ಸತತ 5 ಚಿನ್ನದ ಪದಕಗಳನ್ನು ಗೆಲ್ಲುವುದು ಎಂದರೆ ಸಾಧಾರಣ ಮಾತಲ್ಲ! ಆದರೆ ಹಿಮಾ ದಾಸ್ ಅದನ್ನು ನಿಜ ಮಾಡಿ ತೋರಿಸಿದ್ದಾರೆ. ತಾನೊಬ್ಬ ವಿಶ್ವ ವಿಜೇತೆ ಎನಿಸಲು ಅರ್ಹಳು ಎಂಬುದನ್ನು ಹಿಮಾ ಸಾಧಿಸಿ ತೋರಿಸಿದ್ದಾರೆ.
ಕಡು ಬಡತನದಲ್ಲಿ ಹೊಲಗಳ ಮಧ್ಯೆ ದುಡಿಯುತ್ತಾ ಬೆಳೆದ ಹಿಮಾರ ಜೀವನ ಕಥೆ ಯಾವುದೇ ಸಿನಿಮಾಗಿಂತಲೂ ಕಡಿಮೆ ರೋಚಕವಲ್ಲ. 2 ವರ್ಷಗಳ ಹಿಂದೆ ಹಿಮಾರನ್ನು ಅವರ ನೆರೆಯ ಹಳ್ಳಿಯವರೂ ಗುರುತಿಸಿರಲಿಲ್ಲ, ಆದರೆ ಇಂದು ಇಡೀ ವಿಶ್ವವೇ ಬೆರಗಾಗುವಂತೆ ತನ್ನ ಮನೋಬಲದಿಂದ ಗೆದ್ದು ಈ ಹುಡುಗಿ ಎತ್ತರಕ್ಕೇರಿದ್ದಾರೆ. ಇಷ್ಟು ಮಾತ್ರವಲ್ಲ, ಕ್ರೀಡಾಲೋಕದಲ್ಲಿ ಭಾರತಕ್ಕೆ ಉನ್ನತ ಸ್ಥಾನ ಸಹ ಗಳಿಸಿಕೊಟ್ಟಿದ್ದಾರೆ. ದೇಶದ ಇತರ ಭಾಗಗಳಂತೆಯೇ ಅಸ್ಸಾಂನ ಹಳ್ಳಿಯಲ್ಲೂ ಫುಟ್ಬಾಲ್ ಜನಪ್ರಿಯ. ಸದಾ ಮಳೆಯಿಂದ ಕೆಸರುಗದ್ದೆ ಆಗುವ ಆ ರಾಜ್ಯದಲ್ಲಿ ಫುಟ್ಬಾಲ್ ಆಡುವುದೇ ಒಂದು ಸವಾಲು. ಆದರೂ ಹಿಮಾಗೆ ಫುಟ್ಬಾಲ್ ಆಡುವುದೆಂದರೆ ಅಚ್ಚುಮೆಚ್ಚು. ತಮ್ಮ ಹೊಲಗದ್ದೆಗಳ ಬಳಿ ಮೈದಾನದಲ್ಲಿ ಅವರು ಗಂಡು ಹುಡುಗರ ಜೊತೆ ಸದಾ ಫುಟ್ಬಾಲ್ ಆಡುತ್ತಾ ಬೆಳೆದರು.
