ನಮ್ಮ ದೇಶ ಬಿಟ್ಟು ಅಮೆರಿಕಾದಂಥ ವಿದೇಶಕ್ಕೆ ಕೆಲಸದ ಸಲುವಾಗಿ ಅಥವಾ ಯಾವುದೇ ಕಾರಣಕ್ಕೆ ಹೋಗಲು ಅವಕಾಶ ಸಿಕ್ಕಿಬಿಟ್ಟರೆ, ನಮ್ಮ ದೇಶದವರಿಗಂತೂ ಸ್ವರ್ಗಕ್ಕೆ ಮೂರೇ ಗೇಣು! ಆದರೆ ಅಲ್ಲಿಗೆ ಹೋಗಿ ಆ ಬದುಕನ್ನು ವಾಸ್ತವವಾಗಿ ಎದುರಿಸಿದಾಗ ತಾನೇ `ನಮ್ಮೂರೇ ಅಂದ ನಮ್ಮೂರೇ ಚೆಂದ' ಎಂದು ತಿಳಿಯುವುದು? ಬನ್ನಿ, ವಿವರವಾಗಿ ಈ ಕುರಿತು ತಿಳಿದುಕೊಳ್ಳೋಣ.
ಮುಂಜಾನೆ ಆರು ಘಂಟೆಗೆಲ್ಲಾ ಶಿಲ್ಪಾಳ ದಿನಚರಿ ಆರಂಭವಾಗಿಬಿಡುತ್ತದೆ. ಮುಖ ತೊಳೆದುಕೊಂಡು ಅಡುಗೆಮನೆಗೆ ಹೋದರೆ ಮಧ್ಯಾಹ್ನಕ್ಕೆ ಡಬ್ಬಿಗಾಗಿ ಒಂದು ತಿಂಡಿ ಅಥವಾ ಯಾವುದಾದರೂ ಅನ್ನವನ್ನು ಕಲಸುತ್ತಾಳೆ. ನಂತರ ಗಂಡನಿಗೆ ತಿನ್ನಲು ಬ್ರೆಡ್ ಟೋಸ್ಟ್ ಅಥವಾ ಸೆರೆಲ್ಸ್ ಅಂತೂ ಏನೋ ಒಂದು ಸಿದ್ಧವಾಗುತ್ತದೆ. ತನಗೂ ಸಹ ರಾಗಿ ಗಂಜಿ ಮಾಡಿಕೊಂಡು ರೆಡಿಯಾಗುತ್ತಾಳೆ. ಇವೆಲ್ಲಾ ಮಾಡಿಕೊಂಡು ಸ್ನಾನ ಮಾಡಿ ತಾನೂ ಆಫೀಸಿಗೆ ಹೊರಡುತ್ತಾಳೆ. ಹೊರಡುವ ಮುನ್ನ ಸ್ವಲ್ಪ ಸಮಯವಿದ್ದರೆ ಪಾತ್ರೆಗಳನ್ನೂ ತೊಳೆದುಬಿಡುತ್ತಾಳೆ ಅಥವಾ ಎಲ್ಲವನ್ನೂ ಪೇರಿಸಿ ಸಂಜೆ ಡಿಶ್ ವಾಷರ್‌ಗೆ ಹಾಕುತ್ತಾಳೆ. ಆಫೀಸಿನಿಂದ ಬಂದ ನಂತರ ವಾಕ್ ಹೋಗುತ್ತಾಳೆ. ಮತ್ತೆ ರಾತ್ರಿ ಚಪಾತಿ ಮತ್ತು ನೆಂಚಿಕೊಳ್ಳಲು ಅದಕ್ಕೊಂಡು ಸೈಡ್ ಡಿಶ್, ಇವುಗಳ ಮಧ್ಯೆ ಹಾಲು ಮುಗಿದು ಹೋಗಿದ್ದರೆ ಅಥವಾ ಏನಾದರೂ ತರಕಾರಿ ಬೇಕೆಂದರೆ ಆಫೀಸಿನಿಂದ ಬಂದ ನಂತರ ಅಂಗಡಿಗೆ ಹೋಗುವಾಟ, ಇದು ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಮಹಿಳೆಯರ ದಿನಚರಿಯ ನೋಟ.
