ಇಪ್ಪತ್ತು ವರ್ಷಗಳು, ಸಾವಿರ ಹಾಡುಗಳು, ಉತ್ತಮ ಗಾಯಕಿ ಎಂಬ ಹೆಗ್ಗಳಿಕೆ ಇನ್ನೇನು ತಾನೇ ಬೇಕು? ನಾನ್ಯಾವತ್ತೂ ಅವಕಾಶಗಳ ಹಿಂದೆ ಓಡಿದವಳಲ್ಲ. ನನಗಿಷ್ಟು ಸಾಕು..... ನನಗೆ ನನ್ನದೇ ಆದ ಶ್ರೋತೃವೃಂದ, ಅಭಿಮಾನಿಗಳಿದ್ದಾರೆ ಸಾಕಲ್ಲವೇ? ಎಂದು ಚೈತ್ರಾ ಹೇಳುತ್ತಿದ್ದಾಗ, ಸುಮಾರು ಹದಿನೆಂಟು ವರ್ಷಗಳ ಹಿಂದೆ ನನ್ನೆದುರು ಕುಳಿತು ದೇವರನಾಮ, ಪಾಪ್ ಗಾಯನ ಹಾಡುತ್ತಿದ್ದ ಚೈತ್ರಾ ನೆನಪಾದಳು. ಹೌದಲ್ವಾ..... ಎಷ್ಟು ಬೇಗ ಕಾಲ ಉರುಳಿ ಹೋಗುತ್ತೆ!
ಐದು ವರ್ಷದವಳಾಗಿದ್ದಾಗಲೇ ನನ್ನೊಳಗೆ ಪುಟ್ಟ ಗಾಯಕಿಯೊಬ್ಬಳು ಬೆಳೆದುಬಿಟ್ಟಿದ್ದಳು. ಪ್ರತಿ ದಿನ ಅಮ್ಮನ ಮುಂದೆ ಕುಳಿತು ದೇವರನಾಮ ಕಲಿಯುತ್ತಿದ್ದೆ, ಸಂಗೀತ ಪಾಠ ಇಡಿಸಿದರು. ಹೀಗೆ ಚೈತ್ರಾ ಗಾಯನದ ಹಿಂದೆ ಬಿದ್ದಿದ್ದು. ನಾಗತೀಹಳ್ಳಿಯವರ ನಿರ್ದೇಶನದ `ಅಮೃತಧಾರೆ' ಚಿತ್ರದ `ಹುಡುಗಾ ಹುಡುಗಾ..... ಓ ನನ್ನ ಮುದ್ದಿನ ಹುಡುಗ....' ಹಾಡು ಸಾಕಷ್ಟು ಜನಪ್ರಿಯವಾಯಿತು. ಟ್ರಾಕ್‌ಗಾಗಿ ಅನೇಕ ಹಾಡುಗಳನ್ನು ಹಾಡಿದಳು. ಅವುಗಳಲ್ಲಿ ಕೆಲವು ಹಾಡುಗಳನ್ನು ಚೈತ್ರಾ ಧ್ವನಿಯಲ್ಲೇ ಹಾಡಿಸಲಾಯಿತು. ಪುಟ್ಟ ಹುಡುಗಿಯಾಗಿದ್ದಾಗಲೇ `ಬೇಡ ಕೃಷ್ಣ ರಂಗಿನಾಟ' ಸಿನಿಮಾದ ಹಾಡಿಗೆ ಧ್ವನಿ ನೀಡಿದ್ದಳು.
ಪ್ರಯೋಗಾತ್ಮಕ ಸವಾಲುಗಳನ್ನು ಸದಾ ಸ್ವೀಕರಿಸುತ್ತಾ, ಇಷ್ಟಪಡುತ್ತಾ ಬಂದಿರುವ ಚೈತ್ರಾ ಪುರಂದರದಾಸರ `ಕೃಷ್ಣ ಎನಬಾರದೇ....' ಹಾಡನ್ನು ವಿಭಿನ್ನ ಶೈಲಿಯಲ್ಲಿ ಪ್ರಸ್ತುತಪಡಿಸಲೆಂದೇ ಈ ಹಾಡಿಗೆ `ಕೃಷ್ಣ' ಎನ್ನುವ ಶೀರ್ಷಿಕೆಯಿಟ್ಟು ಯುಗಾದಿ ಹಬ್ಬದಂದು ಯೂಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದಾಳೆ. ಈ ಪ್ರಯೋಗದಲ್ಲಿ ಬಳಕೆಯಾಗಿರೋದು ಚೈತ್ರಾ ವಾಯ್ಸ್ ಮತ್ತು ಪಿಯಾನೋ ಅಷ್ಟೆ.
