ಕಥೆ ಮಕ್ಕಳಿಗೆ ಯಾವಾಗಲೂ ಪ್ರಿಯವೇ! ನಾವೆಲ್ಲರೂ ಅಜ್ಜಿಯ ಕಥೆಯನ್ನು ಕೇಳಿಯೇ ಮಲಗುತ್ತಿದ್ದವರು. ಆದರೆ ಈಗ ಗ್ಯಾಡ್ಜೆಟ್ಸ್ ಗಳ ಯುಗ. ಒಂದು ಚಿಕ್ಕ ಮಗುವಿನ ಹತ್ತಿರ ಐ ಪ್ಯಾಡ್‌, ಮೊಬೈಲ್‌ ಇರುತ್ತದೆ. ಅದನ್ನು ಹಿರಿಯರಿಗಿಂತಾ ಹೆಚ್ಚಾಗಿ ಆ ಮಕ್ಕಳೇ ಉಪಯೋಗಿಸಲು ಬಲ್ಲವರಾಗಿರುತ್ತಾರೆ. ಅದರಲ್ಲಿ ಕಥೆಗಳನ್ನು ಕೇಳುತ್ತಾರೆ, ನೋಡುತ್ತಾರೆ.ಏನೇ ಆಗಲಿ ಜೀವಂತ ವ್ಯಕ್ತಿಗಳ ಮೂಲಕ, ಪ್ರತ್ಯಕ್ಷವಾಗಿ ಕಥೆ ಕೇಳುವ ಗಮ್ಮತ್ತೇ ಬೇರೆ. ಅಂತೂ ಅದರ ಮೂಲ ಯಾವುದಾದರೂ ಸರಿಯೇ. ಮಕ್ಕಳಿಗೆ ಕಥೆ ಬೇಕು. ಆದರೆ ಈಗೀಗ ಹಿಂದಿನಂತೆ, ಅನಾದಿ ಕಾಲದಿಂದ ನಡೆದು ಬಂದ, ಮಕ್ಕಳಿಗೆ ಕಥೆ ಹೇಳುವ ಕಾಯಕವನ್ನು ಮತ್ತೆ ಜನಪ್ರಿಯ ಮಾಡುವ ನಿಟ್ಟಿನಲ್ಲಿ ಅನೇಕರು ಕೆಲಸ ಮಾಡುತ್ತಿದ್ದಾರೆ.

ಕಥೆ ಹೇಳುವ ಕಲೆ ಅಪೂರ್ವವಾದುದು. ಧ್ವನಿಯಲ್ಲಿನ ಏರಿಳಿತ, ಅಭಿನಯ, ಮುಖದಲ್ಲೇ ಹಾವಭಾವಗಳ ಹೊರ ಹೊಮ್ಮುವಿಕೆ, ಇಂತಹ ಕಲೆಯನ್ನು ಮೈಗೂಡಿಸಿ ಕೊಂಡಿರುವವರು ಮೀರಾ ವೆಂಕಟೇಶನ್‌.

