ಕೆ.ಇ.ಬಿ. ಆಫೀಸ್‌ ಎದುರುಗಡೆ ನಮ್ಮ ಗುಂಡ  ಬಾಳೆಹಣ್ಣು ಮಾರುತ್ತಾ ಕೂತಿದ್ದ. ಆಫೀಸಿನ ಮುಖ್ಯ ಎಂಜಿನೀಯರ್‌ ಬಂದು ಕೇಳಿದರು, “ಬಾಳೆಹಣ್ಣಿನ ರೇಟ್‌ ಎಷ್ಟು?”

ಗುಂಡ : ಬಾಳೆಹಣ್ಣು ಯಾವುದಕ್ಕೆ ಸಾರ್‌….

ಎಂಜಿನಿಯರ್‌ : ಯಾಕೆ ಯಾವುದಕ್ಕೆ ಆದ್ರೂ ನಿನಗೇನು….?

ಗುಂಡ : ಯಾಕೆ ಅಂದ್ರೆ ದೇವಸ್ಥಾನಕ್ಕೆ ಡಜನ್‌ಗೆ 40 ರೂ., ವೃದ್ಧಾಶ್ರಮಕ್ಕೆ 45 ರೂ., ಮಕ್ಕಳಿಗಾದ್ರೆ 50 ರೂ., ಮನೆಗೆ 55 ರೂ., ಮತ್ತೆ ಪಿಕ್ನಿಕ್‌ಗೆ ಆದ್ರೆ 60 ರೂ. ಡಜನ್‌ಗೆ.

ಎಂಜಿನಿಯರ್‌ : ಅಲ್ಲ ಕಣಯ್ಯಾ…. ಬಾಳೆಹಣ್ಣು ಎಲ್ಲಾ ಒಂದೇ ಅಲ್ವಾ…? ಇದೇನು ಮಾರಾಯಾ ಬೇರೆ ಬೇರೆ ರೇಟು ಹೇಳ್ತೀ….?

ಗುಂಡ : ಸಾರ್‌ ಇದನ್ನು ನಾನು ನಿಮ್ಮ ಹತ್ರಾನೇ ಕಲಿತೆ ಹೇಗೆಂದರೆ….? 110 ಯೂನಿಟ್‌ಗೆ ಒಂದು ರೇಟ್‌, 100-200ಕ್ಕೆ ಒಂದು ರೇಟ್‌, 200-300ಗೆ ಒಂದು ರೇಟ್‌. ಕರೆಂಟ್‌ ಏನು ನಿಮ್ಮ ಅಪ್ಪಂದ ನೀವು ಕೂಡ ಒಂದೇ ಕಂಬದಿಂದ ತಾನೇ ಕೊಡೋದು, ಮತ್ತೆ ಮನೆಗೆ ಒಂದು ರೇಟ್‌, ಅಂಗಡಿಗೆ ಒಂದು ರೇಟ್‌, ಫ್ಯಾಕ್ಟರಿಗೆ ಒಂದು ರೇಟ್‌, ಅದರ ಮೇಲೆ ಟ್ಯಾಕ್ಸ್… ಹ್ಞಾಂ ಆಮೇಲೆ ಮೀಟರ್‌ ಬಾಡಿಗೆ ಮತ್ತೆ ವರ್ಷಕ್ಕೊಂದು ಸಲ ಎಕ್ಸ ಟ್ರಾ ಚಾರ್ಜ್‌ ಬೇರೆ…. ಒಂದು ಸಲ ಬಾಡಿಗೆ ಎಷ್ಟು ಅಂತ ಹೇಳಿ ಒಂದೇ ಸಲ ಪೂರ್ತಿ ಹಣ ಕೊಟ್ಟು ಸ್ವಂತಕ್ಕೆ ತೊಗೊಂಡು ಬಿಡ್ತೀವಿ. ಈಗ ಎಂಜಿನಿಯರ್‌ಗೆ ಮಂಗ ಆಗೋ ಸರದಿ!!

