ಕೆಲವು ತಿಂಗಳುಗಳ ಹಿಂದೆ ಪತ್ರಿಕೆಯೊಂದರಲ್ಲಿ ಒಂದು ಸುದ್ದಿ ಬಂದಿತ್ತು. ಒಬ್ಬ ವ್ಯಕ್ತಿ ತಾನು ಸಾಕಿದ ಗಿಳಿ ಸತ್ತು ಹೋಯಿತೆಂದು ಅದೆಷ್ಟು ದುಃಖಿತನಾದನೆಂದರೆ, ಅದಕ್ಕೆಂದೇ ಶವ ಪೆಟ್ಟಿಗೆ ತರಿಸಿ ಅದಕ್ಕೆ ಅಂತ್ಯಸಂಸ್ಕಾರ ಕೈಗೊಂಡ. ಅದರ ಆತ್ಮಕ್ಕೆ ಶಾಂತಿ ಸಿಗಲೆಂದು 13ನೇ ದಿನದಂದು ಅಕ್ಕಪಕ್ಕದ ಮನೆಯವರನ್ನು ಸಂಬಂಧಿಕರನ್ನು ಕರೆಸಿ ಹೋಮ ಹವನ ಹಾಗೂ ತಿಥಿ ಊಟದ ವ್ಯವಸ್ಥೆ ಮಾಡಿಸಿದ.

ಈ ಸುದ್ದಿ ಕೇಳಿದರೆ, ಗಿಳಿಯ ಮಾಲೀಕನಿಗೆ ಅದರ ಬಗ್ಗೆ ಅದೆಷ್ಟು ಪ್ರೀತಿ ಇರಬಹುದು ಎನಿಸುತ್ತದೆ. ಅವನೊಬ್ಬನೇ ಅದೆಲ್ಲ ವ್ಯವಸ್ಥೆಯನ್ನು ತನ್ನ ಸ್ವವಿಚಾರದಿಂದ ಮಾಡಿದ್ದಾನೆಂದು ಅನಿಸುವುದಿಲ್ಲ. ಧರ್ಮದ ಗುತ್ತಿಗೆದಾರರನ್ನು ಮೆಚ್ಚಿಸಲು ಹಾಗೂ ತನ್ನನ್ನು ತಾನು ಧರ್ಮದ ಬಗ್ಗೆ ಅತಿ ಅಭಿಮಾನವುಳ್ಳವ ಎಂದು ತೋರಿಸಿಕೊಳ್ಳಲು ಗಿಳಿಯ ಅಂತ್ಯಕ್ರಿಯೆ ಹಾಗೂ ಅದರ ತಿಥಿ ಕಾರ್ಯಕ್ರಮ ಮಾಡಿಕೊಂಡಿರಬಹುದು ಎನಿಸುತ್ತದೆ. ಈ ಕುರಿತಂತೆ ಅನೇಕರು ಅನೇಕ ಬಗೆಯ ಅಭಿಪ್ರಾಯಗಳನ್ನು ಕೊಟ್ಟಿದ್ದಾರೆ.

ಇಂಥ ಮೂಢನಂಬಿಕೆ ಏಕೆ?

ಎಷ್ಟೋ ಸಲ ಪಕ್ಷಿ ಹಾಗೂ ಪ್ರಾಣಿಗಾಗಿಯೂ ಜನರು ಹೀಗೆ ಮೂಢರಂತೆ ವರ್ತಿಸುತ್ತಾರೆ. ಕೆಲವು ಕಡೆ ಕೋತಿಗಳು ಸತ್ತಾಗ ಅದಕ್ಕೂ ಹೀಗೆ ವಿಧಿವಿಧಾನಗಳೊಂದಿಗೆ ಅಂತ್ಯಸಂಸ್ಕಾರ ನಡೆಸಲಾಗುತ್ತದೆ. ನಾಯಿ, ಎಮ್ಮೆಗಳು ಸತ್ತಾಗ ಹೀಗೆ ಮಾಡಲಾಗುವುದಿಲ್ಲ. ಅವು ಧರ್ಮಕ್ಕೆ ಸಂಬಂಧಪಟ್ಟಿಲ್ಲವೇ?

