ನೀವು ಯಾವುದೊ ಪಾರ್ಟಿಗೆ ಹೋಗಿರುವಿರಿ. ನಿಮ್ಮ ದೇಹದಿಂದ ಹೊರಹೊಮ್ಮುವ ದುರ್ಗಂಧದ ಕಾರಣದಿಂದ ಎಲ್ಲರೂ ದೂರ ದೂರ ಹೋಗುತ್ತಾರೆ. ಇದರಿಂದ ನಿಮಗೆಷ್ಟು ಸಂಕೋಚವಾಗುತ್ತದೆ ಎಂಬುದನ್ನು ಯೋಚಿಸಿ. ಅದು ನಿಮ್ಮ ವ್ಯಕ್ತಿತ್ವದ ಮೇಲಷ್ಟೇ ಅಲ್ಲ, ನಿಮ್ಮ ಆತ್ಮವಿಶ್ವಾಸವನ್ನೂ ಕುಗ್ಗಿಸುತ್ತದೆ. ಇಂತಹ ಸ್ಥಿತಿಯಲ್ಲಿ ದೇಹದ ದುರ್ಗಂಧವನ್ನು ನಿವಾರಿಸುವಲ್ಲಿ ನೆರವಾಗುವಂತಹ ಆಹಾರ ಪದಾರ್ಥಗಳ ಸೇವನೆ ಮಾಡಬೇಕು.

ಈ  ಕುರಿತಂತೆ ಡಾ. ಪವನ್‌ ಶೆಟ್ಟಿಯವರ ಜೊತೆ ಮಾತನಾಡಿದಾಗ, ಅವರು ಹೀಗೆ ಹೇಳಿದರು, “ನಾವು ಸೇವಿಸುವ ದ್ರವ ಪದಾರ್ಥಗಳು ಸರಿಯಾಗಿರದಿದ್ದರೆ ಮೂತ್ರದ ಬಣ್ಣ ಬದಲಾಗುವುದರ ಜೊತೆ, ಅದರಿಂದ ದುರ್ಗಂಧ ಕೂಡ ಬರುತ್ತದೆ. ನಮ್ಮ ದೇಹದಿಂದ ದುರ್ಗಂಧ ಬರದೇ ಇರಲು ಪ್ರತಿ 20 ರಿಂದ 30 ನಿಮಿಷಕ್ಕೊಮ್ಮೆ ನೀರು ಕುಡಿಯಬೇಕು.

“ನಾವು ಟ್ರಾನ್ಸ್ ಫ್ಯಾಟ್‌ನಂತಹ ಜಂಕ್‌ಫುಡ್‌ಗಳನ್ನು ಸೇವಿಸುತ್ತೇವೆ. ಅದು ಬೆವರಿನ ರೂಪದಲ್ಲಿ ವಿಷಕಾರಿ ಘಟಕಗಳನ್ನು ಹೊರ ಹೊಮ್ಮಿಸುತ್ತದೆ. ಅಷ್ಟೇ ಅಲ್ಲ, ಟ್ರಾನ್ಸ್ ಫ್ಯಾಟ್‌ ಸೇವನೆಯ ಕಾರಣದಿಂದ ನಮ್ಮ ಲಿವರ್‌ ಫ್ಯಾಟಿ ಕೂಡ ಆಗಬಲ್ಲದು. ಹೀಗಾಗಿ ಆರೋಗ್ಯಕರ ಆಹಾರ ಸೇವನೆ ಮಾಡಿ.“

ನಾವು ಸರಿಯಾಗಿ ಆಹಾರ ಸೇವನೆ ಮಾಡದೇ ಇದ್ದರೆ ನಮ್ಮ ಕರುಳಿನಲ್ಲಿ ಕೆಟ್ಟ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತವೆ. ಅವುಗಳಿಂದಾಗಿ ದುರ್ವಾಸನೆ ಬರುತ್ತದೆ. ಹೀಗಾಗಿ ಪ್ರತಿ 2-3 ಗಂಟೆಗಳಿಗೊಮ್ಮೆ ಯಾವುದಾದರೂ ಆರೋಗ್ಯಕರ ಆಹಾರ ಸೇವನೆ ಮಾಡುತ್ತಿರಬೇಕು.

