ಸ್ನೇಹಾಳ ಮದುವೆಯಾದಾಗಿನಿಂದ ಅವಳು ತನ್ನ ಪತಿಯನ್ನು ಯಾರ ಜೊತೆಗೂ ಹೋಗಲು ಅವಕಾಶ ಕೊಡುವುದಿಲ್ಲ. ಪತಿ ಸತೀಶ್‌ ಯಾರ ಜೊತೆಗಾದರೂ ಮಾತನಾಡಿದರೆ ಸಾಕು, ಅವಳಿಗೆ ಬೇಸರವಾಗುತ್ತದೆ. ನನ್ನ ಮೇಲೆ ನಿನಗೆ ಈ ರೀತಿಯ ಸಂದೇಹ ಏಕೆ ಬರುತ್ತದೆ ಎಂದು ಕೇಳಿದರೆ, “ನಾನು ನಿಮ್ಮನ್ನು ಅತಿಯಾಗಿ ಪ್ರೀತಿಸುತ್ತೇನೆ. ಆ ಕಾರಣದಿಂದ ನೀವು ಯಾರ ಜೊತೆಗೆ ಮಾತನಾಡಿದರೂ ನನಗೆ ಸಹಿಸಿಕೊಳ್ಳೋಕೆ ಆಗುವುದಿಲ್ಲ,”  ಎಂಬ ಉತ್ತರ ಬರುತ್ತದೆ. ಕೆಲವು ದಿನಗಳ ಬಳಿಕ ಪರಿಸ್ಥಿತಿ ಹೇಗಾಗಿ ಬಿಟ್ಟಿತೆಂದರೆ, ಪ್ರತಿ ಅರ್ಧರ್ಧ ಗಂಟೆಗೊಮ್ಮೆ ಪತಿಗೆ ಏನು ಮಾಡುತ್ತಿದ್ದೀರಿ ಎಂದು ಕೇಳುತ್ತಾಳೆ. ಮತ್ತೊಮ್ಮೆ ಬರುವಾಗ ನನಗೆ ಏನಾದರೂ ತೆಗೆದುಕೊಂಡು ಬನ್ನಿ ಎನ್ನುತ್ತಾಳೆ. ಹಾಗೊಮ್ಮೆ ಪತಿ ಹೇಳಿದ್ದನ್ನು ತಂದರೆ ಅವನ ಬಗ್ಗೆ ಸಂದೇಹ. ಇದನ್ನು ತರಲು ನಿಮ್ಮ ಜೊತೆಗೆ ಯಾರು ಬಂದಿದ್ದರು ಎಂದು ಕೇಳುತ್ತಾಳೆ. ಈಗಂತೂ ಅವನ ಬಗ್ಗೆ ಪತ್ತೇದಾರಿಕೆ ಮಾಡುವುದೇ ಅವಳ ಮುಖ್ಯ ಕೆಲಸ ಆಗಿಬಿಟ್ಟಿದೆ. ಈ ಕಾರಣದಿಂದಾಗಿ ಸತೀಶನ ಮನೆಯವರಿಗೆಲ್ಲ ನೆಮ್ಮದಿ ಭಂಗ ಆಗುತ್ತಿದೆ. ಈ ಕಾರಣದಿಂದ ಸತೀಶ್‌ ತನ್ನ ಕೆಲಸ ಸರಿಯಾಗಿ ಮಾಡಲು ಆಗುತ್ತಿಲ್ಲ. ಅನೇಕ ವರ್ಷಗಳಿಂದ ನಡೆಸಿಕೊಂಡು ಬಂದಿದ್ದ ವ್ಯಾಪಾರ ಈಗ ಕುಂಟುತ್ತ ನಡೆಯುತ್ತಿದೆ. ಕ್ರಮೇಣ ಅವನು ತನ್ನ ಗೆಳೆಯರಿಂದಲೂ ದೂರವಾಗುತ್ತ ಬಂದ. ಸ್ನೇಹಾಳಿಂದಾಗಿ ಅವನೀಗ ಮನೆಯಿಂದ ಹೊರಗೆ ಕುಟುಂಬದವರನ್ನು ಕೂಡ ಭೇಟಿ ಆಗುತ್ತಿಲ್ಲ.