ಈ ಕುರಿತಂತೆ ಪದ್ಮಾ ಹೀಗೆ ಹೇಳುತ್ತಾರೆ, “ಕೋತಿಯೊಂದು ಸತ್ತಾಗ ಮೆರವಣಿಗೆಯಲ್ಲಿ ಅದರ ಅಂತ್ಯಸಂಸ್ಕಾರ ನಡೆಸಲಾಗುತ್ತದೆ. ಇದರಲ್ಲಿ ಹೆಚ್ಚಿನವರು ಬೀದಿ ಬೀದಿ ಅಲೆಯುವ ಹುಡುಗರೇ ಆಗಿರುತ್ತಾರೆ. ಕೋತಿಯ ಶವಯಾತ್ರೆಯ ಮೂಲಕ ಅವರಿವರಿಂದ ಚಂದಾ ವಸೂಲಿ ಮಾಡಿ ತಮ್ಮ ಊಟತಿಂಡಿ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಹುಡುಗರು ಆ ರೀತಿ ಮಾಡಿದರೆ ತಾವು ಧರ್ಮಪ್ರವೃತ್ತಿಯವರು ಎಂದು ಕರೆಯಿಸಿಕೊಳ್ಳಬಹುದು ಎನ್ನುವುದು ಅವರ ಯೋಚನೆಯಾಗಿರುತ್ತದೆ.”

ಕೆಲವೊಂದು ಕಡೆ ತುಳಸಿ ವಿವಾಹದಂದು ಪುರೋಹಿತರು ತುಳಸಿಯನ್ನು ವಧುವೆಂದು ಹೇಳಿಕೊಂಡು ಆಭರಣ ಹಾಗೂ ಹಣ ವಸೂಲಿ ಕೂಡ ಮಾಡುತ್ತಾರೆ. ಹಣದ ಜೊತೆಗೆ ಊಟದ ವ್ಯವಸ್ಥೆ ಕೂಡ ಆಗುತ್ತದೆ. ಇಂತಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ತಾವು ಧರ್ಮನಿಷ್ಠರೆಂದು ಕೆಲವರಿಗೆ ತೋರಿಸಿಕೊಳ್ಳಬೇಕಿರುತ್ತದೆ.

“ಸಾಕು ಪ್ರಾಣಿಗಳೊಂದಿಗೆ ಭಾವನಾತ್ಮಕ ಒಡನಾಟ ಬಹಳಷ್ಟು ಜನರಲ್ಲಿ ಇರುತ್ತದೆ. ಅಮೆರಿಕದಲ್ಲೂ ಜನರು ತಮ್ಮ ಪ್ರಾಣಿ ಸತ್ತಾಗ ತಿಂಗಳಾನುಗಟ್ಟಲೆ ದುಃಖಿತರಾಗಿರುತ್ತಾರೆ. ಆದರೆ ಅವರು ಜನರಿಗೆ ತೋರಿಸಲು ಈ ರೀತಿಯ ಮುಖವಾಡ ಧರಿಸುವುದಿಲ್ಲ,” ಎಂದು ಅನುರಾಧಾ ಹೇಳುತ್ತಾರೆ.

