ಏನಾಯಿತು ಈಕೆಯ ಲುಕ್ಸ್ ಗೆ?
ಇತ್ತೀಚೆಗೆ ಒಂದು ಅಂತಾರಾಷ್ಟ್ರೀಯ ಫ್ಯಾಷನ್ ಶೋನಲ್ಲಿ ಪ್ರಿಯಾಂಕಾ ಚೋಪ್ರಾ ಈ ಅವತಾರದಲ್ಲಿ ಕಾಣಿಸಿಕೊಂಡಿದ್ದೇ ಎಲ್ಲರೂ ಆಕೆಯನ್ನು ಟೀಕಿಸಿದರು. ಥೀಂ ಪ್ರಕಾರ ಈಕೆಯ ಲುಕ್ಸ್ ಸರಿ ಇತ್ತು, ಆದರೆ ಅಭಿಮಾನಿಗಳಿಗೆ ಮಾತ್ರ ಅವಳ ಈ ಅವತಾರ ಸರಿಹೋಗಲಿಲ್ಲ. ಅದೇ ವೇದಿಕೆಯಲ್ಲಿ ದೀಪಿಕಾ ಬಾರ್ಬಿ ಡಾಲ್ ಆಗಿ ಕಾಣಿಸಿದಳು. ಅದು ಸಹನೀಯವಾಗಿದ್ದ ಕಾರಣ ಫ್ಯಾನ್ಸ್ ಟೀಕೆಗೆ ಹೋಗಲಿಲ್ಲ. ಇಲ್ಲದಿದ್ದರೆ ಟ್ವೀಟಿಗರು ಫೇಸ್‌ಬುಕ್‌ನಲ್ಲಿ ತೆಪ್ಪಗಿರುತ್ತಿದ್ದರೇ?
ಕಿಯಾರಾ ಮೊದಲು ಆಲಿಯಾ ಆಗಿದ್ದಳು!
ಇದೇನು..... ಎಂದು ಕನ್‌ಫ್ಯೂಸ್ ಆದಿರಾ? ಅಸಲಿಗೆ `ಕಳಂಕ್' ಚಿತ್ರದ 2ನೇ ನಾಯಕಿ ಕಿಯಾರಾ ಅಡ್ವಾನಿಯ ಮೂಲ ಹೆಸರು ಆಲಿಯಾ ಆಗಿತ್ತಂತೆ..... ಹಾಗೆಂದು ಅವಳೇ ಕಿರುತೆರೆಯ ಇತ್ತೀಚಿನ ಒಂದು ರಿಯಾಲಿಟಿ ಶೋನಲ್ಲಿ ಹೇಳಿಕೊಂಡಿದ್ದಾಳೆ. ಅವಳು ಬಾಲಿವುಡ್‌ಗೆ ಎಂಟ್ರಿ ಪಡೆದಾಗ, ಇವಳ ಸೀನಿಯರ್ ಆಗಿದ್ದ ಆಲಿಯಾ ಭಟ್ ಸ್ಟಾರ್ ಆಗಿಹೋಗಿದ್ದಳು. ಹೀಗಾಗಿ ಸಲ್ಮಾನ್‌ನ ಸಲಹೆಯಂತೆ ಇವಳ ಹೆಸರನ್ನು ಬೆಳ್ಳಿತೆರೆಗಾಗಿ ಕಿಯಾರಾ ಎಂದು ಬದಲಿಸಲಾಯಿತು. ಭಾರತೀಯ ಚಿತ್ರರಂಗಕ್ಕೆ ಇದೇನೂ ಹೊಸತಲ್ಲ. ಗೆದ್ದವರು ಸಂಭ್ರಮಿಸುತ್ತಾರೆ, ಸೋತವರು ಹಳೆಯದಿದ್ದಿದ್ದರೆ ಚೆನ್ನಾಗಿರುತ್ತಿತ್ತೇನೋ ಎಂದು ಹಲುಬುತ್ತಾರೆ. ನಿಜ ನಿಜ...... ಕೈಗೆಟುಕುದ ದ್ರಾಕ್ಷಿ......
ಸಿಕ್ಕಿಬಿದ್ದ ಕರಣ್
ಮಾಡೆಲ್ ನಟ ಆದ ಕರಣ್ ಒಬೆರಾಯ್‌ನನ್ನು ಲೈಂಗಿಕ ಶೋಷಣೆಯ ಪ್ರಕರಣದಲ್ಲಿ 14 ದಿನ ನ್ಯಾಯಾಲಯ ವಿಚಾರಣಾ ಕಸ್ಟಡಿಗೆ ತೆಗೆದುಕೊಂಡಿದೆ. `ಮೀ ಟೂ' ಮೂಮೆಂಟ್ ಅಂತೂ ಹಿಂದಿ ಚಿತ್ರರಂಗದಲ್ಲಿ ಅಲ್ಲೋಲಕಲ್ಲೋಲ ಎಬ್ಬಿಸಿದೆ. ಎಷ್ಟೋ ನಟರು ಬಹಳ ಭಯಪಡುತ್ತಿದ್ದಾರೆ. ಅತ್ತ ಕರಣ್‌ನ ಫ್ರೆಂಡ್ ಪೂಜಾ ಬೇಡಿ ಖುಲ್ಲಂಖುಲ್ಲ ಅವನಿಗೆ ಸಪೋರ್ಟ್ ಮಾಡುತ್ತಿದ್ದಾಳೆ
`ಮೀ ಟೂ' ಸಾಲಿಗೆ ಜವಾಬಾಗಿ `ಮ್ಯಾನ್ ಟೂ' ಆಂದೋಲನ ಶುರು ಮಾಡಬಾರದೇಕೆ ಎಂದು ಕರೆ ನೀಡಿದ್ದಾಳೆ.