ಇದೀಗ ಬಂದ ಸುದ್ದಿ ……ನೆಲ ಒರೆಸುತ್ತಿದ್ದಾಗ ಅಡ್ಡಾಡಿದ ಗಂಡನನ್ನು ಗುಂಡಿಟ್ಟು ಕೊಂದ ಪತ್ನಿ.

ಪತ್ರಕರ್ತ : ಶೂಟ್‌ ಮಾಡಿದ 10 ನಿಮಿಷಕ್ಕೇ ನೀವು ಅಲ್ಲಿಗೆ ಹೋದ್ರಿ, ಆದರೂ ಅರೆಸ್ಟ್ ಮಾಡಲು 25 ನಿಮಿಷ ಯಾಕೆ ಲೇಟ್‌ ಮಾಡಿದ್ರಿ ಸಾರ್‌…..?

ಇನ್ಸ್ ಪೆಕ್ಟರ್‌ : ನೆಲ ಇನ್ನೂ ಆರಿರಲಿಲ್ಲ…..!!

ಅವರು ಹಿರಿಯ ವ್ಯಾಕರಣ ವಿದ್ವಾಂಸರು. ಅವರ ಆಯುಷ್ಯ ಮುಗಿಯಿತೆಂದು ಪ್ರಾಣ ಕೊಂಡೊಯ್ಯಲು ಸಾಕ್ಷಾತ್‌ ಯಮನೇ ಬಂದ.

ಯಮ : ನಿಮ್ಮ ಪ್ರಾಣ ಬೇಕು.

ವಿದ್ವಾಂಸರು : ಅಲ್ಪ ಪ್ರಾಣವೋ….? ಮಹಾ ಪ್ರಾಣವೋ….?

ಯಮ : ಅಯ್ಯೋ….. ಅದ್ಯಾವುದೂ ಅಲ್ಲ ನಿಮ್ಮ ಪಂಚಪ್ರಾಣ ಬೇಕು.

ವಿದ್ವಾಂಸರು : ಇಲ್ಲೇ ಪಕ್ಕದಲ್ಲೇ ಮಲಗಿದ್ದಾಳೆ ನೋಡು ತೆಗೆದುಕೊಂಡು ಹೋಗು…..

ಯಮ ಫುಲ್ ಶಾಕ್‌…..!!!!

ಗಂಡ : ಸುಮಾ….. ಸ್ವಲ್ಪ ಟವೆಲ್ ಕೊಡ್ತೀಯಾ ಮರೆತು ಸ್ನಾನಕ್ಕೆ ಹಾಗೆ ಬಂದುಬಿಟ್ಟಿದ್ದೆ…. ಕರೆಂಟ್‌ ಹೋಗಿ ಗೀಸರ್‌ ಬಿಸಿ ನೀರು ಕೊಡದೆ ತಣ್ಣೀರಲ್ಲೇ ಸ್ನಾನ ಮುಗಿಸಿ ನಡುಗುತ್ತಿದ್ದೀನಿ…. ಬೇಗ ಟವೆಲ್….