ಸಿಂಚನಾ ಇಂತಹ ಘಟನೆಗಳನ್ನು ಕಪಟಿಗಳು ಹೆಣೆಯುವ ಜಾಲ ಎಂದು ಹೇಳುತ್ತಾರೆ. ನಮ್ಮ ದೇಶ ಮೂಢನಂಬಿಕೆಗಳಿಂದ ತುಂಬಿ ಹೋಗಿದೆ. ಜನ ಅದರೊಳಗೆ ಹೇಗೆ ಸೇರಿಹೋಗಿದ್ದಾರೆಂದರೆ, ಅದರಿಂದ ಹೊರ ಬರುವುದು ಅವರಿಗೆ ಕಷ್ಟ ಆಗಿಬಿಟ್ಟಿದೆ. ಜನರ ಮನಸ್ಸಿನ ಮೇಲೆ ಈ ಪೂಜಾರಿ-ಪುರೋಹಿತರು, ಬಾಬಾಗಳು ಹೇಗೆ ಮೋಡಿ ಮಾಡಿಬಿಟ್ಟಿದ್ದಾರೆಂದರೆ, ಅವರ ವಿರುದ್ಧ ಯಾರಾದರೂ ಚಕಾರ ಎತ್ತಿದರೆ ಸಾಕು, ಅಂಥವರನ್ನು ನಾಸ್ತಿಕ ಹಾಗೂ ಹುಚ್ಚ ಎಂದು ಹಣೆಪಟ್ಟಿ ಕಟ್ಟಲಾಗುತ್ತದೆ.

“ಅಂದಹಾಗೆ ನಾವು ಮೃತದೇಹವನ್ನು ಹೂಳುತ್ತೇವೆ, ಇಲ್ಲವೇ ಸುಡುತ್ತೇವೆ. ಇದಕ್ಕೆ ಮುಖ್ಯ ಕಾರಣ ಮೃತದೇಹದಿಂದ ರೋಗಾಣುಗಳು ಹರಡದಂತೆ ತಡೆಯುವುದಾಗಿರುತ್ತದೆ. ಅದು ಒಳ್ಳೆಯ ವಾತಾವರಣಕ್ಕೆ ಅತ್ಯವಶ್ಯಕ. ಆದರೆ ಪಂಡಿತ-ಪುರೋಹಿತರು ಈ ಸ್ವಚ್ಛತೆಯ ಪ್ರಕ್ರಿಯೆಯನ್ನು ಅನೇಕ ಆಡಂಬರಗಳಿಗೆ ಹಾಗೂ ಪರಂಪರೆಯ ಹೊದಿಕೆ ಹೊದಿಸಿ ಜನರನ್ನು ಮೂರ್ಖರನ್ನಾಗಿಸುತ್ತಿದ್ದಾರೆ.

“ಇಂತಹ ಆಡಂಬರಗಳಿಗೆ ಬಲಿಯಾಗಿ ಬಹಳಷ್ಟು ಜನ ತೋರಿಕೆಗಾಗಿ ಸಾಕಷ್ಟು ಹಣ ವಿನಿಯೋಗಿಸುತ್ತಿದ್ದಾರೆ. ಆ ಮೂಲಕ ಪುರೋಹಿತರು ತಮ್ಮ ಜೇಬು ಭರ್ತಿ ಮಾಡಿಕೊಳ್ಳುತ್ತಿದ್ದಾರೆ. ಎಲ್ಲಿಯವರೆಗೆ ಜನರು ಅವರ ಮಾತುಗಳನ್ನು ನಂಬುತ್ತಿರುತ್ತಾರೋ ಅಲ್ಲಿಯವರೆಗೆ ಧರ್ಮದ ಗುತ್ತಿಗೆದಾರರು ತಮ್ಮ ಅಂಗಡಿಯಲ್ಲಿ ಚೆನ್ನಾಗಿ ವ್ಯಾಪಾರ ಮಾಡಿಕೊಳ್ಳುತ್ತಾರೆ,” ಎಂದು ಶಶಿರೇಖಾ ಹೇಳುತ್ತಾರೆ.

