ನಿಮ್ಮ ಮನೆ ಸುಂದರವಾಗಿದೆ, ಚೆನ್ನಾಗಿ ಅಲಂಕರಿಸಲ್ಪಟ್ಟಿದೆ. ಆದರೆ ಅಲ್ಲಿ ಒಂದಿಷ್ಟೂ ತಾಜಾತನ ಇಲ್ಲ. ಹಾಗಾಗಿ ಮನೆಗೆ ಬರುವ ಅತಿಥಿಗಳ ಗಮನ ಮನೆಯ ಅಲಂಕಾರದ ಕಡೆ ಹೋಗದೆ, ಮನೆಯಲ್ಲಿರುವ ವಿಚಿತ್ರ ದುರ್ವಾಸನೆಯ ಕಡೆ ಹೋಗುತ್ತದೆ.

ಹೋಮ್ ಮೇಡ್‌ ಫ್ರೆಶ್‌ನರ್‌ : ಮನೆಯನ್ನು ಸುಗಂಧಮಯಗೊಳಿಸಲು ಮಾರುಕಟ್ಟೆಯಲ್ಲಿ ಅನೇಕ ಬಗೆಯ ಉತ್ಪನ್ನಗಳು ಲಭ್ಯವಿವೆ. ಆದರೆ ಮನೆಯಲ್ಲಿ ಸಿದ್ಧಪಡಿಸಿದ ನೈಸರ್ಗಿಕ ಫ್ರೆಶ್‌ನರ್‌ನ ವಿಶೇಷವೇ ವಿಶೇಷ. ಏಕೆಂದರೆ ಇವು ನಿಮ್ಮ ಮೂಡ್‌ನ್ನು ಉತ್ತಮಗೊಳಿಸುವುದರ ಜೊತೆ ಜೊತೆಗೆ ವಾತಾವರಣವನ್ನೂ ಸುಗಂಧಮಯಗೊಳಿಸುತ್ತದೆ. ಆರೋಗ್ಯಕ್ಕೂ ಯಾವುದೇ ಹಾನಿಯುಂಟು ಮಾಡುವುದಿಲ್ಲ. ಇವುಗಳ ನೈಸರ್ಗಿಕ ಸುವಾಸನೆ ಎಷ್ಟೊಂದು ಆಕರ್ಷಕವಾಗಿರುತ್ತದೆ ಎಂದರೆ, ದೇಹ ಮನಸ್ಸು ತಾಜಾತನದಿಂದ ಭರ್ತಿಯಾಗುತ್ತದೆ.

ಬೇಕಿಂಗ್‌ ಸೋಡ ಮತ್ತು ನಿಂಬೆಹಣ್ಣು : ಒಂದು ಬಟ್ಟಲಿನಲ್ಲಿ ನೀರು ತುಂಬಿಕೊಂಡು ಅದರಲ್ಲಿ ಕೆಲವು ಹನಿ ನಿಂಬೆರಸ ಹಾಕಿ. ನಿಂಬೆಹಣ್ಣಿನಲ್ಲಿ ಎಂತಹದೊಂದು ಶಕ್ತಿಯಿರುತ್ತದೆ ಎಂದರೆ, ಅದು ಆಸುಪಾಸಿನ ವಾಸನೆಯನ್ನು ಹೀರಿಕೊಳ್ಳುತ್ತದೆ. ಅದರ ಹೊರತಾಗಿ ಒಂದು ಗಾಜಿನ ಬಾಟಲಿನಲ್ಲಿ ಬೇಕಿಂಗ್‌ ಸೋಡ ಹಾಗೂ ನಿಂಬೆಹಣ್ಣಿನ ತುಂಡುಗಳನ್ನು ಹಾಕಿಕೊಂಡು ಮನೆಯ  ಯಾವುದಾದರೊಂದು ಮೂಲೆಯಲ್ಲಿ ಇಡಿ. ಅದರಿಂದ ಇಡೀ ಮನೆ ಸುವಾಸನಾಭರಿತವಾಗುತ್ತದೆ.

