ಮಾನ್‌ಸೂನ್‌ ಬಂದಿತೆಂದರೆ ಬೇಸಿಗೆಯ ಬಿಸಿಲಿನಿಂದ ಬಿಡುಗಡೆ ದೊರೆಯುವುದೆಂಬ ಸಮಾಧಾನ. ಆದರೆ ಅದರ ಜೊತೆಗೇ ಅನೇಕ ಚರ್ಮದ ತೊಂದರೆಗಳು ಎದುರಾಗುವುದು ಸಾಮಾನ್ಯ. ಈ ಋತುವಿನಲ್ಲಿ ತಲೆದೋರುವ ಕೆಲವು ಸಮಸ್ಯೆಗಳಿಗೆ ಇಲ್ಲಿದೆ ಪರಿಹಾರ.

ಸ್ಕಿನ್‌ ಅಲರ್ಜಿ : ದೊಡ್ಡ ನಗರಗಳಲ್ಲಿ ಮಾಲಿನ್ಯದ ಪ್ರಮಾಣ ಹೆಚ್ಚಿರುವುದರಿಂದ ಸಾಮಾನ್ಯವಾಗಿ ಸ್ಕಿನ್‌ ಅಲರ್ಜಿ ಆಗುವುದುಂಟು. ಅದು ಹೆಚ್ಚಾಗಿ ಬೆನ್ನು ಮತ್ತು ಕೈಕಾಲುಗಳ ಮೇಲೆ ಪ್ರಭಾವ ಬೀರುತ್ತದೆ. ಅಲರ್ಜಿಯ ನಿಜವಾದ ಕಾರಣ ಏನೆಂದು ತಿಳಿಯಲು ಕಷ್ಟವಾಗುತ್ತದೆ.

ಪರಿಹಾರ : ಅನುಭವಸ್ಥ ವೈದ್ಯರು ಅಲರ್ಜಿಗೆ ಸರಿಯಾದ ಚಿಕಿತ್ಸೆ ನೀಡುತ್ತಾರೆ. ಅಲರ್ಜಿಯಿಂದ ಪ್ರಭಾವಿತ ಜಾಗದ ಮೇಲೆ ಐಸ್‌ಕ್ಯೂಬ್‌ನಿಂದ ಉಜ್ಜಿ. ನಂತರ ಅದನ್ನು ಒರೆಸಿ ಬೇಬಿ ಟಾಲ್ಕಮ್ ಪೌಡರ್‌ ಹಚ್ಚಿ. ಆ ಜಾಗವನ್ನು ಉಗುರಿನಿಂದ ಕೆರೆಯಲೇಬಾರದು. ಕಡಿತ ಹೆಚ್ಚಾಗಿದ್ದರೆ ಕೈಯಿಂದ ಮೆಲ್ಲನೆ ಸವರಿಕೊಳ್ಳಿ.

ಅತಿಯಾದ ಬೆವರು : ಮಾನ್‌ಸೂನ್‌ನಲ್ಲಿ ವಾತಾವರಣದ ಆರ್ದ್ರತೆಯ ಪ್ರಮಾಣ ಬಹಳ ಹೆಚ್ಚಾಗಿರುತ್ತದೆ. ಅದರಿಂದಾಗಿ ಶರೀರ ಅತಿಯಾಗಿ ಬೆವರತೊಡಗುತ್ತದೆ ಮತ್ತು ಕೆಲವೊಮ್ಮೆ ಶರೀರದಿಂದ ದುರ್ಗಂಧ ಹೊರಹೊಮ್ಮುತ್ತದೆ, ಸಾಂಕ್ರಾಮಿಕ ರೋಗದ ಸಮಸ್ಯೆಯೂ ಎದುರಾಗುತ್ತದೆ.

