ನೀವು ಆಹಾರವನ್ನು ಪ್ಲಾಸ್ಟಿಕ್ ಡಬ್ಬದಲ್ಲಿಟ್ಟು ಮೈಕ್ರೋವೇವ್ ಓವನ್‌ನಲ್ಲಿ ಬೇಯಿಸುವುದರಿಂದ ನಿಮಗೆ ಬಂಜೆತನ, ಮಧುಮೇಹ, ಬೊಜ್ಜು, ಕ್ಯಾನ್ಸರ್ ರೋಗಗಳು ಉಂಟಾಗುವ ಸಾಧ್ಯತೆ ಹೆಚ್ಚು ಎಂಬ ಸಂಗತಿ ನಿಮಗೆ ಗೊತ್ತೆ?
ಬೇರೆಬೇರೆ ಅಧ್ಯಯನಗಳಿಂದ ತಿಳಿದು ಬಂದಿರುವ ಪ್ರಕಾರ, ಪ್ಲಾಸ್ಟಿಕ್ ಡಬ್ಬದಲ್ಲಿ ಆಹಾರ ಬಿಸಿ ಮಾಡುವುದರಿಂದ ಅತಿ ರಕ್ತದೊತ್ತಡದ ಸಮಸ್ಯೆ ಆಗಬಹುದು. ಇದರಿಂದಾಗಿ ಸಂತಾನೋತ್ಪತ್ತಿ ಸಾಮರ್ಥ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಅಷ್ಟೇ ಅಲ್ಲ, ಮೆದುಳಿನ ಕಾರ್ಯ ವ್ಯವಸ್ಥೆಗೂ ಹಾನಿಯಾಗುತ್ತದೆ. ಬೇರೆ ತೆರನಾದ ಇನ್ನೂ ಅದೆಷ್ಟೋ ದುಷ್ಪರಿಣಾಮಗಳು ಬೆಳಕಿಗೆ ಬಂದಿವೆ. ಅಂದಹಾಗೆ ಮೈಕ್ರೋವೇವ್ ಓವನ್‌ನಲ್ಲಿ ಪ್ಲಾಸ್ಟಿಕ್‌ನ ಸಲಕರಣೆಯೊಂದು ಬಿಸಿಯಾದಾಗ ಅದರಲ್ಲಿರುವ ರಸಾಯನಗಳು ಸ್ರಾವವಾಗುತ್ತವೆ.
ಆರೋಗ್ಯದ ವೈರಿ ಪ್ಲಾಸ್ಟಿಕ್
ಪ್ಲಾಸ್ಟಿಕ್‌ನ ಗೃಹೋಪಯೋಗಿ ಉಪಕರಣಗಳನ್ನು ತಯಾರಿಸಲು `ಬಿಸ್ಪೆನಾಲ್ ಎ’ ಎಂಬ ಔದ್ಯೋಗಿಕ ರಸಾಯನವನ್ನು ಬಳಸಲಾಗುತ್ತದೆ. ಅದನ್ನು ಸಾಮಾನ್ಯವಾಗಿ ಬಿಪಿಎ ಹೆಸರಿನಿಂದ ಕರೆಯಲಾಗುತ್ತದೆ. ಈ ರಸಾಯನ ಬಂಜೆತನ, ಹಾರ್ಮೋನು ಬದಲಾವಣೆ ಹಾಗೂ ಕ್ಯಾನ್ಸರ್‌ನೊಂದಿಗೆ ನೇರ ಸಂಬಂಧ ಹೊಂದಿದೆ. ಅದು ಲೈಂಗಿಕ ಲಕ್ಷಣಗಳಲ್ಲಿ ಬದಲಾವಣೆಯನ್ನುಂಟು ಮಾಡುತ್ತದೆ. ಬೊಜ್ಜು ಹೆಚ್ಚಲು ಕೂಡ ಕಾರಣವಾಗುತ್ತದೆ.
ಪ್ಲಾಸ್ಟಿಕ್‌ನಲ್ಲಿ ಪಿವಿಸಿ, ಡೈಆಕ್ಸಿನ್ ಸ್ಟೈರಿನಂತಹ ಕ್ಯಾನ್ಸರ್‌ಕಾರಕ ಅಂಶಗಳು ಕಂಡುಬರುತ್ತವೆ. ಈ ಎಲ್ಲ ಸಂಗತಿಗಳು ನೇರವಾಗಿ ಕ್ಯಾನ್ಸರ್‌ನೊಂದಿಗೆ ಸಂಬಂಧ ಹೊಂದಿವೆ.
ಅಚ್ಚರಿದಾಯಕ ಸಂಗತಿಯೇನೆಂದರೆ, ಪ್ಲಾಸ್ಟಿಕ್ ಸಲಕರಣೆಯಲ್ಲಿ ಆಹಾರ ಪದಾರ್ಥವನ್ನಿಟ್ಟು ಮೈಕ್ರೋವೇವ್‌ನಲ್ಲಿ ಬೇಯಿಸಲು ಶುರು ಮಾಡಿದಾಗ, ಪ್ಲಾಸ್ಟಿಕ್ ಸಲಕರಣೆಯಲ್ಲಿರುವ ರಸಾಯನ ಓವನ್‌ನ ಬಿಸಿಯಿಂದ ಕರಗಿ ಆಹಾರ ಪದಾರ್ಥದ ಮೇಲೆ ದುಷ್ಪರಿಣಾಮ ಬೀರುತ್ತವೆ. ಯಾವಾಗ ಆಹಾರದ ಬಿಸಿ ಪ್ಲಾಸ್ಟಿಕ್‌ನ ಬಿಸಿ ಪಾತ್ರೆಯಿಂದ ಹೊರಸೂಸುವ ರಸಾಯನಗಳ ಸಂಪರ್ಕಕ್ಕೆ ಬರುತ್ತದೋ ಆಗ ಅದು ದೂಷಿತಗೊಳ್ಳುತ್ತದೆ.