ಧರ್ಮದ ಭಯದಿಂದ ಹೊರಬರಬೇಕು

“ಅಭಿವದ್ಧಿಗೆ ಸಮಯಪ್ರಜ್ಞೆ ಅತ್ಯವಶ್ಯ,” ಎಂದು ಹೇಳುವ ಪೂರ್ಣಿಮಾ, “ಧರ್ಮದ ಬಾಬತ್ತಿನಲ್ಲಿ ಯಾರೊಬ್ಬರೂ ತರ್ಕ ಕೇಳಲು ತಯಾರಿಲ್ಲ. ಧಾರ್ಮಿಕ ಆಡಂಬರಗಳ ಬಗ್ಗೆ ಜನರ ನಂಬಿಕೆ ಎಷ್ಟೊಂದು ಗಾಢವಾಗಿಬಿಟ್ಟಿದೆಯೆಂದರೆ, ತಮ್ಮದೇನಾದರೂ ಸಮಸ್ಯೆಗೆ ಪೂಜೆ-ಪುನಸ್ಕಾರ ಮಾಡಬೇಕೆಂದು ಹೇಳಲಾಗುತ್ತದೆ. ಜನರು ಹಾಗೆಯೇ ಮಾಡುತ್ತಾರೆ. ಆ ಸಮಸ್ಯೆಯನ್ನು ಸ್ವತಃ ಅವರೇ ಬಗೆಹರಿಸಿಕೊಳ್ಳಬಹುದಿತ್ತು. ಆದರೆ ಅವರು ಹಾಗೆ ಮಾಡುವುದಿಲ್ಲ,” ಎನ್ನುತ್ತಾರೆ.

ಮೂಢನಂಬಿಕೆಯೆಂಬ ಧೂಳು ವಿವೇಕ ಎಂಬ ಕನ್ನಡಿಯನ್ನು ಮಸುಕುಗೊಳಿಸುತ್ತದೆ. ಹೆದರಿಕೆ ಮನುಷ್ಯನನ್ನು ದುರ್ಬಲಗೊಳಿಸುತ್ತದೆ. ಧರ್ಮದ ಗುತ್ತಿಗೆದಾರರು ಅದರ ದುರ್ಲಾಭ ಪಡೆದುಕೊಳ್ಳಲು ಸದಾ ಸಿದ್ಧರಾಗಿ ನಿಂತಿರುತ್ತಾರೆ. ನಮ್ಮೊಳಗಿರುವ ಧರ್ಮದ ಭಯವನ್ನು ನಾವು ಮೊದಲು ಹೊಡೆದೋಡಿಸಬೇಕು. ಧೈರ್ಯಶಾಲಿ ವ್ಯಕ್ತಿ ಒಂದೇ ಸಲ ಸಾಯುತ್ತಾನೆ. ಆದರೆ ದುರ್ಬಲ ವ್ಯಕ್ತಿ ಆಗಾಗ ಸಾಯುತ್ತಲೇ ಇರುತ್ತಾನೆ.

ಧರ್ಮದ ಕುರಿ ಮಂದೆ

ಇಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ಸುಧಾ ಕುರಿ ಮಂದೆ ಎಂದು ಬಣ್ಣಿಸುತ್ತಾರೆ. ಜನರು ಯಾವಾಗಲೂ ಬೇರೆಯವರ ಹಿಂದೆ ಧಾವಿಸುತ್ತಾರೆ. ತಮ್ಮ ವಿವೇಕವನ್ನು ಎಂದೂ ಬಳಸುವುದಿಲ್ಲ. ಅವರು ತಮ್ಮ ಒಂದು ಅನುಭವವನ್ನು ಹೇಳುತ್ತಾರೆ. “ನಾನೊಂದು ಕಾರ್ಯಕ್ರಮ ವೀಕ್ಷಿಸಲು ಹೋಗಿದ್ದೆ. ಆಗ ಜನಸಮೂಹದಲ್ಲಿದ್ದ ಒಬ್ಬ ಮಹಿಳೆ ಎದ್ದು ನಿಂತು ಕುಣಿಯತೊಡಗಿದಳು.  ಆಗ ಜನರಲ್ಲಿ ಒಮ್ಮೆಲೇ ಸಂಚಲನ ಶುರುವಾಯಿತು. ಆ ಮಹಿಳೆಯ ದೇಹದಲ್ಲಿ ದೇವಿ ಪ್ರವೇಶಿದ್ದಾಳೆ ಎಂದು ಹೇಳತೊಡಗಿದರು. ಕೆಲವರು ಎದ್ದು ನಿಂತು ಅವಳ ಕಾಲು ಮುಟ್ಟಿ ನಮಸ್ಕರಿಸತೊಡಗಿದರು. ಅದನ್ನು ಕಂಡು ನನಗೆ ಹಾಸ್ಯಾಸ್ಪದ ಎನಿಸಿತು.”

