ನೀನೊಂದಿನ `ಸ್ಟಾರ್‌’ ಆಗ್ತೀಯ…. ಹೀಗಂತ ಸ್ಕೂಲ್‌ ಹುಡುಗಿಗೆ ಹೇಳಿದಾಗ ಹೇಗಾಗಿರಬಾರದು….? ಅದು ಮತ್ಯಾರಲ್ಲ ಸ್ಕೂಲ್‌ ಟೀಚರ್‌ ಹೇಳಿದ್ದರಂತೆ. ಇಂಥವೊಂದು ಅನುಭವ ಆಗಿದ್ದು ಆಶಿಕಾ ರಂಗನಾಥ್‌ಗೆ. ಮುಗುಳ್ನಗೆ ಸುಂದರಿ, ಚುಟು ಚುಟು ಹುಡುಗಿ ಖುದ್ದಾಗಿ  ಹೇಳುತ್ತಿದ್ದಾಗ, ಆಶಿಕಾ ನೆನಪೆಲ್ಲ ಶಾಲೆ ಕಡೆ ಓಡಿತ್ತು. ನಾನು ಡ್ಯಾನ್ಸ್, ಡ್ರಾಮಾ ಏನೇ ಮಾಡಲಿ ನಮ್ಮ ಟೀಚರ್ಸ್‌ ಯಾವಾಗಲೂ ಹೇಳೋರು. ನೀನು ದೊಡ್ಡವಳಾದ ಮೇಲೆ ಸ್ಟಾರ್‌ ಆಗ್ತೀಯಾ ಅಂತ. ಅವರ ಮಾತು ನಿಜವಾಗಿ ಬಿಡ್ತು ನೋಡಿ. ಆ ಟೈಮ್ ನಲ್ಲಿ ನಾನಂತೂ ಅವರ ಮಾತನ್ನು ಸೀರಿಯಸ್ಸಾಗಿ ತೆಗೆದುಕೊಂಡಿರಲಿಲ್ಲ. ಏನೋ ತಮಾಷೆಗೆ ಹೇಳ್ತಾರೆ ಅಂದುಕೊಳ್ತಿದ್ದೆ. ನಾನು ಸ್ಕೂಲು ಓದಿದ್ದು ತುಮಕೂರಲ್ಲಿ. ಬೆಂಗಳೂರಿಗೆ ಬಂದ ಮೇಲೆ ಎಂ.ಇ.ಎಸ್‌ ಕಾಲೇಜ್‌. ಸಾಕಷ್ಟು ಕಾಂಪಿಟೇಶನ್‌ಗಳಲ್ಲಿ ಭಾಗವಹಿಸಿದ್ದೆ. ಹಾಗೆಯೇ ಸ್ಪರ್ಧೆಯೊಂದರಲ್ಲಿ ಭಾಗವಹಿಸಿದಾಗ ನನ್ನ ಫೋಟೋಗಳು ಪತ್ರಿಕೆಯೊಂದರಲ್ಲಿ ಬಂದುಬಿಟ್ಟಿತ್ತು. ಅದನ್ನು ನೋಡಿಯೇ ನನಗೆ ಅವಕಾಶಗಳು ಬರಲಾರಂಭಿಸಿತು. ಹಾಗೆಯೇ ಫ್ಯಾಷನ್‌ ಪ್ರಪಂಚಕ್ಕೂ ಕಾಲಿಟ್ಟಿದ್ದಾಯ್ತು.

ಮೊದಲ ಚಿತ್ರ…?