ಕರ್ಪೂರ : ಅಂದಹಾಗೆ ಕರ್ಪೂರವನ್ನು ಹವನದ ಸಾಮಗ್ರಿಗಳಲ್ಲಿ ಬಳಸಲಾಗುತ್ತದೆ. ಆದರೆ ಇದು ಮನೆಯನ್ನು ಫ್ರೆಶ್‌ ಆಗಿಸಲು ಕೂಡ ಬಳಸಲಾಗುತ್ತದೆ. ಕರ್ಪೂರದ ಒಂದು ವಿಶೇಷತೆ ಎಂದರೆ, ಅದು ಗಾಳಿಯ ಸಂಪರ್ಕಕ್ಕೆ ಬರುತ್ತಿದ್ದಂತೆ ಗಾಳಿಯಲ್ಲಿ ವಿಲೀನಗೊಳ್ಳುತ್ತದೆ. ಅದರಿಂದಾಗಿ ಮನೆಯ ವಾತಾವರಣ ಸುಗಂಧಿತವಾಗುತ್ತದೆ. ಅದನ್ನು ಹೋಮ್ ಫ್ರೆಶ್‌ನರ್‌ ರೂಪದಲ್ಲೂ ಬಳಸಬಹುದು. ಅದನ್ನು ಮಾಡುವುದು ಕೂಡ ಸುಲಭ. ಒಂದು ಜಾರ್‌ನಲ್ಲಿ ಕರ್ಪೂರ, ಬೇಕಿಂಗ್‌ ಸೋಡ, ನಿಂಬೆಹಣ್ಣಿನ ಸಿಪ್ಪೆ, ಗುಲಾಬಿಯ ಎಸಳುಗಳನ್ನು ಹಾಕಬೇಕು. ಗಾಜಿನ ಜಾರ್‌ನ್ನು ಯಾವುದಾದರೂ ಸುಂದರ ನೆಟ್‌ನಿಂದ ಕವರ್‌ ಮಾಡಬೇಕು. ಅದು ಗಾಳಿಯ ಸಂಪರ್ಕಕ್ಕೆ ಪಸರಿಸುತ್ತದೆ. ಅದರಿಂದ ಮನೆಯ ದುರ್ವಾಸನೆ ದೂರ ಓಡುತ್ತದೆ.

