ಹಬ್ಬಗಳ ಸಡಗರ ಸಂಭ್ರಮದ ನಿರೀಕ್ಷೆ ಅಷ್ಟಿಷ್ಟಲ್ಲ. ಹೀಗಾಗಿ ಹಬ್ಬಗಳನ್ನು ಎದುರುಗೊಳ್ಳಲು ನೀವು ಸೂಕ್ತವಾಗಿ ಸಿದ್ಧರಾಗಬೇಕು. ಹಿಂದಿನ ದಿನಗಳ ತಯಾರಿ ಜೋರಾಗಿದ್ದಾಗ ಮಾತ್ರ, ಹಬ್ಬದ ದಿನ ನೀವು ಮಿರಿಮಿರಿ ಮಿಂಚಲು ಸಾಧ್ಯ. ಹಬ್ಬಗಳಲ್ಲಿ ಇತರರಿಗಿಂತ ಭಿನ್ನವಾಗಿ ಮಿಂಚುವುದು ಹೇಗೆಂದು ಚಿಂತಿಸುತ್ತಿದ್ದೀರಾ? ಇದಕ್ಕಾಗಿ ತಜ್ಞರ ಸಲಹೆಗಳನ್ನು ಅನುಸರಿಸಿ, ಹಬ್ಬಕ್ಕಾಗಿ ನೀವು ಈ ರೀತಿ ಶೃಂಗಾರ ಮಾಡಿಕೊಂಡು ಸಿದ್ಧರಾಗಿ.
ಫೇಶಿಯಲ್ ಚಾರ್ಮ್
ಹಬ್ಬದ ಹೊಳೆ ಹೊಳೆಯುವ ವಾತಾವರಣದಲ್ಲಿ ನಿಮ್ಮ ಮೈಕಾಂತಿಯೂ ಹಾಗೆಯೇ ಹೊಳೆಯುತ್ತಿರಬೇಕಲ್ಲವೇ? ಹೀಗಾಗಿ ಆಗಾಗ ಸ್ಕಿನ್‌ಗೆ ತಕ್ಕಂತೆ ಫೇಶಿಯಲ್ ಮಾಡಿಸಿ. ಇತ್ತೀಚೆಗೆ ಈ ನಿಟ್ಟಿನಲ್ಲಿ ಗೋಲ್ಡ್ ಫೇಶಿಯಲ್ ಸಾಕಷ್ಟು ಜನಪ್ರಿಯವಾಗಿದೆ. ಈ ಟೆಕ್ನಿಕ್‌ನಲ್ಲಿ ಒಂದು ವಿಶೇಷ ಸ್ಕ್ರಬರ್ ಯಂತ್ರದ ಸಹಾಯದಿಂದ ಡೆಡ್ ಸೆಲ್ಸ್ ರಿಮೂವ್ ಮಾಡುತ್ತಾರೆ. ನಂತರ ಬೇರೆ ಯಂತ್ರದಿಂದ ಚರ್ಮದ ಆಳಕ್ಕೆ ಇಳಿಯುವಂತೆ ಆ ಜಾಗಕ್ಕೆ ಹಣ್ಣಿನ ರಸ, ಗೋಲ್ಡ್ ಸಲ್ಯೂಶನ್ ಲೇಪಿಸಲಾಗುತ್ತದೆ. ಹೀಗೆ ಮಾಡುವುದರಿಂದ ಆ ಜಾಗದಲ್ಲಿ ರಕ್ತ ಸಂಚಾರ ಹೆಚ್ಚುತ್ತದೆ. ಹಬ್ಬ ಶುರುವಾಗುವ 2-3 ದಿನಗಳ ಹಿಂದೆಯೇ ಇದನ್ನು ಮಾಡಿಸಬೇಕು. ಆಗ ಹಬ್ಬ ಕಳೆಯುವವರೆಗೂ ನೀವು ಲಕಲಕ ಮಿಂಚಬಲ್ಲಿರಿ.
