ಎಲ್ಲೆಲ್ಲೂ ತಾಪಸೀ!
ಬ್ಯಾಕ್ ಟು ಬ್ಯಾಕ್ ಯಶಸ್ವೀ ಚಿತ್ರಗಳನ್ನು ನೀಡುವುದು ಘಟಾನುಘಟಿ ನಟರಿಗೇ ಸಾಧ್ಯವಾಗುತ್ತಿಲ್ಲ, ಒಬ್ಬ ನಟಿಯಾಗಿ ತಾಪಸೀ ಪನ್ನು ಇದನ್ನು ಯಶಸ್ವಿಯಾಗಿ ಸಾಧಿಸಿದ್ದಾಳೆ. ಈ ಪುರುಷಪ್ರಧಾನ ಉದ್ಯಮದಲ್ಲಿ ತನ್ನ ನಟನೆಯ ಸಾಧನೆ ಒಂದರಿಂದಲೇ ಇಂದು ತಾಪಸೀ ಏರಿರುವ ಮಟ್ಟ, ಅದನ್ನು ಉಳಿಸಿಕೊಂಡಿರುವ ಪರಿ ಶ್ಲಾಘನೀಯ! `ಬದ್ಲಾ’ ಚಿತ್ರದ ಸಕ್ಸೆಸ್ ನಂತರ ಆಕೆಯ `ಸಾಂಡ್ ಕೀ ಆಂಖ್’ ಚಿತ್ರ ಸಹ ಅಷ್ಟೇ ಹೆಸರು ಮಾಡಿದೆ. ಆಲ್ ದಿ ಬೆಸ್ಟ್ ತಾಪಸೀ!
ನಾವೆಂದೂ ಒಂದೇ!
ಆಲಿಯಾ ಮತ್ತು ರಣಬೀರ್ ಈಗ ಎಲ್ಲೆಲ್ಲೂ ಪಾರ್ಟಿಗಳಲ್ಲಿ ಮಿಂಚುತ್ತಿದ್ದಾರೆ. ಇತ್ತೀಚೆಗೆ ಒಂದು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ, ಇಬ್ಬರಿಗೂ ಪ್ರಶಸ್ತಿ ಲಭಿಸಿದಾಗ, ಎಲ್ಲಾ ಸಭಿಕರ ಮುಂದೆ ಇವರು ಖುಲ್ಲಂಖುಲ್ಲ ತಮ್ಮ ಪ್ರೇಮ ಪ್ರದರ್ಶಿಸುತ್ತಾ ವೇದಿಕೆಗೆ ಬಂದರು. ಇದೇನೂ ಸಭಿಕರಿಗೆ ಹೊಸ ಶಾಕಿಂಗ್ ನ್ಯೂಸ್ ಅಲ್ಲ, ಏಕೆಂದರೆ ಇವರ ಪ್ರೇಮದ ಖಿಚಡಿ ಸಾಕಷ್ಟು ದಿನಗಳಿಂದ ಕುದಿಯುತ್ತಿದೆ. ರಣಬೀರ್‌ನ ಮಾಜಿ ಪ್ರೇಯಸಿ (?) ಸಹ ಇವರ ಈ ಸಂಬಂಧದಿಂದ ದಿಲ್‌ಖುಷ್!
ಊರ್ಮಿಳೆಯ ರಾಜಕೀಯ
ಚುನಾವಣೆ ಸಮೀಪಿಸುತ್ತಿದ್ದಂತೆ ಸಿನಿಮಾ ಮಂದಿ ರಾಜಕೀಯ ಪ್ರವೇಶಿಸುವುದು ಹಳೆ ಕಾಲದಿಂದಲೂ ನಡೆದು ಬಂದ ಕಥೆ. ಈ ಬಾರಿಯಂತೂ ಲೋಕಸಭಾ ಚುನಾವಣೆಗೆ ಬಾಲಿವುಡ್ ತಾರೆಯರ ದಂಡೇ ತುಂಬಿತ್ತು. ಎಷ್ಟೋ ಕಾಲದಿಂದ ಲೈಮ್ ಲೈಟ್‌ನಿಂದ ದೂರ ಉಳಿದಿರುವ `ರಂಗೀಲಾ’ ಯುವತಿ ಊರ್ಮಿಳಾ, ಕಾಂಗ್ರೆಸ್ ಸೇರಿದಳು. ವಿಷಯ ತಾರೆಯರ ರಾಜಕೀಯ ಎಂಟ್ರಿ ಅಲ್ಲ, ಈ ನಟನಟಿಯರು ಇಂಥ ಕ್ಷೇತ್ರಗಳಲ್ಲಿ ನಿಜಕ್ಕೂ ಸೇವೆ ಮಾಡುತ್ತಾರೆಯೇ? ಎಂಬುದು. ಅತ್ತ ಪಕ್ಷದ ಹಿರಿಯ ಕಾರ್ಯಕರ್ತರು ಸಹ ಬೇಸತ್ತಿದ್ದಾರೆ, ವರ್ಷಗಟ್ಟಲೇ ದುಡಿಯುವವರು ತಾವು…. ಕೊನೆಯಲ್ಲಿ ಟಿಕೆಟ್ ಗಿಟ್ಟಿಸುವವರು ಗ್ಲಾಮರ್ ಮಂದಿ!
