ಸಾವಿತ್ರಿ-ಸತ್ಯವಾನರ ಕಥೆ ಸತ್ಯವಾನ-ಸಾವಿತ್ರಿಯರ ಈ ಕಥೆಯು ವ್ಯಾಸ ಮಹಾಭಾರತದ ವನಪರ್ವದ ದ್ರೌಪದೀಹರಣ ಪರ್ವ
(ಅಧ್ಯಾಯ ೨೭೭-೨೮೩) ದಲ್ಲಿ ಬರುತ್ತದೆ. ಈ ಕಥೆಯನ್ನು ಋಷಿ ಮಾರ್ಕಂಡೇಯನು ಯುಧಿಷ್ಠಿರನಿಗೆ ಹೇಳಿದನು. ಜಯದ್ರಥನನ್ನು ಸೋಲಿಸಿ, ದ್ರೌಪದಿಯನ್ನು ಹಿಂದೆ ಪಡೆದ ಯುಧಿಷ್ಠಿರನು ದ್ರೌಪದೀಹರಣದ ಪ್ರಕರಣದಿಂದ ಅತ್ಯಂತ ದುಃಖಿತನಾಗಿ ಮಾರ್ಕಂಡೇಯನನ್ನು ಪ್ರಶ್ನಿಸಿದನು: “ಮಹಾಮುನೇ! ದ್ರುಪದಾತ್ಮಜೆಯ ಕುರಿತು ನಾನು ಎಷ್ಟು ಶೋಕಿಸುತ್ತಿದ್ದೇನೋ ಅಷ್ಟು ನನ್ನ ಕುರಿತಾಗಲೀ, ನನ್ನ ಈ ಭ್ರಾತೃಗಳ ಕುರಿತಾಗಲೀ ಅಥವಾ ಕಳೆದು ಹೋದ ರಾಜ್ಯದ ಕುರಿತಾಗಲೀ ಶೋಕಿಸುತ್ತಿಲ್ಲ.
ದ್ಯೂತದಲ್ಲಿ ದುರಾತ್ಮರಿಂದ ಕಷ್ಟಕ್ಕೊಳಗಾಗಿದ್ದ ನಮ್ಮನ್ನು ಪಾರುಮಾಡಿದ ಕೃಷ್ಣೆಯನ್ನು ಪುನಃ ಜಯದ್ರಥನು ಬಲಾತ್ಕಾರವಾಗಿ ಅಪಹರಿಸಿದನು. ಪತಿವ್ರತೆ ದ್ರುಪದಾತ್ಮಜೆಯ ಹಾಗಿದ್ದ ಇದಕ್ಕೂ ಮೊದಲು ನೀನು ನೋಡಿದ ಅಥವಾ ಕೇಳಿದ ಸೀಮಂತಿನಿ ಯಾರಾದರೂ ಇದ್ದಾರೆಯೇ?” ಈ ಪ್ರಶ್ನೆಗೆ ಉತ್ತರವಾಗಿ ಮಾರ್ಕಂಡೇಯನು ಯುಧಿಷ್ಠಿರನಿಗೆ ಕುಲಸ್ತ್ರೀಯರ ಮಹಾಭಾಗ್ಯವೆಲ್ಲವನ್ನೂ ಹೊಂದಿದ್ದ ರಾಜಕನ್ಯೆ ಸಾವಿತ್ರಿಯ ಕುರಿತು ಹೇಳಿದನು.
ರಾಜಾ ಅಶ್ವಪತಿಯು ಸಾವಿತ್ರಿಯ ವರದಿಂದ ಮಗಳನ್ನು ಪಡೆದುದು, ಮಗಳು ಸಾವಿತ್ರಿಯು ವರಾನ್ವೇಷಣೆಗೆ ಹೋದುದು ಮದ್ರದಲ್ಲಿ ಬ್ರಾಹ್ಮಣರ ಮತ್ತು ಶರಣರ ಸಾನ್ನಿಧ್ಯದಲ್ಲಿ ಧರ್ಮಾತ್ಮ ಸತ್ಯಸಂಧ ಜಿತೇಂದ್ರಿಯ ಅಶ್ವಪತಿ ಎನ್ನುವ ರಾಜನೋರ್ವನಿದ್ದನು. ಅವನು ಯಜ್ಞಗಳನ್ನು ಮಾಡುತ್ತಿದ್ದನು; ಮುಂದೆನಿಂತು ದಾನಗಳನ್ನು ನೀಡುತ್ತಿದ್ದನು; ಪೌರ-ಜಾನಪದರ ಪ್ರಿಯನಾಗಿದ್ದನು; ಮತ್ತು ಸರ್ವಭೂತಗಳ ಹಿತದಲ್ಲಿ ನಿರತನಾಗಿದ್ದನು. ಕ್ಷಮಾವಂತನೂ, ಸತ್ಯವನ್ನೇ ಮಾತನಾಡುವವನೂ, ಇಂದ್ರಿಯಗಳನ್ನು ಗೆದ್ದವನೂ ಆದ ಅವನಿಗೆ ಮಕ್ಕಳಿರಲಿಲ್ಲ.
