ಹಬ್ಬಗಳು ಸಮೀಪಿಸುತ್ತಿದ್ದಂತೆ ಮನಸ್ಸು ಉತ್ಸಾಹಭರಿತವಾಗುತ್ತದೆ. ಮಾರುಕಟ್ಟೆ ಕೂಡ ಹೊಸ ಹೊಸ ಅಪರೂಪದ ಸಲಕರಣೆಗಳೊಂದಿಗೆ ತುಂಬಿ ಹೋಗುತ್ತದೆ. ಹಲವು ದಿನಗಳ ಮೊದಲೇ ಶಾಪಿಂಗ್‌ ಶುರುವಾಗುತ್ತದೆ. ಸ್ನೇಹಿತರು, ಸಂಬಂಧಿಕರು ಕೂಡ ನಿಮ್ಮ ಸಂತೋಷದಲ್ಲಿ ಪಾಲ್ಗೊಳ್ಳುತ್ತಾರೆ. ಆದರೆ ಇದಿಷ್ಟರಿಂದಲೇ ಎಲ್ಲ ಆದಂತೆ ಅಲ್ಲ. ಮನೆಯಿಂದಲೂ ಹಬ್ಬದ ಕಳೆ ಹೊರಹೊಮ್ಮಬೇಕು. ಅದಕ್ಕಾಗಿ ಮನೆಯ ವಾತಾವರಣ ಅಲಂಕರಿಸುವುದು ಕೂಡ ಅಷ್ಟೇ ಮಹತ್ವದ್ದು. ಏಕೆಂದರೆ ನಿಮ್ಮನ್ನು ನೀವು ಹಬ್ಬಕ್ಕಾಗಿ ಪರಿಪೂರ್ಣವಾಗಿ ಸನ್ನದ್ದುಗೊಳಿಸಬೇಕು.

ಹಬ್ಬಕ್ಕಾಗಿ ಮನೆಯನ್ನು ಹೇಗೆ ಅಲಂಕರಿಸಬೇಕು ಎನ್ನುವುದನ್ನು ತಿಳಿದುಕೊಳ್ಳಿ :

ಪರದೆಗಳಿಂದ ಹೆಚ್ಚಿಸಿ ಆಕರ್ಷಣೆ

ನಿಮ್ಮ ಮನೆಯಲ್ಲಿ ಕಳೆದ ಅನೇಕ ವರ್ಷಗಳಿಂದ ಅವೇ ಪರದೆಗಳು ಮುಂದುವರಿಯುತ್ತಿದ್ದರೆ ಈ ವರ್ಷ ಅವನ್ನು ಬದಲಿಸಿ, ಗೋಡೆಗೆ ಹೊಂದುವಂತಹ ಬೇರೆ ಪರದೆಗಳನ್ನು ಹಾಕಿ. ಅವು ನಿಮ್ಮ ಮನೆಗೆ ಹೊಸ ಲುಕ್‌ ಕೊಡುತ್ತವೆ. ನೀವು ಮಾಡರ್ನ್‌ ಪರದೆಗಳನ್ನು ಹಾಕಬಹುದು. ಅವನ್ನು ರೂಮಿನ ರಚನೆ, ಶೇಡ್‌ನ್ನು ಗಮನದಲ್ಲಿಟ್ಟು ಆಯ್ಕೆ ಮಾಡಿ.

