ಮಹಿಳೆಯರು ಅಡುಗೆಮನೆಯಲ್ಲಿ ಕ್ಯಾಬಿನೆಟ್ ಹಾಗೂ ಕೌಂಟರ್ ಆಯ್ಕೆಯ ಬಗ್ಗೆ ಹೆಚ್ಚು ಗಮನಕೊಡುತ್ತಾರೆ. ಆದರೆ ಅಡುಗೆಮನೆಯ ಸಿಂಕ್ ಬಗ್ಗೆ ಹೆಚ್ಚು ಗಮನ ಕೊಡುವುದಿಲ್ಲ. ಆದರೆ ಅದು ಅಡುಗೆಮನೆಯ ಒಂದು ಪ್ರಮುಖ ಭಾಗ. ಹೀಗಾಗಿ ಅದರ ಆಯ್ಕೆಯ ಸಂದರ್ಭದಲ್ಲಿ ಒಂದಿಷ್ಟು ಗಮನಕೊಟ್ಟರೆ ಒಳ್ಳೆಯ ಸೌಲಭ್ಯ ದೊರಕುವುದರ ಜೊತೆಗೆ ಒಳ್ಳೆಯ ಲುಕ್ ಕೂಡ ದೊರಕುತ್ತದೆ.
ಎಂತಹ ಕಿಚನ್ ಸಿಂಕ್ ಉತ್ತಮ : ಅಡುಗೆಮನೆಯಲ್ಲಿ ಸಾಮಾನ್ಯವಾಗಿ ಸ್ಟೈನ್‌ಲೆಸ್ ಸ್ಟೀಲ್ ಬಳಸಲಾಗುತ್ತದೆ. ಚೆನ್ನಾಗಿ ಕಾಣುವುದರ ಜೊತೆಗೆ ಸ್ವಚ್ಛತೆಯ ದೃಷ್ಟಿಯಿಂದ ಒಳ್ಳೆಯದು. ಕಡಿಮೆ ಗೇಜ್‌ವುಳ್ಳದ್ದು ಹೆಚ್ಚು ಭಾರ ಹಾಗೂ ಬಲಿಷ್ಠವಾಗಿರುತ್ತದೆ. ಹೆಚ್ಚು ಗೇಜಿನದು ಹಗುರ ಹಾಗೂ ದುರ್ಬಲವಾಗಿರುತ್ತದೆ. ಹೀಗಾಗಿ ನಿಮ್ಮ ಅಗತ್ಯಕ್ಕೆ ಸೂಕ್ತ ಆಕಾರದ ಸ್ಟೀಲ್‌ನ ಗೇಜ್ ಅಳವಡಿಸಿ.
ಹಿಂದೆ ಸಿಂಕ್‌ನ ಪಾತ್ರೆ ಕಬ್ಬಿಣದ್ದು ಆಗಿತ್ತು. ಅದರ ಸ್ವಚ್ಛತೆ ಕಷ್ಟಕರ. ಇತ್ತೀಚೆಗೆ ಗ್ರಾನೈಟ್‌ನ ಕ್ವಾರ್ಟ್ಜ್ ಸಿಂಕ್ ಕೂಡ ದೊರೆಯುತ್ತವೆ. ಸೌಂದರ್ಯದ ದೃಷ್ಟಿಯಿಂದ ಅವು ಬಹಳ ಉತ್ತಮ. ಸೆರಾಮಿಕ್ ಸಿಂಕ್‌ಗಳು ಲಭಿಸುತ್ತವೆ. ಆದರೆ ಅವು ಒಡೆದುಹೋಗುವ ಭೀತಿ ಇರುತ್ತದೆ.
ಸಿಂಕ್‌ನ ಡಿಸೈನ್ : ಸಿಂಕ್‌ನ ಆಯ್ಕೆಯ ಬಳಿಕ ಅದರ ಡಿಸೈನ್ ಹೇಗಿರಬೇಕು ಎಂಬುದು ಕೂಡ ನಿಮ್ಮ ಅಗತ್ಯ ಮತ್ತು ಅದು ಅಡುಗೆಮನೆಯ ಗಾತ್ರವನ್ನು ಅವಲಂಬಿಸಿದೆ. ನೀವು ಅಡುಗೆಮನೆಯಲ್ಲಿ ಸಿಂಗಲ್ ಬೇಸಿನ್ ಸಿಂಕ್ ಅಥವಾ ಡಬಲ್ ಬೇಸಿನ್ ಸಿಂಕ್‌ನ್ನು ನಿಮ್ಮ ಸೌಲಭ್ಯಕ್ಕನುಗುಣವಾಗಿ ಆಯ್ಕೆ ಮಾಡಬಹುದು.
