ಕಥೆ - ಕವಿತಾ ಶರ್ಮ
``ನಿನ್ನ ಹಾಗೂ ಮನೋಜನ ನಡುವೆ ಈಗ ಉಂಟಾಗಿರುವ ಮನಸ್ತಾಪಕ್ಕೆ ಕಾರಣ ಏನು?'' ಶಿಲ್ಪಾಳ ಸೊರಗಿದ ಮುಖ ನೋಡುತ್ತಾ, ಸೀಮಾ ಕೇಳಿದಳು.
``ಗಂಡನಾದವನು ಪರಸ್ತ್ರೀಯರ ಬೆನ್ನು ಹತ್ತಿದಾಗ, ಮನೆಯಲ್ಲಿ ಉಂಟಾಗುವ ಸಮಸ್ಯೆ, ಕಲಹಗಳ ಹಳೇ ಚರಿತ್ರೆ ಈಗ ನನ್ನ ಬಾಳಿನಲ್ಲಿ ನಡೆಯುತ್ತಿದೆ,'' ಶಿಲ್ಪಾ ದುಗುಡ ತುಂಬಿದ ದನಿಯಲ್ಲಿ ಹೇಳಿದಳು.
``ಅಂದ್ರೆ, ಮನೋಜ್ ಮತ್ಯಾರೋ ಜೊತೆ...''
``ಹೌದು, ಅವರು ವಿಶ್ವಾಸಕ್ಕೆ ಅರ್ಹರಲ್ಲ. ಯಾರೋ ಸುಂದರಿಯರ ಜೊತೆ ಆಟವಾಡುತ್ತಾ, ನನ್ನ ಬಾಳಿಗೆ ಬೆಂಕಿ ಹಚ್ಚುತ್ತಿದ್ದಾರೆ.'' ಶಿಲ್ಪಾಳ ಕಣ್ಣುಗಳಲ್ಲಿ ನೀರು ತುಂಬಿತು.
``ನೀನು, ಅವರಿಗೆ ಏಕೆ ತಿಳಿ ಹೇಳಬಾರದು?'' ಎಂದು ಪ್ರಶ್ನಿಸಿದಳು ಸೀಮಾ.
``ಎಲ್ಲಾ ವಿಧದಲ್ಲೂ ಪ್ರಯತ್ನಿಸಿದೆ, ತಪ್ಪು ಎಂದು ತಿಳಿಯದೆ, ಮನರಂಜನೆಯ ಆಟವೆಂದು ಭಾವಿಸಿದ್ದಾರೆ. ನಮ್ಮನ್ನು ನೋಡಿ ನಗುತ್ತಿರುವ ಜನರನ್ನು ಅವರು ಲೆಕ್ಕಕ್ಕೇ ಇಟ್ಟಿಲ್ಲ,'' ದುಗುಡ ತುಂಬಿದ ಸ್ವರದಲ್ಲಿ ಶಿಲ್ಪಾ ನುಡಿದಳು.
ಜಾಹಿರಾತು ಕಂಪನಿಯಲ್ಲಿ ಉನ್ನತ ಉದ್ಯೋಗದಲ್ಲಿರುವ ಮನೋಜ್‌ಗೆ ತನ್ನ ಆಕರ್ಷಕ ವ್ಯಕಿತ್ವದ ಬಗ್ಗೆ ಅಪಾರ ಹೆಮ್ಮೆ. ಪರಿಚಯದವರಲ್ಲಿ, ಅದರಲ್ಲೂ ವಿಶೇಷವಾಗಿ ಯುವತಿಯರ ನಡುವೆ ಜನಪ್ರಿಯನಾಗಲು ಪ್ರಯತ್ನಿಸುತ್ತಿದ್ದ. ತನ್ನ ಅಹಂ ಅನ್ನು ತೃಪ್ತಿಪಡಿಸಲು ಅವನಿಗೆ ಇದು ಒಂದು ಸಾಧನವಾಗಿತ್ತು. ಇದೆಲ್ಲ ಶಿಲ್ಪಾಳಿಗೆ ಮದುವೆಯಾದ ಕೆಲವು ದಿನಗಳ ನಂತರ ಗೊತ್ತಾಯಿತು. ವಿವಾಹಕ್ಕೆ ಮುಂಚೆ ಒಂದಕ್ಕಿಂತ ಹೆಚ್ಚು ಹುಡುಗಿಯರ ಸ್ನೇಹವನ್ನು ಯುವಕರು ಮಾಡುವುದು ಅಷ್ಟೊಂದು ಗಂಭೀರವಲ್ಲವೇನೋ. ಆದರೆ ಮದುವೆಯ ನಂತರ ಬದಲಾಗದಿದ್ದರೆ, ಮನೆಯ ನೆಮ್ಮದಿ ಖಂಡಿತ ಕದಡಿ ಹೋಗುತ್ತದೆ. ಮೊದಲೆಲ್ಲಾ ಮನೋಜ್ ಸ್ತ್ರೀಯರ ಸ್ನೇಹ ಬೆಳೆಸುವುದನ್ನು ಕಂಡು ಶಿಲ್ಪಾ ಅಸೂಯೆ ಪಡದಿದ್ದರೂ. ಇತ್ತೀಚೆಗೆ ಮನೋಜ್‌ನ ದೃಷ್ಟಿ ಸುಂದರ ಸ್ತ್ರೀಯರ ಮೇಲೆ ಇರುವುದನ್ನು ಕಂಡು, ಅವನ ನಿಷ್ಠೆಯ ಬಗ್ಗೆ ಅವಳಲ್ಲಿ ಅನುಮಾನ ಮೂಡಲಾರಂಭಿಸಿತು.
