ಹೊಸ ಲಂಬ ಹಸಿರು ತೋಟ. ಅಂದು ಎಲ್ಲೆಲ್ಲೂ ಹಸಿರೇ ತುಂಬಿತ್ತು. ಮನುಷ್ಯನ ಆಸೆಗೆ ಮಿತಿಯೆಲ್ಲಿ? ಎಲ್ಲ ನನ್ನದೇ, ನನಗೇ ಎನ್ನುವ ಸ್ವಾರ್ಥ ಭಾವನೆಯ ಪರಿಣಾಮ. ಎಲ್ಲೆಲ್ಲೂ ತಾನೇ ತಾನಾಗಿ ಆಕ್ರಮಿಸಿದ, ಇರುವ ಸ್ಥಳ ಅವನಿಗೆ ಸಾಲಲಿಲ್ಲ. ಎತ್ತರದ ಮಜಲುಗಳನ್ನು ಕಟ್ಟಿದ, ಅಂತಸ್ತಿನ ಮೇಲೆ ಅಂತಸ್ತು. ತನ್ನ ಅನುಕೂಲಕ್ಕಾಗಿ ನಾಗರಿಕತೆ, ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕಡಿದ, ಹಸಿರನ್ನು ನಾಶ ಮಾಡಿದ. ಹವಾಮಾನದ ಏರುಪೇರು, ಕಾಲಕಾಲಕ್ಕೆ ಮಳೆ ಇಲ್ಲದ ಕಾರಣ ಜ್ಞಾನೋದಯವಾಗಿ ಆದಷ್ಟು ಹಸಿರನ್ನು ಹೆಚ್ಚಿಸುವ ಕಾರ್ಯದಲ್ಲಿ ತೊಡಗಿದ್ದಾನೆ. ಆದರೆ ಹಸಿರನ್ನು ಮೂಡಿಸಲು ಸ್ಥಳವಾದರೂ ಎಲ್ಲಿ? ಹೇಗಾದರೂ ತನ್ನ ಮನೆಯ ಮುಂದೆ, ಹಸಿರು ಮೂಡಿಸುವ ಆಸೆ ಈ ನಿಟ್ಟಿನಲ್ಲಿ ಆವಿಷ್ಕಾರಗೊಂಡದ್ದೇ `ವರ್ಟಿಕಲ್ ಗಾರ್ಡನ್‌. ಅನಿವಾರ್ಯವಾದಾಗ ಎಚ್ಚೆತ್ತುಕೊಳ್ಳುವಂತೆ ಈಗ ಎಲ್ಲರಿಗೂ ತಮ್ಮ ಮನೆಯ ಮುಂದೆ ಒಂದು ಸುಂದರ ಹಸಿರು ತೋಟ ಬೇಕೆನ್ನುವವರಿಗೆ, ಸ್ಥಳದ ಅಭಾವವಿದ್ದರೂ ಮಾಡಬಹುದಾದಂತಹ ಒಂದು ಹೊಸ ರೀತಿಯ ಹಸಿರು ಲಂಬ ವಿನ್ಯಾಸವನ್ನು ವರ್ಟಿಕಲ್ ಗಾರ್ಡನ್‌ ಎನ್ನಬಹುದು.

ವರ್ಟಿಕಲ್ ಗಾರ್ಡನ್‌ ಎಂದರೇನು?

