ಪ್ರೇಮವಿಲ್ಲದೆ ನೆಮ್ಮದಿ ಎಲ್ಲಿ?
ಇತ್ತೀಚೆಗೆ ಹಳೆಯ ಹಿಂದಿ ಗೀತೆಗಳಾದ `ಪ್ಯಾರ್ ಬಿನಾ ಚೇನ್ ಕಹಾ ರೇ….’ `ಬಸ್ ಏಕ್ ಸನಂ ಚಾಹಿಯೇ ಆಶಿಕೀ ಕೇ ಲಿಯೇ….’ ಮುಂತಾದ ಹಾಡುಗಳು ಶೃತಿ ಹಾಸನ್ಗೆ ಹೆಚ್ಚು ಸೂಟ್ ಆಗುತ್ತಿವೆ. ಅಸಲಿಗೆ ಕೆಲವು ದಿನಗಳ ಹಿಂದೆ ಶೃತಿ ಬೇಬಿಗೆ ತನ್ನ ಬಾಯ್ಫ್ರೆಂಡ್ ಮೈಕಲ್ನಿಂದ ಬ್ರೇಕ್ಅಪ್ ಆಗಿತ್ತು. ಕೆಲವು ದಿನಗಳ ವಿರಹ ವೇದನೆಯ ನಂತರ ಶೃತಿ ಮತ್ತೆ ಬಾಯ್ಫ್ರೆಂಡ್ ಹಂಟ್ಗಿಳಿದಳು. ತನ್ನನ್ನು ಚೆನ್ನಾಗಿ ಅರಿತು ಹೃದಯಪೂರ್ಕವಾಗಿ ಪ್ರೇಮಿಸಬಲ್ಲಂಥ ಹುಡುಗನನ್ನು ಹುಡುಕುತ್ತಿದ್ದೇನೆ ಎಂದು ತಾನೇ ಹೇಳಿಕೆ ಕೊಟ್ಟಳು. ಹಿಂದೆ ದಕ್ಷಿಣದ ಹೀರೋ ಸಿದ್ದಾರ್ಥನಿಗೆ ಕೈಕೊಟ್ಟಿದ್ದನ್ನು ನೆನಪಿಸಿಕೊಳ್ಳಲಿಕ್ಕೂ ಈಗ ಅವಳಿಗೆ ಮನಸ್ಸಿಲ್ಲ. ಕೈಯಲ್ಲಿ ಸಿನಿಮಾಗಳಂತೂ ಗಿಟ್ಟುತ್ತಿಲ್ಲ, ಟೈಂಪಾಸ್ಗೆ ಬಾಯ್ಫ್ರೆಂಡ್ ಆದರೂ ಸಿಗಲಿ, ಆಲ್ ದಿ ಬೆಸ್ಟ್!
ಫಿಟ್ನೆಸ್ ಈಕೆಯ ಮೂಲ ಮಂತ್ರ
ದಕ್ಷಿಣದ ಚಿತ್ರಗಳಿಂದ ಬಾಲಿವುಡ್ನತ್ತ ಜಿಗಿದಿರುವ ರಕುಲ್ಪ್ರೀತ್ ಇಲ್ಲಿ ಝಾಂಡಾ ಊರಲು ಹರಸಾಹಸ ಮಾಡುತ್ತಿದ್ದಾಳೆ. ಅದು ಅಷ್ಟು ಸುಲಭವಲ್ಲ ಎಂಬುದು ಅವಳಿಗೂ ಗೊತ್ತು. ಹೀಗಾಗಿ ಈಕೆ ಈಗ ನಟನೆಯ ಜೊತೆ ಫಿಟ್ನೆಸ್ ಕಡೆಗೂ ಹೆಚ್ಚಿನ ಗಮನಹರಿಸುತ್ತಿದ್ದಾಳೆ. ಗಂಟೆಗಟ್ಟಲೆ ಜಿಮ್ ನಲ್ಲಿ ಬೆವರು ಹರಿಸಿ ಇತರರನ್ನು ಅಸೂಯೆಯಿಂದ ಬೆಚ್ಚಿ ಬೀಳುವಂತೆ ಮಾಡುತ್ತಿದ್ದಾಳೆ. ಈಕೆ ಸ್ಟ್ರೆಂಥ್ ಟ್ರೇನಿಂಗ್ ಜೊತೆಗೆ ಕಾರ್ಡಿಯೊ, ಕೂಲ್ ಮೋಶನ್ಗಳ ಕಡೆಗೂ ಗಮನ ಕೊಡುತ್ತಾಳೆ. ಕೇವಲ ಫಿಟ್ನೆಸ್ ಇದ್ದರೆ ಸಾಲದಮ್ಮ, ನಟನೆಯತ್ತಲೂ ಗಮನಹರಿಸು ಎನ್ನುತ್ತಿದ್ದಾರೆ ಹಿತೈಷಿಗಳು!