ಹೆಂಡತಿ : ಆಹಾ….. ಏನು ಬಡ್ಕೋಬೇಕೋ ನಿಮ್ಮ ಜಾಣತನಕ್ಕೆ? ಅಲ್ರೀ….. ಟವೆಲ್‌ ಇಲ್ಲದೆ ನೀವು ಸ್ನಾನಕ್ಕೆ ಹೋಗಿದ್ದಾದರೂ ಯಾಕೆ ಅಂತ? ನನಗಿಲ್ಲಿ ಮೈ ಪರಚಿಕೊಳ್ಳಲಿಕ್ಕೂ ಪುರಸತ್ತಿಲ್ಲ ಅಂದ್ರೆ ನಿಮಗೆ ಈ ಸೇವೆ ಬೇರೆ ಬೇಕೋ? ನಿಮಗಂತೂ ಏನೂ ಗೊತ್ತಾಗೋಲ್ಲ…. ಸ್ನಾನ ಆದ ತಕ್ಷಣ ಕಾಲು ಒರೆಸಿಕೊಳ್ಳದೆ ಹಾಗೆ ಬಂದುಬಿಡ್ತೀರಿ, ಬಾತ್‌ರೂಂ ಗ್ಲಾಸ್‌ನ ವೈಪರ್‌ ಕೂಡ ಬಳಸಲ್ಲ! ಹೋಗಲಿ ಅಂದ್ರೆ ಬಾತ್‌ರೂಮಿನಿಂದ ಬರುವಾಗ ಅಲ್ಲಿನ ಲೈಟ್‌ ಕೂಡ ಆಫ್‌ ಮಾಡಲ್ಲ…. ಏನು ಕರ್ಮ ಅಂತೀನಿ! ನಿಮ್ಮಿಂದಾಗಿ ಇಡೀ ಬಾತ್‌ರೂಂ ಗಬ್ಬೆದ್ದು ಹೋಗಿದೆ. ಮೊನ್ನೆ ನೋಡಿದರೆ ಆ ಕೆಲಸದ ನಿಂಗಿ ಅಲ್ಲಿ ಜಾರಿ ಬಿದ್ದು ಸೊಂಟ ಮುರಿದುಕೊಂಡು 3 ದಿನ ಕೆಲಸಕ್ಕೆ ಚಕ್ಕರ್‌ ಹಾಕಿದ್ದಾಳೆ…. ನಾನೇ ಎಲ್ಲಾ ಮಾಡಿ ಸಾಯಬೇಕು, ಯಾರಿದ್ದಾರೆ ನನಗೆ ಸಹಾಯ ಮಾಡಕ್ಕೆ? ನೀನು ಬದುಕಿದ್ದೀಯಾ ಅಂತ ಕೇಳೋರೂ ಯಾರೂ ಇಲ್ಲ…. ಇದ್ರಲ್ಲಿ ಟವೆಲ್‌ ಅಂತೆ ಟವೆಲ್‌!

ಗಂಡ : ಅಯ್ಯೋ ನನ್ನ ಹಣೆಬರಹವೇ….? ಟವೆಲ್‌ ಕೇಳಿ ತಪ್ಪು ಮಾಡಿದ್ನಾ, ಮದುವೆ ಮಾಡಿಕೊಂಡು ತಪ್ಪು ಮಾಡಿದ್ನಾ…..?

ಪತಿ ಮನೆಗೆ ಬಂದಾಗ ಅವನ ಕಣ್ಣು ಬಾತುಕೊಂಡು ರಾದ್ಧಾಂತ ಆಗಿತ್ತು. ಕೈಕಾಲುಗಳೆಲ್ಲ ತರಚಿಕೊಂಡು ಗಾಯ ಆದಂತಿತ್ತು.. ಆಗ ಪತ್ನಿ ಅತಿ ಚಿಂತೆಯಿಂದ ಪ್ರಶ್ನಿಸಿದಳು, “ಅಯ್ಯೋ! ಇದೆಲ್ಲ ಹೇಗ್ರಿ ಆಯ್ತು? ಗಾಡಿಯಿಂದ ಬಿದ್ದು ಆ್ಯಕ್ಸಿಡೆಂಟ್‌ ಮಾಡ್ಕೊಂಡ್ರಾ….?”

ಪತಿ : ಏನು ಹೇಳಲಿ…. ಯಾರೋ ಒಬ್ಬ ಹೆಂಗಸು ಸ್ಕೂಟಿ ತೆಗೆದುಕೊಂಡು ಬಂದು ನನ್ನ ಗಾಡಿಗೆ ಗುದ್ದಿ ಕ್ಷಣ ಮಾತ್ರದಲ್ಲಿ ಅಲ್ಲಿಂದ ಓಡಿಹೋದಳು.

ಪತ್ನಿ : ಯಾರ್ರೀ ಆ ಮಿಟಕಾಡಿ? ಅವಳ ಗಾಡಿಯ ನಂಬರ್‌ ನೋಟ್‌ ಮಾಡಿಕೊಂಡ್ರಾ?

