ಕಥೆ - ಭೋಜರಾಜ ಸೊಪ್ಪಿಮಠ
ತಮ್ಮ ಮಾತನ್ನು ಆಧುನಿಕ ಸೊಸೆ ಪುರಸ್ಕರಿಸುವಳೋ ಇಲ್ಲವೋ ಎಂಬ ಗೊಂದಲ್ಲಿದ್ದ ಶಾಂತಾ, ಮನೆಯಲ್ಲಿ ಅಶಾಂತಿ ಮೂಡಬಾರದೆಂದು ಬಯಸುತ್ತಿದ್ದರು. ಇದನ್ನು ಸೊಸೆ ಸ್ವೀಕರಿಸಿದ್ದು ಹೇಗೆ......?
ಮಗ ಕಿರಣನಿಗೆ ಸರಿಯಾದ ವಯಸ್ಸಿನಲ್ಲಿ ಮದುವೆ ಮಾಡಬೇಕೆಂದು ನಿರ್ಧರಿಸಿದ್ದ ಶಾಂತಾ ಸಂದರ್ಭ ಸಿಕ್ಕಾಗೆಲ್ಲ ಅವನ ಮದುವೆಯ ವಿಷಯವಾಗಿ ಮಾತನಾಡುತ್ತಿದ್ದರು. ಅವರು ಹೇಳುವ ಮಾತುಗಳನ್ನು ಸಹನೆಯಿಂದ ಕೇಳಿಸಿಕೊಳ್ಳುತ್ತಿದ್ದ ಕಿರಣ್, `ಇರಲಿ ತಡೆಯಮ್ಮ, ಈಗೇನು ಅವಸರ,' ಎಂದೆಲ್ಲ ಹೇಳುತ್ತಾ ಮುಂದೂಡುತ್ತಲೇ ಇದ್ದ.
ಮೊದಲಿನ ಹಾಗೆ ತನಗೆ ಮನೆಗೆಲಸ ನಿಭಾಯಿಸಲು ಕಷ್ಟವಾಗುತ್ತಿದೆ. ಅಲ್ಲದೆ, ಈಗ ನಿನಗೆ ಉದ್ಯೋಗ ಇದೆ. ಸರಿಯಾದ ವಯಸ್ಸು ಕೂಡ ಆಗಿದೆ. ಮುಂದಕ್ಕೆ ಹಾಕುವಂತಹ ಯಾವುದೇ ಕಾರಣಗಳು ಇಲ್ಲ, ಎಂದು ತಿಳಿಸಿ ಹೇಳಿದರೆ, `ಕೆಲಸ ಜಾಸ್ತಿಯಾದರೆ ಯಾರನ್ನಾದರೂ ಕೆಲಸದವರನ್ನು ಹುಡುಕೋಣ ಬಿಡು,' ಎಂದು ಹೇಳಿ ಅಲ್ಲಿಗೆ ಮಾತು ಮುಗಿಸುತ್ತಿದ್ದ.
ಇವರು ಈಗಿನ ಕಾಲದ ಹುಡುಗರು. ಅವರ ಮನಸ್ಸಿನಲ್ಲಿ ಏನಿರುತ್ತದೋ ಆ ರೀತಿನೇ ನಿರ್ಧಾರ ತಗೋತಾರೆ. ಇನ್ನು ಹೆಚ್ಚು ಒತ್ತಾಯಿಸುವುದು ಬೇಡ ಎಂದು ದೃಢ ನಿರ್ಧಾರ ತೆಗೆದುಕೊಂಡಿದ್ದರು ಶಾಂತಾ.
ಅದೊಂದು ದಿನ ಊಟಕ್ಕೆ ಕುಳಿತಾಗ ಕಿರಣ್, ``ಅಮ್ಮಾ.... ನಾನೊಂದು ಹುಡುಗಿಯನ್ನು ನೋಡಿದ್ದೀನಿ. ಅವಳು ಈ ಮನೆಗೆ ಸರಿ ಹೊಂದುತ್ತಾಳೆ ಅಂತ ನನ್ನ ಅನಿಸಿಕೆ. ಅವಳನ್ನೇ ಮದುವೆಯಾಗಬೇಕು ಎಂದುಕೊಂಡಿದ್ದೇನೆ,'' ಎನ್ನುತ್ತಾ ಮೊಬೈಲ್ ನಲ್ಲಿ ಆ ಹುಡುಗಿಯ ಫೋಟೋ ತೋರಿಸಿದ.
