`ದೃಶ್ಯ’ ಚಿತ್ರ ಹೆಚ್ಚು ಕಡಿಮೆ ಎಲ್ಲಾ ಭಾಷೆಗಳಲ್ಲೂ ರೀಮೇಕಾದಂಥ ಯಶಸ್ವಿ ಚಿತ್ರ. ಕನ್ನಡದಲ್ಲಿ ಕೂಡಾ `ದೃಶ್ಯ’ ಎಂದು ಬಂದಿತು. ರವಿಚಂದ್ರನ್‌ ನಾಯಕತ್ವದ ಈ ಚಿತ್ರದಲ್ಲಿ ಅವರ ಮಗಳಾಗಿ ನಟಿಸಿದ್ದ ಆರೋಹಿ ನಾರಾಯಣ್‌ಗೆ ಇದು ಮೊದಲ ಚಿತ್ರವಾಗಿದ್ದರೂ, ಎಲ್ಲರ ಗಮನ ಸೆಳೆದಿದ್ದಳು. ಈಗ ಎರಡು ಮೂರು ಚಿತ್ರಗಳಿಗೆ ನಾಯಕಿಯಾಗಿದ್ದಾಳೆ. ಆರೋಹಿಯನ್ನು ಮಾತನಾಡಿಸಿದಾಗ, ತನ್ನೆಲ್ಲಾ ಆಸೆಗಳನ್ನು ಭವಿಷ್ಯದಲ್ಲಿ ಏನಾಗಬೇಕೆಂಬುದನ್ನೂ ಹೇಳಿಕೊಂಡಳು.

ಸಿನಿಮಾ ರಂಗಕ್ಕೆ ಬಂದದ್ದು ಹೇಗೆ…..?

ಅಚಾನಕ್ಕಾಗಿ ಬಂದಿದ್ದು. ಎಲ್ಲರಂತೆ ನಾನು ಕೂಡಾ ಸ್ಕೂಲು ಕಾಲೇಜಿನಲ್ಲಿ ನಾಟಕ ಮಾಡಿದ್ದಷ್ಟು ಬಿಟ್ಟರೆ ಬೇರೇನೂ ಅನುಭವವಿರಲಿಲ್ಲ. `ದೃಶ್ಯ’ ಚಿತ್ರಕ್ಕಾಗಿ ಮಗಳ ಪಾತ್ರಕ್ಕಾಗಿ ಆಡೀಶನ್‌ ಕರೆದಿದ್ದಾಗ ನನ್ನ ವಾಟ್ಸ್ಆ್ಯಪ್‌ನಲ್ಲಿದ್ದ ಡಿ.ಪಿ. ನೋಡಿದ್ದ ಯಾರೋ ನಿರ್ಮಾಣ ಸಂಸ್ಥೆಗೆ ಕಳುಹಿಸಿದ್ದರು. ನಾನು ಕೂಡಾ ಆಡೀಶನ್‌ಗೆ ಹೋಗಿದ್ದೆ. ಅಲ್ಲಿ ರವಿಚಂದ್ರನ್‌ ಸಾರ್‌ ಮತ್ತು ನಿರ್ದೇಶಕರಾದ ವಾಸು ಇದ್ದರು. ಅವರ ಮುಂದೆ ನಾನು ಆಡೀಶನ್‌ ಕೊಟ್ಟಿದ್ದೆ. ಪಾತ್ರಕ್ಕೆ ನಾನೇ ಸೂಟೆಬಲ್ ಅಂತ ಸೆಲೆಕ್ಟ್ ಮಾಡಿದರು. ರವಿಚಂದ್ರನ್‌ ಮಗಳಾಗಿ ನಟಿಸಿದ್ದು ಅದೂ ಮೊದಲ ಚಿತ್ರದಲ್ಲೇ, ನಿಜಕ್ಕೂ ಅದೃಷ್ಟ ಮಾಡಿದ್ದೆ ಅನಿಸಿತು.