ಕುರಿ ಮಂದೆಯ ಮತ್ತೊಂದು ಘಟನೆಯ ಬಗ್ಗೆ ಚಿತ್ರಾ ಹೀಗೆ ವಿವರಿಸುತ್ತಾರೆ, “ಮಹಿಳೆಯೊಬ್ಬಳ ಮೈಯಲ್ಲಿ ದೇವಿ ಬರುತ್ತಿದ್ದಳು. ಆ ಸಮಯದಲ್ಲಿ ಅವಳು ತನ್ನ ಬಳಿ ಬರುವ ಮಹಿಳೆಯರಿಗೆ ಗಂಡು ಮಗು ಹುಟ್ಟುವ ಉಪಾಯ ಹೇಳುತ್ತಿದ್ದಳು. ಅವಳ ಮೈಯಲ್ಲಿ ದೇವಿ ಪ್ರತ್ಯಕ್ಷವಾದಾಗೆಲ್ಲ ಅವಳ ಮನೆಯ ಮುಂದೆ ಜನಸಾಗರ ಸೇರಿರುತ್ತಿತ್ತು. ಅವಳ ಬಂಡವಾಳ ಹೊರಬಿದ್ದದ್ದು ಸ್ವತಃ ಸೊಸೆಯಿಂದಲೇ! ಸೊಸೆಗೆ ಇಬ್ಬರು ಹೆಣ್ಣುಮಕ್ಕಳು ಹುಟ್ಟಿದರು. ಆಗ ಅವಳು ಹೇಳುವುದೆಲ್ಲ ಸುಳ್ಳು ಎನ್ನುವುದು ಗೊತ್ತಾಯಿತು.”

ಆಡಂಬರಕ್ಕೆ ಕಾರಣ

ಆಶಾ ಶರ್ಮ ಇದರ ಬಗ್ಗೆ ಹೀಗೆ ಹೇಳುತ್ತಾರೆ, “ಧರ್ಮದ ಭಯ ಮನುಷ್ಯರನ್ನು ಕಂದಾಚಾರದತ್ತ ದೂಡುತ್ತದೆ. ಜನರು ಎಷ್ಟೇ ತರ್ಕ ಮಾಡಿದರೂ, ಮನುಷ್ಯನಲ್ಲಿ ಒಂದು ಅವ್ಯಕ್ತ ಭಯ ಇದ್ದೇ ಇರುತ್ತದೆ. ನನಗೆ ಯಾವುದೇ ತೊಂದರೆ ಆಗದಿರಲಿ ಎಂದು ಅವರ ಮನಸ್ಸು ಕಾತರಿಸುತ್ತಿರುತ್ತದೆ. ಇದೇ ಭಯ ಅವರನ್ನು ಆಡಂಬರದತ್ತ ನೂಕುತ್ತದೆ.”