ಪರಿಹಾರ : ಕೂದಲಿಗೆ ಶ್ಯಾಂಪೂ ಮಾಡಿದ ನಂತರ ಕಂಡೀಶನರ್‌ ಹಚ್ಚಿ. ಕಂಡೀಶನರ್‌ನ್ನು ಕೂದಲಿನ ಬುಡಕ್ಕೆ ಹಚ್ಚಬೇಡಿ. ಸ್ವಲ್ಪ ಸಮಯದ ನಂತರ ಕೂದಲನ್ನು ಚೆನ್ನಾಗಿ ತೊಳೆಯಿರಿ. ಅಗಲ ಹಲ್ಲಿನ ಬಾಚಣಿಗೆಯಿಂದ ಕೂದಲು ಕೀಳದಂತೆ ಸಿಕ್ಕು ಬಿಡಿಸಿ. ಒದ್ದೆ ಕೂದಲನ್ನು ಕಟ್ಟಬೇಡಿ ಮತ್ತು ಬ್ಲೋ ಡ್ರೈಯರ್‌ ಬಳಸಬೇಡಿ. ಶ್ಯಾಂಪೂವನ್ನು ಕೂದಲಿನ ಬುಡಕ್ಕೆ ಹಚ್ಚಿ ಮೆಲ್ಲನೆ ಉಜ್ಜಿ. ಇದರಿಂದ ಕೂಡಲೇ ವ್ಯತ್ಯಾಸ ಕಾಣಿಸುತ್ತದೆ.

ಸೋಂಕು : ಮಾನ್‌ಸೂನ್‌ನಲ್ಲಿ ಮೊಡವೆ, ಗುಳ್ಳೆ, ಹೇರ್‌ ಫಾಲಿಕ್‌ನಲ್ಲಿ ಊತ, ಚರ್ಮದ ಸೋಂಕು ಮುಂತಾದವು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಇವು ಬ್ಯಾಕ್ಟೀರಿಯಾ ಅಥವಾ ಫಂಗಸ್‌ನಿಂದಾಗಿ ಉಂಟಾಗುತ್ತವೆ. ಹೆಚ್ಚಿನ ಬೆವರುವಿಕೆ, ಡೀಹೈಡ್ರೇಶನ್‌, ಫೋಟೊ ಟಾಕ್ಸಿಕ್‌ ಪ್ರಭಾವ ಮತ್ತು ಬಿಸಿಲಿನಿಂದಾಗಿ ಸೋಂಕು ಸಮಸ್ಯೆ ಹೆಚ್ಚುತ್ತದೆ.

ಪರಿಹಾರ : ಚರ್ಮ ಒಣಗದಂತೆ ಇರಿಸಿಕೊಳ್ಳುವುದು ಈ ಸಮಸ್ಯೆಗೆ ಒಂದು ಒಳ್ಳೆಯ ಪರಿಹಾರ. ಸಾರ್ವಜನಿಕ ಶೌಚಾಲಯ ಬಳಸುವಾಗ ಎಚ್ಚರಿಕೆಯಿಂದಿರಿ. ಏಕೆಂದರೆ ಸ್ವಚ್ಛತೆ ಇಲ್ಲದಿದ್ದರೆ ಸೋಂಕು ತಗುಲುವ ಸಾಧ್ಯತೆ ಹೆಚ್ಚಿರುತ್ತದೆ. ನಿತ್ಯ 10-12 ಲೋಟ ನೀರು ಕುಡಿಯಿರಿ. ಚರ್ಮವನ್ನು  ಮಾಯಿಶ್ಚರೈಸರ್‌ನಿಂದ ಹೈಡ್ರೇಟ್‌ ಮಾಡುತ್ತಿರಿ.

ಅಥ್ಲೀಟ್ಸ್ ಫುಟ್‌ : ಮಾನ್‌ಸೂನ್‌ನಲ್ಲಿ ಶೂಸ್‌ ತೊಡುವವರಿಗೆ ಈ ಸಮಸ್ಯೆ ಉಂಟಾಗುತ್ತದೆ. ಟೀನಿಯಾ ಎಂಬ ಬ್ಯಾಕ್ಟೀರಿಯಾ ಇದಕ್ಕೆ ಕಾರಣವಾಗಿದ್ದು, ಇದು ಇಡೀ ಶರೀರದಲ್ಲಿ ಹರಡಿ ಕಾಲುಗಳನ್ನು ಸ್ತಬ್ಧಗೊಳಿಸುತ್ತದೆ.