ರಾಣಿ ಇದೀಗ ಮರ್ದಾನಿ
ರಾಣಿ ಮುಖರ್ಜಿ `ಈಟ್ ಲೆಸ್ ಬಟ್ ಗುಡ್’ ಪಾಲಿಸಿಯನ್ನು ಚಿತ್ರಗಳ ಆಯ್ಕೆಗೂ ಮಾಡಿಕೊಂಡಂತಿದೆ. ಹೀಗಾಗಿಯೇ ಬೆರಳೆಣಿಕೆಯಷ್ಟು ಚಿತ್ರಗಳಲ್ಲಿ ಮಾತ್ರವೇ ನಟಿಸುತ್ತಿದ್ದಾಳೆ. ಅದರ ನಿರ್ದೇಶಕ ಈಕೆಯ ಪತಿಯಲ್ಲದೆ ಬೇರಾರೂ ಅಲ್ಲ. ಈಗಾಗಲೇ ಈಕೆಯ `ಮರ್ದಾನಿ’ ಯಶಸ್ವಿ ಆಗಿತ್ತು. ಹೀಗಾಗಿ ಇದರ `ಪಾರ್ಟ್-2′ ಬರುತ್ತಿದೆ. ಇದರಲ್ಲಿ ಟಿಪಿಕಲ್ ಬಾಲಿವುಡ್ ಕಥೆ ಇದ್ದು, ರಾಣಿ ರೌಡಿ ಇನ್ಸ್ಪೆಕ್ಟರ್ ಆಗಿರುತ್ತಾಳಂತೆ. ಈ ಚಿತ್ರದ ಟೀಸರ್ ಸಕ್ಸಸ್ ಅನಿಸಿದೆ, ಆದರೆ ಚಿತ್ರ ಇದೇ ತರಹ ಸಕ್ಸಸ್ ಆಗುತ್ತದಾ ಎಂದು ಕಾದು ನೋಡಬೇಕಿದೆ.
ತಾರಾ ಏಕೆ ಮೂಕಿ ಆದಳು?
`ಸ್ಟೂಡೆಂಟ್ ಆಫ್ ದಿ ಇಯರ್’ ಚಿತ್ರದಿಂದ ತನ್ನದೇ ಆದ ಐಡೆಂಟಿಟಿ ಪಡೆದ ಹಿಂದಿ ತಾರಾ ಈಗ ತನ್ನ ಪ್ರತಿಭೆಯನ್ನು `ಮರ್ಜಾಲಾ’ ಚಿತ್ರದಲ್ಲಿ ತೋರಿಸಲಿದ್ದಾಳೆ. ಇಲ್ಲಿ ಅದು ಬಹಳ ಸುಲಭವೇನಲ್ಲ. ಏಕೆಂದರೆ ಇಲ್ಲಿ ತಾರಾ ಮೂಕಿ. ಡೈಲಾಗ್ ಇಲ್ಲದೆ ಪ್ರೇಕ್ಷಕರನ್ನು ಮೋಡಿ ಮಾಡುವುದು ಸುಲಭದ ಮಾತಲ್ಲ. ತಾರಾ ಬೇಬಿ ಈ ಸಂಕಷ್ಟವನ್ನರಿತುಕೊಂಡೇ ಸೈನ್ ಲ್ಯಾಂಗ್ವೇಜ್ ಕೋರ್ಸ್ ಸೇರಿದಳಂತೆ. ಈಕೆಯ ಎಕ್ಸ್ ಪ್ರೆಶೆನ್ಸ್ ಇವಳ ನಟನೆಯನ್ನು ಎತ್ತಿಹಿಡಿಯುವುದೇ? ಎಂಬುದನ್ನು ಚಿತ್ರವೇ ಹೇಳಬೇಕಷ್ಟೆ. ಅಂದಹಾಗೆ ತಾರಾಳ ಧೈರ್ಯಕ್ಕೆ ಮೆಚ್ಚಲೇಬೇಕು, ಕೆರಿಯರ್ ಆರಂಭದಲ್ಲೇ ಇಂಥ ಸವಾಲಿನ ಪಾತ್ರ ನಿರ್ವಹಿಸುವುದು ಸುಲಭದ ಮಾತಲ್ಲ.
