ಇಂದು ಅವಳು ಬಹಳ ಸಂತೋಷವಾಗಿದ್ದಳು. ಇಡೀ 3 ವರ್ಷ ಕಳೆದ ಮೇಲೆ ಅವಳ ಮಗಳು ಮಾರ್ಗರೇಟ್‌ ಅಮೆರಿಕಾದಲ್ಲಿ ವಿದ್ಯಾಭ್ಯಾಸ ಮುಗಿಸಿ ಬೆಂಗಳೂರಿಗೆ ಮರಳುತ್ತಿದ್ದಳು. ತನ್ನ ಪತಿ ಡೇವಿಡ್‌ 5 ವರ್ಷಗಳ ಹಿಂದೆ ಅಪಘಾತದಲ್ಲಿ ತೀರಿಕೊಂಡಾಗ, ಸದಾ ದುಃಖದಲ್ಲಿದ್ದವಳು ಇಷ್ಟು ವರ್ಷಗಳ ನಂತರ ಒಂದಿಷ್ಟು ಖುಷಿ ಕಂಡಿದ್ದಳು.

ಮಾರ್ಗರೇಟ್‌ ಈ ಮನೆಯ ಹಿರಿಯ ಮಗಳು, ಮುದ್ದಿನ ಕಣ್ಮಣಿ ಎನಿಸಿದ್ದಳು. ಅವಳ ನಗು, ಸರಳ ಸ್ವಭಾವದಿಂದ ಎಲ್ಲರ ಮನ ಗೆದ್ದಿದ್ದಳು. ಅವಳು ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಾಗೆ ಹೋದ ಮೇಲೆ ಮನೆಯಲ್ಲಿ ಶೂನ್ಯ ಆವರಿಸಿತ್ತು. ತನ್ನ ಮನೆಯ ಬೆಳಕು ಮರಳಿ ಕಾಂತಿ ಚೆಲ್ಲಲಿದೆ ಎಂದು ಸಂಭ್ರಮಿಸುತ್ತಾ ಮರಿಯಾ ಎಲ್ಲೆಡೆ ಓಡಾಡುತ್ತಿದ್ದಳು.

ನ್ಯೂಯಾರ್ಕಿಗೆ ಹೋಗುವ ಮೊದಲು ಮಾರ್ಗರೇಟ್‌ ಅಮ್ಮನಿಗೆ ಬಹಳ ಧೈರ್ಯ ತುಂಬಿದ್ದಳು, “ಅಮ್ಮ, ನಾನು ನಿನ್ನ ಧೈರ್ಯಶಾಲಿ ಮಗಳು ಅನ್ನೋದನ್ನು ಮರೆಯಬೇಡ. ನಿನ್ನಂತೆಯೇ ನಾನು ಸ್ವಾವಲಂಬಿ ಆಗಬಯಸುತ್ತೇನೆ. ಮುಂದಿನ ದಿನಗಳಲ್ಲಿ ನಿನಗೆ ನನ್ನ ಬಗ್ಗೆ ಹೆಚ್ಚು ಹೆಮ್ಮೆ ಮೂಡುತ್ತದೆ, ನೋಡುತ್ತಾ ಇರು.”

ಆಗ ಮರಿಯಾ ಮನದಲ್ಲೇ ದೇವರನ್ನು ಪ್ರಾರ್ಥಿಸಿದಳು, ಮಗಳ ಬಯಕೆಗಳು ಈಡೇರಲಿ ಅಂತ. ಡೇವಿಡ್‌ ಅಪಘಾತದಲ್ಲಿ ತೀರಿಕೊಂಡಿದ್ದೇ ಬಂತು, ಮರಿಯಾ ಜೀವನದಲ್ಲಿ ಸಂಪೂರ್ಣ ಕುಸಿದುಹೋಗಿದ್ದಳು. ಅವನು ರಸ್ತೆ ಅಪಘಾತದಲ್ಲಿ ಅಲ್ಲೇ ಹೋಗಿಬಿಟ್ಟನೆಂದು ತಿಳಿದಾಗ ಅವಳ ಜಂಘಾಬಲವೇ ಉಡುಗಿಹೋಗಿತ್ತು. ಡೇವಿಡ್‌ ತೀರಿಕೊಂಡ ನಂತರ ತನ್ನ ಇಬ್ಬರು ಹೆಣ್ಣುಮಕ್ಕಳ ಸಂಪೂರ್ಣ ಜವಾಬ್ದಾರಿ ಮರಿಯಾಳ ಹೆಗಲಿಗೇರಿತು.

ಮೊದಲಿನಿಂದಲೇ ಡೇವಿಡ್‌ನ ಗಾರ್ಮೆಂಟ್‌ ಬಿಸ್‌ನೆಸ್‌ನಲ್ಲಿ ಮರಿಯಾ ಸಹಾಯ ಮಾಡುತ್ತಿದ್ದುದು ಒಳ್ಳೆಯದಾಯಿತು. ಅದೇ ಬಿಸ್‌ನೆಸ್‌ ಈಗ ಇವಳ ಕೈ ಹಿಡಿಯಿತು. ಹೀಗಾಗಿ ಆರ್ಥಿಕವಾಗಿ ದೊಡ್ಡ ನಷ್ಟ ಏನೂ ಆಗಲಿಲ್ಲ. ಆದರೆ ಅತ್ತ ಬಿಸ್‌ನೆಸ್‌ ಇತ್ತ ಇಬ್ಬರು ಹೆಣ್ಣುಮಕ್ಕಳ ಸಂಸಾರದ ರಥ ಎಳೆಯುವುದು ಖಂಡಿತಾ ಅವಳಿಗೆ ಸುಲಭವಾಗಿರಲಿಲ್ಲ. ಅಂತೂ ದಿಟ್ಟೆಯಾಗಿ ಬದುಕನ್ನು ಬಂದಂತೆ ಎದುರಿಸಿದಳು.

ಆಗ ಹಿರಿ ಮಗಳು ಮಾರ್ಗರೇಟ್‌ 10ನೇ ಹಾಗೂ ಕಿರಿಮಗಳು ಏಂಜಲ್ 8ನೇ ತರಗತಿ ಓದುತ್ತಿದ್ದರು. ಆಗ ಮಾರ್ಗರೇಟ್‌ ಅಮ್ಮನಿಗೆ ಬಲಗೈ ಆಗಿ ಸಹಾಯಕ್ಕೆ ನಿಂತಳು. ದಿಢೀರ್‌ ಎಂದು ಎದುರಾದ ಪರಿಸ್ಥಿತಿಗೆ ಅವಳು ಪರಿಪಕ್ವಳಾದಳು. ತನ್ನ ಓದಿನ ಜೊತೆ ಜೊತೆಗೆ ಮನೆಯ ಜವಾಬ್ದಾರಿಯನ್ನೂ ನಿರ್ವಹಿಸತೊಡಗಿದಳು.

ಮಾರ್ಗರೇಟ್‌ ಓದಿನಲ್ಲಿ ಸದಾ ಮುಂದು. 2 ವರ್ಷಗಳ ನಂತರ ಪಿ.ಯು.ಸಿಯಲ್ಲಿ ಇಡೀ ಕಾಲೇಜಿಗೆ ಟಾಪರ್‌ ಎನಿಸಿದಳು. ಒಂದು ಟ್ಯಾಲೆಂಟ್‌ ಸರ್ಚ್‌ ಕಾಂಪಿಟಿಷನ್‌ನಿಂದ ಅವಳಿಗೆ ನ್ಯೂಯಾರ್ಕ್‌ಗೆ ಹೋಗಿ ಬಿಸ್‌ನೆಸ್‌ ಸ್ಟಡೀಸ್‌ ಮುಂದುವರಿಸಲು ಸ್ಕಾಲರ್‌ಶಿಪ್‌ ದೊರೆಯಿತು.

ಆದರೆ ಮರಿಯಾಗೆ ಮಗಳು ಸಪ್ತ ಸಾಗರ ದಾಟಿ ಅಷ್ಟು ದೂರ ಹೋಗಿ ಒಬ್ಬಂಟಿಯಾಗಿ ಕಲಿಯುವುದು ಒಳ್ಳೆಯದು ಎನಿಸಲಿಲ್ಲ. ಆದರೆ ಮಗಳ ಹಠದ ಮುಂದೆ ಅವಳು ಮಣಿಯಲೇಬೇಕಾಯಿತು. ಮಗಳು ಹೆಚ್ಚಿನ ಓದು ಕಲಿತು ಕೀರ್ತಿ ಸಂಪಾದಿಸಲಿ ಎಂದು ಮರಿಯಾ ಕೊನೆಗೆ ಒಪ್ಪಿಗೆ ನೀಡಿದಳು.

ಮರಿಯಾಳ ಒಬ್ಬಳು ಕಸಿನ್‌ ಸೂಸನ್‌ ಅಮೆರಿಕಾದ ಫ್ಲೋರಿಡಾದಲ್ಲೇ ವಾಸವಾಗಿದ್ದಳು. ಇವಳು ಕಾಲೇಜಿನ ಹಾಸ್ಟೆಲ್‌ನಲ್ಲಿ ವಾಸಿಸುತ್ತಾ, ಬಿಡುವಾದಾಗೆಲ್ಲ ಆ ಆಂಟಿಯ ಬಳಿ ಹೋಗಿರಲಿ, ಆಪತ್ಕಾಲಕ್ಕೆ ನೆಂಟರ ನೆರವು ಸಿಗುತ್ತದೆ ಎಂದು ಮರಿಯಾ ಸೂಸನ್‌ಗೆ ಮೊದಲೇ ವಿಷಯ ತಿಳಿಸಿ ಮಗಳನ್ನು ಕಳುಹಿಸಿ ಕೊಟ್ಟಳು. ಓದುವ ವಿದ್ಯಾರ್ಥಿನಿಗೆ ಹಿರಿಯರ ಮಾರ್ಗದರ್ಶನ ಇರುತ್ತದೆ ಎಂಬುದು ಮರಿಯಾಳಿಗೆ ನೆಮ್ಮದಿ ನೀಡಿತು.

ಸೂಸನ್‌ ಜೊತೆ ಮಾತನಾಡಿ ಮರಿಯಾ ಅಮೆರಿಕಾ ಬಗ್ಗೆ ಸಾಕಷ್ಟು ಮಾಹಿತಿ ಸಂಗ್ರಹಿಸಿದಳು. ಅಲ್ಲಿನ ಓದಿನ ಮಟ್ಟ ಬಹಳ  ಉನ್ನತವಾಗಿದ್ದು, ಮಗಳ ಭವಿಷ್ಯ ಬಂಗಾರವಾಗಲಿದೆ ಎಂದು ಸಂಭ್ರಮಿಸಿದಳು. 3 ವರ್ಷಗಳ ಕಾಲ ಎದೆ ಮೇಲೆ ಕಲ್ಲಿಟ್ಟುಕೊಂಡು ಕಳೆದು ಬಿಡಲು ನಿರ್ಧರಿಸಿದಳು.

ಆ ಕಷ್ಟದ ಕಾಲವೆಲ್ಲ ಕಳೆದು ಇಂದು ಸಂಜೆಗೆ ಮಗಳು ಮಾರ್ಗರೇಟ್‌ ಬೆಂಗಳೂರಿಗೆ ಬರುವವಳಿದ್ದಳು. ಏರ್‌ಪೋರ್ಟ್‌ನಲ್ಲಿ ಮಗಳಿಗಾಗಿ ಕಾದಿದ್ದ ಮರಿಯಾಳಿಗೆ 1-1 ಕ್ಷಣ ಯುಗವಾಗಿ ಉರುಳುತ್ತಿತ್ತು.

ಅಂತೂ ನಿರೀಕ್ಷೆಯ ಗಡುವು ಕಳೆದು ಮಗಳು ತಾಯಿಯ ಮುಂದೆ ಹಾಜರಾದಳು. ಆದರೆ ಕೆಲವು ಕ್ಷಣ ತಾಯಿಗೆ ಮಗಳನ್ನು ಗುರುತಿಸುವುದೇ ಕಷ್ಟವಾಯಿತು. ಮಗಳ ಮುಖದಲ್ಲಿ ಯಾಕೋ ನಗುವೇ ಇಲ್ಲ ಎನಿಸಿತು. ಮಾರ್ಗರೇಟ್‌ ಮುಖ ಯಾಕೋ ಸಂಪೂರ್ಣ ಬಾಡಿಹೋಗಿತ್ತು. ಕಂಗಳ ಕೆಳಗೆ ಆ ವಯಸ್ಸಿಗೆ ಚಿಂತೆಯ ಕಾರಣ ಕಪ್ಪು ಉಂಗುರ ಕಾಣಿಸಿತ್ತು. ಯಾವ ಲವಲವಿಕೆಯೂ ಇಲ್ಲದೆ, ನಡೆದಾಡುವ ಅಸ್ಥಿಪಂಜರಾಗಿ ಅವಳು ಕಾಣಿಸಿದಳು.

ತನ್ನನ್ನು ತಾನು ಸಂಭಾಳಿಸಿಕೊಳ್ಳುತ್ತಾ ಮರಿಯಾ ಮಗಳನ್ನು ತಬ್ಬಿ ಎದೆಗಾನಿಸಿಕೊಂಡಳು. “ಹೇಗಿದ್ದಿ ಮಗು? ಬಹಳ ಸಣ್ಣ ಆಗಿಹೋಗಿದ್ದಿ!”