ಪರಿಹಾರ : ಈ ಸಮಸ್ಯೆಗೆ ಪರಿಹಾರವೆಂದರೆ ಕಾಲುಗಳನ್ನು ಒಣಗಿರುವಂತೆ ಇಟ್ಟುಕೊಂಡಿರಬೇಕು. ಮಳೆಯಲ್ಲಿ ನೆನೆದು ಬಂದಾಗ ಕೂಡಲೇ ಪಾದರಕ್ಷೆ ಮತ್ತು ಕಾಲುಚೀಲಗಳನ್ನು ತೆಗೆದು, ಕಾಲುಗಳನ್ನು ತೊಳೆದು ಚೆನ್ನಾಗಿ ಒರೆಸಬೇಕು. ಮನೆಯಲ್ಲಿ ಸ್ಲಿಪರ್ಸ್ ಬಳಸಿ. ಮುಖ್ಯವಾಗಿ ಬಾತ್‌ರೂಮಿಗೆ ಹೋದಾಗ ಸ್ಲಿಪರ್ಸ್ ಹಾಕಿಕೊಂಡಿರಬೇಕು.

ವಿಧಿವಿಧಾನಗಳು

– ಸ್ವಚ್ಛತೆಗೆ ಆದ್ಯತೆ ನೀಡಿ. ಕೈಗಳನ್ನೂ ಸಾಬೂನಿನಿಂದ ಚೆನ್ನಾಗಿ ತೊಳೆಯಿರಿ. ಶುಭ್ರ ಉಡುಪು, ವಿಶೇಷವಾಗಿ ಸ್ವಚ್ಛವಾದ ಅಂಡರ್‌ಗಾರ್ಮೆಂಟ್ಸ್ ಧರಿಸಿ.

– ಬೆವರಿನೊಂದಿಗೆ ಶರೀರದಲ್ಲಿನ ಉಪ್ಪು ಮತ್ತು ನೀರು ಹೊರಹೋಗುತ್ತದೆ. ಇದರಿಂದ ಶುಷ್ಕತೆ ಮತ್ತು ನವೆ ಉಂಟಾಗುತ್ತದೆ. ಆದ್ದರಿಂದ ನೀರು ಮತ್ತು ದ್ರವ ಪದಾರ್ಥಗಳನ್ನು ಸೇವಿಸುತ್ತಿರಿ.

– ಕ್ರಮಬದ್ಧ ಆಹಾರದಿಂದಲೂ ಸೋಂಕನ್ನು ತಡೆಯಬಹುದು. ಮಸಾಲೆಯುಕ್ತ ಆಹಾರ ಸೇವನೆ ಮಾಡಬೇಡಿ. ಹಣ್ಣು, ತರಕಾರಿ, ಬಾದಾಮಿ, ಓಟ್ಸ್ ಮುಂತಾದವುಗಳನ್ನು ಚೆನ್ನಾಗಿ ಸೇವಿಸಿ.

– ಮೆಡಿಕೇಟೆಡ್‌ ಸೋಪ್‌, ಆ್ಯಂಟಿ ಫಂಗಲ್ ಮತ್ತು ಆ್ಯಂಟಿ ಬ್ಯಾಕ್ಟೀರಿಯಲ್ ಕ್ರೀಮ್ ಹಾಗೂ ಪೌಡರ್‌ ಬಹಳ ಉಪಯುಕ್ತವಾಗಿರುತ್ತವೆ. ಸಮಸ್ಯೆ ಹೆಚ್ಚಾಗಿದ್ದರೆ ಡರ್ಮಟಾಲಜಿಸ್ಟ್ ರನ್ನು ಸಂಪರ್ಕಿಸಿ.

– ಚರ್ಮ ಸೋಂಕಿನ ಸಮಸ್ಯೆ ಕಂಡು ಬಂದರೆ ಪರಸ್ಪರರ ವಸ್ತುಗಳನ್ನು ಬಳಸಬೇಡಿ.

– ಸರಳಾ ಭಟ್‌ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