ಸಿಇಓ ಹಾಗೂ ಸಂಸ್ಥಾಪಕಿ, ಲೈವ್‌ರೋಡ್‌.ಕಾಮ್

ಭಾರತದ ಪ್ರಥಮ ಆನ್‌ಲೈನ್‌ ಸೋಶಿಯಲ್ ಡಿಸ್ಕವರಿ ಫ್ಲಾಟ್‌ಫಾರ್ಮ್ ನ್ನು ಸ್ಥಾಪನೆ ಮಾಡಿದ ಖ್ಯಾತಿ ಸುಚಿ ಮುಖರ್ಜಿಯವರಿಗೆ ಸಲ್ಲುತ್ತದೆ. 1994ರಲ್ಲಿ ಕೇಂಬ್ರಿಜ್‌ ವಿ.ವಿಯಲ್ಲಿ ಅಧ್ಯಯನ ಮಾಡುವಾಗ ಕೇಂಬ್ರಿಜ್‌ ಕಾಮನ್‌ ವೆಲ್ತ್ ಟ್ರಸ್ಟ್ ಸ್ಕಾಲರ್‌ಶಿಪ್‌ ಪಡೆದುಕೊಂಡ ಮೊದಲ ಭಾರತೀಯ ಮಹಿಳೆ ಎನಿಸಿಕೊಂಡಿದ್ದರು. ದೆಹಲಿಯ ಸೇಂಟ್‌ ಸ್ಟೀಫನ್ಸ್ ಕಾಲೇಜಿನಿಂದ ಪದವಿ ಹಾಗೂ ಲಂಡನ್‌ ಸ್ಕೂಲ್‌ ಆಫ್‌ ಎಕನಾಮಿಕ್ಸ್ ನಿಂದ ಫೈನಾನ್ಸ್ ಹಾಗೂ ಎಕನಾಮಿಕ್ಸ್ ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರು.

ಸುಚಿ ಈಬೆ ಕಂಪನಿಗೆ ಬ್ರಿಟನ್‌ನಲ್ಲಿ ತನ್ನ ವಹಿವಾಟನ್ನು ವಿಸ್ತರಿಸಿಕೊಳ್ಳಲು ಬಹಳ ಪ್ರಯತ್ನ ಮಾಡಿದರು. ಅವರು ಸ್ಟ್ರೆಫ್‌ನ ಎಗ್ಸಿಕ್ಯೂಟಿವ್‌ ಮ್ಯಾನೇಜ್‌ಮೆಂಟ್‌ ಟೀಮ್ ನಲ್ಲೂ ಕೂಡ ಸೇರ್ಪಡೆಗೊಂಡರು. ಆ ಬಳಿಕ ಬ್ರಿಟನ್ನಿನ ಅತಿದೊಡ್ಡ ಆನ್‌ಲೈನ್‌ ಕ್ಲಾಸಿಫೈಡ್‌ ಬಿಸ್‌ನೆಸ್‌ನ ಕಾರ್ಯಕಾರಿ ನಿರ್ದೇಶಕರಾಗಿ ಕೂಡ ಯಶಸ್ವಿಯಾದರು.

ಆನ್‌ಲೈನ್‌ ಇಂಡಸ್ಟ್ರಿಯಲ್ಲಿ ಕ್ರಾಂತಿ ತಂದ ಸುಚಿಯವರ ಕ್ರಾಂತಿಕಾರಿ ನಿರ್ಧಾರವೇ ಭಾರತದ ಅತ್ಯಂತ ಜನಪ್ರಿಯ ಶಾಪಿಂಗ್‌ ಡೆಸ್ಟಿನೇಶನ್‌ ಲೈವ್‌ರೋಡ್‌.ಕಾಮ್ ನ ಸಂಸ್ಥಾಪಕಿ ಹಾಗೂ ಸಿಇಓ ಆಗಿ ಪಡಿಯಚ್ಚು ಮೂಡಿಸಿತು.

ಸುಚಿ ಮುಖರ್ಜಿಯವರ ಜೊತೆ ನಡೆಸಿದ ಸಂದರ್ಶನದ ಅಂಶಗಳು :

ನೀವು ಇಲ್ಲಿಯವರೆಗೆ ತಲುಪಲು ಯಾವ ಯಾವ ಸವಾಲುಗಳನ್ನು ಎದುರಿಸಬೇಕಾಯಿತು?

