ಸ್ಮೃತಿ ಮಂಧಾನಾ ಭಾರತೀಯ ಮಹಿಳಾ ಕ್ರಿಕೆಟ್ ಟೀಮಿನ ಯಶಸ್ವೀ ಕ್ರೀಡಾಪಟು. 22ರ ಸ್ಮೃತಿ ಈ ಆಟದಲ್ಲಿ ಇದುವರೆಗೂ ಹಲವು ಅಮೋಘ ಸಾಧನೆಗಳನ್ನು ಮಾಡಿದ್ದಾರೆ. ಈಕೆ 2013ರ ಒಂದು ದಿನದ ಅಂತಾರಾಷ್ಟ್ರೀಯ ಕ್ರಿಕೆಟ್ ಮ್ಯಾಚ್ನಲ್ಲಿ ದ್ವಿಶಕ ಬಾರಿಸಿದ ಮೊದಲ ಭಾರತೀಯ ಮಹಿಳೆ ಎನಿಸಿದರು. ಈಕೆ ಗುಜರಾತ್ ವಿರುದ್ಧ ಮಹಾರಾಷ್ಟ್ರಕ್ಕಾಗಿ ಆಡುವಾಗ ಸ್ಟೇಟ್ ಝೋನ್ ಅಂಡರ್ 19 ಟೋರ್ನ್ಮೆಂಟ್ನಲ್ಲಿ 150 ಬಾಲ್ಸ್ ಗೆ 224 ನಾಟ್ಔಟ್ ಆಗಿದ್ದು ಮತ್ತೊಂದು ದಾಖಲೆ!
ತನ್ನ ಕೆರಿಯರ್ನ ಮಹತ್ವಪೂರ್ಣ ದಾಖಲೆಗಳಲ್ಲಿ ಈಕೆ ಸಾಧಿಸಿದ ಮತ್ತೊಂದು ವಿಜಯ, ಜೂನ್ 2018ರಲ್ಲಿ ಭಾರತೀಯ ಕ್ರಿಕೆಟ್ ಕಂಟ್ರೋಲ್ ಬೋರ್ಡ್ನಿಂದ `ಸರ್ವಶ್ರೇಷ್ಠ ಅಂತಾರಾಷ್ಟ್ರೀಯ ಮಹಿಳಾ ಕ್ರಿಕೆಟರ್’ ಎಂಬ ಪುರಸ್ಕಾರಕ್ಕೆ ಪಾತ್ರವಾದುದು. ಇಷ್ಟಲ್ಲದೆ ಡಿಸೆಂಬರ್ 2018ರಲ್ಲಿ ಈಕೆಗೆ `ರಚೇಲ್ ಫ್ಲಿಂಟ್ ಅವಾರ್ಡ್’ ನೀಡಿ ಸನ್ಮಾನಿಸಿತು. ಸ್ಮೃತಿ ಸರ್ವಶ್ರೇಷ್ಠ ಮಹಿಳಾ ಪ್ರಶಸ್ತಿಯನ್ನೂ ಗಳಿಸಿದ್ದಾರೆ. ಸ್ಮೃತಿ ಜೊತೆ ನಡೆಸಿದ ಸಂಭಾಷಣೆ :
ಈ ಮಟ್ಟ ತಲುಪಲು ನೀವು ಯಾವ ಯಾವ ಸಂಘರ್ಷ ಎದುರಿಸಬೇಕಾಯಿತು?
ನೀವು ಉತ್ತಮ ಪ್ರದರ್ಶನ ನೀಡದಿದ್ದಾಗ, ಕೇವಲ ಹೆಣ್ಣು ಎಂಬ ಒಂದೇ ಕಾರಣಕ್ಕೆ ಈ ಸ್ಥಾನದಲ್ಲಿದ್ದೀರಿ ಎಂದರೆ, ಮುಂದೊಂದು ದಿನ ನೀವು ಅದಕ್ಕೆ ದುಬಾರಿ ಬೆಲೆ ತೆರಬೇಕಾದೀತು. ಒಂದು ಕಡೆ ನನ್ನೆದುರಿನಲ್ಲೇ ಪುರುಷ ಕ್ರೀಡಾಪಟುಗಳಿಗೆ ಅವರ ಆಟ, ಪ್ರದರ್ಶನಗಳ ಬಗ್ಗೆ ಮಾತ್ರ ಕೇಳುತ್ತಾ, ನನ್ನನ್ನು ಮಾತ್ರ ಹೆಣ್ಣೆಂಬ ಕಾರಣಕ್ಕೆ ಅನಗತ್ಯ ಪ್ರಶ್ನೆ ಕೇಳುವುದು ಬಹಳ ಇರಿಸುಮುರಿಸು ತರಿಸುತ್ತದೆ.