ಐಡೆಂಟಿಟಿ ಗಿಟ್ಟಿಸಿದ ಕೀರ್ತಿ
ಬಾಲಿವುಡ್ಗೆ ಬಂದು ತಮ್ಮ ಅದೃಷ್ಟ ಪರೀಕ್ಷಿಸಿ ನಿಧಾನವಾಗಿ ಇಲ್ಲಿ ಸೆಟಲ್ ಆಗುತ್ತಿರುವ ಕೆಲವೇ ನಾಯಕಿಯರಲ್ಲಿ ಕೀರ್ತಿ ಕುಲ್ಹಾಡಿ ಸಹ ಒಬ್ಬಳು. ಅವಳು ಒಟ್ಟಾರೆ ಉತ್ತಮ ಐಡೆಂಟಿಟಿ ಗಿಟ್ಟಿಸುವುದರ ಪರಿಣಾಮವಾಗಿ ಇವಳಿಗೆಂದೇ ಪಾತ್ರ ಸೃಷ್ಟಿಸಿ ಕಥೆ ಎಳೆಯಲಾಗುತ್ತದಂತೆ. `ಪಿಂಕ್, ಉರೀ, ಮಿಶನ್ ಮಂಗಲ್’ನಂಥ ಚಿತ್ರಗಳಿಂದ ಈಕೆ ಗೆದ್ದಿದ್ದಾಳೆ. ಏನೇ ಆದರೂ…. ಕೀರ್ತಿ ಇನ್ನೂ ಸಹಕಲಾವಿದೆ ಆಗಿಯೇ ತೃಪ್ತಿಪಡಬೇಕಿದೆ. ಆದರೆ ಇನ್ನು ಕೆಲವೇ ದಿನಗಳಲ್ಲಿ ತಾನು ಪೂರ್ಣ ಪ್ರಮಾಣದ ನಾಯಕಿ ಆಗುವೆ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾಳೆ ಕೀರ್ತಿ.
ರೋಹಿತ್ರ ದೇಶೀ ಅವೆಂಜರ್ಸ್
ಹಿಂದಿ ಸಿನಿಮಾದ ಸೀಕ್ವೆನ್ಸ್ ಕಿಂಗ್ ಎಂಬ ಪಟ್ಟವನ್ನು ರೋಹಿತ್ ಶೆಟ್ಟಿಗೆ ಧಾರಾಳ ಕೊಡಬಹುದು. `ಗೋಲ್ಮಾಲ್’ ಅಥವಾ `ಸಿಂಘಂ’ ಇರಲಿ, ಇವುಗಳ ಸೀಕ್ವೆನ್ಸ್ ಧಾರಾಳವಾಗಿ ಹಣ ಬಾಚಿಕೊಟ್ಟಿವೆ. ಇದರ ಜೊತೆಗೆ ಇವರ ಪೊಲೀಸ್ ಥೀಂ ಚಿತ್ರಗಳಂತೂ ಯಶಸ್ಸಿನ ಹೊಸ ಶ್ರೇಣಿಯನ್ನೇ ಹುಟ್ಟುಹಾಕಿವೆ. ಬಹುಶಃ ರೋಹಿತ್ ತಮ್ಮದೇ ಆದ ಫಿಲ್ಮೀ ಪೊಲೀಸ್ ಫೋರ್ಸ್ ತಯಾರಿಸಿಕೊಂಡಿದ್ದಾರೇನೋ ಎನಿಸುತ್ತದೆ. ಇದನ್ನು `ದೇಶೀ ಅವೆಂಜರ್ಸ್’ ಎಂದರೂ ತಪ್ಪೇನಾಗದು. ಪೊಲೀಸ್ ಥೀಂ ಆಧರಿಸಿದ ಚಿತ್ರಗಳಲ್ಲಿ ಪ್ರತಿ ಸಲ ಒಬ್ಬ ಹೊಸ ಅವೆಂಜರ್ನ ಸೇರ್ಪಡೆ ಆಗುತ್ತದೆ. ಈ ಸೀರೀಸ್ನಲ್ಲಿ ಇದೀಗ ಹೊಸ ಹೆಸರು ಎಂದರೆ ಅಕ್ಷಯ್ ಕುಮಾರ್ನದು. ಈತ ರೋಹಿತ್ರ ಮುಂದಿನ `ಸೂರ್ಯವಂಶಿ’ ಚಿತ್ರದಲ್ಲಿ ಕಂಡುಬರುತ್ತಾನೆ. ಮಾಹಿತಿದಾರರ ಪ್ರಕಾರ ರೋಹಿತ್ರ ಎಲ್ಲಾ ಅವೆಂಜರ್ಸ್ ಅಂದ್ರೆ ಅಜಯ್ ದೇವಗನ್, ರಣವೀರ್ ಸಿಂಗ್, ಅಕ್ಷಯ್ `ಸೂರ್ಯವಂಶಿ’ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಒಟ್ಟೊಟ್ಟಿಗೆ ಕಾಣಿಸಲಿದ್ದಾರಂತೆ!