`ದೃಶ್ಯ’ ಚಿತ್ರದ ನಂತರ ನಾನು ಎರಡು ವರ್ಷ ಬ್ರೇಕ್‌ ತಗೊಂಡೆ. ವಿದ್ಯಾಭ್ಯಾಸ ಕಂಪ್ಲೀಟ್‌ ಮಾಡಬೇಕಿತ್ತು. ಹಾಗೇ ಸ್ವಲ್ಪ ತೆಳ್ಳಗಾಗಬೇಕಿತ್ತು. ಈ ಎರಡು ವರ್ಷಗಳಲ್ಲಿ ನಾನು ನನ್ನಲ್ಲಿ ಸಂಪೂರ್ಣವಾಗಿ ಬದಲಾವಣೆ ಕಂಡುಕೊಂಡೆ. ನಾಯಕಿಯಾಗಬೇಕೆಂದು ಪ್ರಿಪರೇಷನ್‌ ಮಾಡಿಕೊಂಡೆ. ಅದಾದ ನಂತರ ಫೋಟೋ ಶೂಟ್‌ ಮಾಡಿಸಿದೆ. ನಾಯಕಿಯಾಗಿ ಮೊದಲ ಬ್ರೇಕ್‌ ಸಿಕ್ಕಿದ್ದು `ಭೀಮಸೇನ ನಳ ಮಹಾರಾಜ’  ಚಿತ್ರದಲ್ಲಿ.

ಈ ಅವಕಾಶ ಸಿಕ್ಕಿದ್ದು ಹೇಗೆ?

`ಭೀಮಸೇನ ನಳ ಮಹಾರಾಜ’ ಚಿತ್ರ ರಕ್ಷಿತ್‌ ಶೆಟ್ಟಿ ಪ್ರೊಡಕ್ಷನ್‌ದು. `ಪುಷ್ಕರ್‌’ ರಕ್ಷಿತ್‌ ಶೆಟ್ಟಿ ಹೇಮಂತ್‌ ರಾವ್‌ ಇರುವ ನಿರ್ಮಾಪಕರು. ಈ ಚಿತ್ರಕ್ಕೂ ಸಹ ನಾನು ಆಡೀಶನ್‌ ಮೂಲಕವೇ ಸೆಲೆಕ್ಟ್ ಆಗಿದ್ದು. ಕಾರ್ತಿಕ್‌ ಸರಗೂರು ಡೈರೆಕ್ಟರ್‌. ಸುಮಾರು ಐದು ತಾಸು ಆಡೀಶನ್‌ ಮಾಡಲಾಗಿತ್ತು. ಅರವಿಂದ್‌ ಅಯ್ಯರ್‌ ನಾಯಕರು. ಸ್ಕ್ರಿಪ್ಟ್ ನನಗೆ ತುಂಬಾ ಇಷ್ಟವಾಗಿತ್ತು. ನನ್ನ ಪಾತ್ರ ಕೂಡಾ ತುಂಬಾ ಚೆನ್ನಾಗಿದೆ. ಈ ಚಿತ್ರದಲ್ಲಿ ನನ್ನದು ಪ್ರಮುಖ ನಾಯಕಿ ಪಾತ್ರ. ತುಂಬಾನೆ ಇಂಟ್ರೆಸ್ಟಿಂಗ್‌ ಆಗಿದೆ. ಅಯ್ಯಂಗಾರಿ ಬ್ರಾಹ್ಮಣ ಹುಡುಗಿ ಪಾತ್ರ. ಅರವಿಂದ್‌ ಅಯ್ಯರ್‌ ಮತ್ತು ನನಗಿದು ರೀ ಲಾಂಚ್‌ ಸಿನಿಮಾ ಆಗಲಿದೆ.