ಮಾತು ಕಲಿತ ಹೃತಿಕ್ ರೋಷನ್
ಇದೇನು ಶೀರ್ಷಿಕೆ? ಈ ಕಾಲದಲ್ಲಿ ಈ ವಯಸ್ಸಿನ ಹೃತಿಕ್ ಮಾತು ಕಲಿಯುವುದೆಂದರೇನು ಎಂದು ಬೆರಗಾಗದಿರಿ. `ಮಾತುಗಾರಿಕೆ’ ಒಂದು ಕಲೆ ಎಂಬುದು ನೆನಪಿರಲಿ. ನಮ್ಮ ಮಾತೇ ಮುಂದಿರುವವರ ಮೇಲೆ ನಮ್ಮ ವ್ಯಕ್ತಿತ್ವದ ಛಾಪೊತ್ತಲು ಸಾಧ್ಯ ಆಗಿಸುವಂಥದ್ದು. ಒಂದು ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಬಂದಿದ್ದ ಹೃತಿಕ್, ಈ ವಿಷಯದ ಕುರಿತು ಬೆಳಕು ಚೆಲ್ಲುತ್ತಾ, ತಾನು ಹಿಂದೆಲ್ಲ ವೇದಿಕೆಯಲ್ಲಿ ದುಬೈ ಎಂಬ ಶಬ್ದ ಉಚ್ಚರಿಸಲು ಎಷ್ಟು ತಿಣುಕಾಡುತ್ತಿದ್ದೆ ಎಂದು ಹೇಳಿಕೊಂಡ. ಹಾಗಾಗಿ ಬಾಲಿವುಡ್‌ಗೆ ಎಂಟ್ರಿ ಪಡೆದಾಗಿನಿಂದ ಈವರೆಗೂ ಸಹ ಆತ 1 ಗಂಟೆ ಕಾಲ ಸ್ಪೀಚ್ ಥೆರಪಿ ಟ್ರೇನಿಂಗ್ ಪಡೆಯುತ್ತಿದ್ದಾನೆ. ಬಿಕ್ಕಲ ಹೇಗೆ ಮಾತು ಕಲಿತ ಎಂದು ಗೊತ್ತಾಯ್ತೇ?
ಜಾಹ್ನವಿಯ ರೂಹ್ ಅಫ್ಝಾ
ಶ್ರೀದೇವಿಯ ಮಗಳು ಜಾಹ್ನವಿ ಇದೀಗ ರಾಜ್‌ಕುಮಾರ್ ರಾವ್ ಜೊತೆ ಜೋಡಿ ಆಗಿ ರೊಮಾನ್ಸ್ ನಡೆಸಲಿದ್ದಾಳೆ. ಇಬ್ಬರೂ ಒಟ್ಟಾಗಿ ಬರಲಿರುವ ಹಾರರ್ ಕಾಮಿಡಿ `ರೂಹ್‌ಅಪ್ಝಾ’ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಜಾನು ಡಬಲ್ ರೋಲ್ ಮಾಡಲಿದ್ದಾಳಂತೆ. ಹಿಂದೆ ಶ್ರೀದೇವಿ ನಟಿಸಿದ್ದ `ಚಾಲ್‌ಬಾಝ್’ (ಸೀತಾ ಔರ್ ಗೀತಾ ರೀಮೇಕ್) ಸೂಪರ್‌ಹಿಟ್ ಎನಿಸಿತ್ತು. ಮಗಳು ಅದೇ ಯಶಸ್ಸನ್ನು ಕಾಣುವಳೇ…..?
