ದೀಪಾ ಮಲಿಕ್‌ ಶಾಟ್‌ಪುಟ್‌ ಹೊರತಾಗಿ ಈಜು, ಬೈಕ್‌ ರೈಡರ್‌, ಜಾವೇಲಿಯನ್‌ ಹಾಗೂ ಡಿಸ್ಕಸ್‌ ಥ್ರೋವರ್‌ ಕೂಡ ಆಗಿದ್ದಾರೆ. ಪ್ಯಾರಾಲಿಂಪಿಕ್‌ ಕ್ರೀಡಾಕೂಟದಲ್ಲಿನ ಅವರ ಗಮನಾರ್ಹ ಸಾಧನೆಗೆ ಭಾರತ ಸರ್ಕಾರ ಅವರಿಗೆ `ಅರ್ಜುನ ಪುರಸ್ಕಾರ’ ನೀಡಿ ಗೌರವಿಸಿತು. ಜೊತೆಗೆ `ಪದ್ಮಶ್ರೀ’ ಪ್ರಶಸ್ತಿಯನ್ನೂ ನೀಡಿತು.

`ನಿಸ್ಸಹಾಯಕಿ’ ಎಂಬ ಶಬ್ದಗಳನ್ನು ಬಳಸುವ ಸಮಾಜದ ಈ ಯೋಚನೆಯನ್ನು ತಮ್ಮ ಧೈರ್ಯ ಹಾಗೂ ಇಚ್ಛಾಶಕ್ತಿಯ ಆಧಾರದಿಂದ ಬದಲಿಸಿದ ದೇಶದ ಮೊದಲ ಮಹಿಳಾ ಕ್ರೀಡಾಪಟು ಎಂಬ ಖ್ಯಾತಿಗೆ ಪಾತ್ರರಾದರು. ದೀಪಾ ಸ್ಪೈನ್‌ ಟ್ಯೂಮರ್‌ನ ವಿರುದ್ಧದ ಯುದ್ಧದಲ್ಲಿ ಗೆದ್ದು ಬಳಿಕ ಕ್ರೀಡೆಯಲ್ಲಿ ಸಾಲು ಸಾಲಾಗಿ ಪ್ರಶಸ್ತಿಗಳನ್ನು ಗೆದ್ದರು.

ಕ್ರೀಡೆಗೆ ಪಾದಾರ್ಪಣೆ

ಕ್ರೀಡಾರಂಗಕ್ಕೆ ಬರಬೇಕೆಂಬ ಕಲ್ಪನೆ ಅವರಿಗೆ ಬಾಲ್ಯದಲ್ಲೇ ಬಂದಿತ್ತು. ಈ ಕುರಿತಂತೆ ದೀಪಾ ಹೀಗೆ ಹೇಳುತ್ತಾರೆ, “ನನಗೆ ಬಾಲ್ಯದಿಂದಲೇ ಕ್ರೀಡಾ ಆಸಕ್ತಿ ಇತ್ತು. 2006ರ ನಂತರ ನಾನು ಹಿಂತಿರುಗಿ ನೋಡುವ ಅವಕಾಶವೇ ದೊರಕಲಿಲ್ಲ. ಸರ್ಕಾರದಿಂದ ದೊರೆಯಬೇಕಾದ ನಮ್ಮ ಹಕ್ಕುಗಳಿಗಾಗಿ ಹೋರಾಡಿದೆ. ಅದರಿಂದಾಗಿ ಕೆಲವು ಹೊಸ ನಿಯಮಗಳು ರಚನೆಯಾದವು. 2006ರ ಈಜಿನಲ್ಲಿ ನನಗೆ ಮೊದಲ ಪದಕ ಬಂದಿತು. ಆ ಸಮಯದಲ್ಲಿ ನಾನು ಭಾರತದ ಮೊದಲ ವಿಕಲಚೇತನ ಈಜುಪಟು ಆಗಿದ್ದೆ.”