ಸುಮಾರು ಒಂದು ವರ್ಷ ಶೂಟಿಂಗ್‌ ನಡೆದಿದೆ. ಇಂಥವೊಂದು ಪ್ರತಿಷ್ಠಿತ ಬ್ಯಾನರ್‌ ಚಿತ್ರದಲ್ಲಿ ನಾನು ನಾಯಕಿಯಾಗಿ ನಟಿಸುತ್ತಿರುವುದರ ಬಗ್ಗೆ  ಹೆಮ್ಮೆ ಇದೆ. ತುಂಬಾನೆ ಪ್ರೋತ್ಸಾಹ ನೀಡಿದ್ದಾರೆ. ನನ್ನ ಹುಟ್ಟುಹಬ್ಬವನ್ನು ಅವರೇ ಆಚರಿಸಿದ್ದು ಇನ್ನೂ ಖುಷಿ ಕೊಟ್ಟಿತ್ತು. ಪ್ರತಿಭಾವಂತ ಟೀಮ್ ಆಗಿರೋದ್ರಿಂದ ಇಂಥ ಸಂಸ್ಥೆಯಲ್ಲಿ ನಾನಿರೋದರ ಬಗ್ಗೆ ತುಂಬಾ ಖುಷಿ ಆಗುತ್ತದೆ. ನನ್ನ ಕಾಲಿಗೆ ಫ್ರಾಕ್ಚರ್‌ ಆಗಿದ್ದಾಗ, ಮೂರು ತಿಂಗಳು ನಾನು ಗುಣಮುಖಳಾಗುವವರೆಗೂ ವೇಟ್‌ ಮಾಡಿದ್ದರು. ನನ್ನಂಥ ಹೊಸಬರ ಬಗ್ಗೆ ಇಷ್ಟೊಂದು ಕಾಳಜಿ ವಹಿಸಿದ್ದಕ್ಕೆ ಥ್ಯಾಂಕ್ಸ್ ಹೇಳ್ತೀನಿ.

ಇನ್ಯಾವ ಆಫರ್‌ ಬಂದಿದೆ?

ರಮೇಶ್‌ ಅರವಿಂದ್‌ ಜೊತೆ ನಟಿಸುವ ಅವಕಾಶ ಸಿಕ್ಕಿದೆ. `ಶಿವಾಜಿ ಸೂರತ್ಕಲ್’ ಅಂತ ಸಿನಿಮಾದ ಹೆಸರು. `ಭೀಮಸೇನ ನಳ ಮಹಾರಾಜ’ ಚಿತ್ರದಲ್ಲಿನ ನನ್ನ ಪರ್ಫಾರ್ಮೆನ್ಸ್ ನೋಡಿ ಯಾರೋ ರೆಫರ್‌ ಮಾಡಿದ್ದಾರಂತೆ. ಹಾಗಾಗಿ ನಾನು ಸೆಲೆಕ್ಟ್ ಆದೆ. ಈ ಚಿತ್ರದಲ್ಲಿ ನಾನು ರಮೇಶ್‌ರ ಜೋಡಿಯಾಗಿ ನಟಿಸುತ್ತಿಲ್ಲ. ಆದರೆ ಅವರ ಪಾತ್ರಕ್ಕೆ ಸರಿಸಮಾನವಾಗಿರುವಂಥ ಇಂಪಾರ್ಟೆಂಟ್‌ ರೋಲ್ ಇದೆ. ರಾಧಿಕಾ ಚೇತನ್‌ ರಮೇಶ್‌ರ ಪತ್ನಿ ಪಾತ್ರ ಮಾಡ್ತಿದ್ದಾರೆ. ರಮೇಶ್‌ ಇನ್ವೆಸ್ಟಿಗೇಟರ್‌ ಆಫೀಸರ್‌, ನಾನು ಸೈಕಿಯಾಟ್ರಿಸ್ಟ್ ಪಾತ್ರ ಮಾಡ್ತಿದ್ದೀನಿ.

ಸಿನಿಮಾ ರಂಗ ಹೇಗನಿಸುತ್ತೆ?

ನನ್ನ ಪ್ರಪಂಚವೇ ಸಿನಿಮಯವಾಗಿ ಹೋಗಿದೆ, ತುಂಬಾ ಖುಷಿ ಆಗುತ್ತೆ. ನನಗೆ ಕಲೆ ಬಗ್ಗೆ ತುಂಬಾ ಆಸಕ್ತಿ ಇರೋದ್ರಿಂದ ಈ ಕ್ಷೇತ್ರವನ್ನು ತುಂಬಾನೆ ಪ್ರೀತಿಸ್ತೀನಿ. ನಾವು ಹೋಗೋ ದಾರಿ ಸರಿ ಇದ್ದರೆ ಇದು ನಿಜಕ್ಕೂ ಬ್ಯೂಟಿಫುಲ್ ವರ್ಲ್ಡ್!

ಏನಾಗಬೇಕೆಂಬ ಆಸೆ?

