ಹಬ್ಬದ ದಿನಗಳಲ್ಲಿ ಪರಸ್ಪರರ ಮನೆಗಳಿಗೆ ಹೋಗಿ ಭೇಟಿಯಾಗುವುದು ಸಹಜ. `ಅತಿಥಿ ದೇವೋಭವ’ ಎಂದು ಹಾಡಿ ಹೊಗಳುವ ನಾಡಿನಲ್ಲಿ ನಾವಿದ್ದೇವೆ. ಆದರೆ ಬದಲಾಗುತ್ತಿರು ಇಂದಿನ ದಿನಗಳಲ್ಲಿ ಯಾವುದೇ ಮುನ್ಸೂಚನೆ ಕೊಡದೆ ಅತಿಥಿಗಳು ಬಂದುಬಿಟ್ಟರೆ ಆತಿಥೇಯರಿಗೆ ಬಹಳಷ್ಟು ಸಮಸ್ಯೆ ಆಗುತ್ತದೆ. ಹೀಗಾಗಿ ಒಳ್ಳೆಯ ಅತಿಥಿಗಳಾಗಲು ಒಂದಿಷ್ಟು ಶಿಷ್ಟಾಚಾರ, ಸ್ವಲ್ಪ ಶಿಸ್ತು ಹಾಗೂ ಸಾಕಷ್ಟು ನಯವಿನಯತೆ ಇದ್ದರೆ ಯಾರೇ ಆಗಲಿ ನಿಮ್ಮನ್ನು ಅತಿಥಿಯಾಗಿ ಉಪಚರಿಸಲು ಹೆಮ್ಮೆಪಡುತ್ತಾರೆ.

ಇಲ್ಲಿ ಕೊಟ್ಟಿರುವ ಕೆಲವು ಸಲಹೆಗಳನ್ನು ಅನುಸರಿಸಿದರೆ ಅವು ನಿಮ್ಮನ್ನು ಟ್ರೆಂಡಿ ಅತಿಥಿಗಳ ಸಾಲಿನಲ್ಲಿ ಹೋಗಿ ಕೂರಿಸುತ್ತವೆ.

ಮುನ್ಸೂಚನೆ ಕೊಡಿ : ನೀವು ಯಾವಾಗ ಬೇಕಾದಾಗ ಯಾರ ಮನೆಗೆ ಹೋದರೂ ಭೇಟಿಯಾಗುವ ಕಾಲ ಈಗ ಹೋಯಿತು. ಈಗ ಎಲ್ಲರೂ ಅವರವರ ಜೀವನದಲ್ಲಿ ವ್ಯಸ್ತರಾಗಿರುತ್ತಾರೆ. ಇಂಥದರಲ್ಲಿ ಮುಂಚಿತವಾಗಿ ಹೇಳದೆ ಯಾರ ಮನೆಗಾದರೂ ಹೋಗಿಬಿಟ್ಟರೆ ಅದು ಶಿಷ್ಟಾಚಾರ ಎನಿಸುವುದಿಲ್ಲ. ಹೋಗುವ ಮುನ್ನ ತಿಳಿಸಿಹೋದರೆ, ಅವರೂ ನಿಮ್ಮನ್ನು ಸೂಕ್ತ ರೀತಿಯಲ್ಲಿ ಬರಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಬಹುದು.

ತಲುಪುವ ಸಮಯ ತಿಳಿಸಿ : ನೀವು ಯಾರ ಮನೆಗೆ ಹೋಗುತ್ತಿದ್ದೀರೊ, ಅವರಿಗೆ ಫೋನ್‌ ಮೂಲಕ ನೀವು ತಲುಪುವ ಸಮಯ ತಿಳಿಸುವುದು ಸೂಕ್ತ. ನೀವು ಯಾರದ್ದೊ ಕಾರ್ಯಕ್ರಮಕ್ಕೆ ಉಪಸ್ಥಿತರಿರಲು ಹೊರಟಿದ್ದರೆ, ಅವರ ಫೋನ್‌ ನಂಬರ್‌ ನಿಮ್ಮ ಬಳಿ ಇರುವುದು ಸೂಕ್ತ. ಏಕೆಂದರೆ ವಿಳಾಸ ಹುಡುಕುವುದು ನಿಮಗೆ ಕಷ್ಟವಾಗುವುದಿಲ್ಲ. ಒಂದು ವೇಳೆ ಯಾವುದೊ ಕಾರಣದಿಂದ ಅಲ್ಲಿಗೆ ತಡವಾಗಿ ತಲುಪುತ್ತಿದ್ದರೆ ಆ ಬಗ್ಗೆಯೂ ಅವರಿಗೆ ತಿಳಿಸಿ.