ಎತ್ತರಕ್ಕೆ (ಲಂಬವಾಗಿ) ಅಥವಾ ಮೇಲಕ್ಕೆ ಬೆಳೆಯುವಂತೆ ಹಸಿರ ಸಿರಿಯನ್ನು ರೂಪಿಸಲಾಗುತ್ತದೆ. ಲೋಹದ ಜಾಲರಿ ಅಥವಾ ಅನ್ಯ ರೀತಿಯ ಯಾವುದೇ ಆಸರೆಯಿಂದ ಬೆಳೆಯುವ ಹಸಿರು ತೋಟವೆನ್ನಬಹುದು. ಮನೆಯ ಒಳಗೆ ಅಥವಾ ಹೊರಗೆ ನಮ್ಮ ಅನುಕೂಲಕ್ಕೆ ತಕ್ಕನಾಗಿ ಮಾಡಬಹುದು. ಮನೆಯ ಮುಂಭಾಗದಲ್ಲಿಯಾದರೂ ಸರಿ ಅಥವಾ ಕಾಂಪೌಂಡಿನ ಗೋಡೆಯನ್ನೂ ಬಳಸಬಹುದು. ಇತ್ತೀಚೆಗೆ ಹೂ ಮತ್ತು ತರಕಾರಿಯನ್ನೂ ಸಹ ಈ ರೀತಿಯಲ್ಲಿ ಬೆಳೆಸುತ್ತಿದ್ದಾರೆ. ಗೋಡೆಯ ಮೇಲೆ ಸಸ್ಯಗಳನ್ನು ಬೆಳೆಯುವ ಒಂದು ರೀತಿ ಎನ್ನಬಹುದು. ಗೋಡೆಯನ್ನೇ ಪೂರ್ಣವಾಗಿ ಹಸಿರಾಗಿ ಪರಿರ್ತಿಸಬಹುದು ಅಥವಾ ಅಲ್ಲಲ್ಲೇ ಕೆಲವು ಸಾಲು ಹಸಿರು ಗಿಡಗಳಿಂದ ತುಂಬಿದ ಕುಂಡಗಳನ್ನು ಜೋಡಿಸಬಹುದು. ನಿಮ್ಮ ಅನುಕೂಲ ಮತ್ತು ಸ್ಥಳದ ಮೇಲೆ ಅವಲಂಬಿತವಾಗಿ ತೋಟವನ್ನು ರೂಪುಗೊಳಿಸಬಹುದು.

ಪರಿಸರಕ್ಕಾಗುವ ಉಪಯೋಗಗಳು

ಯಾವುದೇ ಹಸಿರು ತೋಟದಿಂದ ಪ್ರಯೋಜನವಾಗುವಂತೆ ಇಲ್ಲಿಯೂ ಗಾಳಿಯಲ್ಲಿರುವ ಇಂಗಾಲದ ಡೈ ಆಕ್ಸೈಡ್‌ನ್ನು ಹೊರದೂಡಿ ಆಮ್ಲಜನಕವನ್ನು ನೀಡುವಲ್ಲಿ ಸಹಾಯಕವಾಗುತ್ತದೆ. ಅದನ್ನು ಬೆಳೆಸುವ ಕಟ್ಟಡದ ಜೊತೆಗೆ ಹತ್ತಿರದ ಪರಿಸರವನ್ನೂ ಶುದ್ಧ ಮಾಡುವಲ್ಲಿ ಸಹಾಯಕವಾಗುತ್ತದೆ.

ಇದು ಹೊಸತೇ?

ಹೇಳಬೇಕೆಂದರೆ ಈ ವರ್ಟಿಕಲ್ ಗಾರ್ಡನಿಂಗ್‌ ಬಹಳ ಹೊಸತೇನಲ್ಲ. ದಕ್ಷಿಣ ಅಮೆರಿಕಾದಲ್ಲಿ ಆಹಾರ ಧಾನ್ಯ ಬೆಳೆಯುವುದಕ್ಕೆ ಈ ಕ್ರಮವನ್ನು ಅನುಸರಿಸುತ್ತಾರೆ. 1915ರಲ್ಲೇ ಅಮೆರಿಕಾದ ಜಿಯಾಲಜಿಸ್ಟ್ ಗಿಲ್ಬರ್ಟ್‌ ಎಲ್ವಿಸ್‌ ಬೈಲಿರವರು `ವರ್ಟಿಕಲ್ ಫ್ರೇಮಿಂಗ್‌’ ಅನ್ನುವ ಹೆಸರನ್ನು ಆಗಲೇ ನೀಡಿದ್ದರು. ಇಷ್ಟೆಲ್ಲಾ ಹಳೆಯ ಇತಿಹಾಸವಿದ್ದರೂ 1980ರಲ್ಲಿ ಪ್ಯಾಟ್ರಿಕ್‌ ಬ್ಯಾಂಕ್‌ ಎನ್ನುವ ಪ್ಯಾರಿಸ್‌ನ ವಿಜ್ಞಾನಿ ಕೈಗಾರಿಕಾ ವಸ್ತು ಸಂಗ್ರಹಾಲಯದ ಮುಂದೆ ಒಂದು ಜೀವಂತ ಗೋಡೆಯನ್ನು ರೂಪಿಸಿದ್ದಾನೆ. ಪ್ರಸ್ತುತ ಅವನನ್ನೇ ಇತ್ತೀಚಿನ ವರ್ಟಿಕಲ್ ಗಾರ್ಡನ್‌ ಎನ್ನುವ ಜೀವಂತ ಗೋಡೆಯ ಜನಕ ಎನ್ನಲಾಗುತ್ತಿದೆ.

