ತೆರಿಗೆಗೆ ಸಂಬಂಧಿಸಿದ ಕಾನೂನುಗಳನ್ನು ಅರ್ಥ ಮಾಡಿಕೊಳ್ಳುವುದು ಬಲು ಕಷ್ಟಕರ. ಸರಿಯಾದ ತೆರಿಗೆ ನಿಯೋಜನೆಯ ಮೂಲಕ ವ್ಯಕ್ತಿಯು ತೆರಿಗೆ ಪಾವತಿಯ ಮೊತ್ತವನ್ನು ಕಡಿಮೆಗೊಳಿಸಬಹುದಲ್ಲದೆ, ಬೇರೆ ಬೇರೆ ರೀತಿಗಳಿಂದ ಉಳಿತಾಯವನ್ನೂ ಮಾಡಬಹುದು.

ಟ್ಯಾಕ್ಸ್ ಪ್ಲಾನಿಂಗ್‌ ಅಂದರೇನು ಮತ್ತು ಅದರ ಅವಶ್ಯಕತೆ ಏನು ಎಂಬುದನ್ನು ತಿಳಿಯೋಣ ಬನ್ನಿ :

ಟ್ಯಾಕ್ಸ್ ಎಂದರೇನು?

ಪ್ರತಿ ಹಣಕಾಸು ವರ್ಷದ ಪ್ರಾರಂಭದಲ್ಲಿ ಪ್ರತಿಯೊಬ್ಬ ಉದ್ಯೋಗಸ್ಥ ವ್ಯಕ್ತಿಯೂ ತನ್ನ ಎಂಪ್ಲಾಯರ್‌ಗೆ ತನ್ನ ವಿಮಾ ಪಾಲಿಸಿ ಪ್ರೀಮಿಯಂ, ಈಕ್ವಿಟಿ ಲಿಂಕ್ಡ್ ಸೇವಿಂಗ್‌ ಸ್ಕೀಮ್, ಮನೆ ಬಾಡಿಗೆ, ಮಕ್ಕಳ ಸ್ಕೂಲ್‌ ಫೀಸ್‌, ಹೋಮ್ ಲೋನ್‌, ಎಜುಕೇಶನ್‌ ಲೋನ್‌ ಮುಂತಾದ ತನ್ನ ಖರ್ಚು ವೆಚ್ಚಗಳ ವಿವರವನ್ನು ನೀಡಬೇಕಾಗುತ್ತದೆ. ಈ ವಿವರಗಳ ಆಧಾರದ ಮೇಲೆ ಆತನ ಆ್ಯನ್ಯುಯೆಲ್‌ ಟ್ಯಾಕ್ಸ್ ಲಯೆಬಿಲಿಟಿ ಅಂದರೆ ವಾರ್ಷಿಕ  ತೆರಿಗೆ ಪಾವತಿ ಎಷ್ಟೆಂಬುದು ನಿರ್ಧರಿತವಾಗುತ್ತದೆ ಮತ್ತು ಆತನ ವೇತನದಿಂದ ಎಷ್ಟು ಟಿಡಿಎಸ್‌ (ಟ್ಯಾಕ್ಸ್ ಡಿಡಕ್ಟೆಡ್‌ ಅಟ್‌ಸೋರ್ಸ್‌) ಹಿಡಿಯಲಾಗುವುದೆಂದು ತಿಳಿಯಲ್ಪಡುತ್ತದೆ.