ತನ್ನ ಪ್ರೀತಿಯನ್ನು ಕಾಪಾಡಿಕೊಳ್ಳಲು ಸ್ನೇಹಾಳ ಹುಚ್ಚು ವ್ಯಾಮೋಹದಿಂದ ಎರಡು ಕುಟುಂಬಗಳ ಜೀವನ ನರಕಮಯವಾಗಿ ಬಿಟ್ಟಿತು. ಕೊನೆಗೊಮ್ಮೆ ಸತೀಶ್‌ ಸ್ನೇಹಾಳಿಂದ ದೂರವಾಗಿಬಿಟ್ಟ. ಇದಕ್ಕಿಂತ ಬೇರೆ ಪರ್ಯಾಯ ಉಪಾಯವೇ ಅವನಿಗೆ ಹೊಳೆಯಲಿಲ್ಲ. ಅವಳ ಅದೆಂಥ ಪ್ರೀತಿ, ಹುಚ್ಚು ಹೊಳೆಯಲ್ಲಿ ಕೊಚ್ಚಿಹೋಗಲು ಕಾರಣವಾಯಿತು?

ಹೊಸ ಸಂಬಂಧಗಳ ಕಗ್ಗಂಟು

ಸಂಶೋಧನೆಗಳು ಹೇಳುವುದೇನೆಂದರೆ, ಇಬ್ಬರು ವ್ಯಕ್ತಿಗಳು ಹೊಸ ಸಂಬಂಧದಲ್ಲಿ ಬಂಧಿಗಳಾದಾಗ, ಆರಂಭದಲ್ಲಿ ಅವರಿಗೆ ಹೊಂದಾಣಿಕೆ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಒಂದು ವೇಳೆ ಅವರ ಹೊಂದಾಣಿಕೆ ಕಷ್ಟವಾಗಿಬಿಟ್ಟರೆ ವಿಚ್ಛೇದನದ ಪರಿಸ್ಥಿತಿ ಕೂಡ ಉದ್ಭವಿಸಬಹುದು. ಆದರೆ ಅಷ್ಟೊಂದು ವರ್ಷ ಸಂಸಾರ ನಡೆಸಿ ಇಳಿ ವಯಸ್ಸಿನಲ್ಲಿ ವಿಚ್ಛೇದನ ಪಡೆಯುವುದು ನಿಜಕ್ಕೂ ಅಚ್ಚರಿ ಹಾಗೂ ಆಘಾತಕಾರಿ ಎನಿಸುತ್ತದೆ. ರಾಘವ ಬಹುರಾಷ್ಟ್ರೀಯ ಕಂಪನಿಯೊಂದರಲ್ಲಿ ಉನ್ನತ ಸ್ಥಾನದಲ್ಲಿರುವ ವ್ಯಕ್ತಿ. ಎಲ್ಲರ ಜೊತೆ ಬೆರೆಯುವುದು ಅವನಿಗೆ ಖುಷಿ ಕೊಡುತ್ತದೆ. ಮನೆಯಲ್ಲಿ ಆತನ ಮದುವೆ ಮಾತುಕತೆಗಳು ಶುರುವಾದಾಗ ಮಂಜುಳಾ ಬಗ್ಗೆ ಅವನಿಗೆ ವಿಶೇಷ ಆಸಕ್ತಿ ಏನೂ ಇರಲಿಲ್ಲ. ಆದರೆ ಮನೆಯವರ ಒತ್ತಾಯಕ್ಕೆ ಮಣಿದು `ಹ್ಞೂಂ’ ಎಂದು ಹೇಳಿದ. ಮನೆಯವರು ಅವನಿಗೆ ಒಪ್ಪುವಂತಹ ಸುಂದರ ಹುಡುಗಿಯನ್ನು ಆಯ್ಕೆ ಮಾಡಿದ್ದರು. ಮನೆಗೆಲಸದಲ್ಲೂ ಆಕೆ ನೆರವಾಗಬೇಕು ಎನ್ನುವುದು ಅವರ ಯೋಚನೆಯಾಗಿತ್ತು.