ಫ್ಲೋರ್‌ ಸ್ಪ್ರೇ : ತಾಜಾ ಹೂಗಳು ಮನೆಯನ್ನು ಸುಂದರಗೊಳಿಸುವ ಹಾಗೂ ಸುವಾಸನೆ ಬೀರುವ ಕೆಲಸ ಮಾಡುತ್ತವೆ. ಒಣಗಿದ ಹೂಗಳು ಕೂಡ ನಿಮ್ಮ ಮನೆಯನ್ನು ಸುಗಂಧಿತಗೊಳಿಸಲು ನೆರವಾಗುತ್ತವೆ ಎನ್ನುವುದು ನಿಮಗೆ ಗೊತ್ತೆ? ಯಾವ ಹೂಗಳನ್ನು ಬಾಡಿದ ಬಳಿಕ ನಾವು ವ್ಯರ್ಥ ಎಂದು ಹೇಳಿ ಎಸೆಯುತ್ತೇವೊ, ಅವೇ ಹೂಗಳು ಮನೆಯನ್ನು ಸುವಾಸನಾಯುಕ್ತಗೊಳಿಸಲು ನೆರವಾಗುತ್ತವೆ. ನೀವು ಮಾಡಬೇಕಾದುದಿಷ್ಟೆ. ತಾಜಾ ಗುಲಾಬಿಯ ಕೆಂಪು ಎಸಳುಗಳು ಮತ್ತು ಒಣಗಿದ ಹೂಗಳನ್ನು ಕಟ್ಟಿ ಯಾವುದಾದರೂ ಕಿಟಕಿ ಅಥವಾ ಟೇಬಲ್ ಮೇಲೆ ಇಡಿ. ನೀವು ಫ್ಯಾನ್‌ ಹಾಕಿದಾಗ ಗಾಳಿಯ ಮೂಲಕ ಹೂಗಳ ಸುವಾಸನೆ ಮನೆ ತುಂಬಾ ಪಸರಿಸುತ್ತದೆ. ನೀವು ಬೇಕಾದರೆ ಹೂಗಳಿಂದ ಏರ್‌ಫ್ರೆಶ್‌ನರ್‌ ಕೂಡ ತಯಾರಿಸಿಕೊಳ್ಳಬಹುದು. ನಿಮಗೆ ಇಷ್ಟವಾದ ಹೂಗಳನ್ನು ತೆಗೆದುಕೊಂಡು ಅದರ ಎಸಳುಗಳನ್ನು ಅರ್ಧ ಗಂಟೆ ನೀರಿನಲ್ಲಿ ಕುದಿಸಿಕೊಳ್ಳಿ. ನಂತರ ಅದರ ನೀರನ್ನು ಸೋಸಿಕೊಂಡು, ಸ್ಪ್ರೇ ಬಾಟಲ್‌ನಲ್ಲಿ ತುಂಬಿಸಿಕೊಳ್ಳಿ. ಅದು ತಂಪಾದ ಬಳಿಕ ಮನೆಯಲ್ಲಿ ಸ್ಪ್ರೇ ಮಾಡಿಕೊಳ್ಳಿ.

ಆರೆಂಜ್‌ ಪೀಲ್‌ ಕ್ಯಾಂಡಲ್ : ನಿಮಗೆ ಕಿತ್ತಳೆ ಹಣ್ಣಿನ ಸುವಾಸನೆ ಇಷ್ಟವಾಗುತ್ತಿದ್ದರೆ ಮತ್ತು ಕೋಣೆಯ ಮೂಲೆ ಮೂಲೆಯಲ್ಲಿ ಅದರ ಸುವಾಸನೆ ಪಸರಿಸುವ ಅಪೇಕ್ಷೆ ಇದ್ದರೆ ಕಿತ್ತಳೆ ಹಣ್ಣಿನ ಸಿಪ್ಪೆಗಳನ್ನು ಬಳಸಿಕೊಂಡು ಆರೆಂಜ್‌ ಪೀಲ್ ಕ್ಯಾಂಡಲ್‌ನಿಂದ ಮನೆಯನ್ನು ಸುವಾಸನಾಯುಕ್ತ ಗೊಳಿಸಬಹುದು. ನೀವು ಮಾಡಬೇಕಾದುದಿಷ್ಟೆ. ಈ ಸಿಪ್ಪೆಗಳ ಮೇಲೆ ನಿಂಬೆರಸ ಹಾಗೂ ಆಲಿವ್ ಆಯಿಲ್‌ ಹಾಕಬೇಕು. ಅದರಲ್ಲಿ 10 ಹನಿ ಎಸೆನ್ಶಿಯಲ್ ಆಯಿಲ್‌ ಕೂಡ ಹಾಕಬೇಕು.

ರೋಸ್‌ ವಾಟರ್‌ : ಮನೆಯಲ್ಲಿ ಗುಲಾಬಿಯ ಸುವಾಸನೆ ಇಷ್ಟಪಡುವಿರಾದರೆ, ನಿಮ್ಮ ಮನೆಯ ಇಂಡೋರ್‌ ಪ್ಲಾಂಟ್ಸ್ ಹಾಗೂ ಬಾಲ್ಕನಿಯಲ್ಲಿ ಇಟ್ಟ ಸಸಿಗಳ ಮೇಲೆ ಗುಲಾಬಿ ಜಲ ಚಿಮುಕಿಸಿ. ಗಾಳಿಯ ಜೊತೆಗೆ ಅದರ ಸುವಾಸನೆ ಇಡೀ ಮನೆಯನ್ನು ಪಸರಿಸುತ್ತದೆ. ಅದು ಹೋಮ್ ಫ್ರಾಗ್ರೆನ್ಸ್ ನ ಕೆಲಸ ಮಾಡುತ್ತದೆ.