17 ವರ್ಷಗಳ ಬಳಿಕ ನಾನು ಭಾರತಕ್ಕೆ ವಾಪಸ್ಸಾದಾಗ ನನ್ನದೇ ವೃತ್ತಿಗೆ ಸಂಬಂಧಪಟ್ಟ ಕೆಲವು ವ್ಯಕ್ತಿಗಳು ನನಗೆ ಪರಿಚಿತರಾಗಿದ್ದರು. ನನ್ನ ಮಗುವಿಗೆ ಆಗ ಕೇವಲ ಒಂದೂವರೆ ವರ್ಷವಾಗಿತ್ತು. ಆಗ ನಾನು ಮನೆ ಹಾಗೂ ಬಿಸ್‌ನೆಸ್‌ನ್ನು ಏಕಕಾಲಕ್ಕೆ ಸಂಭಾಳಿಸಿದೆ. ಅದು ಅತ್ಯಂತ ಕಠಿಣ ಕೆಲಸ. ಪ್ರತಿಯೊಬ್ಬ ವ್ಯಕ್ತಿಗೂ ಯಶಸ್ವಿಯಾಗಲು ಸಾಕಷ್ಟು ಸಂಘರ್ಷ ನಡೆಸಬೇಕಾಗುತ್ತದೆ. ನೀವು ಯಾವ ಕೆಲಸ ಮಾಡುತ್ತಿದ್ದೀರೊ, ಅದರಲ್ಲಿ ನಿಮ್ಮನ್ನು ನೀವು ಸಂಪೂರ್ಣ ತೊಡಗಿಸಿಕೊಳ್ಳಬೇಕಾಗುತ್ತದೆ. ವೈಫಲ್ಯಗಳನ್ನು ಸ್ವೀಕರಿಸಲು ಸದಾ ಸಿದ್ಧರಾಗಿರುವುದು ಹಾಗೂ ಪ್ರತಿಯೊಂದು ದುಃಸ್ಥಿತಿಯಿಂದಲೂ ಕಲಿಯುವ ಅಗತ್ಯವಿರುತ್ತದೆ.

ನೀವು ನಿಮ್ಮ ವೃತ್ತಿ ಹಾಗೂ ಕುಟುಂಬ ಎರಡರಲ್ಲೂ ಹೇಗೆ ಸಮತೋಲನ ಕಾಪಾಡುವಿರಿ?

ನನ್ನ ಅಭಿಪ್ರಾಯದಲ್ಲಿ ಸಮತೋಲನ ಎನ್ನುವುದೊಂದು ಮಿಥ್ಯೆ. ಒಬ್ಬ ಉದ್ಯಮಿ ಅವಳು ತಾಯಿಯೂ ಹೌದು, ಪಾಲುದಾರಳೂ ಹೌದು, ಮಗಳು ಕೂಡ ಹೌದು. ನೀವು ಯಾವುದೇ ದಿನ ಸಮತೋಲನದ ಸ್ಥಿತಿಯನ್ನು ಎದುರಿಸಬೇಕಾಗಿ ಬರುತ್ತದೆ. ಸಮತೋಲನದ ಸ್ಥಿತಿಯ ಬಗ್ಗೆ ಒತ್ತು ಕೊಡುವ ಬದಲು, ನಾನು ಹೇಗೆ ಸಮಯ ಕಳೆಯಬೇಕು ಎಂಬುದರ ಬಗ್ಗೆ ಗಮನಕೊಡಬೇಕು. ಬಿಸ್‌ನೆಸ್‌ನ್ನು ಹೇಗೆ ನಿರ್ವಹಿಸಬೇಕು, ನಾವು ಹೇಗೆ ಇರಬೇಕು, ಎಂತಹ ಸಿಬ್ಬಂದಿಯನ್ನು ಆಯ್ಕೆ ಮಾಡಬೇಕು ಎಂಬುದರ ಬಗ್ಗೆ ಪ್ರಾಮುಖ್ಯತೆ ಕೊಡಬೇಕು.

ಉದ್ಯೋಗಸ್ಥ ಮಹಿಳೆಯರಿಗೆ ನೀವೇನು ಸಲಹೆ ಕೊಡಲು ಇಚ್ಛಿಸುವಿರಿ?

ನಿಮ್ಮ ಕೆರಿಯರ್‌ ಸದಾ ಏಕರೀತಿಯಲ್ಲಿ ಇರದೆ ಹೊಸ ಹೊಸ ಪ್ರಯೋಗ ಮಾಡುತ್ತಾ ಇರಿ. ಏನನ್ನಾದರೂ ಹೊಸದನ್ನು ಸೃಷ್ಟಿಸಿ, ಅಪಾಯ ಎದುರಿಸುವ ಧೈರ್ಯ ನಿಮಗಿರಬೇಕು. ನಿಮ್ಮೆದುರು ಹಲವು ಏರಿಳಿತಗಳು ಕಂಡುಬರಬಹುದು. ನೀವು ನಿಮ್ಮ ಹೃದಯದ ಮಾತನ್ನು ಆಲಿಸಿ ಬಹಳ ಉನ್ನತಕ್ಕೇರಬಹುದು. ಒಟ್ಟಾರೆ ನೀವು ನಿಮ್ಮ ಗುರಿ ಈಡೇರಿಸಿಕೊಳ್ಳುವುದರತ್ತ ಗಮನಹರಿಸಬೇಕು.