ಜೀವಂತ ಗೋಡೆ

ಸಾಮಾನ್ಯವಾಗಿ ಎಲ್ಲರೂ ಕಟ್ಟುವ ಗೋಡೆಗಳು ಜೀವಂತವಾಗಿರುವುದಿಲ್ಲ. ಬರಿಯ ಕಲ್ಲು ಮಣ್ಣಷ್ಟೇ ಅಲ್ಲಿರುವುದು. ಆದರೆ ಹಸಿರು ಗೋಡೆ ಅಥವಾ ವರ್ಟಿಕಲ್ ಗಾರ್ಡನ್‌ ಎಂದಾಗ ಲಂಬವಾಗಿ ಅರ್ಥಾತ್‌ ಎತ್ತರಕ್ಕೆ ಒಂದಷ್ಟು ಗಿಡಗಳನ್ನು ಬೆಳೆಸುವುದು. ನೋಡಲು ಚಂದ ಎನಿಸಬೇಕು, ಜೊತೆಗೆ ಇದೊಂದು ಹೊಸ ರೀತಿ ಎನ್ನುವ ಭಾವ ನೋಡುಗರಲ್ಲಿ ಮೂಡಬೇಕು. ಪರಿಸರದ ರಕ್ಷಣೆಯೂ ಆಗಬೇಕು. ಈ ಎಲ್ಲವನ್ನೂ ಒಂದೆಡೆಯಲ್ಲಿ ಮಾಡುತ್ತದೆ, ಜೀವಂತಿಕೆಯನ್ನು ತುಂಬುತ್ತದೆ ವರ್ಟಿಕಲ್ ಗಾರ್ಡನ್‌.

ಹಾಗೆಂದರೇನು?

ಜೀವಂತ ಗೋಡೆ ಅಥವಾ ಹಸಿರು ಗೋಡೆ ಅಥವಾ ವರ್ಟಿಕಲ್ ಗಾರ್ಡನ್‌ ಈಗಾಗಲೇ ಬಹಳ ಜನಪ್ರಿಯವಾಗಿದೆ. ಕಛೇರಿ, ಮನೆ, ಮನೆಯ ಮುಂಭಾಗದಲ್ಲಿ ಎಲ್ಲಿಯಾದರೂ ಮಾಡಬಹುದು. ಈಗ ಭೂಮಿ ಬಿಸಿಯಾಗುತ್ತಿದೆ. ಹಾಗಾದರೆ ಏನು ಮಾಡಬೇಕು? ಇರುವ ಜಾಗದಲ್ಲೆಲ್ಲಾ ಕಟ್ಟಡಗಳು ತುಂಬಿ ತುಳುಕುತ್ತಿವೆ. ಮರಗಳನ್ನು ಬೆಳೆಸಿ ಎನ್ನುವ ಕೂಗಿನ ಜೊತೆಗೆ ಇರುವ ಸ್ಥಳದಲ್ಲೇ ಹಸಿರನ್ನು ಮೂಡಿಸುವ ಈ ಪರಿಯನ್ನು ವರ್ಟಿಕಲ್ ಗಾರ್ಡನ್‌ ಎನ್ನಬಹುದು.

ಎಲ್ಲೆಲ್ಲಿ ಮಾಡಬಹುದು?

ಬಹಳ ಸಣ್ಣ ನಿವೇಶನದಲ್ಲೂ ಈ ಉದ್ದದ ತೋಟವನ್ನು ಮಾಡಬಹುದು. ನೋಡಲು ಚಂದದ ಸಸ್ಯಗಳನ್ನು ಬೆಳೆಸಬಹುದು. ಅಲ್ಲದೆ ನಾವು ತಿನ್ನುವ ಸೊಪ್ಪುಗಳನ್ನು ಸಹ ಬೆಳೆಸಬಹುದು. ಇಲ್ಲಿ ಸ್ವಯಂಚಾಲಿತ ಹನಿ ನೀರಾವರಿ ಅಗತ್ಯ. ರೀಸೈಕಲ್ಡ್ ನೀರನ್ನು ಧಾರಾಳವಾಗಿ ಬಳಸಬಹುದು. ಇಲ್ಲಿ ಬಹಳ ನೀರು ವ್ಯರ್ಥವಾಗುವುದಿಲ್ಲ. ಸೂರ್ಯನ ಬೆಳೆಕು ಸಹ ಧಾರಾಳವಾಗಿ ಬರಬೇಕು.