ಸಿಂಗಲ್ ಬೇಸಿನ್ ಸಿಂಕ್ : ಇದರಲ್ಲಿ ಒಂದೇ ಒಂದು ಸಿಂಕ್ ಇರುತ್ತದೆ. ಆದರೆ ದೊಡ್ಡ ಪಾತ್ರೆ ಇಡುವಷ್ಟು ಸಾಕಷ್ಟು ಸ್ಥಳಾವಕಾಶ ಇರುತ್ತದೆ. ಇದು ಡ್ರೇನ್ ಬೋರ್ಡ್ ಜೊತೆಗೆ ಲಭಿಸುತ್ತದೆ.
ಡಬಲ್ ಬೇಸಿನ್ ಸಿಂಕ್ : ಇದರಲ್ಲಿ 2 ಬೇಸಿನ್ ಇದ್ದು, ಇದನ್ನು ಅಳವಡಿಸಲು ಹೆಚ್ಚು ಸ್ಥಳಾವಕಾಶ ಬೇಕು. ಜೊತೆಗೆ ಖರ್ಚು ಕೂಡ ಹೆಚ್ಚು. ಎರಡೂ ಬೇಸಿನ್‌ಗಳು ಸಿಂಗಲ್ ಬೇಸಿನ್‌ಗೆ ಹೋಲಿಸಿದಲ್ಲಿ ಚಿಕ್ಕವು. ಆದರೆ ಇದರಿಂದ ಅನುಕೂಲಗಳೂ ಇವೆ. ಒಂದು ಸಿಂಕ್‌ನಲ್ಲಿ ಮುಸುರೆ ಪಾತ್ರೆಗಳಿದ್ದರೆ, ಇನ್ನೊಂದರಲ್ಲಿ ಬೇರೆ ಕೆಲಸ ಮಾಡಬಹುದು, ಉದಾಹರಣೆಗೆ ತರಕಾರಿ, ಅಕ್ಕಿ, ಬೇಳೆ ತೊಳೆಯಬಹುದು.
ಟ್ರಿಪಲ್ ಬೇಸಿನ್ ಸಿಂಕ್ : 3 ಬೇಸಿನ್ ಇರುವ ಸಿಂಕ್‌ಗಳು ಕೂಡ ದೊರೆಯುತ್ತವೆ. ಆದರೆ ಇವನ್ನು ಮನೆಯಲ್ಲಿ ಬಳಕೆ ಮಾಡುವುದಿಲ್ಲ.
ಫಾರ್ಮ್ಹೌಸ್ ಅಥವಾ ಏಪ್ರನ್ ಫ್ರಂಟ್ ಸಿಂಕ್ : ಇದರಲ್ಲಿ ಸಿಂಕ್‌ನ ಎದುರಿಗಿನ ಭಾಗ ಎಕ್ಸ್ ಪೋಸ್ಡ್ ಆಗಿರುತ್ತದೆ. ನಿಮಗೆ ಹೆಚ್ಚು ಆಳ ಅಥವಾ ಸ್ವಚ್ಛಗೊಳಿಸಲು ಸ್ವಲ್ಪ ಹೆಚ್ಚಿನ ಭಾಗ ಲಭಿಸುತ್ತದೆ.
ಟಾಪ್ ಮೌಂಟ್ ಸಿಂಕ್ : ಇದು ನಿಮ್ಮ ಕೌಂಟರ್‌ನ ಮೇಲ್ಭಾಗದಲ್ಲಿಯೇ ಇರುತ್ತದೆ. ಇದನ್ನು ಅಳಡಿಸುವುದು ಸುಲಭ. ಆದರೆ ಇದು ನೋಡಲು ಅಷ್ಟೊಂದು ಸುಂದರವಾಗಿ ಕಾಣದು.
ಅಂಡರ್ ಮೌಂಟ್ ಸಿಂಕ್ : ಇದು ನಿಮ್ಮ ಕೌಂಟರ್‌ನ ಲೆವೆಲ್‌ನಿಂದ ಕೆಳಕ್ಕೆ ಇರುತ್ತದೆ. ಆದರೆ ನೋಡಲು ಬಹಳ ಸುಂದರವಾಗಿ ಕಾಣುತ್ತದೆ. ಹೆಚ್ಚಿನ ಫ್ಲ್ಯಾಟ್ ಮತ್ತು ಅಪಾರ್ಟ್‌ಮೆಂಟ್‌ಗಳಲ್ಲಿ ಇದೇ ಹೆಚ್ಚಾಗಿ ಕಂಡುಬರುತ್ತದೆ.