ಮಹಿಳೆಯರಲ್ಲಿ ಸಂವೇದನಾಶೀಲತೆ, ಧೈರ್ಯ, ಬಹುಮುಖ ಪ್ರತಿಭೆ, ವಿಶೇಷ ಕೌಶಲ್ಯ, ಆಂತರಿಕ ಶಕ್ತಿಗಳು ಅಪಾರವಾಗಿ ಅಡಗಿದ್ದು ಅವರ ಪ್ರಗತಿಗೆ ಅದು ಪೂರಕ. ಈ ಎಲ್ಲಾ ಗುಣಗಳೂ ರಿಚಾರಲ್ಲಿ ಕೂಡಿ ಆಕೆ ಒಂದೊಂದೇ ಮೆಟ್ಟಿಲೇರುತ್ತಾ ಇಂದಿನ ಕಾರ್ಪೊರೇಟ್‌ ಜಗತ್ತಿನಲ್ಲಿ ಅತಿ ಉನ್ನತ ಸಿಇಓ ಸ್ಥಾನವನ್ನು `ನೈನ್‌’ ಸಂಸ್ಥೆಯಲ್ಲಿ ಅಲಂಕರಿಸಿದ್ದಾರೆ. ಅವರೊಂದಿಗೆ ನಡೆಸಿದ ವಾರ್ತಾಲಾಪದ ಮುಖ್ಯಾಂಶ :

ನಿಮ್ಮ ಯಶಸ್ಸಿನ ಗುಟ್ಟೇನು?

ಒಂದು ಅತಿ ಪ್ರಬಲ ವಿಶ್ವಾಸ! ನಾನು ಈ ಕೆಲಸಕ್ಕಾಗಿ 100% ಪ್ರತಿಬದ್ಧತೆ ಹಾಗೂ ಸಮರ್ಪಣಾ ಮನೋಭಾವದೊಂದಿಗೆ ಕೆಲಸ ಮಾಡುತ್ತೇನೆ. ಈ ವಿಶ್ವಾಸವೇ ನನ್ನ ಯಶಸ್ಸಿನ ರಹಸ್ಯ. ಜೊತೆಗೆ ನಮ್ಮಮ್ಮನ ಮಾರ್ಗದರ್ಶನ….. ಅವರು ನನ್ನ ಪ್ರತಿ ಹೆಜ್ಜೆಯನ್ನೂ ತಿದ್ದಿ ಮುನ್ನಡೆಸಿದ್ದಾರೆ. ನನ್ನ ಮಕ್ಕಳನ್ನೂ ತಾವೇ ಸಾಕಿಸಲಹಿ ನನಗೆ ಆಧಾರಸ್ತಂಭವಾಗಿದ್ದಾರೆ.

ಉದ್ಯೋಗಸ್ಥ ಮಹಿಳೆಯರು ಯಾವ ರೀತಿ ಎಲ್ಲಾ ಸಮಸ್ಯೆಗಳನ್ನೂ ಎದುರಿಸಬೇಕಾಗುತ್ತದೆ?

ಮಹಿಳೆಯರ ಉದ್ಯೋಗದ ಕುರಿತಾಗಿ ವಿಷಯ ಬಂದಾಗೆಲ್ಲ, ವಿವಾಹಿತ ಮಹಿಳೆ ತನ್ನ ಕೆಲಸಕ್ಕೆ 100% ನ್ಯಾಯ ಒದಗಿಸುವುದಿಲ್ಲವೆಂಬ ಒಡಕು ಮಾತೇ ಕೇಳಿಸುತ್ತದೆ. ಮಕ್ಕಳ ನಿಗಾ ಕಾರಣ ಆಫೀಸಿನಲ್ಲಿ ಉತ್ತಮ ಪರ್ಫಾರ್ಮೆನ್ಸ್ ನೀಡಲಾರಳು ಎಂಬ ಮಾತೇ ನಿಲ್ಲುತ್ತದೆ. ಆದರೆ ಅಸಲಿಗೆ ಹಾಗೇನಿಲ್ಲ. ಬದಲಿಗೆ ಅವರುಗಳು ತಮ್ಮ 100% ಆಫೀಸಿಗೇ ಸಲ್ಲಲಿ ಎಂದು ಹೆಚ್ಚು ಪರಿಶ್ರಮ ವಹಿಸುತ್ತಾರೆ. ಜೊತೆಗೆ ಅವರೂ ಸಹ ಗಂಡಸರಂತೆಯೇ ಇಂಥದ್ದನ್ನೆಲ್ಲಾ ಸಲೀಸಾಗಿ ನಿಭಾಯಿಸಬಲ್ಲರು ಎಂದು ನಿರೂಪಿಸಿದ್ದಾರೆ. ಸಾಮಾಜಿಕ ದೃಷ್ಟಿಕೋನದಿಂದಲೂ ಹೆಣ್ಣಿಗೆ ಸದಾ ಪಕ್ಷಪಾತ ಆಗುತ್ತಿರುತ್ತದೆ. ಹೆಣ್ಣಿನ ಕುರಿತಾಗಿ ಮನೆ ಮತ್ತು ಸಮಾಜ ಸದಾ ಹೆಚ್ಚಿನ ಅಪೇಕ್ಷೆ ಮುಂದಿಡುತ್ತದೆ. ಹೀಗಾಗಿ ಆಕೆ ತುಂಬಾ ಬ್ಯಾಲೆನ್ಸ್ ಮಾಡಬೇಕಾಗುತ್ತದೆ. ಆದ್ದರಿಂದ ಅವಳು ಮನೆ, ಸಮಾಜ, ಆಫೀಸ್‌ ಮಾತ್ರವಲ್ಲದೆ ತನಗಾಗಿಯೂ ಸಮಯ ಮೀಸಲಿಡಬೇಕು.