ಮಂಜುಳಾಗೆ ತಮ್ಮ ಬಂಧುಬಳಗದವರೊಂದಿಗೆ ಭೇಟಿ ಮಾಡುವುದು ಬಹಳ ಖುಷಿ ಕೊಡುತ್ತಿತ್ತು. ಆದರೆ ರಾಘವನಿಗೆ ಇದು ಇಷ್ಟ ಇರಲಿಲ್ಲ. ಬಳಿಕ ಅವಳು ರಾಘವನನ್ನು ಮಾತುಮಾತಿಗೆ ಟೀಕೆ ಮಾಡತೊಡಗಿದಳು. ಅವನು ಜೋರಾಗಿ ನಕ್ಕರೆ `ಇಷ್ಟೊಂದು ಗಲಾಟೆ ಮಾಡುವ ಅಗತ್ಯವಿದೆಯೇ?’ ಎಂದು ಪ್ರಶ್ನಿಸತೊಡಗಿದಳು. ಯಾರಾದರೂ ಮಹಿಳೆಯ ಕಡೆ ನೋಡಿದರೆ ಅವಳನ್ನು ನೋಡಿ ಜೊಲ್ಲು ಸುರಿಸುತ್ತಿದ್ದೀರಾ ಎಂದು ಪ್ರಶ್ನಿಸುತ್ತಾಳೆ.

ರಾಘವ ಸ್ನೇಹಿತರೊಂದಿಗೆ ಹೊರಗೆಲ್ಲಾದರೂ ಹೋದರೆ, ಮಂಜುಳಾ ಫೋನ್‌ ಮಾಡಿ ಯಾಕೆ ಮನೆಗೆ ಬರುವುದು ನೆನಪಿಲ್ಲವೇ ಎಂದು ಪ್ರಶ್ನಿಸುತ್ತಾಳೆ. ಮನೆಗೆ ಬಂದ ಬಳಿಕ ಅವನೊಂದಿಗೆ ಜಗಳಕ್ಕೆ ನಿಲ್ಲುತ್ತಾಳೆ. ಜಗಳಗಳಿಂದ ಬಚಾವಾಗಲು ರಾಘವ ಜನರನ್ನು ಭೇಟಿಯಾಗುವುದನ್ನು ನಿಲ್ಲಿಸಿಬಿಟ್ಟ. ಆಫೀಸಿಗೆ ಹೋಗುತ್ತಿದ್ದ, ಮನೆಗೆ ವಾಪಸ್‌ ಬಂದ ಬಳಿಕ ತನ್ನನ್ನು ತಾನು ಕೋಣೆಯಲ್ಲಿ ಬಂಧಿಯಾಗಿಸಿಕೊಳ್ಳುತ್ತಿದ್ದ. ಮಂಜುಳಾ ಟಿ.ವಿ ನೋಡುವುದರಲ್ಲಿ ಮಗ್ನಳಾಗಿರುತ್ತಿದ್ದಳು. ಕ್ರಮೇಣ ರಾಘವ ಮದ್ಯ ವ್ಯಸನಿ ಆದ. ಮಂಜುಳಾ ಅವನ ಸಮಸ್ಯೆಗೆ ಸ್ಪಂದಿಸುವ ಬದಲು, ಅವನಿಗೆ `ನೀವು ನಾಟಕ ಮಾಡುತ್ತಿದ್ದೀರಿ,’ ಎಂದು ಹೇಳಿ ಅವನನ್ನು ಹಂಗಿಸುತ್ತಿದ್ದಳು. ಅದೊಂದು ದಿನ ದೊಡ್ಡ ಅವಾಂತರವೇ ನಡೆಯಿತು. ಮನೆಯ ಸದಸ್ಯರೆಲ್ಲ  ಹಾಲ್‌ನಲ್ಲಿ ಕುಳಿತಿದ್ದರು. ಆಗ ಮಂಜುಳಾ ಕೈಯಲ್ಲಿ ಹಿಟ್‌ ಕ್ರಿಮಿನಾಶಕ ಹಿಡಿದು ಎಲ್ಲ ಕಡೆಯೂ ಸಿಂಪಡಿಸತೊಡಗಿದಳು. ಅದನ್ನು ನೋಡಿ ರಾಘವ ಕೂಗಾಡಿದ. ಈ ಘಟನೆಯ ಕೆಲವು ದಿನಗಳ ಬಳಿಕ ರಾಘವ ಕಾಲುಗಳಿಗೆ ಬಿಸಿ ಕಾವು ಕೊಡಲು ಬಿಸಿ ನೀರು ತರಲು ಮಂಜುಳಾಗೆ ಹೇಳಿದ. ಮೊದಲು ಅವಳು ತರಲು ನಿರಾಕರಿಸಿ. ನಂತರ ಕುದಿ ಕುದಿಯುವ ಬಿಸಿ ನೀರು ತಂದಳು.