ಟ್ಯಾಕ್ಸ್ ಪ್ಲಾನಿಂಗ್‌ ಯಾವುದೇ ರೀತಿಯ ತೆರಿಗೆ ಕಳುವಲ್ಲ. ಇದರಲ್ಲಿ ನೀವು ನೇರವಾಗಿ ನಿಮ್ಮ ಮೂಲ ಆದಾಯ ಮತ್ತು ಉಳಿತಾಯಗಳ ಬಗ್ಗೆ ಪ್ಲಾನಿಂಗ್‌ ಮಾಡುವಿರಿ. ತೆರಿಗೆಯ ಉಳಿತಾಯವೆಂದರೆ ನೀವು ಕಣ್ಣುಮುಚ್ಚಿ ಕಲಂ 80ಸಿಗೆ ಅನ್ವಯವಾಗುವ ಯೋಜನೆಗಳಲ್ಲಿ ಹಣ ತೊಡಗಿಸುವಿರಿ ಎಂದಲ್ಲ. ಟ್ಯಾಕ್ಸ್ ಪ್ಲಾನಿಂಗ್‌ ಕಷ್ಟವೇನಲ್ಲ, ಅದು ಸುಲಭವಾದುದು.

ಟ್ಯಾಕ್ಸ್ ಪ್ಲಾನಿಂಗ್‌ನ ಅವಶ್ಯಕತೆ

ಒಂದು ಉತ್ತಮ ಟ್ಯಾಕ್ಸ್ ಪ್ಲಾನಿಂಗ್‌ ನಿಮಗೆ ಕಡಿಮೆ ಮೊತ್ತದ ತೆರಿಗೆ ಪಾವತಿಗೆ ಸಹಾಯ ಮಾಡುತ್ತದೆ. ನಿಮ್ಮ ಜೀವನ ಸಂಗಾತಿಯ ಭವಿಷ್ಯದ ಸುರಕ್ಷತೆಗಾಗಿ ಜೀವವಿಮೆಯ ಅಗತ್ಯವಿರುತ್ತದೆ. ನೀವು ಮನೆ ಕಟ್ಟಿಸಬೇಕೆಂದರೆ ಹೋಮ್ ಲೋ‌ನ್‌ನ ಅವಶ್ಯಕತೆ ಬೀಳುತ್ತದೆ.

ಎಂಡೊಮೆಂಟ್‌, ಯೂಲಿಪ್‌, ಲೈಫ್‌ ಇನ್ಶೂರೆನ್ಸ್ ಕಂಪನಿಗಳ ಪೆನ್ಶನ್‌ ಯೋಜನೆಗಳಲ್ಲಿ ಹಣ ಹೂಡುವುದರ ಮೂಲಕ ನಿಮ್ಮ ತೆರಿಗೆಯಲ್ಲಿ ಉಳಿತಾಯ ಮಾಡಬಹುದು. ಕಲಂ 80ಸಿ ನಿಯಮದನ್ವಯ ಜೀವವಿಮೆಯ ಪ್ರೀಮಿಯಮ್ ಪಾವತಿಯ ಮೇಲೂ ನೀವು ರಿಯಾಯಿತಿ ಪಡೆಯಬಹುದಾಗಿದೆ.

ಇದಲ್ಲದೆ ಜೀವವಿಮಾ ಯೋಜನೆಯ ಮೆಚೂರಿಟಿಯಿಂದ ಪಡೆದ ಮೊತ್ತ ಕಲಂ 10 (10ಡಿ) ನಿಯಮದನ್ವಯ ಟ್ಯಾಕ್ಸ್ ಫ್ರೀ ಆಗಿರುತ್ತದೆ. ಲಾಂಗ್‌ ಟರ್ಮ್ ಯೂಲಿಪ್‌ ಪ್ಲಾನ್‌ ನಿಮಗೆ ಉತ್ತಮ ರಿಟರ್ನ್‌ ನೀಡುತ್ತದೆ. ಇದು ಹೇಗೆಂದರೆ, ಇದನ್ನು ಶೇರ್‌ ಮಾರ್ಕೆಟ್‌ನಲ್ಲಿ ಹೂಡಲಾಗುವುದರಿಂದ ಲಾಂಗ್‌ ಟರ್ಮ್ ಈಕ್ವಿಟಿಯ ಯೋಜನೆಯಿಂದ ದೊರೆಯುವ ರಿಟರ್ನ್ಸ್ ಯಾವಾಗಲೂ ಉತ್ತಮವಾಗಿರುತ್ತದೆ. ಶೇರ್‌ ಮಾರ್ಕೆಟ್‌ನ ಅಪಾಯ ಬೇಡ ಎನಿಸಿದರೆ, ನೀವು ಟ್ಯಾಕ್ಸ್ ಸೇವಿಂಗ್‌ ಜೊತೆ ಜೊತೆಗೆ ಎಂಡೊಮೆಂಟ್‌ ಪಾಲಿಸಿಯನ್ನೂ ತೆಗೆದುಕೊಳ್ಳಬಹುದು.