“ಹೇಗೋ….. ಇದ್ದೀನಿ ಬಿಡಮ್ಮ ಬದುಕಿದ್ದೀನಿ…..” ಅವಳ ಮುಖದಲ್ಲಿ ಅಮ್ಮನನ್ನು ಕಂಡ ಖುಷಿ ಇರಲಿಲ್ಲ. ಸುಖ, ದುಃಖ ಇಲ್ಲದೆ ನಿರ್ವಿಕಾರವಾಗಿ ನುಡಿದ್ದಿದ್ದಳು.

ಅದನ್ನು ಕೇಳಿ ಮರಿಯಾಳಿಗೆ ಕೆಲವು ಕ್ಷಣ ತಲೆಯೇ ಓಡಲಿಲ್ಲ. ನಂತರ ಮತ್ತೆ ಸಂಭಾಳಿಸಿಕೊಂಡು ಮಗಳ ಬೆನ್ನು ಸವರುತ್ತಾ, “ನಿನ್ನ ತಂಗಿ ನಿನಗಾಗಿ ತುದಿಗಾಲಲ್ಲಿ ಕಾಯುತ್ತಿದ್ದಾಳೆ,” ಎಂದಳು.

ಟ್ಯಾಕ್ಸಿಗೆ ಲಗೇಜ್‌ ಹಾಕಿಸಿ, ಬೇಗ ಮನೆ ಕಡೆ ಹೊರಟರು. ದಾರಿ ಉದ್ದಕ್ಕೂ ಮಗಳ ಕಡೆಯಿಂದ ಮಾತಿಲ್ಲ ಕಥೆಯಿಲ್ಲ….. ಕಿಟಕಿಯಲ್ಲಿ ಕಣ್ಣು ನೆಟ್ಟು ಹೊರಗೆ ನೋಡುತ್ತಾ ಗೊಂಬೆಯಂತೆ ಕುಳಿತಿದ್ದಳು ಮಾರ್ಗರೇಟ್‌.

ಮಗಳನ್ನು ನೋಡುತ್ತಾ ತಾಯಿ ಜೀವ ಹಿಂಡಿಹೋಯಿತು. 108 ಪ್ರಶ್ನೆ ಕೇಳಬೇಕೆನಿಸಿತು. ಆದರೆ ಗಾಡಿಯಲ್ಲಿ ಏನೂ ಪ್ರಶ್ನೆ ಕೇಳುವುದು ಬೇಡ, ಮಗಳು ಮನೆಗೆ ಬಂದು ಮೊದಲು ಸುಧಾರಿಸಿಕೊಳ್ಳಲಿ ಎಂದು ತಾಯಿ ಸುಮ್ಮನಾದಳು. ತುಂಬಾ ದೂರದ ಪ್ರಯಾಣದಿಂದ ಮಗಳು ಬಹಳ ಸುಸ್ತಾಗಿರಬೇಕು, ಬಹುಶಃ ಅನಾರೋಗ್ಯ ಇರಬೇಕು ಎಂದುಕೊಂಡಳು. ಮಗಳು ಬಾಯಿ ಬಿಟ್ಟು ಹೇಳುವವರೆಗೂ ತನ್ನ ಪ್ರಶ್ನೆಗಳಿಗೆ ಉತ್ತರವಿಲ್ಲ ಎನಿಸಿತು. ಇದೇ ಯೋಚನೆಯಲ್ಲೇ ಮನೆ ತಲುಪಿದ್ದೂ ಗೊತ್ತಾಗಲಿಲ್ಲ. ಕಾಂಪೌಂಡ್‌ ಗೇಟ್‌ ಬಳಿ ಕಾರಿನ ಹಾರ್ನ್‌ ಬಜಾಯಿಸಿದಾಗ, ಕಿರಿ ಮಗಳು ಕೈಯಲ್ಲಿ ಹೂವಿನ ಬೊಕೆ ಸಮೇತ ಓಡಿ ಬಂದು ಅಕ್ಕನನ್ನು ಎದುರುಗೊಂಡು ಸ್ವಾಗತಿಸಿದಳು.

ಮಾರ್ಗರೇಟ್‌ ಕಾರಿನಿಂದ ಬಲು ನಿಧಾನವಾಗಿ ಇಳಿದು ನಡೆದು ಬಂದಳು. ಹಲವು ತಿಂಗಳು ಆಸ್ಪತ್ರೆಯಲ್ಲಿ ಅಡ್ಮಿಟ್‌ ಆಗಿದ್ದ ಪೇಶೆಂಟ್‌ ತರಹ ನಡೆದುಕೊಂಡು ಬಂದಳು. ಏಂಜೆಲ್ ಓಡಿ ಬಂದವಳೇ ಅವಳನ್ನು ಹಿಡಿದುಕೊಳ್ಳುತ್ತಾ, “ಅಕ್ಕಾ…. ವೆಲ್‌ಕಂ ಹೋಂ! ಐ ಮಿಸ್ಡ್ ಯೂ ಸೋ ಮಚ್‌!” ಎಂದು ಅಪ್ಪಿಕೊಂಡಳು.

ಆದರೆ ತಂಗಿಯನ್ನು ಕಂಡ ಉತ್ಸಾಹ, ಉಲ್ಲಾಸ, ಪ್ರೀತಿ, ಸಂತೋಷ ಯಾವುದೂ ಮಾರ್ಗರೇಟ್‌ ಮುಖದಲ್ಲಿ ಇರಲಿಲ್ಲ. ಅದನ್ನು ಗಮನಿಸಿ ವಿದೇಶಕ್ಕೆ ಹೋಗಿದ್ದ ಅಕ್ಕಾ ತನ್ನನ್ನು ಮರೆತೇಬಿಟ್ಟಳೇನೋ ಎಂದು ತಂಗಿ ಭಾವಿಸಿದಳು. “ಏನಕ್ಕಾ ಇದು…. 3 ವರ್ಷಗಳ ನಂತರ ಭೇಟಿ ಆಗುತ್ತಿದ್ದೇವೆ. ನಿನ್ನ ಮುಖದಲ್ಲಿ ಒಂದಿಷ್ಟಾದರೂ ನಗು ಬೇಡವೇ?”

ಆಗ ಮರಿಯಾ ಮುಂದೆ ಬಂದು, “ಅಕ್ಕಾ ಬಲು ದೂರದ ಪ್ರಯಾಣದಿಂದ ಸುಸ್ತಾಗಿದ್ದಾಳಮ್ಮ….. ನಿದ್ದೆ ಇಲ್ಲದೆ ತಲೆನೋವು ಬಂದಿರುತ್ತೆ. ಅವಳು ಸ್ವಲ್ಪ ಸುಧಾರಿಸಿಕೊಳ್ಳಲಿ, ನಂತರ ನಿನ್ನ ಬಳಿ ನಿಧಾನವಾಗಿ ಮಾತನಾಡುತ್ತಾಳೆ,” ಎಂದು ಸಮಾಧಾನಿಸಿದಳು.

ಗುಡ್‌ ಗರ್ಲ್ ತರಹ ಏಂಜೆಲ್‌ ಅಕ್ಕನ ಕೈ ಹಿಡಿದು, “ಅಕ್ಕಾ…. ನಡಿ, ನಿನ್ನ ಕೋಣೆ ಹೇಗೆ ರೆಡಿ ಮಾಡಿದ್ದೀನಿ ನೋಡು ಬಾ. ನಿನ್ನೆಯಿಂದ ನಾನೂ, ಅಮ್ಮ ಎಷ್ಟು ಕಷ್ಟಪಟ್ಟಿದ್ದೀವಿ ಗೊತ್ತಾ?” ಎಂದು ಮಾರ್ಗರೇಟ್‌ ಕೈ ಹಿಡಿದು ನಡೆಸಿದಳು.

ಆ ಕೋಣೆ ಬಲು ನಾಜೂಕಾಗಿ ಸಿಂಗಾರ ಗೊಂಡಿತ್ತು. ಮೇಜಿನ ಮೇಲೆ ಹೂದಾನಿಯಲ್ಲಿ ತಾಜಾ ಗುಲಾಬಿ ಹೂವಿನ ಗೊಂಚಲಿತ್ತು. ಮಾರ್ಗರೇಟ್‌ಗೆ ಇಷ್ಟವಾಗುವಂತೆ ಬೆಡ್‌ಶೀಟ್‌ ಮೇಲೆ ಗುಲಾಬಿ ಹೂಗಳ ಪ್ರಿಂಟ್‌ ಇತ್ತು. ದಿಂಬು ಸಹ ಪಿಂಕ್‌ ಆಗಿತ್ತು. ಅವಳ ಫೇವರಿಟ್‌ ಕಾರ್ನರ್‌ನ ಸ್ಟಡಿ ಟೇಬಲ್ ಮೇಲೆ ಬುಕ್ಸ್, ನೈಟ್‌ ಲ್ಯಾಂಪ್‌ ಜೋಡಿಸಿತ್ತು. `ವೆಲ್‌ಕಂ ಹೋಂ’ ಎಂದು ಗುಲಾಬಿ ದಳಗಳಿಂದ ಜೋಡಿಸಲಾಗಿತ್ತು.

ಮಾರ್ಗರೇಟ್‌ ಕೋಣೆಯೊಳಗೆ ಬಂದವಳೇ, “ಐ ಹೇಟ್‌ ಫ್ಲವರ್ಸ್‌!” ಎಂದು ಹೂದಾನಿಯನ್ನು ಮೂಲೆಗೆ ಎಸೆದಳು. ಗುಲಾಬಿ ಹೂಗಳು ಅನಾಥವಾಗಿ ಬಿದ್ದವು. ಬೆಡ್‌ಶೀಟ್‌ ಎಳೆದು ಮೂಲೆಗೆ ಬಿಸಾಡಿದಳು. ಕ್ಷಣಾರ್ಧದಲ್ಲಿ ನೀಟಾಗಿದ್ದ ಕೋಣೆ ಭೀಕರವಾಯಿತು. ಅವಳು ತನ್ನ ತಲೆ ಒತ್ತಿಕೊಳ್ಳುತ್ತಾ ಹಾಸಿಗೆ ಮೇಲೆ ಕುಳಿತಳು.

ಅವಳ ಆ ರೂಪ ಕಂಡು ತಾಯಿ, ಕಿರಿಮಗಳು ಭಯಗೊಂಡರು. ಮರಿಯಾಗಂತೂ ಮುಂದೆ ಹೇಗೆ ಮಾತನಾಡಬೇಕೆಂದೇ ತಿಳಿಯಲಿಲ್ಲ. ಏಂಜೆಲ್‌ಗೆ ಅಲ್ಲಿಂದ ತನ್ನ ಕೋಣೆಗೆ ಹೋಗುವಂತೆ ಸನ್ನೆ ಮಾಡಿದಳು. ನಂತರ ನಿಧಾನವಾಗಿ ಮಗಳ ಬಳಿ ಕುಳಿತು ಅವಳ ಬೆನ್ನು ಸವರುತ್ತಾ, “ಮಾರ್ಗಿ, ನಿನಗೆ ದೂರದ ಪ್ರಯಾಣ ಸರಿಹೋಗಲಿಲ್ಲ. ನಿದ್ದೆಗೆಟ್ಟು ಕಂಗಾಲಾಗಿದ್ದಿ. ಸ್ವಲ್ಪ ಹೊತ್ತು ಮಲಗಮ್ಮ. ಆಮೇಲೆ ಒಂದಿಷ್ಟು ಊಟ ಮಾಡುವೆಯಂತೆ,” ಎಂದು ಅವಳನ್ನು ಹಾಸಿಗೆ ಮೇಲೆ ಮಲಗಿಸಿ, ಬೇರೆ ಬ್ಲಾಂಕೆಟ್‌ ಹೊದಿಸಿ, ತಲೆ ತಟ್ಟಿ ಹೊರಬಂದಳು.

ಹಾಲ್‌ಗೆ ಬಂದು ಕುಳಿತ ಮರಿಯಾ ಏನು ಮಾಡುವುದೆಂದು ತೋಚದೆ ತಕ್ಷಣ ಸೂಸನ್‌ಗೆ ಫೋನ್‌ ಮಾಡಿ ವಿಚಾರಿಸೋಣ ಎಂದುಕೊಂಡಳು.

“ಹಲೋ ಸೂಸನ್‌ ಹೇಗಿದ್ದಿ? ಇಷ್ಟು ಹೊತ್ತಲ್ಲಿ ನಿನಗೆ ಫೋನ್‌ ಮಾಡಿ ತೊಂದರೆ ಕೊಟ್ಟಿದ್ದಕ್ಕೆ ಐ ಆ್ಯಮ್ ರಿಯಲಿ ವೆರಿ ಸಾರಿ…. ಮಾರ್ಗಿ ಇದೀಗ ತಾನೇ ಸೇಫಾಗಿ ಮನೆಗೆ ಬಂದು ಸೇರಿದಳು. ಪರದೇಶದಲ್ಲಿದ್ದಾಗ ಅವಳನ್ನು ಜೋಪಾನವಾಗಿ ನೋಡಿಕೊಂಡ ನಿನಗೆ ಎಷ್ಟು ಥ್ಯಾಂಕ್ಸ್ ಹೇಳಿದರೂ ಸಾಲದು…. ಅದಕ್ಕೆ ಫೋನ್‌ ಮಾಡಿ ತಿಳಿಸೋಣ ಅಂತ ಈಗ ಕಾಲ್‌ ಮಾಡಿದೆ…..”