ಕ್ರಿಕೆಟ್ ಎಂದರೆ ಗಂಡು ಹುಡುಗರ ಆಟ ಎಂದೇ ಪ್ರಸಿದ್ಧಿ. ನೀವು ಇದರಲ್ಲಿ ಹೇಗೆ ಆಸಕ್ತಿ ಬೆಳೆಸಿಕೊಂಡಿರಿ?
ನಾನು 6 ವರ್ಷದವಳಾಗಿದ್ದಾಗ, ನನ್ನ ತಂದೆ ಅಣ್ಣ ಕ್ರಿಕೆಟ್ ಆಡುತ್ತಿದ್ದರು. ನಾನು ಅಣ್ಣನ ಪ್ರಾಕ್ಟೀಸ್ಗೆ ಬಹಳ ಸಹಾಯ ಮಾಡುತ್ತಿದ್ದೆ. ಅದೇ ನಿಟ್ಟಿನಲ್ಲಿ ನನಗೂ ಕ್ರಿಕೆಟ್ನತ್ತ ಆಸಕ್ತಿ ಬೆಳೆಯಿತು.
ಒಬ್ಬ ಹೆಣ್ಣಾಗಿ ನೀವು ಪ್ರಗತಿಪಥದಲ್ಲಿ ಮುಂದುವರಿಯಲು ಎಂದಾದರೂ ಅಸುರಕ್ಷತೆ ಎನಿಸಿತೇ?
ಇಲ್ಲ, ನನ್ನೊಂದಿಗೆ ಹಾಗೇನೂ ಆಗಿಲ್ಲ. ನನ್ನ ಪಕ್ಕಾ ವಿಶ್ವಾಸ ಎಂದರೆ, ಯಾವ ಮಹಿಳೆಯೇ ಇರಲಿ, ಅಕ್ಷರಶಃ ಪೂರ್ತಿ ಮನಸ್ಸಿಟ್ಟು ತನ್ನ ಕೆರಿಯರ್ ಅಭಿವೃದ್ಧಿಪಡಿಸಿಕೊಳ್ಳಲು ಯತ್ನಿಸಿದರೆ, ಅವಳ ಕನಸು ನನಸಾಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಒಬ್ಬ ಕ್ರೀಡಾಪಟು ಆದಕಾರಣ, ನಾವು ನಮ್ಮ ಆಟದಲ್ಲಿ ತೀರಾ ಡೌನ್ ಆದರೆ ಈ ರೀತಿ ಅಸುರಕ್ಷತೆಯ ಭಯ ಕಾಡಬಹುದೇನೋ….. ಈ ಭಾವನೆಗೂ ವ್ಯಕ್ತಿ ಗಂಡೋ ಹೆಣ್ಣೋ ಅನ್ನುವುದಕ್ಕೂ ಯಾವುದೇ ಸಂಬಂಧವಿಲ್ಲ.
ಕ್ರಿಕೆಟ್ನ ಒಬ್ಬ ಉದಯೋನ್ಮುಖ ಸ್ಟಾರ್ ಆಗಿ ನೀವು `ನೋ ಮೋರ್ ಕಾಂಪ್ರಮೈಸಸ್’ ಬ್ರಾಂಡ್ನ ಪ್ರಸ್ತಾಪವನ್ನು ಹೇಗೆ ಸಾಕಾರಗೊಳಿಸುತ್ತೀರಿ?