ಗೋಡೆಗಳಿಗೆ ಪೇಂಟಿಂಗ್‌ ಮೆರುಗು

ನೀವು ಕ್ರಿಯೇಟಿವ್ ಆಗಿ ಆಲೋಚಿಸುತ್ತಿದ್ದರೆ ನಿಮ್ಮ ಕ್ರಿಯೇಟಿವಿಟಿಯಿಂದ ಗೋಡೆಗಳ ಮೆರುಗು ಹೆಚ್ಚಿಸಿ. ಅದಕ್ಕಾಗಿ ಆ್ಯಂಬ್ರೋಸ್‌ ಪೇಂಟಿಂಗ್‌ ಮಾಡಬಹುದು. ಅದು 3ಡಿ ರೂಪದಲ್ಲಿ ಕಂಡುಬರುವುದರ ಮೂಲಕ ನಿಮ್ಮ ಗೋಡೆಯ ಅಂದವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ದಿಂಬುಗಳಿಗೆ ಹೊಸತನದ ಸ್ಪರ್ಶ

ನಿಮ್ಮ ದಿಂಬುಗಳು ಹಳೆಯದಾಗಿವೆಯೇ? ಬಜೆಟ್‌ ಏರುಪೇರಾಗುತ್ತದೆಂಬ ಭಯದಿಂದ ಅವನ್ನು ಬದಲಿಸಲು ಆಗುತ್ತಿಲ್ಲವೇ? ಹಾಗಾದರೆ ನಿಮ್ಮ ಹಳೆಯ ದಿಂಬುಗಳಿಗೆ ಹೊಸ ಸ್ಟೈಲಿಶ್‌ ಕವರ್‌ಗಳಿಂದ ಅವನ್ನು ಪುನಃ ಹೊಸದರಂತೆ ಮಾಡಬಹುದು. ಈಗ ಹೆಚ್ಚು ಪ್ರಚಲಿತವಾಗಿರುವ ಬ್ಲಾಕ್‌ ಪ್ರಿಂಟ್‌, ಹ್ಯಾಂಡ್‌ ಎಂಬ್ರಾಯಿಡರ್ಡ್‌ ಕವರ್‌, ಬನಾರಸಿ ಬ್ರೊಕೆಡ್‌, ಫ್ಲವರ್‌ ಮುಂತಾದ ಕವರ್‌ಗಳನ್ನು ಬಳಸಿ ಹೊಸದರಂತೆ ಕಾಣುವ ಹಾಗೆ ಮಾಡಬಹುದು.

ಇಂಡೋರ್‌ ಪ್ಲಾಂಟ್ಸ್ ನಿಂದ ಹೊಸ ಕಳೆ

ಗಿಡಗಳು ಮನೆಯ ಹೊರ ವಾತಾವರಣವನ್ನಷ್ಟೇ ಹಸಿರಾಗಿಡುವುದಿಲ್ಲ. ಒಳ ವಾತಾವರಣವನ್ನೂ ಹಸಿರಾಗಿಡಲು ನೆರವಾಗುತ್ತವೆ. ಮನೆಯೊಳಗೆ ಮನಿಪ್ಲಾಂಟ್‌, ಏರ್‌ಪ್ಯೂರಿಫೈರ್‌ ಪ್ಲಾಂಟ್‌, ಆ್ಯಲೋವೆರಾ ಪ್ಲಾಂಟ್‌, ಬಿದಿರು ಮುಂತಾದವನ್ನು ಬೆಳೆಸಿ ಮನೆಯ ಮೂಲೆ ಮೂಲೆಯನ್ನೂ ಸುಂದರಗೊಳಿಸಬಹುದು. ಈ ನೈಸರ್ಗಿಕ ವಾತಾವರಣ ಎಂಥವರನ್ನೂ ಬೆರಗುಗೊಳಿಸುತ್ತದೆ.