“ಓಹೋ…. ಮರಿಯಾ…. ಇದ್ಯಾಕೆ ಇಷ್ಟು ಫಾರ್ಮಲ್ ಆಗ್ತಿದ್ದೀಯಾ….. ನೀನು ಇಷ್ಟೆಲ್ಲ ಥ್ಯಾಂಕ್ಸ್ ಹೇಳುವ ಅಗತ್ಯ ಇಲ್ಲ…. ನಿನ್ನ ಮಗಳು ನಮ್ಮ ಮನೆಗೆ ಬಂದಿದ್ದೇ 3-4 ಸಲ ಅಷ್ಟೇ….. ಮೊದಲ ವರ್ಷವೇನೋ 2 ಸಲ ಬಂದಳು…. ಆಮೇಲೆ ವರ್ಷಕ್ಕೆ ಒಂದೇ ಸಲ ಬಂದಳೇನೋ, ಪಾಪ…. ತುಂಬಾ ಒಳ್ಳೆ ಹುಡುಗಿ. ಬಲು ಸಂಕೋಚದ ಸ್ವಭಾವ. 2 ಪೀಸ್‌ ಕೇಕ್‌ ತಿನ್ನಿಸುವಷ್ಟರಲ್ಲಿ ನನಗೆ ಸಾಕು ಸಾಕಾಗಿತ್ತು…. ಹೇಗೋ, ಕ್ಷೇಮವಾಗಿ ಬಂದು ಸೇರಿದಳು ತಾನೇ, ಆಲ್ ದಿ ಬೆಸ್ಟ್ ಹೇಳಿಬಿಡು!” ಎಂದು ಸೂಸನ್‌ ಮಾತು ಮುಗಿಸಿದಳು.

`ಓ…. ಹಾಗಿದ್ದರೆ ಮಗಳ ಪ್ರಸ್ತುತ  ಪರಿಸ್ಥಿತಿ ಬಗ್ಗೆ ಸೂಸನ್‌ಗೆ ತಿಳಿದಿರಲು ಸಾಧ್ಯವೇ ಇಲ್ಲ,’ ಎಂದು ಮಾರ್ಗರೇಟ್‌ ಉಳಿದ ವಿಷಯಗಳ ಬಗ್ಗೆ ಮಾತನಾಡಿ ಮುಗಿಸಿದಳು. ಒಟ್ಟಾರೆ ಸೂಸನ್‌ಗೆ ಮಾರ್ಗಿಯ ವಿಷಯ ತಿಳಿಯದು ಎಂಬುದು ಮರಿಯಾಳಿಗೆ ಮನದಟ್ಟಾಯಿತು. ಅಷ್ಟರಲ್ಲಿ ಮಾರ್ಗಿಯ ಕೋಣೆಯಿಂದ ಇದ್ದಕ್ಕಿದ್ದಂತೆ ಅಳುವ ಕಿರುಚಿದ ದನಿ ಕೇಳಿತು.

ಓಡಿಹೋಗಿ ಮಾರ್ಗಿಯ ಕೋಣೆಯಲ್ಲಿ ನೋಡಿದರೆ, ಅವಳು ಮಂಚದ ಒಂದು ತುದಿಯಲ್ಲಿ ಕಿಟಕಿಯ ಹೊರಗೆ ನೋಡುತ್ತಾ ನಿಸ್ತೇಜವಾಗಿ ನಿಂತುಬಿಟ್ಟಿದ್ದಾಳೆ. ತಲೆ ಕೂದಲೆಲ್ಲ ಕೆದರಿದೆ….. ತನ್ನ ನೈಟಿಯನ್ನು ತಾನೇ ಅಲ್ಲಲ್ಲಿ ಹರಿದುಕೊಂಡಿದ್ದಾಳೆ…. ತಲೆಯಿಂದ ಕಿತ್ತ ಒಂದು ಜೊಂಪೆ ಕೂದಲು ಒಂದು ಮೂಲೆಯಲ್ಲಿ ಬಿದ್ದಿದೆ…. ಕಣ್ಣು ಕೆಂಡದುಂಡೆಗಳಾಗಿವೆ….. ಬಲವಂತವಾಗಿ ತುಟಿಗಳನ್ನು ಕಚ್ಚಿಕೊಳ್ಳುತ್ತಿದ್ದಾಳೆ, ಹಾಗಾಗಿ ಕೆಳ ತುಟಿಯಿಂದ ರಕ್ತ ಜಿನುಗಿದೆ…. ಅವಳ ಸ್ಥಿತಿ ನೋಡಿದರೆ ಅವಳಿಗೆ ಹುಚ್ಚು ಹಿಡಿದಿದೆ ಎಂದು ಯಾರು ಬೇಕಾದರೂ ಹೇಳಬಹುದು. ಮರಿಯಾ ಮೊದಲು ತನ್ನನ್ನು ಸಂಭಾಳಿಸಿಕೊಳ್ಳುತ್ತಾ ನಂತರ ಮಗಳನ್ನು ಮುಟ್ಟಿ ಪ್ರೀತಿಯಿಂದ ಕರೆದಳು, “ಮಾರ್ಗಿ……”

“ಡೋಂಟ್‌ ಟಚ್‌ ಮಿ!” ಶಾಕ್‌ ತಗುಲಿದಂತೆ ಮಾರ್ಗಿ ಕಿಟಾರನೆ ಕಿರುಚಿದಳು.

ಇವಳನ್ನು ಯಾವುದೋ ಮಾನಸಿಕ ಸಮಸ್ಯೆ ಕಾಡುತ್ತಿದೆ ಎಂಬುದು ಮರಿಯಾಳಿಗೆ ತಿಳಿಯಿತು. ಬಹಳ ಕಷ್ಟಪಟ್ಟು ಮಗಳಿಗೆ ಸಾಂತ್ವನ ಹೇಳಿದಳು. ತನ್ನೆಲ್ಲ ಬುದ್ಧಿ ಖರ್ಚು ಮಾಡಿ ಅವಳು 2 ತುತ್ತು ಅನ್ನ ತಿನ್ನುವಂತೆ ಮಾಡಿದಳು. ನಂತರ ಕರೆದುಕೊಂಡು ಬಂದು ಮಲಗಿಸಿ ಹೊದಿಸಿದಳು.

ಅಷ್ಟು ಹೊತ್ತಿಗೆ 11 ಗಂಟೆ ದಾಟಿತ್ತು. ಚಿಕ್ಕವಳಿಗೂ ಊಟ ಮಾಡಿಸಿ, ತಾನು ಮಜ್ಜಿಗೆ ಕುಡಿದು, ತಲೆನೋವಿನ ಮಾತ್ರೆ ಸೇವಿಸಿ ಹಾಲ್‌ನಲ್ಲಿ ಹಾಗೇ ಕುಳಿತುಬಿಟ್ಟಳು. ಯೋಚಿಸಿ ಯೋಚಿಸಿ ಸಾಕಾದಾಗ ಅವಳು ತನ್ನ ಫ್ಯಾಮಿಲಿ ಡಾಕ್ಟರ್‌ ರಮಾಮಣಿಗೆ ಫೋನ್‌ ಮಾಡಿ, “ಸಾರಿ ಡಾಕ್ಟರ್‌…. ಇಷ್ಟು ಹೊತ್ತಲ್ಲಿ ನಿಮಗೆ ತೊಂದರೆ ಕೊಡುತ್ತಿದ್ದೇನೆ…..” ಎಂದು ವಿನಂತಿಸಿದಳು.

ಡಾ. ರಮಾ, “ಪರವಾಗಿಲ್ಲ ಹೇಳಿ ಮರಿಯಾ,” ಎಂದಾಗ ನಡೆದ ಘಟನೆ ವಿವರಿಸಿದಳು. ಮಾರನೇ ಬೆಳಗ್ಗೆ ಬಂದು ನೋಡಿ ಏನಾದರೂ ಇಂಜೆಕ್ಷನ್‌ ಕೊಡಿ ಎಂದು ಕೇಳಿಕೊಂಡಳು.

“ನೀವೇನೂ ಚಿಂತಿಸಬೇಡಿ. ನಾನು ಡಾ. ರಾಜನ್‌ ಅವರನ್ನು ನಾಳೆ ಬೆಳಗ್ಗೆ 9 ಗಂಟೆಗೆ ಕರೆದುಕೊಂಡು ಬರ್ತೀನಿ. ಅವರು ನಮ್ಮ ಸೀನಿಯರ್‌. ಬೆಂಗಳೂರಿನ ಖ್ಯಾತ ಸೈಕಿಯಾಟ್ರಿಸ್ಟ್, ನನ್ನ ಗುಡ್‌ ಫ್ರೆಂಡ್‌ ಕೂಡ. ಏನೂ ಚಿಂತಿಸಬೇಡಿ. ಅವಳು ಮತ್ತೆ ಎದ್ದರೆ ಬಿಸಿ ಹಾಲಿಗೆ ಸಕ್ಕರೆ ಹಾಕಿ ಕುಡಿಸಿಬಿಡಿ. ಚೆನ್ನಾಗಿ ನಿದ್ದೆ ಬರುತ್ತದೆ. ಬೆಳಗ್ಗೆ ಬಂದು ಅವರು ನೋಡುತ್ತಾರೆ. ಈಗಲೇ ಅವರ ಅಪಾಯಿಂಟ್‌ಮೆಂಟ್‌ ತೆಗೆದುಕೊಳ್ಳುವೆ,” ಎಂದು ಆಶ್ವಾಸನೆ ನೀಡಿದರು.

ಅವರಿಗೆ ಥ್ಯಾಂಕ್ಸ್ ಹೇಳುತ್ತಾ ಮರಿಯಾ ಫೋನ್‌ ಇರಿಸಿದಳು. ಇಡೀ ರಾತ್ರಿ ಅವಳಿಗೆ ನಿದ್ದೆ ಬರಲಿಲ್ಲ. ಅಮೆರಿಕಾದಲ್ಲಿ ತನ್ನ ಮಗಳು ಈ ಮಟ್ಟಕ್ಕೆ ಕಂಗಾಲಾಗಲು ಅಂಥದ್ದೇನು ನಡೆದಿರಬಹುದು? ಹೀಗೆ ಯೋಚಿಸುತ್ತಿದ್ದಾಗ, ಮಾರ್ಗಿ ತನ್ನ ಸೆಕೆಂಡ್‌ ಇಯರ್‌ನಲ್ಲಿದ್ದಾಗ ಅಲ್ಲಿನ ಒಬ್ಬ ಗೆಳತಿಯನ್ನು ವಿಡಿಯೋ ಚ್ಯಾಟ್‌ ಮುಖಾಂತರ ಪರಿಚಯಿಸಿದ್ದು ನೆನಪಾಯಿತು. ಅವಳು ಅಮೆರಿಕಾದಲ್ಲಿ ಸೆಟಲ್ ಆದ ಭಾರತೀಯ ಹುಡುಗಿ. ಆ ಹುಡುಗಿ ಹೆಸರು ಎಮಿಲಿ ಇರಬೇಕೆನಿಸಿತು. ತನ್ನ ಲ್ಯಾಪ್‌ಟಾಪ್‌ನಲ್ಲಿ ಚೆಕ್‌ ಮಾಡಿದರೆ ಆ ಹುಡುಗಿಯ ವಿವರಗಳು ಸಿಗುತ್ತದೆ ಎನಿಸಿತು. 3ನೇ ವರ್ಷ ಮಾರ್ಗಿ ಯಾವ ಚ್ಯಾಟ್‌ ಸಹ ಮಾಡಿರಲಿಲ್ಲ ಎಂದೂ ನೆನಪಾಯಿತು. ಸದಾ ಫೋನಿನಲ್ಲೇ ಮಾತನಾಡುತ್ತಿದ್ದಳು. ಇದೆಲ್ಲ ಯೋಚಿಸುತ್ತಾ ಯಾವಾಗ ಅವಳು ಸೋಫಾ ಮೇಲೆ ನಿದ್ದೆಗೆ ಜಾರಿದಳೋ, ಯಾವಾಗ ಬೆಳಗಾಯಿತೋ ಒಂದು ತಿಳಿಯಲಿಲ್ಲ.

ಬೆಳಗ್ಗೆ ಎದ್ದ ತಕ್ಷಣ ಮಕ್ಕಳಿಗೆಂದು ಹಾಲು ಬಿಸಿ ಮಾಡಿ, ತಾನು ತುಸು ನೆಸ್‌ಕೆಫೆ ಕದಡಿ ಕುಡಿದಳು. ತಕ್ಷಣ ಎಮಿಲಿಯ ನೆನಪಾಗಿ ಆ ವಿಡಿಯೋ ಚ್ಯಾಟ್‌ ಗಮನಿಸಿ, ಅವಳ ನಂಬರ್‌ಗಾಗಿ ತಡಕಾಡಿದಾಗ ಅಂತೂ ಸಿಕ್ಕಿತು. ಅಷ್ಟರಲ್ಲಿ ಆಗಲೇ 8.30 ದಾಟಿತ್ತು. ಸರಿ, 9 ಗಂಟೆಗೆ ಡಾಕ್ಟರ್‌ ಬಂದು ಹೋಗುತ್ತಾರೆ, ಆಮೇಲೆ ಆ ಹುಡುಗಿ ಜೊತೆ ಮಾತನಾಡೋಣ ಎಂದು ನಿರ್ಧರಿಸಿದಳು.

