“ಹೇಗಿದ್ದೀಯಾ ಪೂರ್ಣಿಮಾ? ಈಗ ನಿನ್ನ ಆರೋಗ್ಯ ಹೇಗಿದೆ? ನಾನು ನಿನಗೆ ಇಷ್ಟವಾದ ಆಲೂಗಡ್ಡೆ ಪಲ್ಯ ಮಾಡಿಕೊಂಡು ಬಂದಿರುವೆ,” ಎಂದು ಪಕ್ಕದ್ಮನೆಯ ಚಂದ್ರಿಕಾ ಹೇಳಿದಳು.

“ನೀನು ಎಷ್ಟು ದಿನ ನನ್ನ ಇಷ್ಟದ ಪದಾರ್ಥಗಳನ್ನು ಮಾಡಿಕೊಂಡು ಬರ್ತಾ ಇರ್ತೀಯಾ? ನಾನೀಗ ಅಷ್ಟಿಷ್ಟು ಆರಾಮವಾಗಿದ್ದೇನೆ. ಈಗ ಅಡುಗೆ ಸಹ ಮಾಡಬಲ್ಲೆ. ನೀನೀಗ ನನ್ನ ಬಗ್ಗೆ ಕಾಳಜಿ ವಹಿಸುವುದನ್ನು ಕಡಿಮೆ ಮಾಡಬೇಕು,” ಪೂರ್ಣಿಮಾ ಹಾಸಿಗೆಯಿಂದ ಮುಗುಳ್ನಗೆ ಸೂಸುತ್ತ ಎದ್ದಳು.

“ಚಂದ್ರಿಕಾ, ನಿಮ್ಮ ಗೆಳತಿ ಮಾಡಿದ ಅಡುಗೆ ತಿಂದು ತಿಂದು ನನಗೆ ಬೋರ್‌ ಆಗಿದೆ. ನೀವು ಇನ್ನೊಂದೆರಡು ದಿನ ಹೀಗೆಯೇ ಅಡುಗೆ ತಂದು ಕೊಡ್ತಾ ಇರಿ. ಪೂರ್ಣಿಗೆ ಈ ರೀತಿ ಒಂದಿಷ್ಟು ವಿಶ್ರಾಂತಿ ದೊರೆಯುತ್ತದೆ,” ಚಂದ್ರಿಕಾಗೆ ಕುಳಿತುಕೊಳ್ಳಲು ಸನ್ನೆ ಮಾಡುತ್ತಾ ಪೂರ್ಣಿಮಾಳ ಪತಿ ಸತ್ಯರಾಜು ಹೇಳಿದ.

“ಎಂಥ ಮಾತು ಅಂತ ಆಡ್ತೀರಾ ಸತ್ಯರಾಜು, ನಾನಂತೂ ಇವರ ಕೈರುಚಿ ಸವಿದಿಲ್ಲ. ಕಿಟಿ ಪಾರ್ಟಿಯಲ್ಲಿ ಇವರ ಕೈ ರುಚಿಯ ಬಗ್ಗೆ ಎಲ್ಲರೂ ಹೊಗಳುತ್ತಾ ಇರುತ್ತಾರೆ.”

ಆ ಮಾತು ಕೇಳುತ್ತಿದ್ದಂತೆ  ಸತ್ಯರಾಜು ಜೋರಾಗಿ ನಕ್ಕುಬಿಟ್ಟ. ಅದೇ ಸಮಯದಲ್ಲಿ ಚಂದ್ರಿಕಾ ಪೂರ್ಣಿಮಾಳ ಮುಖದಲ್ಲಾಗುತ್ತಿದ್ದ ಭಾವನೆಗಳನ್ನು ಗಮನಿಸುತ್ತಿದ್ದಳು. ಸತ್ಯರಾಜು ಈ ರೀತಿ ಹೆಂಡತಿಯನ್ನು ನಗಿಸಲು ಪ್ರಯತ್ನಿಸಿದಾಗ ಅವಳ ಮುಖದಲ್ಲಿ ನಗು ಚಿಮ್ಮುತ್ತಿರಲಿಲ್ಲ, ಚಿಂತೆ ಕಾಣುತ್ತಿತ್ತು. ಕಳೆದ 10 ದಿನಗಳಲ್ಲಿ ಸತ್ಯರಾಜು ವರ್ತನೆಯಿಂದ ಪೂರ್ಣಿಮಾ ತನ್ನನ್ನು ತಾನು ಅಸುರಕ್ಷಿತೆ ಎಂದು ಭಾವಿಸಿದಂತೆ ಕಾಣುತ್ತಿತ್ತು.