ರಾಘವ ಮಂಜುಳಾಳನ್ನು ಬದಲಿಸಲು ಬಹಳ ಪ್ರಯತ್ನ ಮಾಡಿದ. ಆದರೆ ಏನೂ ಫಲಪ್ರದ ಆಗದೇ ಇದ್ದಾಗ, ಅವನು ಅವಳೊಂದಿಗೆ ಮಾತನಾಡುವುದನ್ನು ನಿಲ್ಲಿಸಿಬಿಟ್ಟ. ಅವಳ ಜೊತೆ ಇನ್ನು ಮುಂದಿನ ಜೀವನ ನಡೆಸದೇ ಇರಲು ಅವನು ನಿರ್ಧರಿಸುತ್ತಿದ್ದ. ಆದರೆ ಮನೆಯವರ ಒತ್ತಾಯಕ್ಕೆ ಮಣಿದು ತನ್ನ ನಿರ್ಧಾರ ಬದಲಿಸಿದ. ಅಕ್ಕಪಕ್ಕದವರು ಏನಂದಾರು, ಒಂದು ಮಗುವಾದರೆ ಎಲ್ಲ ಸರಿಹೋಗುತ್ತದೆ ಎಂದು ಮನೆಯವರು ಸಮಾಜಾಯಿಷಿ ನೀಡಿದರು. ಜೀವನ ಹಾಗೆಯೇ ಸಾಗಿತು. ಮದುವೆಯಾಯಿತು, ಮಕ್ಕಳಾದವು. ಜೀವನ ಮೊದಲಿಗಿಂತ ಮತ್ತಷ್ಟು ಕೆಟ್ಟುಹೋಯಿತು. ಮಂಜುಳಾ ಬದಲಾಗಲಿಲ್ಲ, ಕುಟುಂಬದವರ ಮನ ಗೆಲ್ಲಲು ಕೂಡ ಪ್ರಯತ್ನಿಸಲಿಲ್ಲ. ಒಮ್ಮೆ ಅತ್ತೆಗೆ ಬಯ್ದರೆ, ಇನ್ನೊಮ್ಮೆ ಮಾವನನ್ನು ಹಳಿಯುತ್ತಿದ್ದಳು. ಮಕ್ಕಳನ್ನು ಕೂಡ ಕಾರಣವಿಲ್ಲದೆ ದಂಡಿಸುತ್ತಿದ್ದಳು. ಯಾರಾದರೂ ಮಹಿಳೆ ಅವಳಿಗೆ ತಿಳಿಹೇಳಲು ಬಂದರೆ, ಅವರ ಜನ್ಮ ಜಾಲಾಡಿಬಿಡುತ್ತಿದ್ದಳು. ನನ್ನ ಗಂಡ ಹಾಗೂ ನಿನ್ನ ನಡುವೆ ಸಂಬಂಧ ಇರಬಹುದು. ಅದಕ್ಕೆ ನೀವು ಬಂದಿದ್ದೀರಿ ಎಂದು ನೇರಾನೇರ ಹೇಳಿಬಿಡುತ್ತಿದ್ದಳು.

ಮನೆಯ ಪರಿಸ್ಥಿತಿ ಅದೆಷ್ಟು ವಿಕೋಪಕ್ಕೆ ಹೋಯಿತೆಂದರೆ, ಏನು ಮಾಡಬೇಕೆಂದು ಯಾರಿಗೂ ತೋಚಲಿಲ್ಲ. ಮಂಜುಳಾಳ ಕುಟುಂಬದವರು ಕೂಡ ಅವಳಿಗೆ ಬುದ್ಧಿ ಹೇಳುವ ಬದಲು ರಾಘವನ ಕುಟುಂಬದವರದ್ದೇ ತಪ್ಪು ಎಂದು ಗೂಬೆ ಕೂರಿಸತೊಡಗಿದರು. ಕೊನೆಗೊಮ್ಮೆ ಮಕ್ಕಳು ಹಾಗೂ ಸೋದರಿಯರ ಸಲಹೆಯ ಮೇರೆಗೆ ರಾಘವ ಮಂಜುಳಾಳನ್ನು ತವರಿಗೆ ಬಿಟ್ಟುಬಂದ. ಈಗ ಎರಡೂ ಕುಟುಂಬದವರು ಕೋರ್ಟಿಗೆ ಅಲೆದಾಡುತ್ತಿದ್ದಾರೆ, ಒಬ್ಬರು ಮತ್ತೊಬ್ಬರ ಮೇಲೆ ಆರೋಪಪ್ರತ್ಯಾರೋಪ ಮಾಡುತ್ತಿದ್ದಾರೆ.