ಹಿರಿಯ ಕಿರಿಯರಿಬ್ಬರಿಗೂ ತಮ್ಮದೇ ಆದ ರೀತಿಯಲ್ಲಿ ಮಾರ್ಗದರ್ಶಕರಾಗಿದ್ದಾರೆ. ವಿನ್ಯಾಸಗಾರ್ತಿಯಾಗಿ ಇ-ಲರ್ನಿಂಗ್‌, ಬ್ಲೆಂಡೆಡ್‌ ಲರ್ನಿಂಗ್‌, ತಾಂತ್ರಿಕ ಶಿಕ್ಷಣ ಮತ್ತು ಸಾಫ್ಟ್ ಸ್ಕಿಲ್ಸ್ ‌ನ್ನು ಒಳಗೊಂಡ ತರಗತಿಯ ಕೋರ್ಸುಗಳನ್ನು ದೊಡ್ಡವರಿಗೆ ರೂಪಿಸಿದ್ದಾರೆ. ಮಕ್ಕಳಿಗಾಗಿ ಕಥೆಗಳನ್ನೊಳಗೊಂಡ ಪಾಠಗಳು, ಭಾಷಣ ಕಲೆ ಮತ್ತು ಜೀವನ ಕೌಶಲ್ಯಗಳ ತರಬೇತಿಯನ್ನು ನೀಡುತ್ತಿದ್ದಾರೆ. ಹಿರಿಯರಿಗೆ ಕಥೆ ಹೇಳುವುದನ್ನು ಕಲಿಸಿದರೆ ಮಕ್ಕಳಿಗೆ ಕಥೆ ಹೇಳುವ ಕಲೆಯನ್ನು ರೂಢಿಸಿಕೊಂಡಿದ್ದಾರೆ. ಕಥೆ ಹೇಳುವುದನ್ನು ಕಲಿಸುವ ಕಾರ್ಯಾಗಾರವನ್ನೂ ನಡೆಸುತ್ತಾರೆ.

ಇವರು ವೃತ್ತಿಯಿಂದ ಎಂಜಿನಿಯರ್‌. 15 ವರ್ಷಗಳ ಅನುಭವದ ಮೂಸೆಯಲ್ಲಿ ಪಳಗಿದವರಾಗಿದ್ದಾರೆ. ಬಿಸ್‌ನೆಸ್‌ ಅನಲಿಸ್ಟ್, ಟೆಕ್ನಿಕಲ್ ರೈಟರ್‌ ಅಲ್ಲದೆ ಕಂಟೆಂಟ್‌ ಡೆವೆಲಪರ್‌ ಆಗಿದ್ದಾರೆ. ಎತ್ತಣ ಮಾಮರ… ಎತ್ತಣ ಕೋಗಿಲೆ…? ಎಲ್ಲಿಯ ತಾಂತ್ರಿಕತೆ ಎಲ್ಲಿಯ ಭಾವಪೂರ್ಣತೆ ಅಲ್ಲವೇ? ಸೃಜನಶೀಲತೆ, ಅನುಭವ, ವೃತ್ತಿಯಲ್ಲಿನ ಅರ್ಪಣಾ ಮನೋಭಾವ, ಸಂವಹನ ಕೌಶಲ್ಯ ಮತ್ತು ಇಷ್ಟೆಲ್ಲಾ ತಿಳಿದುಕೊಂಡಿದ್ದರೂ ಕಲಿಯುವುದರಲ್ಲಿ ತೀವ್ರವಾದ ಆಸಕ್ತಿ ಮತ್ತು ಸಾಮರ್ಥ್ಯವನ್ನು ಹೊಂದಿದ್ದಾರೆ.

ವಿಶ್ಲೇಷಣಾ ನೋಟ, ಸಲಕರಣ ಮತ್ತು ಉಪಕರಣದ ಮೇಲಿನ ಪರಿಣಿತಿ, ಪ್ರಬಲ ಕ್ರಮಶಾಸ್ತ್ರ (ವಿಧಾನ ಶಾಸ್ತ್ರ) ಇವೆಲ್ಲದರ ಪರಿಣಾಮಕಾರಿ ಸಂಯೋಜನೆಯ ಮತ್ತೊಂದು ರೂಪವೇ ಮೀರಾ ವೆಂಕಟೇಶನ್‌.

ಕಥಾಲಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ. ಕಥೆ ಹೇಳುವ ಕಾರ್ಯಕ್ರಮ ಮತ್ತು ಕಥೆ ಹೇಳುವುದನ್ನು ಕಲಿಸುವ ಕಾರ್ಯಾಗಾರಗಳನ್ನೂ ಎನ್‌.ಜಿ.ಓಗಳಿಗೆ ಮತ್ತು ಕಾರ್ಪೋರೇಟ್‌ ಸೆಕ್ಟರಿನಲ್ಲೂ ನಿರಂತರವಾಗಿ ನಡೆಸುತ್ತಿದ್ದಾರೆ.