ಕುಟುಂಬ ಸದಸ್ಯರ ಮೂಲಕ ಟ್ಯಾಕ್ಸ್

– ಇದಕ್ಕಾಗಿ ನೀವು ಸ್ವತಃ ಆದಾಯ ತೆರಿಗೆಯ ರಿಟರ್ನ್‌ ಫೈಲ್‌ ಮಾಡುವುದರೊಂದಿಗೆ ನಿಮ್ಮ ಕುಟುಂಬ ಸದಸ್ಯರಿಗಾಗಿಯೂ ರಿಟರ್ನ್‌ ಫೈಲ್ ಮಾಡಿ.

– ನಿಮ್ಮ ವಯಸ್ಕ ಮಕ್ಕಳಿಗಾಗಿ ಟ್ಯಾಕ್ಸ್ ಪ್ಲಾನಿಂಗ್‌ ಮಾಡಿ

– ಉಯಿಲಿನ ಮೂಲಕ ನಿಮ್ಮ ಸಂಪತ್ತನ್ನು ಹಂಚುವಾಗ, ಉತ್ತರಾಧಿಕಾರಿಗಳ ಮೇಲೆ ತೆರಿಗೆ ಕಡಿಮೆ ಬೀಳುವಂತೆ ನೋಡಿಕೊಳ್ಳಿ.

– ತೆರಿಗೆಯ ಮೊತ್ತ ಹೆಚ್ಚಾಗುವುದೆಂದು ಕಂಡುಬಂದರೆ, ನಿಮ್ಮ ಆದಾಯನ್ನು ನಿಮ್ಮ ಸಂಬಂಧಿಗಳಿಗೆ ವರ್ಗಾಯಿಸಿ, ತೆರಿಗೆ ಪಾವತಿ ಕಡಿಮೆಯಾಗುವಂತೆ ಟ್ಯಾಕ್ಸ್ ಪ್ಲಾನಿಂಗ್‌ ಮಾಡಿ. ಆದರೆ ಹೀಗೆ ಮಾಡುವಾಗ ಈ ಕೆಲವು ಅಂಶಗಳನ್ನು ಗಮನದಲ್ಲಿಡಬೇಕಾಗುತ್ತದೆ.

– ಸಂಪತ್ತನ್ನು ವರ್ಗಾಯಿಸದೆ ಆದಾಯವನ್ನು ವರ್ಗಾಯಿಸುವುದು.

– ಪತ್ನಿ, ಸೊಸೆ ಮತ್ತು ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ನಿಮ್ಮ ಆದಾಯ ವರ್ಗಾವಣೆ ಮಾಡದಿರುವುದು.

ಹಣ ಹೂಡಿಕೆಯ ಆಯ್ಕೆಗಳು

ತೆರಿಗೆ ಉಳಿತಾಯಕ್ಕಾಗಿ ಹಣ ಹೂಡಿಕೆ ಮಾಡುವಾಗ ಈ ಅಂಶಗಳ ಬಗ್ಗೆ ಗಮನವಿರಿಸಿ.