ಶಾರೂಖ್ ಖಾನ್ ಎಲ್ಲಿದ್ದೀಯಪ್ಪಾ?
ಇತ್ತೀಚೆಗೆ ಯಾಕೋ ಶಾರೂಖ್ ಖಾನ್ ತನಗೆ ತಾನೇ `ಗರ್ದಿಶ್ ಮೇ ಹೋ ತಾರೆ…. ನಾ ಘಬ್ರಾನಾ ಪ್ಯಾರೆ…..’ ಹಾಡನ್ನು ಗುನುಗುನಿಸುತ್ತಾ ತನ್ನನ್ನು ತಾನೇ ಸಮಾಧಾನ ಪಡಿಸಿಕೊಳ್ಳುತ್ತಿರುವಂತಿದೆ. ಪಾಪ, ಹೇಗಿದ್ದವನು ಹೇಗಾಗಿ ಹೋದ…..? ಈಗ ಈತನ ಅಭಿಮಾನಿಗಳಿಗೂ ಶಾರೂಖ್ ಮುಂದೆ ಬೆಳ್ಳಿ ತೆರೆಯಲ್ಲಿ ಕಾಣಿಸುವುದು ಯಾವಾಗ ಎಂಬ ಚಿಂತೆ ಆಗಿದೆ. ಸದ್ಯಕ್ಕಂತೂ ಈತ ಒಂದು ಟಿ.ವಿ ಶೋನಲ್ಲಿ ಬಿಝಿ. ಈ ಶೋ ಪ್ರಮೋಶನ್ಗಾಗಿ ಬಂದಿದ್ದ ಈತ ಅಭಿಮಾನಿಗಳ ಈ ಮೇಲಿನ ಪ್ರಶ್ನೆಗೆ ತಾನು ಯಾವುದೋ ಇತರ ಪ್ರಾಜೆಕ್ಟ್ ಗಳಲ್ಲಿ ಬಿಝಿ ಎಂಬ ಬೂಟಾಟಿಕೆ ಉತ್ತರ ನೀಡುತ್ತಾನೆ. ಮುಂದೆ ಸಮಯ ಬಂದಾಗ ಅದನ್ನು ತಿಳಿಸುವನಂತೆ. ಇನ್ನೂ ತಡ ಮಾಡಬೇಡ ಮಹಾರಾಯ…. ಇಲ್ಲದಿದ್ದರೆ ಅಭಿಮಾನಿಗಳು ಬೇರೆ ದೇವರನ್ನು ಹುಡುಕಿಕೊಂಡಾರು!