ಮನೆ ಮದ್ದು : 1 ಚಮಚ ಸಣ್ಣ ರವೆಯನ್ನು ತುಸು ಬಿಸಿ ಹಾಲಿಗೆ ಹಾಕಿ ಕದಡಿಕೊಳ್ಳಿ. ಇದು ತುಸು ಪೇಸ್ಟ್ ನಂತೆ ಆದಾಗ, 2-3 ಹನಿ ನಿಂಬೆ ರಸ, 2 ಹನಿ ಜೇನು ಬೆರೆಸಿ ಗೊಟಾಯಿಸಿ. ನಂತರ ನೀಟಾಗಿ ಮುಖಕ್ಕೆ ಹಚ್ಚಿರಿ. ಚೆನ್ನಾಗಿ ಒಣಗಿದ ನಂತರ ತಣ್ಣೀರಿನಿಂದ ತೊಳೆಯಿರಿ.
1 ಗಂಟೆಯೊಳಗೆ ನಿಮ್ಮ ಮುಖ ಹೊಳೆಯುವುದನ್ನು ಗಮನಿಸಿ.
ಬಾಡಿ ಗ್ಲೋ
ಒಂದು ಕಡೆ ಹಬ್ಬದ ಶಾಪಿಂಗ್‌ಗಾಗಿ ಉತ್ಸಾಹದಿಂದ ಹೊರಡುವಿರಿ. ಈ ತಯಾರಿಗಳ ಕಾರಣ ಸುಸ್ತಾಗುವುದು ಸಹಜ. ದಿನವಿಡೀ ಓಡಾಟದ ಕಾರಣ ಚರ್ಮ ಟ್ಯಾನಿಂಗ್‌ಗೆ ಒಳಗಾಗುತ್ತದೆ. ಹೀಗಾಗಿ ದೇಹವನ್ನು ಟ್ಯಾನ್‌ಫ್ರೀ ರಿಲ್ಯಾಕ್ಸ್ ಆಗಿಡಲು ಬಾಡಿ ಸ್ಕ್ರಬಿಂಗ್ ಮಾಡಿಸುವುದು ಲೇಸು. ಇದರಿಂದ ಚರ್ಮದ ಮೃತ ಜೀವಕೋಶಗಳು ತೊಲಗಿ, ಟ್ಯಾನಿಂಗ್ ಸಹ ದೂರವಾಗುತ್ತದೆ. ಇದರಿಂದಾಗಿ ಚರ್ಮ ಸಾಫ್ಟ್ ಆಗಿ ಮೈಕಾಂತಿ ಕಳೆಗಟ್ಟುತ್ತದೆ.
ಮನೆ ಮದ್ದು : 1 ಚಮಚ ಕಡಲೆಹಿಟ್ಟಿಗೆ 2 ಚಮಚ ಗೋಧಿ ತೌಡು, 2-2 ಚಿಟಕಿ ಅರಿಶಿನ, ಚಂದನ, 1-2 ಹನಿ ನಿಂಬೆರಸ, ಹಾಲಿನ ಕೆನೆ ಬೆರೆಸಿಕೊಂಡು ಪೇಸ್ಟ್ ತರಹ ಮಾಡಿ ಬೆಳಗೂ ಬೈಗೂ ಹಚ್ಚಿಕೊಳ್ಳಿ. ಅಗತ್ಯವೆನಿಸಿದರೆ ಸ್ನಾನಕ್ಕೆ ಮುಂಚೆ ದೇಹವಿಡೀ ಹಚ್ಚಿಕೊಂಡು ಒಣಗಿದ ನಂತರ ಸ್ನಾನ ಮಾಡಿ. ಕ್ರಮೇಣ ಮೈಕಾಂತಿಯಲ್ಲಿ ಸುಧಾರಣೆ ಕಾಣುತ್ತದೆ.
ಹೊಳೆ ಹೊಳೆಯುವ ಕೂದಲು
ಡ್ರೈನೆಸ್‌ನಿಂದಾಗಿ ಕೂದಲು ನಿರ್ಜೀವವಾಗಿ ಕಾಣುತ್ತದೆ. ಹೀಗಾಗಿ ಅದಕ್ಕೆ ಸಾಫ್ಟ್ ಸಿಲ್ಕಿ ಲುಕ್ಸ್ ನೀಡಲು ಹೇರ್ ಸ್ಪಾ ಅತ್ಯಗತ್ಯ. ಇದರಿಂದ ಸ್ಕಾಲ್ಪ್ ನ ರಕ್ತ ಸಂಚಾರ ಸುಧಾರಿಸುತ್ತದೆ, ಡೀಟಾಕ್ಸಿಫಿಕೇಶನ್ ಸಲೀಸಾಗುತ್ತದೆ, ಕೂದಲು ಉದುರುವಿಕೆ ತಂತಾನೇ ನಿಲ್ಲುತ್ತದೆ, ಜೊತೆಗೆ ಕೂದಲಿನ ಒಟ್ಟಾರೆ ಆರೋಗ್ಯ ಉತ್ತಮಗೊಳ್ಳುತ್ತದೆ.