ಈಗೀಗ ಅಲ್ಲಲ್ಲಿ ಮನೆಯ ಮುಂದೆ ಕಛೇರಿಗಳ ಮುಂದೆ ಈ ವರ್ಟಿಕಲ್ ಗಾರ್ಡನ್‌ ರೂಪುಗೊಳ್ಳುತ್ತಿದೆಯಾದರೂ ಇನ್ನೂ ಹೆಚ್ಚು ಜನರನ್ನು ತಲುಪಿಲ್ಲ ಮತ್ತು ಅದರ ಬಗ್ಗೆ ತಿಳಿವಳಿಕೆಯೂ ಇಲ್ಲ. ಆದರೂ ಈಗ ನಾವು ತಿನ್ನುವ ಆಹಾರದ ಬಗ್ಗೆ ಬಹಳ ಕಾಳಜಿ ಇದೆ. ಹೀಗಾಗಿ ತಿನ್ನುವ ತರಕಾರಿ ಸೊಪ್ಪುಗಳನ್ನು ಬೆಳೆಸಲು ಈ ವಿಧಾನದಲ್ಲಿ ಸುಲಭ. ಆದರೆ ಯಾವುದೇ ಹಸಿರು ತೋಟ ಮಾಡುವಾಗ ನಿರ್ವಹಣೆ ಮುಖ್ಯವಾಗಿರುವಂತೆ ಇಲ್ಲಿಯೂ ಅಷ್ಟೇ, ಮಕ್ಕಳನ್ನು ನೋಡಿಕೊಂಡಷ್ಟೇ ಸೂಕ್ಷ್ಮವಾಗಿ ಗಿಡಗಳನ್ನೂ ಗಮನಿಸಬೇಕಾಗುತ್ತದೆ.

ಬೆಂಗಳೂರಿನಲ್ಲಿ ಎಲ್ಲೆಲ್ಲಿ ಕಾಣಸಿಗುತ್ತದೆ?

ಹೊಸೂರು ರಸ್ತೆಯಲ್ಲಿರುವ ಒಂದು ಅಗಲವಾದ ಕಂಬ ಹಸಿರನ್ನು ತುಂಬಿ ತುಳುಕಿಸುತ್ತಿದೆ. ಕೆ.ಎಸ್‌.ಐ.ಸಿ ಸ್ಟೇಡಿಯಂನಲ್ಲಿ ಒಂದೆರಡು ಕಡೆ ರಾತ್ರಿಯ ಸ್ಪಾಟ್‌ ಲೈಟಿನ ಬೆಳಕಿನಲ್ಲಿ ಮಿಂಚುವ ಹಸಿರು ಗೋಡೆಯನ್ನು ಕಂಡು ಮನಕ್ಕೆ ಆನಂದವಾಯಿತು. ಅಂತೆಯೇ ಹಿಂದಿನ ರಸ್ತೆಯ ಮನೆಯ ಮುಂದೆ ಕಾಂಪೌಂಡಿಗೆ ಮೂರು ನಾಲ್ಕು ಸಾಲುಗಳಲ್ಲಿ ಪುಟ್ಟ ಪುಟ್ಟ ಕುಂಡಗಳನ್ನು ಪೇರಿಸಿರುವುದನ್ನು ಕಂಡಾಗ ವಾಹ್‌ ಎನ್ನಿಸದೇ ಇರದು. ಇನ್ನೂ ಹಲವಾರು ಸ್ಥಳಗಳಲ್ಲಿ ಕಾಣಬಹುದು. ಈ ಚಂದದ ಹಸಿರನ್ನು ಕಂಡಾಗ ಮನಸ್ಸಿಗೆ ಮುದವೆನಿಸುವುದಲ್ಲದೆ, ಮನಶ್ಶಾಂತಿಯೂ ಲಭಿಸುತ್ತದೆ. ನೋಡಲಷ್ಟೇ ಅಲ್ಲ, ಶುದ್ಧ ಗಾಳಿಯನ್ನೂ ಮನಸ್ಸಿಗೆ ಆನಂದವನ್ನೂ ಕೊಡುವ ಈ ವರ್ಟಿಕಲ್ ಗಾರ್ಡನ್‌ ಮತ್ತಷ್ಟು ಮನೆ ಮತ್ತು ಕಛೇರಿಗಳಲ್ಲಿ ಇನ್ನಷ್ಟು ಎತ್ತರಕ್ಕೆ ತನ್ನ ಕರಾಮತ್ತನ್ನು ಬೀರದೆ ಇರದು, ಅಲ್ಲವೇ?

– ಮಂಜುಳಾ ರಾಜ್‌ 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