ವೈಶಿಷ್ಟ್ಯತೆ ಶಕ್ತಿ ದೊರತದ್ದು ಹೀಗೆ

ಏನನ್ನಾದರೂ ಮಾಡಿ ತೋರಿಸಲೇಬೇಕೆಂಬ ತಮ್ಮ ಪ್ರಬಲ ಆಕಾಂಕ್ಷೆಯ ಕುರಿತಂತೆ ಹೀಗೆ ಹೇಳುತ್ತಾರೆ, “ನನಗೆ ಏನನ್ನಾದರೂ ಮಾಡಬೇಕೆಂಬ ಶಕ್ತಿ 3 ಸಂಗತಿಗಳಿಂದ ದೊರೆಯಿತು. ಜನರು ನನಗೆ `ನಿಸ್ಸಹಾಯಕಿ’ ಎಂದು ಹೇಳುತ್ತಿದ್ದರು. ಜನರ ಈ ಯೋಚನೆಯನ್ನು ನನಗೆ ಬದಲಿಸಬೇಕಿತ್ತು. ನನಗಾದ ದೈಹಿಕ ದೋಷದಲ್ಲಿ ನನ್ನದೇನೂ ತಪ್ಪಿರಲಿಲ್ಲ. ಹೀಗಾಗಿ ನನ್ನನ್ನು ನಾನು `ನಿಸ್ಸಹಾಯಕಳು’ ಎಂದು ಏಕೆ ಅಂದುಕೊಳ್ಳಬೇಕು? ನಮ್ಮಂಥವರು ಕೂಡ ಬಹಳಷ್ಟನ್ನು ಸಾಧಿಸಬಹುದು ಎಂಬುದನ್ನು ನಾನು ಸಮಾಜಕ್ಕೆ ತೋರಿಸಬೇಕಿತ್ತು. ಧೈರ್ಯ ಹೈಗೂ ಉತ್ಕಟೇಚ್ಛೆಯ ಎದುರು ದೈಹಿಕ ಕೊರತೆ ಎಂದೂ ಅಡ್ಡಿಯಾಗದು.

“ನನ್ನ ಎರಡನೆಯ ಶಕ್ತಿ ನನ್ನ ಪುತ್ರಿಯರು, ಮಕ್ಕಳು ದೊಡ್ಡವರಾದ ಬಳಿಕ ನನ್ನನ್ನು ನಿಸ್ಸಹಾಯಕ ಅಮ್ಮನ ರೂಪದಲ್ಲಿ ನೋಡಬಾರದು ಎನ್ನುವುದಾಗಿತ್ತು. ನನ್ನ ಮೂರನೇ ಶಕ್ತಿ ಎಂದರೆ ಕ್ರೀಡೆಯ ಬಗೆಗಿನ ನನ್ನ ಹವ್ಯಾಸ. ಈ ಸ್ಥಿತಿಯಲ್ಲಿ ಹೋರಾಡಲು ನನಗೆ ಅನೇಕರು ಸಹಾಯ ಮಾಡಿದರು.

