ಯಾವುದಾದರೂ ವಿಷಯವನ್ನು ಸ್ವಾರಸ್ಯವಾಗಿ ಹೇಳಿದಾಗ ಅದು ಕೇಳುವವರಲ್ಲಿ ಆಸಕ್ತಿಯನ್ನು ಮೂಡಿಸುತ್ತದೆ. ಕಥೆಯಲ್ಲಿ ಇರುವ ಲಕ್ಷಣ ಅದೇ. ಆದ್ದರಿಂದಲೋ ಏನೋ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಕಥೆ ಅಂದ್ರೆ ಎಲ್ಲರಿಗೂ ಇಷ್ಟ. ಮಕ್ಕಳಿಗೆ ಬಣ್ಣ ಬಣ್ಣದ ಕಥೆ ಪುಸ್ತಕಗಳನ್ನು ಓದುವುದೆಂದರೆ ಸಿಹಿಯನ್ನು ಸವಿದಷ್ಟೇ ಖುಷಿ. ಆದ್ದರಿಂದ ಎಲ್ಲಾ ಶಾಲೆಗಳಲ್ಲೂ ಗ್ರಂಥಾಲಯವಿರಲೇಬೇಕು. ಆದರೆ ದುರದೃಷ್ಟಶಾತ್ ನಮ್ಮ ದೇಶದ ಎಲ್ಲ ಶಾಲೆಗಳಲ್ಲೂ ಗ್ರಂಥಾಲಯಗಳಿರುವುದಿಲ್ಲ. ಖಾಸಗಿ ಶಾಲೆಗಳಲ್ಲಿ ಸ್ವಲ್ಪ ಮಟ್ಟಿನ ಮೂಲಭೂತ ಅಗತ್ಯಗಳ ಜೊತೆ ಅಚ್ಚುಕಟ್ಟಾದ ಒಂದು ಗ್ರಂಥಾಲಯ ಇರುತ್ತದೆ. ಆದರೆ ಅನೇಕ ಶಾಲೆಗಳಲ್ಲಿ ಆ ರೀತಿಯ ಯಾವುದೇ ಅನುಕೂಲಗಳನ್ನು ಕಾಣಲು ಸಿಗುವುದಿಲ್ಲ. ಮಕ್ಕಳು ಕುಳಿತು ಓದುವುದಕ್ಕೆ ಚಂದವಾದ ವಾತಾವರಣ ಅಗತ್ಯ. ಆದರೆ ಹೆಚ್ಚಿನ ಶಾಲೆಗಳಲ್ಲಿ ಮುರಿದ ಕುರ್ಚಿ, ಮೇಜುಗಳಿರುತ್ತವೆ ಅಷ್ಟೆ. ಮಕ್ಕಳಿಗೆ ಬೇಕಾದ ಬಣ್ಣ ಬಣ್ಣದ ಚಿತ್ರಗಳ ಪುಸ್ತಕಗಳು ಅಲ್ಲಿ ಲಭ್ಯವಿರಲಾರದು. ಆದರೆ ಮನಸ್ಸು ಮಾಡಿದರೆ ಇಂತಹ ಗ್ರಂಥಾಲಯದ ರೂಪವನ್ನೇ ಬದಲಿಸಲು ಸಾಧ್ಯವಿದೆ. ಇದಕ್ಕೆ ಲಕ್ಷಾಂತರ ರೂಪಾಯಿಗಳನ್ನೇ ಖರ್ಚು ಮಾಡಬೇಕೆಂದಿಲ್ಲ ಅಥವಾ ಎಲ್ಲದಕ್ಕೂ ಸರ್ಕಾರವನ್ನೇ ಕಾಯಬೇಕಾಗಿಲ್ಲ. ನಾಲ್ಕು ಜನರು ಸೇರಿ ಮನಸ್ಸು ಮಾಡಿದಲ್ಲಿ ಖಂಡಿತ ಸಾಧ್ಯ. ಇಂತಹ ಒಂದು ಪವಾಡ ಮೈಸೂರಿನ ಒಂದು ಶಾಲೆಯಲ್ಲಿ ನಡೆದಿದೆ. ಮುರಿದ ಬೀರುಗಳು, ಮೇಜುಗಳು, ಮಬ್ಬಾದ ಗೋಡೆಗಳು ಎಲ್ಲ ರೂಪಾಂತರಗೊಂಡಿವೆ. ಮುರಿದ ಬೀರುಗಳು ಸುಂದರ ಕಲಾತ್ಮಕ ಚಿತ್ರಗಳನ್ನು ತನ್ನ ಮೈದುಂಬಿಸಿಕೊಂಡು ಮಾರ್ಪಟ್ಟಿವೆ. ಮಬ್ಬಾಗಿದ್ದ ಗೋಡೆಗಳ ಮೇಲೆ ಪ್ರಕೃತಿಯ ಬಣ್ಣ ಬಣ್ಣದ ಚಿತ್ರಗಳು ಮೂಡಿನಿಂತಿವೆ.