ಅಷ್ಟು ಹೊತ್ತಿಗೆ ಏಂಜೆಲ್ ಕಾಲೇಜಿಗೆ ಹೊರಡಲು ಸಿದ್ಧಳಾಗಿದ್ದಳು. ಅವಳಿಗೆ ಹಾಲು, ಬ್ರೆಡ್‌ ಟೋಸ್ಟ್ ನೀಡಿ ಮಾರ್ಗಿಯನ್ನು ಹುಡುಕಿಕೊಂಡು ಹೋದಳು. ಅಲ್ಲಿ ಮಾರ್ಗಿ ಯಾವಾಗಲೋ ಎಚ್ಚರಗೊಂಡು ಗರಬಡಿದವಳಂತೆ ಸೂರು ದಿಟ್ಟಿಸುತ್ತಾ ಮಲಗಿದ್ದಳು.

ಮರಿಯಾ ಅವಳನ್ನು ಹೇಗೋ ಪುಸಲಾಯಿಸಿ ಎಬ್ಬಿಸಿ, ಮುಖ ತೊಳೆದುಕೊಳ್ಳುವಂತೆ ಮಾಡಿಸಿ, ಅರ್ಧ ಲೋಟ ಹಾಲು ಕುಡಿಸುವಷ್ಟರಲ್ಲಿ ಸುಸ್ತಾದಳು. ತನ್ನ ಫ್ರೆಂಡ್‌ ಒಬ್ಬರು ಯಾರೋ ನೋಡಲು ಬರುತ್ತಾರೆ ಎಂದು ಮಾರ್ಗಿಗೆ ತಲೆ ಬಾಚಿ, ಹೇರ್‌ ಬ್ಯಾಂಡ್‌ ಹಾಕಿಸಿ, ಬಟ್ಟೆ ಬದಲಾಯಿಸುವಂತೆ ಒಪ್ಪಿಸಿದಳು.

ಅಷ್ಟರಲ್ಲಿ ಡಾ. ರಮಾ, ಡಾ. ರಾಜನ್‌ರನ್ನು ಕರೆದುಕೊಂಡು ಇವರ ಮನೆಗೆ ಬಂದಿದ್ದರು. ಅವರಿಬ್ಬರನ್ನೂ ಹಾರ್ದಿಕವಾಗಿ ಸ್ವಾಗತಿಸಿ ಮರಿಯಾ ಬಲಂತವಾಗಿ ಕಾಫಿ ಮಾಡಿಕೊಟ್ಟಳು.

ಸೂಕ್ಷ್ಮವಾಗಿ ಡಾ. ರಮಾ ಡಾ. ರಾಜನ್‌ರಿಗೆ ಎಲ್ಲಾ ವಿಷಯ ಹೇಳಿದ್ದರು. ಎಲ್ಲವನ್ನೂ ತಿಳಿದುಕೊಂಡ ಅವರು, ಮಾರ್ಗಿಯನ್ನು ನೋಡಲು ಹೋಗೋಣ ಎಂದು ಅವಳ ರೂಮಿನತ್ತ ಹೊರಟರು. ಇಷ್ಟೆಲ್ಲ ಕಷ್ಟಪಟ್ಟಿದ್ದ ಮರಿಯಾಳತ್ತ ಕರುಣೆ ತೋರದೆ ಮಾರ್ಗಿ ಮತ್ತೆ ತನ್ನ ಬಟ್ಟೆ ಅಸ್ತವ್ಯಸ್ತಗೊಳಿಸಿಕೊಂಡು, ತಲೆಯನ್ನೆಲ್ಲ ಕೆದರಿಕೊಂಡು ದಿಂಬಿನಲ್ಲಿ ಮುಖ ಹುದುಗಿಸಿ ಮಲಗಿಬಿಟ್ಟಿದ್ದಳು.

ಬಂದ ಒಡನೆ ಸೂಕ್ಷ್ಮ ಅರಿತ ಡಾ. ರಾಜನ್‌, ಬಹಳ ಲೋಕಾಭಿರಾಮವಾಗಿ ಮಾತನಾಡುಂತೆ, “ಹಲೋ ಮಿಸೆಸ್‌ ಮರಿಯಾ, ಈಗ ನಿಮ್ಮ ಆರೋಗ್ಯ ಹೇಗಿದೆ? ನೀವು ಹೇಳ್ತಿದ್ದರಲ್ಲ ನಿಮ್ಮ ಹಿರಿಯ ಮಗಳು ಫ್ಲೋರಿಡಾದಿಂದ ಬರಬೇಕು ಅಂತ….. ಇವಳೇನಾ ಅದು?” ಎನ್ನುತ್ತಾ ಹತ್ತಿರ ಬಂದು ಮಾರ್ಗಿಯನ್ನು, “ಹೌ ಡೂ ಯೂ ಡು ಯಂಗ್‌ ಲೇಡಿ? ಈಗ ಹೇಗಿದ್ದಿ? ತಲೆನೋವು ಇಲ್ಲ ತಾನೇ….. ಜೆಟ್‌ ಲ್ಯಾಗ್‌ ಹೋಯ್ತಾ?” ಎಂದು ವಿಚಾರಿಸಿದರು.

ಅವಳು ಏನೂ ಉತ್ತರಿಸದೆ ತಟಸ್ಥವಾಗಿಯೇ ಇದ್ದಳು.

ಡಾ. ರಾಜನ್‌ ಮರಿಯಾ ಕಡೆ ತಿರುಗಿ, “ಎಲ್ಲಿ…. ನಿಮ್ಮ ಬಿಪಿ ನೋಡೋಣ ಬನ್ನಿ,” ಎಂದು ಮೊದಲು ಆಕೆಯ ಪಲ್ಸ್ ಚೆಕ್‌ ಮಾಡಿ, ಬಿಪಿ ಪರೀಕ್ಷಿಸಿದರು.

“ನಿಮಗೆ ಗೊತ್ತಾ ಮರಿಯಾ….. ಇಂದಿನ ಯಂಗ್‌ ಹುಡುಗಿಯರ ಹಾರ್ಟ್‌ಬೀಟ್‌, ಬಿಪಿ ಎಷ್ಟು ಪರ್ಫೆಕ್ಟ್ ಆಗಿರುತ್ತೆ ಗೊತ್ತಾ….. ನಿಮಗಂತೂ ವಯಸ್ಸಾಯ್ತು ಬಿಡಿ. ಎಲ್ಲಮ್ಮ ಮಾರ್ಗರೇಟ್‌…. ನಿನ್ನ ಕೈ ಕೊಡು,” ಎಂದು ಬಹಳ ಸಹಜವಾಗಿ ಅವಳ ನಾಡಿಮಿಡಿತ ಪರೀಕ್ಷಿಸಿಕೊಂಡು ನೋಟ್‌ ಮಾಡಿದರು. ಹಾಗೆಯೇ ಅವಳ ಬಿಪಿ ಪರೀಕ್ಷೆಯೂ ಆಯ್ತು. ಅವಳ ಓದು, ಅಮೆರಿಕಾ ಲೈಫ್‌ಸ್ಟೈಲ್‌ ಇತ್ಯಾದಿ ಬಹಳ ಸಾಮಾನ್ಯ ಪ್ರಶ್ನೆಗಳನ್ನು ಕೇಳುತ್ತಾ ಮಾತಿನ ಮಧ್ಯೆ ಅವಳಿಗೆ ಒಂದು ಪ್ರಶ್ನಾವಳಿ ಫಾರ್ಮ್ ಕೊಟ್ಟರು. ಅದು ಮಾಮೂಲಿ ಆಗಿರದೆ ಅವಳ ಮಾನಸಿಕ ಸ್ಥಿತಿಯ ಅರಿವು ಮೂಡಿಸುವಂಥ ಪ್ರಶ್ನಾವಳಿಯೇ ಆಗಿತ್ತು. ತನಗೊಂದು ಸೈಕಾಲಜಿಕ್‌ ಟೆಸ್ಟ್ ನೀಡಲಾಗಿದೆ ಎಂಬ ಅರಿವಿಲ್ಲದೆ, ಅವರು ಕೊಟ್ಟ ಪ್ರಶ್ನೆಗಳಿಗೆ ತನಗೆ ತೋಚಿದಂತೆ 4ರಲ್ಲಿ  ಒಂದು ಉತ್ತರ ಟಿಕ್‌ ಮಾಡಿದ್ದಳು.

ಅವಳನ್ನು ಪ್ರಶ್ನಿಸುತ್ತಿದ್ದಂತೆ ಅವಳ ಮಾತು ಹಾವಭಾವಗಳಲ್ಲೇ ಮಾರ್ಗಿ ಯಾವುದೋ ಬಲವಾದ ಮಾನಸಿಕ ಹಿಂಸೆಗೆ ಗುರಿಯಾಗಿದ್ದಾಳೆ ಎಂಬುದು ಅವರಿಗೆ ಸ್ಪಷ್ಟವಾಯಿತು. ಅತಿಯಾದ ಒತ್ತಡದಿಂದ ಗ್ರಸ್ತಳಾದ ಅವಳು ಎಲ್ಲಕ್ಕೂ ಅಸಹನೆಯಿಂದ ವಿರೋಧಿಸುವುದನ್ನು ರೂಢಿಸಿಕೊಂಡಿದ್ದಳು. ನಂತರ ಅವಳು ಬರೆದುದನ್ನು ಮೂಲ್ಯಾಂಕನ ಮಾಡಿದ ಡಾ. ರಾಜನ್‌, ರಮಾಮಣಿಗೆ ಅವಳನ್ನು ಹೊರಗಿನ ಲಾನ್‌ಗೆ ಕರೆದೊಯ್ಯುವಂತೆ ಸನ್ನೆ ಮಾಡಿದರು. ರಮಾಮಣಿ ಅದೂ ಇದೂ ಮಾತನಾಡಿಸಿ ಪುಸಲಾಯಿಸುತ್ತಾ ಮಾರ್ಗಿಯನ್ನು ಲಾನ್‌ಗೆ ಕರೆದೊಯ್ದರು.

ಮಾರಿಯಾಳಿಗಂತೂ ಡಾಕ್ಟರ್‌ ತನಗೇನು ಹೇಳಲಿದ್ದಾರೋ  ಎಂದು ಎದೆ ಹೊಡೆದುಕೊಳ್ಳುತ್ತಿತ್ತು. ಅದೇ ಸಮಯಕ್ಕೆ ಡಾ. ರಾಜನ್‌ ಈಕೆಯನ್ನು ಹತ್ತಿರ ಕೂರುವಂತೆ ಹೇಳಿದರು. “ಹೇಗಿದ್ದಾಳೆ ನನ್ನ ಮಗಳು ಡಾಕ್ಟರ್‌? ಯಾಕೆ ಹೀಗೆ ಆಡುತ್ತಿದ್ದಾಳೆ?  ಏನಾಗಿದೆ ಅವಳಿಗೆ….?” ಎನ್ನುವಷ್ಟರಲ್ಲಿ ಕಂಠ ತುಂಬಿ ಬಂದಿತ್ತು.

“ನೋ….ನೋ…. ಮಿಸೆಸ್‌ ಮರಿಯಾ, ನೀವೀಗ ಬೋಲ್ಡ್ ಆಗಿ ಇರಬೇಕು. ನಿಮ್ಮ ಕಿರಿಯ ಮಗಳ ಪ್ರಶ್ನೆಗಳಿಗೆ ಸಮಾಧಾನ ಹೇಳಬೇಕು. ಹೌದು, ಮಾರ್ಗಿಗೆ ಏನೋ ಮಾನಸಿಕ ಸಮಸ್ಯೆ ಇದೆ. ಅವಳ ವರ್ತನೆ, ಟೆಸ್ಟ್ ನಿಂದ ಗೊತ್ತಾಗಿದೆ.”

ನಿಡಿದಾದ ಉಸಿರು ಬಿಡುತ್ತಾ ಡಾ. ರಾಜನ್‌ ಹೇಳಿದರು, “ಮಾರ್ಗಿಗೆ ಆ್ಯನೊರೆಕ್ಸಿಯಾ ಹಾಗೂ ಪಾರ್ಶಿಯಲ್ ಎಪಿಲೆಪ್ಸಿಯಾ ಇದೆ.”

“ಹಾಗಂದ್ರೆ…… ಡಾಕ್ಟರ್‌? ನನ್ನ ಮಗಳು ಗುಣವಾಗುತ್ತಾಳಾ?”