``ಮನೋಜನ ವ್ಯವಹಾರಗಳನ್ನು ನಾನು ವಿರೋಧಿಸತೊಡಗಿದಾಗ, ತಮ್ಮ ಸ್ವಂತ ವಿಷಯದಲ್ಲಿ ತಲೆ ಹಾಕಬೇಡವೆಂದರು. ಸ್ವಭಾವತಃ ಶಾಂತ ಹಾಗೂ ಕಡಿಮೆ ಮಾತಿನವಳಾದ ನನ್ನನ್ನು, ತಾನು ಪರಸ್ತ್ರೀಯರೊಡನೆ ವ್ಯವಹರಿಸುವುದನ್ನು ನೋಡಿ ನಾನು ಹೊಟ್ಟೆಕಿಚ್ಚುಪಡುತ್ತಿದ್ದೇನೆ ಎಂದು ಹೇಳುತ್ತಿದ್ದರು. ದಿನನಿತ್ಯದ ಈ ರಗಳೆಗಳಿಂದ ಬೇಸರವಾಗಿ ಎರಡು ತಿಂಗಳ ಹಿಂದೆ ನಾನೇ ಬದಲಾಗಿಬಿಟ್ಟೆ,'' ಎಂದು ಶಿಲ್ಪಾ ಸೀಮಾಳಿಗೆ ಹೇಳಿದಳು.
``ಯಾವಾಗಲೂ ಆಧುನಿಕ ಚಂಚಲ ತರುಣಿಯರ ಗುಣಗಾನ ಮಾಡುವ ಇವರಂತೆ ನಾನೂ ಸಹ ನಡೆದುಕೊಂಡೆ ಆದರೆ, ತಮ್ಮ ಹೆಂಡತಿ ಪರಪುರುಷರೊಂದಿಗೆ ಸುತ್ತುವುದನ್ನು ನೋಡಿ ಅವರಿಗೆ ಹೇಗಾಗಬಹುದು ಎಂದು ತಿಳಿಯಲು ನಾನು ಬಯಸಿದ್ದೆ.'' ಎಂದಳು.
ತಾನು ಆಧುನಿಕಳಾಗಿ ಕಾಣಿಸಿಕೊಳ್ಳಲು ಶಿಲ್ಪಾಳಿಗೆ ಹೆಚ್ಚೇನೂ ಶ್ರಮವಾಗಲಿಲ್ಲ. ಬ್ಯೂಟಿಪಾರ್ಲರಿಗೊಂದು ಭೇಟಿ ಇತ್ತು, ತನ್ನ ವೇಷಭೂಷಣಗಳನ್ನು ಬದಲಾಯಿಸಿಕೊಂಡಳು. ಮನೋಜನ ಸ್ನೇಹಿತರಾದ ವಿಕಾಸ್, ರಾಜೇಶ್, ಅಜಯ್, ವಾಸು ಮುಂತಾದವರೊಂದಿಗೆ ಬಾಯಿ ತುಂಬಾ ಮಾತನಾಡುತ್ತಾ ನಗುತ್ತಾ, ಶಿಲ್ಪಾ ಮುಕ್ತವಾಗಿ ಅವರೊಡನೆ ಬೆರೆಯಲಾರಂಭಿಸಿದಳು. ಶಿಲ್ಪಾಳೊಂದಿಗೆ ಸ್ನೇಹ ಬೆಳೆಸಲು ಅವರೆಲ್ಲರೂ ಹಾತೊರೆಯುತ್ತಿದ್ದರು. ತನ್ನತ್ತ ಎಲ್ಲರೂ ಆಕರ್ಷಿತರಾಗುತ್ತಿರುವುದು ಶಿಲ್ಪಾಳಿಗೇ ಅರಿವಾಗತೊಡಗಿತು.
``ನಿನ್ನ ಈ ಬದಲಾದ ಸ್ವರೂಪವನ್ನು ನೋಡಿ, ಮನೋಜ್ ಏನೂ ಪ್ರತಿಕ್ರಿಯಿಸಲಿಲ್ಲವೇ?'' ಸೀಮಾ ಕುತೂಹಲದಿಂದ ಕೇಳಿದಳು.