ಫುಟ್ಬಾಲ್ ಎಂದರೆ ಪಂಚಪ್ರಾಣ
ಹಿಮಾ ಹೀಗೆ ಹೇಳುವಾಗ ಬಹಳ ಭಾವುಕರಾಗುತ್ತಾರೆ, “ಮೊದಲಿನಿಂದ ನನಗೆ ಫುಟ್ಬಾಲ್ ಎಂದರೆ ಜೀವ. ನಮ್ಮ ತಂದೆ ಸಹ ಫುಟ್ಬಾಲ್ ಆಟಗಾರ. ಹಿಂದೆಲ್ಲ ಹಳ್ಳಿಯಲ್ಲಿ ಟೈಂಪಾಸಿಗೆ ಆಡಿದ್ದು ಮುಂದೆ ಶಾಲೆಯ ತಂಡ, ಹಾಗೂ ಲೋಕಲ್ ಕ್ಲಬ್ಗಳಲ್ಲೂ ಆಡುವಂತಾಯ್ತು. ನಮ್ಮ ತಂದೆಯ ಆರ್ಥಿಕ ಸ್ಥಿತಿ ಅಷ್ಟಕ್ಕಷ್ಟೆ, ಹೀಗಾಗಿ ನಾನು ಅದಕ್ಕಿಂತ ಹೆಚ್ಚು ಮುಂದುವರಿಯಲು ಆಗಲಿಲ್ಲ.”
ಇದು 2016ರ ಘಟನೆ. ಫುಟ್ಬಾಲ್ನಲ್ಲಿ ಹಿಮಾರ ತಲ್ಲೀನತೆ ಗಮನಿಸಿ ಶಾಲೆಯ ಕೋಚ್ ಆಕೆಗೆ ಓಟಗಾರ್ತಿ ಆಗುವ ಸಲಹೆ ನೀಡಿದರು. ಓಟದಲ್ಲಿ ಹೆಚ್ಚು ಹೆಚ್ಚು ಪಾಲುಗೊಳ್ಳುವುದರಿಂದ ಮುಂದೆ ಸದವಕಾಶಗಳು ಹೆಚ್ಚು ಸಿಗಬಹುದೆಂದು ಎಣಿಸಿದರು. ಅವರ ಸಲಹೆಯಂತೆ ಫುಟ್ಬಾಲ್ಗೆ ವಿದಾಯ ಹೇಳಿದ ಹಿಮಾ ಅಥ್ಲೆಟಿಕ್ಸ್ ನ ವೈಯಕ್ತಿಕ ಟ್ರಾಕ್ ಸ್ಪರ್ಧೆಗಳಲ್ಲಿ ದುಮುಕಿದರು. ಮಣ್ಣಿನ ಟ್ರಾಕಿನಲ್ಲಿ ಕೆಲವು ತಿಂಗಳು ಅಭ್ಯಾಸ ಮಾಡಿ ಲೋಕಲ್ ಟೂರ್ನಮೆಂಟ್ಗಳಲ್ಲಿ ಭಾಗವಹಿಸಿ, ನಂತರ ರಾಜ್ಯ ಮಟ್ಟದ ಒಂದು ಸ್ಪರ್ಧೆಯಲ್ಲಿ 100 ಮೀಟರ್ ಓಟ ಓಡಿ ಕಂಚಿನ ಪದಕ ಗಳಿಸಿದರು.
ಈ ವರ್ಷ ಏಪ್ರಿಲ್ನಲ್ಲಿ ನಡೆದ ಕಾಮನ್ ವೆಲ್ತ್ ಕ್ರೀಡಾಕೂಟದ 400 ಮೀ. ಓಟದ ಸ್ಪರ್ಧೆಯಲ್ಲಿ ಅಥ್ಲೀಟ್ ಹಿಮಾ 6ನೇ ಸ್ಥಾನದಲ್ಲಿ ನಿಂತರು. ಆಗ ಒಬ್ಬ ಪತ್ರಕರ್ತರಿಗೆ ಉತ್ತರಿಸುತ್ತಾ, “ಇಲ್ಲಿ ನಾನು ವಿಶ್ವದ ಬೆಸ್ಟ್ ರನ್ನರ್ಸ್ ಜೊತೆ ಓಡಿದ್ದೇನೆ. ಈ ರೀತಿ ನಾನು ಅನೇಕ ವಿಷಯಗಳನ್ನು ಕಲಿತಿರುವೆ. ನಾನು ಈ ಮೂಲಕ ನಮ್ಮ ದೇಶಕ್ಕೆ ನೀಡುವ ವಾಗ್ದಾನವೆಂದರೆ, ಮುಂದೆ ನಾನು ಯಾವುದೇ ಅಂತಾರಾಷ್ಟ್ರೀಯ ಟೂರ್ನಮೆಂಟ್ನಲ್ಲಿ ಭಾಗವಹಿಸಿದರೂ ಸ್ವರ್ಣ ಪದಕ ಗೆದ್ದು ತರುತ್ತೇನೆ!”