3-14 ವರ್ಷದ ಮಕ್ಕಳಿಗೆ ನಲಿಕಲಿ ಕಾರ್ಯಕ್ರಮಗಳು ಮತ್ತು ಸಿಲರಿ ಕ್ಲಬ್‌ನ ಮೂಲಕ ಮಕ್ಕಳಲ್ಲಿ ಬರವಣಿಗೆ, ವಿವರಣೆ, ಮಾತನಾಡುವ ಕಲೆ, ಸಾರ್ಜನಿಕ ವೇದಿಕೆಯಲ್ಲಿ ಮಾತನಾಡುವ ಕಲೆಯನ್ನು ರೂಪಿಸಲು ಅಗತ್ಯವಾದ ತರಬೇತಿ ಶಿಬಿರಗಳನ್ನು ನಡೆಸುತ್ತಾರೆ. ಅಗಸ್ತ್ಯ ಇಂಟರ್‌ ನ್ಯಾಷನಲ್ ಫೌಂಡೇಶನ್ನಿನ ಚಟುವಟಿಕೆಗಳ ಯೋಜನಾ ಕ್ರಮಗಳು, ಚಿತ್ರಗಳ ಮೂಲಕ ಓದಲು ಸಾಧ್ಯವಾಗುವ ಕಾರ್ಡುಗಳನ್ನು ಮಾಡುವ ಕಾರ್ಯಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ.

ರಾಮಯ್ಯ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಪದವಿ ಪಡೆದು, ತಮ್ಮ ವೃತ್ತಿಯ ಜೊತೆ ತಮಗೆ ಸಮಾಧಾನ ನೀಡುವ ಈ ಪ್ರವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಮಕ್ಕಳು ತಮ್ಮ ಓದಿನಲ್ಲಿ ಆಸಕ್ತಿ ಮೂಡುವಂತೆ ಮಾಡುವ ಕಾಯಕದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದಾರೆ.

2017ರಲ್ಲಿ ಸಂಡೆ ಹೆರಾಲ್ಡ್ ನವರು ನಡೆಸಿದ ಸಣ್ಣ ಕಥಾ ಸ್ಪರ್ಧೆಯಲ್ಲಿ ಮೊದಲನೇ ಬಹುಮಾನವನ್ನು ಪಡೆದಿದ್ದಾರೆ. ಕನ್ನಡ, ಇಂಗ್ಲಿಷ್‌, ಹಿಂದಿ ಮತ್ತು ತಮಿಳು ಭಾಷೆಯನ್ನೂ ಬಲ್ಲವರಾಗಿದ್ದಾರೆ. ಎರಡು ಮುದ್ದಾದ ಹೆಣ್ಣುಮಕ್ಕಳ ತಾಯಿಯಾಗಿ ಯಶಸ್ವಿ ಜೀವನ ನಡೆಸುತ್ತಿದ್ದಾರೆ. ಇವರ ಮಗಳಿಗಾಗಿ ಕಥಾಲಯದ ಶಿಬಿರವೊಂದರಲ್ಲಿ ಪಾಲ್ಗೊಂಡಿದ್ದಾಗ ಇವರಿಗೆ ಕಥೆ ಹೇಳುವ ಕಲೆಗೆ ಪ್ರೇರಣೆ ದೊರಕಿ, ಆಸಕ್ತಿ ಮೂಡಿತೆನ್ನುತ್ತಾರೆ. ಇವರ ಮಗಳೇ ಇವರ ಯಶೋಗಾಥೆಯ ಕಾರಣ ಹೌದು.

– ಮಂಜುಳಾ ರಾಜ್

और कहानियां पढ़ने के लिए क्लिक करें...