ಸ್ವಲ್ಪ ಹೊತ್ತು ಆ ಕಡೆ ಈ ಕಡೆಯ ಮಾತುಗಳು ಆದವು. ಆ ಬಳಿಕ ಚಂದ್ರಿಕಾ ತನ್ನ ಮನೆಯ ಕಡೆ ಹೊರಟುಹೋದಳು. ಅವಳು ಪೂರ್ಣಿಮಾಳ ಮುಖವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅವಳ ಮುಖದಲ್ಲೀಗ ಮಂದಹಾಸ ವಾಪಸ್ಸಾಗಿತ್ತು. ಈಗ ಅವಳು ಅಷ್ಟಿಷ್ಟು ಅಡುಗೆ ಮಾಡುವ ಸಾಮರ್ಥ್ಯ ಪಡೆದಿದ್ದಳು. ಇನ್ನು ನಾಳೆಯಿಂದ ಅಡುಗೆ ಮಾಡದೇ ಇರುವುದು ಒಳ್ಳೆಯದು ಎಂದು ಅವಳು ಭಾವಿಸಿದಳು.

ಚಂದ್ರಿಕಾ ಅತ್ತ ಕಡೆ ಹೋಗುತ್ತಿದ್ದಂತೆ ಪೂರ್ಣಿಮಾ ಪತಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಾ, “ನನ್ನ ಅನಾರೋಗ್ಯದ  ದುರ್ಲಾಭ ಪಡೆದುಕೊಂಡು ಗೆಳತಿಯನ್ನು ಫ್ಲರ್ಟ್‌ ಮಾಡಲು ಪ್ರಯತ್ನಿಸುತ್ತಿದ್ದೀರಾ?”

“ಛೇ….ಛೇ….. ನನ್ನ ಮಾತನ್ನು ನೀನು ತಪ್ಪಾಗಿ ಅರ್ಥ ಮಾಡಿಕೊಂಡೆ. ನೀನು ಇನ್ನೊಂದೆರಡು ದಿನ ವಿಶ್ರಾಂತಿ ಪಡೆಯಲೆಂದು ನಾನು ಅವರನ್ನು ಈ ರೀತಿ ಹೊಗಳಿದೆ. ನಿನ್ನ ಯೋಚನೆ ಅದೆಷ್ಟು ಸಂಕೀರ್ಣ, ಮಹಿಳೆಯರ ಅಸೂಯೆಯ ವರ್ತನೆಗೆ ನಾನೇನು ಹೇಳಲು ಸಾಧ್ಯ?”

ಪೂರ್ಣಿಮಾಳ ವರ್ತನೆ ಮಾತುಗಳಿಂದ ಅವನ ಮನಸ್ಸು ಕಹಿಯಾಯಿತು.

ಮರುದಿನ ಚಂದ್ರಿಕಾ ಊಟತಿಂಡಿ ತೆಗೆದುಕೊಂಡು ಪೂರ್ಣಿಮಾಳ ಮನೆಗೆ ಬರಲೇ ಇಲ್ಲ. ಅದು ಪೂರ್ಣಿಮಾಳಿಗೆ ತುಸು ನೆಮ್ಮದಿಯನ್ನುಂಟು ಮಾಡಿತು. ಆದರೆ ಸತ್ಯರಾಜು ಅರ್ಥ ಮಾಡಿಕೊಂಡಿದ್ದು ಬೇರೆ. ಪೂರ್ಣಿಮಾಳ ದುರ್ವರ್ತನೆಯಿಂದಲೇ ಚಂದ್ರಿಕಾ ತಮ್ಮ ಮನೆಗೆ ಬರುವುದನ್ನು ನಿಲ್ಲಿಸಿದಳು ಎಂದು ತಿಳಿದುಕೊಂಡ. ಆದರೆ ಆತ ಪೂರ್ಣಿಮಾಳಿಗೆ ಬೇರೇನೂ ಕೇಳಲು ಹೋಗಲಿಲ್ಲ. ಹಾಗೇನಾದರೂ ಕೇಳಿದ್ರೆ ಮತ್ತೇನೋ ಹೇಳಿ ಅವಳು ಅವನ ಮನಸ್ಸನ್ನು ನೋಯಿಸಿಬಿಡುತ್ತಿದ್ದಳು.