ನಿಮಗೆ ಕುಟುಂಬದ ಸಹಕಾರ ಸಿಕ್ಕಿದೆಯೇ?

ನನ್ನ ತಾಯಿ ತಂದೆ ಸದಾ ನನ್ನ ಮೇಲೆ ಹೆಚ್ಚಿನ ನಂಬಿಕೆ ಇಟ್ಟಿದ್ದರು. ನಾನು ತೆಗೆದುಕೊಂಡ ಎಲ್ಲಾ ಕಠಿಣ ನಿರ್ಧಾರಗಳಿಗೂ ನನಗೆ ಸಾಥ್‌ ನೀಡಿದರು. ನಾನು ಕೆಲಸಕ್ಕೆ ಸೇರಿದಾಗಿನಿಂದ ನನ್ನ ತಾಯ್ತನದ ಕರ್ತವ್ಯಗಳನ್ನು ನಮ್ಮಮ್ಮನೇ ನಿರ್ವಹಿಸಿದ್ದಾರೆ, ಅಂದ್ರೆ ನನ್ನ ಮಕ್ಕಳ ಸಂಪೂರ್ಣ ಪಾಲನೆ ಪೋಷಣೆ ಅವರದ್ದೇ! ಮಕ್ಕಳು ತುಂಬಾ ಸಣ್ಣವರಾಗಿದ್ದಾಗ, ಸಂಜೆ ನಾನು ಬರುವುದು ಗಂಟೆಗಟ್ಟಲೇ ತಡವಾದಾಗ, ಅವರು ಕೋಪಗೊಳ್ಳುತ್ತಿದ್ದರು.

ಅವರು 3 ವರ್ಷದವರಾದಾಗ (ಅವಳಿ ಗಂಡು ಮಕ್ಕಳು), ನಾನು ಕೆಲಸದಿಂದ 2 ವರ್ಷ ಬ್ರೇಕ್‌ ತೆಗೆದುಕೊಂಡೆ. ಆಗ ನನಗೆ ತಾಯ್ತನದ ಕರ್ತವ್ಯ, ಅದರ ಸುಖ ಮುಖ್ಯವಾಗಿತ್ತು. ಈ ಕಾರಣ ಅಜ್ಜಿ, ಮಗಳು, ಮೊಮ್ಮಕ್ಕಳ ಬಾಂಧವ್ಯ ಗಟ್ಟಿ ಆಯ್ತು. ಇಂದು ನಾನು ಕೆರಿಯರ್‌ನಲ್ಲಿ ಸಾಧಿಸಿರುವ ಯಶಸ್ಸು ಕಂಡು ನನ್ನ ಮಕ್ಕಳು ಹೆಮ್ಮೆ ಪಡುತ್ತಾರೆ. ಪ್ರತಿದಿನ ನಾನು ಆಫೀಸಿನಿಂದ ಮನೆಗೆ ಹೋದರೆ, ಅಂದು ಏನೇನು ಮಾಡಿದ್ದೆ ಎಂದು ಮರೆಯದೆ ವಿಚಾರಿಸುತ್ತಾರೆ. ಹೀಗಾಗಿ ಉದ್ಯೋಗಸ್ಥ ವನಿತೆಯರು ತಮ್ಮ ಮಕ್ಕಳ ಜೊತೆ ಹೆಚ್ಚು ಹೆಚ್ಚು ಮಾತನಾಡಿ, ತಾವೇನು ಮಾಡುತ್ತಿದ್ದೇವೆ ಎಂದು ಅವರಿಗೆ ಮನವರಿಕೆ ಮಾಡಿಕೊಡಬೇಕು.