ರಮ್ಯಾ ಬೆಳಗ್ಗೆ ಆರು ಗಂಟೆಗೇ ಏಳುತ್ತಾಳೆ. ಅಷ್ಟರಲ್ಲಿ ಮನೆಯ ಕಾಲಿಂಗ್ ಬೆಲ್ ರಿಂಗಣಿಸುತ್ತದೆ. ಕೆಲಸದವಳು ಒಳಗೆ ಬರುತ್ತಾಳೆ. ಅವಳು ಮೊದಲು ಬೆಳಗಿನ ತಿಂಡಿಗೆ ತರಕಾರಿ ಕತ್ತರಿಸಿಕೊಡುತ್ತಾಳೆ. ನಂತರ ಮಧ್ಯಾಹ್ನದ ಅಡುಗೆಗೆ ತಯಾರಿ. ಎಲ್ಲ ಕೆಲಸ ಆವಳದೇ, ಒಲೆಯ ಮೇಲಿನ ಕೆಲಸ ಮಾತ್ರಾ ರಮ್ಯಾಳದು. ನಂತರದ ಪಾತ್ರೆಗಳನ್ನೆಲ್ಲಾ ಅವಳು ಹೊರಗೆ ಕೊಂಡೊಯ್ದು ತೊಳೆದಿಡುತ್ತಾಳೆ. ಹಿಂದಿನ ದಿನ ತೊಳೆದ ಪಾತ್ರೆಗಳನ್ನು ಜೋಡಿಸಿಡುತ್ತಾಳೆ. ಬಟ್ಟೆಗಳನ್ನು ಮಿಷನ್‌ಗೆ ಹಾಕುತ್ತಾಳೆ. ಹಿಂದಿನ ದಿನ ಒಣಗಿ ಹಾಕಿದ ಬಟ್ಟೆಗಳನ್ನು ಮಡಚಿಡುತ್ತಾಳೆ. ಮನೆ ಗುಡಿಸಿ, ಸಾರಿಸಿ, ಧೂಳು ಒರೆಸಿ, ಸಮಸ್ತವನ್ನೂ ಮಾಡಿ ಆರಕ್ಕೆ ಬಂದ ಕೆಲಸದವಳು ಹತ್ತು ಗಂಟೆಗೆ ಮನೆಯಿಂದ ಹೊರಗೆ ಹೊರಡುತ್ತಾಳೆ. ನಮ್ಮ ಭಾರತದಲ್ಲಿ ಮನೆಯ ಕೆಲಸ ಅಷ್ಟು ಸುಲಭ.
ನಾವು ಅಮೆರಿಕಾಗೆ ಹೋದಾಗ ನನ್ನ ಮಗನ ಗೆಳೆಯನ ಮಗುವಿನ ನಾಮಕರಣಕ್ಕೆ ಹೋಗಿದ್ದೆವು. ಸುಮಾರು ಮೂವತ್ತೈದು ಜನರನ್ನು ಕರೆದಿದ್ದರು. ಸ್ವೀಟ್ ಮತ್ತು ಐಸ್‌ಕ್ರೀಂನ್ನು ಹೊರಗಿನಿಂದ ತರಿಸಿದ್ದರು. ಮಿಕ್ಕಿದ್ದನ್ನೆಲ್ಲಾ ಅವರ ಸೊಸೆ, ಅತ್ತೆ ಮತ್ತು ಹೆಣ್ಣುಮಗಳು ಸೇರಿ ಮಾಡಿದ್ದರು. ಪಲ್ಯ, ಕೋಸಂಬರಿ, ಕಡಲೆಕಾಳು ಗುಗ್ಗರಿ, ಶ್ಯಾವಿಗೆ, ಕೇಸರಿಭಾತ್ ಎಲ್ಲವನ್ನೂ ಮಾಡಿ ಮಾಡಿ ಪೂರಿಗಳನ್ನು ಎಣ್ಣೆಗೆ ಹಾಕಲು ಆರಂಭಿಸಿದರು.
ಆ ಹುಡುಗಿಯ ಗೆಳತಿಯರೆಲ್ಲಾ ಸೇರಿಕೊಂಡು ನೂರಾರು ಪೂರಿಗಳನ್ನು ತಯಾರಿಸಿಯೇಬಿಟ್ಟರು! ನಾನು ನಿಜಕ್ಕೂ ಮೂಗಿನ ಮೇಲೆ ಬೆರಳಿಟ್ಟುಕೊಂಡೆ! ನಮ್ಮಲ್ಲಾದರೆ ಎಲ್ಲವನ್ನೂ ಕೇಟರಿಂಗ್ ಹೇಳಿದ್ದರೂ ಬಂದವರನ್ನು ವಿಚಾರಿಸಿಕೊಳ್ಳುವುದಕ್ಕೇ ಸುಸ್ತು. ಇವರೆಲ್ಲಾ ಹೇಗಪ್ಪಾ ಇಷ್ಟೊಂದು ಕೆಲಸ ಮಾಡುತ್ತಾರೆ ಎಂದೆನಿಸಿತು. ಅಲ್ಲದೆ, ಎಲ್ಲಾ ಮುಗಿದ ನಂತರ ಪಾತ್ರೆಗಳನ್ನು ತೊಳೆಯುವಾಟ. ಅಷ್ಟು ಜನ, ಅವರ ಮಕ್ಕಳು ಮನೆಗೆ ಬಂದು ಹೋದ ಮೇಲೆ ಮನೆಯನ್ನು ಕ್ಲೀನ್ ಮಾಡುವುದು ಬೇಡವೇ? ನಿಜಕ್ಕೂ ಎಷ್ಟು ಕಷ್ಟಪಡುತ್ತಾರೆ ಎನಿಸಿತು.