ಬಿಸ್‌ನೆಸ್‌ ಪ್ಲಾನಿಂಗ್‌ ಮಾಡುವಾಗ ನಿಮ್ಮ ಮುಖ್ಯ ಉದ್ದೇಶ ಏನಾಗಿರುತ್ತದೆ?

ಉದ್ಯಮಕ್ಕಾಗಿ ನನ್ನದು ಯಾವಾಗಲೂ ನೇರ ದೃಷ್ಟಿಕೋನ. ಅಂದರೆ ಸೂಕ್ತ ಕೆಲಸಕ್ಕಾಗಿ ಸೂಕ್ತ ಜನರ ಆಯ್ಕೆ ಹಾಗೂ ಅವರಿಗೆ ಸರಿಯಾದ ರೀತಿಯಲ್ಲಿ ಕೆಲಸದ ಹಂಚಿಕೆ ಮಾಡಬೇಕು. ನಾನು ಜವಾಬ್ದಾರಿಗೆ ಅನುಗುಣವಾಗಿ ಜನರನ್ನು ನೇಮಿಸುತ್ತೇನೆ.

ಮಹಿಳೆಯರ ಅಭಿವೃದ್ಧಿಯ ದೃಷ್ಟಿಯಲ್ಲಿ ಭೇದಭಾವದ ಬಗ್ಗೆ ನಿಮ್ಮ ಪ್ರತಿಕ್ರಿಯೆ ಏನು?

ಪಕ್ಷಪಾತ ಅಥವಾ ಭೇದಭಾವ ಪ್ರತಿಯೊಂದು ಕಡೆ ಇದ್ದೇ ಇದೆ. ಆದರೆ ಲೈವ್‌ರೋಡ್‌ನಲ್ಲಿ ಅದಕ್ಕೆ ಅವಕಾಶ ಕೊಡಬಾರದು ಎಂಬುದು ನನ್ನ ಇಚ್ಛೆ. ಲೈವ್‌ರೋಡ್‌ನಲ್ಲಿ ಶೇ.30ರಷ್ಟು ಮಹಿಳೆಯರಿದ್ದಾರೆ. ಆ ಸಂಖ್ಯೆ ಇದೀಗ ಶೇ.45ನ್ನು ತಲುಪಿದೆ. ನಾವು ಅಪ್ರೈಸಲ್ ಮತ್ತು ಪ್ರಮೋಶನ್‌ಗೆ ಸಂಬಂಧಪಟ್ಟ ಚರ್ಚೆಯಲ್ಲಿ ಎಲ್ಲರನ್ನು ಸೇರ್ಪಡೆಗೊಳಿಸಲು ಪ್ರಯತ್ನ ಮಾಡುತ್ತೇವೆ. ನಿರ್ಣಯ ತೆಗೆದುಕೊಳ್ಳುವ ಮುನ್ನ ಮತ್ತು ಫೈನ್‌ ಕಂಜರ್ವೇಷನ್‌ ಸಂದರ್ಭದಲ್ಲಿ ಲಿಂಗಭೇದವನ್ನು ಹೊರಗಿಡುತ್ತೇವೆ. ಸಮರ್ಥ ವ್ಯಕ್ತಿಗಷ್ಟೇ ಜವಾಬ್ದಾರಿ ವಹಿಸಿಕೊಡುತ್ತೇವೆ. ನಾನು ಕನಿಷ್ಠ ಶೇ.30ರಷ್ಟು ಮಹಿಳೆಯರಿಗೆ ಪ್ರಾಶಸ್ತ್ಯ ಕೊಡುತ್ತೇನೆ.

ಬಿಡುವಿನ ವೇಳೆಯಲ್ಲಿ ನಿಮ್ಮ ಚಟುವಟಿಕೆಗಳೇನು?

ಓದುವುದು, ಮಗಳು ಮಾಯಾ ಮತ್ತು ಮಗ ಆದಿತ್‌ ಜೊತೆಗೆ ಕಾಲ ಕಳೆಯುವುದು, ಪತಿಯ ಜೊತೆಗೆ ಹೊಸ ಹೊಸ ಜಾಗಗಳಿಗೆ ಸುತ್ತುವುದು ಇಷ್ಟವಾಗುತ್ತದೆ.

– ಪಿ. ಗಿರಿಜಾ

Tags:
COMMENT