ಸಲ್ಮಾನ್ನನ್ನೇ ನಂಬಿರುವ ಬಿಗ್ಬಾಸ್`
ಬಿಗ್ಬಾಸ್’ (ಹಿಂದಿ) ರಿಯಾಲಿಟಿ ಶೋನ ಈ ಸೀಸನ್ ಬಿಗ್ ಫ್ಲಾಪ್ ಆಗಲಿದೆ. ಪರಿಸ್ಥಿತಿ ಎಷ್ಟು ಹದಗೆಟ್ಟಿದೆ ಎಂದರೆ, ಇಡೀ ಶೋವನ್ನು ಹಿಟ್ಗೊಳಿಸುವ ಸಂಪೂರ್ಣ ಜವಾಬ್ದಾರಿ ಸಲ್ಲೂ ಮೇಲೆ ಬಂದಿದೆ. ಇಷ್ಟಕ್ಕೆ ಈ ಶೋಗೆ ಸಂಕಷ್ಟ ಮುಗಿಯಲಿಲ್ಲ. ಭಗವಾ ಬ್ರಿಗೇಡ್ನವರು ಈ ಶೋ ನಿಲ್ಲಿಸಲೇಬೇಕೆಂದು ಹುನ್ನಾರ ನಡೆಸಿದಂತಿದೆ. ಈ ಸಲ ಶೋ ಕಾನ್ಸೆಪ್ಸ್ ಎಂದರೆ ಗಂಡು-ಹೆಣ್ಣು ಪ್ರತಿಸ್ಪರ್ಧಿಗಳು ಒಂದೇ ಹಾಸಿಗೆ ಹಂಚಿಕೊಳ್ಳಬೇಕೆಂಬುದು! ಇಂಥ ವಿಚಾರ ಇಡೀ ಭಾರತೀಯ ಸಂಸ್ಕೃತಿಯ ಹೊಣೆ ಹೊತ್ತಿರುವ ಭಗವಾದವರಿಗೆ ಹೇಗೆ ಪ್ರಿಯವಾದೀತು? ಹಾಗಿರುವಾಗ ಬಿಗ್ಬಾಸ್ (ಹಿಂದಿ) ಹೆವಿ RTP ಗಿಟ್ಟಿಸಲು ಹೇಗೆ ಸಾಧ್ಯ? ಇನ್ನು ಜಾಹೀರಾತು ಎಲ್ಲಿಂದ ಬಂದೀತು? ಹೀಗೆ ಶೋನ ಒಳಹೊರಗೆ ಕೋಲಾಹಲ ನಡೆದಿರುವಾಗ ಮುಂದೇನು ಎಂಬುದೇ ಸ್ವಾರಸ್ಯಕರ ವಿಚಾರ.
ಕಾಜೋಲ್ಳ ಡಿಜಿಟಲ್ ಕಮ್ ಬ್ಯಾಕ್
ಸದಾ ಎವರ್ಗ್ರೀನ್ ಹೀರೋಯಿನ್ ಎನಿಸಿರುವ ಕಾಜೋಲ್ ಎಲ್ಲಾ ವಯಸ್ಸಿನವರಿಗೂ ಪ್ರಿಯವಾಗುವ ನಾಯಕಿ. ಇತ್ತೀಚೆಗೆ ಈಕೆ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಲೇ ಇಲ್ಲ ಎಂಬುದು ಅಭಿಮಾನಿಗಳ ಕೊರಗು. ಹೀಗಾಗಿ ಅಂಥವರಿಗೆ ಒಂದು ಗುಡ್ ನ್ಯೂಸ್. ಇದೀಗ ಕಾಜೋಲ್ ಮರಳಿ ಬರುತ್ತಿದ್ದಾಳೆ, ಆದರೆ ಸಿನಿಮಾಗಳಲ್ಲ ಡಿಜಿಟಲ್ ಸ್ಕ್ರೀನ್ಗೆ! ಮಾಹಿತಿದಾರರ ಪ್ರಕಾರ, ಈಕೆ ಇದೀಗ ನೆಟ್ಫ್ಲಿಕ್ಸ್ ನ ಸೀರೀಸ್ `ತ್ರಿಭಂಗ್’ನಲ್ಲಿ ಕಾಣಿಸಲಿದ್ದಾಳೆ. ಅಜಯ್ ದೇವಗನ್ ಬ್ಯಾನರ್ನ ಈ ಸೀರೀಸ್ನಲ್ಲಿ ಮಿಥಿಲಾ ಪಾಲೇಕರ್, ತನ್ವಿ ಅಜ್ಮಿ, ಕುನಾಲ್ ರಾಯ್ ಕಪೂರ್ ಸಹ ಇವಳ ಜೊತೆಗಿರುತ್ತಾರೆ.