“ಮೆಡಿಕಲ್‌ನಲ್ಲಿ ಈ ರೋಗಕ್ಕೆ ಇಂಥದ್ದೇ ಅಂತ ನಿಖರ ಚಿಕಿತ್ಸೆ ಇಲ್ಲ. ಸರಿಹೋಗುವ ಚಾನ್ಸೆಸ್‌ 30-35% ಎನ್ನಬಹುದಷ್ಟೆ. ಸುದೀರ್ಘ ಕಾಲದ ಸ್ಟ್ರೆಸ್‌ ಅಥವಾ ಬಹುಕಾಲ ಅತಿಯಾದ ಮಾನಸಿಕ ಒತ್ತಡಕ್ಕೆ ಗುರಿಯಾಗಿದ್ದರೆ ಈ ರೋಗ ಬರುತ್ತದೆ. ನೀವು ಹ್ಞೂಂ ಅಂದ್ರೆ ನಮ್ಮ ನರ್ಸಿಂಗ್‌ ಹೋಂಗೆ ಅಡ್ಮಿಟ್‌ ಮಾಡಿ. ರೆಗ್ಯುಲರ್‌ ಟೆಸ್ಟ್, ಸ್ವಲ್ಪ ಕಾಲ ಚಿಕಿತ್ಸೆ ನೀಡಿ, ಔಷಧಿ ಇತ್ಯಾದಿ ಕೊಡೋಣ.”

ಮರಿಯಾ ಅದಕ್ಕೆ ತುಸು ಕಾಲಾವಕಾಶ ಬೇಡಿದಳು. ಅವರಿಗೆ ಫೀಸ್‌ ಕೊಟ್ಟು, ಡಾ. ರಮಾರಿಗೆ ವಂದನೆ ಸಲ್ಲಿಸಿ ಕಳುಹಿಸಿಕೊಟ್ಟಳು. ಅವಳ ಮನಸ್ಸೀಗ ಚಿಂತೆಯ ಗೂಡಾಗಿತ್ತು. ಇದಕ್ಕೆ ಒಂದೊಂದಾಗಿ ಜವಾಬು ಹುಡುಕುವುದು ಹೇಗೆ? ಯೋಚಿಸತೊಡಗಿದಳು. ಮಾರ್ಗಿಯನ್ನು ನೋಡಿದರೆ ತನ್ನ ಯಾವ ಪ್ರಶ್ನೆಗೂ ಉತ್ತರಿಸಲಾರಳು ಎನಿಸಿತು. ಅವಳು ತನ್ನನ್ನು ತಾನು ಹಿಂಸೆ ಪಡಿಸಿಕೊಳ್ಳದಿದ್ದರೆ ಅದುವೇ ದೊಡ್ಡ ಉಪಕಾರವಾಗಿತ್ತು. ಅಂಗಳದ ತುದಿಯ ಬೆಂಚಿನ ಮೇಲೆ ಕುಳಿತು ಶೂನ್ಯ ದಿಟ್ಟಿಸುತ್ತಿದ್ದ ಮಗಳನ್ನು ಕಂಡಾಗ ಹೃದಯ ಕಿತ್ತು ಬಾಯಿಗೆ ಬಂತು. ಅವಳನ್ನು ಮೆಲ್ಲಗೆ ನಡೆಸಿಕೊಂಡು ಬಂದು ಕೋಣೆ ಸೇರಿಸಿದಳು.

ಮೊದಲು ಎಮಿಲಿಗೆ ಫೋನ್‌ ಮಾಡಿ ಅವಳನ್ನಾದರೂ ವಿಚಾರಿಸೋಣ ಎಂದು ನಂಬರ್‌ ಒತ್ತಿದಳು. ಎಮಿಲಿ ಎಂಥ ಉತ್ತರ ಹೇಳಲಿದ್ದಾಳೋ, ಅವಳ ಬಗ್ಗೆ ಏನೂ ತಿಳಿಯದೆ ಮಗಳ ವಿಷಯ ಕೆದಕಿ ಕೇಳಬೇಕಿದೆಯಲ್ಲ ಎಂದು ಸಂಕೋಚವಾಯಿತು.

ಆಗ ಇದ್ದಕ್ಕಿದ್ದಂತೆ ಆ ಬದಿಯಿಂದ “ಹಲೋ,” ಎಂದು ಸದ್ದಾಯಿತು.

ಏನೂ ತಿಳಿಯದೆ ಮರಿಯಾ ತಡಬಡಾಯಿಸುತ್ತಾ, “ಹಲೋ….” ಎಂದಷ್ಟೇ ಹೇಳಿದಳು.

“ಮೇ ಐ ನೋ ಹೂ ಈಸ್‌ ಆನ್‌ ದಿ ಲೈನ್‌?”

ಆಗ ಮರಿಯಾ ಸುಧಾರಿಸಿಕೊಳ್ಳುತ್ತಾ, “ಈಸ್‌ ದಿಸ್‌ ಎಮಿಲಿ ಸ್ಪೀಕಿಂಗ್‌ ಡಿಯರ್‌?” ಎಂದು  ಕೇಳಿದಳು. “ದಿಸ್‌ ಈಸ್‌ ಮರಿಯಾ ಹಿಯರ್‌, ಮಾರ್ಗರೇಟ್ಸ್ ಮದರ್‌ ಫ್ರಂ ಇಂಡಿಯಾ. ಡೂ ಯೂ ರಿಮೆಂಬರ್‌ ಹರ್‌?”

“ಓ ಎಸ್‌ ಆಂಟಿ….. ಐ ಡೂ ರಿಮೆಂಬರ್‌ ಹರ್‌. ಹೌ ಈಸ್‌ ಶೀ?”

“ನಾಟ್‌ ಸೋ ಓ.ಕೆ ಡಿಯರ್‌….. ದಟ್ಸ್ ವೈ ಐ ಕಾಲ್ಡ್ ಯೂ…. ವಾಟ್‌ ಹ್ಯಾಪೆನ್‌ ವಿತ್‌ ಹರ್‌ ವೆನ್‌ ಶೀ ವಾಸ್‌ ಇನ್‌ ಫ್ಲೋರಿಡಾ? ಎನಿಥಿಂಗ್‌ ಸೀರಿಯಸ್‌?”

ಆ ಪ್ರಶ್ನೆ ಕೇಳಿ ಎಮಿಲಿ ಒಂದು ನಿಮಿಷ ಸುಮ್ಮನಾದಳು. ನಂತರ, “ಎಸ್‌ ಆಂಟಿ…. ಬಟ್‌ ಐ ಕಾಂಟ್‌ ಟೆಲ್‌ ಯೂ ಓವರ್‌ ದಿ ಫೋನ್‌…..  ಯೂ ನೀಡ್‌ ಟು ಕಂ ಹಿಯರ್‌ ರೈಟ್‌ ನೌ…..”

ಇದನ್ನು ಕೇಳಿಸಿಕೊಂಡು ಮರಿಯಾಳಿಗೆ ಮತ್ತೊಮ್ಮೆ  ಶಾಕ್‌ ತಗುಲಿತು. ಈ ಸಮಸ್ಯೆಗೆ  ಪರಿಹಾರವೇನೊ ಕಾಣಿಸುತ್ತಿದೆ. ಆದರೆ ಅಲ್ಲಿಯವರೆಗೂ ತಲುಪುವುದು ಹೇಗೆ? ಇದನ್ನೇ ಯೋಚಿಸುತ್ತಿದ್ದ ಮರಿಯಾಳನ್ನು ಎಮಿಲಿಯ ಮಾತು ಎಚ್ಚರಿಸಿತು, “ಆರ್‌ ಯೂ ದೇರ್‌ ಆಂಟಿ…..?”

“ಎಸ್‌ ಡಿಯರ್‌….. ಗಿವ್‌ ಮಿ ಸಮ್ ಟೈಂ…. ಐ ವಿಲ್ ಕಾಲ್‌ ಯೂ ಬ್ಯಾಕ್‌….. ಥ್ಯಾಂಕ್ಸ್ ಎ ಲಾಟ್‌!” ಎಂದಳು.

ಒಂದು ಕಡೆ ಮಾರ್ಗಿಯ ತೊಂದರೆ, ಕಷ್ಟಗಳು…. ಮತ್ತೊಂದು ಕಾಲೇಜಿಗೆ ಹೊರಡುವ ಏಂಜಲ್‌ಳನ್ನು ಬಿಟ್ಟು ಹೊರಡಬೇಕು, ಮತ್ತೆ ಬಿಸ್‌ನೆಸ್‌ ಜವಾಬ್ದಾರಿ, ಮತ್ತೆ ಮನೆ ನೋಡಿಕೊಳ್ಳುವವರಾರು? ಆದರೆ ಈ ಚಕ್ರವ್ಯೂಹವನ್ನು ಹೇಗಾದರೂ ಭೇದಿಸಲೇಬೇಕು, ಇಲ್ಲದಿದ್ದರೆ ಮಾರ್ಗಿ ಕೈ ಬಿಟ್ಟಾಳು! ಹೀಗೆ 10 ಹಲವು ಸಲ ಯೋಚಿಸಿ ಮರಿಯಾ ತಾನು ಅಮೆರಿಕಾಗೆ ಹೊರಡಲೇಬೇಕು ಎಂದು ನಿರ್ಧರಿಸಿದಳು.

ಮರುದಿನವೇ ಮರಿಯಾ ತತ್ಕಾಲ್‌ನಲ್ಲಿ ವೀಸಾಗಾಗಿ ಅಪ್ಲೈ ಮಾಡಿದಳು. 2 ವಾರ ಬಿಟ್ಟು ಅಮೆರಿಕಾದಿಂದ 15 ದಿನಗಳ ಮಟ್ಟಿಗಿನ ಟೂರಿಸ್ಟ್ ವೀಸಾ ಬಂದಿತು. ಅಷ್ಟರಲ್ಲಿ ಮಗಳನ್ನು ಡಾ. ರಾಜನ್‌ರ ಬಳಿ ಆಸ್ಪತ್ರೆಯಲ್ಲಿ ಅಡ್ಮಿಟ್‌ ಮಾಡಿಸಿದಳು. ಹೇಗೋ ಎದೆಯ ಮೇಲೆ ಕಲ್ಲಿಟ್ಟುಕೊಂಡು ಮಗಳನ್ನು ಮಾನಸಿಕ ರೋಗಿಗಳ ಆಸ್ಪತ್ರೆಗೆ ಸೇರಿಸಿದ್ದಾಯಿತು. ತನ್ನ ತಂಗಿ ಲೂಯಿಸಾಳ ಮನೆಯಲ್ಲಿ ಕಿರಿ ಮಗಳನ್ನು 2 ವಾರಕ್ಕಾಗಿ ಬಿಟ್ಟಿದ್ದಾಯಿತು. ಆಫೀಸಿನ ಜವಾಬ್ದಾರಿಯನ್ನು ಪತಿಯ ಬಲಗೈ ಆಗಿದ್ದ ಬಸವರಾಜುಗೆ ವಹಿಸಿ ಹೊರಟಳು.

ಫ್ಲೈಟ್‌ ಏರಿದವಳಿಗೆ ನಿದ್ರೆ ಬಂದಿದ್ದರೆ ತಾನೇ? ಫ್ಲೋರಿಡಾದಲ್ಲಿ ಎಮಿಲಿ ಏನು ಹೇಳಲಿದ್ದಾಳೋ ಎಂದು ಗಾಬರಿಯಾಯಿತು. ನೇರವಾಗಿ ಏರ್‌ಪೋರ್ಟ್‌ಗೆ ಬಂದು ಸೂಸನ್‌ ಇವಳಿಗಾಗಿ ಕಾಯುತ್ತಿದ್ದಳು.

ಸೂಸನ್‌ಳನ್ನು ಕಂಡಿದ್ದೇ ಮರಿಯಾ ಅವಳನ್ನು ಗಾಢವಾಗಿ ಅಪ್ಪಿಕೊಂಡಳು. 10 ವರ್ಷಗಳ ನಂತರ ಪರಸ್ಪರ ಭೇಟಿ ಆಗಿದ್ದರು.  ಏರ್‌ಪೋರ್ಟ್‌ನಿಂದ ಅವಳ ಮನೆಗೆ 1 ಗಂಟೆಯ ದಾರಿ. “ಎಷ್ಟೋ ವರ್ಷಗಳಾಗಿ ಹೋಯಿತಲ್ಲ ಮರಿಯಾ ನಿನ್ನನ್ನು ನೋಡಿ….. ಬಹಳ ಖುಷಿ ಆಯ್ತು,” ಎಂದು ಸಂಭ್ರಮಪಟ್ಟಳು.

“ಅದೇನೋ ನಿಜ……  ಆದರೆ ನನ್ನ ತಲೆ ಪೂರ್ತಿ ಕೆಟ್ಟಿದೆ….. ನನ್ನ ಮನೆ ಮುಳುಗಿ ಹೋಗುತ್ತಿದೆ…..”

“ಏನಾಯ್ತು ಮರಿಯಾ? ಯಾಕೆ ಅಪ್‌ಸೆಟ್‌ ಆಗಿದ್ದಿ?”

ದಾರಿ ಮಧ್ಯೆ ಮರಿಯಾ ಸೂಸನ್‌ಳಿಗೆ ಎಲ್ಲಾ ಕಥೆ ವಿವರಿಸಿದಳು. ಅದನ್ನು ಕೇಳಿ ಸೂಸನ್‌ಗೂ ಬಹಳ ದುಃಖವಾಯಿತು. ತನಗೆ ತೋಚಿದಂತೆ ಅವಳಿಗೆ ಸಾಂತ್ವನ ಹೇಳಿ, ಮರಿಯಾ ತಿಳಿಸಿದ ಎಮಿಲಿಯ ವಿಳಾಸದ ಬಳಿ ಅವಳನ್ನು ಇಳಿಸಿ ಸೂಸನ್‌ ಮುಂದೆ ಹೊರಟಳು.