ಮೊದಲ ಆಫರ್‌ ಬಂದದ್ದೇ ಮಹೇಶ್‌ಬಾಬು ನಿರ್ದೇಶನದ `ಕ್ರೇಜಿ ಬಾಯ್‌’ ಚಿತ್ರ. ಮಹೇಶ್‌ಬಾಬು ಅವರು ಸಾಕಷ್ಟು ನಾಯಕಿಯರನ್ನು ಪರಿಚಯಿಸಿರುವಂಥ ಯಶಸ್ವೀ ನಿರ್ದೇಶಕರು. ಒಂದು ಎಕ್ಸ್ ಪಿರಿಯನ್ಸ್ ಇರುತ್ತೆ ಅಂತ ಪಿ.ಯು.ಸಿ ಓದುತ್ತಿರುವಾಗಲೇ ಒಪ್ಪಿಕೊಂಡೆ. ಅಪ್ಪ ಅಮ್ಮನ ಸಪೋರ್ಟ್‌ ಕೂಡಾ ಇತ್ತು. ಅವರದು ಇದ್ದಿದ್ದು ಒಂದೇ ಕಂಡೀಶನ್‌, ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಬೇಕೆಂದು. ನಾನು ಶೂಟಿಂಗ್‌, ಕಾಲೇಜು, ರಿವಿಶನ್‌ ಅಂತ ಎಲ್ಲವನ್ನೂ ನಿಭಾಯಿಸಿದೆ. ಒಳ್ಳೆ ಮಾರ್ಕ್ಸ್ ಬಂತು. ನನ್ನ ಕ್ಲಾಸಿನಲ್ಲಿದ್ದಂಥ ಜಾಣೆಯರು ಕೂಡಾ ಆಶ್ಚರ್ಯಪಟ್ಟರು. ಸಿನಿಮಾರಂಗ ನನ್ನ ಪಾಲಿಗೆ ಹೊಸದು. ಒಂದು ಸಿನಿಮಾ ಮಾಡಿ ನೋಡೋಣ ಅಂತ ಒಪ್ಪಿಕೊಂಡೆ. ಸ್ಕ್ರೀನ್‌ ಮೇಲೆ ಹೇಗೆ ಕಾಣಿಸ್ತೀನಿ ಎನ್ನುವ ಕಾತುರ. ಸಿನಿಮಾ ನೋಡಿದಾಗ ನಿಜಕ್ಕೂ ನಾನು ನಿರ್ವಹಿಸಿದ ಪಾತ್ರ ನನಗಿಷ್ಟವಾಗಿತ್ತು. ಇನ್ನಷ್ಟು ಚೆನ್ನಾಗಿ ಮಾಡಬೇಕು. ಒಳ್ಳೆ ಒಳ್ಳೆ ಪಾತ್ರ ಮಾಡಬೇಕು ಅಂತ ಆಸೆ ಶುರುವಾಯ್ತು. ನಂತರ ತನ್ನಷ್ಟಕ್ಕೆ ತಾನೇ ಒಂದೊಂದಾಗಿ ಸಿನಿಮಾಗಳು ಬರಲು ಶುರುವಾಯ್ತು. ನಾನು ಫೈನಲ್ ಇಯರ್‌ ಬರುವ ಹೊತ್ತಿಗೆ `ರಾಂಬೋ 2′ ಚಿತ್ರ ಒಪ್ಪಿಕೊಂಡದ್ದು. `ಮುಗುಳ್ನಗೆ’ ಒಂದೊಳ್ಳೆ ಅನುಭವ. ಯೋಗರಾಜ್‌ಭಟ್ಟರ `ಮುಗುಳ್ನಗೆ’ ಚಿತ್ರದಲ್ಲಿ ಗಣೇಶ್‌ರ ಜೊತೆ ನಟಿಸುವ ಅವಕಾಶ ಸಿಕ್ಕಾಗ ತುಂಬಾನೇ ಖುಷಿಯಾಗಿತ್ತು. ಈ ಸಿನಿಮಾದಲ್ಲಿನ ನನ್ನ ಪಾತ್ರ ಕೂಡಾ ನನಗಿಷ್ಟವಾಗಿತ್ತು. ಈ ಸಿನಿಮಾ ನಂತರ ಎಲ್ಲರೂ ನನ್ನನ್ನು `ಮುಗುಳ್ನಗೆ’ ಹೀರೋಯಿನ್‌ ಅಂತಾನೇ ಕರೆಯಲು ಶುರು ಮಾಡಿದ್ರು. ರಾಂಬೋ 2 ನಂತರ ನನ್ನ ವೃತ್ತಿ ಹೊಸ ತಿರುವು ಕಂಡುಕೊಂಡಿತು.

ಜನಪ್ರಿಯತೆ ತಂದುಕೊಟ್ಟ ರಾಂಬೋ 2 ಈ ಸಿನಿಮಾದ ಕಥೆ ಕೇಳುವಾಗಲೇ ನಾನು ತುಂಬಾನೇ ಎಂಜಾಯ್‌ ಮಾಡಿದ್ದೆ. ಪ್ರೇಕ್ಷಕರು ಕೂಡಾ ಅಷ್ಟೇ ಖುಷಿಪಡ್ತಾರೆ ಎನ್ನುವ ನಂಬಿಕೆ ಇತ್ತು. ಇಡೀ ಸಿನಿಮಾ ಶೂಟಿಂಗ್‌ ಕಂಪ್ಲೀಟಾಗಿ, ಫಸ್ಟ್ ಕಾಪಿ ನೋಡಿದಾಗ… ಈ ಸಿನಿಮಾ ಬಿಗ್‌ ಹಿಟ್‌ ಆಗುತ್ತೆ ಅಂತ ಆಗಲೇ ಅನಿಸಿತ್ತು. ಹಾಗೆ ಆಯಿತು. ನನ್ನ ಪಾತ್ರವನ್ನು ಇಷ್ಟಪಟ್ಟರು. ಎಲ್ಲೇ ಹೋದರೂ ಚುಟುಚುಟು ಹುಡುಗಿ ಅಂತಾನೇ ಗುರುತಿಸಲು ಶುರು ಮಾಡಿದರು. ಮೇಡಂ ರಾಂಬೋ 2 ತರಹ ಇನ್ನೊಂದು ಸಿನಿಮಾ ಮಾಡಿ ಎಂದು ಹೇಳಲು ಶುರು ಮಾಡಿದರು.