ಒಂದೊಂದು ಸಲ ಒಬ್ಬರ ಮನೆಯಲ್ಲಿ ಸತತ 2 ಬಾರಿ ಶಾರ್ಟ್‌ಸರ್ಕ್ಯೂಟ್‌ ಆಯಿತು. ಆಗ ಒಬ್ಬ ವ್ಯಕ್ತಿ ನಿನ್ನ ಜಾತಕದಲ್ಲಿ ದೋಷವಿದೆ. ಅದನ್ನೊಮ್ಮೆ ಜ್ಯೋತಿಷಿಗೆ ತೋರಿಸು ಎಂದ. ಅಲ್ಲಿಯೇ ಇದ್ದ ಇನ್ನೊಬ್ಬ ಗೆಳೆಯ ಯಾರಾದರೂ ಎಲೆಕ್ಟ್ರಿಶಿಯನ್‌ನ್ನು ಕರೆಸಿ ನಿನ್ನ ಮನೆಯ ವೈರಿಂಗ್‌ ಪರೀಕ್ಷೆ ಮಾಡಿಸು,” ಎಂದು ಹೇಳಿದ. ಕೆಲವು ಧರ್ಮ ಪ್ರಭಾವಿತ ಜನರು ಹೇಗಿರುತ್ತಾರೆಂದರೆ, ಅವರಿಗೆ ಗ್ರಹ-ನಕ್ಷತ್ರಗಳ ದೋಷದ ಸಂದರ್ಭದಲ್ಲಿ ಪಂಡಿತ ಪುರೋಹಿತರೇ ತಮಗೆ ಸರಿ ದಾರಿ ತೋರಿಸುತ್ತಾರೆ ಎಂದು ನಂಬಿರುತ್ತಾರೆ. ಇದೇ ದುರ್ಬಲ ಕೊಂಡಿಯನ್ನು ಹಿಡಿದುಕೊಂಡು ಅವರು ಜನರ ಮನಸ್ಸನ್ನು ಚಂಚಲಗೊಳಿಸುತ್ತಾರೆ.

ಓದು ಬಲ್ಲವರೇ ಹೆಚ್ಚು

ಜೀವಂತವಿದ್ದಾಗಲಂತೂ ಪೂಜಾರಿ-ಪುರೋಹಿತರು ಜನರನ್ನು ಹೆದರಿಸುತ್ತಿರುತ್ತಾರೆ. ಮರಣದ ಬಳಿಕ ನಿಮ್ಮವರು ಶಾಂತವಾಗಿರಬೇಕೆಂದು ಹಣಕ್ಕಾಗಿ ಪೀಡಿಸುತ್ತಾರೆ. ಮನೆಯ ನಾಲ್ಕೂ ಮೂಲೆಗಳಲ್ಲೂ ಶಿವಲಿಂಗ ಸ್ಥಾಪಿಸಿದರೆ ಸತ್ತವರ ಆತ್ಮ ನಿಮ್ಮ ಮನೆಯ ಸುತ್ತಮುತ್ತ ಸುತ್ತಾಡುವುದಿಲ್ಲ ಎಂದು ಹೇಳಿ ಹಣ ಕಿತ್ತುಕೊಂಡರು. ಜೊತೆಗೆ ಶಿವಲಿಂಗ ಸ್ಥಾಪನೆಯ ಖರ್ಚು ಬೇರೆ. ಹೀಗೆ ಮಾಡಿದವರು ಅನಕ್ಷರಸ್ಥರೇನಲ್ಲ, ಓದುಬರಹ ಬಲ್ಲವರೇ. ಅವರು ಪಂಡಿತ-ಪುರೋಹಿತರ ಮಾತುಗಳಿಗೆ ಬಲು ಬೇಗ ಒಳಗಾಗಿಬಿಡುತ್ತಾರೆ. ವಿಜ್ಞಾನ ಗೊತ್ತಿದ್ದೂ ತರ್ಕ ಮಾಡುವುದಿಲ್ಲ.