ಈ ಬದಲಾವಣೆಗಳ ಮೂಲಕಾರಣ ಆಶಾ ಇನ್ಛಿನೈಟ್ ಫೌಂಡೇಶನ್ ಎನ್ನುವ ಸಂಸ್ಥೆ. ಈ ಸಂಸ್ಥೆಯ ಮುಖ್ಯಸ್ಥೆ ಮೀರಾ ರಮಣರವರ ಪ್ರಕಾರ ಒಂದು ಮಗುವಿಗೆ ಎಷ್ಟು ವರ್ಷಗಳಾಗಿರುತ್ತದೋ ಅದು ಅಷ್ಟಾದರೂ ಪುಸ್ತಕಗಳನ್ನು ಹೊಂದಿರಬೇಕು. ಮಕ್ಕಳಿಗೆ ಕಥೆಯ ಮೂಲಕ ಭಾಷೆಯನ್ನೂ ಕಲಿಸಬಹುದು.
ಪುಸ್ತಕವೆಂದರೆ ಅವರು ನೀಡುವ ಪರಿಭಾಷೆ, ಒಳಗಿನ ಪ್ರಪಂಚದಿಂದ ಹೊರ ಪ್ರಪಂಚಕ್ಕೆ ತಲುಪುವ ದಾರಿ. ಮಕ್ಕಳು ಮನೆಯಲ್ಲಿ ಕೇಳುತ್ತಾ ಕೇಳುತ್ತಾ ಮಾತು ಮತ್ತು ಭಾಷೆಯನ್ನು ಕಲಿಯುವಂತೆ ಆ ಮಕ್ಕಳು ಕಥೆ ಕೇಳುವ ಮತ್ತು ಕಥೆಯ ಪುಸ್ತಕಗಳನ್ನು ಓದುವ ಮೂಲಕ ಕನ್ನಡ, ಇಂಗ್ಲಿಷ್ ಭಾಷೆಗಳನ್ನು ಯಾವುದೇ ಬೇಸರವಿಲ್ಲದೆ ಆಸಕ್ತಿಯಿಂದ ಕುತೂಹಲದಿಂದ ಕಲಿಯುತ್ತಾರೆ.