``ಮೂಲತಃ ನಾನು ಹಿಂದೂಸ್ಥಾನಿ ಶಾಸ್ತ್ರೀಯ ಗಾಯಕಿ. ಸಿನಿಮಾ ಹಾಡುಗಳನ್ನು ಹಾಡುವಾಗ ಅಗತ್ಯಕ್ಕೆ ತಕ್ಕಂತೆ ಹಾಡಿದ್ದೇನೆ. ಈಗ ಪುರುಂದರದಾಸರ ಕೃಷ್ಣನ ಹಾಡನ್ನು ಹಾಡಿರುವುದು ಸಹ ಹಿಂದೂಸ್ಥಾನಿ ಶಾಸ್ತ್ರೀಯ ಶೈಲಿಯಲ್ಲಿ. ಇದರ ಅವಧಿ ನಾಲ್ಕು ನಿಮಿಷ ಇಪ್ಪತ್ತು ಸೆಕೆಂಡ್ಸ್, ಹಾಡಿಗೆ ಪಿಯಾನೋವನ್ನು ಮಾತ್ರ ಬಳಸಿದ್ದೇವೆ. ``ಇದು ಫಾಸ್ಟ್ ಯುಗ, ಫಾಸ್ಟ್ ಮ್ಯೂಸಿಕ್‌ನ್ನೇ ಇಷ್ಟಪಡುತ್ತಾರೆ. ತೀರಾ ಕ್ಲಾಸಿಕ್ ಆಗಿಬಿಟ್ಟರೆ ಈಗಿನ ಜನರೇಶನ್‌ಗೆ ರುಚಿಸುವುದಿಲ್ಲ. ಹಾಗಾಗಿ ಹಾಡಿಗೆ ವೆಸ್ಟರ್ನ್ ಟಚ್ ನೀಡಿದ್ದೇನೆ. ಎಲ್ಲ ವಯಸ್ಸಿನವರಿಗೂ ಇಷ್ಟವಾಗುವಂತೆ ಹಾಡು ರೂಪಿಸಲಾಗಿದೆ,'' ಎಂದು ಚೈತ್ರಾ ಡೀಟೇಲ್ಸ್ ಕೊಡುತ್ತಾಳೆ.
ಗಾಯಕಿ ಚೈತ್ರಾಳಿಂದ ಎಲ್ಲ ತರಹದ ಹಾಡನ್ನು ಹಾಡಿಸಬಹುದು ಎನ್ನುವುದಕ್ಕೆ `ಗಜ' ಚಿತ್ರದಲ್ಲಿನ `ಬಂಗಾರಿ ಯಾರೇ ನೀ ಬುಲ್ ಬುಲ್......' ಹಾಡೇ ಉತ್ತಮ ನಿದರ್ಶನ. ಚೈತ್ರಾ ಸಕಲಕಲಾ ಪ್ರವೀಣೆ. ಕಾಲೇಜಿನಲ್ಲಿದ್ದಾಗ ಕ್ರೀಡೆಯಲ್ಲೂ ಸದಾ ಮುಂದು. ಕತ್ತಿವರಸೆ, ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿ ಗೋಲ್ಡ್ ಮೆಡಲ್ ಪಡೆದ ಹೆಗ್ಗಳಿಕೆ. ಎಂಜಿನಿಯರಿಂಗ್ ಪದವಿ ಜೊತೆಗೆ ಹಿನ್ನೆಲೆ ಗಾಯಕಿಯಾಗಿದ್ದುದು ಚೈತ್ರಾಳ ಸ್ಪೆಷಾಲಿಟಿ.
ಮೊದಲ ಬಾರಿಗೆ ಹಾಡನ್ನು ಸಿನಿಮಾಗಾಗಿ ಹಾಡಿದ್ದನ್ನು ಇಂದಿಗೂ ಮರೆತಿಲ್ಲವಂತೆ. ``ನನಗಾಗ ಎಂಟು ವರ್ಷ. ಸಂಗೀತ ನಿರ್ದೇಶಕರಾದ ವಿ. ಮನೋಹರ್ `ಬೇಡ ಕೃಷ್ಣ ರಂಗಿನಾಟ' ಚಿತ್ರದ ಹಾಡೊಂದಕ್ಕಾಗಿ ಪುಟಾಣಿ ಗಾಯಕಿಯನ್ನು ಹುಡುಕುತ್ತಿರುವಾಗ ನಾನು ಸಿಕ್ಕಿದೆ. ಹಾಡಿದರೆ ತುಂಬಾ ಚಾಕ್ಲೇಟ್ ಸಿಗುತ್ತೆ ಅಂತ ಅಪ್ಪ ಅಮ್ಮ ಪುಸಲಾಯಿಸಿದರು. `ಕೋಗಿಲೆಯೇ ಕೋಗಿಲೆಯೇ' ಅಂತ ಹಾಡಿದೆ ಎಲ್ಲರೂ ಇಷ್ಟಪಟ್ಟರು. ಗುರುಕಿರಣ್ ಕೂಡಾ ಅಲ್ಲೇ ಇದ್ದರು. ಅವರೇ ನನ್ನಿಂದ ಈ ಹಾಡನ್ನು ಹಾಡಿಸಿದ್ದು,'' ಎಂದು ಚೈತ್ರಾ ನೆನಪು ಮಾಡಿಕೊಳ್ಳುತ್ತಾಳೆ. ಗಾಯನ, ಸಂಗೀತ ಈ ಕಲೆಯನ್ನು ಪೂಜ್ಯ ಭಾವನೆಯಿಂದ ಕಾಣುವ ಚೈತ್ರಾ, ``ಹಾಡುಗಾರಿಕೆ ಸುಲಭವಲ್ಲ. ಪ್ರತಿನಿತ್ಯ ಅಭ್ಯಾಸ ಮಾಡಬೇಕು. ಸಂಗೀತ ಜ್ಞಾನವಿರಬೇಕು, ಪರಿಶ್ರಮ ಬೇಕು, ಅದರಲ್ಲೂ ಹಿನ್ನೆಲೆ ಗಾಯಕಿಯರಿಗೆ ಟೆಕ್ನಿಕಲ್ ಆಗಿ ವಿಷಯ ಗೊತ್ತಿರಬೇಕು. ಗಾಯನ ಕಲಿಕೆಗೆ ಡೆಡಿಕೇಶನ್ ತುಂಬಾನೇ ಇಂಪಾರ್ಟೆಂಟ್!'' ಎನ್ನುತ್ತಾಳೆ. ಗೃಹಶೋಭಾ ಪರವಾಗಿ ಆಲ್ ದಿ ಬೆಸ್ಟ್ ಚೈತ್ರಾ!