ಮೊದಲೇ ಮಾತನಾಡಿಕೊಂಡಂತೆ ಮರಿಯಾ ಎಮಿಲಿಗೆ ಫೋನ್‌ ಮಾಡಿ ತಾನು ಬಂದಿರುವ ವಿಷಯ ತಿಳಿಸಿದಳು. ಕೂಡಲೇ ತನ್ನ ಮನೆಗೆ ಬರುವಂತೆ ಎಮಿಲಿ ಆದರದಿಂದ ಆಹ್ವಾನಿಸಿದಳು. ಅಂದು ಭಾನುವಾರ. ಎಮಿಲಿಗೂ ಬಿಡುವಿತ್ತು. ಅವಳು ನ್ಯೂಸ್‌ ಏಜೆನ್ಸಿಯಲ್ಲಿ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಳು. ಎಮಿಲಿ ಜರ್ನಲಿಸಂ ಓದಿದ್ದರೆ ಮಾರ್ಗಿ ಮ್ಯಾನೇಜ್‌ಮೆಂಟ್‌ ಕೋರ್ಸ್‌ ಮಾಡಿದ್ದಳು. ಇವರಿಬ್ಬರ ಗೆಳೆತನ ಎಷ್ಟು ಗಾಢವಾಗಿತ್ತೆಂದರೆ ಎಮಿಲಿ ಮಾರ್ಗಿಯಿಂದ ತಕ್ಕಮಟ್ಟಿಗೆ ಕನ್ನಡ ಮಾತನಾಡುವುದನ್ನೂ ಕಲಿತಿದ್ದಳು. ಮರಿಯಾಳನ್ನು ಆದರದಿಂದ ಒಳ ಬರ ಮಾಡಿಕೊಳ್ಳುತ್ತಾ, “ಮೋಸ್ಟ್ ವೆಲ್‌ಕಂ….. ನೈಸ್‌ ಟು ಸೀ ಯೂ!” ಎಂದು ಎಮಿಲಿ ಮರಿಯಾಳನ್ನು ಸೋಫಾದಲ್ಲಿ ಕುಳ್ಳಿರಿಸಿದಳು.

ಬ್ರೇಕ್‌ಫಾಸ್ಟ್ ಬೇಡವೆಂದ ಮರಿಯಾಳಿಗೆ ಸ್ನ್ಯಾಕ್ಸ್, ಟೀ ನೀಡಿ ಎಮಿಲಿ ಸತ್ಕರಿಸಿದಳು. ಅವಳ ಮನೆಯವರ ಪರಿಚಯ ಆಯಿತು. ನಂತರ ಮರಿಯಾಳನ್ನು ತನ್ನ ಕೋಣೆಗೆ ಕರೆದೊಯ್ದು ಕೂರಿಸಿದಳು.

“ಎಮಿಲಿ ಡಿಯರ್‌….. ಐ ಹ್ಯಾವ್‌ ಕಮ್ ಆಲ್ ದಿ ವೇ ಟು ನೋ ಅಬೌಟ್‌ ಮೈ ಚೈಲ್ಡ್ ಮಾರ್ಗರೇಟ್‌……. ಪ್ಲೀಸ್‌ ಟೆಲ್‌ ಮಿ ಇನ್‌ ಡೀಟೇಲ್…..”

ಅದಕ್ಕೆ ಎಮಿಲಿ ತನಗೆ ಗೊತ್ತಿದ್ದ ಹರಕುಮುರುಕು ಕನ್ನಡದಲ್ಲೇ ಉತ್ತರಿಸಿದಳು, “ಆಂಟಿ….. ಕೂಲ್‌ ಡೌನ್‌….. ಅವಳು ನನ್ನ ರೂಂಮೇಟ್‌ ಆಗಿದ್ದಳು. ನಾವಿಬ್ಬರೂ ಸಾಕಷ್ಟು ಪರ್ಸನಲ್ ವಿಷಯ ಸಹ ಶೇರ್‌ ಮಾಡಿಕೊಳ್ಳುತ್ತಿದ್ದೆವು. ಮೊದಲ ವರ್ಷ ಖುಷಿ ಖುಷಿಯಾಗಿ ಕಳೆಯಿತು. ಮಾರ್ಗಿ ಕಾಲೇಜಿನಲ್ಲಿ ತನ್ನ ಒಳ್ಳೆಯ ಸ್ವಭಾವದಿಂದ ಉತ್ತಮ ಇಮೇಜ್‌ ಕ್ರಿಯೇಟ್‌ ಮಾಡಿದ್ದಳು. ಅವಳು ಕಲಿಕೆಯಲ್ಲಿ ಬಲು ಜಾಣೆ, ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸದಾ ಮುಂದು.

“ರೂಥ್‌ ಅಂತ ಒಬ್ಬ ಅಮೆರಿಕನ್‌ ಹುಡುಗ ನಮ್ಮೊಂದಿಗೆ ಕಲಿಯುತ್ತಿದ್ದ. ಅವನು ಮಾರ್ಗಿಯನ್ನು ಬಹಳ ಪ್ರೀತಿಸುತ್ತಿದ್ದ. ಇಬ್ಬರಲ್ಲೂ ಒಳ್ಳೆಯ ಗೆಳೆತನವಿತ್ತು. ಒಂದೇ ತರಗತಿಯಲ್ಲಿ ಕಲಿಯುತ್ತಿದ್ದುದರಿಂದ ನಿಕಟತೆ ಜಾಸ್ತಿಯಾಯ್ತು. ರೂಥ್‌ ಇಡೀ ಕಾಲೇಜಿಗೆ ಬಹಳ ಪಾಪ್ಯುಲರ್‌ ಆಗಿದ್ದ. ಅವನೊಬ್ಬ ಪ್ಲೇಬಾಯ್‌ ತರಹದ ಹುಡುಗ. ಆದರೆ ಮಾರ್ಗಿಯ ಉದ್ದೇಶ ತನ್ನ ಉನ್ನತ ಶಿಕ್ಷಣ ಕಲಿತು ಸ್ವದೇಶಕ್ಕೆ ಹಿಂದಿರುಗುವುದಾಗಿತ್ತು. ಹೀಗಾಗಿ ಅವಳು ರೂಥ್‌ನನ್ನು ಸೀರಿಯಸ್‌ ಆಗಿ ತೆಗೆದುಕೊಳ್ಳಲೇ ಇಲ್ಲ. ರೂಥ್‌ ಅವಳನ್ನು ಇಂಪ್ರೆಸ್‌ ಮಾಡಬೇಕೆಂದು ಸದಾ ಪ್ರಯತ್ನಿಸುತ್ತಿದ್ದ.  ಮಾರ್ಗಿಗೆ ಗುಲಾಬಿ ಹೂಗಳೆಂದರೆ ಬಹಳ ಇಷ್ಟವೆಂದು ಎಲ್ಲರಿಗೂ ಗೊತ್ತಿತ್ತು, ಹೀಗಾಗಿ ರೂಥ್‌ ಸದಾ ಅವಳಿಗೆ ರೆಡ್‌ ರೋಸ್‌ ತಂದುಕೊಡುತ್ತಿದ್ದ.

“ಕಾಲೇಜಿನ ಕೊನೆಯ ವರ್ಷವಾದ್ದರಿಂದ ಈ ಬಾರಿ ಕಾಲೇಜಿನ ವಿದ್ಯಾರ್ಥಿ ಪ್ರೆಸಿಡೆಂಟ್‌ ಪೋಸ್ಟ್ ಗಾಗಿ ರೂಥ್‌-ಮಾರ್ಗಿ ಇಬ್ಬರೂ ಸ್ಪರ್ಧಿಸಿದ್ದರು. ಅಂದುಕೊಂಡಂತೆಯೇ ಮಾರ್ಗಿ ಬಹುಮತದಿಂದ ಗೆದ್ದಳು. ಒಳಗೇ ದುಃಖವಿದ್ದರೂ ರೂಥ್‌ ಬಂದು ಮಾರ್ಗಿಯನ್ನು ಅಭಿನಂದಿಸಿದ. ತನ್ನ ಗೆಳತಿ ಮಾರ್ಗಿ ಗೆದ್ದ ಖುಷಿಗಾಗಿ ಕೇವಲ ಆಪ್ತರನ್ನು ಮಾತ್ರ ಕರೆದು ರೂಥ್‌ ಒಂದು ಪಾರ್ಟಿ ಏರ್ಪಡಿಸಿದ….” ಈ ಮಾತು ಮುಂದುರಿಸಲಾಗದೆ ಎಮಿಲಿ ಅಳತೊಡಗಿದಳು.

ಮರಿಯಾಳಿಗಿನ್ನೂ ವಿಷಯ ಸ್ಪಷ್ಟ ಆಗಿರಲಿಲ್ಲ. ಅವಳು ಎಮಿಲಿಯನ್ನು ವಿನಂತಿಸುತ್ತಾ, “ದಯವಿಟ್ಟು ಪೂರ್ತಿ ವಿಷಯ ಹೇಳಿಬಿಡು ಎಮಿಲಿ…. ನೀನೇಕೆ ಹೀಗೆ ಅರ್ಧಕ್ಕೆ ನಿಲ್ಲಿಸಿಬಿಟ್ಟೆ…..?” ಎಂದಳು.

ಎಮಿಲಿ ತುಸು ನೀರು ಕುಡಿದು ಸುಧಾರಿಸಿಕೊಂಡು ಹೇಳತೊಡಗಿದಳು, “ಎಲ್ಲೋ ಒಳಗೊಳಗೇ ಮಾರ್ಗಿ ಸಹ ರೂಥ್‌ನನ್ನು ಇಷ್ಟಪಟ್ಟಿರಬೇಕು. ಹೀಗಾಗಿ ಅವನು ಪಾರ್ಟಿಗೆ ಗೆಳತಿಯರ ಜೊತೆ ಬರಬೇಕೆಂದು ಕರೆದಾಗ ನಿರಾಕರಿಸಲಾಗಲಿಲ್ಲ. ಅಂತೂ ಪಾರ್ಟಿ ಚೆನ್ನಾಗಿ ನಡೆಯಿತು. ಬಹುತೇಕರು ಡ್ರಿಂಕ್ಸ್ ಸೇವಿಸಿದರು. ನಾನು, ಮಾರ್ಗಿ ಮತ್ತು ಕೆಲವು ಹುಡುಗಿಯರು ನಿರಾಕರಿಸಿದ್ದೆವು. ಊಟ ಮುಗಿದ ಮೇಲೆ ಹೊರಡಲು ಸಿದ್ಧರಾದೆವು.

“ಆದರೆ ಮಾರ್ಗಿ ಇನ್ನೂ ಸ್ವಲ್ಪ ಹೊತ್ತು ಅಲ್ಲೇ ಇರಬೇಕೆಂದು ರೂಥ್‌ ಮಾರ್ಗಿಯನ್ನು ಉಳಿಸಿಕೊಂಡ. ತನಗಾಗಿ ಪಾರ್ಟಿ ಏರ್ಪಡಿಸಿದವನನ್ನು ಅವಳು ಹೇಗೆ ತಪ್ಪಾಗಿ ಭಾವಿಸಿಯಾಳು? ಹೀಗಾಗಿ ಒಂಟಿಯಾಗಿ ಉಳಿದಳು, ನಾವು ಹೊರಟುಬಿಟ್ಟೆವು. ರೂಥ್‌ನ ಒಳಮನಸ್ಸಿನ ಬಗ್ಗೆ ಅವಳಿಗೇನೂ ಗೊತ್ತಿರಲಿಲ್ಲ.

“ಸ್ವಲ್ಪ ಹೊತ್ತಿಗೆ ಮಾರ್ಗಿ ತಲೆ ಸುತ್ತಿ ಅಲ್ಲೇ ಬಿದ್ದುಬಿಟ್ಟಳು. ಅವಳು ಕೂಲ್‌ ಡ್ರಿಂಕ್ಸ್ ಅಷ್ಟೇ ಕುಡಿದಿದ್ದಳು. ಅದರಲ್ಲಿ ಯಾರು ಏನು ಬೆರೆಸಿದ್ದರೋ ಏನೋ…… ಅವಳಿಗೆ ಪ್ರಜ್ಞೆ ಬಂದಾಗ ಒಂದು ಇಕ್ಕಟ್ಟಾದ ಚಿಕ್ಕ ಕೋಣೆಯಲ್ಲಿ ಇದ್ದಳು. ಸ್ಟೋರ್‌ ರೂಂ ತರಹ ಇರುವ ಇಲ್ಲಿಗೆ ತಾನು ಹೇಗೆ ಬಂದೆ ಎಂದು ಅರಿಯದೆ ಕಂಗಾಲಾದಳು. ಅವಳು ಭಯದಿಂದ ತತ್ತರಿಸಿ ಬಿಕ್ಕಳಿಸತೊಡಗಿದಳು. ಆಗ ಯಾರೋ ಬಾಗಿಲು ತೆರೆದುಕೊಂಡು ಒಳಗೆ ಬಂದಂತಾಯಿತು.