ಮನೆ ಮದ್ದು : ಇದಕ್ಕಾಗಿ 1 ಮೊಟ್ಟೆ ಒಡೆದು ಹಾಕಿ, ಅದಕ್ಕೆ ನಿಂಬೆರಸ, ಹಿಪ್ಪೆ ಎಣ್ಣೆ ಬೆರೆಸಿ ಕೂದಲಿಗೆ ಚೆನ್ನಾಗಿ ತಿಕ್ಕಿ ಅರ್ಧ ಗಂಟೆ ಕಾಲ ಒಣಗಲು ಬಿಡಿ. ನಂತರ ಕೂದಲಿಗೆ ಶ್ಯಾಂಪೂ ಹಾಕಿ ತೊಳೆಯಿರಿ. ಆಗ ನೋಡಿ, ಫಳಫಳ ಹೊಳೆಯುವ ಕೂದಲು ನಿಮ್ಮದಾಗಿರುತ್ತದೆ.
ಮೃದು ಕೈಕಾಲು
ಹಬ್ಬಗಳ ಸೊಬಗು ಹೆಚ್ಚಿಸಲು ನಿಮ್ಮ ಅಲಂಕಾರದಲ್ಲಿ ಕೇವಲ ಮುಖ, ಕೂದಲಿಗಷ್ಟೇ ಮಹತ್ವ ಕೊಟ್ಟರೆ ಸಾಲದು. ನಿಮ್ಮ ಕೈಕಾಲುಗಳೂ ಅಷ್ಟೇ ಆಕರ್ಷಕವಾಗಿರಬೇಕು. ಹೀಗಾಗಿ ಇದನ್ನು ಸುಂದರಗೊಳಿಸಲು ಮೆನಿಕ್ಯೂರ್, ಪೆಡಿಕ್ಯೂರ್ ಮಾಡಿಸುತ್ತೀರಿ. ಹೀಗೆ ಮಾಡುವುದರಿಂದ ನಿಮ್ಮ ಕೈಕಾಲು ಮೃದುವಾಗುವ ಜೊತೆ ಕಾಂತಿಯುತವಾಗುತ್ತದೆ.
ಮನೆ ಮದ್ದು : ಮೊದಲು ಕೈ ಉಗುರಿನ ಹಳೆಯ ನೇಲ್ ಪಾಲಿಶ್ ತೆಗೆದುಬಿಡಿ. ನಂತರ ಅರ್ಧ ಟಬ್ ಬೆಚ್ಚನೆ ನೀರಿಗೆ 1-1 ಚಮಚ ಶ್ಯಾಂಪೂ, ಹೈಡ್ರೋಜನ್ ಪೆರಾಕ್ಸೈಡ್ (ಕೆಮಿಸ್ಟ್ ಬಳಿ ಲಭ್ಯ), ತುಸು ಆ್ಯಂಟಿಸೆಪ್ಟಿಕ್ ಲೋಶನ್ ಬೆರೆಸಿಕೊಳ್ಳಿ. ಇದರಲ್ಲಿ ನಿಮ್ಮ ಪಾದ ಅದ್ದಿ ಅರ್ಧ ಗಂಟೆ ಕಾಲ ಹಾಗೇ ಇರಿ. ಹೀಗೆ ಮಾಡುವುದರಿಂದ ಪಾದ ಎಷ್ಟೋ ಸಾಫ್ಟ್ ಆಗುತ್ತದೆ. ಸ್ಕ್ರಬರ್ ನೆರವಿನಿಂದ ಡೆಡ್ ಸೆಲ್ಸ್ ತೊಲಗಿಸಿ. ಕೈಕಾಲುಗಳ ಉಗುರು ನೀಟಾಗಿ ಕತ್ತರಿಸಿ, ಫೈಲ್ ಮಾಡಿ. ನಂತರ ಕ್ಯುಟಿಕಲ್ ಪುಶರ್ ನೆರವಿನಿಂದ ಕ್ಯುಟಿಕಲ್ಸ್ ಪುಶ್ ಮಾಡಿ, ಕಟರ್‌ನಿಂದ ಮೇಲ್ಭಾಗ ತೆಗೆದುಬಿಡಿ. ಕೊನೆಯಲ್ಲಿ ಮಾಯಿಶ್ಚರೈಸಿಂಗ್ ಕ್ರೀಮಿನಿಂದ ಮಸಾಜ್ ಮಾಡಿ.