ಬೋಳುತಲೆ ಬೆನ್ನತ್ತಿದ ಬಾಲಿವುಡ್
ರಾಜ್ ಶೆಟ್ಟಿಯವರ ಯಶಸ್ವೀ ಕನ್ನಡ ಚಿತ್ರ `ಒಂದು ಮೊಟ್ಟೆಯ ಕಥೆ’ ನೆನಪಿರಬೇಕಲ್ಲವೇ? ಇದೇ ಚಿತ್ರ ಆಧಾರಿತ ಎರಡೆರಡು ಚಿತ್ರಗಳು ಹಿಂದಿಯಲ್ಲಿ ಈಗ ಸೆಟ್ಟೇರಿವೆ. ಬಾಲ್ಡಿ ತಲೆ ದೇಶಾದ್ಯಂತ ಈಗ ಜನಪ್ರಿಯವಾಗಲಿದೆ. ಒಂದು ಕಡೆ ಆಯುಷ್ಮಾನ್ ಖುರಾನಾನ `ಬಾಲಾ’ ಚಿತ್ರ ತನ್ನ ಟ್ರೇಲರ್ನಿಂದ ಹಿಗ್ಗುತ್ತಿದ್ದರೆ, ಇನ್ನೊಂದು ಕಡೆ `ಉಜ್ಡಾ ಚಮನ್’ ಚಿತ್ರ ಬಿಡುಗಡೆಗೆ ಸಿದ್ಧಾವಾಗುತ್ತಿದೆ. ಎರಡೂ ಚಿತ್ರಗಳ ಕಥೆ ಮಾತ್ರವಲ್ಲದೆ, ಪೋಸ್ಟರ್ ಸಹ ಒಂದೇ ತರಹ ಇದೆ. ಮಾಹಿತಿದಾರರ ಪ್ರಕಾರ, ಆಯುಷ್ಮಾನ್ ಚಿತ್ರವೇ ಗೆಲ್ಲಲಿದೆಯಂತೆ! ಇತ್ತೀಚೆಗೆ ಈತ ಹಿಟ್ಲಿಸ್ಟ್ ನಲ್ಲಿದ್ದಾನೆ. ಸ್ವಾರಸ್ಯಕರ ವಿಷಯವೆಂದರೆ 2 ಚಿತ್ರಗಳ ನಿರ್ಮಾಪಕರಲ್ಲಿ ಯಾರ ತಲೆ ಮೊದಲು ಬೋಳಾಗಲಿದೆ (ಯಾವ ಚಿತ್ರ ತೋಪಾಗಲಿದೆ) ಎಂಬುದು!
ನ್ಯೂಯಾರ್ಕ್ನ್ನು ನಗಿಸಲಿದ್ದಾರೆ ಅನುಪಮ್
ಕೆಲವೇ ಆಯ್ದ ಪ್ರತಿಭಾನ್ವಿತ ಬಾಲಿವುಡ್ ನಟರು ಮಾತ್ರ ಹಾಲಿವುಡ್ನಲ್ಲೂ ಯಶಸ್ವೀ ಎನಿಸುತ್ತಿದ್ದಾರೆ. ಅಂಥವರಲ್ಲಿ ಅನುಪಮ್ ಖೇರ್ ಸಹ ಒಬ್ಬರು. ಅಮೆರಿಕಾದಲ್ಲಿ ಅವರು `ನ್ಯೂ ಆ್ಯಮ್ಸ್ ಟರ್ಡ್ಯಾಂ’ ಶೋನಲ್ಲಿ ತಮ್ಮ ವಿಜಯ್ ಕಪೂರ್ ಪಾತ್ರದಿಂದ ಬಲು ಪಾಪ್ಯುಲರ್ ಆಗಿದ್ದಾರೆ. ಆ ಆಧಾರದಿಂದ ಈಗ ಅವರು ನ್ಯೂಯಾರ್ಕ್ನಲ್ಲಿ `ಲಾಫ್ ಔಟ್ ಲೌಡ್ ವಿತ್ ಅನುಪಮ್’ ಎಂಬ ಶೋ ನಿರ್ಮಿಸುತ್ತಿದ್ದಾರೆ. ಇವರ ಜನಪ್ರಿಯತೆಯಿಂದಾಗಿ ಈ ಶೋಗೆ ಪ್ರೇಕ್ಷಕರ ನೂಕುನುಗ್ಗಲು ಹೆಚ್ಚಾಗುತ್ತಿದೆಯಂತೆ!