ಇಡೀ ದಕ್ಷಿಣ ಭಾರತದಲ್ಲೇ ನಾನೊಬ್ಬ ಉತ್ತಮ ಕಲಾವಿದೆ ಅಂತ ಗುರುತಿಸಿಕೊಳ್ಳುವ ಆಸೆ. ಅದಕ್ಕಾಗಿ ಪ್ರಯತ್ನಪಡ್ತೀನಿ.  ಮನೆಯವರ ಪ್ರೋತ್ಸಾಹ ಇದೆ. ಸಿನಿಮಾ ಇಂಡಸ್ಟ್ರಿ ಅಂದಾಕ್ಷಣ ಬೇರೆ ರೀತಿ ಯೋಚಿಸದೇ ಸಂಪೂರ್ಣವಾಗಿ ಬೆಂಬಲ ನೀಡುತ್ತಿದ್ದಾರೆ.

ನಟನೆಗಾಗಿ ಯಾವ ತರಹ ಪ್ರಿಪರೇಷನ್‌ ಮಾಡಿಕೊಳ್ತೀಯಾ?

ನಾನು ತುಂಬಾ ಸಿನಿಮಾಗಳನ್ನು ನೋಡ್ತೀನಿ. ನನಗೆ ಇಷ್ಟವಾದ ಹಿರಿಯ ತಾರೆ ಕಲಾವಿದೆಯರ ಬಗ್ಗೆ ತುಂಬಾ ಸ್ಟಡೀ ಮಾಡ್ತೀನಿ. ನನಗೆ ಲಕ್ಷ್ಮಿಯವರೇ ಗುರು ಎನ್ನಬಹುದು. ಅವರ ಸಿನಿಮಾಗಳನ್ನು ನೋಡುತ್ತಾ ಸಾಕಷ್ಟು ಕಲಿತಿದ್ದೀನಿ. ಅವರೇನಾದರೂ ಎದುರಿಗೆ ಸಿಕ್ಕಿದರೆ ಕಾಲಿಗೆ ನಮಸ್ಕಾರ ಮಾಡಿಬಿಡ್ತೀನಿ, ಅಷ್ಟೊಂದು ಗೌರವ ಇಟ್ಟುಕೊಂಡಿದ್ದೀನಿ. ಲಕ್ಷ್ಮಿ ಮೇಡಂರ `ಪಲ್ಲವಿ ಅನುಪಲ್ಲವಿ’ ನನ್ನ ಫೇವರೇಟ್‌ ಚಿತ್ರ.

ರಮೇಶ್‌ ಅರವಿಂದ್‌ ಕೂಡಾ  ಫ್ಯಾಬುಲಸ್‌ ಪರ್ಫಾರ್ಮರ್‌, ಅವರಿಂದನೂ ನಾನು ತುಂಬಾ ಕಲಿತಿದ್ದೇನೆ. ಕನ್ನಡದಲ್ಲಿ ಪ್ರತಿಭಾನ್ವಿತ ನಾಯಕರೆಲ್ಲರ ಜೊತೆ ನಟಿಸುವ ಆಸೆ ಇದೆ.

ಈಗಷ್ಟೇ ಮೊದಲ ಹೆಜ್ಜೆ ಇಟ್ಟಿದ್ದೇನೆ ಎಂದು ಹೇಳುವ ಆರೋಹಿ ನಾರಾಯಣ್‌ ಒಬ್ಬ ಒಳ್ಳೆಯ ಗಾಯಕಿ ಎಂಬುದನ್ನು ಎಲ್ಲಿಯೂ ಹೇಳಿಕೊಂಡಿಲ್ಲ. ಸದ್ಯದಲ್ಲೇ ತಾನು ನಟಿಸುತ್ತಿರುವ `ಭೀಮಸೇನ ನಳ ಮಹಾರಾಜ’ ಚಿತ್ರಕ್ಕಾಗಿ ಸಂಗೀತ ನಿರ್ದೇಶಕ ಚರಣ್‌ರಾಜ್‌ ಸಂಯೋಜನೆಯಲ್ಲಿ ಹಾಡೊಂದನ್ನು ಹಾಡಲಿದ್ದಾಳಂತೆ. ಈ ಪ್ರತಿಭೆಗೆ ಆಲ್ ದಿ ಬೆಸ್ಟ್ ಹೇಳೋಣ.

–  ಜಾಗೀರ್‌ದಾರ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