ಎಲ್ಲೆಲ್ಲೂ ತಾಪಸೀ!
ಬ್ಯಾಕ್ ಟು ಬ್ಯಾಕ್ ಯಶಸ್ವೀ ಚಿತ್ರಗಳನ್ನು ನೀಡುವುದು ಘಟಾನುಘಟಿ ನಟರಿಗೇ ಸಾಧ್ಯವಾಗುತ್ತಿಲ್ಲ, ಒಬ್ಬ ನಟಿಯಾಗಿ ತಾಪಸೀ ಪನ್ನು ಇದನ್ನು ಯಶಸ್ವಿಯಾಗಿ ಸಾಧಿಸಿದ್ದಾಳೆ. ಈ ಪುರುಷಪ್ರಧಾನ ಉದ್ಯಮದಲ್ಲಿ ತನ್ನ ನಟನೆಯ ಸಾಧನೆ ಒಂದರಿಂದಲೇ ಇಂದು ತಾಪಸೀ ಏರಿರುವ ಮಟ್ಟ, ಅದನ್ನು ಉಳಿಸಿಕೊಂಡಿರುವ ಪರಿ ಶ್ಲಾಘನೀಯ! `ಬದ್ಲಾ' ಚಿತ್ರದ ಸಕ್ಸೆಸ್ ನಂತರ ಆಕೆಯ `ಸಾಂಡ್ ಕೀ ಆಂಖ್' ಚಿತ್ರ ಸಹ ಅಷ್ಟೇ ಹೆಸರು ಮಾಡಿದೆ. ಆಲ್ ದಿ ಬೆಸ್ಟ್ ತಾಪಸೀ!
ನಾವೆಂದೂ ಒಂದೇ!
ಆಲಿಯಾ ಮತ್ತು ರಣಬೀರ್ ಈಗ ಎಲ್ಲೆಲ್ಲೂ ಪಾರ್ಟಿಗಳಲ್ಲಿ ಮಿಂಚುತ್ತಿದ್ದಾರೆ. ಇತ್ತೀಚೆಗೆ ಒಂದು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ, ಇಬ್ಬರಿಗೂ ಪ್ರಶಸ್ತಿ ಲಭಿಸಿದಾಗ, ಎಲ್ಲಾ ಸಭಿಕರ ಮುಂದೆ ಇವರು ಖುಲ್ಲಂಖುಲ್ಲ ತಮ್ಮ ಪ್ರೇಮ ಪ್ರದರ್ಶಿಸುತ್ತಾ ವೇದಿಕೆಗೆ ಬಂದರು. ಇದೇನೂ ಸಭಿಕರಿಗೆ ಹೊಸ ಶಾಕಿಂಗ್ ನ್ಯೂಸ್ ಅಲ್ಲ, ಏಕೆಂದರೆ ಇವರ ಪ್ರೇಮದ ಖಿಚಡಿ ಸಾಕಷ್ಟು ದಿನಗಳಿಂದ ಕುದಿಯುತ್ತಿದೆ. ರಣಬೀರ್‌ನ ಮಾಜಿ ಪ್ರೇಯಸಿ (?) ಸಹ ಇವರ ಈ ಸಂಬಂಧದಿಂದ ದಿಲ್‌ಖುಷ್!
ಊರ್ಮಿಳೆಯ ರಾಜಕೀಯ
ಚುನಾವಣೆ ಸಮೀಪಿಸುತ್ತಿದ್ದಂತೆ ಸಿನಿಮಾ ಮಂದಿ ರಾಜಕೀಯ ಪ್ರವೇಶಿಸುವುದು ಹಳೆ ಕಾಲದಿಂದಲೂ ನಡೆದು ಬಂದ ಕಥೆ. ಈ ಬಾರಿಯಂತೂ ಲೋಕಸಭಾ ಚುನಾವಣೆಗೆ ಬಾಲಿವುಡ್ ತಾರೆಯರ ದಂಡೇ ತುಂಬಿತ್ತು. ಎಷ್ಟೋ ಕಾಲದಿಂದ ಲೈಮ್ ಲೈಟ್‌ನಿಂದ ದೂರ ಉಳಿದಿರುವ `ರಂಗೀಲಾ' ಯುವತಿ ಊರ್ಮಿಳಾ, ಕಾಂಗ್ರೆಸ್ ಸೇರಿದಳು. ವಿಷಯ ತಾರೆಯರ ರಾಜಕೀಯ ಎಂಟ್ರಿ ಅಲ್ಲ, ಈ ನಟನಟಿಯರು ಇಂಥ ಕ್ಷೇತ್ರಗಳಲ್ಲಿ ನಿಜಕ್ಕೂ ಸೇವೆ ಮಾಡುತ್ತಾರೆಯೇ? ಎಂಬುದು. ಅತ್ತ ಪಕ್ಷದ ಹಿರಿಯ ಕಾರ್ಯಕರ್ತರು ಸಹ ಬೇಸತ್ತಿದ್ದಾರೆ, ವರ್ಷಗಟ್ಟಲೇ ದುಡಿಯುವವರು ತಾವು.... ಕೊನೆಯಲ್ಲಿ ಟಿಕೆಟ್ ಗಿಟ್ಟಿಸುವವರು ಗ್ಲಾಮರ್ ಮಂದಿ!