ಸಕಾರಾತ್ಮಕ  ಯೋಚನೆ ಎಷ್ಟು ಅಗತ್ಯ?

ಪೂರ್ಣಿಮಾ ಹಾಗೂ ಚಂದ್ರಿಕಾ ಇವರಿಬ್ಬರ ವಿವಾಹ ಎರಡು ವರ್ಷಗಳ ಹಿಂದಷ್ಟೇ ಆಗಿತ್ತು. ಮದುವೆ ಆಗುತ್ತಿದ್ದಂತೆ ಎರಡೂ ಕುಟುಂಬದವರು ಕಲುಬುರ್ಗಿಯಿಂದ ಬೆಂಗಳೂರಿಗೆ ಬಂದು ನೆಲೆಸಿದ್ದರು. ನೆರೆಮನೆಯವರಾದ್ದರಿಂದ ಹಾಗೂ ಸಮಾನ ಮನಸ್ಕರಾದ್ದರಿಂದ ಎರಡೂ ಕುಟುಂಬದವರು ಬಹುಬೇಗ ಹತ್ತಿರವಾದರು. ಆದರೆ ಅವರ ಪತಿಯರು ಮಾತ್ರ ಭೇಟಿಯಾಗುವುದು ಅಪರೂಪವೇ ಆಗಿತ್ತು. ಪೂರ್ಣಿಮಾಳ ಪತಿ ಬಹಳ ಮಾತುಗಾರ ಹಾಗೂ ಸಹಜ ಸ್ವಭಾವದವನಾಗಿದ್ದ. ಅದೇ ಚಂದ್ರಿಕಾಳ ಪತಿ ಅಂತರ್ಮುಖಿ ಹಾಗೂ ಉದಾಸೀನ ಸ್ವಭಾವದವನಾಗಿದ್ದ. ಗಂಡಂದಿರು ಹೊರಗೆ ಹೋದ ಬಳಿಕವೇ ಅವರು ಪರಸ್ಪರ ಭೇಟಿಯಾಗುತ್ತಿದ್ದರು. ಮಾರುಕಟ್ಟೆಗೆ ಅಥವಾ ಬೇರೆ ಎಲ್ಲಾದರೂ ಇಬ್ಬರೂ ಸೇರಿಯೇ ಹೋಗುತ್ತಿದ್ದರು. ಆದರೆ ಈಚೆಗೆ ಪೂರ್ಣಿಮಾಳ ಅನಾರೋಗ್ಯದ ಕಾರಣದಿಂದ ಚಂದ್ರಿಕಾ ಆಗಾಗ ಪೂರ್ಣಿಮಾಳ ಮನೆಗೆ ಹೋಗಬೇಕಾಗಿ ಬರುತ್ತಿತ್ತು. ಪೂರ್ಣಿಮಾಳಿಗೆ ಡೆಂಗ್ಯೂ ಜ್ವರ ಬಂದಿದ್ದರಿಂದ ಅವಳಿಗೆ ಪೂರ್ತಿ ವಿಶ್ರಾಂತಿ ಕೊಡುವ ಉದ್ದೇಶದಿಂದ ಮುಂಜಾನೆ, ಸಂಜೆ ಊಟ, ತಿಂಡಿ ಸಹ ತಂದುಕೊಡಲಾರಂಭಿಸಿದ್ದಳು. ಸತ್ಯರಾಜು ಸಹ ಕೆಲವು ದಿನ ರಜೆ ಹಾಕಿ ತನ್ನ ಹೆಂಡತಿ ಪೂರ್ಣಿಮಾಳ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದ. ಚಂದ್ರಿಕಾ-ಸತ್ಯರಾಜು ಸ್ವಭಾವ ಒಂದೇ ರೀತಿಯಾದ್ದರಿಂದ ಅವರಿಬ್ಬರು ಸಾಕಷ್ಟು ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಿದ್ದರು, ತಮಾಷೆಯ ಮಾತುಗಳನ್ನಾಡುತ್ತಿದ್ದರು.