ಜೊತೆಗೊಂದು ಉಡುಗೊರೆ : ಖಾಲಿ ಕೈಯಲ್ಲಿ ಯಾರದ್ದಾದರೂ ಮನೆಗೆ ಹೋಗುವುದು ಶೋಭೆ ತರುವ ಸಂಗತಿಯಲ್ಲ. ಆತಿಥ್ಯ ನೀಡುವವರ ಮನೆಯ ಸದಸ್ಯರಿಗೆ ತಕ್ಕಂತೆ ಉಡುಗೊರೆ ಆಯ್ದುಕೊಳ್ಳಿ. ಆ ಮನೆಯಲ್ಲಿ ಪುಟ್ಟ ಮಕ್ಕಳಿದ್ದರೆ ಅವರಿಗೆ ಚಾಕ್ಲೇಟ್‌ ತೆಗೆದುಕೊಂಡು ಹೋಗಿ. ಯಾವುದೇ ಉಡುಗೊರೆ ಸಂದರ್ಭಕ್ಕೆ ತಕ್ಕಂತೆ ಇರಬೇಕು.

ಉದಾಹರಣೆಗೆ ಗೃಹಪ್ರವೇಶಕ್ಕೆ ಆಹ್ವಾನವಿದ್ದರೆ, ಗೃಹಾಲಂಕಾರಕ್ಕೆ ಸಂಬಂಧಪಟ್ಟಂತೆ ಯಾವುದಾದರೂ ವಸ್ತು ತೆಗೆದುಕೊಂಡು ಹೋಗಿ. ಮದುವೆ ವಾರ್ಷಿಕೋತ್ಸವ ಇದ್ದರೆ ಯಾವುದಾದರೂ ಫೋಟೋಫ್ರೇಮ್, ಮಗುವಿನ ಬರ್ಥ್‌ಡೇ ಇದ್ದರೆ ಒಂದೊಳ್ಳೆ ಆಟಿಕೆ ತೆಗೆದುಕೊಂಡು ಹೋಗಿ.

ಮಾತುಕತೆ ನಡೆಸಿ : ಯಾರದ್ದಾದರೂ ಮನೆಗೆ ಕಾರ್ಯಕ್ರಮಕ್ಕೆ ಹೊರಟಿದ್ದರೆ, ಅವರ ಕಾರ್ಯಕ್ರಮ ಮುಗಿಸಿ ಹಾಗೆಯೇ ನಿಮ್ಮ ಮನೆಗೆ ಹೊರಟು ಹೋಗುವುದಲ್ಲ. ಆತಿಥ್ಯ ನೀಡಿದವರ ಜೊತೆ ಒಂದೆರಡು ನಿಮಿಷವಾದರೂ ಮಾತಾಡಿ ಬನ್ನಿ. ಆಗ ಅವರಿಗೆ ಸಮಾಧಾನ, ನಿಮಗೂ ನಿರಾಳತೆ.