ದೈನಂದಿನ ಆಹಾರದಲ್ಲಿ ಇವನ್ನು ಸೇವಿಸಿ

ದೇಹದಲ್ಲಿ ದ್ರದ ಪ್ರಮಾಣವನ್ನು ಕಾಯ್ದುಕೊಂಡು ಹೋಗುವುದರಿಂದ ರಕ್ತ ಗರಣೆಗಟ್ಟುವುದು ತಪ್ಪುತ್ತದೆ. ಮಲಬದ್ಧತೆಯ ಸಮಸ್ಯೆ ಇರದು. ಮೂತ್ರ ಜನಕಾಂಗದ ವ್ಯವಸ್ಥೆ ಸರಿಯಾಗಿ ಇರುವುದರಿಂದ ಸೋಂಕುಂಟಾಗುವ ಸಮಸ್ಯೆಯೂ ಇರದು. ಹೀಗಾಗಿ ನಿಮ್ಮ ಆಹಾರದಲ್ಲಿ ಕೆಳಕಂಡ ಪದಾರ್ಥಗಳನ್ನು ಸೇರಿಸಿಕೊಳ್ಳಿ.

ಗ್ರೀನ್‌ ಟೀ : ಇದು ಆ್ಯಂಟಿ ಆಕ್ಸಿಡೆಂಟ್‌ ಗುಣಗಳನ್ನು ಹೊಂದಿದೆ. ಇದು ದೇಹದ ದುರ್ಗಂಧ ತಡೆಯುವ ಶಕ್ತಿಶಾಲಿ ಔಷಧಿಯಂತೆ ಕೆಲಸ ಮಾಡುತ್ತದೆ. ಇದು ಉಸಿರಿನ ದುರ್ವಾಸನೆ ಉಂಟು ಮಾಡುವ ಸಂಗತಿಗಳನ್ನು ಕೊನೆಗೊಳಿಸುತ್ತದೆ. ಹೀಗಾಗಿ ದಿನದ ಆರಂಭವನ್ನು ಗ್ರೀನ್‌ ಟೀಯಿಂದ ಆರಂಭಿಸಿ.

ನಿಂಬೆ : ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಗುಣವಿರುವುದರಿಂದ ದೇಹವನ್ನು ದೂಷಿತಗೊಳಿಸುವ ಘಟಕಗಳನ್ನು ನಿವಾರಿಸುತ್ತದೆ. ಇದರಲ್ಲಿ ಅಸಿಡಿಕ್‌ ಅಂಶ ಇರುವುದರಿಂದ ಇದು ಚರ್ಮದಲ್ಲಿನ ಪಿ.ಎಚ್‌ ಮಟ್ಟವನ್ನು ಕಡಿಮೆಗೊಳಿಸುತ್ತದೆ. ಅದರಿಂದ ಕೆಟ್ಟ ಬ್ಯಾಕ್ಟೀರಿಯಾಗಳು ಉದ್ಭವಿಸುವ ಸಾಧ್ಯತೆ ಕಡಿಮೆಯಾಗುತ್ತದೆ. ಇದರ ಹೊರತಾಗಿ ನಿಂಬೆಯಲ್ಲಿರುವ ವಿಟಮಿನ್‌ `ಸಿ’, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಕೆಲಸ ಮಾಡುತ್ತದೆ. ಹೀಗಾಗಿ ನಿಮ್ಮ ದೇಹದ ವ್ಯವಸ್ಥೆಯನ್ನು ಸರಿಯಾಗಿ ಇಟ್ಟುಕೊಳ್ಳಲು ಬೆಳಗ್ಗೆ ಒಂದು ಗ್ಲಾಸ್‌ ಸಾಧಾರಣ ಬೆಚ್ಚಗಿನ ನೀರಿನಲ್ಲಿ ನಿಂಬೆರಸ ಮಿಶ್ರಣ ಮಾಡಿಕೊಂಡು ಕುಡಿಯಿರಿ. ಕಂಕುಳು ಹಾಗೂ ಪಾದದ ಮೇಲೆ ನಿಂಬೆಯಿಂದ ಉಜ್ಜಿಕೊಂಡರೆ ದುರ್ವಾಸನೆ ಹೊರಟುಹೋಗುತ್ತದೆ.