ಪತಿ : ಅಯ್ಯೋ… ಆ ಗಲಾಟೇಲಿ ಅದೆಲ್ಲ ನಾನು ಹೇಗೆ ನೋಡಿಕೊಳ್ಳಲಿ…? ನನಗೆ ನೆನಪಿರೋದು ಇಷ್ಟೆ, ಆ ಹೆಂಗಸು ಬಹಳ ಸ್ಲಿಮ್ ಟ್ರಿವ್‌ ಆಗಿದ್ಲು ಕಣೆ. ಅವಳು ಆಕಾಶ ತಿಳಿನೀಲಿ ಬಣ್ಣದ ಸೀರೆ, ಮ್ಯಾಚಿಂಗ್‌ ಬ್ಲೌಸ್‌, ಪರ್ಫೆಕ್ಟ್ ಆ್ಯಕ್ಸೆಸರೀಸ್‌ ಧರಿಸಿದ್ದಳು. ಕೂದಲು ನೋಡಿದ್ರೆ ಸ್ವಲ್ಪ ಹೈಲೈಟ್‌ ಮಾಡಿದಂತಿತ್ತು. ಮೇಕಪ್‌ ಸಾಲಿಡ್‌ ಆಗಿತ್ತು. ತುಟಿಗಳಿಗೆ ಗಾಢ ಬಣ್ಣದ ಲಿಪ್‌ಸ್ಟಿಕ್‌ ತೀಡಿ… ಹ್ಞಾಂ… ಅದೇನಂತೀಯಾ, ಲಿಪ್‌ಬಾಮ್ ಸವರಿ ಲಿಪ್‌ಡಸ್ಟ್ ಸಿಂಪಡಿಸಿದ್ದಳು. ಅವಳ ಕುತ್ತಿಗೆಯ ಬಲಭಾಗದಲ್ಲಿ ಒಂದು ಸಣ್ಣ ಮಚ್ಚೆ ಅಚ್ಚೊತ್ತಿದಂತಿತ್ತು.

ಮಾರನೇ ದಿನ ಪತಿರಾಯ ಆಫೀಸಿಗೆ ಹೊರಟಾಗ ಅವನ ಎರಡೂ ಕಣ್ಣುಗಳೂ ಬಾತುಕೊಂಡಿದ್ದವು.

ವೈದ್ಯರು ಗುಂಡನನ್ನು ಕೂಲಂಕಷವಾಗಿ ಪರೀಕ್ಷಿಸಿ ಹೇಳಿದರು, “ನೋಡಪ್ಪ, ಇದು ದೇಹದ ರೋಗವಲ್ಲ, ಮನೋವ್ಯಾಧಿ. ಇದಕ್ಕೆ ದಂಡಿ ವಿಶ್ರಾಂತಿ ಬೇಕು. ಪ್ರತಿ ದಿನ ನೀನು 7-8 ಗಂಟೆ ಕಾಲ ನಿದ್ದೆ ಮಾಡಲೇ ಬೇಕು. ಈ ನಿದ್ದೆ ಮಾತ್ರೆ ತಗೋ, ರಾತ್ರಿ ಊಟ ಆದ ತಕ್ಷಣ ನಿನ್ನ ಹೆಂಡತಿಗೆ 2 ಮಾತ್ರೆ ತೆಗೆದುಕೊಳ್ಳುವಂತೆ ಹೇಳಿ ನೀನು ಹಾಲು ಕುಡಿದು ನಿದ್ದೆ ಮಾಡಿಬಿಡು. 1 ವಾರದಲ್ಲಿ ಎಲ್ಲಾ ಸರಿಹೋಗುತ್ತದೆ!”

ಗುಂಡ : ಫ್ರೆಂಡ್‌ ಮತ್ತು ಗರ್ಲ್ ಫ್ರೆಂಡ್‌ ಮಧ್ಯೆ ಬಹಳ ಅಂತರ ಇದೆ ಅಂತೀಯಾ?

ಕಿಟ್ಟಿ : ಖಂಡಿತಾ ಇದೆ.