ಸತ್ಯರಾಜುಗೆ ಪೂರ್ಣಿಮಾಳಿಗಿಂತ ಚಂದ್ರಿಕಾಳ ಬಿಂದಾಸ್‌ ಸ್ವಭಾವ ಬಹಳ ಇಷ್ಟವಾಗುತ್ತಿತ್ತು. ಚಿಕ್ಕಪುಟ್ಟ ಮಾತುಗಳಿಗೆ ಮನಸಾರೆ ನಕ್ಕುಬಿಡುವುದು ಹಾಗೂ ಜೀವನದ ಬಗೆಗಿನ ಅವಳ ಸಕಾರಾತ್ಮಕ ಯೋಚನೆ ವಾತಾವರಣವನ್ನು ಖುಷಿಗೊಳಿಸುತ್ತಿತ್ತು. ಪೂರ್ಣಿಮಾ ಡೆಂಗ್ಯೂ ಪೀಡಿತಳಾದ ಬಳಿಕ ಮನೆಯಲ್ಲಿ ಮೌನ ಆವರಿಸಿತ್ತು. ಚಂದ್ರಿಕಾ ಆ ಸಮಯದಲ್ಲಿ ಅವರಿಗೆ ಬಹಳ ನೆರವಾದಳು. ಅವಳು ಪ್ರತಿದಿನ ಮನೆಗೆ ಬರುತ್ತಿದ್ದುದರಿಂದ, ಖುಷಿಯಿಂದ ಮಾತನಾಡುತ್ತಿದ್ದುದರಿಂದ ಆಕೆಯು ತನ್ನ ರೋಗವನ್ನು ಮರೆತೇ ಬಿಡುತ್ತಿದ್ದಳು.

ಅಸುರಕ್ಷತೆಯ ಭಾವನೆ ಏಕೆ?

ಪೂರ್ಣಿಮಾಳಿಗೆ ಅದನ್ನು ಸಹಿಸಿಕೊಳ್ಳಲು ಆಗುತ್ತಿರಲಿಲ್ಲ. ತನ್ನ ಗಂಡ ಬೇರೆ ಮಹಿಳೆಯರ ಜೊತೆ ಫ್ಲರ್ಟ್‌ ಮಾಡುವ ಅಭ್ಯಾಸ ಅವಳಿಗೆ ಆತಂಕವನ್ನುಂಟು ಮಾಡುತ್ತಿತ್ತು. ಅವನು ಹ್ಯಾಂಡ್‌ಸಮ್ ಹಾಗೂ ಮಾತಿನ ಮೋಡಿಗಾರ. ಅವನನ್ನು ಯಾರಾದರೂ ಹೊಗಳಿದರೂ ಸಾಕು, ಅವಳಲ್ಲಿ ಅಸುರಕ್ಷತೆಯ ಭಾವನೆ ಬಂದುಬಿಡುತ್ತಿತ್ತು. ಸತ್ಯರಾಜು ತನ್ನ ಹೆಂಡತಿಯನ್ನು ಮನಸಾರೆ ಪ್ರೀತಿಸುತ್ತಿದ್ದ. ಒಳ್ಳೆಯ ಪತಿಯ ಹಾಗೆ ಅವಳ ಯೋಗಕ್ಷೇಮ ನೋಡಿಕೊಳ್ಳುತ್ತಿದ್ದ.