ನನ್ನ ಉಳಿದ ಚಿತ್ರಗಳು ಐವತ್ತು ದಿನದ ಯಶಸ್ಸು ಕಂಡರೆ `ರಾಂಬೋ 2′ ನೂರು ದಿನ ಓಡಿ ಸೂಪರ್‌ ಹಿಟ್‌ ಅನಿಸಿಕೊಂಡಿತು. ನನ್ನ ಮೊದಲ ಕಮರ್ಷಿಯಲ್ ಹಿಟ್‌ ಸಿನಿಮಾ ಎನ್ನಬಹುದು. ಇದು ನನ್ನ ವೃತ್ತಿಗೆ ಸಿಕ್ಕಂಥ ಬಿಗ್‌ ಬ್ರೇಕ್‌. ಅಭಿಮಾನಿಗಳು ಹೆಚ್ಚಾದರು, ಪ್ರಚಾರ ಸಿಗತೊಡಗಿತು. ಅವಕಾಶಗಳು ಬರತೊಡಗಿತು. `ತಾಯಿಗೆ ತಕ್ಕ ಮಗ’ ಶಶಾಂಕ್‌ರ ನಿರ್ದೇಶನ ಚಿತ್ರ ಒಂದು ಒಳ್ಳೆ ಎಕ್ಸ್ ಪೀರಿಯನ್ಸ್ ಕೊಟ್ಟಿತು.

ಬ್ಯಾಕ್‌ ಟು ಬ್ಯಾಕ್‌ ಚಿತ್ರಗಳು ಬರ್ತಿವೆ….?

`ರಾಂಬೋ 2′ ಯಶಸ್ಸಿನ ನಂತರ ನನ್ನ ಕೈಯಲ್ಲೀಗ ಸದ್ಯಕ್ಕೆ ಮೂರು ಚಿತ್ರಗಳಿವೆ. ರಂಗಮಂದಿರ, ಅವತಾರ ಪುರುಷ ಮತ್ತೊಂದು ಹೊಸ ಪ್ರಾಜೆಕ್ಟ್. ಒಟ್ಟಿನಲ್ಲಿ ಬಿಜಿ…. ನಾನು ಮಾಡುತ್ತಿರುವ ಕೆಲಸದಲ್ಲಿ ತೃಪ್ತಿ ಇದೆ. ಅವತಾರ ಪುರುಷ ಚಿತ್ರವನ್ನು ಸಿಂಪಲ್ ಸುನಿ ಡೈರೆಕ್ಟ್ ಮಾಡುತ್ತಿದ್ದಾರೆ. ಸುನಿಯವರ ನಿರ್ದೇಶನದಲ್ಲಿ ನಟಿಸಬೇಕೆಂಬ ಆಸೆ ಬಹಳ ದಿನಗಳಿಂದ ಇತ್ತು. ಅವರ ಚಿತ್ರಗಳನ್ನು ನಾನು ತುಂಬಾ ಇಷ್ಟಪಟ್ಟಿದ್ದೇನೆ.

ಒಂದು ವಿಷಯದಲ್ಲಿ ನಾನು ತುಂಬಾ ಲಕ್ಕಿ. `ಕ್ರೇಜಿ ಬಾಯ್‌’ ಚಿತ್ರದಿಂದಲೇ ಒಳ್ಳೇ ನಿರ್ದೇಶಕರ ಜೊತೆ ಕೆಲಸ ಮಾಡುವ ಅವಕಾಶ ಸಿಕ್ಕಿದೆ. ಮಹೇಶ್‌ಬಾಬು, ಅನಿಲ್‌, ಯೋಗರಾಜ್‌ ಭಟ್‌, ಶಶಾಂಕ್‌, ಈಗ ಸುನಿಯವರು. ಇವರೆಲ್ಲರಿಂದ ತುಂಬಾನೇ ಕಲಿಯಬೇಕೆಂಬ ಆಸೆ ಇದೆ.

ಪರಭಾಷೆ ಸಿನಿಮಾರಂಗಕ್ಕೆ ಹೋಗುವ ಆಸೆ ಇದೆಯಾ?