“ಮಾರ್ಗಿ ನೋಡುತ್ತಾಳೆ…. ಎದುರಿಗೆ ರೂಥ್‌! ತನ್ನನ್ನು ಆ ಪರಿಸ್ಥಿತಿಯಿಂದ ಕಾಪಾಡಲು ಬಂದನೆಂದೇ ಭಾವಿಸಿ ಓಡಿಹೋಗಿ ಅವನನ್ನು ತಬ್ಬಿಕೊಂಡು ಬೇಗ ತನ್ನನ್ನು ಅಲ್ಲಿಂದ ಪಾರು ಮಾಡುವಂತೆ ವಿನಂತಿಸಿಕೊಂಡಳು. ಆದರೆ ಅವಳನ್ನು ಅಲ್ಲಿ ಕೂಡಿಹಾಕಿದ್ದವನೇ ರೂಥ್‌. ಅದನ್ನು ಗಹಗಹಿಸಿ ಹೇಳುತ್ತಾ, ಒಮ್ಮೇಲೇ ಅವಳ ಬಟ್ಟೆ ಮೇಲೆ ಕೈ ಹಾಕಿ ಆಕ್ರಮಣ ಮಾಡಿದ. ಆ ಶಾಕ್‌ನಿಂದ ಚೇತರಿಸಿಕೊಳ್ಳಲು ಮಾರ್ಗಿಗೆ 2 ನಿಮಿಷ ಬೇಕಾಯಿತು. ತನ್ನನ್ನು ಸ್ಟೂಡೆಂಟ್‌ ಎಲೆಕ್ಷನ್‌ನಲ್ಲಿ ಒಬ್ಬ ಯಕಶ್ಚಿತ್‌ ಭಾರತೀಯ ಹುಡುಗಿ ಸೋಲಿಸಿದ್ದು ಅವನ ಅಹಂಗೆ ಭಾರಿ ಪೆಟ್ಟಾಗಿತ್ತು.

“ಹೀಗಾಗಿ ಮೃಗಕ್ಕಿಂತಲೂ ಕೀಳಾಗಿ ಅವಳನ್ನು ಆಕ್ರಮಿಸಿ, ಮಾನಭಂಗ ಮಾಡಿದ. ಅವಳೆಷ್ಟೇ ಬೇಡಿದರೂ, ಕಣ್ಣೀರಿಟ್ಟರೂ ಕರಗದೆ ಮತ್ತೆ ಮತ್ತೆ ಅವಳನ್ನು ಹಾಳು ಮಾಡಿ, ಆ ಪಾಪಿ ಅಲ್ಲಿಂದ ಹೋಗುವಾಗ ಅವಳ ಬಟ್ಟೆಯನ್ನೂ ಎತ್ತಿಕೊಂಡೇ ಹೋಗಿ ಬಾಗಿಲು ಲಾಕ್‌ ಮಾಡಿಕೊಂಡಿದ್ದ.

“ಮ್ಯಾಗಿ ಭಯ, ಅಸಹಾಯಕತೆ, ಜಿಗುಪ್ಸೆಗಳಿಂದ ಅತ್ತೂ ಕರೆದು ಅಲ್ಲಿಂದ ತಪ್ಪಿಸಿಕೊಳ್ಳಲು ಬಹಳ ಶ್ರಮಪಟ್ಟಳು. ಒಂದೇ ಒಂದು ಭಾರಿ ಕಬ್ಬಿಣದ ಬಾಗಿಲು ಬಿಟ್ಟರೆ ಆ ಕೋಣೆಯಲ್ಲಿ ಒಂದು ಕಿಟಕಿಯೂ ಇರಲಿಲ್ಲ. ಗಾಳಿ ಬೆಳಕಿಲ್ಲದೆ ಅವಳು ಕಂಗಾಲಾದಳು. ಆ ಸ್ಥಿತಿಯಲ್ಲಿ ಒಂದಲ್ಲ ಎರಡಲ್ಲ, ಇಡೀ 3 ವಾರ ನರಳಿದಳು. ಮನ ಬಂದಾಗ ನರ ರಾಕ್ಷಸನಂತೆ ಒಳನುಗ್ಗಿ ಅವಳನ್ನು ಕಾಮಿಸಿ, ನಾಯಿಗೆ ಹಾಕುವಂತೆ 4 ಪೀಸ್‌ ಬ್ರೆಡ್‌ ಎಸೆದು ಹೋಗುತ್ತಿದ್ದ. ಅವಳು ನೊಂದು ಬೆಂದು ಜರ್ಝರಿತಳಾಗಿ ಹೋದಳು. ತನ್ನ ಗೆಲುವಿಗೆ ಪೆಟ್ಟು ಕೊಟ್ಟ ಹುಡುಗಿಯ ಮೇಲೆ ಸೇಡು ತೀರಿಸಿಕೊಂಡ ತೃಪ್ತಿ ಆ ನೀಚನಿಗಿತ್ತು. ಮಾರ್ಗಿ ಅಲ್ಲಿ ಮೂಕ ಬಲಿಪಶು ಆಗಿಹೋದಳು…..” ಎಮಿಲಿ ಮತ್ತೆ ಅಳುತ್ತಾ ಮಾತು ನಿಲ್ಲಿಸಿದಳು.

ಇದನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದ ಮರಿಯಾಳಿಗೆ ತಾನು ನರಕದಲ್ಲಿದ್ದೇನೆ ಎನಿಸಿತು. ಕಣ್ಣೀರು ಧಾರೆಯಾಗಿ ಹರಿಯಿತು. ಮಾರ್ಗಿ ತನ್ನ ಕೋಣೆಯಲ್ಲಿ ಭಯದಿಂದ ವಿಕಾರವಾಗಿ ಚೀರಿದ್ದು ಅವಳ ಕಿವಿಯಲ್ಲಿ ಇನ್ನೂ ಗುಂಯ್‌ಗುಡುತ್ತಿತ್ತು… ಅವನ ಮೇಲಿನ ಸಿಟ್ಟು, ತನ್ನ ಅಸಹಾಯಕತೆಗಾಗಿಯೇ ಅವಳು ತಾನಾಗಿ ತನ್ನ ಬಟ್ಟೆ ಹರಿದುಕೊಳ್ಳುವುದು, ತಲೆಗೂದಲು ಕಿತ್ತು ಹಾಕಿದ್ದು ಎಲ್ಲ ನೆನಪಾಯಿತು. ಯಾಕಾದರೂ ತಾನು ಮಗಳನ್ನು ಅಮೆರಿಕಾಗೆ ಕಳಿಸಿದೆನೋ ಎಂದು ತನ್ನನ್ನೇ 100 ಸಲ ಹಳಿದುಕೊಂಡಳು. ಇಂಥ ಯಮಯಾತನೆ ಸಹಿಸಿ, ಯಾರ ಬಳಿಯೂ ಹೇಳಿಕೊಳ್ಳಲಾಗದೆ ಅವಳಿಗೆ ಹುಚ್ಚು ಹಿಡಿದಿದ್ದರೆ ಅದರಲ್ಲಿ ಆಶ್ಚರ್ಯವೇನು….?

“ಮತ್ತೆ…. ಈ ವಿಷಯ ನಿನಗೆ ತಿಳಿದದ್ದು ಹೇಗೆ?”

“ಆಂಟಿ, ಆ ನೀಚ ತನಗೆ ಸಾಕಾದಾಗ ಅವಳ ಬಳಿ ಬಟ್ಟೆ ಬಿಸಾಡಿ, ರಾತ್ರಿ ಮಳೆ ಸುರಿಯುವಾಗ ಹೊರ ದಬ್ಬಿದನಂತೆ. ಹೇಗೋ ಜೀವ ಉಳಿಸಿಕೊಂಡು ಅವಳು ನೇರ ನಮ್ಮ ಮನೆಗೆ ಬಂದು ವಿಷಯ ಹೇಳಿದಳು….. ಆ ದಿನವೇ ಅವಳು ಅರ್ಧ ಸತ್ತಿದ್ದಳು…..” ಎಮಿಲಿ ಮತ್ತೆ ಬಿಕ್ಕಳಿಸಿದಳು.

“ಇರಲಿ…. ಆ ಪಾಪಿಯ ವಿಳಾಸ ನಿನಗೆ ಗೊತ್ತೇ? ಅವನಿಗೆ ಶಿಕ್ಷೆ ಕೊಡಿಸದೆ ನಾನು ಇಲ್ಲಿಂದ ಹೊರಡಲಾರೆ!” ಮರಿಯಾ ಹೇಳಿದಳು.

ಅವನ ವಿಳಾಸ ತನ್ನ ಬಳಿ ಇಲ್ಲ, ಬಹುಶಃ ಕಾಲೇಜಿನಿಂದ ಸಿಗಬಹುದು ಎಂದಳು. ಆದರೆ ಕಾಲೇಜಿನವರು ಸುಲಭವಾಗಿ ಹಾಗೆಲ್ಲ ಬೇರೆಯವರ ವೈಯಕ್ತಿಕ ವಿವರ ನೀಡುವವರಲ್ಲ, ಹೇಗೂ ತಾನು ಮಾರ್ಗಿಗೆ ಸಹಾಯ ಮಾಡುವುದಾಗಿ ಎಮಿಲಿ ಭರವಸೆ ನೀಡಿದಳು. ಜೊತೆಗೆ ಮರಿಯಾಳ ಈ ಹೋರಾಟದಲ್ಲಿ ತಾನು ಸದಾ ಸಾಥ್‌ ನೀಡುವುದಾಗಿ, ಯಾವಾಗ ಬೇಕಾದರೂ ತನಗೆ ಕರೆ ಮಾಡಬಹುದೆಂದಳು.

ಹೇಗಾದರೂ ಅವನಿಗೆ ಶಿಕ್ಷೆ ಆಗುವ ಹಾಗೆ ಮಾಡಬೇಕೆಂದು ಮರಿಯಾ ಬಯಸಿದಳು. ಅವನೇನಾದರೂ ಎದುರಿಗೆ ಸಿಕ್ಕಿದರೆ, ಬಟ್ಟೆ ಬಿಚ್ಚಿಸಿ ಊರೆಲ್ಲಾ ಓಡಿಸಿ, ನಡು ರಸ್ತೆ ಮಧ್ಯೆ ಅವನಿಗೆ ಗುಂಡು ಹಾರಿಸಬೇಕೆಂದು ದ್ವೇಷ ಉಕ್ಕಿ ಬಂತು. ಅವಳಿಗಿದ್ದ ಕೋಪಕ್ಕೆ ರೂಥ್‌ನನ್ನು ತಕ್ಷಣವೇ ಜೇಲಿನ ಕಂಬಿ ಎಣಿಸುವಂತೆ ಮಾಡಲು ಬಯಸಿದಳು. ಆದರೆ ಅದು ಅಷ್ಟು ಸುಲಭಕ್ಕೆ ಆಗಬೇಕಲ್ಲ……?

ಮಾರನೇ ದಿನ ಎಮಿಲಿ ಫೋನ್‌ ಮಾಡಿ, ತಾನು ಕಾಲೇಜಿನ ಬಳಿ ಹೋಗಿ ರೂಥ್‌ನ ವಿಳಾಸಕ್ಕೆ ಪ್ರಯತ್ನಿಸಿದಾಗ, ಅವನ ಲೋಕಲ್ ಗಾರ್ಡಿಯನ್‌ ಆಂಟಿ ರೋಸ್‌ಲೀನ್‌ರ ವಿಳಾಸ ಸಿಕ್ಕಿತೆಂದು ಹೇಳಿ, ಫೋನ್‌ ನಂಬರ್‌ ನೀಡಿದಳು. ಎಮಿಲಿಗೆ ಥ್ಯಾಂಕ್ಸ್ ಹೇಳಿ ಸಮಯ ವ್ಯರ್ಥ ಮಾಡದೆ ಬೋಸ್ಟನ್ನಿನ ಆ ವಿಳಾಸ ಹುಡುಕುತ್ತಾ ಮರಿಯಾ ಹೊರಟೇಬಿಟ್ಟಳು.

ಅವರ ಮನೆ ಮುಂದೆ ನಿಂತು ಕಾಲಿಂಗ್‌ ಬೆಲ್ ಒತ್ತಿದಳು. ಒಳಗಿನಿಂದ ಒಬ್ಬ ಪ್ರೌಢ ಬ್ರಿಟಿಷ್‌ ಮಹಿಳೆ ಬಂದು ಬಾಗಿಲು ತೆರೆದರು.

ಇವಳನ್ನು ಕಂಡು ಆಕೆ ಕೇಳಿದರು, “ಹೂ ಆರ್‌ ಯೂ? ವಾಟ್‌ ಡು ಯು ವಾಂಟ್‌?”

“ಐ ಆ್ಯಮ್ ಮರಿಯಾ ಫ್ರಂ ಇಂಡಿಯಾ… ವಾಂಟ್‌ ಟು ಮೀಟ್‌ ಮಿಸೆಸ್‌ ರೋಸ್‌ಲೀನ್‌…”

“ಪ್ಲೀಸ್‌ ಕಮಿನ್‌…” ಎಂದು ಆಕೆ ಬಾಗಿಲು ತೆರೆದರು.

ನಂತರ ಅವರಿಬ್ಬರ ಸಂಭಾಷಣೆ ಸಂಪೂರ್ಣವಾಗಿ ಆಂಗ್ಲದಲ್ಲೇ ನಡೆಯಿತು.