ಆಗ ಮೀಡಿಯಾ ಆಕೆಯ ಈ ಮಾತುಗಳಿಗೆ ಯಾವುದೇ ಮಹತ್ವ ಕೊಡಲಿಲ್ಲ. ಎಲ್ಲಾ ಉದಯೋನ್ಮುಖ ಕ್ರೀಡಾಪಟುಗಳೂ ಹೇಳುವುದೇ ಹೀಗೆ ಎಂಬ ಉಡಾಫೆಯೊಂದಿಗೆ ಹಿಮಾ ದಾಸ್ ಇನ್ನೂ ಯಾರಿಗೂ ಪರಿಚಯವಿರದ ಹೊಸ ಮುಖ.ಮುಖ್ಯವಾದುದು ಎಂದರೆ, ಹಿಮಾ ಮುಂದೆ ಭಾಗವಹಿಸಲಿದ್ದುದು ಅಂತಾರಾಷ್ಟ್ರೀಯ ಸ್ಪರ್ಧೆ, ಅದೂ ಅಂಡರ್-20 ವಿಶ್ವ ಚಾಂಪಿಯನ್ಶಿಪ್ನಲ್ಲಿ! ಇದುವರೆಗೂ ಭಾರತೀಯ ಅಥ್ಲೀಟ್ಸ್ ಇದರಲ್ಲಿ ಪದಕ ಪಡೆದದ್ದೇ ಇಲ್ಲ.
ಅದಾದ ಮೇಲೆ ಜನ ಹಿಮಾರ ಹೆಸರನ್ನು ಮರೆತೇಬಿಟ್ಟರು. ಅಸ್ಸಾಂನ ಒಂದು ಗ್ರಾಮೀಣ ಕ್ಷೇತ್ರದಿಂದ ಹೊರಟ ಹಿಮಾ ತನ್ನ ಪ್ರಾಮಿಸ್ ಮರೆತಿರಲಿಲ್ಲ. ಹಾಗೆ ಹೇಳಿದ ಎರಡೇ ತಿಂಗಳಲ್ಲಿ ಅಂಡರ್ 20ಯ ವಿಶ್ವ ಅಥ್ಲಿಟಿಕ್ಸ್ ಚಾಂಪಿಯನ್ಶಿಪ್ನ 400 ಮೀ. ಓಟದ ಸ್ಪರ್ಧೆಯಲ್ಲಿ ಸ್ವರ್ಣ ಪದಕ ಗಳಿಸಿ ಹೊಸ ಇತಿಹಾಸವನ್ನೇ ಬರೆದರು. ಹಿಮಾ ಕೇವಲ 51.46 ಕ್ಷಣಗಳ ರೆಕಾರ್ಡ್ ಸಮಯದಲ್ಲಿ ಇದನ್ನು ಸಾಧಿಸಿದರು. ಆಕೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಸ್ವರ್ಣಪದಕ ಗಳಿಸಿದ ಮೊಟ್ಟಮೊದಲ ಮಹಿಳಾ ಅಥ್ಲೀಟ್ ಎನಿಸಿದರು. ಟ್ರಾಕ್ ಸ್ಪರ್ಧೆಯ ವಿಷಯದಲ್ಲಿ ಗಮನಿಸಿದರೆ ಹಿಮಾರಂತೆ ಯಾವ ಭಾರತೀಯರೂ ಜೂ/ಸೀ ತಂಡಗಳಲ್ಲಿ ವಿಶ್ವ ಚಾಂಪಿಯನ್ಶಿಪ್ ಪಡೆದದ್ದೇ ಇಲ್ಲ. ಫ್ಲೈಯಿಂಗ್ ಸಿಖ್ ಎಂದೇ ಹೆಸರಾಗಿರುವ ಮಿಲ್ಕಾ ಸಿಂಗ್, ಪಿ.ಟಿ. ಉಷಾ ಸಹ ಈ ಮಟ್ಟದ ಯಶಸ್ಸು ಕಂಡಿಲ್ಲ! ಈ ಕಾರಣದಿಂದಲೇ ಹಿಮಾರಿಗೆ `ಅರ್ಜುನ’ ಪ್ರಶಸ್ತಿ ಸಹ ಸಿಕ್ಕಿದೆ.