ಗುಂಡ : ಅದೇನು ಹೇಳು.

ಕಿಟ್ಟಿ : ನಮಗೆ ಸಾಲ ಬೇಕು ಅಂದಾಗ ಕೊಡುವವನೇ ಫ್ರೆಂಡ್‌, ನಮ್ಮಿಂದ ಆ ಸಾಲ ಮಾಡಿಸುವವಳೇ ಗರ್ಲ್ ಫ್ರೆಂಡ್‌!

ಫ್ಯಾನ್‌ ಕೆಟ್ಟಿದೆ ಅಂತ ಗುಂಡ ತಾನೇ ಅದರ ಭಾಗಗಳನ್ನೆಲ್ಲ ಬಿಚ್ಚಿ ಹರಡಿಕೊಂಡು ರಿಪೇರಿಗೆ ಕುಳಿತ. ಗುಂಡಿ ಅಡುಗೆ ಕೆಲಸದಲ್ಲಿ ಬಿಝಿಯೋ ಬಿಝಿ!

ಗುಂಡ : ಸ್ವಲ್ಪ ಬೇಗ ಇಲ್ಲಿ ಬಾ…. ನಾನೊಬ್ಬನೇ ಈ ರಿಪೇರಿ ಕೆಲಸ ಮಾಡಿ ಸಾಯಲೇನು? ಅದರ ಸರ್ವೀಸ್‌ ಚಾರ್ಜ್‌ ಪೂರ್ತಿ ಉಳಿಸಿದ್ದೀನಿ. ಇಲ್ಲಿ ಬಂದು ನೋಡು.

ಗುಂಡಿ : ಅಯ್ಯೋ…. ಕೈ ತುಂಬಾ ಕೆಲಸ. ಏನದು ನಿಮ್ಮ ಗೋಳು….?

ಗುಂಡ : ಈ ವೈರ್‌ ಹಿಡಿದುಕೋ. ನಾನಿಲ್ಲಿ ಸ್ವಲ್ಪ ಪರೀಕ್ಷೆ ಮಾಡಬೇಕು.

ಗುಂಡಿ : ಹ್ಞೂಂ ಹಿಡ್ಕೊಂಡೆ, ಆಯ್ತಾ ನಿಮ್ಮ ಪುರಾಣ?

ಗುಂಡ : ಅದು ಸರಿ…. ನಿನಗೆ ಏನೂ ಆಗಲಿಲ್ವೆ?

ಗುಂಡಿ : ಹಾಗಂದ್ರೆ….?

ಗುಂಡ : ಶಾಕ್‌ ಹೊಡೆದು ಜೀವ ನಡುಗಲಿಲ್ವೆ?

ಗುಂಡಿ : ಅದೇನೂ ಇಲ್ಲ ಬಿಡಿ.

ಗುಂಡ : ಓ…. ಹಾಗಿದ್ರೆ ಆ ಇನ್ನೊಂದು ವೈರ್‌ನಲ್ಲಿ ಕರೆಂಟ್‌ ಹರೀತಿದೆ ಅಂತಾಯ್ತು. ನೀನಿನ್ನು ಹೋಗಿ ಬೇಗ ತಟ್ಟೆ ರೆಡಿ ಮಾಡು.

ಸತೀಶ್‌ : ಆಹಾ….. ಈ ಮೆಸೇಜ್‌ ನೋಡಿದೆಯಾ?

ಸುರೇಶ್‌ : ಏನದು ಅಂಥಾದ್ದು?

ಸತೀಶ್‌ : ಯಾವ ಗಂಡಂದಿರಿಗೆ ಅಡುಗೆ ಮಾಡಲು ಬರುತ್ತೋ ಅಂಥವರ ಹೆಂಡ್ತೀರಿಗೆ ಆಗಾಗ ಆರೋಗ್ಯ ಸರಿ ಇರಲ್ಲವಂತೆ, ತಲೆನೋವು ಅಂತೂ 24/7 ಇರುತ್ತದಂತೆ.