ಎಲ್ಲರೊಂದಿಗೂ ಬೆರೆಯಿರಿ : ನೀವು ಬೇರೆಯವರ ಜೊತೆ ಪರಿಚಿತರಾಗಿರದೇ ಇರಬಹುದು. ಆದರೆ ಆತಿಥ್ಯ ನೀಡುವವರ ಮುಖಾಂತರ ಇತರರ ಪರಿಚಯ ಮಾಡಿಕೊಳ್ಳಲು ಪ್ರಯತ್ನಿಸಿ. ಅವರ ಜೊತೆ ಏನು ಮಾತಾಡುವುದೆಂದು ಗಾಬರಿಗೊಳಗಾಗದೆ ಅವರು ಏನು ಮಾತನಾಡುತ್ತಾರೆ ಎಂಬುದನ್ನು ತಾಳ್ಮೆಯಿಂದ ಕೇಳಿಸಿಕೊಳ್ಳಿ. ಸಂದರ್ಭ ಬಂದಾಗ ನಿಮ್ಮದೂ ಮಾತು ಪೋಣಿಸಿ. ಹೀಗೆ ನೀವು ಗೊತ್ತಿಲ್ಲದೆ ಅನೇಕರಿಗೆ ಪರಿಚಿತರಾಗುವಿರಿ.

ಡಿನ್ನರ್‌ಗೆ ಹೋದಾಗ : ಯಾರದ್ದಾದರೂ ಮನೆಗೆ ರಾತ್ರಿ ಊಟಕ್ಕೆ ಆಹ್ವಾನವಿದ್ದರೆ, ಎಲ್ಲಕ್ಕೂ ಮುಂಚೆ ನಿಮಗೆ ಟೇಬಲ್ ಮ್ಯಾನರ್ಸ್‌ ಬಗ್ಗೆ ತಿಳಿದಿರಬೇಕು. ಏಕೆಂದರೆ ಎಲ್ಲರ ದೃಷ್ಟಿಯಲ್ಲೂ ನಿಮಗೊಂದು ಒಳ್ಳೆಯ ಸ್ಥಾನಮಾನ ಸಿಗಬೇಕು. ಬಹಳ ವೇಗವಾಗಿ ಅಥವಾ ಬಹಳ ನಿಧಾನವಾಗಿ ಆಹಾರ ಸೇವನೆ ಮಾಡಬೇಡಿ. ಊಟ ಮಾಡುವಾಗ ಯಾವುದೇ ಬಗೆಯ ಸದ್ದು ಮಾಡಬೇಡಿ.

ಧನ್ಯವಾದ ಹೇಳಿ : ಕಾರ್ಯಕ್ರಮ ಮುಗಿಸಿ ಹೊರಡುವಾಗ ಅವರಿಗೆ ಧನ್ಯವಾದ ಹೇಳಲು ಮರೆಯಬೇಡಿ. ಅವರನ್ನು ತೆರೆದ ಹೃದಯದಿಂದ ಪ್ರಶಂಸೆ ಮಾಡಿ. ಅವರು ಕೊಟ್ಟ ಪಾರ್ಟಿಯ ಬಗ್ಗೆ, ಅವರ ಡೆಕೊರೇಶನ್‌ ಬಗ್ಗೆ, ಅವರ ಮನೆಯ ಅಲಂಕಾರದ ಬಗ್ಗೆ ಹೀಗೆ ಯಾವುದೇ ವಿಷಯದ ಬಗ್ಗೆ ಅವರಿಗೆ ಪ್ರಶಂಸೆ ವ್ಯಕ್ತಪಡಿಸಿ.

ಏನಾದರೂ ಹಾನಿಯಾದರೆ : ನಿಮ್ಮ ತಪ್ಪಿನಿಂದ ಆತಿಥ್ಯ ನೀಡಿದವರಿಗೆ ಏನಾದರೂ ಹಾನಿಯುಂಟಾಗಿದ್ದರೆ, ಆ ಬಗ್ಗೆ ಕ್ಷಮೆ ಕೇಳಲು ಮರೆಯಬೇಡಿ. ಈ ಒಂದು ಹೆಜ್ಜೆಯಿಂದಾಗಿ ಅವರ ದೃಷ್ಟಿಯಲ್ಲಿ ನಿಮ್ಮ ಸ್ಥಾನಮಾನ ಹೆಚ್ಚುತ್ತದೆ.

– ಎಸ್‌. ಪ್ರಮೀಳಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