“ನೀವು ಯಾರು…? ನನ್ನಿಂದ ಏನಾಗಬೇಕು?”

“ನಾನು ಮರಿಯಾ… ನೊಂದ ಹೆಣ್ಣಿನ ತಾಯಿ… ಆ ರೂಥ್‌ಗೆ ತಕ್ಕ ಶಿಕ್ಷೆ ಆಗಬೇಕು…” ಎಂದು ಮರಿಯಾ ಒಂದೇ ಉಸಿರಿನಲ್ಲಿ ಸಂಪೂರ್ಣ ಕಥೆ ಹೇಳಿದಳು. ಆಕೆಗೆ ಗರ ಬಡಿದಂತಾಯಿತು. ಸ್ವಲ್ಪ ಹೊತ್ತು ಏನೂ ಮಾತನಾಡದೆ ಕುಳಿತುಬಿಟ್ಟರು.

ನಂತರ ರೂಥ್‌ ಕುರಿತು ಹೇಳತೊಡಗಿದರು, “ಅವನು ಬೆಳೆದು ಬಂದಿದ್ದೇ ಒಂದು ವಿಚಿತ್ರ ಕುಟುಂಬದಲ್ಲಿ. ಅವನು 7 ವರ್ಷದವನಾಗಿದ್ದಾಗ ಅವನ ತಾಯಿ ಗಂಡನಿಗೆ ವಿಚ್ಛೇದನ ನೀಡಿ ಹೊರಟುಹೋದಳು. ರೂಥ್‌ ತಂದೆ ಮಹಾ ಕುಡುಕ, ವ್ಯಭಿಚಾರಿ. ರೂಥ್‌ ಬಾಲ್ಯದಿಂದ ಕಂಡಿದ್ದ ಕ್ರೂರ ವಾತಾವರಣವನ್ನೇ ನಿಜ ಬದುಕು ಎಂದುಕೊಂಡ. ಅವನಿಗೆ ಹೆಣ್ಣಿನ ಕುರಿತು ಗೌರವಾದರಗಳ ಭಾವನೆ ಬರಲೇ ಇಲ್ಲ, ಅದನ್ನು ಯಾರೂ ಕಲಿಸಿರಲೂ ಇಲ್ಲ.

“ತಾಯಿ ತಂದೆ ಇದ್ದರೂ ಅವನು ಅನಾಥನಾಗಿ ಬೆಳೆದ. ಮನೆಯ ವಾತಾವರಣ ಮತ್ತಷ್ಟು ಬಿಗಡಾಯಿಸಿತು… ಆ ಕಾರಣ ಅವನಲ್ಲಿ ದ್ವಿಮುಖ ವ್ಯಕ್ತಿತ್ವ (ಸ್ಪಿಲ್ಟ್ ಪರ್ಸನಾಲಿಟಿ) ಬೆಳೆಯಿತು. ಆಗಿನಿಂದ ಅವನಿಗೆ ಹೆಂಗಸರನ್ನು ಕಂಡರಾಗದು. ಅವನು ನಾರ್ಮಲ್ ಆಗಿರುವಾಗ, ಅವನ ಮನದಾಳದಲ್ಲಿ ಇಂಥ ಇನ್ನೊಂದು ಕ್ರೂರ ವ್ಯಕ್ತಿತ್ವ ಇದೆ ಎಂದು ಯಾರಿಗೂ ಅನಿಸುತ್ತಿರಲಿಲ್ಲ.

“ಆದರೆ ಅವನಿಗೆ ಇಂಥ ಒಬ್ಬ ಮುಗ್ಧ ಹುಡುಗಿಯನ್ನು ಹಾಳು ಮಾಡುವ ಹಕ್ಕಿಲ್ಲ. ಅವನಿಗೆ ತಾನು ಮಾಡಿದ್ದರ ಕುರಿತು ಪಶ್ಚಾತ್ತಾಪ ಇರಲಾರದು. ಅವನನ್ನು ಸುಧಾರಿಸಲು ನಾನು ಬಹಳ ಪ್ರಯತ್ನಿಸಿದೆ, ಏನೂ ಪ್ರಯೋಜನವಾಗಲಿಲ್ಲ. ಓದಿನಲ್ಲಿ ಅವನು ಎಂಥ ಜಾಣನೋ ಅವನ ಮನಸ್ಸಿನಲ್ಲಿರುವುದನ್ನು ಓದಲು ಅಷ್ಟೇ ಕಷ್ಟ.”

“ಅವನ ವಿಳಾಸ ಇದ್ದರೆ ಬೇಕಿತ್ತು…”

“ಇಲ್ಲ… ಅವನನ್ನು ನಾನು ಭೇಟಿ ಆಗಿದ್ದೇ 3 ತಿಂಗಳ ಹಿಂದೆ… ಎಲ್ಲೋ ನ್ಯೂಯಾರ್ಕ್‌ನಲ್ಲಿ ಖಾಸಗಿ ಕೆಲಸದಲ್ಲಿದ್ದಾನೆ. ಅವನ ಫೋನ್‌ ನಂಬರ್‌ ಸಹ ಬದಲಾಗಿದೆ,” ಎಂದರು. ಅವರಿಗೆ ಧನ್ಯವಾದ ಸಲ್ಲಿಸಿ ಸೂಸನ್‌ ಮನೆ ತಲುಪಿದಳು ಮರಿಯಾ.

ಸೂಸನ್‌ಗೆ ಎಲ್ಲಾ ವಿಷಯ ತಿಳಿಸಿ, ಮಾರ್ಗಿಯೇ ಅವನ ಬಲಿಪಶು ಏಕಾದಳು ಎಂದು ಮರಿಯಾ ದುಃಖಿಸಿದಳು. ಅವಳನ್ನು ಸಂತೈಸಿದ ಸೂಸನ್‌, ಮಾರನೇ ದಿನ ಒಬ್ಬ ಇಂಡೋ-ಅಮೆರಿಕನ್‌ ವಕೀಲರ ಬಳಿ ಮರಿಯಾಳನ್ನು ಕರೆದೊಯ್ದಳು. ಅವರಿಗೆ ಮಾರ್ಗಿಗೆ ನಡೆದ ಭಯಂಕರ ಅನಾಹುತದ ಕುರಿತು ವಿವರವಾಗಿ ತಿಳಿಸಿದರು.

ಸಾಕ್ಷ್ಯಾಧಾರಗಳ ಕೊರತೆಯಿಂದ ಈ ಕೇಸ್‌ ಬಹಳ ವೀಕ್‌ ಎಂದರು ವಕೀಲ ವಿಲಿಯೆಂಸ್‌. ಆಪಾದಿತೆ ಅಂತೂ ಏನೂ ಮಾತನಾಡುವ ಸ್ಥಿತಿಯಲ್ಲೇ ಇಲ್ಲ. ಹೀಗಿರುವಾಗ ಪೊಲೀಸರು ದೂರು ಬರೆದುಕೊಳ್ಳುವುದಾದರೂ ಹೇಗೆ? ಆದರೂ ಮರಿಯಾ ನಂಬಿಕೆ ಕಳೆದುಕೊಳ್ಳಲಿಲ್ಲ. ಈಗ ಆಕೆಯ ಜೀವನದ ಒಂದೇ ಗುರಿ, ರೂಥ್‌ಗೆ ಶಿಕ್ಷೆ ಕೊಡಿಸುವುದು. ತನ್ನ ಬಳಿ ಮಾಹಿತಿ ಇದ್ದರೂ ಸಾಕ್ಷಿ ಇರಲಿಲ್ಲ ಎಂಬುದು ದೊಡ್ಡ ಕೊರತೆಯಾಗಿ ಕಾಣಿಸಿತು.

ಕಾಲೇಜಿಗೆ ಹೋದ ಮರಿಯಾ, ಅಲ್ಲಿನ ಕ್ಯಾಮೆರಾ ಮೂಲಕ, ಮಾರ್ಗಿ-ರೂಥ್‌ ಬಹಳ ಕ್ಲೋಸ್‌ ಆಗಿ ಮೂವ್ ಮಾಡುತ್ತಿದ್ದರೆಂದು ತಿಳಿಯಿತು. ಡಾ. ರಾಜನ್‌ರನ್ನು ವಿನಂತಿಸಿಕೊಂಡು ಮಾರ್ಗಿಯ ಮೆಡಿಕಲ್ ರಿಪೋರ್ಟ್‌ ತರಿಸಿಕೊಂಡಳು.  ಅದರಲ್ಲಿ ಮಾರ್ಗಿ ಮಾನಸಿಕ, ದೈಹಿಕವಾಗಿ ಎಷ್ಟು ಸೊರಗಿದ್ದಾಳೆಂಬುದು ತಿಳಿಯಿತು. ಇದನ್ನೇ ಆಧಾರವಾಗಿಟ್ಟುಕೊಂಡು ಮರಿಯಾಳ ವಕೀಲರು ರೂಥ್‌ ವಿರುದ್ಧ ದೂರು ದಾಖಲಿಸಿದರು. ಜೊತೆಗೆ ಎಮಿಲಿ ಸಹ, ಯಾವ ಸ್ಥಿತಿಯಲ್ಲಿ ಮಾರ್ಗಿ ಬಂದು ತನಗೆ ವಿಷಯ ತಿಳಿಸಿದಳೆಂದು ಸಾಕ್ಷಿ ನೀಡಲು ಸಿದ್ಧಳಾದಳು.

ವಕೀಲರ ಪಟ್ಟಿನಿಂದಾಗಿ ಪೊಲೀಸರು ರೂಥ್‌ನನ್ನು ಸೆರೆಹಿಡಿದರು. ಪೊಲೀಸರ ಆತಿಥ್ಯಕ್ಕೆ ಶರಣಾದ ಅವನು ತಾನು ಮಾಡಿದ ಅಪರಾಧ ಒಪ್ಪಿಕೊಂಡ. ಅತಿ ಚೆಲುವಾದ ಹೆಣ್ಣು ಬುದ್ಧಿವಂತೆಯಾದರೆ ತನಗೆ ಹಿಡಿಸದ ಕಾರಣ ಹೀಗೆ ಮಾಡಿದೆನೆಂದು ಒಪ್ಪಿಕೊಂಡ. ಜೊತೆಗೆ ಅವಳು ಕಾಲೇಜಿನ ಎಲೆಕ್ಷನ್‌ನಲ್ಲಿ ಗೆದ್ದಿದ್ದು ಇನ್ನೊಂದು ಪ್ರಮುಖ ಕಾರಣವಾಗಿತ್ತು. ಅವನಿಗೆ ಸೆಷನ್‌ ಕೋರ್ಟ್‌ ಆಜೀವ ಕಾರಾಗೃಹ ಶಿಕ್ಷೆ ವಿಧಿಸಿ, ಮನೋವಿಕಾರಕ್ಕೆ ಚಿಕಿತ್ಸೆ ಪಡೆಯುವಂತೆ ಆದೇಶಿಸಿತು.

ಮಾರ್ಗಿ ಒಬ್ಬ ಬುದ್ಧಿವಂತ, ಚೆಲುವೆ ಹೆಣ್ಣಾದ ಕಾರಣ ಇಷ್ಟೆಲ್ಲ ಕಷ್ಟ ಅನುಭವಿಸಬೇಕಾಯಿತು. ಇದನ್ನು ನೆನೆದು ಮರಿಯಾಳ ಎದೆ ಒಡೆಯುವಂತಾಗುತ್ತಿತ್ತು, ತಾನು ಬಂದ ಕೆಲಸ ಮುಗಿದ ಕಾರಣ ಮರಿಯಾ ಎಲ್ಲರಿಗೂ ವಂದನೆ ಸಲ್ಲಿಸಿ ಮಗಳ ಬಳಿಗೆ ಮರಳಿದಳು.

ಅದಾಗಿ ಹಲವು ವರ್ಷ ಮಾರ್ಗಿ ಡಾ. ರಾಜನ್‌ರ ಚಿಕಿತ್ಸೆ ಪಡೆಯಬೇಕಾಯಿತು. ಒಬ್ಬ ಹುಡುಗಿಯ ತುಂಬು ಜೀವನ ಅನ್ಯಾಯವಾಗಿ ನಲುಗಿಹೋಯಿತು. ಅಪರಾಧಿಗೆ ಶಿಕ್ಷೆ ಏನೋ ಆಯಿತು, ಆದರೆ ವಿನಾಕಾರಣ ಅಮಾಯಕ ಹುಡುಗಿ ನರಳುವಂತಾಯಿತು.

ಈಗ ಮಾರ್ಗಿ ಮೊದಲಿನಂತಿಲ್ಲ. ಎಷ್ಟೋ ಸುಧಾರಿಸಿದ್ದಾಳೆ. ಅಮ್ಮ, ತಂಗಿಯರನ್ನು ಗುರುತಿಸಿ ತನ್ನ ಗೂಡಿನಲ್ಲಿ ಸುರಕ್ಷಿತವಾಗಿದ್ದಾಳೆ. ಆದರೆ ಆ ತಾಯಿಯ ಮನಶ್ಶಾಂತಿ ದೂರವಾಗಿದೆ. ಮುಂದಿನ ಒಳ್ಳೆಯ ದಿನಗಳಿಗಾಗಿ ಆಶಾವಾದಿಯಾಗಿ ಕಾಯುತ್ತಿದ್ದಾಳೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