ಒಂದು ಅಂಕಿಅಂಶದ ಪ್ರಕಾರ, ಮಗು ನಾಲ್ಕನೆಯ ತರಗತಿಗೆ ಬರುವ ಹೊತ್ತಿಗೆ ಅದು ಚೆನ್ನಾಗಿ ಓದಲು ಕಲಿತಿರಬೇಕು. ಇಲ್ಲವಾದಲ್ಲಿ ಓದಲು ಅರಿಯದ ಮಗು ಮಿಕ್ಕ ಮಕ್ಕಳಿಗಿಂತ ಹಿಂದೆ ಬೀಳುತ್ತದೆ. ಇದು ಸಾಧ್ಯವಾಗುವುದು ಅವರ ಮನವನ್ನು ಆಕರ್ಷಿಸುವಂತಹ ಪುಸ್ತಕಗಳ ಮೂಲಕ, ಆದ್ದರಿಂದ ಶಾಲೆಯಲ್ಲಿ ಒಂದು ಒಳ್ಳೆಯ ಗ್ರಂಥಾಲಯ ಅತ್ಯಗತ್ಯ. ಮೈಸೂರಿನ ಶಾಲೆಯ ಗ್ರಂಥಾಲಯದ ಈ ಬದಲಾವಣೆಯ ರೂವಾರಿ ಎಂದರೆ ಆಶಾ ಇನ್ಛಿನೈಟ್ ಸಂಸ್ಥೆಯ ಮೈಸೂರಿನ ಶಾಲೆಯ ಮುಖ್ಯಾಧಿಕಾರಿ ರಶ್ಮಿ ಜಯ್. ಅವರ ಆಸಕ್ತಿ ಮತ್ತು ಶ್ರಮವೇ ಮುಖ್ಯ ಕಾರಣವೆನ್ನಬಹುದು.
ಈ ಸುಂದರ ಪರಿಸರ ಮತ್ತು ಹೊಸ ರೂಪ ತಳೆದ ಗ್ರಂಥಾಲಯದಲ್ಲಿ ಮಕ್ಕಳಿಗೆ ಓದಲು ಸಂಭ್ರಮವೋ ಸಂಭ್ರಮ ಎಂದು ಸಂತಸದಿಂದ ಉದ್ಗರಿಸುತ್ತಾರೆ ರಶ್ಮಿ. ಅವರು ತಮ್ಮ ವೈವಾಹಿಕ ಜೀವನವನ್ನು ಯಶಸ್ವಿಯಾಗಿ ನಿರ್ವಹಿಸಿ ಅದರ ಜೊತೆ ವೈಯಕ್ತಿಕವಾಗಿ ತಮ್ಮ ಆಸೆಗಳನ್ನೂ ಪೂರೈಸುತ್ತಾ ಜೊತೆಗೆ ಸಮಾಜದಲ್ಲಿ ತಮ್ಮನ್ನು ಗುರುತಿಸುವಂತಹ ಕೆಲಸಗಳನ್ನು ಮಾಡಿದ್ದಾರೆ.
ಇವರಿಗೆ ಫಿಟ್ನೆಸ್ ಬಗ್ಗೆ ಬಹಳ ಕಾಳಜಿ. ಹೀಗಾಗಿ ತಮ್ಮ ಬಿಡುವಿನ ಸಮಯದಲ್ಲಿ ಜುಂಬಾ ಕ್ಲಾಸಿಗೆ ಸೇರಿಕೊಂಡರು. ಅವರು ತಮ್ಮನ್ನು ತಾವು ಫಿಟ್ ಮಾಡಿಕೊಂಡಿದ್ದೇ ಅಲ್ಲದೆ, ಮಿಕ್ಕವರಿಗೂ ಹೇಳಿಕೊಡುವಷ್ಟು ಪರಿಣಿತರಾದರು. ಈಗ ಪ್ರಸ್ತುತ ಸಂದೀಪ್ ಸ್ಟುಡಿಯೋ, ಜುಂಬಾ ಫಿಟ್ನೆಸ್ ಸೆಂಟರ್ನಲ್ಲಿ ತರಬೇತಿ ನೀಡುವ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದರ ಜೊತೆ ಇವರ ಮತ್ತೊಂದು ಪ್ರೀತಿಯ ವಿಷಯ, ವಿಧ ವಿಧವಾದ ಅಡುಗೆಗಳನ್ನು ಮಾಡುವುದು. ಅನೇಕ ಆನ್ಲೈನ್ ಸ್ಪರ್ಧೆಗಳಲ್ಲಿ ಬಹುಮಾನ ಪಡೆದಿದ್ದಾರೆ. ಅನೇಕ ಪ್ರತಿಷ್ಠಿತ ಹೋಟೆಲ್ಗಳ ರೆಸ್ಟೋರೆಂಟ್ಗಳಲ್ಲಿ ತಯಾರಿಸುವ ತಿನಿಸುಗಳನ್ನು ವಿಮರ್ಶೆ ಮಾಡುವ ಕಾರ್ಯ ನಿರ್ವಹಿಸುತ್ತಿದ್ದಾರೆ. ಅನೇಕ ಅಡುಗೆ ಸ್ಪರ್ಧೆಗಳಲ್ಲಿ ತೀರ್ಪುಗಾರರಾಗಿ ಪಾಲ್ಗೊಂಡಿದ್ದಾರೆ. ಮಾಸ್ಟರ್ ಶೆಫ್ ವಿಜೇತೆ ಶಾಜಿಯಾ ಖಾನ್ರರ ಕುಕ್ಕಿಂಗ್ ಶೋಗೆ ವಿಶೇಷ ಆಹ್ವಾನಿತರಾಗಿ ಹೋಗಿದ್ದಾರೆ.