ಗುಡುಗಿದ ಕಂಗನಾ
ಫಿಲ್ಮಿ ಸುದ್ದಿಗಳ ಲಿಸ್ಟ್ ನಲ್ಲಿ ಸದಾ ಟಾಪ್‌ನಲ್ಲಿ ಇರಬೇಕೇ? ಅದನ್ನು ನಮ್ಮ ಕಂಗನಾಳದಿಂದ ಕಲಿಯಿರಿ. `ಮಣಿಕರ್ಣಿಕಾ’ ಚಿತ್ರ ತೋಪಾದ ಮೇಲೆ ಆ ಕುರಿತು ದೊಡ್ಡ ಕಾಂಡ ನಡೆಸಿದ ಈ ಮಹಾತಾಯಿ, ಮೊದಲೇ ನಿರ್ದೇಶಕ ಪೆಹ್ಲಾಜ್ ನಿಹ್ಲಾನಿ ತನಗೆ ಒಂದು ಚಿತ್ರ ಆಫರ್ ಮಾಡಿದ್ದರು, ಅದು ಸಾಫ್ಟ್ ಪೋರ್ನ್ ಆದಕಾರಣ ತಾನೇ ಬೇಡವೆಂದು ತಿರಸ್ಕರಿಸಿದ್ದೆ ಎಂದು ಬಡಾಯಿ ಕೊಚ್ಚುತ್ತಿದ್ದಾಳೆ. ಇವಳನ್ನು ಸಪೋರ್ಟ್ ಮಾಡುವವರಿಲ್ಲದ ಕಾರಣ ಒನ್ ಮ್ಯಾನ್ ಆರ್ಮಿ ನಡೆಸುತ್ತಿದ್ದಾಳೆ.
`ಭುಜ್’ನಲ್ಲಿ ಮಿಂಚಲಿರುವ ಅಜಯ್
ಭಾರತೀಯ ಸೇನಾಪಡೆಯ ಸಾಹಸಗಳು ಬಾಲಿವುಡ್ ಮಂದಿಗೆ ಎವರ್‌ಗ್ರೀನ್ ಸಬ್ಜೆಕ್ಟ್. ಇದೇ ಸೀರೀಸ್‌ನಲ್ಲಿ ಮತ್ತೊಂದು ಹೊಸ ಸೇರ್ಪಡೆ : `ಭುಜ್ : ದಿ ಪ್ರೈಡ್ ಆಫ್ ಇಂಡಿಯಾ’ ಈ ಚಿತ್ರದಲ್ಲಿ ಅಜಯ್ ದೇವಗನ್ 1971ರ ಭಾರತ-ಪಾಕಿಸ್ತಾನದ ಯುದ್ಧದ ಅಸಲಿ ಹೀರೋ ವಿಜಯ್ ಕಾರ್ನಿಕ್‌ರ ಪಾತ್ರ ವಹಿಸಲಿದ್ದಾರೆ. ಆ ಕಾಲದಲ್ಲಿ ವಿಜಯ್ ಹಲವು ಮಹಿಳೆಯರ ನೆರವಿನೊಂದಿಗೆ ಗುಜರಾತ್ ಪ್ರಾಂತ್ಯವಾದ ಭವನಗಳ ನಗರ ಭುಜ್ ಪ್ರದೇಶದಲ್ಲಿ `ಏರ್‌ಸ್ಟ್ರಿಪ್’ ರೂಪಿಸಿದ್ದರು, ಅದರ ಸಹಾಯದಿಂದ ಭಾರತೀಯ ಸೇನಾಪಡೆಯ ಸೈನಿಕರು ಶತ್ರು ರಾಷ್ಟ್ರದಿಂದ ನೇರ ನಮ್ಮಲ್ಲಿ ಸುಲಭವಾಗಿ ಇಳಿಯುವ ಸೌಲಭ್ಯವಿತ್ತು. ಇಂಥ ಪಾತ್ರಗಳಲ್ಲಿ ವೀರೋಚಿತವಾಗಿ ನಟಿಸಲು ಅಜಯ್ ಬೆಸ್ಟ್ ಆಯ್ಕೆ!
ಜ್ಯಾಕ್ಲೀನ್ ಎಲ್ಲಿದ್ದೀಯಮ್ಮ?