ನಿಮ್ಮ ಆಂತರಿಕ ಶಕ್ತಿ ಯಾವುದು?

ವಿನಮ್ರ ನಡವಳಿಕೆ ಮತ್ತು ಹಿಡಿದ ಕೆಲಸವನ್ನು ಪೂರೈಸುವ ಶ್ರದ್ಧೆ, ನಿಷ್ಠೆಗಳು. ಈ ವಿಷಯಗಳು ನನಗೆ ಹೆಚ್ಚಿನ ಶಕ್ತಿ ನೀಡುತ್ತವೆ. ನಾನು ಯಾವುದೇ ಕೆಲಸ, ಟಾಸ್ಕ್ ಅಥವಾ ಜನರನ್ನು ಅವರ ಯಶಸ್ಸಿನಿಂದ ಅಳೆಯಲು ಹೋಗುವುದಿಲ್ಲ. ನಾನು ಎಲ್ಲರೊಂದಿಗೂ  ಒಂದೇ ತರಹ ನಡೆದುಕೊಳ್ಳುತ್ತೇನೆ. ಪ್ರತಿ ಕೆಲಸ ಉತ್ಕೃಷ್ಟವಾಗಿ ಮುಗಿಯುವಂತೆ ನೋಡಿಕೊಳ್ಳುವೆ.

ಗ್ರಾಮೀಣ ಪ್ರದೇಶಗಳಲ್ಲಿ ಇದುವರೆಗೂ ಸ್ಯಾನಿಟರಿ ಪ್ಯಾಡ್‌ ಬಳಕೆ ಕುರಿತು ಜಾಗೃತಿಯೇ ಇಲ್ಲ. ಈ ಕುರಿತಾಗಿ ಏನು ಹೇಳುತ್ತೀರಿ?

ಹಳ್ಳಿಗಾಡು ಪ್ರದೇಶ ಮಾತ್ರವಲ್ಲ, ನಗರಗಳ ಎಷ್ಟೋ ಭಾಗಗಳಲ್ಲೂ ಕೂಡ ಪರಿಸ್ಥಿತಿ ಹೀಗೇ ಇದೆ. ಆದರೆ ಹಳ್ಳಿಗಳಲ್ಲಿ ಹೆಚ್ಚಿನ ಕಷ್ಟಗಳಿವೆ. ಅಂಥ ಸಂದರ್ಭದಲ್ಲಿ ಮಹಿಳೆಯರು ಈಗಲೂ ಹಳೆ ಬಟ್ಟೆ ಉಪಯೋಗಿಸುತ್ತಾರೆ. ಇದರಿಂದ ಸೋಂಕು ತಗುಲುವ ಸಾಧ್ಯತೆ ಹೆಚ್ಚು. ಇಂಥ ಸೋಂಕು ತಗುಲಬಾರದೆಂಬ ದೃಷ್ಟಿಯಿಂದಲೇ ನಾನು ಮಹಿಳೆಯರಿಗೆ ಪ್ಯಾಡ್‌ ಬಳಸಲು ಹೇಳುತ್ತಿರುತ್ತೇನೆ. ಇಲ್ಲಿ ಜಾಗೃತಿಯ ಕೊರತೆಗೆ ಕಾರಣ ಮಹಿಳೆಯರ ಮನೋಭಾವ ಕೂಡ. ತಮಗಾಗಿ ಅವರು ತಿಂಗಳಿಗೆ 70-80 ರೂ. ಖರ್ಚು ಮಾಡಲಿಕ್ಕೂ ಹಿಂಜರಿಯುತ್ತಾರೆ.

ಮಹಿಳಾ ಸಶಕ್ತೀಕರಣದ ಬಗ್ಗೆ ಏನು ಹೇಳ್ತೀರಿ?

ಇದರ ಆರಂಭ ಆಗುವುದೇ ಮನೆಯಿಂದ, ತಾಯಿತಂದೆ ಅದಕ್ಕೆ ಪ್ರೋತ್ಸಾಹ ಕೊಡಬೇಕು. ಹೆಣ್ಣುಗಂಡು ಮಕ್ಕಳಿಬ್ಬರೂ ಒಂದೇ ಎಂಬ ಭಾವನೆಯಿಂದ ಬೆಳೆಸಿದರೆ, ಹಳೆಯ ಕಂದಾಚಾರ ಕೈಬಿಟ್ಟರೆ, ಇಲ್ಲೇ ಅರ್ಧ ಯುದ್ಧ ಗೆದ್ದಂತೆ!

– ಬಿ. ಪೂಜಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