ತಾಯಿತಂದೆಯರ ಪಾತ್ರ

ದೀಪಾ ಜೀವನ ಬಹಳ ಕಷ್ಟಕರವಾಗಿತ್ತು. ದಿನಗಳೆದಂತೆ ಇನ್ನಷ್ಟು ಕಷ್ಟದ ದಿನಗಳು ಬರುತ್ತ ಹೋದವು. ಇಂತಹ ಸ್ಥಿತಿಯಲ್ಲಿ ಯಾರದ್ದಾದರೂ ಸಹಾಯ ಸಿಗದೇ ಹೋದರೆ ಈ ಸ್ಥಿತಿಯಿಂದ ಹೊರಬರುವುದು ಕಷ್ಟ. ತನ್ನ ಪೋಷಕರ ಬಗ್ಗೆ ಅವರು ಹೀಗೆ ಹೇಳುತ್ತಾರೆ, “ನಾನು ಇಂದು ಈ ಹಂತಕ್ಕೆ ತಲುಪಲು ನನ್ನ ತಾಯಿತಂದೆಯರ ಪ್ರೋತ್ಸಾಹವೇ ಕಾರಣ. ನಾನು ಎರಡೂವರೆ ವರ್ಷದವಳಿದ್ದಾಗ ನನಗೆ ಟ್ಯೂಮರ್‌ ಆಗಿರುವುದು ತಿಳಿದುಬಂತು. ನಾನು ಮನೆಯಲ್ಲಿ ಮೌನವಾಗಿ ಇರುವುದನ್ನು ನೋಡಿ ಅಪ್ಪ ನನ್ನನ್ನು ಮನೋತಜ್ಞರಿಗೆ ತೋರಿಸಿದರು. ಬಳಿಕ ಪುಣೆ ಕಮಾಂಡೆಂಟ್‌ ಹಾಸ್ಪಿಟಲ್‌ನಲ್ಲಿ ನನಗೆ ಚಿಕಿತ್ಸೆ ನೀಡಲಾಯಿತು. ನನ್ನ ತಂದೆ ಬಿ.ಕೆ. ನಾಗಪಾಲ್‌ ಸೈನ್ಯದಲ್ಲಿ ಕರ್ನಲ್ ಆಗಿದ್ದರು. ಅಮ್ಮ ಕೂಡ ಮುಂಚೆ ರೈಫಲ್ ಶೂಟರ್‌. ಮದುವೆಯ ಬಳಿಕ 1999ರಲ್ಲಿ ಎರಡನೇ ಬಾರಿ ನನ್ನ ಬೆನ್ನು ಮೂಳೆಯ ಟ್ಯೂಮರ್‌ಗೆ ಆಪರೇಶನ್‌ ಆದಾಗ ಅಪ್ಪನೇ ನನ್ನನ್ನು ಸಂಭಾಳಿಸಿದರು.”

ಪುಂಖಾನುಪುಂಖ ಸವಾಲುಗಳು

ಸಂಕಷ್ಟಗಳನ್ನು ಎದುರಿಸುವ ಕಲೆ ದೀಪಾರಿಗೆ ಚೆನ್ನಾಗಿ ಕರಗತವಾಗಿದೆ. ಒಂದು ಘಟನೆ ನೆನಪಿಸುತ್ತ ದೀಪಾ ಹೇಳುತ್ತಾರೆ, “ಮೊದಲ ಮಗಳು ದೇವಿಕಾಗೆ ಎರಡೂವರೆ ವರ್ಷ ಆಗಿದ್ದಾಗ ಆಕೆಗೆ ಅಪಘಾತವಾಗಿ, ತಲೆಗೆ ಗಾಯವಾಗಿತ್ತು. ಅದರಿಂದಾಗಿ ಆಕೆಯ ದೇಹದ ಒಂದು ಭಾಗ ಪ್ಯಾರಲೈಸ್‌ ಆಗಿತ್ತು. ಅದನ್ನು ನೋಡಿ ನಾನು ಗಾಬರಿಗೊಳ್ಳಲಿಲ್ಲ. ನಾನೇ ಅವಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಂಡೆ, ಫಿಸಿಯೊಥೆರಪಿ ನೀಡಿದೆ. ಈಗ ಅವಳು ಪರಿಪೂರ್ಣ ಆರೋಗ್ಯವಂತಳಾಗಿದ್ದಾಳೆ. ಪ್ರಸ್ತುತ ಆಕೆ ಸೈಕಾಲಜಿ ವಿಷಯದಲ್ಲಿ ಲಂಡನ್‌ನಲ್ಲಿ ಪಿಎಚ್‌ಡಿ ಮಾಡುತ್ತಿದ್ದಾಳೆ. ಎರಡನೇ ಮಗಳು ಸಹ ಪ್ಯಾರಲೈಸ್‌ಗೆ ತುತ್ತಾಗಿದ್ದಳು. ಅವಳನ್ನು ಕೂಡ ಗುಣಪಡಿಸಿದೆ. ಅವಳು ಈವರೆಗೆ ಜಗತ್ತನ್ನೆಲ್ಲ ಸುತ್ತಾಡಿ ಬಂದಿದ್ದಾಳೆ. ನಾನು ಖುಷಿಯಿಂದ ಹೇಳುವುದೆಂದರೆ, ನಾನು ಹುಡುಗಿಯರನ್ನು ಓದಿಸಿದೆ ಹಾಗೂ ಅವರನ್ನು ಕಾಪಾಡಿದೆ. ಆದರೆ ಮೂರನೇ ಸರ್ಜರಿ ಬಳಿಕ ನಾನು ವೀಲ್‌ಚೇರ್‌ಗೆ ಬಂದೆ. ಆಗಲೂ ಕೂಡ ನಾನು ಧೈರ್ಯ ಕಳೆದುಕೊಳ್ಳಲಿಲ್ಲ.”