ಕೋಚ್ ಮಾರ್ಗದರ್ಶನ
ಅಸ್ಸಾಂ ಎಕ್ಸ್ ಪ್ರೆಸ್, ರಾಷ್ಟ್ರದ ಹೊಸ ಓಟದರಾಣಿ ಹಿಮಾ ದಾಸ್ರ ಕೋಚ್ ನಿಪೋನ್ ದಾಸ್ ಹೇಳುತ್ತಾರೆ, “ಒಂದು ಕಾಲದಲ್ಲಿ ಗೌಹಾಟಿಯ ಸ್ಪೋರ್ಟ್ಸ್ ಯೂಥ್ ವೆಲ್ಫೇರ್ ನಿರ್ದೇಶಕರ ಜೊತೆ ಕುಳಿತು ಟೀ ಕುಡಿಯುತ್ತಿದ್ದಾಗ, ಮೊದಲ ಸಲ ಹಿಮಾಳನ್ನು ನೋಡಿದೆ. ಆಗ ಆಕೆಯನ್ನು ಕರೆದು ಮುಂದೆ ನೀನು ದೇಶದ ಹೊಸ ಓಟದರಾಣಿ ಎನಿಸುವುದರಲ್ಲಿ ಸಂದೇಹವಿಲ್ಲ, ಎಂದು ಹೇಳಿದೆ. ಆಕೆಯಲ್ಲಿ ಅಡಗಿದ್ದ ಪ್ರತಿಭೆಯನ್ನು ಗುರುತಿಸಿ, ಗಾಳಿಯಂತೆ ಹಾರಿ ಹೋಗಬಲ್ಲಳು ಎಂದು ಮೊದಲೇ ಭವಿಷ್ಯ ನುಡಿದಿದ್ದೆ.”
ಮನೆಯವರ ಓಲೈಕೆ
ಅವರು ಮುಂದುವರಿಸುತ್ತಾ, “ಹಿಮಾಳನ್ನು ದಿ ಬೆಸ್ಟ್ ಅಥ್ಲೀಟ್ ಮಾಡುವುದೇ ನನ್ನ ಗುರಿ. ಹೀಗಾಗಿ ಗೌಹಾಟಿಯಿಂದ 140 ಕಿ.ಮೀ. ದೂರದ ಆಕೆಯ ಧೀಂಗ್ ಹಳ್ಳಿಗೆ ಹೋಗಿ ಅವರ ತಾಯಿ ತಂದೆಯವರನ್ನು ಇದಕ್ಕಾಗಿ ಒಪ್ಪಿಸಿದಾಗ ಹಿಮಾ ತಂದೆ ಹೊಲದಲ್ಲಿ ಕಷ್ಟಪಟ್ಟು ದುಡಿಯುತ್ತಿದ್ದರು. ಈಕೆ ಅವರ ಕಿರಿಯ ಮಗಳು. ಅವರಿಗೆ ನನ್ನ ಉದ್ದೇಶ ವಿವರಿಸಿದೆ. ತಮ್ಮಿಂದ ಅಷ್ಟು ದೂರದ ವಿದೇಶಕ್ಕೆ ಮಗಳು ಹೋಗುವುದು ಅವರಿಗೆ ಸರಿಕಾಣಲಿಲ್ಲ. ಅಂತೂ ಇಂತೂ ಅವರನ್ನು ಒಪ್ಪಿಸಿದ್ದಾಯ್ತು.” ಇಂದು ಹಿಮಾ ಈ ಮಟ್ಟಕ್ಕೆ ಏರಲು ಈ ಕೋಚ್ ಕಾರಣ ಎಂಬುದರಲ್ಲಿ 2 ಮಾತಿಲ್ಲ.