ಮೇಕಪ್‌ಗೆ ಮುನ್ನ ಕ್ಲೆನ್ಸಿಂಗ್
ಉತ್ತಮ ಮೇಕಪ್‌ಗಾಗಿ ಸ್ವಚ್ಛ, ಶುಭ್ರ ಚರ್ಮ ಅತ್ಯಗತ್ಯ. ಇದಕ್ಕಾಗಿ ಮೊದಲು ಚರ್ಮವನ್ನು ಕ್ಲೀನ್ ಮಾಡಬೇಕು. ಅದಕ್ಕಾಗಿ ಕ್ಲೆನ್ಸಿಂಗ್ ಮಿಲ್ಕ್ ಬಳಸಿರಿ. ಹತ್ತಿಯನ್ನು ಇದರಲ್ಲಿ ಅದ್ದಿಕೊಂಡು ಮುಖ, ಕುತ್ತಿಗೆ ಹಾಗೂ ಅದರ ಅಕ್ಕಪಕ್ಕದ ಜಾಗ ಕ್ಲೀನ್ ಮಾಡಬೇಕು. ಇದಾದ ಮೇಲೆ ಟೋನಿಂಗ್ ಅತ್ಯಗತ್ಯ. ಇದಕ್ಕಾಗಿ ಉತ್ತಮ ಗುಣಮಟ್ಟದ ಟೋನರ್ ಬಳಸಿರಿ.
ಟೋನಿಂಗ್‌ಗಾಗಿ ಮುಖದ ಮೇಲೆ ಐಸ್‌ನಿಂದ ಸವರಬೇಕು. ನಂತರ ಮುಖಕ್ಕೆ ಮಾಯಿಶ್ಚರೈಸರ್ ಹಚ್ಚಿರಿ. ಆಮೇಲೆ ಮೇಕಪ್ ಶುರು ಮಾಡಿ. ಫೆಸ್ಟಿವ್ ಮೂಡ್ ಎಗ್ಸೈಟ್‌ಮೆಂಟ್‌ನಿಂದ ತುಂಬಿರುತ್ತದೆ, ಆ ಕಾರಣ ಬೆವರುವಿಕೆ ಸಾಮಾನ್ಯ. ಆದ್ದರಿಂದ ನಿಮ್ಮ ಮೇಕಪ್ ವಾಟರ್‌ಪ್ರೂಫ್ ಆಗಿರಬೇಕು. ಇದಕ್ಕಾಗಿ ನೀವು ನಿಮ್ಮ ಮುಖಕ್ಕೆ ಫೌಂಡೇಶನ್ ಹಚ್ಚಿರಿ ಹಾಗೂ ಅದನ್ನು ಸೆಟ್ ಮಾಡಲು ಕಾಂಪ್ಯಾಕ್ಟ್ ಬಳಸಿರಿ.
ತುಟಿಗಳಿಗೆ ಕಾಂತಿಯುತ ಟಚ್
ತುಟಿಗಳು ಗುಲಾಬಿ ಪಕಳೆಗಳಂತಿದ್ದರೆ ಮುಖ ಮತ್ತಷ್ಟು ಮೋಹಕ ಎನಿಸುತ್ತದೆ. ನಿಮ್ಮ ತುಟಿಗಳೂ ಹೀಗಿರಲಿ ಎಂದು ನೀವು ಬಯಸಿದರೆ, ತುಟಿಗಳಿಗೆ ಲಿಪ್‌ಲೈನರ್‌ನಿಂದ ಶೇಪ್ ನೀಡಿ. ತುಟಿ ದಪ್ಪಗಿದ್ದರೆ ನ್ಯಾಚುರಲ್ ಲೈನರ್‌ನಿಂದ ಒಳಭಾಗದಲ್ಲಿ ಲೈನ್ ಎಳೆಯಿರಿ. ತುಟಿ ತೆಳುವಾಗಿದ್ದರೆ ತುಟಿಗಳ ನ್ಯಾಚುರಲ್ ಲೈನ್‌ನಿಂದ ಲೈನರ್‌ನ್ನು ಹೊರಭಾಗದಲ್ಲೇ ಎಳೆಯಬೇಕು.