ಸತ್ಯರಾಜು ತನ್ನ ಹೆಂಡತಿಯ ಸಂದೇಹ ಸ್ವಭಾವದಿಂದ ಬಹಳ ನೊಂದುಕೊಳ್ಳುತ್ತಿದ್ದ. ಅವಳಿಗೆ ಬಹಳ ಸಲ ತಿಳಿಸಿ ಹೇಳಿದ. ಸಂಕೀರ್ಣ ಯೋಚನೆಯಿಂದ ಹೊರಬರಲು ಹೇಳಿದ. ಆದರೆ ಅವನ ತಿಳಿವಳಿಕೆ ಅವಳ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ. ಅವನು ಕೂಡ ಕಾರಣವಿಲ್ಲದೆಯೇ ತನ್ನ ಸ್ವಭಾವ ಬದಲಿಸಿಕೊಳ್ಳಲು ಬಿಲ್‌‌ಕುಲ್‌ ತಯಾರಿರಲಿಲ್ಲ. ಹೀಗಾಗಿ ಅವರ ನಡುವೆ ಆಗಾಗ ಮನಸ್ತಾಪ ಉಂಟಾಗುತ್ತಿತ್ತು.

ಉದಾಸೀನ ವರ್ತನೆ

15 ದಿನಗಳಾದವು. ಚಂದ್ರಿಕಾ ಒಮ್ಮೆ ಕೂಡ ಪೂರ್ಣಿಮಾಳನ್ನು ಸಂಪರ್ಕಿಸಲಿಲ್ಲ. ಸತ್ಯರಾಜು ಕೂಡ ತನ್ನ ಆಫೀಸು ಕೆಲಸ ಕಾರ್ಯಗಳಲ್ಲಿ ಸಾಕಷ್ಟು ಮಗ್ನನಾಗಿಬಿಟ್ಟಿದ್ದ. ಪೂರ್ಣಿಮಾಳ ಆರೋಗ್ಯವೇನೋ ಸರಿಹೋಗಿತ್ತು. ಆದರೆ ದೇಹದಲ್ಲಿ ನಿಶ್ಶಕ್ತಿ ಇನ್ನೂ ಹಾಗೆಯೇ ಉಳಿದಿತ್ತು. ಮನೆಯಲ್ಲಿ ಏಕಾಂಗಿಯಾಗಿ ಇದ್ದ ಕಾರಣದಿಂದ, ಇಡೀ ದಿನ ಹಾಸಿಗೆಯ ಮೇಲೆ ಮಲಗಿ ಅವಳು ಬೇಸತ್ತು ಹೋಗಿದ್ದಳು. ಈಗ ಅವಳಿಗೆ ಚಂದ್ರಿಕಾಳ ಕೊರತೆ ಬಾಧಿಸುತ್ತಿತ್ತು.

ಅವಳ ಜೊತೆ ಇದ್ದಾಗ ಸಮಯ ಹೇಗೆ ಕಳೆಯುತ್ತಿತ್ತೊ ಗೊತ್ತಾಗುತ್ತಿರಲಿಲ್ಲ. ತನ್ನ ಉದಾಸೀನ ವರ್ತನೆಯ ಕಾರಣದಿಂದ ಅವಳು ತನ್ನ ಮನೆಗೆ ಬರುತ್ತಿಲ್ಲ ಎಂಬುದು ಮಾತ್ರ ಅವಳ ಅರಿವಿಗೆ ಬಂದಿತ್ತು. ಸತ್ಯರಾಜು ಆಫೀಸ್‌ಗೆ ಹೋಗುತ್ತಿದ್ದಂತೆಯೇ ಅವಳು ಚಂದ್ರಿಕಾಳ ಮನೆಗೆ ಹೋಗಿ ಬರಲು ನಿರ್ಧರಿಸಿದಳು.

ಪೂರ್ಣಿಮಾಳನ್ನು ಆಕಸ್ಮಿಕವಾಗಿ ತನ್ನ ಮನೆಯೆದುರಿಗೆ ಕಂಡು ಚಂದ್ರಿಕಾಳಿಗೆ ಆಶ್ಚರ್ಯವೋ ಆಶ್ಚರ್ಯ! ಒಳಗೆ ಪ್ರವೇಶಿಸುತ್ತಿದ್ದಂತೆಯೇ ಪೂರ್ಣಿಮಾ ಹೇಳಿದಳು, “ಚಂದ್ರಿಕಾ, ನೀನು ನನ್ನ ಬಗ್ಗೆ ಬೇಸರಗೊಂಡಿದ್ದರೆ ನನ್ನ ಪರಿಸ್ಥಿತಿ ಏನು? ಇಷ್ಟು ದಿನ ನೀನು ನನ್ನ ಮನೆಗೆ ಬರದೇ ಇದ್ದುದರಿಂದ ನಿನ್ನ ಮಹತ್ವ ಏನು ಅಂತ ಗೊತ್ತಾಯಿತು. ಪ್ಲೀಸ್‌ ನನ್ನನ್ನು ಕ್ಷಮಿಸು,” ಎಂದು ಹೇಳುತ್ತ ಅವಳು ಚಂದ್ರಿಕಾಳನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅಳತೊಡಗಿದಳು.

