ಆದರೆ ಕಾಲ ಬದಲಾದಂತೆ ಕಿಚನ್ ಮತ್ತು ಕುಟುಂಬ ಎರಡೂ ಚಿಕ್ಕದಾಯಿತು. ಆಗ ಮೂಡಿಬಂದಿತು ಓಪನ್ ಕಿಚನ್ ಕಾನ್‌ಸೆಪ್ಟ್!
ಭಾರತೀಯ ಮನೆಗಳಿಗೆ ಓಪನ್ ಕಿಚನ್ ಒಂದು ಹಾಟ್ ಟ್ರೆಂಡ್ ಎನಿಸಿದೆ. ಇದು ಅತಿ ಸುಂದರವಾಗಿ ಕಂಡುಬರುವುದಲ್ಲದೆ ಕಂಫರ್ಟೆಬಲ್ ಕೂಡ ಹೌದು.
ಓಪನ್ ಕಿಚನ್ನಿನ ಲಾಭಗಳು
ಓಪನ್ ಕಿಚನ್ನಿನ ಎಲ್ಲಕ್ಕೂ ದೊಡ್ಡ ಲಾಭ ಎಂದರೆ, ಗೃಹಿಣಿ ಕಿಚನ್‌ನಲ್ಲಿ ಕೆಲಸ ಮಾಡುತ್ತಿದ್ದರೂ, ಅಲ್ಲಿಂದಲೇ ಇಡೀ ಮನೆಯ ಮೇಲೆ ಒಂದು ಕಣ್ಣಿಟ್ಟಿರಬಹುದು. ಮಕ್ಕಳ ಚಟುವಟಿಕೆ ಗಮನಿಸಿಕೊಳ್ಳುವುದಲ್ಲದೆ, ಟಿವಿ ಕಾರ್ಯಕ್ರಮ ಸಹ ನೋಡಬಹುದು. ಮನೆಗೆ ಬಂದ ಅತಿಥಿಗಳಿಗಾಗಿ ಕಾಫಿ ತಿಂಡಿ ಸಿದ್ಧಪಡಿಸುತ್ತಾ, ಅಲ್ಲಿಂದಲೇ ಅವರೊಂದಿಗೆ ಮಾತನಾಡಬಹುದು.
ಓಪನ್ ಕಿಚನ್‌ನಲ್ಲಿ ಕೆಲಸ ಮಾಡುವಾಗ ಉಸಿರುಗಟ್ಟಿದಂತೆ ಭಾಸವಾಗುವುದಿಲ್ಲ.
ಕ್ಲೋಸ್ಡ್ ಕಿಚನ್‌ಗೆ ಹೋಲಿಸಿದಾಗ ಓಪನ್ ಕಿಚನ್, ಸಹಜವಾಗಿಯೇ ಹೆಚ್ಚು ಹೊಳೆ ಹೊಳೆಯುವ ಹಾಗೂ ನೈಸರ್ಗಿಕ ಕಾಂತಿಯಿಂದ ಕೂಡಿರುತ್ತದೆ.
ಓಪನ್ ಕಿಚನ್ ಮನೆಯ ಡಿಸೈನ್‌ಗೆ ಅನೌಪಚಾರಿಕ ಗೆಟಪ್ ನೀಡುತ್ತದೆ.
ಓಪನ್ ಕಿಚನ್ನಿನ ಸಮಸ್ಯೆ ಪರಿಹಾರ
ಓಪನ್ ಕಿಚನ್ನಿನ ಒಂದು ಸಾಮಾನ್ಯ ಸಮಸ್ಯೆ ಎಂದರೆ, ಇದರಲ್ಲಿ ಕೆಲಸ ಮಾಡುವಾಗ ಹೊರಗಿನಿಂದ ಬಂದ ವ್ಯಕ್ತಿಗಳು ಕಿಚನ್ನಿನ ಅವ್ಯವಸ್ಥೆಯನ್ನು ಸುಲಭವಾಗಿ ಗಮನಿಸುತ್ತಾರೆ, ನೀವು ಅಡುಗೆ ಮಾಡುವಾಗ ಹರಡಿಕೊಂಡಿರುವ ಸಾಮಗ್ರಿ ಇತ್ಯಾದಿ ಗೊತ್ತಾಗಿಬಿಡುತ್ತದೆ.
ಪರಿಹಾರ : ಕಿಚನ್ ಸದಾ ವ್ಯವಸ್ಥಿತವಾಗಿರುವಂತೆ ತೋರಿಸಲು ಬೆಸ್ಟ್ ಸ್ಟೋರೇಜ್ ಸಿಸ್ಟಂ. ನೀವು ವುಡನ್ ಬದಲಾಗಿ ಗ್ಲಾಸ್ ಕ್ಯಾಬಿನೆಟ್ಸ್ ಮಾಡಿಸಬಹುದು. ಇವು ನೋಡಲು ಬಲು ಅಂದವಾಗಿರುತ್ತವೆ ಹಾಗೂ ನಿಮಗೆ ಬೇಕಾದ ಸಾಮಗ್ರಿ ಆರಿಸಿಕೊಳ್ಳಲು ಯಾವುದೇ ಅನಾನುಕೂಲ ಇರುವುದಿಲ್ಲ.
ಭಾರತೀಯ ಅಡುಗೆಯಲ್ಲಿ ಧಾರಾಳವಾಗಿ ಮಸಾಲೆ ತುಂಬಿರುತ್ತದೆ. ಒಗ್ಗರಣೆ ಹಾಕುವುದು ಅನಿವಾರ್ಯ. ಇದರಿಂದ ಹಾಲ್‌ನಲ್ಲಿ ಕುಳಿತವರು ಸೀನುವಂತಾಗುತ್ತದೆ.