ಮಂಜುಳಾಳ ಇಬ್ಬರು ಮಕ್ಕಳಿಗೆ ಫ್ಯಾಮಿಲಿ ಕೋರ್ಟಿನಲ್ಲಿ ಪ್ರಶ್ನಿಸಲಾಯಿತು, “ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು?” ಇಬ್ಬರು ಪುತ್ರಿಯರು (ಒಬ್ಬಳು ವಿವಾಹಿತೆ) ಹೇಳಿದರು. “ಅಮ್ಮ ಮನೆಗೆ ವಾಪಸ್‌ ಬರಬೇಕೆಂದು ನಾವು ಬಯಸುವುದಿಲ್ಲ. ಅಮ್ಮ ಈವರೆಗೆ ಅಪ್ಪನನ್ನು ಅರ್ಥ ಮಾಡಿಕೊಂಡಿಲ್ಲ. ಅವರು ಬರದೇ ಇದ್ದರೆ ಮನೆಯಲ್ಲಿ ಶಾಂತಿ ಇರುತ್ತದೆ.”

ಇಲ್ಲಿ ಏಳುವ ಪ್ರಶ್ನೆ ಏನೆಂದರೆ, ಇಂತಹ ಸ್ಥಿತಿಗೆ ಕಾರಣ ಏನು? ಒಂದು ಸಮೀಕ್ಷೆಯಲ್ಲಿ ಅಚ್ಚರಿ ಮೂಡಿಸುವಂತಹ ಕೆಲವು ಸಂಗತಿಗಳು ಬೆಳಕಿಗೆ ಬಂದಿವೆ. ಇಬ್ಬರು ವ್ಯಕ್ತಿಗಳ ನಡುವಿನ ವಿಚ್ಛೇದನಕ್ಕೆ ಅತಿಯಾದ ವ್ಯಾಮೋಹ ಅಥವಾ ಗೀಳು ಕೂಡ ಒಂದು ಕಾರಣವಾಗಿದೆ. ಅದು ಅಗತ್ಯಕ್ಕಿಂತ ಹೆಚ್ಚು ಪ್ರೀತಿಯ ಗೀಳು ಆಗಿರಬಹುದು ಅಥವಾ ಅಗತ್ಯಕ್ಕಿಂತ ಹೆಚ್ಚು ಕೋಪ ಕೂಡ ಕಾರಣವಾಗಿರಬಹುದು. ವಾಸ್ತವದಲ್ಲಿ ಒಬ್ಬ ಸಂಗಾತಿ ಇನ್ನೊಬ್ಬರನ್ನು ಪ್ರೀತಿಸುತ್ತಾನೆಂದರೆ, ಆತ ಅದೇ ಅಪೇಕ್ಷೆ ಇಟ್ಟುಕೊಳ್ಳುತ್ತಾನೆ. ಒಂದು ವೇಳೆ ಇನ್ನೊಬ್ಬ ಸಂಗಾತಿ ಆ ಬಗ್ಗೆ ಗಮನ ಕೊಡದೆ ಇದ್ದಾಗ, ಸಂಬಂಧ ಸಂಕಷ್ಟಕ್ಕೆ ಸಿಲುಕುತ್ತದೆ. ಒಂದು ವರದಿಯ ಪ್ರಕಾರ, ಈ ಸ್ಥಿತಿ ಇಬ್ಬರಿಗೂ ಅಪಾಯಕಾರಿಯೇ ಹೌದು. ಏಕೆಂದರೆ ಒಬ್ಬರು ಯೋಚಿಸುತ್ತಾರೆ, `ಇದರಲ್ಲಿ ನನ್ನದೇನೂ ತಪ್ಪಿಲ್ಲ. ಸಂಗಾತಿ ನನಗೆ ಹೊಂದಿಕೊಳ್ಳುತ್ತಿಲ್ಲ,’ ಎಂದು. ಇನ್ನೊಬ್ಬರು ಯೋಚಿಸುವುದು ನಾನು ಮೋಸಕ್ಕೆ ಸಿಲುಕಿಬಿಟ್ಟೆ ಎಂದು. ಇಂತಹ ಸ್ಥಿತಿಯಲ್ಲಿ ಇಬ್ಬರೂ ಹೊಸಬರ ಶೋಧದಲ್ಲಿ  ಮುಳುಗಿಬಿಡುತ್ತಾರೆ.