ಮಾತು ಕಲಿತ ಹೃತಿಕ್ ರೋಷನ್
ಇದೇನು ಶೀರ್ಷಿಕೆ? ಈ ಕಾಲದಲ್ಲಿ ಈ ವಯಸ್ಸಿನ ಹೃತಿಕ್ ಮಾತು ಕಲಿಯುವುದೆಂದರೇನು ಎಂದು ಬೆರಗಾಗದಿರಿ. `ಮಾತುಗಾರಿಕೆ' ಒಂದು ಕಲೆ ಎಂಬುದು ನೆನಪಿರಲಿ. ನಮ್ಮ ಮಾತೇ ಮುಂದಿರುವವರ ಮೇಲೆ ನಮ್ಮ ವ್ಯಕ್ತಿತ್ವದ ಛಾಪೊತ್ತಲು ಸಾಧ್ಯ ಆಗಿಸುವಂಥದ್ದು. ಒಂದು ಪ್ರಶಸ್ತಿ ಪ್ರಧಾನ ಸಮಾರಂಭಕ್ಕೆ ಬಂದಿದ್ದ ಹೃತಿಕ್, ಈ ವಿಷಯದ ಕುರಿತು ಬೆಳಕು ಚೆಲ್ಲುತ್ತಾ, ತಾನು ಹಿಂದೆಲ್ಲ ವೇದಿಕೆಯಲ್ಲಿ ದುಬೈ ಎಂಬ ಶಬ್ದ ಉಚ್ಚರಿಸಲು ಎಷ್ಟು ತಿಣುಕಾಡುತ್ತಿದ್ದೆ ಎಂದು ಹೇಳಿಕೊಂಡ. ಹಾಗಾಗಿ ಬಾಲಿವುಡ್‌ಗೆ ಎಂಟ್ರಿ ಪಡೆದಾಗಿನಿಂದ ಈವರೆಗೂ ಸಹ ಆತ 1 ಗಂಟೆ ಕಾಲ ಸ್ಪೀಚ್ ಥೆರಪಿ ಟ್ರೇನಿಂಗ್ ಪಡೆಯುತ್ತಿದ್ದಾನೆ. ಬಿಕ್ಕಲ ಹೇಗೆ ಮಾತು ಕಲಿತ ಎಂದು ಗೊತ್ತಾಯ್ತೇ?
ಜಾಹ್ನವಿಯ ರೂಹ್ ಅಫ್ಝಾ
ಶ್ರೀದೇವಿಯ ಮಗಳು ಜಾಹ್ನವಿ ಇದೀಗ ರಾಜ್‌ಕುಮಾರ್ ರಾವ್ ಜೊತೆ ಜೋಡಿ ಆಗಿ ರೊಮಾನ್ಸ್ ನಡೆಸಲಿದ್ದಾಳೆ. ಇಬ್ಬರೂ ಒಟ್ಟಾಗಿ ಬರಲಿರುವ ಹಾರರ್ ಕಾಮಿಡಿ `ರೂಹ್‌ಅಪ್ಝಾ' ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರದಲ್ಲಿ ಜಾನು ಡಬಲ್ ರೋಲ್ ಮಾಡಲಿದ್ದಾಳಂತೆ. ಹಿಂದೆ ಶ್ರೀದೇವಿ ನಟಿಸಿದ್ದ `ಚಾಲ್‌ಬಾಝ್' (ಸೀತಾ ಔರ್ ಗೀತಾ ರೀಮೇಕ್) ಸೂಪರ್‌ಹಿಟ್ ಎನಿಸಿತ್ತು. ಮಗಳು ಅದೇ ಯಶಸ್ಸನ್ನು ಕಾಣುವಳೇ.....?