ಚಂದ್ರಿಕಾ ಅವಳ ಬೆನ್ನು ತಟ್ಟುತ್ತ, “ನಿನ್ನಂತಹ ಗೆಳತಿಯನ್ನು ನಾನು ಹೇಗೆ ಕಳೆದುಕೊಳ್ಳಲು ಸಾಧ್ಯ? ನನ್ನಿಂದ ದೂರ ಇದ್ದು ನಿನಗೆ ಎಷ್ಟು ನೋವಾಗಿದೆಯೊ, ನನಗೂ ಕೂಡ ನಿನ್ನಿಂದ ದೂರ ಇದ್ದು ಅಷ್ಟೇ ನೋವಾಗಿದೆ. ಈ ಅಪರಿಚಿತ ನಗರದಲ್ಲಿ ನೀನು ಇದ್ದೀಯಾ ಅಂತ ನಾನು ಕೂಡ ವಾಸಿಸುತ್ತಿರುವೆ. ನನ್ನ ಪತಿ ಸದಾ ಆಫೀಸ್‌ ಕೆಲಸದಲ್ಲಿ ಮಗ್ನರಾಗಿರುತ್ತಾರೆ. ಮನೆಗೆ ಬಂದ್ರೆ ಲ್ಯಾಪ್‌ಟಾಪ್‌ ಕೈಯಲ್ಲಿ ಹಿಡಿದು ಕೂತಿರುತ್ತಾರೆ.

“ನಾನು ಖಚಿತವಾಗಿ ಹೇಳಬೇಕಾದ ಒಂದು ವಿಷಯವೆಂದರೆ, ನಿಮ್ಮ ಮನೆಗೆ ನಾನು ಬೇಕೆಂದೇ ಬರಲಿಲ್ಲ. ನನ್ನಿಂದಾಗಿ ನಿಮ್ಮಿಬ್ಬರ ನಡುವೆ  ವಾದವಿವಾದ, ಮನಸ್ತಾಪ ಉಂಟಾಗುವುದು ನನಗಿಷ್ಟವಿಲ್ಲ. ಎರಡನೆಯದು, ನನ್ನ ಅನುಪಸ್ಥಿತಿಯ ಅರಿವು ನಿನಗಾಗಬೇಕು ಎಂಬುದು ನನ್ನಿಚ್ಛೆಯಾಗಿತ್ತು. ಗಂಡಹೆಂಡತಿಯ ಸಂಬಂಧ ವಿಶ್ವಾಸದ ಅಡಿಪಾಯದ ಮೇಲೆ ನಿಂತಿರುತ್ತದೆ ಎಂದು ನಾನು ನಿನಗೆ ತಿಳಿಸಿ ಹೇಳುವಷ್ಟು ಸಲಿಗೆಯಂತೂ ನನಗೆ ಖಂಡಿತ ಇಲ್ಲ.