ದೇಸಿ ಸ್ವಾಗ್ ಫ್ಯಾಷನ್ ಈವೆಂಟ್ನಲ್ಲಿ ತೀರ್ಪುಗಾರ್ತಿಯಾಗಿ, ಮೈಸೂರಿನ ಸೇಂಟ್ ಫಿಲೋಮಿನಾ ಕಾಲೇಜಿನಲ್ಲಿ ಮಾಡೆಲ್ ಫೋಟೋಗ್ರಫಿ ಸ್ಪರ್ಧೆಯ ಜಡ್ಜ್ ಆಗಿ, ಶ್ರೀ ವಿದ್ಯಾ ಗುರುಕುಲದಲ್ಲಿ ಚರ್ಚಾ ಸ್ಪರ್ಧೆಯ ತೀರ್ಪುಗಾರ್ತಿಯಾಗಿ ಭಾಗವಹಿಸಿದ ಹೆಗ್ಗಳಿಕೆ ಇವರದು. ಈ ರೀತಿ ಅನೇಕ ಸಾರ್ಜನಿಕ ಕಾರ್ಯಕ್ರಮಗಳಲ್ಲಿ ಆಹ್ವಾನಿತರಾಗಿದ್ದಾರೆ. ಇಷ್ಟೆಲ್ಲಾ ಸಮಾಜಮುಖಿ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರೂ ಯಶಸ್ವಿಯಾಗಿ ತಮ್ಮ ಮನೆಯನ್ನು ನಿರ್ವಹಿಸುತ್ತಿದ್ದಾರೆ ಕೂಡಾ. ಇವೆಲ್ಲದರ ಜೊತೆ, ಇಷ್ಟೆಲ್ಲಾ ನೀಡಿದ ಸಮಾಜಕ್ಕೆ ತಾನೇನಾದರೂ ಮಾಡಬೇಕೆನ್ನುವ ಆಸೆ, ತುಡಿತವಿದೆ.
ಒಟ್ಟಾರೆ ಮನಸ್ಸು ಮಾಡಿದಲ್ಲಿ ಕಂಬಳಿಹುಳು ಸುಂದರ ಚಿಟ್ಟೆಯಾಗುವಂತೆ, ಸಾಧಾರಣ ಹಳೆಯ ಶಾಲೆ ಕೊಠಡಿಯೂ ಸುಂದರ ಗ್ರಂಥಾಲಯವಾಗಿ ಮಾರ್ಪಡುತ್ತದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಎಲ್ಲ ಶಾಲೆಗಳಲ್ಲೂ ಮಕ್ಕಳಿಗೆ ಚಂದದ ಪುಸ್ತಕಗಳ ಗ್ರಂಥಾಲಯವಿದ್ದಾಗ ಮಕ್ಕಳ ಮನ ಓದಿನ ಕಡೆಗೆ ತುಡಿಯುತ್ತದೆ. ಮಕ್ಕಳು ಸಂತಸದಿಂದ ನಲಿಯುತ್ತಾ ಕಲಿಯುತ್ತಾರೆ!
– ಮಂಜುಳಾ ರಾಜ್