ದೊಡ್ಡ ದೊಡ್ಡ ತಾರೆಯರೊಂದಿಗೆ ಮಿಂಚಿದ ನಂತರ ಇದ್ದಕ್ಕಿದ್ದಂತೆ ಜ್ಯಾಕ್ಲಿನ್ ಎಲ್ಲೋ ಕಣ್ಮರೆಯಾಗಿದ್ದಾಳೆ. ಇತ್ತೀಚೆಗೆ ಒಬ್ಬ ಕಾಸ್ಟಿಂಗ್ ಡೈರೆಕ್ಟರ್ ಆಫೀಸಿನಿಂದ ಹೊರಬೀಳುತ್ತಿದ್ದ ಈಕೆಯ ಫೋಟೋ ಕ್ಲಿಕ್ ಆಯಿತು. ಜ್ಯಾಕ್ಲೀನ್ ಬಳಿ ಯಾವ ಚಿತ್ರದ ಪ್ರಾಜೆಕ್ಟೂ ಇಲ್ಲ ಎಂಬುದು ಗೊತ್ತಿರುವ ಸಂಗತಿ. ಹೇಗಾದರೂ ತನ್ನ ಕೆರಿಯರ್ ಗ್ರಾಫ್ ಉಳಿಸಿಕೊಳ್ಳಲೆಂದು ಈಕೆ ಎಲ್ಲಾ ನಿರ್ದೇಶಕರ ಕದ ತಟ್ಟುತ್ತಿದ್ದಾಳಂತೆ! ಬಹುಶಃ ಈಕೆಯ ಹಳೆಯ ಫ್ರೆಂಡ್ ಸಾಜಿದ್ ಖಾನ್ ಸಹ ಇವಳನ್ನು ಮರೆತಂತಿದೆ. ಇದೆಲ್ಲ ಬಾಲಿವುಡ್‌ನಲ್ಲಿ ಇದ್ದದ್ದೇ ಕಣಮ್ಮ, ತುಸು ಹುಷಾರಾಗಿರು!
ಅತಿ ಶಕ್ತಿಶಾಲಿ ಪ್ರಿಯಾಂಕಾ
ಅರೆ, ಇಲ್ಲಿ ದೈಹಿಕ ಶಕ್ತಿಯ ಬಗ್ಗೆ ಅಲ್ಲ ಹೇಳಿದ್ದು. ಅಸಲಿಗೆ ಮಾಸ ಪತ್ರಿಕೆಯ ಮನರಂಜನೆಯ ಲೋಕದ 50 ಪವರ್ ಫುಲ್ ಐಕಾನ್ ಮಹಿಳೆಯರ ಪಟ್ಟಿ ಪ್ರಕಟಿಸಿದೆ. ಇದರಲ್ಲಿ ವಿದೇಶೀ ನಟಿಯರಾದ ಒಪೇರಾ ವಿನ್‌ಫ್ರೇ, ನಿಕಾಲ್ ಕಿಡ್‌ಮ್ಯಾನ್‌ರಂಥ ದಿಗ್ಗಜ ಸೆಲೆಬ್ರಿಟಿಗಳ ಜೊತೆ ನಮ್ಮ ಪ್ರಿಯಾಂಕಾ ಸಹ ಶಾಮೀಲಾಗಿದ್ದಾಳೆ! ಮದುವೆ ಆದಮೇವೆ ಆಂಟಿಯಾದ ಇವಳ ಕೈಲಿ ಈಗ ಚಿತ್ರಗಳೇ ಇಲ್ಲ…. ವಿದೇಶಿ ಮಾತ್ರವಲ್ಲ, ತುಸು ಸ್ವದೇಶದತ್ತಲೂ ಗಮನಹರಿಸಮ್ಮ, ಇಲ್ಲದಿದ್ದರೆ ಜನ ಇವಳ ಗಂಡನ ತರಹ ಇವಳನ್ನೂ ವಿದೇಶಿ ಪಟ್ಟಿಗೇ ಸೇರಿಸಿಯಾರು!
ಅದ್ಭುತ ಟೈಟಲ್ ಹೊಂದಿರುವ ಚಿತ್ರ
ಶ್ವೇತಾ ತ್ರಿಪಾಠಿಯ `ಗಾನ್ ಕೇಶ್’ ಚಿತ್ರ ವಿಮರ್ಶಕರ ಮೆಚ್ಚುಗೆ ಗಳಿಸಿತು, ಆದರೆ ಎಲ್ಲಾ ವರ್ಗದವರನ್ನೂ ಸೆಳೆಯುವಲ್ಲಿ ಸೋತಿತು. `ಮಸಾನ್’ ಚಿತ್ರದಲ್ಲಿ ತನ್ನ ಪ್ರತಿಭಾಪೂರ್ಣ ಅಭಿನಯದಿಂದ ಎಲ್ಲರ ಮನಗೆದ್ದಿರುವ ಶ್ವೇತಾ, ಈ ಚಿತ್ರದಲ್ಲಿ ಆ್ಯಲೋಪೀಸಿಯಾ ರೋಗದಿಂದ ಪೀಡಿತ ಹುಡುಗಿಯ ಪಾತ್ರ ವಹಿಸಿದ್ದಾಳೆ. ಹುಷಾರು ಕಣಮ್ಮ ಶ್ವೇತಾ, ಇಂಥ ಚಿತ್ರಗಳಿಗೆ ಅಂಟಿಕೊಂಡರೆ ಆಮೇಲೆ ನಿನ್ನ ತಲೆ ಮೇಲೆ ಯಾರಾದರೂ ಚಪ್ಪಡಿ ಎಳೆದಾರು!