ಕಾಫಿ ಕ್ಯಾಂಡಲ್ : ಕಾಫಿ ಶಾಪ್‌ಗೆ ಹೋದಾಗ ಅಲ್ಲಿನ ಕಾಫಿಯ ಪರಿಮಳ ನಮಗೆ ಬಹಳ ಹಿತಕರ ಎನಿಸುತ್ತದೆ. ಆ ರೀತಿಯ ಕಾಫಿ ಪರಿಮಳ ನಿಮ್ಮ ಮನೆಗೂ ಬೇಕು ಅನ್ನಿಸಿದರೆ ಮನೆಗೊಂದು ಕಾಫಿ ಕ್ಯಾಂಡಲ್ ತೆಗೆದುಕೊಂಡು ಬನ್ನಿ. ಕೆಲವು ಟೀ ಲೈಟ್‌ ಕ್ಯಾಂಡಲ್ಸ್ ಕರಗಿಸಿ ಒಂದು ಜೆಲ್ಲಿ ಜಾರ್‌ನಲ್ಲಿ ತುಂಬಿಸಿ ಮತ್ತು ಕೆಳಭಾಗದಲ್ಲಿ ಕಾಫಿ ಪೌಡರ್‌ ಹಾಕಿ, ಅದು ಸೆಟಲ್ ಆಗಲು ಬಿಡಿ. ನಿಮಗೆ ಅಷ್ಟು ಕಷ್ಟಪಡುವುದು ಬೇಡವೆಂದರೆ, ಮನೆಯ ಯಾವುದಾದರೊಂದು ಮೂಲೆಯಲ್ಲಿ ಅಥವಾ ಸೆಂಟರ್‌ ಟೇಬಲ್‌ನಲ್ಲಿ 1 ಕಪ್‌ ಕಾಫಿ ಬೀನ್ಸ್ ತುಂಬಿಸಿ ಇಡಿ ಅಥವಾ ಒಗೆದ ಹಳೆಯ ಸಾಕ್ಸ್ ನಲ್ಲಿ ಕಾಫಿ ಪುಡಿ ತುಂಬಿಸಿ ಕಿಟಕಿ ಪಕ್ಕ ಇಡಿ.

ಏರ್‌ ಫ್ರೆಶ್‌ನರ್‌ ಜೆಲ್ : ಈ ಏರ್‌ಫ್ರೆಶ್‌ನರ್‌ ಜೆಲ್ ಟ್ಯಾಕ್ಸಿನ್‌ಫ್ರೀ ಆಗಿರುತ್ತವೆ. ಹೀಗಾಗಿ ಮನೆಗೆ ತುಂಬಾ ಹಿತಕರ. ಅದನ್ನು ಮನೆಯಲ್ಲಿಯೇ ತಯಾರಿಸುವುದು ಸುಲಭ. ಜಿಲೆಟಿನ್‌ನಲ್ಲಿ ನಿಮಗಿಷ್ಟವಾದ ಯಾವುದಾದರೂ ಎಸೆನ್ಶಿಯ್‌ ಆಯಿಲ್‌ ಅಂದರೆ ಲ್ಯಾವೆಂಡರ್‌ ಬೆಸಿಲ್‌, ಆರೆಂಜ್‌, ರೋಸ್‌ಮೆರಿ ಮುಂತಾದವನ್ನು ಬಳಸಬಹುದು. ಅವು ಮನೆಯ ಮೂಲೆಯನ್ನು ಘಮಘಮಗೊಳಿಸುತ್ತವೆ.

– ಜಿ. ಪೂಜಾ ಭಟ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