ನಾನೀಗ ಕನ್ನಡ ಸಿನಿಮಾರಂಗದಲ್ಲಿ ಒಳ್ಳೆ ಅವಕಾಶ ಪಡೆದು ಬಿಜಿಯಾಗಿದ್ದೀನಿ. ಪರಭಾಷೆ ಚಿತ್ರಗಳಲ್ಲಿ ನಟಿಸಲೇಬಾರದು ಅಂತೇನಿಲ್ಲ. ಒಳ್ಳೆ ಅವಕಾಶ ಸಿಕ್ಕರೆ ಖಂಡಿತ ಒಪ್ಪಿಕೊಳ್ತೀನಿ. ಆದರೆ ಕನ್ನಡಕ್ಕೆ ಮೊದಲ ಆದ್ಯತೆ.

ನಿನ್ನ ರೋಲ್ ಮಾಡೆಲ್‌ ಯಾರು?

ಒಬ್ಬರೇ ಅಂತೇನಿಲ್ಲ… ಸಾಕಷ್ಟು ನಾಯಕಿಯರಿಂದ ಸ್ಛೂರ್ತಿ ಪಡೆದಿರುತ್ತೇನೆ. ನಮ್ಮಲ್ಲೂ ಒಳ್ಳೊಳ್ಳೆ ಕಲಾವಿದೆಯರಿದ್ದಾರೆ. ನನ್ನ ಮೆಚ್ಚಿನ ತಾರೆ ಅಂದರೆ ಮಾಧುರಿ ದೀಕ್ಷಿತ್‌. ಏಕೆಂದರೆ ಆಕೆ ಒಳ್ಳೆ ಡ್ಯಾನ್ಸರ್‌ ಹಾಗೆಯೇ ಉತ್ತಮ ಕಲಾವಿದೆ. ಸ್ಕೂಲ್‌ನಲ್ಲಿದ್ದಾಗ ಅವರ ಹಾಡಿಗೆಲ್ಲ ಡ್ಯಾನ್ಸ್ ಮಾಡಿದ್ದೀನಿ. ಎಲ್ಲ ಪ್ರತಿಭಾವಂತ ನಾಯಕಿಯರ ಬಗ್ಗೆಯೂ ತುಂಬಾನೇ ಗೌರವವಿದೆ. ಕನ್ನಡದಲ್ಲಿ ರಾಧಿಕಾ ಪಂಡಿತ್‌ ನನಗಿಷ್ಟ. ಏಕೆಂದರೆ ಅವರು ಮಾಡಿರೋ ಪಾತ್ರಗಳು, ವೃತ್ತಿಯನ್ನು ಅವರು ತೂಗಿಸಿಕೊಂಡು ಹೋದ ರೀತಿ ಎಲ್ಲ ಸ್ಛೂರ್ತಿ ತರುತ್ತದೆ. ಹತ್ತು ವರ್ಷ ಯಶಸ್ವಿಯಾಗಿ ಕನ್ನಡ ಚಿತ್ರರಂಗ ಆಳಿರುವ ರಾಧಿಕಾ ಪಂಡಿತ್‌ ನನ್ನ ಮೆಚ್ಚಿನ ತಾರೆಯರಲ್ಲಿ ಒಬ್ಬರು.

ರಿಯಲ್ ಲೈಫ್‌ನಲ್ಲಿ ಆಶಿಕಾ….!

ನಾನು ತುಂಬಾನೇ ನಾರ್ಮಲ್ ಹ್ಯೂಮನ್‌ ಬೀಯಿಂಗ್‌. ಸಿನಿಮಾ ಶೂಟಿಂಗ್‌ ಮುಗಿಸಿ ಬಂದ ಮೇಲೆ ನಾನು ನನ್ನ ಮನೆ, ನನ್ನ ಸ್ನೇಹಿತೆಯರು ಈ ಲೋಕದಲ್ಲಿ ಸೇರಿಹೋಗ್ತೀನಿ. ಗಾಡಿಯಲ್ಲಿ ಮಾರೋ ಪಾನಿಪುರಿ ತಿನ್ನುತ್ತೇನೆ. ಸಿಂಪಲ್ಲಾಗಿರುವುದನ್ನು ಕಂಡಾಗ ಕೆಲವರಿಗೆ ಆಶ್ಚರ್ಯವಾಗಬಹುದು. ಆದರೆ ನನ್ನನ್ನು ನಾನು ಸೆಲೆಬ್ರಿಟಿ ಅಂತ ಯಾವತ್ತೂ ಅಂದುಕೊಂಡಿಲ್ಲ. ಸರಳ ಬದುಕು ಸದಾ ಸುಂದರ, ಇದೇ ನನ್ನ ಮಂತ್ರ.

ಜಾಗೀರ್ದಾರ್

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