ಈ ವಯಸ್ಸಿನಲ್ಲಿ ವಿಚ್ಛೇದನ ಏಕೆ?

ಹೆಸರಾಂತ ಲೇಖಕ ಕೊಯೆಲೆಯೊ ಹೇಳುವುದೇನೆಂದರೆ, ಒಂದು ವೇಳೆ ವಿಚ್ಛೇದನ ಕೊಡುವ ಆಸಕ್ತಿ ಇರದೇ ಇದ್ದರೆ ಜೀವನ ನಮಗೆ ಅವಕಾಶಗಳ ಸುರಿಮಳೆ ನೀಡಿ ನಮ್ಮನ್ನು ಖುಷಿಯಿಂದೇನೂ ಇಡದು. ಇದು ವಿಚ್ಛೇದಿತ ವ್ಯಕ್ತಿಗಳಿಗೆ ಸೂಕ್ತ ಎನಿಸುತ್ತದೆ.

ಭಾರತದಂತಹ ದೇಶಗಳಲ್ಲಿ ಕಳೆದ 12 ವರ್ಷಗಳಲ್ಲಿ ವಿಚ್ಛೇದನದ ಪ್ರಮಾಣ ದ್ವಿಗುಣಗೊಂಡಿದೆ. ಅಂದಹಾಗೆ ಪರಿಪಕ್ವ ಮನಸ್ಸಿನಲ್ಲಿ ವಿಚ್ಛೇದನಕ್ಕೆ ಕಾರಣವೇನು?

ಲೇಖಕರಾದ ಜೆನಿಫರ್‌ ಹೇಳುವುದೇನೆಂದರೆ, “ವಿಚ್ಛೇದನದ ಅರ್ಥ ಜೀವನ ಕೊನೆಗೊಳ್ಳುವುದಿಲ್ಲ. ಒಂದು ವೇಳೆ ವೈವಾಹಿಕ ಜೀವನ ನಿಭಾಯಿಸುವಲ್ಲಿ ಸಮಸ್ಯೆ ಉಂಟಾಗುತ್ತಿದ್ದರೆ, ಅಂತಹ  ಅಪಯಶಸ್ವಿ ಜೀವನ ನಡೆಸುವುದರಿಂದ ಏನು ಪ್ರಯೋಜನ? ವಿಚ್ಛೇದನದ ಬಳಿಕ ಯಾರೊಬ್ಬರೂ ಸಾಯುವುದಿಲ್ಲ. ಅಪಯಶಸ್ವಿ ವೈವಾಹಿಕ ಜೀವನ ನಡೆಸುವುದರಿಂದ ಆರೋಗ್ಯ ಕೈಕೊಡುತ್ತದೆ.”