ಬೆಂಕಿಯಲ್ಲಿ ಅರಳಿದ ಹೂವು
ದೇಶದ ಹೊಸ ಓಟದರಾಣಿ ಎನಿಸಿರುವ ಹಿಮಾ ಬಳಿ ಈಗ ಏನು ತಾನೇ ಇಲ್ಲ? ಹೆಸರು, ಖ್ಯಾತಿ, ಹಣ ಎಲ್ಲ ಕೂಡಿ ಬಂದಿದೆ. 2 ವರ್ಷದ ಹಿಂದೆ ಹಿಮಾ ಹಿಡಿ ಅಕ್ಕಿ ಕೊಳ್ಳಲಿಕ್ಕೂ ಕಷ್ಟ ಪಡಬೇಕಿತ್ತು. ಗೌಹಾಟಿಯ ಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಾ ಹಣದ ಅಭಾವದಿಂದಾಗಿ ಕಂಗೆಟ್ಟಿದ್ದ ಹಿಮಾ ಕುರಿತು ಕೋಚ್ ಹೇಳುತ್ತಾರೆ, “ಇಲ್ಲಿ ಆಕೆಗೆ ತರಬೇತಿ ನೀಡಲು ಆಕೆಯನ್ನು ತವರೂರಿನಿಂದ ಗೌಹಾಟಿಗೆ ಕರೆತಂದಾಗ ಊಟ, ವಸತಿಯ ಖರ್ಚು ದೊಡ್ಡದಾಯ್ತು. ಬಾಡಿಗೆ ಮನೆ, ಗ್ಯಾಸ್ ಒಲೆ ಇತ್ಯಾದಿಗೆ ಕಷ್ಟಪಡಬೇಕಾಯ್ತು. 6ನೇ ಏಪ್ರಿಲ್ 2017ರಲ್ಲಿ ಅಸ್ಸಾಂನ ಕ್ರೀಡಾ ಪತ್ರಿಕಾ ಮಂಡಳಿಯಿಂದ ಹಿಮಾಗೆ ಕೇವಲ 10 ಸಾವಿರ ರೂ. ಮಾತ್ರ ಸಿಕ್ಕಿತು. ತುಂಬಾ ಸಂಕೋಚ ಸ್ವಭಾವದ ಈ ಹುಡುಗಿ ಯಾರ ಮುಂದೂ ಸಹಾಯಕ್ಕೆ ಕೈಯೊಡ್ಡಲು ಸಿದ್ಧಳಿರಲಿಲ್ಲ. ಹೀಗೆ ಒಂದೊಂದೇ ಮೆಟ್ಟಿಲು ಹತ್ತಿ ಈ ಹಂತ ತಲುಪುವಲ್ಲಿ ಆಕೆ ಖಂಡಿತಾ ಬೆಂಕಿಯಲ್ಲಿ ಅರಳಿದ ಹೂವಾಗಿದ್ದಾಳೆ. ಯಶಸ್ಸು ಯಾರಿಗೂ ಸುಲಭವಾಗಿ ಒಲಿಯದು ಎಂಬುದಕ್ಕೆ ಹಿಮಾ ಸಾಕ್ಷಿ!”