ಉತ್ಸಾಹ ಕುಂದಿಸದ ನ್ಯೂನತೆಗಳು

ಅತ್ಯಂತ ಬಲಿಷ್ಠ ಪ್ರೇರಣೆಯ ಮುಂದೆ ದೊಡ್ಡ ದೊಡ್ಡ ಅಡೆತಡೆಗಳು ಕುಬ್ಜ ಎಂಬಂತೆ ಕಂಡುಬರುತ್ತವೆ. ತಮ್ಮ ಉತ್ಕಟ ಹಠದ ಬಗ್ಗೆ ನೆನಪಿಸಿಕೊಳ್ಳುತ್ತಾ ದೀಪಾ ಹೀಗೆ ಹೇಳುತ್ತಾರೆ, “ನಾನು ಬರ್ಲಿನ್‌ನಿಂದ ವಾಪಸ್‌ ಆದಾಗ ನೇರವಾಗಿ ನಾನು ಮನೆಗೆ ಹೋಗಲಿಲ್ಲ. ಆಗ ನಾನು ಯಮುನೆಯನ್ನು ದಾಟಿ ಜಗತ್ತಿನಾದ್ಯಂತದ ಜನರಿಗೆ ನಾನು ಅಸಲಿ ಈಜುಪಟು ಎಂಬುದನ್ನು ತೋರಿಸಿಕೊಡಬೇಕು ಎಂದು ನಿರ್ಧರಿಸಿದೆ. ಅಲಹಾಬಾದ್‌ನ ಒಬ್ಬ ಕೋಚರ್‌ಗೆ ನನ್ನನ್ನು ಹೇಗಾದರೂ ಮಾಡಿ ಯಮುನಾ ನದಿ ಈಜಲು ತರಬೇತು ನೀಡಲು ಕೋರಿದೆ. ಮೊದ ಮೊದಲು ಅವರು ನನಗೆ ನಿರಾಕರಿಸಿದರು. ಆದರೆ ನನ್ನ ಹಠ ನೋಡಿ ಪ್ರ್ಯಾಕ್ಟೀಸ್‌ ಶುರು ಮಾಡಿದರು.  2009ರಲ್ಲಿ ನಾನು ಯಮುನಾ ನದಿಯನ್ನು ಈಜಿ ವಿಶ್ವ ದಾಖಲೆ ನಿರ್ಮಿಸಿದೆ. ಅದು ಲಿಮ್ಕಾ ಬುಕ್‌ ಆಫ್‌ ರೆಕಾರ್ಡ್ಸ್ ಗೆ ಸೇರಿತು. `ಗಿನ್ನಿಸ್‌ ವರ್ಲ್ಡ್ ರೆಕಾರ್ಡ್ಸ್’ ಬುಕ್‌ನವರನ್ನು ಕರೆಸಲು ನನ್ನ ಬಳಿ ಹಣವಿರಲಿಲ್ಲ. ಹೀಗಾಗಿ ಅದು ಗಿನ್ನಿಸ್‌ ಪುಸ್ತಕದಲ್ಲಿ ಸೇರಲಿಲ್ಲ.”

– ಪ್ರತಿನಿಧಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