ವಯಸ್ಸನ್ನು ದಾಟಿದ್ದ ಅವನಿಗೆ ಇದೊಂದು ಸಂತಾಪದ ವಿಷಯವೇ ಆಗಿತ್ತು. ತನಗೆ ಮಕ್ಕಳಾಗಬೇಕೆಂದು ಅವನು ನಿರ್ಧಿಷ್ಟ ವೇಳೆಗಳಲ್ಲಿ ಅಲ್ಪವೇ ಆಹಾರವನ್ನು ಸೇವಿಸುತ್ತಾ ಬ್ರಹ್ಮಚರ್ಯದಲ್ಲಿ ಜಿತೇಂದ್ರಿಯನಾಗಿದ್ದು ತೀವ್ರ ನಿಯಮಗಳಲ್ಲಿ ತೊಡಗಿದನು. ಅವನು ಪ್ರತಿದಿನವೂ ಸಾವಿತ್ರಿಗೆ ನೂರುಸಾವಿರ ಆಹುತಿಗಳನ್ನು ನೀಡುತ್ತಿದ್ದನು ಮತ್ತು ದಿನದ ಆರನೆಯ ಒಂದು ಭಾಗದಲ್ಲಿ ಮಾತ್ರ ಅಲ್ಪ ಆಹಾರವನ್ನು ತೆಗೆದುಕೊಳ್ಳುತ್ತಿದ್ದನು.
ಈ ರೀತಿ ನಿಯಮದಲ್ಲಿದ್ದುಕೊಂಡು ಹದಿನೆಂಟು ವರ್ಷಗಳು ಕಳೆದ ನಂತರ ಸಾವಿತ್ರಿಯು ಅವನ ಮೇಲೆ ಸಂತುಷ್ಟಳಾಗಿ ಕಾಣಿಸಿಕೊಂಡಳು. ಅಗ್ನಿಹೋತ್ರದಿಂದ ಎದ್ದುಬಂದ ಆ ಮಹತಾನ್ವಿತೆ ವರದೆಯು ಹರ್ಷದಿಂದ ರಾಜನಿಗೆ ಹೇಳಿದಳು: “ರಾಜನ್! ನಿನ್ನ ಬ್ರಹ್ಮಚರ್ಯ, ಪರಿಶುದ್ಧತೆ, ದಮ, ನಿಯಮ, ಮತ್ತು ನನ್ನ ಮೇಲಿರಿಸಿರುವ ಸರ್ವಾತ್ಮ ಭಕ್ತಿಗೆ ಸಂತುಷ್ಟಳಾಗಿದ್ದೇನೆ. ವರವನ್ನು ಕೇಳು!” ಅಶ್ವಪತಿಯು ಹೇಳಿದನು: “ದೇವೀ! ಮಕ್ಕಳು ಬೇಕೆಂಬ ಆಸೆಯಿಂದ ನಾನು ಈ ಧರ್ಮಸಮಾರಂಭದಲ್ಲಿ ತೊಡಗಿದ್ದೇನೆ. ನನ್ನಿಂದ ಸಂತೃಪ್ತಳಾಗಿದ್ದರೆ ನನ್ನ ಕುಲವನ್ನು ವೃದ್ಧಿಸುವ ಹಲವು ಪುತ್ರರನ್ನು ನನಗೆ ನೀಡು! ದ್ವಿಜರಿಗೆ ಸಂತಾನವೇ ಪರಮ ಧರ್ಮವೆಂದು ಹೇಳುತ್ತಾರೆ.” ಸಾವಿತ್ರಿಯು ಹೇಳಿದಳು: “ರಾಜನ್! ನಿನ್ನ ಈ ಅಭಿಪ್ರಾಯವನ್ನು ತಿಳಿದು ಹಿಂದೆಯೇ ನಿನಗೆ ಪುತ್ರರನ್ನು ನೀಡುವುದರ ಕುರಿತು ಪಿತಾಮಹನಲ್ಲಿ ಕೇಳಿಕೊಂಡಿದ್ದೆ. ಸ್ವಯಂಭುವು ವಿಹಿಸಿದಂತೆ ಅವನ ಪ್ರಸಾದದಿಂದ ನಿನಗೆ ಶೀಘ್ರದಲ್ಲಿಯೇ ಸೌಮ್ಯ ತೇಜಸ್ವಿನೀ ಕನ್ಯೆಯು ಜನಿಸುವಳು. ಇದರ ಕುರಿತು ಮರುಪ್ರಶ್ನೆಯನ್ನು ಕೇಳಬೇಡ ಅಥವಾ ವಾದಿಸಬೇಡ. ನಿನ್ನ ಮೇಲೆ ಸಂತುಷ್ಟಳಾಗಿ ಪಿತಾಮಹನು ವಿಧಿಸಿದುದನ್ನು ನಿನಗೆ ಹೇಳುತ್ತಿದ್ದೇನೆ.” ಸಾವಿತ್ರಿಯ ವಚನಕ್ಕೆ ಹಾಗೆಯೇ ಆಗಲೆಂದು ಅವನು ಒಪ್ಪಿಕೊಳ್ಳಲು “ಇದು ಶ್ರೀಘ್ರದಲ್ಲಿಯೇ ಆಗುತ್ತದೆ” ಎಂದು ಅನುಗ್ರಹಿಸಿ ಸಾವಿತ್ರಿಯು ಅಂತರ್ಧಾನಳಾದಳು.