ಗಂಡು-ಹೆಣ್ಣುಮಕ್ಕಳ ನಡುವೆ ಭೇದಭಾವ ತೋರಿಸದ ಕುಟುಂಬಕ್ಕೆ ನಾನು ಸೇರಿದವಳು ಎಂಬ ಹೆಮ್ಮೆ ನನಗಿದೆ. ನನಗೆ ನನ್ನದೇ ಕೆರಿಯರ್ ಆರಿಸಿಕೊಳ್ಳುವ ಸಂಪೂರ್ಣ ಸ್ವಾತಂತ್ರ್ಯವಿತ್ತು. ಇದಕ್ಕೆ ನನ್ನ ಕುಟುಂಬದವರು ಸಹಕರಿಸಿದ್ದಾರೆ. ಮುಖ್ಯವಾಗಿ ಹೆಣ್ಣು ಹೊರ ಪ್ರಪಂಚದಲ್ಲಿ ಕಾಲಿಡುವಾಗ ನಿಮಗೆ ಇದು ಕಷ್ಟ ಅನಿಸಬಹುದು. ಮಹಿಳೆಯರನ್ನು ವ್ಯವಹಾರದ ದೃಷ್ಟಿಯಿಂದ ಮನೆಗೆ ಸೀಮಿತ ಎಂದು ಮಾಡಿಬಿಡುತ್ತಾರೆ. ನಾನಂತೂ ಇಂಥ ಕಡೆ ಫಿಟ್ ಆಗುವವಳಲ್ಲ. ಇದುವರೆಗೂ ಗಂಡು ಹುಡುಗರ ಸಾಮ್ರಾಜ್ಯವಾಗಿದ್ದ ಕ್ರಿಕೆಟ್ ಈಗ ನನ್ನ ಕೆರಿಯರ್ ಆಗಿದೆ. ನಾನು ಭಾರತೀಯ ಮಹಿಳಾ ಕ್ರಿಕೆಟ್ ಬ್ರಾಂಡ್ನ ಭಾಗವಾಗಿದ್ದೇನೆ, ಅದು ಇಂಥ ಕಂದಾಚಾರದ ವ್ಯಹಾರಗಳಿಗೆ ಸೊಪ್ಪು ಹಾಕುವುದಿಲ್ಲ.
ನಾನು ಪೂರ್ತಿ ಆತ್ಮವಿಶ್ವಾಸದಿಂದ ನನ್ನ ಹೆಣ್ತನವನ್ನು ಸ್ವೀಕರಿಸುತ್ತೇನೆ. ನನ್ನ ಕನಸುಗಳನ್ನು ಈ ಮೂಲಕ ಪೂರೈಸಿಕೊಳ್ಳುತ್ತೇನೆ ಹಾಗೂ ಸಶಕ್ತ ಸಮಾಜದ ಸಮರ್ಥನೆಗಾಗಿ ಎದ್ದು ನಿಲ್ಲುತ್ತೇನೆ. ಒಬ್ಬ ಹೆಣ್ಣಾದ ಕಾರಣ ಅವಳ ದೈಹಿಕ ಕೊರತೆಯ ನೆಪವಾಗಿ ಸಾಫ್ಟ್ ಕಾರ್ನರ್ ತೋರಿಸುವ ಅಗತ್ಯವಿದೆ ಎಂದು ನಾನೆಂದೂ ಭಾವಿಸುವುದಿಲ್ಲ. ಒಂದು ಹಂತದವರೆಗೆ ಇಂಥ ನೆಪಗಳು ನಿಮಗೆ ಸೋಲುಗೆಲುವಿನ ಶಕ್ತಿ ಭರಿಸಲು ಅನುಭವವಾಗುತ್ತವೆ, ಶಾಶ್ವತವಾಗಲ್ಲ.
ನೀವು ಯಾರನ್ನು ನಿಮ್ಮ ಮಾರ್ಗದರ್ಶಕರು ಎಂದು ಭಾವಿಸುತ್ತೀರಿ?
ನಾನು ನನ್ನ ಅಣ್ಣ, ತಂದೆಯವರನ್ನೇ ನನ್ನ ಮಾರ್ಗದರ್ಶಕರು, ಆದರ್ಶ ಎಂದು ಭಾವಿಸುತ್ತೇನೆ. ಅವರ ನೆರವಿನಿಂದಲೇ ಹಂತ ಹಂತವಾಗಿ ನಾನು ಈ ಮಟ್ಟ ತಲಪಿದ್ದೇನೆ. ನಾನು ಕ್ರಿಕೆಟ್ ನೋಡುವಾಗೆಲ್ಲ ನನಗೆ ಮ್ಯಾಥ್ಯೂ ಹೇಡನ್ ಬಹಳ ಇಷ್ಟವಾಗುತ್ತಿದ್ದರು. ನಂತರ ಶ್ರೀಲಂಕಾದ ಸಂಗಕ್ಕಾರಾರ ಕಲಾತ್ಮಕ ಆಟವನ್ನು ಬಹಳ ಪ್ರಶಂಸಿಸುತ್ತಿದ್ದೆ. ಆಮೇಲೆ ಧೋನಿ, ಈಗ ವಿರಾಟ್ರ ಫ್ಯಾನ್ ಆಗಿದ್ದೇನೆ. ಇವರುಗಳ ಆಟ ನನಗೆ ಹೆಚ್ಚು ಸ್ಕೋರ್ ಮಾಡಲು ಪ್ರೇರಕ.
– ಪಿ. ಗಿರಿಜಾ