ಮೈಕ್ರೋವೇವ್‌ನಲ್ಲಿ ಯಾವುದೇ ಬಗೆಯ ಪ್ಲಾಸ್ಟಿಕ್ ಸುರಕ್ಷಿತವಲ್ಲ. ಅಂದಹಾಗೆ ಒಂದು ವಿಷಯ ಸ್ಪಷ್ಟವಾಗುವುದೇನೆಂದರೆ, ಸಾಮಾನ್ಯವಾಗಿ ಅದಕ್ಕೆಂದೇ ಬಳಸಲ್ಪಡುವ ಪರಿಕರಗಳು ಸ್ವಲ್ಪ ಕಡಿಮೆ ಹಾನಿಕಾರಕವಾಗಿರುತ್ತವೆ. ಅವುಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಹಾನಿಕಾರಕ ರಸಾಯನಗಳನ್ನು ಬಳಸಲಾಗಿರುತ್ತದೆ. ನೀವು ಮೈಕ್ರೋವೇವ್‌ನ್ನು ಬಳಸುವ ಸಮಯದಲ್ಲಿ ಸ್ವಲ್ಪ ದೂರವೇ ಇರಿ. ಏಕೆಂದರೆ ಬೇರೆ ಬೇರೆ ಸಂಶೋಧನೆಗಳಿಂದ ತಿಳಿದುಬಂದ ಸಂಗತಿಯೇನೆಂದರೆ, ಮೈಕ್ರೋವೇವ್ ಬಳಸುವಾಗ ಅದರಿಂದ ಹಾನಿಕಾರಕ ವಿಕಿರಣಗಳು ಹೊರಹೊಮ್ಮುತ್ತವೆ. ಹೆಚ್ಚಿನ ಪ್ರಕರಣಗಳಲ್ಲಿ ಕಂಡುಬಂದ ಸಂಗತಿಯೆಂದರೆ, ಮೈಕ್ರೋವೇವ್‌ನಲ್ಲಿ ಆಹಾರ ಬೇಯಿಸುವುದು ಅಥವಾ ಬಿಸಿ ಮಾಡುವುದು ಹಾನಿಕಾರಕವಲ್ಲ. ಮೈಕ್ರೋವೇವ್‌ನಲ್ಲಿ ಬಳಸಬಾರದ ಪರಿಕರವನ್ನು ಬಳಸಿದರೆ ಅದು ನಿಮ್ಮ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡಬಹುದು, ಹೀಗಾಗಿ ಪ್ಲಾಸ್ಟಿಕ್ ಪರಿಕರಗಳನ್ನು ಬಳಸಲೇಬೇಡಿ.
ಗಾಜಿನ ಪಾತ್ರೆಗಳು ಸುರಕ್ಷಿತ
ಆಹಾರವನ್ನು ಬಿಸಿ ಮಾಡಲು ಬೇಯಿಸಲು ಗಾಜಿನ ಪಾತ್ರೆಗಳು ಹೆಚ್ಚು ಸುರಕ್ಷಿತ. ಅವು ಪ್ಲಾಸ್ಟಿಕ್ ಪಾತ್ರೆಗಳ ಹಾಗೆ ರಸಾಯನವನ್ನು ಹೊರಸೂಸುವುದಿಲ್ಲ. ಹೀಗಾಗಿ ಪ್ಲಾಸ್ಟಿಕ್‌ಗೆ ಹೋಲಿಸಿದರೆ ಗಾಜು ಹೆಚ್ಚು ಸುರಕ್ಷಿತ. ನೀವು ಸೇವಿಸುವ ಆಹಾರ ಯಾವುದು, ಅದನ್ನು ಬಿಸಿ ಮಾಡದೆಯೂ ಸೇವಿಸಬಹುದು ಅಂದರೆ, ಹಾಗೆಯೇ ಸೇವಿಸಿ. ಪ್ಲಾಸ್ಟಿಕ್‌ನ ಉಪಯೋಗ ಎಲ್ಲೆಲ್ಲೂ ಆಗುತ್ತಿದೆ. ಹೀಗಾಗಿ ಪ್ಲಾಸ್ಟಿಕ್ ಬಳಕೆಯಿಂದ ಎಷ್ಟು ಸಾಧ್ಯವೋ ಅಷ್ಟು ದೂರ ಇರುವುದು ಒಳ್ಳೆಯದು. ಆ ಮೂಲಕ ದೇಹವನ್ನು ಬಿಪಿಎ ಪ್ರಭಾವದಿಂದ ಅಷ್ಟಿಷ್ಟು ದೂರ ಇಡಬಹುದು.
– ಡಾ. ನೀಲಾ