ವಾಲ್‌ಪೇಪರ್‌ನಿಂದ ಹೊಸರೂಪ

ಹಬ್ಬದ ಸೀಸನ್‌ನಲ್ಲಿ ಪ್ರತಿಯೊಬ್ಬರೂ ಮನೆಗೆ ಹೊಸ ರೂಪ ಅಂದರೆ ಬಣ್ಣದ ಬಗ್ಗೆ ಯೋಚಿಸುತ್ತಾರೆ. ನಿಮ್ಮ ಬಳಿ ಬಜೆಟ್‌ ಇದ್ದರೆ ಪೇಂಟ್‌ ಹೊಡಿಸಬಹುದು. ಜೊತೆಗೆ ವಾಲ್‌ಪೇಪರ್‌ನಿಂದ ಗೋಡೆಗಳ ರೂಪುರೇಷೆಯನ್ನೇ ಬದಲಿಸಬಹುದು. ನೀವು ಮನೆಯ ಲುಕ್‌ನಲ್ಲಿ ಅಷ್ಟಿಷ್ಟು ಬದಲಾವಣೆ ಮಾಡಲು ಇಚ್ಛಿಸಿದರೆ ಸ್ಟಿಕರ್‌ಗಳಿಗಿಂತ ಮತ್ತೊಂದು ಒಳ್ಳೆಯ ಉಪಾಯವಿಲ್ಲ.

ಫರ್ನೀಚರ್‌ ಸೆಟ್ಟಿಂಗ್‌ ಬದಲಿಸಿ

ನಿಮ್ಮ ಮನೆಯ ಪೀಠೋಪಕರಣಗಳನ್ನು ಅದೇ ಜಾಗದಲ್ಲಿ ನೋಡಿ ಬೇಸತ್ತಿದ್ದರೆ, ಈ ಹಬ್ಬದ ಸೀಸನ್ನಿನಲ್ಲಿ ಅವುಗಳ ಸ್ಥಾನಪಲ್ಲಟ ಮಾಡಿ ಹೊಸದೊಂದು ಲುಕ್‌ ಕೊಡಬಹುದು.

ದೀಪಾಲಂಕಾರದ ಮೆರುಗು

ಹಬ್ಬದ ದಿನಗಳಲ್ಲಿ ಮನೆಯಲ್ಲಿ ಬೆಳಕಿನ ವಿಶೇಷ ವ್ಯವಸ್ಥೆ ಇರದೇ ಹೋದರೆ ಅದಕ್ಕೆ ಯಾವುದೇ ಕಳೆ ಇರದು. ಈ ದಿನಗಳಲ್ಲಿ ನೀವು ಮನೆಯ ಒಳಗೆ ಹಾಗೂ ಹೊರಗೆ ಅಂದದ ಬೆಳಕಿನ ವಿನ್ಯಾಸ ಮಾಡಿ. ನಿಮ್ಮ ಗಾರ್ಡನ್‌ ಏರಿಯಾದಲ್ಲಿ ಸೀರಿಯಲ್ ಸೆಟ್‌ ತೂಗುಬಿಟ್ಟು, ಬೆಳಕಿನ ವ್ಯವಸ್ಥೆ ಕಣ್ಸೆಳೆಯುಂತೆ ಮಾಡಿ.

ವಿಶೇಷ ಪುಷ್ಪಾಲಂಕಾರ

ಸೆಂಟರ್‌ ಟೇಬಲ್‌ನ್ನು ಚಿಕ್ಕ ಹೂಗಳು ಹಾಗೂ ಫ್ಲವರ್‌ ಪಾಟ್‌ನಿಂದ ಅಲಂಕರಿಸಿ. ಇದು ನೋಡುಗರಿಗೆ ತಾಜಾತನದ ಅನುಭವ ಕೊಡುತ್ತದೆ. ಹಬ್ಬದ ದಿನ ಟೇಬಲ್ ಮೇಲೆ ಗ್ಲಾಸ್‌ ಬೌಲ್‌ನಲ್ಲಿ ಫ್ಲೋಟಿಂಗ್‌ ಕ್ಯಾಂಡಲ್ಸ್ ಕೂಡ ಇಡಬಹುದು. ಇವು ನೋಡಲಷ್ಟೇ ಅಂದವಾಗಿ ಕಾಣುವುದಿಲ್ಲ, ಹಬ್ಬದ ಕಳೆ ಹೆಚ್ಚಿಸಲೂ ನೆರವಾಗುತ್ತದೆ.

– ಕೆ. ಪವಿತ್ರಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