ಟೊಮೇಟೊ : ಇದರಲ್ಲಿ ಆ್ಯಂಟಿ ಬ್ಯಾಕ್ಟೀರಿಯಲ್ ಹಾಗೂ ಆ್ಯಂಟಿಸೆಪ್ಟಿಕ್‌ ಅಂಶ ಇರುವುದರಿಂದ ಇದು ದೇಹದಲ್ಲಿ ದುರ್ಗಂಧ ಪಸರಿಸುವ ರೋಗಾಣುಗಳನ್ನು ಹೊಡೆದೋಡಿಸುವ ಕೆಲಸ ಮಾಡುತ್ತದೆ. ಇದರಲ್ಲಿ ನ್ಯಾಚುರಲ್ ಆ್ಯಸ್ಟ್ರಿಂಜೆಂಟ್‌ ಇರುವ ಕಾರಣದಿಂದ ಮುಖದಲ್ಲಿ ಅಧಿಕ ಬೆವರು ಬರುವುದನ್ನು ತಡೆಯುತ್ತದೆ. ಹೀಗಾಗಿ ದಿನಕ್ಕೆ ಅರ್ಧ ಗ್ಲಾಸ್‌ ಟೊಮೇಟೊ ಜ್ಯೂಸ್‌ ಕುಡಿಯಿರಿ. ಜೊತೆಗೆ ನಿಮ್ಮ ಸಲಾಡ್‌ನಲ್ಲಿ ಟೊಮೇಟೊ ಸಹ ಸೇರ್ಪಡೆ ಮಾಡಿಕೊಳ್ಳಿ. ದೇಹದ ಯಾವ ಭಾಗದಲ್ಲಿ ಬೆವರು ಹೆಚ್ಚಾಗಿ ಬರುತ್ತದೋ ಅಲ್ಲಿ 10-15 ನಿಮಿಷ ಟೊಮೇಟೊ ಲೇಪಿಸಿ ಹಾಗೆಯೇ ಬಿಡಿ. ಇದು ಬೆವರನ್ನು ತಡೆಯಲು ನೆರವಾಗುತ್ತದೆ.

ಮೊಸರು : ಇದರಲ್ಲಿ ಉಪಯುಕ್ತ ಬ್ಯಾಕ್ಟೀರಿಯಾಗಳು ಇರುವುದರಿಂದ ಇದು ಆಹಾರವನ್ನು ಪಚನ ಮಾಡಲು ನೆರವಾಗುತ್ತದೆ ದೇಹದ ವಿಷಕಾರಿ ಘಟಕಗಳನ್ನು ಹೊರಹಾಕಲು ಕೂಡ ನೆರವಾಗುತ್ತದೆ. ಹೀಗಾಗಿ ನಿಯಮಿತವಾಗಿ ಮೊಸರು-ಮಜ್ಜಿಗೆ ಬಳಸಿ.

ಏಲಕ್ಕಿ : ಇದು ಕೂಡ ದುರ್ವಾಸನೆ ತಡೆಯಲು ಉಪಯುಕ್ತ. ಆಹಾರದಲ್ಲೂ 1-2 ಕಾಳು ಏಲಕ್ಕಿ ಉಪಯೋಗಿಸಿ. ಏಕೆಂದರೆ ಇದು ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಹೊರಹಾಕಲು ನೆರವಾಗುತ್ತದೆ.

ಹಸಿಶುಂಠಿ : ದೇಹದ ದುರ್ವಾಸನೆ ಹೋಗಲಾಡಿಸಿ ನಿಮಗೆ ತಾಜಾತನದ ಅನುಭವ ನೀಡುವುದರ ಜೊತೆಗೆ ದೇಹದ ಹಾನಿಕಾರಕ ಘಟಕ ಹೊರಹಾಕಲು ಕೂಡ ಸಹಾಯ ಮಾಡುತ್ತದೆ.

ನಿಮ್ಮನ್ನು ನೀವು ಸ್ವಚ್ಛವಾಗಿಟ್ಟುಕೊಳ್ಳಲು ಪ್ರತಿದಿನ ಆ್ಯಂಟಿ ಬ್ಯಾಕ್ಟೀರಿಯಲ್ ಸೋಪ್‌ನಿಂದ ಸ್ನಾನ ಮಾಡಿ, ಸ್ವಚ್ಛ ಬಟ್ಟೆ ಧರಿಸಿ. ಹೊರಗಿನಿಂದ ಬಂದ ಮೇಲೆ ಕೈಕಾಲುಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಇಲ್ಲದಿದ್ದರೆ ಬೆವರು ಬಂದು ದುರ್ಗಂಧ ಹೊರಬರುವ ಸಾಧ್ಯತೆ ಇರುತ್ತದೆ.

–  ಶ್ಯಾಮಲಾ ದಾಮ್ಲೆ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