ರಾಜ್‌ಕುಮಾರ್ ಮಾರ್ಗದರ್ಶನದಲ್ಲಿ ಪ್ರತೀಖಾ
ತನ್ನ ಬಾಯ್‌ಫ್ರೆಂಡ್ ರಾಜ್‌ಕುಮಾರ್ ರಾವ್ ಮಾರ್ಗದಲ್ಲೇ ನಡೆಯಲು ಪ್ರತೀಖಾ ಬಯಸಿ, ಎಂದಿನ ಟೈಪ್‌ಕಾಸ್ಟ್ ಪಾತ್ರ ಬಿಟ್ಟು ವಿಭಿನ್ನ ಪಾತ್ರ ನಿರ್ವಹಿಸಲು ಮುಂದಾಗಿದ್ದಾಳೆ. `ಬದ್ನಾಮ್ ಗಲೀ' ಚಿತ್ರದಲ್ಲಿ ಆಕೆಯ ಗರ್ಭಿಣಿ ಪಾತ್ರ ತುಸು ವಿಭಿನ್ನವಾದುದು. ಒಂದು ಗಂಭೀರ ಪ್ರಕರಣವನ್ನು ಲಘು ಹಾಸ್ಯದೊಂದಿಗೆ ಇಲ್ಲಿ ಹೇಳಲಾಗಿದೆ. ಆಹಾ.... ಕ್ಯಾ ಬಾತ್ ಹೈ! ಪ್ರತೀಖಾ ಬಾಯ್‌ಫ್ರೆಂಡ್‌ನ ಎಲ್ಲಾ ಗುಟ್ಟನ್ನೂ ಅಳವಡಿಸಿಕೊಂಡು ಮುನ್ನಡೆಯುತ್ತಿದ್ದಾಳೆ.
ಯಾವಾಗ ನಿಲ್ಲುತ್ತದೆ ಈ ಜಗಳ?
ಒಲೆಯ ಮೇಲಿಟ್ಟ ಹಾಲು ಉಕ್ಕಿದ ಮೇಲೆ, ಸಣ್ಣ ಉರಿ ಮಾಡಿದರೂ ಮತ್ತೆ ಮತ್ತೆ ಉಕ್ಕುತ್ತಾ ಕುದಿಯುವಂತೆ ಕಂಗನಾ-ಹೃತಿಕ್‌ರ ಜಗಳ ತಾರಕಕ್ಕೆ ಏರುತ್ತಲೇ ಇರುತ್ತದೆ. ಇದೀಗ ಹೊಸ ಗಲಾಟೆ ಅಂದ್ರೆ, ಕಂಗನಾಳ `ಮೆಂಟಲ್ ಹೈ ಕ್ಯಾ' ಮತ್ತು ಹೃತಿಕ್‌ನ `ಸೂಪರ್ 30' ಚಿತ್ರಗಳ ರಿಲೀಸಿಂಗ್ ಡೇಟ್ ಕ್ಲಾಶ್ ಆಗುತ್ತಿದೆ. ಇಷ್ಟು ಸಾಲದೆಂಬಂತೆ ಇವರ ಈ ಜಗಳದ ಬೆಂಕಿಗೆ ತುಪ್ಪ ಹೊಯ್ಯುಂತೆ, ಕಂಗನಾಳ ತಂಗಿ ರಂಗೋಲಿ ಟ್ವೀಟ್ ಮಾಡುತ್ತಾ, ಹೃತಿಕ್‌ನನ್ನೇ ಬೆದರಿಸಿದ್ದಾಳೆ. ನಮ್ಮಕ್ಕ ಕಂಗನಾ ಸುಮ್ಮನಲ್ಲ..... ಈ ಬಗ್ಗೆ ಒಂದು ಕೈ ನೋಡದೆ ಬಿಡುವವಳಲ್ಲ! ಎಂದು ಕಿಚಾಯಿಸಿದ್ದಾಳೆ. ಇನ್ನು ಹೃತಿಕ್ ಸುಮ್ಮನಿದ್ದಾನಾ? ರೀ ಕಂಗನಾ ಮೇಡಂ, ನೀವು ಇದೇ ಅವತಾರ ಮುಂದುವರಿಸಿದರೆ ಮುಂದೆ ಯಾವ ಸಹಕಲಾವಿದರೂ ನಿಮ್ಮೊಂದಿಗೆ ನಟಿಸಲಾರರು ಎಂದು ಬಾಲಿವುಡ್ ನೇರವಾಗಿಯೇ ಆಡಿಕೊಳ್ಳುತ್ತಿದೆ.