“ನೀನು ನಿನ್ನ ಗಂಡನ ಮೇಲೆ ಸಂದೇಹಪಟ್ಟು ನಿನ್ನದೇ ವೈವಾಹಿಕ ಜೀವನದಲ್ಲಿ ವಿಷ ಬೆರೆಸುವ ಕೆಲಸ ಮಾಡಿದೆ. ಗಂಡ ಒಂದು ವೇಳೆ ಹೆಂಡತಿಯ ತಂಗಿ ಅಥವಾ ಅತ್ತಿಗೆಯ ಜೊತೆಗೆ ತಮಾಷೆ ಮಾಡಿದರೆ, ಅದು ಸ್ವೀಕೃತವಾಗುತ್ತದೆ. ಒಂದು ವೇಳೆ ಯಾವುದೇ ಸಂಬಂಧ ಇರದ ಮಹಿಳೆಯ ಜೊತೆ ತಮಾಷೆ ಮಾಡಿದರೆ, ಅದನ್ನು ಸಂದೇಹದ ದೃಷ್ಟಿಯಿಂದ ನೋಡುವುದು ಎಷ್ಟರ ಮಟ್ಟಿಗೆ ಸರಿ? ನಿನ್ನ ಗಂಡ ಮುಕ್ತ ವಿಚಾರದ ವ್ಯಕ್ತಿ, ಸಾಕಷ್ಟು ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಾರೆ. ಬೇರೆಯವರನ್ನು ನಗಿಸುತ್ತಾರೆ. ಅದಕ್ಕೆ ನೀನು ಖುಷಿಪಡಬೇಕು. ನನ್ನ ಗಂಡ ಅಂತರ್ಮುಖಿ, ಯಾವುದೇ ವಿಷಯದ ಬಗ್ಗೆ ಚರ್ಚೆ ಮಾಡಲ್ಲ. ಹೀಗಾಗಿ ಮನೆಯಲ್ಲಿ ಸದಾ ಮೌನ ಆವರಿಸಿರುತ್ತದೆ.

“ಮತ್ತೊಂದು ವಿಷಯ. ಯಾವ ಗಂಡಂದಿರ ಸ್ವಭಾವ ಪೋಲಿ ಆಗಿರುತ್ತದೊ ಅವರು ಹೆಂಡತಿಯ ಮುಂದೇನೂ ಪ್ರಾಮಾಣಿಕನಂತೆ ಪೋಸ್‌ ಕೊಡುತ್ತಾರೆ. ಆದರೆ ಹೆಂಡತಿ ಇಲ್ಲದೇ ಇರುವಾಗ ಬೇರೆ ಮಹಿಳೆಯರ ಜೊತೆ ಫ್ಲರ್ಟ್‌ ಮಾಡುತ್ತಿರುತ್ತಾರೆ. ವೈವಾಹಿಕ ಜೀವನದಲ್ಲಿ ಅಷ್ಟಿಷ್ಟು ಫ್ಲರ್ಟ್‌ ಮಾಡಬೇಕಾದುದು ಅಗತ್ಯ. ಅದು ವೈವಾಹಿಕ ಜೀವನದಲ್ಲಿ ಸಿಹಿ ಬೆರೆಸುವ ಕೆಲಸ ಮಾಡುತ್ತದೆ. ಇಲ್ಲದ್ದಿದರೆ ಗಂಡಹೆಂಡತಿ ಪರಸ್ಪರ ಜೊತೆಗಿದ್ದೂ ಕೂಡ ಬೇಸರಪಟ್ಟುಕೊಳ್ಳುವಂತಾಗುತ್ತದೆ. ಅದರಿಂದಾಗಿ ಜೀವನ ನೀರಸ ಎನಿಸುತ್ತದೆ.”

ಚಂದ್ರಿಕಾಳ ಮಾತಿಗೆ ಪ್ರತ್ಯುತ್ತರ ಎಂಬಂತೆ ಪೂರ್ಣಿಮಾ ಹೇಳಿದಳು, “ನೀನು ಹೇಳ್ತಿರೋದು ನಿಜ ಕಣೆ. ಸತ್ಯರಾಜು ಹಾಗೂ ನೀನು ಇಬ್ಬರು ಪರಸ್ಪರ ತಮಾಷೆಯಿಂದ ಮಾತನಾಡ್ತಾ ಇದ್ರೆ ಎಷ್ಟು ಚೆನ್ನಾಗಿ ಸಮಯ ಕಳೆಯುತ್ತೆ ಗೊತ್ತೇ ಆಗುವುದಿಲ್ಲ.”

ಆ ಬಳಿಕ ಅವರ ಕುಟುಂಬದಲ್ಲಿ ಮತ್ತೆ ವಿರಸದ ಸಂದರ್ಭ ಬರಲೇ ಇಲ್ಲ.

– ಸುಧಾ ಕುಲಕರ್ಣಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