ತುತ್ತಿಗೂ ಚಿಂತೆ ಜೋನಾಲಿ ದಾಸ್
ಅಸ್ಸಾಂ ರಾಜ್ಯದ ನಗಾಂವ್ ಜಿಲ್ಲೆಯ ಹಳ್ಳಿ ಧೀಂಗ್. ಹಿಮಾಳ ತಾಯಿ ಜೋನಾಲಿ ದಾಸ್ ಹಾಗೂ ತಂದೆ ರಂಜಿತ್ ದಾಸ್ ತಮ್ಮ ಇತರ 4 ಮಕ್ಕಳ ಜೊತೆ ಇಲ್ಲಿ ವಾಸಿಸುತ್ತಾರೆ. ಒಂದು ಕಾಲದಲ್ಲಿ ರಂಜಿತ್ ಸಹ ಕ್ರೀಡಾಪಟು. ಆರ್ಥಿಕ ಪರಿಸ್ಥಿತಿ ಬಹಳ ಕೆಟ್ಟದಾಯಿತು. ಹೀಗಾಗಿ ಕ್ರೀಡೆ ಮರೆತು ಹೊಲಗದ್ದೆ ನೋಡಿಕೊಂಡರು. ಹಿಮಾ ಕುರಿತಾಗಿ ಅವರು, “ನಮ್ಮದು ತುಂಬಾ ಕಗ್ಗ ಹಳ್ಳಿ. ಪ್ರವಾಹ ಬಂದಾಗಂತೂ ನಮ್ಮ ಹಳ್ಳಿ ದ್ವೀಪವಾಗುತ್ತದೆ. ಇಡೀ ಹಳ್ಳಿ ಇಂಥ ಚಿಂತೆಯಲ್ಲಿರುವಾಗ ಇನ್ನು ಕ್ರೀಡೆ ಕುರಿತು ಚಿಂತಿಸುವವರಾರು?”
ಪದಕ ಗೆಲ್ಲುವ ವಿಶ್ವಾಸವಿತ್ತು
ಹಿಮಾ “ಚಿನ್ನದ ಪದಕ ಗಳಿಸಿದ ನಂತರ ನಾನು ವೇದಿಕೆ ಮೇಲೆ ನಿಂತಿದ್ದೆ. ಆಗ ನನಗೆ ಆನಂದಬಾಷ್ಪ ಉಕ್ಕಿ ಬರುತ್ತಿತ್ತು. ಚಿನ್ನದ ಪದಕ ಬಂದ ನಂತರ, ಬೇರೆ ದೇಶಗಳ ಜೊತೆ ನಮ್ಮ ರಾಷ್ಟ್ರಧ್ವಜ ಮುಗಿಲೆತ್ತರಕ್ಕೇರಿ ಹಾರಾಡಿತು. ನಾನು ಈ ಮಟ್ಟ ಮುಟ್ಟಿದೆನೇ ಎಂದು ಮಾತೇ ಹೊರಡಲಿಲ್ಲ! ನನ್ನ ಇಷ್ಟು ದಿನಗಳ ಅಗ್ನಿ ಪರೀಕ್ಷೆಯಂತಿದ್ದ ಕಠಿಣಕರ ಪರಿಶ್ರಮ ಈಗ ನನ್ನ ದೇಶಕ್ಕೆ ಹೆಮ್ಮೆ ತರಿಸಿದೆ ಎನಿಸಿತು,” ಎಂದು ದೇಶದ ಹೊಸ ಓಟದರಾಣಿ ಹಿಮಾ ದಾಸ್ ತನ್ನ ತವರೂರು ತಲುಪಿ ಹೇಳಿದರು.
“ನಾನು ಅಂಡರ್ 20 ವಿಶ್ವ ಅಥ್ಲೀಟಿಕ್ಸ್ ಚಾಂಪಿಯನ್ಶಿಪ್ನಲ್ಲಿ 400 ಮೀ. ಓಟದಲ್ಲಿ ಅಗತ್ಯ ಸ್ವರ್ಣಪದಕ ಗಳಿಸುತ್ತೇನೆಂಬ ವಿಶ್ವಾಸವಿತ್ತು. ನಮ್ಮ ಕೋಚ್ಗೆ ನಾನು ನಮ್ಮ ರಾಷ್ಟ್ರಧ್ವಜ ಹಾಗೂ ನಮ್ಮೂರಿನ ಹೂಗಳನ್ನು ತರಲು ಮೊದಲೇ ಹೇಳಿದ್ದೆ,” ಎನ್ನುತ್ತಾರೆ.
– ಪ್ರತಿನಿಧಿ