- ರಾಘವೇಂದ್ರ ಅಡಿಗ ಎಚ್ಚೆನ್.
ಬಿಗ್ ಬಾಸ್ ಖ್ಯಾತಿಯ ರೂಪೇಶ್ ಶೆಟ್ಟಿ ಅವರು ಕನ್ನಡ ಮತ್ತು ತುಳು ಚಿತ್ರರಂಗದಲ್ಲಿ ತಮ್ಮದೇ ಆದ ಗುರುತು ಮೂಡಿಸಿಕೊಂಡಿದ್ದಾರೆ. ಅವರು ನಿರ್ದೇಶಿಸಿ ಅಭಿನಯಿಸಿರುವ ‘ಜೈ’ ಸಿನಿಮಾ ಈಗಾಗಲೇ ಕೆಲವು ಕಡೆಗಳಲ್ಲಿ ಪ್ರೀಮಿಯರ್ ಪ್ರದರ್ಶನ ಕಂಡು ಪ್ರೇಕ್ಷಕರ ಮೆಚ್ಚುಗೆ ಗಳಿಸಿದೆ.
ಈ ಸಿನಿಮಾ ನವೆಂಬರ್ 14ರಂದು ತೆರೆಗೆ ಬರಲಿದ್ದು, ಅದಕ್ಕೂ ಮುನ್ನ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನಡೆಯಲಿದೆ. ವಿಶೇಷ ಅಂದರೆ, ಈ ಕಾರ್ಯಕ್ರಮಕ್ಕೆ ಬಾಲಿವುಡ್ ಸೂಪರ್ ಸ್ಟಾರ್ ಸುನೀಲ್ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದಾರೆ.
ರೂಪೇಶ್ ಶೆಟ್ಟಿ ಅವರು ಈ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, “ಬಾಲಿವುಡ್‌ನ ಅಣ್ಣ ಸುನೀಲ್ ಶೆಟ್ಟಿ ನಮ್ಮ ಬೆಂಗಳೂರಿಗೆ ಬರುತ್ತಿದ್ದಾರೆ. ಅವರು ನವೆಂಬರ್ 7ರಂದು ಮಂತ್ರಿ ಮಾಲ್‌ನಲ್ಲಿ ‘ಜೈ’ ಟ್ರೇಲರ್ ಲಾಂಚ್‌ನಲ್ಲಿ ಭಾಗವಹಿಸಲಿದ್ದಾರೆ,” ಎಂದು ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.
‘ಜೈ’ ಚಿತ್ರದಲ್ಲಿ ರೂಪೇಶ್ ಶೆಟ್ಟಿ ಜೊತೆಗೆ ಅದ್ವಿತಿ ಶೆಟ್ಟಿ, ಅರವಿಂದ್ ಬೋಳಾರ್, ರಾಜ್ ದೀಪಕ್ ಶೆಟ್ಟಿ, ನವೀನ್ ಡಿ. ಪಡೀಲ್, ದೇವದಾಸ್ ಕಾಪಿಕಾಡ್ ಮುಂತಾದವರು ನಟಿಸಿದ್ದಾರೆ. ವಿಶೇಷವಾಗಿ ಸುನೀಲ್ ಶೆಟ್ಟಿ ಈ ಚಿತ್ರದಲ್ಲಿ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರಣದಿಂದ ಸಿನಿಮಾದ ಮೇಲೆ ನಿರೀಕ್ಷೆ ಇನ್ನಷ್ಟು ಹೆಚ್ಚಾಗಿದೆ.
ಇತ್ತೀಚೆಗಷ್ಟೇ ಮಸ್ಕಟ್‌ನಲ್ಲಿ ಚಿತ್ರದ ಅಂತರಾಷ್ಟ್ರೀಯ ಪ್ರೀಮಿಯರ್ ಶೋ ನಡೆದಿದ್ದು, ಅಲ್ಲಿ ಪ್ರೇಕ್ಷಕರು ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟ್ರೇಲರ್ ಬಿಡುಗಡೆ ನಂತರ ಸಿನಿಮಾ ಮೇಲಿನ ಹೈಪ್ ಇನ್ನಷ್ಟು ಏರಲಿದೆ ಎಂಬ ನಿರೀಕ್ಷೆಯಿದೆ.
ಕರ್ನಾಟಕದ ಬಗ್ಗೆ ಸುನೀಲ್ ಶೆಟ್ಟಿಗೆ ವಿಶೇಷ ಗೌರವವಿದೆ. ಮಂಗಳೂರಿನಲ್ಲಿ ಜನಿಸಿದ ಅವರು ತುಳು ಭಾಷೆ ಮಾತನಾಡಲು ಪರಿಣತಿ ಹೊಂದಿದ್ದಾರೆ.
“ಸುನೀಲ್ ಶೆಟ್ಟಿ ಅವರ ಜೊತೆ ಕೆಲಸ ಮಾಡುವುದು ಜೀವನದ ಒಂದು ಅದ್ಭುತ ಅನುಭವ. ಅವರನ್ನು ನಿರ್ದೇಶಿಸುವ ಅವಕಾಶ ಸಿಕ್ಕಿದ್ದು ನನ್ನ ಭಾಗ್ಯ,” ಎಂದು ರೂಪೇಶ್ ಶೆಟ್ಟಿ ತಮ್ಮ ಸಂತೋಷ ಹಂಚಿಕೊಂಡಿದ್ದಾರೆ. ‘ಜೈ’ ಸಿನಿಮಾ ಕನ್ನಡ ಹಾಗೂ ತುಳು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.