ಬೆಳ್ಳಿ ಹಬ್ಬದ ಅಂಚಿನಲ್ಲಿ ವಿಚ್ಛೇದನ

ಸಿಲ್ವರ್‌ ಜೂಬಿಲಿ ಅಥವಾ ಸಿಲ್ವರ್‌ ಸೆಪರೇಶನ್‌ ಅಂದರೆ ವಿಚ್ಛೇದನದ ಬಳಿಕ ಅವರಿಗೆ ಹೊಣೆಗಾರಿಕೆಯ ಬಿಸಿ ತಟ್ಟುವುದಿಲ್ಲ. ಅವರ ಮಕ್ಕಳು ಮದುವೆ ಮಾಡಿಕೊಂಡು ಸೆಟಲ್ ಆಗಿರುತ್ತಾರೆ. ತಮ್ಮದೇ ಆದ ರೀತಿಯಲ್ಲಿ ಜೀವನ ನಡೆಸಲು ಈಗ ಅವರಿಗೆ ಸಾಕಷ್ಟು ಸಮಯವಿರುತ್ತದೆ. ಸಂಗಾತಿಯ ಕಿರಿಕಿರಿ, ಗದರಿಕೆ ಯಾವುದೂ ಇರುವುದಿಲ್ಲ. ಪ್ರತಿಕ್ಷಣ ನೆಮ್ಮದಿದಾಯಕವಾಗಿರುತ್ತದೆ. ಇದೇ ನೆಮ್ಮದಿ ಅರಸುತ್ತ ಜನರು ಇಳಿ ವಯಸ್ಸಿನಲ್ಲಿ ವಿಚ್ಛೇದನ ಪಡೆಯುವಲ್ಲಿ ಸಂಕೋಚ ತೋರುವುದಿಲ್ಲ.

ಫ್ಯಾಮಿಲಿ ಕೋರ್ಟ್‌ ಕೌನ್ಸೆಲರ್‌ ಸುಹಾಸ್‌ರ ಪ್ರಕಾರ, ಸಂಬಂಧದಲ್ಲಿ ಕಹಿ ಉಂಟಾದರೆ, ಅದು ನಮ್ಮನ್ನು ಉಸಿರುಗಟ್ಟುವಂತೆ ಮಾಡಿದರೆ, ವಿಚ್ಛೇದನ ಪಡೆಯಬೇಕಾಗುತ್ತದೆ ಅವರ ಪ್ರಕಾರ ಅವರ ಸ್ನೇಹಿತನೊಬ್ಬ ವಿಚ್ಛೇದಿತ. ಅವರಿಗೆ ಇಬ್ಬರು ಮಕ್ಕಳು ಇದ್ದಾರೆ. ಇಂತಹ ಸ್ಥಿತಿಯಲ್ಲಿ ಗಂಡಹೆಂಡತಿ ಪ್ರತ್ಯೇಕವಾಗಿದ್ದೂ ಕೂಡ ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಬೆಳೆಸುತ್ತಿದ್ದಾರೆ. ಮಕ್ಕಳು ಕೂಡ ಖುಷಿಯಿಂದಿದ್ದಾರೆ.

– ಮೋನಿಕಾ

ಕುಟುಂಬ ಮತ್ತು ಸಮಾಜ

ಎಲ್ಲಕ್ಕೂ ಮುಖ್ಯವಾದುದೇನೆಂದರೆ, ಮಕ್ಕಳ ಜೊತೆ ಸಂಬಂಧಗಳನ್ನು ಮಧುರವಾಗಿರಿಸಿಕೊಳ್ಳಿ. ಏಕೆಂದರೆ ಅವರೇ ನಿಮ್ಮ ನಿಜವಾದ ಅಸ್ತಿತ್ವ. ಅವರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳಿ.

ಒಂದು ವೇಳೆ ನೀವು ಅವಿಭಕ್ತ ಕುಟುಂಬದಲ್ಲಿ ವಾಸಿಸುತ್ತಿದ್ದಲ್ಲಿ ಗಂಡ ಹಾಗೂ ಮಕ್ಕಳ ಜೊತೆ ಮನೆಯ ಹಿರಿಯ ನಾಗರಿಕರ ಬಗ್ಗೆ ಕಾಳಜಿ ವಹಿಸಿ. ಅವರ ಭಾವನೆಗಳನ್ನು ಗೌರವಿಸಿ.

ಯಾರಾದರೂ ಸಂಬಂಧಿಕರ ಜೊತೆ ಮನಸ್ತಾಪ ಉಂಟಾದರೆ, ಅವರು ನಿಮಗೆ ಹಿಡಿಸದೇ ಹೋದಲ್ಲಿ ಸಂಬಂಧದಲ್ಲಿನ ಈ ಕಹಿಯನ್ನು ಬೆಳೆಸುತ್ತ ಹೋಗಬೇಡಿ. ಅದರ ಬದಲಿಗೆ ತಿರಸ್ಕಾರ ಹಾಗೂ ಅತೃಪ್ತಿಯನ್ನು ಕೊನೆಗೊಳಿಸಲು ಪ್ರಯತ್ನಿಸಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