ಲಿಕ್ವಿಡಿಟಿ : ನೀವು ಯಾವುದೇ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದಾಗ, ನಿಮಗೆ ಬೇಕೆಂದಾಗ ಹಣವನ್ನು ಹಿಂದೆ ಪಡೆಯುವಂತಿಲ್ಲ. ಆದ್ದರಿಂದ ನಿಮಗೆ ಬೇಗನೆ ಅಂದರೆ 1 ಅಥವಾ 2 ವರ್ಷ ಅವಧಿಯಲ್ಲಿ ಹಣ ಪಡೆಯಬೇಕೇ ಎಂದು ಯೋಚಿಸಿ. ಟ್ಯಾಕ್ಸ್ ಪ್ಲಾನಿಂಗ್‌ ಸ್ಕೀಮ್ ನ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದಾಗ ಕನಿಷ್ಠ 3 ವರ್ಷಗಳ ಲಾಕ್‌ ಇನ್‌ ಪೀರಿಯಡ್‌ ಇರುತ್ತದೆ.

ರಿಸ್ಕ್ ಮತ್ತು ರಿಟರ್ನ್‌ : ನೀವು ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿರುವಿರಾ ಎಂಬುದನ್ನು ನಿರ್ಧರಿಸಿ. ಹಣ ಹೂಡಿಕೆಯ ಕೆಲವು ಯೋಜನೆಗಳಲ್ಲಿ  ರಿಸ್ಕ್ ಕಡಿಮೆ ಇದ್ದರೆ ರಿಟರ್ನ್‌ ಸಹ ಕಡಿಮೆ ಮತ್ತು ಹೆಚ್ಚು ರಿಸ್ಕ್  ಇರುವಲ್ಲಿ ಹೆಚ್ಚು ರಿಟರ್ನ್‌ ಇರುತ್ತದೆ.

ಹಣದುಬ್ಬರದಿಂದ ಸುರಕ್ಷೆ : ಕಡಿಮೆ ರಿಟರ್ನ್‌ ಕೊಡುವ ಯೋಜನೆಗಳು ಹಣದುಬ್ಬರದ ದೃಷ್ಟಿಯಿಂದ ಸೂಕ್ತವಲ್ಲ. ದೀರ್ಘಾವಧಿಯವರೆಗೆ ನಿಮ್ಮ ಬೇಡಿಕೆಯನ್ನು ತಡೆಹಿಡಿಯುವ ಕೆಲವು ಯೋಜನೆಗಳು ಒಂದು ನಿಶ್ಚಿತ ದರದಲ್ಲಿ ಮಾತ್ರ ಬಡ್ಡಿ ಕೊಡುತ್ತವೆ ಎಂಬುದನ್ನು ಗಮನಿಸಬೇಕು. ವಾಸ್ತವವಾಗಿ ಇವು ಹಣದುಬ್ಬರ (ಇನ್‌ಫ್ಲೇಷನ್‌) ದೃಷ್ಟಿಯಿಂದ ಸೂಕ್ತವಲ್ಲ.

ತೆರಿಗೆ ವಿನಾಯಿತಿ : ಕಲಂ 80 ಸಿ, 80 ಸಿಸಿಸಿ, 80 ಸಿಸಿಡಿ ನಿಯಮದಡಿಯಲ್ಲಿ ಬರುವ ಯೋಜನೆಗಳನ್ವಯವಾಗಿ ಹಣ ತೊಡಗಿಸಿದಾಗ ಅದಕ್ಕನುಗುಣವಾಗಿ ನಿಮಗೆ ತೆರಿಗೆ ವಿನಾಯಿತಿ ದೊರೆಯುತ್ತದೆ. ವಾಸ್ತವವಾಗಿ ಇವುಗಳಿಂದ ದೊರೆಯುವ ಹಣದಲ್ಲಿ ಮತ್ತು ಮೆಚೂರಿಟಿಯ ಮೊತ್ತದ ಮೇಲೆ ತಗುಲುವ ತೆರಿಗೆಯಲ್ಲಿ ಅಂತರವಿರುತ್ತದೆ.

–  ಕೆ. ಅಮೃತಾ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