ಪರಿಹಾರ : ಎಲೆಕ್ಟ್ರಿಕ್ ಚಿಮನಿಗಳನ್ನು ಬಳಸಿಕೊಳ್ಳಿ, ಸೂಕ್ತ ವೆಂಟಿಲೇಶನ್ ಸೆಟ್‌ಅಪ್ ಸ್ಥಾಪಿಸಿಕೊಳ್ಳಿ.
ಮಿಕ್ಸರ್, ಪ್ರೆಶರ್ ಕುಕ್ಕರ್, ಡಿಶ್ ವಾಶರ್‌ನಂಥ ಎಲ್ಲಾ ಕುಕಿಂಗ್ ಪ್ರಾಡಕ್ಟ್ಸ್ ಶಬ್ದ ಸಮೀಪದ ಹಾಲ್ ತಲುಪಿ ಕಸಿವಿಸಿ ಉಂಟು ಮಾಡುತ್ತದೆ.
ಪರಿಹಾರ : ಸಾಧ್ಯವಾದಷ್ಟೂ ನೀವು ನಿಮ್ಮ ಕಿಚನ್ನಿಗೆ ಸಂಬಂಧಿಸಿದ ಎಲ್ಲಾ ಉತ್ಪನ್ನಗಳೂ ಅತಿ ಉತ್ತಮ ಗುಣಮಟ್ಟದ್ದೇ ಆಗಿರುವಂತೆ ಹಾಗೂ ಹೊಸ ಆಧುನಿಕ ಟೆಕ್ನಿಕ್ಸ್ ಹೊಂದಿರುವಂತೆ ನೋಡಿಕೊಳ್ಳಿ. ಆಗ ಹೆಚ್ಚು ಸದ್ದು ಕೇಳಿಸದು. ಯಾವಾಗ ಇದನ್ನು ಬಳಸಬೇಕು ಎಂಬುದನ್ನು ಮೊದಲೇ ನಿರ್ಧರಿಸಿ.
ಈ ಕೆಳಗಿನ ಸಲಹೆಗಳನ್ನು ಅನುಸರಿಸಿ ನೀವು ನಿಮ್ಮ ಕಿಚನ್ನಿನ ಕೆಲಸಗಳನ್ನು ಮತ್ತಷ್ಟು ಸರಳವಾಗಿರುವಂತೆ ಮಾಡಿಕೊಳ್ಳಿ?:
– ನಿಮ್ಮ ಕಿಚನ್‌ಗಾಗಿ ಸ್ಲೈಡ್ ಮಾಡುವಂಥ ಬಾರ್ನ್ ಡೋರ್ಸ್ ಅಳವಡಿಸಿ. ಹೀಗೆ ಮಾಡಿ ನೀವು ನಿಮ್ಮ ಕಿಚನ್‌ನ್ನು ನಿಮ್ಮ ಆಯ್ಕೆಗೆ ತಕ್ಕಂತೆ ಬೇಕಾದಾಗ ಕ್ಲೋಸ್ಡ್ /ಓಪನ್ ಆಗಿ ಇರಿಸಿಕೊಳ್ಳುವಂತೆ ಮಾಡಬಹುದು.
– ಕಿಚನ್ ಮತ್ತು ಹಾಲ್‌ನ್ನು ಬೇರೆ ಮಾಡುವ ಗಾಜಿನ ಪಾರ್ಟಿಶನ್ ಸಹ ಕಿಚನ್‌ನ್ನು ಸದಾ ನೈಸರ್ಗಿಕ ಬೆಳಕಿನಿಂದ ಮಿಂಚುತ್ತಿರುವಂತೆ ಮಾಡುವಲ್ಲಿ ಯಶಸ್ವಿ ಎನಿಸುತ್ತದೆ.
– ನೀವು ಕಿಚನ್ನಿನ ಒಂದು ಸಣ್ಣ ಭಾಗವನ್ನು ಕ್ಲೋಸ್ ಸಹ ಮಾಡಬಹುದು. ಈ ಭಾಗದಲ್ಲಿ ನಿಂತು ನೀವು ಮಿಕ್ಸಿ ಚಲಾಯಿಸುವಂಥ, ಸದ್ದು ಉಂಟು ಮಾಡುವ ಕೆಲಸಗಳನ್ನು ಮಾಡಿಕೊಳ್ಳಬಹುದು.
– ಕಿಚನ್/ ಹಾಲ್ ನಡುವೆ ಗಿಡಗಳನ್ನು ಇರಿಸಿ, ವಿಭಜನ ರೇಖೆ ಎಳೆಯಬಹುದು.
– ನೀವು ಒಂದು ಆಧುನಿಕ ಓಪನ್ ಕಿಚನ್ ಬಯಸುವಿರಿ, ಆದರೆ ಬಂದ ಅತಿಥಿಗಳು ಸದಾ ಇಲ್ಲಿ ಏನು ನಡೆಯುತ್ತಿದೆ ಎಂದು ಇಣುಕದಿರಲಿ ಎಂದು ಬಯಸಿದರೆ, ಹಾಲ್‌ನಲ್ಲಿ ಸೋಫಾ, ಕುರ್ಚಿಗಳು ಕಿಚನ್‌ಗೆ ಬೆನ್ನು ಮಾಡಿರುಂತೆ ಇರಬೇಕು, ಆಗ ನಿಮಗೆ ಮುಜುಗರ ಇರುವುದಿಲ್ಲ.
– ಗಾಯತ್ರಿ ಸುರೇಶ್