ಹುಡುಗಿಯೇನೋ ನೋಡಲು ಲಕ್ಷಣವಾಗಿದ್ದಳು. ಆದರೆ ಯಾವ ಜಾತಿ, ಗುಣ, ಸ್ವಭಾವಗಳೇನು ಅಂತ ಕೇಳಿದರೆ ಅವನ ಮನಸ್ಸಿಗೆ ನೋವಾಗಬಹುದೆಂದು ಅರಿತ ಶಾಂತಾ ಅವನನ್ನು ಕೇಳುವ ಪ್ರಯತ್ನ ಮಾಡದೆ ಚೆನ್ನಾಗಿದ್ದಾಳೆ ಎಂದಷ್ಟೇ ಹೇಳಿದಳು. ಈಗಾಗಲೇ ಅವನು ಅವಳನ್ನೇ ಜೀವನ ಸಂಗಾತಿಯನ್ನಾಗಿ ಮಾಡಿಕೊಳ್ಳಬೇಕೆಂದು ನಿರ್ಧರಿಸಿಯಾದ ಮೇಲೆ ತಾನು ಯಾವುದೇ ರೀತಿಯಿಂದ ಮಾತನಾಡಿದರೂ ಅದು ಅವನಿಗೆ ಇಷ್ಟವಾಗದೇ ಹೋಗಬಹುದು. ಒಟ್ಟಿನಲ್ಲಿ ಜೀವನ ನಡೆಸುವವನು ಅವನು, ಅವನ ಇಷ್ಟವೇ ತನ್ನಿಷ್ಟ ಎಂದುಕೊಂಡು ಸುಮ್ಮನಾಗಿದ್ದರು.
ಸ್ವಲ್ಪ ದಿನಗಳ ನಂತರದಲ್ಲಿ ಅವಳನ್ನು ಮನೆಗೆ ಕರೆದುಕೊಂಡು ಬಂದಿದ್ದ. ಅವಳೊಂದಿಗೆ ಮಾತನಾಡುತ್ತಿದ್ದಾಗ ಒಂದು ಸ್ಪಷ್ಟತೆ ಸಿಕ್ಕಿತು. ಹುಡುಗಿಯ ಮನೆಯವರು ಆರ್ಥಿಕವಾಗಿ ತುಂಬಾ ಶ್ರೀಮಂತರೇನೂ ಅಲ್ಲ. ಮಧ್ಯಮ ವರ್ಗದವರು. ಹಾಗಂತ ಯಾವುದಕ್ಕೂ ಕೊರತೆ ಇರದಂತೆ ಜೀವನ ನಡೆದುಕೊಂಡು ಬಂದಿತ್ತು. ಆದರೆ ಅವಳು ಈಗಿನ ಕಾಲದ ಹುಡುಗಿಯಾಗಿದ್ದರಿಂದ ಅದಕ್ಕೆ ತಕ್ಕಂತೆ ವೇಷಭೂಷಣ ಧರಿಸುತ್ತಿದ್ದಳು.
ಇಬ್ಬರೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದಾರಲ್ಲ ಎಂಬ ಸಮಾಧಾನ ಶಾಂತಾರಲ್ಲಿ ಮೂಡಿತ್ತು. ಕೊನೆಗೂ ಎಲ್ಲರಿಗೂ ಒಮ್ಮತವಾದ ಒಂದು ದಿನದಂದು ಮದುವೆ ಮಾಡಿ ಮುಗಿಸಲಾಯಿತು.
ತಾಯಿಗೆ ಸಹಾಯವಾಗಲಿ ಎಂದು ಕೆಲಸದವರ ವಿಷಯ ಪ್ರಸ್ತಾಪಿಸಿದ್ದ ಕಿರಣ್, ಈಗ ಹೆಂಡತಿ ಬರುತ್ತಲೇ ಎಲ್ಲದಕ್ಕೂ ಕೆಲಸದವರನ್ನು ನೇಮಿಸಿಕೊಂಡ. ಮದುವೆಯಾದ ನಂತರ ಅವನು ತುಂಬಾ ಜಾಣತನದಿಂದ ವರ್ತಿಸುತ್ತಿದ್ದ. ಏಕೆಂದರೆ ತಾಯಿ ಒಂದು ಕೆಲಸ ಮಾಡಿದರೆ, ಹೆಂಡತಿ ವೈಷ್ಣವಿ ಒಂದೆರಡು ಕೆಲಸವಾದರೂ ಮಾಡಬೇಕಾಗುತ್ತದೆ ಎಂಬ ಕಾರಣದಿಂದಲೇ ಎಲ್ಲದಕ್ಕೂ ಕೆಲಸದವರನ್ನು ನೇಮಿಸಿದ್ದ.