ಸುರೇಶ್‌ : ಅಪ್ಪಿತಪ್ಪಿಯೂ ನಾನು ಬ್ಯಾಚುಲರ್‌ ಆಗಿದ್ದಾಗ  ನಾನೇ  ಅಡುಗೆ ಮಾಡಿಕೊಳ್ತಿದ್ದೆ ಅಂತ ಹೇಳಲ್ಲಪ್ಪ!

ವಾಟ್ಸ್ಆ್ಯಪ್‌ ನೀಡಿದ ಜ್ಞಾನ : ಈಗ ಕೈ ಬೆರಳುಗಳೇ ಎಲ್ಲವನ್ನೂ ಒತ್ತುತ್ತಾ ನಿಭಾಯಿಸುತ್ತಿವೆ. ಹೀಗಾಗಿ ಮೊಬೈಲ್‌ ಒಂದೇ ಸಂಬಂಧಗಳನ್ನು ಬೆಸೆಯಲು ಮೂಲಾಧಾರ. ಹಾಗಾಗಿ ನಾಲಿಗೆಯ ಹರಿತಕ್ಕೆ ಸಹಜ ಕಡಿವಾಣ ಬಂದಿದೆಯಂತೆ!

ಹೆಂಡತಿ ಗಂಡನಿಗೆ ಒಂದು ಮೆಸೇಜ್‌ ಕಳಿಸಿದ್ದಳು.

ಮೊದಲು ಆಫೀಸ್‌ನಿಂದ ವಾಪಸ್‌ ಬರೋವಾಗ ತರಕಾರಿ ತರುವುದನ್ನು ಮರೀಬೇಡಿ. ಎರಡನೇದು ಹಾಗೆ ಸವಿತಾ ಮನೆಗೆ ಬಂದಿದ್ದಳು, ನಿಮ್ಮ ಬಗ್ಗೆ ವಿಚಾರಿಸಿದಳು.

ಗಂಡ : (ಬೆರಗಾಗಿ) ಈ ಸವಿತಾ ಯಾರು?

ಹೆಂಡತಿ : ಯಾರೂ ಇಲ್ಲ….. ನೀವು ಮೆಸೇಜ್‌ ನೋಡಿದ್ರಾ ಇಲ್ವಾ…. ಅಂತ ಕನ್ಛರ್ಮ್ ಮಾಡ್ಕೊಂಡೆ ಅಷ್ಟೇ…..

ಗಂಡ : ಅದೇ ತಾನೇ…. ನಾನೀಗ ಸವಿತಾ ಜೊತೇಲಿ ಇದೀನಿ…. ನೀನು ಯಾವ ಸವಿತಾ ಬಗ್ಗೆ ಹೇಳ್ತಿದೀಯಾ ಅಂದ್ಕೊಂಡೆ….

ಹೆಂಡತಿ : ಏನಂದ್ರಿ…. ನೀವೆಲ್ಲಿದ್ದೀರಾ ಈಗ…..?!

ಗಂಡ : ತರಕಾರಿ ಮಾರ್ಕೆಟ್‌ ಹತ್ತಿರ.

ಹೆಂಡತಿ : ಅಲ್ಲೇ ಇರಿ ನಾನು ಅಲ್ಲೇ ಬರ್ತೀನಿ…..10 ನಿಮಿಷದ ನಂತರ…..

ಹೆಂಡತಿ : ರೀ… ನೀವೆಲ್ಲಿದೀರಾ….? ನಾನು ತರಕಾರಿ ಮಾರ್ಕೆಟ್‌ ಹತ್ತಿರ ಬಂದಿದೀನಿ.

ಗಂಡ : ನಾನು ಆಫೀಸ್‌ನಲ್ಲಿ ಇದೀನಿ. ಏನು ತರಕಾರಿ ಬೇಕೋ ತಗೊಂಡು ಮನೆಗೆ ಹೋಗು…..

ಗಂಡಸರನ್ನೇನು ಸಾಮಾನ್ಯದವರು ಅಂದುಕೊಂಡ್ರಾ…..!

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