ಐ ಮೇಕಪ್
ಇದಕ್ಕಾಗಿ ವಾಟರ್‌ಪ್ರೂಫ್ ಪ್ರಾಡಕ್ಟ್ ಗಳನ್ನೇ ಬಳಸಬೇಕು. ಉತ್ತಮ ಮೇಕಪ್‌ಗಾಗಿ ಎಲ್ಲಕ್ಕೂ ಮೊದಲು ಒಳ್ಳೆಯ ಬೇಸ್ ಬೇಕು. ನಿಮ್ಮ ಚರ್ಮದ ಮೇಲೆ ಯಾವುದೇ ಕಲೆ ಗುರುತಿದ್ದರೆ, ಕನ್ಸೀಲರ್ ಬಳಸಿ ಮೊದಲು ಅದನ್ನು ಕನ್ಸೀಲ್ ಮಾಡಿ. ಕಂಗಳ ಕೆಳಗಿನ ಡಾರ್ಕ್ ಸರ್ಕಲ್ಸ್ ಕವರ್ ಮಾಡಬೇಕಿದ್ದರೆ, ಒಂದು ಶೇಡ್ ಡಾರ್ಕ್ ಕನ್ಸೀಲರ್ ಹಚ್ಚಿರಿ.
ಹಬ್ಬದ ಸಂದರ್ಭದಲ್ಲಿ ಕಂಗಳನ್ನು ಆಕರ್ಷಕವಾಗಿ ತೋರ್ಪಡಿಸಲು, ರೆಡ್ ಯಾ ಮೆರೂನ್ ಐ ಶ್ಯಾಡೋವನ್ನು ಕಂಗಳ ಬಳಿ ತುಸು ಲೈಟ್ ಆಗಿ ಹಾಗೂ ಹೊರಭಾಗದಲ್ಲಿ ತುಸು ಡಾರ್ಕ್ ಆಗಿ ಹಚ್ಚಿರಿ. ರಾತ್ರಿ ಹೊತ್ತಿನ ಮೇಕಪ್‌ಗಾಗಿ ಇದರ ಮೇಲೆ ಗೋಲ್ಡನ್ ಕಲರ್‌ನ ಸ್ಪಾರ್ಕ್ ಡಸ್ಟ್ ಸಿಂಪಡಿಸಬಹುದು. ಐ ಬ್ರೋ ಕೆಳಗೆ ಹೈಲೈಟರ್ ತೀಡಿರಿ. ಶೇಡ್ಸ್ ಗೆ ತಕ್ಕಂತೆ ಹೈಲೈಟರ್ ಗೋಲ್ಡನ್ ಯಾ ಸಿಲ್ವರ್ ಬಳಸಿರಿ. ಕೊನೆಯಲ್ಲಿ ಐ ಲೈನರ್ ಅಪ್ಲೈ ಮಾಡಿ. ನಂತರ ಕಣ್ಣೆವೆಗಳನ್ನು ವರ್ಕ್ ಮಾಡಿ.
ನೀವು ರಾತ್ರಿಗಾಗಿ ಮೇಕಪ್ ಮಾಡುತ್ತಿದ್ದರೆ ಮಸ್ಕರಾದ ಡಬ್ಬಲ್ ಕೋಟ್ ಹಚ್ಚುವುದೇ ಸರಿ. ನಂತರ ಹುಬ್ಬಿಗೆ ಐ ಬ್ರೋ ಪೆನ್ಸಿಲ್ ನೆರವಿನಿಂದ ಉತ್ತಮ ಆಕಾರ ನೀಡಿ. ನೀವು ಐ ಶ್ಯಾಡೋ ಹಚ್ಚಲು ಬಯಸದಿದ್ದರೆ, ಕಂಗಳನ್ನು ಕಲರ್‌ಫುಲ್ ಲೈನರ್‌ನಿಂದ ಅಲಂಕರಿಸಿ. ಕೊನೆಯಲ್ಲಿ ಕಾಡಿಗೆಯಿಂದ ಕಂಗಳಿಗೆ ಅಪೂರ್ವ ಕಳೆ ಬರುವಂತೆ ಟಚ್ ನೀಡಿ.
– ಪಾರ್ವತಿ ಭಟ್