ತೀರ್ಥಕ್ಷೇತ್ರಕ್ಕೆ ಹೆಸರುವಾಸಿಯಾದ ಗಯಾದಲ್ಲಿ ಪುರೋಹಿತರಿಂದ ಮೃತರ ಆತ್ಮಕ್ಕೆ ಶಾಂತಿ ಕೋರಿ ಪಿಂಡದಾನ ಮಾಡಲಾಗುತ್ತದೆ. ಪೂಜಾರಿ ಎಷ್ಟು ಸಾಧ್ಯವೋ ಅಷ್ಟು ಹೆಚ್ಚು ದಕ್ಷಿಣೆ ವಸೂಲಿ ಮಾಡುತ್ತಾರೆ. ಅನಿವಾಸಿ ಭಾರತೀಯರು ಕೂಡ ಅಲ್ಲಿಗೆ ಬರುತ್ತಿರುತ್ತಾರೆ ಆಗಂತೂ ಪೂಜಾರಿಗೆ ಸುಗ್ಗಿ. ಓದು ಬಲ್ಲವರೇ ಮೂಢನಂಬಿಕೆಗೆ ಅದೆಷ್ಟು ಬಲಿಯಾಗುತ್ತಿದ್ದಾರೆ ಎನ್ನುವುದು ಇದರಿಂದ ಗೊತ್ತಾಗುತ್ತದೆ.

ಅನಗತ್ಯ ತೋರಿಕೆ

ವೃದ್ಧರ ಸ್ಥಿತಿಯ ಬಗ್ಗೆ ಗೀತಾ ಹೀಗೆ ಹೇಳುತ್ತಾರೆ, “ನಮ್ಮ ಸಮಾಜದಲ್ಲಿ ಜನರು ತಮ್ಮ ಪೋಷಕರನ್ನು ಇದ್ದಾಗ ಸರಿಯಾಗಿ ನೋಡಿಕೊಳ್ಳುವುದಿಲ್ಲ. ಅವರು ತೀರಿಹೋದ ಮೇಲೆ ಶಾಂತಿಗಾಗಿ ಎಷ್ಟೆಲ್ಲ ಖರ್ಚು ಮಾಡುತ್ತಾರೆ. ಇದೆಲ್ಲ ತೋರಿಕೆಗಾಗಿ ಅನ್ನುವುದು ಸ್ಪಷ್ಟವಾಗುತ್ತದೆ.”

ಬಾಲ್ಯಾವಸ್ಥೆಯಿಂದಲೇ ಧರ್ಮದ ಬಗ್ಗೆ ಒತ್ತಿ ಒತ್ತಿ ಹೇಳಲಾಗುತ್ತದೆ. ಧರ್ಮ ಬೋಧನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಳ್ಳಲಾಗುತ್ತದೆ. ಈ ಕಾರಣದಿಂದ ಬಹಳಷ್ಟು ಜನರು ದೊಡ್ಡವರಾದ ಮೇಲೂ ಧರ್ಮದ ಮೇಲಿನ ನಂಬಿಕೆಯನ್ನು ಬಿಟ್ಟುಕೊಡುವುದಿಲ್ಲ. ದೇವರನ್ನು ಪ್ರಸನ್ನಗೊಳಿಸಬೇಕು, ದೇವಿಗೆ ಕೋಪ ಬರದಂತೆ ನೋಡಿಕೊಳ್ಳಬೇಕು ಎಂಬ ಭಯವನ್ನು ಹುಟ್ಟುಹಾಕಿ ಅದರ ಪಾಲನೆಗಾಗಿ ಸೂಚನೆ ನೀಡಲಾಗುತ್ತದೆ.

ಮೂಢನಂಬಿಕೆ ಹಾಗೂ ಧರ್ಮ ಯಾವಾಗಲೂ ಶೋಷಣೆಗೆ ಪ್ರೇರಣೆ ನೀಡುತ್ತವೆ. ಜನರನ್ನು ಲೂಟಿ ಮಾಡುವ ಕಂದಾಚಾರಿಗಳ ಅಂಗಡಿಗಳನ್ನು ಬಂದ್‌ ಮಾಡುವಲ್ಲಿ ಸರ್ಕಾರ ಕಾನೂನು ರೂಪಿಸಬೇಕು.

– ಎನ್‌. ದೀಪಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